ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಎಂದಿನಂತೆ ನಾನು ಕೆಲಸ ಮುಗಿಸಿ ಸಾಯಂಕಾಲ ಚಾಮರಾಜನಗರದಿಂದ ಯಳಂದೂರಿಗೆ ಹೊರಟಿದ್ದೆ. ಈಗಿನ ಬಸ್ಸುಗಳ ರಸ್ಸಂತೂ ಯಪ್ಪಾ! ಈ ಪ್ರಯಾಣವೇ ಸಾಕೆನಿಸುವಷ್ಟು ಬೇಸರ ತರಿಸಿಬಿಡುತ್ತವೆ. ಬಸ್ಸಲ್ಲಿ ನಿಲ್ಲಲು ಜಾಗ ಸಿಕ್ಕರೆ ಹೆಚ್ಚು. ಒಂದು ದಿನ ಹೀಗೆ ನಿಲ್ಲಲು ಜಾಗ ಮಾಡಿಕೊಂಡು ಬಸ್ಸಲ್ಲಿ ನಿಂತಿದ್ದ ಸಂದರ್ಭ ಬಸ್ಸು ಚಲಿಸಲಾರಂಭಿಸಿತು. ಆಗ ಒಂದು ಅಜ್ಜಿಯ ಬೈಗುಳ ಅಥವಾ ಜೋರು ಮಾತು ಎಂದುಕೊಳ್ಳಿ ಕಿವಿಗೆ ಬಿತ್ತು. ಆದದ್ದಿಷ್ಟೇ ಅಜ್ಜಿ ನಿಂತಿದ್ದರು ಕೆಳಗೆ ಅವಳ ಹಿಂದಿನ ಆಸನದಲ್ಲಿ ಕುಳಿತಿದ್ದವರಲ್ಲಿ ಒಬ್ಬರ ಒಂದು ಲೀಟರ ನೀರು ತುಂಬಿದ್ದ ಪ್ಲಾಸ್ಟಿಕ್‌ ಬಾಟಲ್‌ ಕೆಳಗೆ ಬಿತ್ತು ಅಜ್ಜಿ ತನಗೆ ಬಿದ್ದಿತೆಂದು ಅಂಜಿಬಿಟ್ಟರು. ಸುಮಾರು ಒಂದರಿಂದ ಎರಡು ನಿಮಿಷ ಇಬ್ಬರ ನಡುವೆ ಮಾತಿಗೆ ಮಾತು ನಡೆದರೂ ಅಂತಹ ಜಗಳವೇನೂ ಆಗಲಿಲ್ಲ. ಬಸ್ಸು ಚಲಿಸಲು ಶುರುವಾಗಿ ಸುಮಾರು ಹತ್ತು ನಿಮಿಷ. ನನಗೋ ಏನೋ ಕುತೂಹಲ ಆಕೆಯನ್ನು ಕಂಡು. ನನ್ನ ಅಂದಾಜಿನ ಪ್ರಕಾರ ಸುಮಾರು ಎಂಭತ್ತರಿಂದ ಎಂಭತ್ತೈದು ಆಗಿರಬಹುದು ಆಕೆಯ ವಯಸ್ಸು. ನಿಂತೇ ಇದ್ದಾಳೆ ಅವಳು ಒರಗಿ ನಿಂತಿರುವಲ್ಲಿಯೇ ಇಬ್ಬರು ಪಿಯುಸಿ ಓದುವ ವಿದ್ಯಾರ್ಥಿನಿಯರಿದ್ದಾರೆ. ನನಗೆ ಹೇಅಗೆ ತಿಳಿಯಿತು ಎನ್ನುವಿರಾ ಕೊರಳಪಟ್ಟಿಯಿಂದ. ನಾನು ನೋಡಿದೆ ಅವರು ಸೀಟ್‌ ಬಿಟ್ಟು ಕೊಡ್ತಾರೇನೋ ಅಂತ. ಅವರು ತಲೆಎತ್ತಿ ನೋಡಿದರೆ ಎಲ್ಲಿ ಆ ಅಜ್ಜಿ ಸೀಟು ಬಿಟ್ಟುಕೊಡಿ ಅನ್ತಾರೋ ಎನ್ನುವಂತೆ ತನಗೇನೂ ಅರಿಯದಂತೆ ತಮ್ಮದೇ ಮಾತುಕತೆಯಲ್ಲಿ ಮಗ್ನರಾಗಿದ್ದರು.

