ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಬೆಂಗಳೂರಿನಿಂದ ಹಾಸನದತ್ತ ಸುಮತಿಯಪಯಣ ಬಾವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಅವಳ ನೋಟದಲ್ಲಿ ಯಾವುದೋ ಅವ್ಯಕ್ತವಾದ ದೃಢ ನಿರ್ಧಾರದ ಸೂಚನೆ ಬಾವನಿಗೆ ದೊರೆಯಿತು. ಆದರೂ ಅದೇನೆಂದು ತಿಳಿದುಕೊಳ್ಳಲು…. “ಏನು ನಿರ್ಧರಿಸಿದೆಯಮ್ಮಾ… ನೀನು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ಎಲ್ಲರ ಹಿತ ದೃಷ್ಟಿಯಿಂದಲೂ ಉತ್ತಮವಾಗಿರುತ್ತದೆ ಎಂಬುದು ನನಗೆ ತಿಳಿದಿದೆ…. ವಯಸ್ಸು ಚಿಕ್ಕದಾದರೂ ನಿನ್ನ ಆಲೋಚನಾ ಶೈಲಿ ಬಹಳ ಪ್ರಬುದ್ಧವಾದದ್ದು…. ಎಂದಾಗ, ನಾದಿನಿ…”ಬಾವಾ… ನನ್ನ ನಿರ್ಧಾರ ಸರಿಯೋ ತಪ್ಪೋ ನನಗೆ ತಿಳಿದಿಲ್ಲ…. ಆದರೆ ನನಗೆ ಬೇರೆ ದಾರಿ ತೋಚುತ್ತಿಲ್ಲ….. ವಾರ್ಡಿನಲ್ಲಿ ದಾಖಲಾದ ಅಮ್ಮ ನಮ್ಮನ್ನು ಸಂಪೂರ್ಣವಾಗಿ ನಂಬಿದ್ದಾಳೆ…. ಅವಳ ಮುಖ ಈಗ ಸಂಪೂರ್ಣ ಗೆಲುವಿನಿಂದ ಕೂಡಿದೆ…. ಇಲ್ಲಿಂದ ಚಿಕಿತ್ಸೆ ಪಡೆದು ಹಿಂತಿರುವಾಗ ತಾನು ತನ್ನ ಹಿಂದಿನ ಆರೋಗ್ಯವನ್ನು ಪಡೆದು ಮನೆಗೆ ಹಿಂತಿರುತ್ತೇನೆ ಎಂಬ ಭರವಸೆಯನ್ನು ನನ್ನ ತಾಯಿಯ ಕಣ್ಣುಗಳಲ್ಲಿ ನಾನು ನೋಡಿದೆ… ಎಂದು ಅರ್ಧಕ್ಕೆ ನಿಲ್ಲಿಸಿದಳು. ವಿಷಯವನ್ನು ಪೂರ್ತಿ ಹೇಳದೇ ಏಕೆ ಅರ್ಧಕ್ಕೆ ನಿಲ್ಲಿಸಿದಳು? ಎಂದು ಪ್ರಶ್ನಾರ್ಥಕವಾಗಿ ಬಾವ ನಾದಿನಿಯನ್ನು ನೋಡುತ್ತಾ…. “ಹೌದು ನೀನು ಹೇಳಿದ್ದು ನಿಜ…. ನಾನು ಅದನ್ನು ಗಮನಿಸಿದೆ…. ಇಲ್ಲಿನ ಚಿಕಿತ್ಸೆ ಬಹಳ ದುಬಾರಿ ಎಂಬುದು ತಿಳಿಯಿತು…. ಆದರೆ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಲು ನಮ್ಮಿಂದ ಸಾಧ್ಯವೇ? ಎಂಬ ವಿಚಾರ ನನ್ನನ್ನು ಚಿಂತೆಗೀಡು ಮಾಡಿದೆ…. ನಮ್ಮೆಲ್ಲಾ ದುಡಿಮೆಯ ಹಣವನ್ನು ಸೇರಿಸಿದರೂ ಕೂಡ ಒಂದು ಬಾರಿಯ ಡಯಾಲಿಸಿಸ್ ಸಾಧ್ಯವಾಗುತ್ತದೆಯೇ? ಎಂಬುದು ಕೂಡಾ ನನಗೆ ಸಂಶಯ”… ಎಂದ ಚಿಂತಾಕ್ರಾಂತನಾಗಿ.  ಬಾವನ ಪರಿಸ್ಥಿತಿಯು ನಾದಿನಿಗೆ ತಿಳಿದಿತ್ತು. ಎಷ್ಟೋ ಬಾರಿ ತಮಗೆ ಹಣಕಾಸಿನ ತೊಂದರೆ ಬಂದಾಗ ತನ್ನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ನಮಗೆ ಕೊಟ್ಟು ಸಹಾಯ ಮಾಡಿದ್ದಾರೆ ಬಾವ. ಒಮ್ಮೆ ಇನ್ನೇನು ಬದುಕಲು ಬೇರೆ ದಾರಿಯೇ ಇಲ್ಲವೇನೋ? ಎನ್ನುವ ಪರಿಸ್ಥಿತಿಯಲ್ಲಿ ಬಾವನೇ ನಮಗೆ ಸಹಾಯ ಮಾಡಿ ನಮ್ಮೆಲ್ಲರ ಜೀವ ಉಳಿಸಿದ್ದು. ತಮ್ಮ ಕೈಲಿದ್ದರೆ ಖಂಡಿತ ಏನಾದರೂ ಸಹಾಯ ಮಾಡೇ ಮಾಡುತ್ತಾರೆ. ಈಗ ಮಳೆಗಾಲ ಬೇರೆ ಸಮೀಪಿಸುತ್ತಿರುವುದರಿಂದ ಅವರಿಗೆ ಕೆಲಸ ಇರುವುದಿಲ್ಲ  ಎನ್ನುವುದು ನಾದಿನಿ ಬಲ್ಲಳು. ನಾದಿನಿ ಏನೂ ಮಾತನಾಡದೆ ಸುಮ್ಮನೆ ಎಲ್ಲೋ ನೋಡುತ್ತಾ ಏನೋ ಆಲೋಚನೆ ಮಾಡುತ್ತಾ ನಿಂತಿರುವುದನ್ನು ಕಂಡು… “ಈಗ ಏನು ಮಾಡುವುದು?…ನೀನು ಏನು ನಿರ್ಧರಿಸಿರುವೆ? ಎಂದು ಬಾವ ಕೇಳಿದಾಗ…. “ಹೇಗೆ ಹೇಳಲಿ ಎಂದು ನನಗೆ ತಿಳಿಯುತ್ತಿಲ್ಲ ಬಾವಾ”…. ಎಂದು ತನ್ನ ಮನದಲ್ಲಿದ್ದ ಆಲೋಚನೆಯನ್ನು ಭಾವನೆಗೆ ತಿಳಿಸಿದಳು. ನಾದಿನಿಯ ಮಾತನ್ನು ಕೇಳಿದ ಬಾವ ಒಮ್ಮೆ ದೀರ್ಘವಾದ ನಿಟ್ಟಿಸಿರನ್ನು ಬಿಟ್ಟು… ₹ಸರಿ ನಡಿ… ಅತ್ತೆಗೆ ತಿಳಿಸೋಣ ಬಾ”…. ಎಂದು ಹೇಳಿ ಮುಂದೆ ಹೆಜ್ಜೆ ಹಾಕಿದ ಬಾವನನ್ನು ನಾದಿನಿ ಹಿಂಬಾಲಿಸಿದಳು. ಇಡುವ ಪ್ರತಿ ಹೆಜ್ಜೆಯೂ ಭಾರವಾದಂತ ಅನಿಸಿತು. ಎಷ್ಟೇ ವೇಗವಾಗಿ ನಡೆದರೂ ಹೆಜ್ಜೆ ಮುಂದಿಡಲು ಸಾಧ್ಯವಾಗುತ್ತಿಲ್ಲ ಎಂದು ಅನಿಸಿತವಳಿಗೆ. ತುರ್ತು ಚಿಕಿತ್ಸಾ ಘಟಕ ವಿಭಾಗದ ವಾರ್ಡಿನ ಬಾಗಿಲ ಬಳಿ ಬಂದಾಗ ಅವಳ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು.  ಹೆಜ್ಜೆ ಮುಂದಡಲಾಗದೆ ಅವಳು ಬಾಗಿಲ ಬಳಿಯೇ ನಿಂತು ಬಿಟ್ಟಳು. ನಾದಿನಿ ತನ್ನ ಹಿಂದೆ ಬರುತ್ತಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ಹಿಂತಿರುಗಿ ನೋಡಿದ ಆತ, ನಾದಿನಿಯ ಕಣ್ಣುಗಳು ತುಂಬಿದ್ದನ್ನು ಕಂಡು… “ಅಳಬೇಡ… ಈಗ ನೀನು ಅಧೀರಳಾಗಬಾರದು…. ನಿನ್ನ ದುಗುಡ, ನೋವು ಏನೆಂದು ನನಗೆ ತಿಳಿದಿದೆ…. ದಯವಿಟ್ಟು ಕಣ್ಣುಗಳನ್ನು ಒರೆಸಿಕೊ….. ನಿನ್ನ ತುಂಬಿದ ಕಣ್ಣುಗಳನ್ನು ಗಮನಿಸಿದರೆ ಅತ್ತೆ ಎಲ್ಲವನ್ನೂ ಊಹಿಸಿಬಿಡುತ್ತಾರೆ…. ನೀನು ಈಗ ಧೈರ್ಯವನ್ನು ತಂದುಕೊಳ್ಳಲೇಬೇಕು…. ನಿನ್ನ ಮನಸ್ಸಿನಲ್ಲಿರುವ ಯೋಜನೆಯ ಪ್ರಕಾರ ಅತ್ತೆಗೆ ಮನನವಾಗುವಂತೆ ತಿಳಿಸಿಬಿಡು.”… ಎಂದು ಬಾವ ಹೇಳಿದ್ದು ಕೇಳಿ, ಹೌದು ಅವರು ನಿಜವನ್ನೇ ಹೇಳುತ್ತಿದ್ದಾರೆ ಎನ್ನುತ್ತಾ ತನ್ನ ಕಣ್ಣು ಒರೆಸಿಕೊಂಡಳು. ಬಾರದ ನಗುವನ್ನು ಮುಖದಲ್ಲಿ ತಂದುಕೊಂಡು ಬಾವನ ಜೊತೆಗೆ ವಾರ್ಡಿನ ಒಳಹೊಕ್ಕಳು. ಅಳಿಯ ವಾರ್ಡಿನ ಒಳಗೆ ಬಂದಿದ್ದನ್ನು ಗಮನಿಸಿದ ಸುಮತಿ…. “ಡಾಕ್ಟರ್ ಏನ್ ಹೇಳಿದರು?… ಎದ್ದು ಕೇಳಿದಳು. ಅತ್ತೆಯ ಪ್ರಶ್ನೆಗೆ ಅಳಿಯ ನಾದಿನಿಯ ಕಡೆ ತಿರುಗಿ, ಹೇಳು ಎನ್ನುವಂತೆ ಸನ್ನೆ ಮಾಡಿದ. ಗಂಟಲುಬ್ಬಿ ಬಂದರೂ, ಕಣ್ಣುಗಳು ಮತ್ತೆ ಹನಿಗೂಡ ತೊಡಗಿದರೂ ಅದನ್ನು ತಾಯಿಗೆ ತೋರಕೊಡದೆ….. “ಅಮ್ಮಾ…. ಡಾಕ್ಟರ್ ಹೇಳಿದರು…. ಇಲ್ಲಿ ದೊರಕುವ ಚಿಕಿತ್ಸೆಯು ನಮ್ಮ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿಯೇ ಲಭ್ಯವಿದೆ. ಅಲ್ಲಿಗೆ ಹೋಗಿ ಪಡೆದುಕೊಳ್ಳಬಹುದು…. ಎಂದಿದ್ದಾರಮ್ಮಾ”…. ಎನ್ನುತ್ತಾ ಅಮ್ಮನ ಬಳಿಗೆ ಬಂದಳು. ತನ್ನ ಅಳುವನ್ನು ತಡೆ ಹಿಡಿದುಕೊಳ್ಳಲು ಅವಳು ಹರಸಾಹಸ ಪಡಬೇಕಾಯಿತು. ಸುಮತಿಯನ್ನು ಬಿಗಿಯಾಗಿ ಅಪ್ಪಿಕೊಂಡಳು.  “ಆದಷ್ಟು ಬೇಗನೇ ನಾವು ಇಲ್ಲಿಂದ ಹೋಗೋಣ… ಎಂದು ಹೇಳುತ್ತಾ ವಾರ್ಡಿನಲ್ಲಿದ್ದ ನರ್ಸ್ ಬಳಿಗೆ ತೆರಳಿದಳು…. “ಸಿಸ್ಟರ್…. ತಾಯಿಯನ್ನು ಇಲ್ಲಿ ಈಗ ಅಡ್ಮಿಟ್ ಮಾಡುವುದಿಲ್ಲ…. ಇನ್ನೊಂದೆರಡು ದಿನದ ಬಳಿಕ ಬರುತ್ತೇವೆ_…. ಎಂದು ಹೇಳಿದಳು.‌… “ಓ ಹೌದಾ… ನೀವು ಔಷಧಿಯನ್ನು ತಂದಿದ್ದರೆ ಹಾಗೂ ಇಲ್ಲಿ ಅಡ್ಮಿಟ್ ಮಾಡಿದ್ದರೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದಿತ್ತು…. ಸರಿ ನಿಮ್ಮ ಇಚ್ಛೆ”…. ಎಂದು ಹೇಳಿ ಸುಮತಿಯನ್ನು ವಾರ್ಡಿನಿಂದ ಕರೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಿದಳು. ಮಾವನಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ನಾದಿನಿ ಬಾವನನ್ನು ವಿನಂತಿಸಿಕೊಂಡಳು. ಸರಿ ಎಂದು ಹೇಳಿ ಬಾವ ರಿಸೆಪ್ಶನ್ ಗೆ ಹೋಗಿ ಅಲ್ಲಿಂದ ಮಾವನಿಗೆ ಕರೆ ಮಾಡಿ, ಅತ್ತೆಯನ್ನು ಇಲ್ಲಿಂದ ಹಾಸನದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲು ಮಾಡುತ್ತೇವೆ. ಇಲ್ಲಿ ಹೆಚ್ಚು ಸಮಯ ಕಳೆಯಲು ಅತ್ತೆಯಿಂದ ಸಾಧ್ಯವಿಲ್ಲ ಹಾಗಾಗಿ ಇಲ್ಲಿಂದ ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಹಾಸನಕ್ಕೆ ಹೋಗುತ್ತೇವೆ ಎಂಬುದಾಗಿ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ತಮ್ಮನಿಗೆ ಅಳಿಯನ ಮಾತು ಕೇಳಿ ಮನದಲ್ಲಿ ಏನೋ ಕಸಿವಿಸಿ ಉಂಟಾಯಿತು. ಸ್ವಲ್ಪ ಆತಂಕವಾಯಿತು. ಆಸ್ಪತ್ರೆಯಲ್ಲಿ ನಡೆದ ವಿಷಯ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ಪರಿಸ್ಥಿತಿಯ ಅರ್ಥ ಅವನಿಗಾಯಿತು. ಅವನ ಮನಸ್ಸು ಭಾರವಾಯಿತು…”ಸರಿ ಅಕ್ಕನನ್ನು ನೀವು ಕರೆದುಕೊಂಡು ಹೋಗಿ….. ಹಾಸನದಲ್ಲಿ ಅಕ್ಕನಿಗೆ ಚಿಕಿತ್ಸೆ ಕೊಡಿಸಿ…. ನಾನು ಕುಟುಂಬ ಸಮೇತ ಅಲ್ಲಿಗೆ ಬರುತ್ತೇನೆ”….ಎಂದು ಸುಮತಿಯ ತಮ್ಮ ಹೇಳಿದ. ಸುಮತಿಯನ್ನು ಅಲ್ಲಿಂದ ಕರೆದುಕೊಂಡು ಅಳಿಯ ಮತ್ತು ಮಗಳು ಹಾಸನದ ಕಡೆಗೆ ಪ್ರಯಾಣ ಬೆಳೆಸಿದರು. 

