ಪ್ರೇರಣಾ ಸಂಗಾತಿ
ಜಯಶ್ರೀ ಜೆ ಅಬ್ಬಿಗೇರಿ
ಆರಂಭವಾಗಲಿ ಬದಲಾವಣೆ
ನಮ್ಮಿಂದಲೇ……


ನಾವೆಲ್ಲ ಜಗತ್ತು ಬದಲಾಗಬೇಕು ಎಂದು ಬಯಸುತ್ತೇವೆ.ಆದರೆ ನಾವು ಬದಲಾಗಲು ಬಯಸುವುದಿಲ್ಲ.ಈ ಮಾತು ವಿಚಿತ್ರ ಆದರೂ ಸತ್ಯ. ನೀನು, ಮೊದಲು ಆ ಬದಲಾವಣೆಯಾಗಿ ಬದಲಾಗು” (Be the change you want to see in the world) ಎಂಬ ಮಹಾತ್ಮ ಗಾಂಧೀಜಿಯವರ ಈ ಮಾತು ಕೇವಲ ಘೋಷಣೆಯಲ್ಲ; ಅದು ಬದುಕಿನ ಪರಮ ಸತ್ಯ.
ನಾವು ಜಗತ್ತನ್ನು ದೂಷಿಸುವ ಮುನ್ನ ನಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಲು ಕಲಿಯಬೇಕಿದೆ.
ಒಂದು ಪುಟ್ಟ ಪ್ರೇರಣಾದಾಯಕ ಕಥೆಯೊಂದನ್ನು ಓದಿದ್ದು
ನೆನಪಾಗುತ್ತಿದೆ. ನೀವೂ ಓದಿ.
ಒಮ್ಮೆ ಕಡಲತೀರದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿತ್ತು. ಅಲೆಗಳ ಆರ್ಭಟಕ್ಕೆ ಸಿಲುಕಿ ಲಕ್ಷಾಂತರ ನಕ್ಷತ್ರ ಮೀನುಗಳು ತೀರದ ಮರಳಿನ ಮೇಲೆ ಬಂದು ಬಿದ್ದಿದ್ದವು. ಸೂರ್ಯನ ಶಾಖ ಹೆಚ್ಚಾಗುತ್ತಿದ್ದಂತೆ ಅವು ನೀರಿಲ್ಲದೆ ಒದ್ದಾಡಿ ಸಾಯತೊಡಗಿದವು.
ಅದೇ ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ವೃದ್ಧ, ಮರಳಿನ ಮೇಲೆ ಬಿದ್ದಿದ್ದ ಮೀನುಗಳನ್ನು ನೋಡಿ ನಿಟ್ಟುಸಿರು ಬಿಟ್ಟರು. ಆದರೆ, ಅಷ್ಟರಲ್ಲೇ ಒಬ್ಬ ಪುಟ್ಟ ಬಾಲಕ ಅಲ್ಲಿಗೆ ಬಂದ. ಅವನು ಮರಳಿನ ಮೇಲಿದ್ದ ಮೀನುಗಳನ್ನು ಒಂದೊಂದಾಗಿ ಎತ್ತಿ ಪ್ರೀತಿಯಿಂದ ಸಮುದ್ರದ ನೀರಿಗೆ ಎಸೆಯತೊಡಗಿದ.