ಮೊದಲೆಲ್ಲ ನಮ್ಮ ಶಿಕ್ಷಕರು ನಮಗೆ ಹೇಳಿಕೊಡುತ್ತಿದ್ದರು ಹಿರಿಯರಿಗೆ ಸೀಟ್‌ ಬಿಟ್ಟುಕೊಡಬೇಕು, ಕೈಲಾದಷ್ಟು ಸಹಾಯ ಮಾಡಬೇಕು, ದಿನಕ್ಕೊಂದು ಒಳ್ಳೆಯ ಕೆಲಸ ಮಾಡಿ ದಿನಚರಿಯಲ್ಲಿ ಬರೆಯಬೇಕು ಇತ್ಯಾದಿ ಇತ್ಯಾದಿ. ಅದನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದೆವೋ ಗೊತ್ತಿಲ್ಲ ಆದರೆ ಪ್ರತಿದಿನ ಅಲ್ಲದೇ ಇದ್ದರೂ ಅಂತಹ ಸಂದರ್ಭಗಳು ಬಂದಾಗ ನಮಗರಿವಿಲ್ಲದೆ ಎದೆಯ ದನಿ ಜಾಗೃತಗೊಂಡು ನಮ್ಮಿಂದ ಸಹಾಯ ಮಾಡಿಸುತ್ತಿತ್ತು. ಈಗಂತೂ ಹೇಳುವವರಿಲ್ಲವೋ ಹೇಳಿದ ಮಾತನ್ನು ಕೇಳುವವರಿಲ್ಲವೋ, ಬೇರೆಯವರಿಗಿರಲಿ ಸ್ವಯಂ ತನಗೆ ಕಲಿಸಿರುವ, ಪಾಠ ಹೇಳುತ್ತಿರುವ ಗುರುಗಳೇ ಬಂದರೂ ಒಂದು ನಮಸ್ಕಾರವನ್ನೂ ಹೇಳದೆ ವಿದ್ಯಾರ್ಥಿಗಳು ಆರಾಮಾಗಿ ಕುಳಿತಿರುತ್ತಾರೆ. ಅಂತಹವರಿಂದ ಏನನ್ನಾದರೂ ನಿರೀಕ್ಷೆ ಮಾಡಿದರೆ ನಮ್ಮದೇ ತಪ್ಪು. ಎಲ್ಲರೂ ಹೀಗೆಯೇ ಎಂದು ಸಾರ್ವಜನಿಕವಾಗಿ ಹೇಳಲಾಗದು ಈಗಲೂ ಉತ್ತಮ ವ್ಯಕ್ತಿತ್ವ, ಸಂಸ್ಕಾರ ರೂಢಿಸಿಕೊಂಡಿರುವ ಮಕ್ಕಳಿದ್ದಾರೆ ಆದರೆ ಬಹುಪಾಲು ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಗರ್ಭಿಣಿ, ಸಣ್ಣಮಗುವಿನ ಬಾಣಂತಿ, ವೃದ್ಧರು ಯಾವುದೂ ಲೆಕ್ಕಕ್ಕಿಲ್ಲ. “ಅವರನ್ಯಾರು ಬಾ ಅಂದಿದ್ದು ಮನೆಯಲ್ಲಿ ಇರಬೇಕು ತಾನೇ ಸುಮ್ಮನೆ ತೆಪ್ಪಗೆ” ಎನ್ನುತ್ತಾರೆಯೆ ಹೊರತು ಕುಂತಲ್ಲಿಂದ ಅಲುಗಾಡುವುದೂ ಇಲ್ಲ. ಈಗಂತೂ ಫ್ರೀ ಬಸ್‌ ಅನ್ನುವ ಒಂದು ನೆಪ ಸಾಕು ಎಲ್ಲರನ್ನು ಬೈಯುವುದಕ್ಕೆ.