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ -130 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಮಗಳನ್ನು ಕಂಗೆಡಿಸಿದ ಅಮ್ಮನ ಡಯಾಲಿಸಿಸ್‌ ಖರ್ಚು ಮಾರನೇ ದಿನ ಸುಮತಿಯ ತಮ್ಮ ಕೆಲಸಕ್ಕೆ ಹೋಗುವ ಮುಂಚೆಯೇ ತನ್ನ ಅಕ್ಕ,ಅಳಿಯ ಮತ್ತು ಮಗಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ಬಳಿ ಬಿಟ್ಟನು. ಹೊರಡುವ ಮೊದಲು ಅಳಿಯನನ್ನು ಹತ್ತಿರ ಕರೆದು…. “ನೀನು ಅಕ್ಕನನ್ನು ವೈದ್ಯರಿಗೆ ತೋರಿಸಿ, ಅವರು ಏನು ಹೇಳುತ್ತಾರೆ ಎಂಬುದನ್ನು ನನಗೆ ತಿಳಿಸು…. ಕೆಲಸ ಮುಗಿಸಿಕೊಂಡು ಸಂಜೆ ನಾನು ಇಲ್ಲಿಗೆ ಬರುತ್ತೇನೆ”…. ಎಂದು ಹೇಳಿ, ಅಕ್ಕ ಮತ್ತು ಮಗಳಿಗೆ ಧೈರ್ಯ ಹೇಳಿ ಕೆಲಸಕ್ಕೆ ಹೊರಟನು.  ಮಾವ ಹೊರಟು ಹೋದ ನಂತರ ಸುಮತಿಯ ಮಗಳು ತಾಯಿಯನ್ನು ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳ್ಳಿರಿಸಿ… “ಅಮ್ಮಾ… ನೀನು ಇಲ್ಲಿ ಕುಳಿತಿರು…. ನಾನು ಮತ್ತು ಬಾವ ಆಸ್ಪತ್ರೆಯ ರಿಸೆಪ್ಶನ್ ಗೆ ಹೋಗಿ ಇಲ್ಲಿಯ ಚಿಕಿತ್ಸೆಯ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ಬರುವೆವು”…. ಎಂದು ಹೇಳಿ ಬಾವನ ಜೊತೆ ನಾದಿನಿ ರಿಸೆಪ್ಷನಿಸ್ಟ್ ಬಳಿಗೆ ಹೋದಳು. ಅಲ್ಲಿ ರಿಸೆಪ್ಶನ್ ಬಳಿಗೆ ಹೋಗಿ ಸಕಲೇಶಪುರದ ವೈದ್ಯರು ಕೊಟ್ಟ ಶಿಫಾರಸ್ಸು ಪತ್ರವನ್ನು ಹಾಗೂ ಸುಮತಿಯ ಇತರೆ ಚಿಕಿತ್ಸೆಗಳ ವಿವರಗಳು ಇರುವ ಕಡತವನ್ನು ತೋರಿಸಿ ವಿಚಾರಿಸಿದಳು. ರಿಸೆಪ್ಶನ್ ನಲ್ಲಿ ಕುಳಿತಿದ್ದ ಸ್ವಾಗತಗಾರ್ತಿ…. “ಮೊದಲು ನಿಮ್ಮ ತಾಯಿಯನ್ನು ಒಳಗಡೆ ಇರುವ ತುರ್ತು ಚಿಕಿತ್ಸಾ ವಿಭಾಗದ ವಾರ್ಡಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಿಬ್ಬಂದಿ ವರ್ಗಕ್ಕೆ ನಿಮ್ಮ ತಾಯಿಯನ್ನು ಇಲ್ಲಿ ಅಡ್ಮಿಟ್ ಮಾಡುವ ಬಗ್ಗೆ ತಿಳಿಸಿ ಮತ್ತು ಈ ಚೀಟಿಯನ್ನು ಅವರಿಗೆ ತೋರಿಸಿ…. ನಿಮ್ಮ ತಾಯಿಯನ್ನು ಅಲ್ಲಿ ಅಡ್ಮಿಟ್ ಮಾಡಿದ ಬಳಿಕ ಪುನಃ ಇಲ್ಲಿಗೆ ಬನ್ನಿ…. ನಂತರ ಏನು ಮಾಡಬೇಕು ಎನ್ನುವುದನ್ನು ತಿಳಿಸುತ್ತೇನೆ”…. ಎಂದರು.  ಸ್ವಾಗತಗಾರ್ತಿಗೆ ಧನ್ಯವಾದವನ್ನು ತಿಳಿಸಿ ನೂರು ರೂಪಾಯಿಯನ್ನು ಕೊಟ್ಟು ನೋಂದಣಿ ಮಾಡಿಸಿ, ತಾಯಿಯ ಬಳಿಗೆ ಬಂದಳು…. “ಅಮ್ಮಾ…. ನಿನ್ನನ್ನು ಇಲ್ಲಿನ ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲು ಮಾಡಲು ತಿಳಿಸಿದ್ದಾರೆ…. ಬಾ ಹೋಗೋಣ…. ನಿನ್ನನ್ನು ಅಲ್ಲಿ ದಾಖಲಿಸಿದ ನಂತರ ನಾನು ಮತ್ತು ಬಾವ ಹೋಗಿ ಇನ್ನಿತರೆ ಕಾರ್ಯವಿಧಾನಗಳ ಬಗ್ಗೆ ವಿಚಾರಿಸಿಕೊಂಡು ಮತ್ತೆ ಬರುತ್ತೇವೆ”…. ಎಂದಳು. ಸುಮತಿಗೆ ಆಸ್ಪತ್ರೆ ಮತ್ತು ಅಲ್ಲಿನ ಸಿಬ್ಬಂದಿ ವರ್ಗ ಹಾಗೂ ಅವರ ಶಿಸ್ತಿನ ನಡವಳಿಕೆಯನ್ನು ಕಂಡು ಬಹಳ ಮೆಚ್ಚುಗೆಯಾಯಿತು. ವಾರ್ಡಿನ ಹಾಸಿಗೆಯ ಮೇಲೆ ಮಲಗಿದಾಗ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಳು. ಇನ್ನು ಇಲ್ಲಿ ತನಗೆ ಉತ್ತಮ ಚಿಕಿತ್ಸೆ ಖಂಡಿತ ದೊರಕುತ್ತದೆ ಎಂಬುದು ಅವಳಿಗೆ ಖಾತ್ರಿಯಾಯಿತು. ನರ್ಸ್ ಒಬ್ಬರು ಬಳಿ ಬಂದು ಒಂದು ಚೀಟಿಯಲ್ಲಿ ಕೆಲವು ಔಷಧಿಗಳನ್ನು ಬರೆದು ನೀವು ವಾರ್ಡಿಗೆ ಬರುವಾಗ ಇದನ್ನು ಖರೀದಿಸಿಕೊಂಡು ಬನ್ನಿ ಎಂದು ಹೇಳಿದಳು…. “ಅಮ್ಮಾ …ನೀನು ಇಲ್ಲೇ ಮಲಗಿರು… ನಾವು ಈಗಲೇ ಬರುತ್ತೇವೆ”…. ಎಂದು ಸುಮತಿಗೆ ಹೇಳಿ ನರ್ಸ್ ಕೊಟ್ಟ ಚೀಟಿಯನ್ನು ಪಡೆದು ಬಾವನೊಂದಿಗೆ ಪುನಃ ರಿಸೆಪ್ಶನ್ ಬಳಿಗೆ ನಡೆದಳು. ಅಲ್ಲಿ ಹೋದಾಗ ಚಿಕಿತ್ಸೆಯ ಪೂರ್ಣ ಪ್ಯಾಕೇಜ್ ಬಗ್ಗೆ ಸಂಪೂರ್ಣ ವಿವರವನ್ನು ಬರೆದಿರುವ ಪ್ರತಿಯೊಂದು ಅವಳ ಕೈಗಿಟ್ಟರು. ನೀವು ಇದರಲ್ಲಿ ನಮೂದಿಸಿರುವ ಪ್ರಕಾರ ಈಗಲೇ ನಮ್ಮ ಕೌನ್ಸಿಲಿಂಗ್ ವಿಭಾಗಕ್ಕೆ ಹೋಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತಾಡಿ ಹಣವನ್ನು ಕಟ್ಟಿ ಬನ್ನಿ. ಅದರ ರಸೀದಿಯನ್ನು ತಂದು ಇಲ್ಲಿ ನಮಗೆ ತೋರಿಸಿ. ನಿಮ್ಮ ತಾಯಿಗೆ ಚಿಕಿತ್ಸೆ ಕೊಡಿಸುವ ಎಲ್ಲಾ ಏರ್ಪಾಡುಗಳನ್ನು ನಾವು ಮಾಡುತ್ತೇವೆ ಎಂದರು.  ಅವರು ಕೊಟ್ಟ ಪ್ರತಿಯನ್ನು ಪಡೆದು ಕೌನ್ಸಿಲಿಂಗ್ ವಿಭಾಗದೆಡೆಗೆ ಇಬ್ಬರೂ ಹೊರಟರು. ಅಲ್ಲಿ ಹೋದಾಗ ಸಿಬ್ಬಂದಿಯು ಇಬ್ಬರನ್ನೂ ಕುಳಿತುಕೊಳ್ಳಲು ಸೂಚಿಸಿ ಇಂತಿಂಥ ಚಿಕಿತ್ಸೆಗೆ ಇಂತಿಷ್ಟು ವೆಚ್ಚವಾಗುತ್ತದೆ ಎಂಬ ವಿವರವನ್ನು ನೀಡಿ, ಅಲ್ಲಿ ನಮೂದಿಸಿದ ಮೊತ್ತದ ಹಣವನ್ನು ಪಾವತಿಸುವಂತೆ ತಿಳಿಸಿದರು. ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕಾದರೆ ತಾವು ಭರಿಸಬೇಕಾದ ಹಣದ ಮೊತ್ತವನ್ನು ಕಂಡು ಇಬ್ಬರೂ ದಂಗಾದರು. ಏಕೆಂದರೆ ಅಲ್ಲಿ ನಮೂದಿಸಿದಂತೆ ವೈದ್ಯರ, ದಾದಿಯರ, ವಾರ್ಡಿನ ಮತ್ತು ಇತರೆ ಖರ್ಚುಗಳ ಮೊತ್ತವನ್ನು ಭರಿಸುವಷ್ಟು ಹಣ ಅವರ ಕೈಲಿರಲಿಲ್ಲ. ಗೆಳತಿ ಕೊಟ್ಟಿದ್ದ ಹಣ ಸಾಲುತ್ತಿರಲಿಲ್ಲ. ಬಾವನ ಬಳಿಯೂ ಹೆಚ್ಚು ಹಣವಿಲ್ಲ ಎಂಬುದನ್ನು ಆ ಹುಡುಗಿ ಅರಿತಿದ್ದಳು. ತನಗೆ ಹಾಗೂ ಹಾಗೂ ತಂಗಿಗೆ ಬರುತ್ತಿದ್ದ ಸಂಬಳ ಮನೆಯ ಖರ್ಚು ಮತ್ತು ಆಸ್ಪತ್ರೆಯ ಸಣ್ಣ ಪುಟ್ಟ ಖರ್ಚುಗಳಿಗೆ ಆಗುತ್ತಿತ್ತು. ಮಾವನ ಬಳಿ ಕೇಳೋಣವೆಂದರೆ, ಅವರಿಂದಲೂ ಇದು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿತ್ತು. ಏಕೆಂದರೆ ಮಾವನ ಹಣಕಾಸಿನ ಸ್ಥಿತಿಯನ್ನು ಸುಮತಿಯ ಮಗಳು ಬಲ್ಲವಳಾಗಿದ್ದಳು. ಅದೂ ಅಲ್ಲದೇ ಡಯಾಲಿಸಿಸ್ ಚಿಕಿತ್ಸೆಯನ್ನು ತಿಂಗಳಿಗೆ ನಾಲ್ಕು ಬಾರಿಯಾದರೂ ತಾಯಿಗೆ ಕೊಡಿಸಬೇಕು ಎಂಬ ಸತ್ಯದ ಅರಿವೂ ಆಯಿತು. ಪ್ರತೀ ಬಾರಿಯೂ ಡಯಾಲಿಸಿಸ್ ಮಾಡಿಸುವಾಗಲೂ ಹೆಚ್ಚು ಹಣದ ಅಗತ್ಯ ಇರುತ್ತದೆ. ನಮಗೆ ಆಶ್ರಯ ನೀಡಿದ ಎಷ್ಟೇಟಿನ ಸಾಹುಕಾರರಲ್ಲೂ ಈ ರೀತಿಯ ದುಬಾರಿ ಚಿಕಿತ್ಸೆಗಾಗಿ ಹಣ ಪಡೆಯುವುದು ಕೂಡ ಸರಿಯಲ್ಲ. ಯಾರೂ ದಿಕ್ಕಿಲ್ಲದ ನಮಗೆ ಆಶ್ರಯ ನೀಡಿದ್ದಲ್ಲದೇ ತಾಯಿಯ ಹಲವು ಚಿಕಿತ್ಸೆಗಳಿಗಾಗಿ ಅವರು ಈವರೆಗೂ ಯಥೇಚ್ಛವಾಗಿ ಹಣವನ್ನು ಖರ್ಚು ಮಾಡಿದ್ದಾರೆ.  ಕೂಲಂಕುಶವಾಗಿ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ ತಾಯಿ ಜೀವಂತವಿರುವವರೆಗೂ ಈ ಚಿಕಿತ್ಸೆಯನ್ನು ಆಗಾಗ ಕೊಡಿಸುತ್ತದೆ ಇರಬೇಕು. ಡಯಾಲಿಸಿಸ್ ಮಾಡಿಸುತ್ತಿದ್ದರೆ ತಾಯಿಯು ಇನ್ನೂ ಹೆಚ್ಚು ಕಾಲ ನಮ್ಮ ಜೊತೆ ಬದುಕುಳಿಯುತ್ತಾಳೆ. ಆದರೆ ಅದಕ್ಕಾಗಿ ಹಣವನ್ನು ಎಲ್ಲಿಂದ ಹೊಂದಿಸುವುದು? ಈ ಎಲ್ಲ ಚಿಂತೆಗಳು ಒಮ್ಮೆಲೇ ಆ ಹುಡುಗಿಯ ಆಲೋಚನೆಯಲ್ಲಿ ಮೂಡಿ ಅವಳನ್ನು ಗೊಂದಲಕ್ಕೀಡು ಮಾಡಿತು. ಆಸ್ಪತ್ರೆಯ ಕುರ್ಚಿಯಲ್ಲಿ ಕುಳಿತು ದೀರ್ಘವಾಗಿ ಆಲೋಚನೆಯಲ್ಲಿ ಮಗ್ನಳಾದಳು….”ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲಾದಾಗ ತನ್ನ ತಾಯಿಯ ಮುಖದಲ್ಲಿ ಮೂಡಿದ್ದ ಭರವಸೆ ಮತ್ತು ನೆಮ್ಮದಿಯ ಭಾವ ಈಗಲೂ ನಮ್ಮ ಮನವನ್ನು ತಲ್ಲಣಗೊಳಿಸುತ್ತಿದೆ…. ಏನು ಮಾಡಲಿ ದೇವರೇ!? ತಾಯಿಯ ಚಿಕಿತ್ಸೆಗಾಗಿ ಹಣವನ್ನು ಎಲ್ಲಿಂದ ಹೊಂದಿಸಲಿ?… ಚಿಕಿತ್ಸೆಯ ದುಬಾರಿ ಖರ್ಚಿಲ್ಲದೇ ಇಲ್ಲಿ ಬೆಂಗಳೂರಿನಲ್ಲಿ ದಿನವೂ ಓಡಾಡಲು, ಊಟದ ಖರ್ಚು ಮತ್ತು ಇನ್ನಿತರೆ ವೆಚ್ಚಕ್ಕೆ ಹಣದ ಅಗತ್ಯ ಇರುತ್ತದೆ….ನಾನು ಏನೇ ಪ್ರಯತ್ನ ಮಾಡಿದರೂ ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಿಲ್ಲ”…. ಎಂದು ಸ್ವಗತ ಹೇಳಿಕೊಂಡ ಹುಡುಗಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಳು. ಒಂದೊಂದೇ ಆಲೋಚನೆಗಳು ಮನದಲ್ಲಿ ಹಾದು ಹೋದಾಗ ಅವಳಿಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ. ಮಂಡಿ ಮೇಲೆ ತಲೆಯೂರಿ ತಮ್ಮೆಲ್ಲರ ಹತಾಶ ಸ್ಥಿತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಳು. ಅಳುವುದಲ್ಲದೆ ಅನ್ಯಮಾರ್ಗ ಅವಳಿಗೆ ಆ ನಿಮಿಷ ತೋಚಲಿಲ್ಲ. ನಾದಿನಿ ಅಳುತ್ತಿರುವುದನ್ನು ಕಂಡು ಬಾವನಿಗೆ ಕಸಿವಿಸಿಯಾಯಿತು. ಏನು ಹೇಳಿ ಆಕೆಯನ್ನು ಸಮಾಧಾನ ಪಡಿಸುವುದು ಎಂದು ಆತನಿಗೆ ತಿಳಿಯಲಿಲ್ಲ. ಅತ್ತು ಸಾಕಾಗಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದಂತೆ ಸೀರೆಯ ಸೆರಗಿನಿಂದ ಕಣ್ಣುಗಳು ಹಾಗೂ ಮುಖವನ್ನು ಒರೆಸಿ ಕುಳಿತಲ್ಲಿಂದ ಎದ್ದಳು.