ಇದನ್ನು ನೋಡಿದ ವೃದ್ಧ ಬಾಲಕನ ಹತ್ತಿರ ಬಂದು,
“ಮಗುವೇ, ಇಲ್ಲಿ ಲಕ್ಷಾಂತರ ಮೀನುಗಳಿವೆ. ನೀನು ಕೆಲವೇ ಕೆಲವು ಮೀನುಗಳನ್ನು ಉಳಿಸಿದರೆ ಈ ವಿಶಾಲ ಜಗತ್ತಿಗೆ ಏನು ವ್ಯತ್ಯಾಸವಾಗುತ್ತದೆ?” ಎಂದು ಕೇಳಿದ. ಬಾಲಕ ನಸುನಕ್ಕು, ಮತ್ತೊಂದು ಮೀನನ್ನು ಕೈಗೆತ್ತಿಕೊಂಡು ನೀರಿಗೆ ಎಸೆದ. ನಂತರ ವೃದ್ಧರ ಕಣ್ಣುಗಳನ್ನು ದಿಟ್ಟಿಸಿ ನೋಡಿ, “ಇಡೀ ಜಗತ್ತಿಗೆ ವ್ಯತ್ಯಾಸವಾಗದೇ ಇರಬಹುದು, ಆದರೆ ನಾನು ನೀರಿಗೆ ಎಸೆದ ಆ ಒಂದು ಮೀನಿನ ಜೀವಕ್ಕೆ ಇಡೀ ಜಗತ್ತೇ ಬದಲಾದಂತಾಯಿತಲ್ಲವೇ?” ಎಂದನು.ವೃದ್ಧನಿಗೆ ತನ್ನ ತಪ್ಪಿನ ಅರಿವಾಯಿತು. ಅವನೂ ಬಾಲಕನೊಂದಿಗೆ ಕೈಜೋಡಿಸಿದನು.
“ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಹಬ್ಬ.” ಎಂಬಂತೆ, ಆ ಪುಟ್ಟ ಬಾಲಕನ ಒಂದು ಸಣ್ಣ ಪ್ರಯತ್ನದ
ಹೆಜ್ಜೆ ಅಂದು ಸಾವಿರಾರು ಜೀವಗಳನ್ನು ಉಳಿಸಿತು.
ಮುನ್ನುಡಿ
ಬದಲಾವಣೆಗೆ ನಾವೇ
ಮುನ್ನುಡಿ ಬರೆಯಬೇಕು.
ಬದಲಾವಣೆ ನಮ್ಮಿಂದಲೇ ನಾವು ಪ್ರತಿದಿನ ಸಮಾಜದಲ್ಲಿನ ಭ್ರಷ್ಟಾಚಾರ, ಸ್ವಾರ್ಥ, ಪರಿಸರ ಮಾಲಿನ್ಯ ಮತ್ತು ದ್ವೇಷದ ಬಗ್ಗೆ ಮಾತನಾಡುತ್ತೇವೆ.
ಸಮಾಜವನ್ನು,
ವ್ಯವಸ್ಥೆಯನ್ನು ದೂಷಿಸುವುದು ಹೂವಿನ ಮೇಲಿನ ಇಬ್ಬನಿಯನ್ನು ಒರೆಸಿದಷ್ಟೇ ಸುಲಭ. ಆದರೆ, “ನಾನು ಸಮಾಜಕ್ಕೆ ಏನು ನೀಡುತ್ತಿದ್ದೇನೆ?” ಎಂದು ಯೋಚಿಸಿ, ಸಮಾಜಕ್ಕೆ ಕೊಡುಗೆ ನೀಡುವುದು ತುಂಬಾ ಕಷ್ಟದ ಕೆಲಸ.
ಹಾಗೆ ನೋಡಿದರೆ ಅಂಥವರ ಸಂಖ್ಯೆಯು
ವಿರಳ. “ಕತ್ತಲೆಯನ್ನು ಶಪಿಸುತ್ತಾ ಕೂರುವುದಕ್ಕಿಂತ ಒಂದು ಪುಟ್ಟ ಹಣತೆಯನ್ನು ಹಚ್ಚುವುದು ಲೇಸು.”
ಮನೆ ಕಸ
ನಮ್ಮ ಮನೆ ಮತ್ತು
ಮನೆಯ ಮುಂದೆ ನಾವು ಕಸ ಗೂಡಿಸಿ ಪಕ್ಕದ ಮನೆಯವರ ಮುಂದೆ ಚೆಲ್ಲಿದರೆ ಏನು ಮಾಡಿದಂತಾಯಿತು? ಕಸ ಗುಡಿಸಿದ್ದು ವ್ಯರ್ಥ.