ಒಮ್ಮೆ ಮೂರು ಸೀಟಿರುವ ಖಾಸಗಿ ಬಸ್ಸಿನಲ್ಲಿ ಕಿಟಕಿ ಪಕ್ಕ ನಾನು ಕುಳಿತಿದ್ದೆ. ಮುಂದಿನ ಊರಿನ ನಿಲ್ದಾಣದಲ್ಲಿ ನನ್ನ ಪಕ್ಕದ ಸೀಟುಗಳು ಖಾಲಿ ಆದವು ನನ್ನ ಪಕ್ಕ ಒಂದು ಕಾಲೇಜು ಹುಡುಗಿ ಅವಳ ಪಕ್ಕ ಒಂದು ಹುಡುಗ ಬಂದು ಕುಳಿತರು. ನಾನು ಅಯ್ಯೋ ಆಕೆಗೆ ಮುಜುಗರ ಆಗಬಹುದು ಎಂದು ಸ್ವಲ್ಪ ಸರಿದು ಕುಳಿತೆ ಅವಳೇನು ನನ್ನತ್ತ ಸರಿಯಲಿಲ್ಲ! ಆಮೇಲೆ ಗೊತ್ತಾದದ್ದು ಅವನ ಹೊಟ್ಟೆಗೆ ಅವಳು ಟಪಟಪ ಅಂತ ಹೊಡೆಯುತ್ತಿದ್ದುದರಿಂದ, ಅವರ ಮಾತಿನ ಶೈಲಿಯ ಕಾರಣದಿಂದ ಅವರಿಬ್ಬರು ಪ್ರೇಮಿಗಳು ಎಂಬುದು ತಡವಾಗಿ ಅರಿವಿಗೆ ಬಂತು. ಇದಾದ ನಂತರ ಅದರ ಮುಂದಿನ ನಿಲ್ದಾಣದಲ್ಲಿ ಮತ್ತಷ್ಟು ಜನ ಹತ್ತಿದರು. ಅವರಲ್ಲಿ ಒಬ್ಬಳು ವಯಸ್ಸಾದವಳು ಮುಖ ಮುಖ ನೋಡುತ್ತಿದ್ದಳು ನಾನು ಕೊನೆಯಲ್ಲಿ ಕುಳಿತಿದ್ದರೆ ಎದ್ದು ಸೀಟು ಬಿಟ್ಟುಕೊಡುತ್ತಿದ್ದೆ. ಆದರೆ ಈ ಬದಿಯಲ್ಲಿದೀನಿ ಏನು ಮಾಡಲಿ ಯೋಚಿಸುತ್ತಿದ್ದಾಗಲೇ ಆಕೆ ಆ ಹುಡುಗನನ್ನು ಬಾಯಿಬಿಟ್ಟು ಕೇಳಿದಳು “ಮಂಡಿನೋವು ಸ್ವಲ್ಪ ಸೀಟು ಬಿಡಪ್ಪ”. ನಾನು ಅಂದುಕೊಂಡೆ ತನ್ನ ಪ್ರೇಯಸಿಯನ್ನು ಮೆಚ್ಚಿಸಲಿಕ್ಕಾದರೂ ಸೀಟು ಬಿಡಬಹುದೆಂದು. ಆದರೆ ನನಗೆ ಅರ್ಥವಾಗಿದ್ದು ಏನೆಂದರೆ ಅದೆಲ್ಲ ಹಳೆಯ ಕಾಲದ ತಂತ್ರಗಳೆಂದು ಇವನಂತು ಅವಳನ್ನು ಬಿಟ್ಟು ಏಳಲು ಸಿದ್ಧನಿರಲಿಲ್ಲ, ಅವಳೂ ಕೂಡ ಏಳು ಎನ್ನಲಿಲ್ಲ. ಪಾಪ ಅವರಿಗೆ ಸಿಕ್ಕಿರುವ ಆ ಅರೆಗಳಿಗೆಯ ಅವಕಾಶವನ್ನು ಅವರು ಏಕೆ ಕಳೆದುಕೊಂಡಾರು. ಸುಮ್ಮನೆ ಕುಳಿತರು. ನನಗೆ ಯಾಕೋ ಸರಿಬರಲಿಲ್ಲ “ಬನ್ನಿ ಕುಳಿತುಕೊಳ್ಳಿ” ಎಂದು ಎದ್ದು ಅವರನ್ನು ದಾಟಿ ಈ ಕಡೆ ಬಂದು ನಿಲ್ಲಲು ಪ್ರಯತ್ನಿಸಿದೆ. ಆಗಲೂ ಅವನೇನು ಏಳಲಿಲ್ಲ. ಅಷ್ಟಕ್ಕೆ ಕಂಡಕ್ಟರ್‌ ಬೇರೆ ಕಡೆ ಸೀಟು ಮಾಡಿ “ಇಲ್ಲಿ ಬನ್ನಿ” ಎಂದು ಕರೆದು ಕೂರಿಸಿದರು. ನನ್ನ ಸೀಟು ನನಗೆ ಉಳಿಯಿತು.

ಇದನ್ನು ಯಾಕೆ ಹೇಳಿದೆ ಎಂದರೆ ಇವತ್ತು ಬಹುಪಾಲು ಯುವಮನಸ್ಸುಗಳ ಮನಸ್ಥಿತಿ ಹೀಗೆ ಇದೆ. ತಮಗೂ ಒಂದು ದಿನ ಹೀಗೆ ವಯಸ್ಸಾಗುತ್ತದೆ ಎಂಬ ಅರಿವಿರಲ್ಲ. ಯಾಕೆಂದರೆ ವಯಸ್ಸಾದ ಅಜ್ಜಅಜ್ಜಿಯರ ಜೊತೆ ಜೀವನ ಕಳೆಯುವುದು ಕಡಿಮೆಯೇ ಅಲ್ಲವೇ. ಹೆಚ್ಚುತ್ತಿರುವ ವಿಭಕ್ತ ಕುಟುಂಬ, ವೃದ್ಧಾಶ್ರಮಗಳೇ ಸಾಕು ನಾವು ಹಿರಿಯರಿಗೆ ಕೊಡುತ್ತಿರುವ ಮರ್ಯಾದೆ, ಮನ್ನಣೆ, ಅವರ ಮಹತ್ವ ಎಲ್ಲವೂ ತಿಳಿಯುತ್ತದೆ. ಹಾಗಿದ್ದ ಮೇಲೆ ಇಂತಹ ಕುಟುಂಬಗಳಿಂದ ಬರುವ ಮಕ್ಕಳಲ್ಲಿ ಏನನ್ನು ನಿರೀಕ್ಷಿಸಲು ಸಾಧ್ಯ. ಬೇವು ಬಿತ್ತಿ ಬೆಲ್ಲವ ಬಯಸಿದಡೇನು ಫಲ ಅಂದಿಲ್ಲವೇ ಹಿರಿಯರು. ಬಹುಪಾಲು ಯುವಕರು ಬಸ್ಸುಗಳಲ್ಲಿ ಸೀಟು ಬಿಡುವುದಿರಲಿ ಮಕ್ಕಳು, ವೃದ್ಧರು ಎನ್ನುವುದನ್ನು ನೋಡದೆ ನೂಕಿ ಬೀಳಿಸಿ ತಾವು ಬಸ್ಸು ಹತ್ತಿ, ತಮ್ಮ ಪ್ರೇಯಸಿಗೂ ಸೀಟು ಹಿಡಿದಿರುತ್ತಾರೆ.