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ–129 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಬೆಂಗಳೂರು ತಲುಪಿದ ಸುಮತಿ ಸುಮತಿಯ ಎರಡನೇ ಮಗಳು ತನ್ನ ದೊಡ್ಡಮ್ಮನ ಮನೆಗೆ ಹೋಗಿ ಬೆಂಗಳೂರಿನಲ್ಲಿರುವ ಮಾವನ ವಿಳಾಸವನ್ನು ಪಡೆದುಕೊಂಡು ಬಂದಳು. ಹೆಚ್ಚು ತಡ ಮಾಡಿದರೆ ಸುಮತಿಯ ಆರೋಗ್ಯದಲ್ಲಿ ಮತ್ತೆ ಇನ್ನೇನು ಏರುಪೇರು ಆಗುವುದೋ ಎಂದು ಆದಷ್ಟು ಬೇಗ ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಹೋಗುವ ತಯಾರಿಯನ್ನು ಸುಮತಿಯ ಕುಟುಂಬ ಮಾಡತೊಡಗಿತು. ತನ್ನ ತಾಯಿಗೆ ಹೆಚ್ಚು ನಡೆದಾಡಲು ಕಷ್ಟವಾಗುತ್ತದೆ. ಹಾಗಾಗಿ ಊರಿಗೆ ಕರೆದುಕೊಂಡು ಹೋಗುವುದು ಕಷ್ಟ ಸಾಧ್ಯ ಎಂಬುದನ್ನು ಅರಿತ ಎರಡನೇ ಮಗಳು ಅನಾಥಾಶ್ರಮದ ಸೆಕ್ರೆಟರಿಯವರ ಅನುಮತಿಯನ್ನು ಪಡೆದು ತನ್ನ ಜೊತೆಯಲ್ಲಿ ತನ್ನ ಕೋಣೆಯಲ್ಲಿ ಇರಿಸಿಕೊಳ್ಳುವ ತೀರ್ಮಾನ ಮಾಡಿದಳು. ಮಾರನೇ ದಿನ ಎಸ್ಟೇಟಿನ ಸಾಹುಕಾರರು ತಮ್ಮ ಕಾರು ಹಾಗೂ ಚಾಲಕನನ್ನು ಅನಾಥಾಶ್ರಮಕ್ಕೆ ಕಳುಹಿಸಿ, ಸುಮತಿಯನ್ನು ಸುರಕ್ಷಿತವಾಗಿ ಬೆಂಗಳೂರಿನ ಸುಮತಿಯ ತಮ್ಮನ ಮನೆಗೆ ತಲುಪಿಸುವಂತೆ ತಿಳಿಸಿದರು. ಸುಮತಿಯ ಎರಡನೇ ಮಗಳ ಕೈಲಿ ಹೆಚ್ಚು ಹಣವಿರಲಿಲ್ಲ. ಇದನ್ನು ಅರಿತ ಆಶ್ರಮದಲ್ಲಿ ಇತರೆ ಕೆಲಸಗಳಿಗೆ ಸಹಾಯಕ್ಕೆ ಬಂದಿದ್ದ ಹುಡುಗಿ ತನ್ನ ಗೆಳತಿಯ ಸ್ಥಿತಿಯನ್ನು ಗಮನಿಸಿ, ತಾನು ಮುಂದಿನ ವರ್ಷದಲ್ಲಿ ನರ್ಸಿಂಗ್ ತರಬೇತಿಗೆ ಸೇರಬೇಕೆಂದು ಕೂಡಿಟ್ಟಿದ್ದ ಹಣವನ್ನು ತಂದು ತನ್ನ ಸ್ನೇಹಿತೆಯ ಕೈಯಲ್ಲಿ ಇಟ್ಟು…. “ನೀನು ಮೊದಲು ನಿನ್ನ ತಾಯಿಗೆ ಚಿಕಿತ್ಸೆಯನ್ನು ಕೊಡಿಸು…. ಮುಂದಿನ ವರ್ಷ ತಾನೇ ನಾನು ತರಬೇತಿಗೆ ಸೇರಿಕೊಳ್ಳುವುದು… ಅಷ್ಟರ ಒಳಗಾಗಿ ನೀನು ನಿಧಾನವಾಗಿ ಈ ಹಣವನ್ನು ನನಗೆ ಹಿಂತಿರುಗಿ ಕೊಡುವಿಯಂತೆ”….. ಎಂದು ಹೇಳಿದಳು.  ಬೆಂಗಳೂರಿಗೆ ಹೋಗಿ ಬರುವ ಖರ್ಚಿಗಾಗಿ ಹಣವನ್ನು ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದ ಸುಮತಿಯ ಮಗಳಿಗೆ ಆಕೆಯ ಗೆಳತಿಯೇ ಆಪದ್ಬಾಂಧವಳಾಗಿ ಬಂದು ಸಹಾಯವನ್ನು ಮಾಡಿದ್ದಳು. ತನ್ನ ಪರಿಸ್ಥಿತಿಯನ್ನು ಅರಿತು ಕಷ್ಟಕ್ಕೆ ನೆರವಾದ ಗೆಳತಿಯನ್ನು ಅಪ್ಪಿಕೊಂಡು ಆ ಹುಡುಗಿ ಗದ್ಗದಿತಳಾದಳು…. ₹ನಿನ್ನ ಈ ಉಪಕಾರವನ್ನು ನಾನು ಈ ಜನ್ಮದಲ್ಲಿ ಮರೆಯುವುದಿಲ್ಲ…. ನೀನು ಹೀಗೆ ನನಗೆ ಸಹಾಯ ಮಾಡುತ್ತೀಯಾ ಎಂದು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ…. ನಿನ್ನ ಅಂತಃಕರಣ ದೊಡ್ದದು…..ಯಾವ ರೀತಿಯಲ್ಲಿ ನಿನಗೆ ಕೃತಜ್ಞತೆ ಸಲ್ಲಿಸಲಿ ಎಂದು ತಿಳಿಯುತ್ತಿಲ್ಲ”…ಎಂದು ಹೇಳುತ್ತಾ ಅತ್ತುಬಿಟ್ಟಳು. ತನ್ನ ಗೆಳತಿಯ ತಲೆಯನ್ನು ನೇವರಿಸುತ್ತಾ…..”ನಿನ್ನ ತಾಯಿ ಮತ್ತು ನನ್ನ ತಾಯಿ ಬೇರೆ ಬೇರೆಯಲ್ಲ…. ಇಬ್ಬರೂ ಒಂದೇ ಎಂದು ನಾನು ತಿಳಿದಿದ್ದೇನೆ… ನನ್ನ ಕೈಲಿ ಆದ ಪುಟ್ಟ ಸಹಾಯವನ್ನು ನಾನು ನಿನಗೆ ಮಾಡಿದ್ದೇನೆ….. ನೀನು ಮಾಡಬೇಕಾಗಿದ್ದು ಇನ್ನೂ ಇದೆ…. ಆದಷ್ಟು ಬೇಗ ನಿನ್ನ ತಾಯಿಗೆ ಚಿಕಿತ್ಸೆ ಕೊಡಿಸು….ಇಲ್ಲಿನ ಕೆಲಸಗಳನ್ನು ಮಾಡಲು ನಾನಿದ್ದೇನೆ….ಈಗ ಹೇಗಿದ್ದರೂ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಮುಗಿದಿದೆ…. ಶಾಲೆಗೆ ರಜೆಯೂ ಇದೆ….ಹಾಗಾಗಿ ನೀನು ನಿಶ್ಚಿಂತೆಯಿಂದ ಹೋಗಿ ಬಾ”…. ಎಂದು ಹೇಳುತ್ತಾ ತನ್ನ ಗೆಳತಿಗೆ ಸಾಂತ್ವನ ಹೇಳಿ ಬೀಳ್ಕೊಟ್ಟಳು. ಅಳಿಯ ಹಿಂದಿನ ರಾತ್ರಿಯೇ ಬಂದು ಸುಮತಿಯ ಜೊತೆಯೇ ಉಳಿದುಕೊಂಡಿದ್ದರಿಂದ ಬೆಳಗ್ಗೆ ಬೇಗನೇ ಬೆಂಗಳೂರಿಗೆ ಹೊರಡಲು ಅನುಕೂಲವಾಯಿತು.  ಹಿಂದಿನ ದಿನವೇ ಹಿರಿಯ ಮಗಳು, ಮೊಮ್ಮಕ್ಕಳು, ಮೂರನೇ ಮಗಳು ಸುಮತಿಯನ್ನು ನೋಡಲು ಬಂದಿದ್ದರು. ಕೊನೆಯ ಮಗಳು ಮಧ್ಯ ಪ್ರದೇಶದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳು ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಪತ್ರದ ಮೂಲಕ ತಾಯಿಯ ಯೋಗಕ್ಷೇಮದ ವಿವರಗಳನ್ನು ತಿಳಿಸಲಾಗುತ್ತಿತ್ತು. ಅವಳು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳ ವ್ಯಾಸಂಗಕ್ಕೆ ತೊಂದರೆಯಾಗದೆ ಇರಲೆಂದು ತನ್ನ ಆರೋಗ್ಯ ತೀರಾ ಹದಗಟ್ಟಿದೆ ಎಂಬ ವಿಚಾರವನ್ನು ಅವಳಿಗೆ ತಿಳಿಸುವುದು ಬೇಡ ಎಂದು ಸುಮತಿ ತಾಕೀತು ಮಾಡಿದ್ದಳು. ತಾಯಿಯ ಅಣತಿಯಂತೆ ಮಕ್ಕಳು ನಡೆದುಕೊಂಡರು. ಸುಮತಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಬೆಳಗ್ಗೆ ಕಾರು ಬರುವುದೆಂದು ಹಿಂದಿನ ದಿನ ಟೆಲಿಫೋನ್ ಮುಖಾಂತರ ಸಾಹುಕಾರರ ಜೊತೆಗೆ ಎರಡನೇ ಮಗಳು ಮಾತನಾಡಿದಾಗ ತಿಳಿಸಿದ್ದರು. ಹಾಗಾಗಿ ಬೆಳಗ್ಗೆಯೇ ಸುಮತಿ,ಅಳಿಯ ಮತ್ತು ಎರಡನೇ ಮಗಳು ತಯಾರಾದರು. ಅವರಿಗೆ ಚಿರಪರಿಚಿತನಾದ ಚಾಲಕನಾದ ಕಾರಣ ದಾರಿಯಲ್ಲಿ ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ಸುಮತಿಗೆ ಯಾವುದೇ ರೀತಿಯಲ್ಲೂ ಆಯಾಸವಾಗದಂತೆ ನಿಧಾನ ಗತಿಯಲ್ಲಿ ಚಾಲಕನು ಕಾರಿನ ಚಾಲನೆ ಮಾಡುತ್ತಿದ್ದ. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ಉತ್ತಮವಾದ ಹೋಟೆಲ್ ಗಳಿಗೆ ಕರೆದುಕೊಂಡು ಹೋಗಿ ಊಟ ಮಾಡಲು ಅನುಕೂಲ ಮಾಡಿಕೊಟ್ಟು ಅವರಿಗೆ ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸುತ್ತಿದ್ದ. ಸುಮತಿಗೆ ಡಯಾಬಿಟಿಸ್ ಇರುವ ಕಾರಣ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕಿತ್ತು.  ಮಧ್ಯಾಹ್ನದ 3:00 ಹೊತ್ತಿಗೆ ಕಾರು ಸುಮತಿಯ ತಮ್ಮನ ಮನೆಯನ್ನು ತಲುಪಿತು. ಅಕ್ಕನ ಮಗಳು ಪತ್ರದ ಮೂಲಕ ಬರೆದು ತಿಳಿಸಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಕ್ಕ ಬೆಂಗಳೂರಿಗೆ ಬರುವುದು ತಮ್ಮನಿಗೆ ತಿಳಿದಿತ್ತು. ಸುಮತಿಯನ್ನು ಕಂಡು ಅವಳ ತಮ್ಮನ ಕುಟುಂಬದ ಎಲ್ಲರಿಗೂ ಸಂತಸವಾಯಿತು. ತಮ್ಮನ ಹೆಂಡತಿ ಮತ್ತು ಮಕ್ಕಳು ಬಂದು ಜಾಗ್ರತೆಯಿಂದ ಸುಮತಿಯನ್ನು ಮನೆಯ ಒಳಗೆ ಕರೆದುಕೊಂಡು ಹೋದರು. ಸಕಲೇಶಪುರದಿಂದ ಸುಮತಿಯನ್ನು ಕರೆದುಕೊಂಡು ಬಂದ ಚಾಲಕನನ್ನು ಮನೆಯ ಒಳಗೆ ಕರೆದು ಆತನಿಗೆ ಕಾಫಿ ತಿಂಡಿಯನ್ನು ಕೊಟ್ಟು ಉಪಚರಿಸಿ, ಕೃತಜ್ಞತೆಗಳನ್ನು ತಿಳಿಸಿ ಕಳುಹಿಸಿಕೊಟ್ಟರು. ಸುಮತಿಯ ತಮ್ಮ ಮೊದಲೇ ಆಸ್ಪತ್ರೆಯ ಬಗ್ಗೆ ಕೂಲಂಕುಶವಾಗಿ ಕೇಳಿ ತಿಳಿದುಕೊಂಡಿದ್ದ. ಮಾರನೇ ದಿನ ಬೆಳಗ್ಗೆ ಬೇಗನೆ ಆಸ್ಪತ್ರೆಗೆ ಹೋಗುವುದು ಎಂದು ತೀರ್ಮಾನಿಸಲಾಯಿತು. ಅಂದು ರಾತ್ರಿ ತಮ್ಮನ ಹೆಂಡತಿ ಸುಮತಿಗೆ ಇಷ್ಟವಾದ ವಿಶೇಷ ಅಡಿಗೆಯನ್ನು ಮಾಡಿ ಬಡಿಸಿದಳು. ಎಲ್ಲರೂ ಸಂತೋಷದಿಂದ ರಾತ್ರಿ ಊಟ ಮಾಡಿ ಮಾತನಾಡುತ್ತಾ ಕಾಲ ಕಳೆದರು.  ಅತ್ತೆಯೆಂದರೆ ತಮ್ಮನ ಮಕ್ಕಳಿಗೆ ಅಚ್ಚುಮೆಚ್ಚು. ಅತ್ತೆ ಹೇಳುವ ಕಥೆಯು ಅವರಿಗೆ ಪ್ರಿಯ. ತಮ್ಮನ ಮಕ್ಕಳ ಜೊತೆ ಕಾಲ ಕಳೆಯುವುದೆಂದರೆ ಸುಮತಿಗೂ ಖುಷಿ. ಆದರೆ ಸುಮತಿಯ ಆರೋಗ್ಯ ಸರಿ ಇಲ್ಲದೇ ಇರುವುದನ್ನು ಅರಿತ ಮಕ್ಕಳು ಅತ್ತೆಗೆ ತೊಂದರೆ ಕೊಡುವುದು ಬೇಡವೆಂದು ಸುಮ್ಮನಾದರು. ಅಕ್ಕನ ಆರೋಗ್ಯ ತೀರಾ ಹದಗಟ್ಟಿರುವುದನ್ನು ಅರಿತ ತಮ್ಮ ಬಹಳ ಚಿಂತಿತನಾದನು. 

