ಧಾರಾವಾಹಿ-23
ರುಕ್ಮಿಣಿ ನಾಯರ್

ಒಬ್ಬ ಅಮ್ಮನ ಕಥೆ
ಗೆಳತಿಯ ಸಹಾಯ

ತಾಯಿ ಊಟ ಮಾಡಿದ ನಂತರ ಅಕ್ಕ ತಂಗಿಯರಿಬ್ಬರೂ ಹೊರಡಲು ಅನುವಾದರು….. “ಅಮ್ಮಾ…. ನಾವಿಬ್ಬರೂ ಹೊರಗೆ ಹೋಟೆಲ್ ನಲ್ಲಿ ಊಟ ಮಾಡುತ್ತೇವೆ….ತಂಗಿ ದೊಡ್ಡಕ್ಕನ ಮನೆಗೆ ಹೋಗುತ್ತಿದ್ದಾಳೆ…. ಅಕ್ಕನಿಗೂ ನೀನು ಆಸ್ಪತ್ರೆಯಲ್ಲಿ ಇರುವ ವಿಷಯ ತಿಳಿಸಬೇಕಿದೆ…. ಅಲ್ಲಿಂದ ಹಾಗೇ ನಾನು ಆಶ್ರಮಕ್ಕೆ ತೆರಳುತ್ತಿದ್ದೇನೆ…. ಸಂಜೆ ನಿನ್ನೊಂದಿಗಿರಲು ಬರುತ್ತೇನೆ…. ನನ್ನ ಗೆಳತಿಯೊಬ್ಬಳು ಅನಾಥಾಶ್ರಮದಲ್ಲಿ ಇರುವುದರಿಂದ ನಿನ್ನ ಜೊತೆ ನನಗಿರಲು ಅವಕಾಶವಾಗಿದೆ… ಆಕೆ ಇತ್ತೀಚೆಗೆ ಬಂದಿದ್ದರು ಕೂಡ ಎಷ್ಟೋ ವರ್ಷಗಳ ಗೆಳತಿಯಂತೆ ನನ್ನ ಸಹಾಯಕ್ಕೆ ಹೆಗಲು ಕೊಡುತ್ತಿದ್ದಾಳೆ… ಆದರೂ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ…. ಎಂದು ಮಗಳು ತಿಳಿಸಿದಾಗ, ಸರಿ ಎನ್ನುವಂತೆ ತಲೆಯಾಡಿಸಿದಳು ಸುಮತಿ. ಏನೋ ನೆನಪಾದಂತೆ ಅನಿಸಿ….. ಒಂದು ನಿಮಿಷ ಇರು ಮಗೂ… ನನ್ನ ವಿಧವಾ ಪೆನ್ಷನ್ ಬರುವುದಿದೆಯಲ್ಲ…. ಅದನ್ನು ಹೇಗೆ ಪಡೆದುಕೊಳ್ಳುವುದು?… ನಾನು ಇಲ್ಲಿ ಆಸ್ಪತ್ರೆಯಲ್ಲಿದ್ದೇನೆ…. ನನ್ನ ಸಹಿ ಇಲ್ಲದೆ ಆ ರೂ.50 ಸಿಗುವುದಿಲ್ಲ…. ನನ್ನ ಕಷ್ಟವನ್ನು ಅರಿತ ನಮ್ಮೂರಿನ ಪೋಸ್ಟ್ ಮಾಸ್ಟರ್ ನನ್ನಿಂದ ಅರ್ಜಿಯನ್ನು ಹಾಕಿಸಿ, ಈ ವಿಧವಾ ಪೆನ್ಷನ್ ಬರುವಂತೆ ಮಾಡಿದ್ದರು…. ಅವರ ಈ ಸಹಾಯವನ್ನು ನಾನೆಂದಿಗೂ ಮರೆಯುವುದಂತೆ ಇಲ್ಲ…. ಎಂದು ಸುಮತಿ ಅಂದಾಗ, ಮಕ್ಕಳಿಗೆ ತಾಯಿ ಹೇಳಿದ್ದು ಸರಿ ಅನಿಸಿತು. ತಾಯಿ ಈ ವಿಧವಾ ಪೆನ್ಷನ್ ಗಾಗಿ ಕಚೇರಿಗಳಿಗೆ ಓಡಾಡಿದ್ದು ನೆನಪಾಯಿತು…. ಅದಕ್ಕಾಗಿ ನಮ್ಮ ಹೋಬಳಿಯ ಪೋಸ್ಟ್ ಮಾಸ್ಟರ್ ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅವರ ಪರಿಶ್ರಮದಿಂದ ನಮ್ಮ ತಾಯಿಗೆ ತಿಂಗಳಿಗೆ 50 ರೂಪಾಯಿ ವಿಧವಾ ಪೆನ್ಷನ್ ಬರುತ್ತಿದೆ. ಕೆಲವೊಮ್ಮೆ ಪ್ರತಿ ತಿಂಗಳೂ ಬರದೇ ಎರಡು ಮೂರು ತಿಂಗಳಿನ ಹಣ ಒಟ್ಟಾಗಿ ಬರುತ್ತಿತ್ತು.