ಹೀಗಿರುವಾಗ ನಾನು ಯಾವ ಧೈರ್ಯದಲ್ಲಿ ಈ ಕಾಲಘಟ್ಟದ ಯುವಜನರಲ್ಲಾಗಲಿ, ವಿದ್ಯಾರ್ಥಿಗಳಿಗಾಗಲಿ ಏನಾದರೂ ಹೇಳಲು ಸಾಧ್ಯವೇ? ಆದರೂ ನನ್ನ ವಿದ್ಯಾರ್ಥಿಗಳಾಗಿದ್ದರೆ ಖಂಡಿತ ಹೇಳುತ್ತಿದ್ದೆ. ಆದರೆ ಇವರನ್ನು ಆ ಅಜ್ಜಿಗೆ ಸೀಟು ಬಿಟ್ಟುಕೊಡಿ ಎಂದು ಹೇಗೆ ಕೇಳಲಿ. ನನ್ನೊಳಗಿನ ಶಿಕ್ಷಕಿ “ಹ್ಞೂ ಕೇಳು, ಪಾಪ ಅಜ್ಜಿ, ತುಂಬಾ ವಯಸ್ಸಾಗಿದೆ” ಎಂದು ಪ್ರೋತ್ಸಾಹಿಸಿದರೆ ನನ್ನ ಸ್ವಾಭಿಮಾನ, ವಿವೇಕ “ಬೇಡ, ತಿರುಗಿ ಮಾತನಾಡುತ್ತಾರೆ. ಸುಮ್ಮನೆ ಅವಮಾನ ಅವರೇನು ಮಾತು ಕೇಳಲು ನಿನ್ನ ವಿದ್ಯಾರ್ಥಿಗಳ? ಕೇಳಬೇಡ” ಎನ್ನುತ್ತಿತ್ತು. ವಿಸ್ಮಯ ಏನೆಂದರೆ ಈ ಅಜ್ಜಿಯೂ ಯಾರನ್ನೂ ಅಷ್ಟೇ ಯಾಕೆ ತನ್ನ ಮುಂದೆ ಇರುವ ಆ ಹುಡುಗಿಯರನ್ನೂ ಕೇಳಲಿಲ್ಲ.  ಆಕೆಗೆ ಸಂಕೋಚ ಇರಬಹುದು ಅಥವಾ ಈ ಹಿಂದೆ ಕೇಳಿ ಸೀಟು ಬಿಡದಂತಹ ಎಷ್ಟೋ ಅನುಭವಗಳು ಆಗಿರಬಹುದು ಅದಕ್ಕೆ ಸುಮ್ಮನಿರಬಹುದು ಎನಿಸಿತು. ಬಹುಶಃ ಎರಡನೆಯದೆ ಹೆಚ್ಚು ಸಮಂಜಸ.