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-128 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಶಿಫಾರಸ್ಸಿನ ಪತ್ರ ಆ ಹುಡುಗಿಯ ಕಸಿನ್ ತನ್ನ ಕುಟುಂಬದವರಿಗೆ ಸುಮತಿಯ ಅನಾರೋಗ್ಯದ ಬಗ್ಗೆ ತಿಳಿಸಿದನು. ಸುಮತಿಯ ಅನಾರೋಗ್ಯದ ಬಗ್ಗೆ ತಿಳಿದು ಕುಟುಂಬದ ಎಲ್ಲರಿಗೂ ಬಹಳ ದುಃಖವಾಯಿತು. ಸುಮತಿಯ ಮಗಳಿಗೆ ಊಟವನ್ನು ಬಡಿಸುವಂತೆ ಅತ್ತಿಗೆಗೆ ಹೇಳಿ ತಮ್ಮ ಹಿತ್ತಲ ತೆಂಗಿನ ಮರದಿಂದ ನಾಲ್ಕೈದು ಎಳನೀರನ್ನು ಕೆಲಸಗಾರರಿಗೆ ಹೇಳಿ ಕೊಯ್ಯಿಸಿ, ತಾನೂ ಊಟ ಮಾಡಿ…. “ಬಾ ಆಸ್ಪತ್ರೆಗೆ ಹೋಗೋಣ…. ಎಂದು ಆ ಹುಡುಗಿಗೆ ಹೇಳುತ್ತಾ,…. “ಅಮ್ಮಾ ….ನಾನು ಅತ್ತೆಯನ್ನು ನೋಡಲು ಹೋಗಿ ಬರುತ್ತೇನೆ”…. ಎಂದಾಗ ಬಾಗಿಲ ಬಳಿ ಬಂದ ಆತನ ಅತ್ತಿಗೆ…. “ಅತ್ತೆಗೆ ಹೇಳು, ನಾಳೆ ನಾನು ಅಣ್ಣ ಜೊತೆಗೆ ಆಸ್ಪತ್ರೆಗೆ ಅತ್ತೆಯನ್ನು ನೋಡಲು ಬರುತ್ತೇವೆ …. ಎಂದು ಹೇಳಿ ಅವರಿಬ್ಬರನ್ನೂ ಬೀಳ್ಕೊಟ್ಟರು. ದಾರಿಯುದ್ದಕ್ಕೂ ಮೌನವಾಗಿದ್ದ ಹುಡುಗಿಯನ್ನು ಆತ ಮಾತಿಗೆಳೆಯುತ್ತಲೇ ಇದ್ದ. ಅತ್ತೆಯ ಅನಾರೋಗ್ಯಕ್ಕೆ ಕಾರಣವೇನು ಎಂದು ಕೇಳಿದ. ಆತನ ಎಲ್ಲಾ ಪ್ರಶ್ನೆಗೂ ಚುಟುಕಾಗಿ ಉತ್ತರಿಸಿ ಆ ಹುಡುಗಿ ಸುಮ್ಮನಾಗುತ್ತಿದ್ದಳು. ಆಸ್ಪತ್ರೆಯನ್ನು ತಲುಪಿ ಇಬ್ಬರೂ ವಾರ್ಡ್ ಒಳಗೆ ಪ್ರವೇಶಿಸಿದಾಗ, ಸುಮತಿಯ ಹಿರಿಯ ಮಗಳು ತನ್ನ ಪುಟ್ಟ ಮಕ್ಕಳೊಂದಿಗೆ ವಾರ್ಡಿನಲ್ಲಿ ಸುಮತಿಯ ಬಳಿ ಕುಳಿತು ಮಾತನಾಡುತ್ತಿದ್ದಳು. ತನ್ನ ತಂಗಿಯ ಜೊತೆ ಕಸಿನ್ ಅನ್ನು ಕಂಡಾಗ ಈತ ಹೇಗೆ ಇಲ್ಲಿಗೆ ಬಂದ? ಎನ್ನುವಂತೆ ಅಕ್ಕ ತಂಗಿಯೆಡೆಗೆ ಪ್ರಶ್ನಾರ್ಥಕ ನೋಟ ಬೀರಿದಳು. ಅದಕ್ಕೆ ತಂಗಿ ಆಮೇಲೆ ಹೇಳುತ್ತೇನೆ ಎಂದು ಸನ್ನೆ ಮಾಡಿದಳು….”ಅಮ್ಮಾ ….ನೋಡು ಯಾರು ಬಂದಿದ್ದಾರೆ”…. ಎಂದು ತಾಯಿಯನ್ನು ಕೇಳಿದಳು. ಬಾಗಿಲ ಕಡೆಗೆ ಬೆನ್ನು ಹಾಕಿ ಕುಳಿತಿದ್ದ ಸುಮತಿ ಹಿಂದಕ್ಕೆ ತಿರುಗಿ ನೋಡಿದಳು. ಮಗಳ ಜೊತೆಗೆ ತನ್ನ ತಂದೆಯ ಅಕ್ಕನ ಮಗಳ ಎರಡನೇ ಮಗ ನಿಂತಿರುವುದು ಕಂಡಿತು. ಸುಮತಿಯ ಮುಖ ಖುಷಿಯಿಂದ ಅರಳಿತು…. “ಏನಪ್ಪಾ ಹೇಗಿದ್ದೀಯಾ? ಮನೆಯಲ್ಲಿ ಎಲ್ಲರೂ ಸೌಖ್ಯವೇ?”… ಎಂದು ಸುಮತಿ ಆತನನ್ನು ಕೇಳಿದಾಗ…. “ಎಲ್ಲರೂ ಸೌಖ್ಯ ಅತ್ತೆ…. ನೀವು ಹೇಗಿದ್ದೀರಿ?… ಬೆಳಗ್ಗೆ ಇವಳು ಕಾಲೇಜಿಗೆ ತಡವಾಗಿ ಬಂದದ್ದು ಏಕೆ ಎಂದು ಕೇಳಿದೆ… ಆಗ ನೀವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯಿತು…. ಹಾಗಾಗಿ ನಾನೂ ಜೊತೆಗೆ ಬರುತ್ತೇನೆ ಎಂದು ಹೇಳಿದೆ…. ಈಗ ನಿಮ್ಮ ಆರೋಗ್ಯ ಹೇಗಿದೆ?…. ಡಾಕ್ಟರ್ ಏನು ಹೇಳಿದರು?”…. ಎಂದು ಸುಮತಿಯನ್ನು ಕೇಳುತ್ತಾ, ಕೈಯಲ್ಲಿ ಹಿಡಿದಿದ್ದ ಎಳನೀರುಗಳ ಕಾಯಿಯನ್ನು ಮಂಚದ ಪಕ್ಕದಲ್ಲಿ ಇದ್ದ ಕಿಟಕಿಯ ಬಳಿ ಇಟ್ಟ…. “ಪರವಾಗಿಲ್ಲಪ್ಪಾ…. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಮಗಳಿಗೆ ಡಾಕ್ಟರ್ ತಿಳಿಸಿದ್ದಾರೆ”…. ಎಂದು ತನ್ನ ಎರಡನೇ ಮಗಳ ಮುಖವನ್ನು ನೋಡುತ್ತಾ ಸುಮತಿ ಹೇಳಿದಳು. ಅವಳು ‘ಹೌದು’ ಎನ್ನುವಂತೆ ತಲೆ ಆಡಿಸಿದಳು….. “ಹಾಗಾದರೆ ಬೆಂಗಳೂರಿಗೆ ಹೋಗಿ ಬನ್ನಿ ಅತ್ತೆ…. ಅಲ್ಲಿ ಒಳ್ಳೆಯ ಆಸ್ಪತ್ರೆಗಳು ಇವೆ…. ನಿಮಗೆ ಸರಿಯಾದ ಚಿಕಿತ್ಸೆಯೂ ದೊರಕುತ್ತದೆ”… ಎಂದು ಹೇಳಿ, ಸುಮತಿಯ ಹಿರಿಯ ಮಗಳನ್ನು ಉದ್ದೇಶಿಸಿ…. “ನೀನು ಯಾವಾಗ ಬಂದೆ?”…. ಎಂದು ಕೇಳುತ್ತಾ, ಅವಳ ಇಬ್ಬರು ಮುದ್ದಾದ ಮಕ್ಕಳ ತಲೆಯನ್ನು ನೇವರಿಸಿದ…. “ನಾನು ಬಂದು ಸ್ವಲ್ಪ ಹೊತ್ತಾಯ್ತು”… ಎಂದಳು.  ಉಭಯ ಕುಶಲೊಪರಿಯ ನಂತರ ಆತ ಹೊರಡಲನುವಾದ. ಹೊರಡುವ ಮುನ್ನ ನಾಳೆ ತನ್ನ ಅಣ್ಣ ಮತ್ತು ಅತ್ತಿಗೆ ಬರುವುದಾಗಿ ತಿಳಿಸಿದ್ದಾರೆ ಎಂಬುದನ್ನು ಹೇಳಲು ಆತ ಮರೆಯಲಿಲ್ಲ. ಸುಮತಿಯ ಎರಡನೇ ಮಗಳು ಆತನ ಜೊತೆಗೆ ವಾರ್ಡಿನಿಂದ ಹೊರಗೆ ಅಷ್ಟು ದೂರ ಬೀಳ್ಕೊಡಲು ಬಂದಳು. ತನ್ನ ಅಮ್ಮನನ್ನು ನೋಡಲು ಬಂದಿದ್ದಕ್ಕಾಗಿ ಮತ್ತು ಎಳನೀರುಗಳನ್ನು ತಂದಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದಳು. ಆತ ಮುಗುಳ್ನಗುತ್ತಾ…. “ಸರಿ ಹೊರಡುತ್ತೇನೆ…. ನೀನು ಹೆಚ್ಚು ಆಲೋಚನೆ ಮಾಡಬೇಡ…. ಅತ್ತೆಯ ಆರೋಗ್ಯ ಸರಿಯಾಗುತ್ತದೆ”… ಎಂದು ಹೇಳಿ ಮನೆಯ ಕಡೆಗೆ ನಡೆದನು. ಆ ಹುಡುಗಿ ವಾರ್ಡಿಗೆ ಹಿಂದಿರುಗಿದಳು. ವಾರ್ಡಿಗೆ ಹಿಂತಿರುಗಿದ ತಂಗಿಯನ್ನು ಉದ್ದೇಶಿಸಿ…. “ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾ?…. ನೀನು ನನಗೆ ಈ ಬಗ್ಗೆ ತಿಳಿಸಲೇ ಇಲ್ಲ”… ಎಂದಳು….” ಹೌದು ಅಕ್ಕಾ”…. ಎಂದು ಉತ್ತರಿಸಿದಳು…. “ಬೆಂಗಳೂರಿಗೆ ಹೋಗಬೇಕಾದರೆ ಮತ್ತು ಅಲ್ಲೇ ಚಿಕಿತ್ಸೆಯನ್ನು ಪಡೆಯಬೇಕಾದರೆ ಹೆಚ್ಚಿನ ಹಣ ಖರ್ಚಾಗುತ್ತದೆ ಅಲ್ಲವೇ?…. ನಮ್ಮಲ್ಲಿ ಯಾರಲ್ಲೂ ಅಷ್ಟೊಂದು ಹಣವಿಲ್ಲ…. ಏನು ಮಾಡುವುದು?”