ಅದನ್ನು ತಾಯಿ ನಮಗಾಗಿ ತಿಂಡಿ ತಿನಿಸುಗಳನ್ನು ಮಾಡಿಕೊಡಲು ಅಥವಾ ಬಟ್ಟೆ-ಬರೆ ಕೊಡಿಸಲು ಖರ್ಚು ಮಾಡುತ್ತಿದ್ದಳು. ಈವರೆಗೂ ನಾವು ಗಮನಿಸಿದಂತೆ ನಮ್ಮ ತಾಯಿ ಅದರಿಂದ ಒಂದು ನಯಾ ಪೈಸೆಯನ್ನು ಕೂಡ ತನಗಾಗಿ ಖರ್ಚು ಮಾಡಿಕೊಂಡಿರಲಿಲ್ಲ. ಈ ಹಣವು ಕೂಡ ತಾಯಿಗೆ ಕೆಲವೊಮ್ಮೆ ಆಪದ್ಬಾಂಧವನಂತೆ ಸಹಾಯ ಮಾಡಿದ್ದೂ ಇದೆ. ಅದೂ ಕೂಡ ನಮಗಾಗಿ, ಎನ್ನುವುದನ್ನು ನೆನೆದಾಗ ಮಕ್ಕಳಿಬ್ಬರ ಕಣ್ಣುಗಳು ಹನಿ ಗೂಡಿದವು. ತಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಈಗಲೂ ನಮ್ಮ ತಾಯಿಗೆ ನಮ್ಮದೇ ಚಿಂತೆ ಅಲ್ಲವೇ?…..”ನೋಡೋಣ ಅಮ್ಮಾ…. ನಾನು ದೊಡ್ಡಕ್ಕನ ಮನೆಯಿಂದ ನಮ್ಮ ಮನೆಗೆ ಹಿಂತಿರುಗುವಾಗ ಪೋಸ್ಟ್ ಮಾಸ್ಟರ್ ಮನೆಗೆ ಹೋಗಿ ಈ ಬಗ್ಗೆ ತಿಳಿದುಕೊಳ್ಳುತ್ತೇನೆ”…. ಎಂದು ಮೂರನೇ ಮಗಳು ಹೇಳಿದಳು. ಸರಿ ಎನ್ನುವಂತೆ ತಲೆ ಆಡಿಸಿದಳು ಸುಮತಿ. ಅಕ್ಕತಂಗಿಯರಿಬ್ಬರೂ ಆಸ್ಪತ್ರೆಯಿಂದ ಹೊರ ನಡೆದರು.
ತಂಗಿಯ ಜೊತೆಗೆ ಬಸ್ ನಿಲ್ದಾಣದವರೆಗೂ ಬಂದು, ಅವಳನ್ನು ದೊಡ್ಡಕ್ಕನ ಮನೆಯ ಕಡೆಗೆ ಹೋಗುವ ಬಸ್ ಹತ್ತಿಸಿ ತಾನು ಆಶ್ರಮದ ಕಡೆಗೆ ನಡೆದಳು. ದೊಡ್ಡಕ್ಕನ ಮನೆಗೆ ಹೋದ ತಂಗಿಯು ಅಮ್ಮನ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದಳು. ಅಮ್ಮನ ಅನಾರೋಗ್ಯದ ಬಗ್ಗೆ ತಿಳಿದು ಅವಳಿಗೂ ಬಹಳ ಸಂಕಟವಾಯಿತು….. “ಬಾವ ಕೆಲಸಕ್ಕೆ ಹೋಗಿದ್ದಾರೆ…. ಸಂಜೆ ಅವರು ಬಂದ ನಂತರ ನಾನು ಮತ್ತು ಬಾವ ಆಸ್ಪತ್ರೆಗೆ ಹೋಗುತ್ತೇವೆ”…. ಎಂದಳು ದೊಡ್ಡಕ್ಕ.
