ಕಾವ್ಯ ಸಂಗಾತಿ
ಡಾ.ವೈ.ಎಂ.ಯಾಕೊಳ್ಳಿ
“ಹತ್ತು ಕವಿತೆ ಚೂರು”


೧
ಅವ್ವ ಕಾಯುತ್ತಾಳೆ
ಕಣ್ಣಾಗಿ ಜಗವ
ಬುದ್ಧನಂತೆ
೨
ಅಪ್ಪನ ನೇಗಿಲ
ಕುಳಕ್ಕೆ ಬೇಸರವೆಂಬುದಿಲ್ಲ
ಬರಿ ಹಸಿರು ಬಿತ್ತುತ್ತದೆ
೩
ಲೋಕ ನಿದ್ದೆಗಣ್ಣಲ್ಲಿದೆ
ಎಚ್ಚರಿಸ ಬೇಕಾದ ದೈವ
ಮರೆತು ಮಲಗಿದೆ
೪
ಯುದ್ಧ ನಿಲ್ಲದು
ಎದೆಯಲ್ಲಿ ಶಾಂತಿ ತೋಟ
ಬೆಳೆಯುವವರೆಗೆ
೫
ಕೈಯ ಕೋವಿಗೂ
ಕ್ಷಮಿಸುವ ಶಕ್ತಿ
ಕೊಟ್ಟಾಗ ಬುದ್ಧ ನಗುತ್ತಾನೆ
೬
ನಮ್ಮಕೇರಿಯ
ತುಂಬ ಹೂವು ಚೆಲ್ಲಿವೆ
ರಂಜಾನ್,ಯುಗಾದಿ ಕೂಡಿ ನಡೆದಿವೆ
೭
ಅವ್ವ ತಟ್ಟುವ
ರೊಟ್ಟಿಗೆ ಜಗದ ಹಸಿವು
ನೀಗಿಸೊ ತಾಕತ್ತಿದೆ
೮
ಬರೆದು ಸೋಲುತ್ತೇನೆ
ಆಕೆ ಮಹಾಜಾಣೆ
ಕಣ್ಣೊಳಗೇ ಓದಿ ನಗುತ್ತಾಳೆ
೯
ನಾನು ಅಕ್ಷರ ಜೀವ
ಅವಳು ಪ್ರೇಮದ ಅರ್ಥ
ಬಲ್ಲವಳು ಸಾಂಗತ್ಯ ಸಸಾರ
೧೦
ಪ್ರೀತಿಯ ಬಾವಿ
ಬತ್ತಿದ ದಿನ
ಸಂಸಾರ ಸತ್ತು ಹೋಗಿರುತ್ತದೆ
ಡಾ.ವೈ.ಎಂ.ಯಾಕೊಳ್ಳಿ