… ಎಂದು ಚಿಂತಿತಳಾಗಿ ತಂಗಿಯನ್ನು ಕೇಳಿದಳು…. “ನೀನೇನೂ ಹೆಚ್ಚು ಆಲೋಚಿಸಬೇಡ ಅಕ್ಕಾ…. ನಾನಾಗಲೇ ನಮ್ಮ ಎಸ್ಟೇಟಿನ ಸಾಹುಕಾರರು ಹಾಗೂ ಅವರ ಪತ್ನಿಯ ಬಳಿ ಮಾತನಾಡಿದ್ದೇನೆ…. ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ”…. ಎಂದಳು. “ಒಬ್ಬಳೇ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೇಗೆ ಹೋಗುತ್ತೀಯಾ?”…. ಎಂದು ಅಕ್ಕ ಕೇಳಿದಾಗ…. ಇಂದು ಸಂಜೆ ನಾನು ನಿಮ್ಮ ಮನೆಗೆ ಬಂದು ಈ ವಿಷಯವನ್ನು ತಿಳಿಸಿ, ನಮ್ಮ ಜೊತೆಗೆ ಬಾವನನ್ನು ಬೆಂಗಳೂರಿಗೆ ಬರುವಂತೆ ಕೇಳಿಕೊಳ್ಳಬೇಕೆಂದಿದ್ದೆ…. ಈಗ ನೀನೇ ಇಲ್ಲಿಗೆ ಬಂದಿದ್ದು ತುಂಬಾ ಒಳ್ಳೆಯದಾಯಿತು…. ದಯವಿಟ್ಟು ನಮ್ಮ ಜೊತೆ ಬಾವ ಬರುವಂತೆ ವಿನಂತಿಸು ಅಕ್ಕ”…. ಎಂದಾಗ…. “ಏನೇ ಹೀಗೆ ಹೇಳ್ತಾ ಇದ್ದೀಯಾ…. ಬಾವನೇನು ಹೊರಗಿನವರೇ?…. ಅಮ್ಮನ ಬಗ್ಗೆ ಅವರಿಗೂ ಕಾಳಜಿ ಇದೆ…. ನಿಮ್ಮಿಬ್ಬರನ್ನೇ ಅವರು ಬೆಂಗಳೂರಿಗೆ ಕಳುಹಿಸುತ್ತಾರೆಯೇ?…. ಖಂಡಿತಾ ಬಂದೇ ಬರುತ್ತಾರೆ…. ಸ್ವಲ್ಪ ಹೊತ್ತಿನಲ್ಲೇ ನಿನ್ನ ಬಾವನೂ ಇಲ್ಲಿಗೆ ಬರುತ್ತಾರೆ.”… ಎಂದಳು. ಅಕ್ಕ ಈಗ ಬಂದಿದ್ದು ಒಳ್ಳೆಯದಾಯಿತು ಎನಿಸಿತು ತಂಗಿಗೆ. ಸಂಜೆ ಬಾವ ಬಂದರೆ ಡಾಕ್ಟರನ್ನು ಭೇಟಿ ಮಾಡಿ ತಾಯಿಯನ್ನು ಇಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗುವ ಬಗ್ಗೆ ಮಾತನಾಡಬಹುದು ಎಂದು ಮನದಲ್ಲಿ ಅಂದುಕೊಂಡಳು. ತಾಯಿ ಮತ್ತು ಮಕ್ಕಳು ಮಾತನಾಡುತ್ತಾ ಕುಳಿತಿರುವಾಗಲೇ ಸುಮತಿಯ ಅಳಿಯ ಬಂದ. ಹಿರಿಯ ಮಗಳು ಎಲ್ಲ ವಿಷಯವನ್ನೂ ತನ್ನ ಗಂಡನಿಗೆ ತಿಳಿಸಿದಳು. ನಾನು ನಿಮ್ಮ ಜೊತೆ ಬೆಂಗಳೂರಿಗೆ ಬರುತ್ತೇನೆ ಎಂದು ಅಳಿಯ ಭರವಸೆ ನೀಡಿದನು. ಸಂಜೆ ಸುಮತಿಯ ಚಿಕಿತ್ಸೆ ಮಾಡುತ್ತಿರುವ ಫಿಜಿಷಿಯನ್ ರನ್ನು ಕಂಡು ಸುಮತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದಾಗ, ಅವರಿಗೂ ಬಹಳ ಸಂತೋಷವಾಯಿತು. ಆದಷ್ಟು ಬೇಗ ಬೆಂಗಳೂರಿಗೆ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆಯನ್ನು ಕೊಡಿಸಿ ಎಂದು ಹೇಳಿ, ಬೆಂಗಳೂರಿನ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ವೈದ್ಯರಿಗೆ ಒಂದು ಶಿಫಾರಸ್ಸಿನ ಪತ್ರವನ್ನು ಬರೆದು ತಮ್ಮ ಸಹಿ ಹಾಕಿ ಕೊಟ್ಟರು.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-127 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ತರಗತಿಗೆ ತಡವಾಗಿ ಹೋದ ಮಗಳು ತನ್ನನ್ನು ಅಪ್ಪಿಕೊಂಡ ಮಗಳ ತಲೆಯನ್ನು ನೇವರಿಸುತ್ತಾ…. ಏನಾಯ್ತು ಮಗಳೇ, ಇಷ್ಟೊಂದು ಸಂತೋಷದಲ್ಲಿರುವೆ? … ಎಂದು ಸುಮತಿ ಕೇಳಲು,…. “ಅಮ್ಮಾ …ನಿನಗೆ ಇನ್ನೂ ಉತ್ತಮ ಮಟ್ಟದ ಚಿಕಿತ್ಸೆಯನ್ನು ಕೊಡಿಸಹುದೆಂದು ಡಾಕ್ಟರ್ ಹೇಳಿದ್ದಾರೆ….. ನಾವು ಆದಷ್ಟು ಬೇಗ ಬೆಂಗಳೂರಿಗೆ ಹೋಗೋಣ…. ಅಲ್ಲಿನ ಕಿಡ್ನಿ ಫೌಂಡೇಶನ್ ಗೆ ನಿನ್ನನ್ನು ಕರೆದುಕೊಂಡು ಹೋಗುತ್ತಿದ್ದೇವೆ”….ಎಂದು ಮಗಳು ಹೇಳಿದಾಗ…. “ಏನು ಹೇಳುತ್ತಿದ್ದಯಾ? ನಾವು ಬೆಂಗಳೂರಿಗೆ ಹೋಗುವುದೇ?… ಬೆಂಗಳೂರಿಗೆ ಹೋಗಬೇಕಾದರೆ ಹಾಗೂ ಅಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಹೆಚ್ಚಿನ ಹಣದ ಅಗತ್ಯವಿರುತ್ತದೆ…. ನಮ್ಮಲ್ಲಿ ಅಷ್ಟು ಹಣವಿಲ್ಲ…. ಸುಮ್ಮನೇ ತೊಂದರೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದು ಬೇಡ”…. ಎಂದು ಸುಮತಿ ಹೇಳಿದಾಗ ಮಗಳು ತಾಯಿಯ ಹಸ್ತವನ್ನು ತನ್ನ ಕರದಲ್ಲಿ ಭದ್ರವಾಗಿ ಹಿಡಿದು….” ಅಮ್ಮಾ …. ನೀನೇನೂ ಚಿಂತಿಸಬೇಡ… ನೀನು ಚಿಕಿತ್ಸೆ ಪಡೆಯುವುದಕ್ಕೆ ತಯಾರಾಗು…. ಬೆಂಗಳೂರಿಗೆ ಹೋಗಲು ನಮಗೆ ಸಹಾಯ ಮಾಡುತ್ತೇವೆ ಎಂದು ಸಣ್ಣ ಸಾಹುಕಾರರು ಮತ್ತು ಅಮ್ಮ ಇಬ್ಬರೂ ಭರವಸೆ ನೀಡಿದ್ದಾರೆ…. ನಾನು ವೈದ್ಯರನ್ನು ಕಂಡು ಈ ಬಗ್ಗೆ ಮಾತನಾಡುತ್ತೇನೆ ಮತ್ತು ನಿನ್ನನ್ನು ಡಿಸ್ಚಾರ್ಜ್ ಮಾಡಲು ವಿನಂತಿಸಿಕೊಳ್ಳುತ್ತೇನೆ…. ಆದಷ್ಟು ಬೇಗ ನಾವು ಬೆಂಗಳೂರಿಗೆ ಹೋಗೋಣ…. ಈ ಬಗ್ಗೆ ತಂಗಿಯ ಜೊತೆಗೂ ಮಾತನಾಡಿದ್ದೇನೆ…ಅವಳು ಸರಿ ಹೋಗಿ ಬನ್ನಿ ನಾನು ಇಲ್ಲಿಯೇ ಇದ್ದು ಅಮ್ಮನ ಪರವಾಗಿ ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ…. ಅಕ್ಕನ ಮನೆಗೆ ಹೋಗಿ, ಬಾವ ನಮ್ಮ ಜೊತೆಗೆ ಬರುವಂತೆ ವಿನಂತಿಸಿಕೊಳ್ಳುತ್ತೇನೆ…. ಖಂಡಿತ ಅವರು ಒಪ್ಪುತ್ತಾರೆ”… ಎಂದಳು ಸುಮತಿಗೆ ಸಂತೋಷವಾಯಿತು. ತಾನು ಪ್ರತಿದಿನವೂ ಅನುಭವಿಸುತ್ತಿರುವ ಸಂಕಟ, ನೋವು ಇನ್ನಾದರೂ ಕಡಿಮೆಯಾಗುತ್ತದೆ ಎನ್ನುವ ಸಮಾಧಾನವೂ ಆಯಿತು. ಆದರೆ ಬೆಂಗಳೂರಿಗೆ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು? ಎನ್ನುವ ಚಿಂತೆ ಕಾಡಿತು…. “ನೀನು ಹೇಳಿದ್ದು ಎಲ್ಲವೂ ಸರಿ ಮಗಳೇ…. ಆದರೆ ಅಲ್ಲಿ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು?”… ಎಂದು ಸುಮತಿ ಕೇಳಿದಾಗ…. “ಅಮ್ಮಾ …ಬೆಂಗಳೂರಿನಲ್ಲಿ ನಮ್ಮ ಹಿರಿಯ ಮಾವ ( ಸುಮತಿಯ ಹಿರಿಯ ತಮ್ಮ) ಕುಟುಂಬ ಸಮೇತ ಅಲ್ಲಿಯೇ ಇದ್ದಾರಲ್ಲವೇ ?… ಅವರು ಯಾವ ಬಡಾವಣೆಯಲ್ಲಿ ವಾಸವಾಗಿದ್ದಾರೆ ಎನ್ನುವ ಬಗ್ಗೆ ದೊಡ್ಡಮ್ಮನನ್ನು ಕೇಳಿ ತಿಳಿದುಕೊಳ್ಳುತ್ತೇನೆ…. ಅವರ ವಿಳಾಸ ಪಡೆದು ಅಲ್ಲಿಗೆ ಹೋದರಾಯಿತು”…. ಎಂದಳು ಮಗಳು. ಅವಳು ಹೇಳಿದ್ದು ಸರಿ ಎನಿಸಿತು ಸುಮತಿಗೆ. ಹಾಸನದಿಂದ ಬೆಂಗಳೂರಿಗೆ ತನ್ನ ತಮ್ಮ ವರ್ಗವಾಗಿ ಹೋದ ನಂತರ ಸುಮತಿ ಒಮ್ಮೆಯೂ ಅವನನ್ನು ಭೇಟಿಯಾಗಿರಲಿಲ್ಲ. ಹಾಗಾಗಿ ತಮ್ಮನನ್ನು ನೋಡಬಹುದು ಮತ್ತು ಆಸ್ಪತ್ರೆಗೆ ಹೋಗಿ ಬರಲು ನಮಗೆ ಅವನು ಖಂಡಿತಾ ಸಹಾಯ ಮಾಡಿಯೇ ಮಾಡುತ್ತಾನೆ ಎನ್ನುವ ಭರವಸೆಯೂ ಮೂಡಿತು…. “ಸರಿ ಹಾಗೆಯೇ ಆಗಲಿ ಮಗಳೇ…. ನಾಳೆ ಬೆಳಗ್ಗೆ ಡಾಕ್ಟರ್ ರೌಂಡ್ಸ್ ಗೆ ಬರುವಾಗ ಈ ಬಗ್ಗೆ ಅವರೊಂದಿಗೆ ಮಾತನಾಡು”…. ಎಂದು ಸುಮತಿ ಮಗಳಿಗೆ ಹೇಳಿದಳು.  ನಾಳೆ ಬೆಳಗ್ಗೆ ಕಾಲೇಜು ಮುಗಿದ ನಂತರ ದೊಡ್ಡಮ್ಮನ ಮನೆಗೆ ಹೋಗಿ ಮಾವನ ಅಡ್ರೆಸ್ ಪಡೆಯುವುದು ಎಂದು ಆ ಹುಡುಗಿ ತೀರ್ಮಾನಿಸಿದಳು.  ಸಂಜೆ ಆಶ್ರಮಕ್ಕೆ ಹೋಗಿ ಬಂದು ರಾತ್ರಿ ಅಮ್ಮನ ಜೊತೆಗೆ ಆಸ್ಪತ್ರೆಯಲ್ಲಿ ಉಳಿದುಕೊಂಡ ಹುಡುಗಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಒಂದೊಂದೇ ಲೆಕ್ಕಾಚಾರ ಮನದಲ್ಲಿ. ಏನೇನೋ ಆಲೋಚನೆಗಳು ಸುಳಿದು ಅವಳ ನಿದ್ರೆಗೆಡಿಸಿದ್ದವು. ಮೊದಲೇ ತೀರ್ಮಾನಿಸಿದಂತೆ ಬೆಳಗ್ಗೆ ಬೇಗನೆ ಎದ್ದು ಆಶ್ರಮಕ್ಕೆ ಹೋದಳು. ಅಲ್ಲಿ ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಕಾಲೇಜಿಗೆ ಹೊರಟಳು. ಅಂದು ಕಾಲೇಜಿಗೆ ತಡವಾಯಿತು. ಗಡಿಬಿಡಿಯಲ್ಲಿ ತರಗತಿಯ ಕಡೆಗೆ ಹೋಗುತ್ತಿದ್ದಾಗ ಅದಾಗಲೇ ಲೆಕ್ಚರರ್ ತರಗತಿಯೊಳಗೆ ಪ್ರವೇಶಿಸಿ ಪಾಠ ಮಾಡುತ್ತಿದ್ದರು. ಹಾಗಾಗಿ ತರಗತಿಯ ಆಚೆಯೇ ನಿಂತಳು ಆ ಹುಡುಗಿ. ಪಕ್ಕದ ತರಗತಿಗೆ ಹೋಗಲು ಬಂದ ಅವಳ ಕಸಿನ್ ತರಗತಿಯ ಹೊರಗೆ ನಿಂತಿರುವ ಅವಳನ್ನು ಕಂಡು ಅವಳ ಬಳಿಗೆ ಬಂದು…. “ಏನಾಯ್ತು?…. ಏಕೆ ಇಷ್ಟು ತಡವಾಗಿ ಕಾಲೇಜಿಗೆ ಬಂದಿರುವೆ?… ಸದಾ ಬೇಗನೆ ಬರುತ್ತಿದ್ದ ನಿನಗೆ ಇಂದು ಏನಾಯಿತು?”… ಎಂದು ಕೇಳಿದ. ಅವಳ ಕಸಿನ್ ಕೂಡ ಇದೇ ಡಿಗ್ರಿ ಕಾಲೇಜಿನಲ್ಲಿ ಹೊಸದಾಗಿ ಲೆಕ್ಚರರ್ ಆಗಿ ಸೇರ್ಪಡೆಗೊಂಡಿದ್ದ.‌ ಕಸಿನ್ ಕೇಳಿದ ಪ್ರಶ್ನೆಗೆ…. “ನನ್ನ ತಾಯಿಯ ಆರೋಗ್ಯ ಸರಿ ಇಲ್ಲ…. ಅವಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ”…. ಎಂದು ಹೇಳುತ್ತಾ ಈವರೆಗೂ ನಡೆದ ಎಲ್ಲಾ ವಿಚಾರವನ್ನೂ ಆತನಿಗೆ ತಿಳಿಸಿದಳು. ಅತ್ತೆಗೆ ಹುಷಾರಿಲ್ಲ ಎನ್ನುವುದನ್ನು ಅರಿತ ಆತನ ಮನಸ್ಸಿಗೆ ತುಂಬಾ ಬೇಸರವಾಯಿತು…. “ಒಂದು ಕೆಲಸ ಮಾಡು…. ತರಗತಿಗಳು ಮುಗಿದ ನಂತರ ನೀನು ಆಸ್ಪತ್ರೆಗೆ ಹೋಗುವಾಗ ನನಗಾಗಿ ಸ್ವಲ್ಪ ಹೊತ್ತು ಇಲ್ಲಿಯೇ ಕಾದಿರು…. ನನ್ನ ತರಗತಿ ಮುಗಿದ ನಂತರ ನಾವಿಬ್ಬರೂ ಜೊತೆಯಾಗಿಯೇ ನಮ್ಮ ಮನೆಗೆ ಹೋಗೋಣ…. ಅತ್ತೆಯನ್ನು ನೋಡಲು ನಿನ್ನ ಜೊತೆಗೆ ನಾನೂ ಬರುತ್ತೇನೆ”.. ಎಂದು ಹೇಳಿ, ಅವಳ ತರಗತಿಯ ಬಾಗಿಲನ್ನು ಡಸ್ಟರ್ನಿಂದ ಮೆಲ್ಲಗೆ ತಟ್ಟಿದನು.  ತರಗತಿಯನ್ನು ತೆಗೆದುಕೊಳ್ಳುತ್ತಿದ್ದ ಲೆಕ್ಚರರ್ ಬಾಗಿಲ ಕಡೆಗೆ ನೋಡಿದಾಗ ತನ್ನ ಗೆಳೆಯ ತನ್ನ ತರಗತಿಯ ವಿದ್ಯಾರ್ಥಿನಿಯೊಂದಿಗೆ ಹೊರಗಡೆ ನಿಂತಿರುವುದು ಕಂಡಿತು….” ಒಂದು ನಿಮಿಷ ಇರಿ ಮಕ್ಕಳೇ…. ಇದೋ ಬಂದೆ”…. ಎಂದು ಹೇಳುತ್ತಾ, ಗೆಳೆಯನಿಗೆ ಹಸ್ತಲಾಘವ ಕೊಟ್ಟು,… “ಇದೇನು ಹುಡುಗೀ…, ತರಗತಿಗೆ ಬರದೇ ಇಲ್ಲೇಕೆ ನಿಂತಿರುವೆ? ….. ದಿನವೂ ತರಗತಿಗೆ ಸರಿಯಾದ ಸಮಯದಲ್ಲಿ ಹಾಜರಾಗುತ್ತಿದ್ದ ನಿನಗೆ ಇಂದೇನಾಯಿತು?…. ಎಂದಾಗ ಆತನ ಗೆಳೆಯ ತನ್ನ ಕಸಿನ್ ಬಗ್ಗೆ ಎಲ್ಲಾ ವಿವರವನ್ನೂ ತಿಳಿಸಿದ. ಆ ಲೆಕ್ಚರರ್ ಹುಡುಗಿಯನ್ನು ನೋಡಿ ಅನುಕಂಪದಿಂದ…. “ಸರಿ ಹೋಗು…. ತರಗತಿಯಲ್ಲಿ ಕುಳಿತುಕೋ”… ಎಂದು ಹೇಳಿ, ಮತ್ತೆ ಸಿಗೋಣ ಎಂದು ಗೆಳೆಯನಿಗೆ ಹೇಳುತ್ತಾ ಕೈ ಬೀಸಿ, ಲೆಕ್ಚರರ್ ತರಗತಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರಾರಂಭಿಸಿದರು. ಅವಳ ಗೆಳತಿಯರು ಮತ್ತು ಇತರೇ ವಿದ್ಯಾರ್ಥಿಗಳು ಅವಳನ್ನು ಪ್ರಶ್ನಾರ್ಥಕವಾಗಿ ನೋಡಿದರು. ಆದರೆ ಇವಳ ಗಮನ ಯಾರಡೆಗೂ ಇರಲಿಲ್ಲ. ತರಗತಿಗಳೆಲ್ಲವೂ ಮುಗಿದ ನಂತರ ಇಂದು ತಾನು ಮಾಡಬೇಕಾದ ಕೆಲಸಗಳ ಬಗ್ಗೆ ಯೋಚಿಸುತ್ತಿದ್ದಳು. ತರಗತಿಯಲ್ಲಿ ಪಾಠದ ಕಡೆಗೆ ಕೂಡ ಗಮನ ಹರಿಸಲು ಅವಳಿಂದ ಸಾಧ್ಯವಾಗಲಿಲ್ಲ. ತರಗತಿಗಳಿಲ್ಲವೂ ಮುಗಿದ ಕೂಡಲೇ ಕಾಲೇಜಿನ ಆವರಣದಲ್ಲಿದ್ದ ಮರದ ಕೆಳಗೆ ಕುಳಿತು ತನ್ನ ಕಸಿನ್ ಬರುವಿಕೆಗಾಗಿ ಕಾಯುತ್ತಿದ್ದಳು. ಕಸಿನ್ ಬಂದು ಕೂಡಲೇ ಎದ್ದು ಆತನ ಜೊತೆಗೆ ಅವನ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ದಾರಿಯುದ್ದಕ್ಕೂ ಮೌನವಾಗಿದ್ದ ಆ ಹುಡುಗಿಯನ್ನು ಕಂಡು ಆತನ ಮನ ಮರುಗಿತು. 