ದೊಡ್ಡಕ್ಕನ ಮಾತಿಗೆ ಹೂಂಗುಟ್ಟಿದಳು. ತನ್ನ ಎರಡನೇ ಅಕ್ಕ ಉಳಿದ ವಿಷಯಗಳನ್ನು ತಾನೇ ದೊಡ್ಡಕ್ಕನಿಗೆ ತಿಳಿಸುತ್ತೇನೆ ಎಂದು ಹೇಳಿದ್ದರಿಂದ ಅವಳು ಹೆಚ್ಚಾಗಿ ಇನ್ನೇನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಅಕ್ಕನ ಮನೆಯಲ್ಲಿದ್ದು ಮಕ್ಕಳ ಜೊತೆ ಕಾಲ ಕಳೆದು ನಂತರ ಸಕಲೇಶಪುರದ ಬಸ್ ನಿಲ್ದಾಣಕ್ಕೆ ಬಂದು ತನ್ನ ಊರ ಕಡೆಗೆ ಹೋಗುವ ಬಸ್ ಹತ್ತಿ ಒಬ್ಬಳೇ ಊರ ಕಡೆಗೆ ಹೊರಟಳು. ಒಬ್ಬಳೇ ಬಸ್ಸ್ ನಲ್ಲಿ ಕುಳಿತು ಕಿಟಕಿಯ ಆಚೆಗೆ ನೋಡುತ್ತಾ ನಿಟ್ಟಿಸಿರು ಬಿಟ್ಟಳು. ನಮ್ಮ ತಾಯಿ ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾಳೆಯೇ? ಎನ್ನುವ ವಿಷಯ ಮನಸ್ಸಿಗೆ ಬಂದಾಗ ಅವಳಿಗ ಅರಿವಿಲ್ಲದಂತೆಯೇ ಕಣ್ಣುಗಳಿಂದ ನೀರು ಜಾರಿತು. ಯಾರಿಗೂ ಕಾಣದೆಂದು ಕಿಟಕಿಯ ಆಚೆ ನೋಡುತ್ತಾ ಕುಳಿತಳು. ಮನದ ತುಂಬಾ ನೋವು ಮಡುಗಟ್ಟಿತ್ತು. ಬಸ್ಸು ಯಾವಾಗ ಊರಿಗೆ ತಲುಪಿತು ಎಂಬುದು ತಿಳಿಯಲಿಲ್ಲ. ಬಸ್ಸಿನಿಂದ ಇಳಿದು ಮನೆ ತಲುಪಿದಳು. ಇಂದೇಕೋ ಮನೆ ಎಂದಿಗಿಂತ ಬಿಕೋ ಎನ್ನುವಂತೆ ಇತ್ತು. ತೀವ್ರ ಮೌನ ಆವರಿಸಿದಂತೆ ಅನಿಸಿತು. ಅಮ್ಮ ಬೇಗ ಆರೋಗ್ಯಪೂರ್ಣಳಾಗಿ ಮನೆಗೆ ಹಿಂದಿರುಗುತ್ತಾಳೆ ಎನ್ನುವ ಆಸೆಯನ್ನು ಹೊತ್ತು ಒಬ್ಬಳೇ ಹೇಗೋ ಕಾಲ ಕಳೆಯುತ್ತಿದ್ದಳು. ಆದರೆ ಈಗ ಜೊತೆಗೆ ನೋವನ್ನು ಮರೆಯಲು ಅಕ್ಕನ ಹೆಗಲೂ ಇಲ್ಲ. ಅಮ್ಮನೂ ಇಲ್ಲ. ಹೊರಡುವಾಗ ದೊಡ್ಡಕ್ಕ….” ಇವತ್ತು ಇಲ್ಲೇ ಇರೇ… ಒಬ್ಬಳೇ ಮನೆಗೆ ಹೋಗಬೇಡ…. ಎಂದರೂ ಕೇಳಲಿಲ್ಲ ನಾನು…. ಏನು ಮಾಡುವುದು ಇಲ್ಲಿ ನಾನು ಶಾಲೆಗೆ ಹೋಗದಿದ್ದರೆ ಅಮ್ಮನ ಕೆಲಸ ಕೈ ಬಿಟ್ಟು ಹೋಗುತ್ತದೆ…..ನನಗೂ ಈಗ ಜೊತೆಗೆ ಅಕ್ಕಂದಿರಿಬ್ಬರಲ್ಲಿ ಯಾರಾದರೂ ಬೇಕಿತ್ತು…. ಈ ನೋವನ್ನು ನಾನೊಬ್ಬಳೇ ಸಹಿಸಲಾರೆ… ಏನು ಮಾಡಲಿ?…” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಹಾಸಿಗೆ ಮೇಲೆ ದೊಪ್ಪನೆ ಉರುಳಿದಳು.