ಆದರೂ ಆಕೆ ನನ್ನಲ್ಲೇನೋ ಬೆರಗು ಹುಟ್ಟಿಸುತ್ತಿದ್ದಳು ನನ್ನ ಕಣ್ಣನ್ನು ಪದೇಪದೇ ಸೆಳೆಯುತ್ತಿದ್ದಳು. ಅವಳನ್ನು ಅಡಿಯಿಂದ ಮುಡಿಯವರೆಗೂ ನೋಡಿದೆ ಏನೋ ಆಕರ್ಷಣೆ. ಕೆಂಪು ಸೀರೆಗೆ ಉದ್ದ ತೋಳಿನ ಕೆಂಪು ರವಿಕೆ, ಮೈಯೆಲ್ಲ ಸುಕ್ಕುಗಟ್ಟಿದ್ದ ಒರಟು ಕಪ್ಪು ಚರ್ಮವನ್ನು ಪ್ರತಿನಿಧಿಸುವಂತೆ ಕೈಗಳು ಕಾಣುತ್ತಿದ್ದವು.‌ ಚಿನ್ನದ ಬಣ್ಣದ ಬಳೆ ಕನಕದ್ದೋ, ಕೃತಕದ್ದೋ ತಿಳಿಯದು. ಸ್ವಲ್ಪ ಬಣ್ಣ ಮಾಸಿತ್ತು. ಮೂಗಿನಲ್ಲಿ ನೆತ್ತಿಯ ನಾಗರದ ಆಕಾರದ ಹಳೆಯ ಕಾಲದ ಅಗಲವಾದ ಮೂಗುತಿ ಬಲಭಾಗದಲ್ಲಿ ಇತ್ತು. ಎಡಭಾಗದಲ್ಲೂ ಇತ್ತೇನೋ ನಾ ಈ ಭಾಗದಲ್ಲಿದ್ದರಿಂದ ಅದು ಕಾಣಲಿಲ್ಲ. ನಮ್ಮಲ್ಲಿ ಹಳೆಯ ಅಜ್ಜಿಯರು ಹೀಗೆ ಎರಡೂ ಭಾಗಕ್ಕೂ ಮೂಗುತಿಗಳನ್ನು ಧರಿಸುತ್ತಿದ್ದರು. ಆ ಚಿನ್ನದ ಆಸೆಗಾದರೂ ತಮ್ಮನ್ನು ಮಕ್ಕಳು, ಮೊಮ್ಮಕ್ಕಳು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವುದೂ ಇರಬಹುದು ಅಥವಾ ಅವರ ಸೌಂದರ್ಯ ಪ್ರಜ್ಞೆ ಯಾವ ಬಗೆಯದೋ ಅಲ್ಲಗಳೆಯಲು ನಾವಾರು? ಈಗ ಆ ವಿಷಯ ಬಿಡಿ. ಇನ್ನು ಆಕೆಯ ಕಿವಿಯಲ್ಲಿ ತುಂಬಾ ಹಳೆಯದಾದ ಬಿಳಿ ಏಳು ಹರಳಿನ ಓಲೆ ಅದರಲ್ಲಿ ಎರಡು ಮೂರು ಹರಳು ಬಿದ್ದುಹೋಗಿದ್ದವು. ಇನ್ನು ಅವಳ ತಲೆಯಂತೂ ಪೂರ್ತಿ ನರೆತಿತ್ತು ಅಲ್ಲಿ ಕೂದಲಿಗಿಂತ ಬುರುಡೆಯೇ ಚೆನ್ನಾಗಿ ಕಾಣುತ್ತಿತ್ತು ಇರುವ ಕೆಲವು ಕೂದಲಿಗೆ ಎಣ್ಣೆ ಹಾಕಿ ಮೇಲೆ ಕಟ್ಟಿದ್ದಳು. ಇನ್ನು ಅವಳ ಪಾದಗಳು ಚಪ್ಪಲಿಯಿಲ್ಲದೆ ನಿಂತಿದ್ದವು. ನನಗೆ ಯಾಕೋ ಮರುಕ ಜೊತೆಗೆ ಕುತೂಹಲ ಈ ವಯಸ್ಸಲ್ಲಿ ಈ ಬಿರುಬಿಸಿಲಲ್ಲಿ ಬರಿಗಾಲಲ್ಲಿ ಎಲ್ಲಿಗೆ ಹೋಗಿತ್ತು ಈ ಅಜ್ಜಿ ಮನೆಯಲ್ಲಿರೋದು ಬಿಟ್ಟು ಅಂತ. ಕಪ್ಪನೆಯ ಆ ಕಾಲುಗಳಲ್ಲಿ ಏನೇನೋ ಗಾಯದ ಗುರುತು ಚರ್ಮ ಸುಲಿದ ಕುರುಹುಗಳು ಯಥೇಚ್ಛವಾಗಿತ್ತು. ಎಡಗೈಯಲ್ಲಿ ಆರೇಳು ಈರುಳ್ಳಿ ಹಿಡಿದಿದ್ದಳು. ಅದನ್ನೂ ಹಿಡಿದೇ ಚಾಮರಾಜನಗರದಿಂದ ಬಂದಿದ್ದಳು. “ಇದು ಅವಳೇ ಬೆಳೆದಿದ್ದಿರಬಹುದಾ ಅಥವಾ ಮಗಳ ಮನೆಗೆ ಹೋಗಿ ಅಲ್ಲಿಂದ ಕೊಟ್ಟು ಕಳಿಸಿರಬಹುದಾ ಹೀಗೆ ಏನೇನೋ ಆಲೋಚನೆ. ಮನಸ್ಸು ಅವಳೊಡನೆ ಮಾತನಾಡಿಸಲು ತವಕಿಸುತ್ತಿತ್ತು. ಈಗಾಗಲೇ ಆರಂಭದಲ್ಲಿ ಬೇರೆಯವರಿಗೆ ನೀರಿನ ಬಾಟಲ್‌ ವಿಷಯಕ್ಕೆ ಸ್ವಲ್ಪ ಮಾತಾಗಿದ್ದರಿಂದ ನನ್ನನ್ನು ತಿರುಗಿ ಏನಾದರೂ ಅಂದುಬಿಟ್ಟರೆ ಭಯ ಸುಮ್ಮನಾದೆ. ಆದರೆ ಅವಳು ಮಾತ್ರ ನನ್ನನ್ನು ಮತ್ತೆ ಮತ್ತೆ ಸೆಳೆಯುತ್ತಿದ್ದಳು. ಲಂಕೇಶರ ಕವಿತೆಯ ಅವ್ವ ಕಣ್ಮುಂದೆ ಬಂದುಹೋದಂತೆ. ಅವಳೂ ನನ್ನನ್ನು ಒಂದೆರಡು ಬಾರಿ ನೋಡಿದಳು ತನ್ನಷ್ಟಕ್ಕೆ ನಿಂತಳು. ಆ ವಯಸ್ಸಲ್ಲಿ ವಾಲಾಡುವ ಬಸ್ಸಲ್ಲಿ ಅಷ್ಟುಹೊತ್ತು ನಿಲ್ಲುವುದು ಅಸಾಧ್ಯದ ಮಾತು. ಇಪ್ಪತ್ತು ನಿಮಿಷ ದಾಟಿ ಆಗಿತ್ತು. ಬಸ್ಸು ಮಂಗಲ ದಾಟಿ ಮರಳ್ಳಿಗೆ ಬಂತು. ಮಧ್ಯೆ ಎಲ್ಲೂ ಬಸ್ಸು ನಿಲುಗಡೆ ನೀಡಲಿಲ್ಲ. ನಾನು ಬಹುಶಃ ಅವಳು ಸಂತೇಮರಳ್ಳಿಯಲ್ಲಿ ಇಳಿಯಬಹುದು ಎಂದು ಊಹಿಸಿದ್ದೆ ಅದೂ ತಪ್ಪಾಯಿತು. ಆಕೆ ನಿಂತೇ ಇದ್ದಳು ಸೀಟು ಕೂಡ ಅಲ್ಲಿಯೂ ಖಾಲಿಯಾಗಲಿಲ್ಲ. ನನಗೆ ಈಗಲಾದರೂ ಅವರನ್ನು ಕೇಳೋಣ ಅಜ್ಜಿಗೆ ಸೀಟ್‌ ಬಿಡಿ ಎಂದು ಅನಿಸಿತು. ಆದರೆ ಆಕೆಯ ಗಟ್ಟಿತನವನ್ನು ನಾನೇ ಪೊಳ್ಳಾಗಿ ಅಂದಾಜಿಸುತ್ತಿದ್ದೇನೆಯೇ, ನಾ ನಿಲ್ಲಬಲ್ಲೆ ಎಂಬ ಅವಳ ಆತ್ಮವಿಶ್ವಾಸವನ್ನು ನಾ ಕುಗ್ಗಿಸಿಬಿಟ್ಟಂತಾದರೆ ಅದಕ್ಕೆ ಮತ್ತೆ ಸುಮ್ಮನಾದೆ ಇನ್ನು 5-6 ನಿಮಿಷ ಕಳೆದರೆ ನನ್ನೂರು ಬಂದು ಬಿಡುತ್ತಿತ್ತು. ಅಷ್ಟರಲ್ಲಿ ಏನಾದರೂ ಆಗಲಿ ಅವಳನ್ನು ಮಾತಾಡಿಸಿ ಬಿಡಬೇಕೆನಿಸಿ ಮಾತನಾಡಿಸಿಯೇ ಬಿಟ್ಟೆ!