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-126 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಡಯಾಲಿಸಿಸ್‌ ಗೆ ಬೆಂಗಳೂರಿಗೆ? ರಾತ್ರಿ ತಾಯಿಯ ಜೊತೆಗೆ ಆಸ್ಪತ್ರೆಯಲ್ಲಿ ಮಲಗಲು ಬಂದ ಮಗಳು ಮಾರನೇ ದಿನ ಕಾಲೇಜಿಗೆ ರಜೆ ಹಾಕಿ ಬೆಳಗಿನ ಬಸ್ಸಿನಲ್ಲಿ ತನ್ನ ಊರಿಗೆ ಹೊರಟಳು. ಅಲ್ಲಿ ಹೋಗಿ ತೋಟದ ಸಾಹುಕಾರರು ಹಾಗೂ ಅವರ ಪತ್ನಿ ‘ಅಮ್ಮ’ ಅವರನ್ನು ಭೇಟಿ ಮಾಡಿದಳು. ತನ್ನ ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ಸೂಚಿಸಿರುವ ಬಗ್ಗೆ ಎಲ್ಲಾ ವಿವರಗಳನ್ನು ಅವರಿಗೆ ತಿಳಿಸಿದಳು….ನಿನ್ನ ಅಕ್ಕನಿಗೂ ತಿಳಿಸಿ ಕೊಡಿಸಬೇಕಾದ ಚಿಕಿತ್ಸೆಯನ್ನು ಕೊಡಿಸು….ಇಲ್ಲಿಂದ ಬೆಂಗಳೂರಿನ ಆಸ್ಪತ್ರೆಗೆ ನೀವು ಹೋಗಲು ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಮಾಡುತ್ತೇವೆ…. ಎಂದರು. ಸಾಹುಕಾರರು ಹಾಗೂ ಅವರ ಪತ್ನಿಯ ಮಾತನ್ನು ಕೇಳಿದ ಹುಡುಗಿಗೆ ಸಂಜೀವಿನಿ ಸಿಕ್ಕಷ್ಟು ಸಂತೋಷವಾಯಿತು. ತನ್ನ ತಾಯಿಯ ಪ್ರತಿಯೊಂದು ಪರಿಸ್ಥಿತಿಯಲ್ಲೂ ಸಹಾಯಕ್ಕೆ ನಿಲ್ಲುವ ಸಾಹುಕಾರರು ಅವರ ಪತ್ನಿಯ ಬಗ್ಗೆ ಗೌರವ ಹೆಚ್ಚಿತು.‌ ತನ್ನ ಕೃತಜ್ಞತೆಯನ್ನು ತಿಳಿಸಲು ಅವಳಿಗೆ ಪದವಿಲ್ಲದಾಯಿತು.  ಸಾಹುಕಾರರಿಗೆ ಹಾಗೂ ಅವರ ಪತ್ನಿಗೆ ವಂದಿಸಿ ತುಸು ನೆಮ್ಮದಿಯಿಂದ ತಂಗಿಯನ್ನು ಭೇಟಿ ಮಾಡಲು ಮನೆಗೆ ಹೋದಳು. ತಂಗಿ ಶಾಲೆಗೆ ಹೊರಡುವ ತರಾತುರಿಯಲ್ಲಿದ್ದಳು. ಅಕ್ಕ ಇದ್ದಕ್ಕಿದ್ದ ಹಾಗೆ ಮನೆಗೆ ಬಂದಿರುವುದನ್ನು ಕಂಡು, ತಂಗಿಗೆ ಆಶ್ಚರ್ಯವಾಯಿತು. ಆದರೆ ತಾಯಿಗೆ ಹೆಚ್ಚಿನ ಚಿಕಿತ್ಸೆ ದೊರಕುವ ವಿಷಯ ತಿಳಿದು ಅವಳು ಸಂತೋಷ ಕೊಟ್ಟಳು…. “ಹಾಗಾದರೆ ತಾಯಿಯನ್ನು ಹೇಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೀಯಾ?…. ತಾಯಿಗೆ ಹೆಚ್ಚು ನಡೆದಾಡಲು ಸಾಧ್ಯವಿಲ್ಲ ಅಲ್ಲವೇ?…. ನಿನಗೆ ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಹೋಗಿ ಅಭ್ಯಾಸವಿಲ್ಲ… ಯಾರ ಜೊತೆಗೆ ಹೋಗುತ್ತೀಯಾ?…. ಒಬ್ಬಳೇ ಅಮ್ಮನನ್ನು ಕರೆದುಕೊಂಡು ಹೋಗಲು ಸಾಧ್ಯವೇ ನಿನಗೆ? …. ನಾನು ಈ ಕೆಲಸವನ್ನು ಬಿಟ್ಟು ನಿನ್ನ ಜೊತೆ ಬರುವುದು ಸಾಧ್ಯವಿಲ್ಲ…. ಅದೂ ಅಲ್ಲದೇ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಮತ್ತು ಚಿಕಿತ್ಸೆ ಕೊಡಿಸಲು ಹೆಚ್ಚು ಹಣ ಬೇಕಲ್ಲವೇ ನಮ್ಮಲ್ಲಿ ಅಷ್ಟು ಹಣ ಇಲ್ಲವಲ್ಲ”…. ಎಂದು ಚಿಂತಿತಳಾಗಿ ಅಕ್ಕನನ್ನು ಕೇಳಿದಳು.  ತಂಗಿಯು ಕೇಳಿದ ಪ್ರಶ್ನೆಗಳಿಗೆ….”ತೋಟದ ಸಾಹುಕಾರರು ನಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ…. ಅವರ ಕಾರಿನಲ್ಲಿಯೇ ನಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದು ಕೂಡಾ ತಿಳಿಸಿದ್ದಾರೆ…. ನೋಡೋಣ ….ಚಿಕಿತ್ಸೆಯ ಖರ್ಚಿಗೆ ಹಣವನ್ನು ಅವರು ಕೊಡಬಹುದು…. ಅಮ್ಮನನ್ನು ಕರೆದುಕೊಂಡು ಹೋಗಲು ಜೊತೆಗೆ ಬಾವನನ್ನು ಬರುವಂತೆ ಕೇಳಿಕೊಳ್ಳುತ್ತೇನೆ…. ನೀನು ಹೆಚ್ಚು ಯೋಚನೆ ಮಾಡಬೇಡ…. ನೀನೊಬ್ಬಳೇ ಇಲ್ಲಿರುವುದನ್ನು ಯೋಚಿಸಿ ನನ್ನ ಮನಸ್ಸು ಸದಾ ಚಿಂತೆಗೆ ಒಳಗಾಗುತ್ತಿದೆ…. ನಮ್ಮ ಅನಿವಾರ್ಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀನು ಒಬ್ಬಳೇ ಇಲ್ಲಿದ್ದು ಅಮ್ಮನ ಕೆಲಸವನ್ನು ಕೂಡ ಮಾಡುತ್ತಿದ್ದೀಯಾ….. ನನ್ನ ಜೊತೆಗೆ ಹೆಗಲುಕೊಟ್ಟು ನಿಂತಿರುವ ನೀನು ಇಷ್ಟು ಚಿಕ್ಕ ವಯಸ್ಸಿಗೆ ನನಗಿಂತ ದೊಡ್ಡವಳಾಗಿ ಬಿಟ್ಟೆ”….. ಎಂದು ಹೇಳುತ್ತಾ ತಂಗಿಯನ್ನು ಬಿಗಿಯಾಗಿ ಅಪ್ಪಿಕೊಂಡಳು…. ಅಕ್ಕ ಈಗ ನಮಗೆ ನಾವೇ ಇರುವುದು…. ಹಾಗಾಗಿ ನಾವಿಬ್ಬರೂ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು…. ನೀನು ಧೈರ್ಯವಾಗಿ ನಮ್ಮ ತಾಯಿಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ…. ನನಗೆ ಈಗ ಒಬ್ಬಳೇ ಇದ್ದು ಅಭ್ಯಾಸವಾಗಿ ಹೋಗಿದೆ”….ಎಂದಳು. ಇಬ್ಬರ ಕಣ್ಣುಗಳೂ ಹನಿ ಗೂಡಿದವು. ಕೆಲಸಕ್ಕೆ ಹೋಗುವ ಸಮಯವಾಗಿದ್ದರಿಂದ ತಂಗಿ ಮನೆಗೆ ಬೇಗ ಹಾಕಿ ಹೊರಟಳು. ಅಕ್ಕನೂ ಬಸ್ ನಿಲ್ದಾಣದ ಕಡೆಗೆ ಹೊರಟಳು.  ಹಿಂತಿರುಗಿ ಸಕಲೇಶಪುರಕ್ಕೆ ಹೋಗಲು ಮಧ್ಯಾಹ್ನದ ಬಸ್ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಹಾಗಾಗಿ ಆ ಹುಡುಗಿ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಕುಳಿತುಕೊಂಡು ತನ್ನ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಆಗ ಅಲ್ಲಿ ಹಾದು ಹೋಗುತ್ತಿದ್ದ ಕೆಲಸಗಾರರು ಈ ಹುಡುಗಿಯನ್ನು ನೋಡಿ…. “ಸುಮತಿ ಟೀಚರ್ ಹೇಗಿದ್ದಾರೆ?”…. ಎಂದು ವಿಚಾರಿಸಿಕೊಳ್ಳುತ್ತಿದ್ದರು…. “ಪರವಾಗಿಲ್ಲ…. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…. ಸುಧಾರಿಸಿಕೊಳ್ಳುತ್ತಿದ್ದಾರೆ”…. ಎಂದು ಉತ್ತರ ಕೊಡುತ್ತಿದ್ದಳು. ಅದೇ ರೀತಿ ತಮ್ಮ ಕುಟುಂಬಕ್ಕೆ ಆಪ್ತರಾದ ಮಲಯಾಳಿ ಡ್ರೈವರ್ ಹಾಗೂ ಅವರ ಪತ್ನಿ ಆ ದಾರಿಯಲ್ಲಿ ಬಂದರು. ಸುಮತಿಯ ಎರಡನೇ ಮಗಳನ್ನು ಕಂಡು ಅವಳ ಬಳಿಗೆ ಬಂದು, ಸುಮತಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರು. ಅವರು ತಮ್ಮ ಕುಟುಂಬಕ್ಕೆ ಆಪ್ತರಾಗಿದ್ದ ಕಾರಣ ಎಲ್ಲಾ ವಿಚಾರವನ್ನು ಆ ಹುಡುಗಿ ಅವರಿಗೆ ತಿಳಿಸಿದಳು. ಅವರಿಬ್ಬರೂ ಕೂಡ ಎಸ್ಟೇಟಿನ ಸಾಹುಕಾರರು ಹಾಗೂ ಅಮ್ಮನನ್ನು ಕೊಂಡಾಡಿದರು…. “ನೀನು ಯಾವುದಕ್ಕೂ ಹೆದರಬೇಡ…. ನಮ್ಮ ಸಾಹುಕಾರರು ಮತ್ತು ಅಮ್ಮ ಇದ್ದಾರೆ…. ಅವರಿಬ್ಬರೂ ಬಹಳ ಒಳ್ಳೆಯವರು…. ದಯಾಳುಗಳು…. ಎಲ್ಲರಿಗೂ ಸಹಾಯ ಮಾಡುವ ಗುಣ ಉಳ್ಳವರು…. ನೀನು ಧೈರ್ಯವಾಗಿ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ….. ಎಲ್ಲವೂ ಒಳ್ಳೆಯದಾಗಲಿ”…. ಎಂದು ಹೇಳಿ ಆ ಹುಡುಗಿಯ ತಲೆಯನ್ನು ನೇವರಿಸಿ ಅಲ್ಲಿಂದ ಹೊರಟುಹೋದರು.  