ಆ ಕಸ ಗಾಳಿಗೆ ಎಲ್ಲೆಲ್ಲೂ ಹಾರಿ ಹೋಗುತ್ತದೆ.
ಊರಿನ ಅಂಗಳ
ಮತ್ತಷ್ಟು ಹೊಲಸಾಗುತ್ತದೆ.
ನಾವು ಕಸವನ್ನು ಡಬ್ಬಿಗೆ ಹಾಕಿದರೆ
ಇಡೀ ನಗರವೇ ಸ್ವಚ್ಛವಾಗುತ್ತದೆ.
ಪ್ರತಿಬಿಂಬ
ನಾವು ಇತರರಿಗೆ ಗೌರವ ನೀಡಿದರೆ, ಅವರು ನಮಗೆ ಗೌರವ ನೀಡುತ್ತಾರೆ. ಗೌರವ ಕೇಳಿ ಪಡೆಯುವುದಲ್ಲ. ಅದು ಕೊಟ್ಟು ಪಡೆಯುವಂಥದ್ದು.
ನಾವು ಇತರರಿಗೆ ಪ್ರೀತಿ ನೀಡಿದರೆ
ಸಮಾಜ ನಮಗೆ ಪ್ರೀತಿಯನ್ನು ಉಡುಗೊರೆಯಾಗಿ ನೀಡುತ್ತದೆ. ಸಮಾಜ ಎಂಬುದು ನಮ್ಮದೇ ಪ್ರತಿಬಿಂಬ. ನಾವು ಸುಂದರವಾಗಿದ್ದರೆ ಜಗತ್ತೂ ಸುಂದರವಾಗಿಯೇ ಕಾಣುತ್ತದೆ.
ಪ್ರಾಜ್ಞರ ದೃಷ್ಟಿ
ಕುವೆಂಪು ಹೇಳಿದಂತೆ: “ಮನುಜಮತ, ವಿಶ್ವಪಥದತ್ತ ಸಾಗಬೇಕಾದರೆ ಮೊದಲು ವ್ಯಕ್ತಿತ್ವದ ವಿಕಾಸವಾಗಬೇಕು. ನಿನ್ನ ಅಂತರಂಗದ ದೀಪವನ್ನು ಮೊದಲು ಹಚ್ಚಿಕೋ, ಜಗತ್ತಿನ ಕತ್ತಲೆ ತಾನಾಗಿಯೇ ಸರಿಯುತ್ತದೆ.
“ಡಿ. ವಿ.ಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ :”ತಿದ್ದಿಕೊಳು ನಿನ್ನ ಒರಟು ನಡೆನುಡಿಗಳನು,ಜಗವ ತಿದ್ದುವ ಸಾಹಸಕೆ ಹೋಗದಿರು ಮನುಜ… ಎಂದಿದ್ದಾರೆ.
“ಸ್ವಾಮಿ ವಿವೇಕಾನಂದ: “ನಿನ್ನನ್ನು ನೀನು ನಂಬು. ಇಡೀ ಜಗತ್ತನ್ನು ಬದಲಾಯಿಸುವ ಶಕ್ತಿ ನಿನ್ನ ಒಂದು ಸಣ್ಣ ಸಂಕಲ್ಪದಲ್ಲಿದೆ.”
ಹರಿಕಾರ
“ಬದಲಾವಣೆಯ ಹಾದಿಯಲ್ಲಿ ನೀ ಮೊದಲ ಹೆಜ್ಜೆಯಾಗು, ಒಣಗಿದ ಮರಭೂಮಿಗೆ ನೀ ತಂಪಿನ ಹನಿಯಾಗು.