“ಯಾವ ಊರಿಗೆ ಹೋಗ್ತಿದೀರಾ ಅಮ್ಮ, ಮರಳ್ಳಿ ಅಲ್ವಾ?”

“ಇಲ್ಲಕವ್ವ ಯಳಂದೂರ್ಲಿ ಇಳ್ಕತೀನಿ”

“ಚಪ್ಪಲಿ ಹಾಕಿಕೊಳ್ಳಬಾರದಾ ಕಾಲಿಗೆ ಬರಿಗಾಲಲ್ಲಿದೀರಲ್ಲ”

“ಒಂದ್ಸಲಿ ಆಕಂಡು ಬಿದ್ಬುಟ್ಟಿ ಅದ್ಕೆ ಚಪ್ಲಿ ಆಕಳದ ಬುಟ್ಬುಟ್ಟಿನಿ”

“ಅಯ್ಯೋ ಹೌದಾ! ಛೇ..” ಎಂದು ಮುಂದೆ ಮಾತಾಡಲು ಹೋದೆ ಅವಳೇ ಹೇಳಿದಳು ತಾನು ಮೈಸೂರಿಂದ ನಂಜನಗೂಡು ಮಾರ್ಗವಾಗಿ ನಗರಕ್ಕೆ ಬಂದುದಾಗಿ ಈಗ ಯಳಂದೂರಿಗೆ ಹೋಗುತ್ತಿರುವುದಾಗಿ ಹಾಗೆಯೇ ತನ್ನೂರನ್ನೂ ಕುರಿತು ಹೇಳಿದಳು. ತನ್ನ ಕಾಲಿಗೆ ಉರೊಪ್ಳೆ(ಕೀವುತುಂಬಿದ,ಉರಿಯುವ ಗುಳ್ಳೆ) ಆಗಿ ತುಂಬಾ ಉರಿ ನಡೆದಾಡಕೆ ಆಗ್ತಿರಲಿಲ್ಲ ಒಸಿ ದಿನ ಹೋಗಿರಲಿಲ್ಲ ಏನೇನೋ ಹೇಳಿದಳು ನನಗೆ ಅರೆಬರೆ ಅರ್ಥ ಆಯ್ತು. ಕಾಲಿಗೆ ಗಾಯ ಆದದ್ದು ಅರ್ಥ ಆಯ್ತು ಅನುಕಂಪದಿಂದ “ಹೌದು ನೋಡಿದೆ ನಿಮ್ಮ ಕಾಲನ್ನ” ಎಂದೆ. “ಹೌದಾ ನೋಡಿದ್ರ್ಯಾ” ಎಂದು ನನ್ನ ನೋವನ್ನು ಯಾರೋ ಆಪ್ತರು ಗಮನಿಸಿದ್ದಾರೆ ಎನ್ನುವಂತೆ ಅವಳ ಮುಖದಲ್ಲಿ ನಗು ಬಂತು. ಮತ್ತೆ ಪ್ರಶ್ನಿಸಿದೆ “ಮೈಸೂರಿಗೆ ಯಾಕೆ ಹೋಗಿದ್ದು ಅಷ್ಟು ದೂರ”, ಅವಳೆಂದಳು “ಈರುಳ್ಳಿ ತರೋಕೆ”. ಇನ್ನೂ ಆಶ್ಚರ್ಯ ಆಯಿತು ನನಗೆ ಅವಳೇ ಮುಂದುವರೆದು ಹೇಳಿದಳು “ಆರ್‌ ಎಂ ಸಿ ಗೆ ಹೋಗಿದ್ದೆ ಈರುಳ್ಳಿ ತರಾಕೆ ಆಗಾಗ ಹೋಗ್ತಿರ್ತೀನಿ ಅರಿವೊತ್ತು” ಮುಂಜಾನೆಯೇ ಹೋಗಿದ್ದುದಾಗಿ ಮಧ್ಯಾಹ್ನವಾದುದರಿಂದ ಹಸಿವಾಯ್ತದೆ ಅದಕ್ಕೆ ಊಟಮಾಡಿ ಹೋಗಲು ಯಳಂದೂರಿಗೆ ಬಂದಿರುವಂತೆ ಏನೋ ಹೇಳಿದಳು ಅವಳ ಕೈಯಲ್ಲಿದ್ದ ಈರುಳ್ಳಿಯನ್ನು ಮರಳ್ಳಿಯಲ್ಲಿ ಅವಳನ್ನು ಮಾತನಾಡಿಸಲು ಶುರುಮಾಡಿದಾಗಲೇ ನಾನು ತೆಗೆದುಕೊಂಡಿದ್ದೆ. “ನಾನೂ ಯಳಂದೂರೇ ಅಮ್ಮ ಕೊಡಿ ಅಲ್ಲಿವರೆಗೆ ಇಡ್ಕೋತೀನಿ” ಎಂದು ಪಡೆದುಕೊಂಡಿದ್ದೆ. ಕೊನೆಗೆ ಮತ್ತೆ ಮತ್ತೆ ಕೇಳಿದಾಗ ತಿಳಿದ ಮಾಹಿತಿ ಅವಳ ಊರು ದುಗ್ಗಟ್ಟಿ. ಯಳಂದೂರಿನಿಂದ ಐದು ಕಿಮೀ ದೂರ. ಇಲ್ಲಿಂದ ಮೈಸೂರಿಗೆ ಹೋಗಿ ಅಲ್ಲಿ ಈರುಳ್ಳಿ ಖರೀದಿ ಮಾಡಿ ಇಲ್ಲಿ ತಂದು ಭಾನುವಾರ ಯಳಂದೂರಿನ ಸಂತೆಯಲ್ಲಿ ಮಾರುವವಳು. ಇವಳಿಂದ ಇದೆಲ್ಲ ಹೇಗೆ ಸಾಧ್ಯ ಜೊತೆಗೆ ಯಾರಿದ್ದಾರೆ “ಯಾರಿಲ್ಲ ಒಬ್ಬಳೆ ಹೋಗ್ತೀನಿ ಅಲ್ಲಿ ದುಡ್ಡು ಕಟ್ಬುಡದು ಅಲ್ಲಿ ಅವರೇ ಎತ್ತಿ ಹಾಕ್ಕೊಡ್ತಾರೆ ಇಲ್ಲಿ ಆಳುಗಳು ಇಳಿಸ್ಕತಾರೆ” ಅಂದಳು. “ನಾ ಯಾವಾಗಲೂ ಹೀಗೆ ಹೋಗಿ ಈರುಳ್ಳಿ ತಂದು ಮಾರುತ್ತಿರ್ತೀನಿ, ನೀನು ಸಂತೆಗೆ ಬರಲ್ವಾ” ಅಂದಳು. ಅವಳ ಮುಗ್ಧಪ್ರಶ್ನೆಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ ಇಲ್ಲ ಆದರೆ ಇನ್ಮುಂದೆ ಬರ್ತೀನಿ, ನೀವು ಪರಿಚಯ ಆದರಲ್ಲ ನಿಮ್ಮನ್ನ ನೋಡೋಕೆ ಅಂದೆ. ನಕ್ಕಳು ಮತ್ತೆ ಹೇಳಿದಳು ತಾನು ಕೂರುವ ಜಾಗವನ್ನು ಅರಳಿಮರದ ಕೆಳಗೆ, ಕಾರ್ಮೆಂಟವರೆಲ್ಲ ಈರುಳ್ಳಿ ತಗೊಳ್ತಾರೆ ಬಂದು ತನ್ನ ಬಳಿ ಅಂದಳು. ಅಷ್ಟಕ್ಕೆ ಬಸ್ಸು ಯಳಂದೂರಿಗೆ ತಲುಪಿತು. ಅಜ್ಜಿ ಇಳಿದು ನನ್ನ ಕೈಯಿಂದ ಈರುಳ್ಳಿ ಪಡೆಯಲು ನೋಡಿದಳು. “ಅಮ್ಮ ಇದು ಬೇಕಾ? ನಾ ತೆಗೆದುಕೊಳ್ಳಲಾ?” ಎಂದೆ. ತಕವೋಗವ್ವ ಅಂದಳು. ನೂರು ರೂ ಕೊಟ್ಟೆ ಕೃತಜ್ಞತೆಯಿಂದ ಕೈ ಜೋಡಿಸಿತು ಹಿರಿಜೀವ. ನಿನ್ನ ಈರುಳ್ಳಿಗೆ ಕೊಟ್ಟಿದ್ದೇನೆ ಅಮ್ಮ ಎಂದು ಹೇಳಿ ಬಂದುಬಿಟ್ಟೆ. ಹಾಗೇ ಕೊಡುವ ಮನಸ್ಸಾಗಿತ್ತು ಈ ವಯಸ್ಸಲ್ಲೂ ದುಡಿದು ತಿನ್ನುವ ಜೀವ ಅವಳ ಸ್ವಾಭಿಮಾನಕ್ಕೆ ಧಕ್ಕೆಯಾಗಬಾರದು ಎಂದು ಹೀಗೆ ಯೋಚಿಸಿದೆ. ಯಾಕೆ ಮಕ್ಕಳಿಲ್ವಾ, ನೀ ಏಕೆ ಈ ಕೆಲಸ ಮಾಡ್ತಿದೀಯಾ ಏನೊಂದು ಕೇಳಬೇಕೆನಿಸಲಿಲ್ಲ. ಅದರಿಂದ ಅವಳು ಯಾವ ಸ್ಥಿತಿಯಲ್ಲಿದ್ದಾಳೋ ಆಕಸ್ಮಾತ್‌ ನೋವಾದರೆ. ಹಾಗಾಗಿ ಇಂತಹ ಪ್ರಶ್ನೆಗಳು ವ್ಯರ್ಥ ಅನಿಸಿತು. ಆಕೆಯ ದುಡಿಮೆ, ಛಲ, ದೃಢತೆ, ಗಟ್ಟಿತನ, ಸ್ಥೈರ್ಯ ಕಣ್ಮುಂದೆ ಬಂದು ಸಾಕ್ಷಾತ್‌ ದುರ್ಗೆಯೇ ಆಗಿ ಕಂಡಳು. ಚಲನಚಿತ್ರಗಳಲ್ಲಿ ತೋರಿಸುವ, ದೇವಾಲಯಗಳಲ್ಲಿ ಪೂಜಿಸುವ, ಸಿಂಹದ ಮೇಲೆ ಕುಳಿತ ಚಿರಯೌವನೆ ಹರೆಯದ ಸಿಟ್ಟಿನ ದುರ್ಗ, ತಾಳ್ಮೆಯ ಮಾಗಿದ ಬದುಕಿನ ಕಷ್ಟನಷ್ಟವನ್ನೆಲ್ಲ ಉಂಡು ಭಾರವಾಗದೆ ದಿಟ್ಟೆಯಾಗಿ ಬದುಕುತ್ತಿರುವ ಈ ಗಟ್ಟಿಗಿತ್ತಿ ದುರ್ಗೆಯ ಮುಂದೆ ಅವಳು ಸಪ್ಪೆಯೇ ಎನಿಸಿದಳು. ನಿಜಕ್ಕೂ ಸಾಕ್ಷಾತ್‌ ದೇವಿಯನ್ನು ನೋಡಿದರೂ ದೊರೆಯದ ಏನೋ ತೃಪ್ತಿ, ಮುಖದ ಕಳೆ, ಐದು ನಿಮಿಷದ ಮಾತಿನಲ್ಲಿ ಬದುಕಿಗೆ ಸಾಕಷ್ಟು ಪಾಠ ಕಲಿಸಿದಳು ಈ ದುರ್ಗಾ, ಅಲ್ಲಲ್ಲ ದುಗ್ಗಟ್ಟಿ ದುರ್ಗಿ.! ಇಂತಹ ದುರ್ಗೆಯರೆಷ್ಟಿದ್ದಾರೋ ಅವರಿಗೆಲ್ಲ ಶರಣು ಶರಣಾರ್ಥಿ.


About The Author

2 thoughts on “ರೋಹಿಣಿ ಜೆ. ಅವರ ಅನುಭವ ಕಥನ “ದುಗ್ಗಟ್ಟಿ ದುರ್ಗಿ””

  1. ಇಂತಹ ದುರ್ಗೆಯರು ನಿತ್ಯ ಜೀವನದಲ್ಲಿ ನಮಗೂ ಕಾಣ ಸಿಗುತ್ತಾರೆ. ಲೇಖನ ಮೆಚ್ಚುವಂತಹದು

  2. ತುಂಬಾ ಚೆನ್ನಾಗಿದೆ ಮೇಡಂ ನನಗೆ ಆ ಅಜ್ಜಿಯನ್ನು ನೋಡುವ ಆಸೆ ಮೇಡo

Leave a Reply

You cannot copy content of this page

Scroll to Top