ಇತ್ತ ಆಶ್ರಮಕ್ಕೆ ಹೋದವಳಿಗೆ ತಂಗಿಯನ್ನು ಒಬ್ಬಳನ್ನೇ ಮನೆಗೆ ಕಳುಹಿಸಿದ್ದರ ಬಗ್ಗೆ ಬಹಳ ಬೇಸರವಿತ್ತು. ಆದರೆ ಏನು ಮಾಡುವುದು? ಅನ್ಯಮಾರ್ಗವಿರಲಿಲ್ಲ. ಆಶ್ರಮಕ್ಕೆ ಬಂದ ಕೂಡಲೇ ಅವಳ ಗೆಳತಿ ಅವಳ ತಾಯಿಯ ಬಗ್ಗೆ ವಿಚಾರಿಸಿಕೊಂಡಳು. ಈಗ ಈ ಗೆಳತಿಯ ಜೊತೆಯೇ ಈ ಹುಡುಗಿಗೆ ಆಧಾರ. ಅವಳ ಹೆಗಲ ಮೇಲೆ ತಲೆ ಇಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿದಳು. ಅವಳು ಇವಳ ತಲೆಯನ್ನು ನೇವರಿಸುತ್ತಾ ಸಮಾಧಾನಪಡಿಸಿದಳು. ಸ್ವಲ್ಪ ಹೊತ್ತಿನ ನಂತರ ಸುಮತಿಯ ಮಗಳು ಆಶ್ರಮದ ಮಕ್ಕಳ ಓದಿನ ಕಡೆಗೆ ಗಮನಹರಿಸಿದಳು. ಅವಳು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಗೆಳತಿ ಅಡುಗೆ ಮಾಡುತ್ತಿದ್ದಳು. ಅಷ್ಟೊತ್ತಿಗೆ ಸಂಜೆಯಾಗಿತ್ತು. ಮಾಡಿದ ಅಡುಗೆಯನ್ನು ಗೆಳತಿ ಈ ಹುಡುಗಿಗೆ ಬಡಿಸಿ, ಒಂದು ಪುಟ್ಟ ಡಬ್ಬಿಯಲ್ಲಿ ತಾನು ಮಾಡಿದ ಈರುಳ್ಳಿ ಸೋಗೆಯ ಪಲ್ಯವನ್ನು ತುಂಬಿಕೊಟ್ಟು….. “ಇಲ್ಲಿಯ ಉಳಿದ ಕೆಲಸವನ್ನು ಮಾಡಿ, ಮಕ್ಕಳ ಕಲಿಕೆಗೆ ನಾನು ಸಹಾಯ ಮಾಡುತ್ತೇನೆ…. ನೀನು ಆಸ್ಪತ್ರೆಗೆ ತೆರಳಿ ನಿನ್ನ ತಾಯಿಯ ಯೋಗ ಕ್ಷೇಮವನ್ನು ನೋಡಿಕೋ…. ಎಂದಳು. ತನಗೆ ಈ ಸಮಯದಲ್ಲಿ ಆಸರೆಯಾಗಿ ಬಂದ ತನ್ನದೇ ಪ್ರಾಯದ ಗೆಳತಿಯನ್ನು ಬಿಗಿಯಾಗಿ ಅಪ್ಪಿಕೊಂಡು…. ಯಾವ ಜನ್ಮದಲ್ಲಿ ನೀನು ನನಗೆ ಅಕ್ಕ ಅಥವಾ ತಂಗಿ ಆಗಿದ್ಯೋ ತಿಳಿಯದು… ನಿನ್ನ ಈ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಗೆಳತಿ…. ಎಂದು ಹೇಳುತ್ತಾ ತನ್ನ ಕೃತಜ್ಞತೆಯನ್ನು ತಿಳಿಸಿದಳು…. “ಹೇಯ್ ಇದೆಲ್ಲಾ ಏನೂ ದೊಡ್ಡ ಕೆಲಸವಲ್ಲ…. ನನಗೂ ತಾಯಿ ಇದ್ದಾಳೆ… ನಿನ್ನ ನೋವು ನನಗೂ ಅರ್ಥವಾಗುತ್ತೆ…. ನಡಿ ಮೊದಲು ಆಸ್ಪತ್ರೆಗೆ ಹೋಗು…. ಎಂದು ಹೇಳುತ್ತಾ ಬಾಗಿಲವರೆಗೂ ಜೊತೆಗೆ ಬಂದು ಬಿಳ್ಕೊಟ್ಟಳು.