ದೂಷಿಸಬೇಡ ಜಗದ ಕತ್ತಲನು ಮೌನದಿ ಕೊರಗಿ,ಉರಿಯುವ ಹಣತೆಯಾಗಿ ನೀ ಜಗಕೆ ಬೆಳಕಾಗು.
ಕಲ್ಲನ್ನು ನುಣುಪುಗೊಳಿಸುವ ಶಿಲ್ಪಿಯಂತೆ, ನಿನ್ನ ನಡೆ-ನುಡಿ ಇರಲಿ. ಈ ಕಾವ್ಯದಂತೆ.ಜಗವ ಗೆಲ್ಲುವ ಆತುರ ಬಿಡು ಓ ಗೆಳೆಯಾ,ನಿನ್ನ ನೀ ಗೆದ್ದರೆ ಜಗವೇ ನಿನ್ನಂತೆ…!!
ಕೊನೆ ಮಾತು
ಜಗತ್ತನ್ನು ಬದಲಾಯಿಸಲು ನಾವ್ಯಾರೂ ಮೇಧಾವಿಗಳು ಆಗಬೇಕೆಂದಿಲ್ಲ
ಸಿರಿವಂತರು ಆಗಬೇಕೆಂದಿಲ್ಲ.
ಅಗತ್ಯವಿದ್ದವರಿಗೆ
ಒಂದು ಪುಟ್ಟ ಸಹಾಯ,
ನೊಂದವರಿಗೆ ಹೆದರದಿರಿ, ನಾವು ನಿಮ್ಮೊಂದಿಗೆ ಇರುತ್ತೇವೆ ಎಂಬ ಒಂದು ಸಾಂತ್ವನದ ಮಾತು.
ಮುಖದ ಮೇಲೊಂದು ಸದಾ ಸಣ್ಣದೊಂದು
ನಗು ಸಾಕು.
ಕೇವಲ ಒಬ್ಬ ಒಳ್ಳೆಯ ‘ಮನುಷ್ಯ’ನಾದರೆ ಸಾಕು. ನಾವು ಬಯಸುವ ಪ್ರೀತಿ, ಶಾಂತಿ, ಕರುಣೆ ಮತ್ತು ಪ್ರಾಮಾಣಿಕತೆ ಮೊದಲು ನಮ್ಮ ದಿನನಿತ್ಯದ ಬದುಕಿನಲ್ಲಿ ಮೂಡಿಬರುತ್ತದೆ.
ನಮ್ಮ ಕಿರುನಗೆ ಒಬ್ಬರ ದುಃಖವನ್ನು ಮರೆಸಬಹುದು, ನಮ್ಮ ಒಂದು ಒಳ್ಳೆಯ ಮಾತು ಧೃತಿಗೆಟ್ಟ ಜೀವಕ್ಕೆ ಆಸರೆಯಾಗಬಹುದು.
ಪೀಠಿಕೆ
ಬದಲಾವಣೆಯ ಮಹಾಕಾವ್ಯಕ್ಕೆ ನಾವೇ ಪೀಠಿಕೆ ಬರೆಯಬೇಕು.ವಿನಃ ಬೇರೆ ಯಾರೋ ಬರೆಯುತ್ತಾರೆಂದು ಕಾಯುತ್ತ ವ್ಯವಸ್ಥೆಯನ್ನು ಬೈಯುತ್ತಾ ಕುಳಿತುಕೊಳ್ಳಬಾರದು.
ಹಾಗಾದರೆ ತಡವೇಕೆ ಇಂದಿನಿಂದಲೇ ನಮ್ಮಿಂದಲೇ ಆಗಲಿ
ಬದಲಾವಣೆಯ
ಆರಂಭ. ಸಂತಸ ಸಮೃದ್ಧಿ ತರಲಿ ಶುಭಾರಂಭ.
ಜಯಶ್ರೀ ಜೆ ಅಬ್ಬಿಗೇರಿ