ಮಧ್ಯಾಹ್ನದ ಹನ್ನೆರಡು ಗಂಟೆಯ ಬಸ್ಸು ಬಂದಿತು. ಬಸ್ಸಿನಲ್ಲಿ ಹುಡುಗಿಯು ಸಕಲೇಶಪುರದ ಕಡೆಗೆ ಹೊರಟಳು. ಅವಳು ಆಶ್ರಮಕ್ಕೆ ಬಂದಾಗ ಅವಳ ಗೆಳತಿ ಮಧ್ಯಾಹ್ನದ ಅಡುಗೆಯನ್ನು ಮಾಡಿ ಮುಗಿಸಿ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದಳು. ಸುಮತಿಯ ಮಗಳನ್ನು ಕಂಡೊಡನೆ, ಹೋದ ವಿಷಯ ಏನಾಯ್ತು ಎಂದು ಉತ್ಸುಕತೆಯಿಂದ ಕೇಳಿದಳು. ಸಾಹುಕಾರರು ಮತ್ತು ಅವರ ಪತ್ನಿ ಹೇಳಿದ ವಿಷಯವನ್ನು ತಿಳಿಸಿದಳು. ಅವಳಿಗೂ ಸಂತೋಷವಾಯಿತು…. “ಸರಿ ನಡಿ ಊಟ ಮಾಡು…. ಆಸ್ಪತ್ರೆಗೆ ಹೋಗಿ ನಿನ್ನ ತಾಯಿಗೆ ಈ ವಿಷಯವನ್ನ ತಿಳಿಸು…. ಅವರಿಗೂ ಬಹಳ ಸಂತೋಷವಾಗುತ್ತದೆ”…. ಎಂದಳು. ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡಿದರು. ನಂತರ ಸುಮತಿಯ ಮಗಳು ತಾಯಿಯನ್ನು ನೋಡಲು ಆಸ್ಪತ್ರೆಗೆ ಹೊರಟಳು. ತಾಯಿಯ ಬಳಿಗೆ ಹೋಗಿ ಈ ಸಂತಸದ ಸುದ್ದಿ ಯಾವಾಗ ತಿಳಿಸುತ್ತೇನೋ ಎನ್ನುವ ತವಕ ಅವಳಲ್ಲಿತ್ತು. ಹಾಗಾಗಿ ಬೇಗನೇ ಹೆಜ್ಜೆ ಹಾಕಿದಳು. ಲಘುಬಗೆಯಿಂದ ಆಸ್ಪತ್ರೆಯ ಮೆಟ್ಟಿಲು ಹತ್ತಿದಳು. ಓಡು ನಡಿಗೆಯಲ್ಲಿ ವಾರ್ಡ್ ತಲುಪಿದಳು. ಸುಮತಿ ಆಸ್ಪತ್ರೆಯಿಂದ ದೊರೆತ ಮಧ್ಯಾಹ್ನದ ಊಟವನ್ನು ಮಾಡಿ, ಸಣ್ಣಗೆ ನಿದ್ರೆ ಮಾಡುತ್ತಿದ್ದಳು. ಯಾರೋ ಬಂದು ನಿಂತದ್ದು ಅರಿವಾಗಿ ಕಣ್ಣುಬಿಟ್ಟಳು. ಮಗಳ ಮುಖವನ್ನು ನೋಡಿದಳು ಅವಳು ಇಂದು ಬಹಳ ಖುಷಿಯಲ್ಲಿ ಇರುವಂತೆ ಕಂಡಿತು. ನಿಧಾನವಾಗಿ ಎದ್ದು ಕುಳಿತು ….”ಮಗಳೇ ಊಟ ಮಾಡಿದೆಯಾ?”…. ಎಂದು ಕೇಳಿದಳು ಅದಕ್ಕುತ್ತರವಾಗಿ ‘ಹೂಂ’ ಎಂದು ಹೇಳಿ ತಾಯಿಯನ್ನು ಬಿಗಿಯಾಗಿ ಅಪ್ಪಿಕೊಂಡಳು. 

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-125 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಗೆ ಡಯಾಲಿಸಿಸ್‌ ಮಾಡಿಸಲು ಮಗಳ ಪ್ರಯತ್ನ ಮರುದಿನ ಬೆಳಿಗ್ಗೆ ಸುಮತಿಯ ಎರಡನೇ ಮಗಳು ತನ್ನ ತಾಯಿಯ ಚಿಕಿತ್ಸೆಯನ್ನು ಮಾಡುತ್ತಿದ್ದ ವೈದ್ಯರ ಬಳಿಗೆ ಹೋದಳು. ಅವಳನ್ನು ನೋಡಿದ ವೈದ್ಯರು…. ಏನಮ್ಮ ನಿನ್ನ ತಾಯಿ ಹೇಗಿದ್ದಾರೆ?…. ಎಂದು ಕೇಳಿದರು. ಹಿಂದಿನ ದಿನ ತಂಗಿಯು ಹೇಳಿದ್ದ ವಿಚಾರವನ್ನು ಮಾತನಾಡಲೆಂದು ಅವಳು ವೈದ್ಯರಲ್ಲಿಗೆ ಬಂದಿದ್ದಳು…. _ಸರ್ ನನ್ನ ತಾಯಿಯ ಆರೋಗ್ಯ ಸುಧಾರಿಸಲು ಬೇರೆ ಯಾವ ಚಿಕಿತ್ಸೆಯೂ ಇಲ್ಲವೇ?”… ಎಂದು ಕೇಳಿದಳು. ಆಗ ವೈದ್ಯರು…. “ಇದೆಯಮ್ಮಾ….. ಆದರೆ ಅದು ಬಹಳ ದುಬಾರಿ…. ನಿನ್ನ ತಾಯಿಯ ಆಂತರಿಕ ಅಂಗಾಂಗಗಳೆಲ್ಲವೂ ತಮ್ಮ ಕಾರ್ಯವನ್ನು ನಿರ್ವಹಿಸಲು ವಿಫಲವಾಗಿವೆ….. ಆದರೆ ಆಗಾಗ ಡಯಾಲಿಸಿಸ್ ಮಾಡಿಸುವ ಮೂಲಕ ನಿನ್ನ ತಾಯಿಯ ಆರೋಗ್ಯವನ್ನು ಸ್ವಲ್ಪ ಹೆಚ್ಚು ಕಾಲ ಸುಧಾರಿಸಿಕೊಳ್ಳುವಂತೆ ಮಾಡಬಹುದು”….. ಎಂದು ವೈದ್ಯರು ಹೇಳಿದ ಈ ವಿಚಾರ ಆ ಹುಡುಗಿಗೆ ಸರಿಯಾಗಿ ತಿಳಿದಿರಲಿಲ್ಲ ಹಾಗಾಗಿ…._ “ಡಯಾಲಿಸಿಸ್ ಎಂದರೇನು, ಸರ್?”… ಎಂದು ಕೇಳಿದಳು….”ನಮ್ಮ ಶರೀರವನ್ನು ನಿರಂತರವಾಗಿ ಶುದ್ಧೀಕರಣಗೊಳಿಸಲು ಮುಖ್ಯವಾಗಿ ಕಿಡ್ನಿಗಳು ಕೆಲಸ ಮಾಡಬೇಕು…. ಅವುಗಳು ಕೆಲಸ ಮಾಡಲು ವಿಫಲವಾದಾಗ ರಕ್ತದಲ್ಲಿನ ವಿಷಕಾರಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಕೃತಕವಾಗಿ ಫಿಲ್ಟರ್ ಮಾಡಿ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಡಯಾಲಿಸಿಸ್ ಎಂದು ಕರೆಯುತ್ತಾರೆ…. ಇದನ್ನು ಮಾಡಿಸಿದರೆ ಇನ್ನೂ ಸ್ವಲ್ಪ ಹೆಚ್ಚು ಕಾಲ ನಿನ್ನ ತಾಯಿ ಜೀವಂತವಾಗಿರಬಹುದು…. ಆದರೆ ಇದನ್ನು ಆಗಾಗ ಮಾಡಿಸುತ್ತಿರಬೇಕಾಗುತ್ತದೆ…. ಇದರ ಖರ್ಚು ಅಧಿಕ…. ಎಂದರು”….. “ಹಾಗಾದರೆ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಬಹುದಲ್ಲವೇ?”… ಎಂದು ಕೇಳಿದಳು.  ಅವಳ ಮಾತಿಗೆ,… “ಹೌದು ಆಕೆಯು ಹೆಚ್ಚಿನ ಕಾಲ ಬದುಕುಳಿಯಬೇಕಾದರೆ ಈ ಚಿಕಿತ್ಸೆಯನ್ನು ನಿಮ್ಮ ತಾಯಿಗೆ ಕೊಡಿಸಲೇಬೇಕು”…. ಎಂದಾಗ….” ಸರ್ ದಯವಿಟ್ಟು ಆದಷ್ಟು ಬೇಗ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಿಸಿ”…. ಎಂದು ಆ ಹುಡುಗಿ ಕೇಳಿಕೊಂಡಾಗ, ಅವಳ ಮುಗ್ದತೆಯನ್ನು ಅರಿತ ವೈದ್ಯರು…. “ಮಗು ಈ ಚಿಕಿತ್ಸೆಯನ್ನು ಇಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೊಡಲು ಸಾಧ್ಯವಿಲ್ಲ…. ಅದಕ್ಕೆ ಬೇಕಾದ ಉಪಕರಣಗಳು ಇಲ್ಲಿಲ್ಲ…. ಈ ಚಿಕಿತ್ಸೆಯನ್ನು ಕೊಡಲು ವಿಶೇಷ ಯಂತ್ರವು ಬೇಕಾಗಿದೆ…. ಇದು ಬಹಳ ಅಪರೂಪಕ್ಕೆ ಈ ಚಿಕಿತ್ಸೆಗೆಂದೇ ವಿಶೇಷವಾದ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ”…. ಎಂದು ವೈದ್ಯರು ಹೇಳಿದಾಗ…. “ಯಾವ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಕೊಡಬಹುದು?… ಎಂದು ಕೇಳಿದಳು,…. “ಬೆಂಗಳೂರಿನ ಕಿಡ್ನಿ ಫೌಂಡೇಶನ್ ಎನ್ನುವ ಆರೋಗ್ಯ ಸಂಸ್ಥೆಯಲ್ಲಿ ಮಾತ್ರ ಈ ಚಿಕಿತ್ಸೆ ಲಭ್ಯವಿದೆ…. ಸಾಧ್ಯವಾದರೆ ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಮ್ಮ”…. ಎಂದು ವೈದ್ಯರು ಹೇಳಿದರು.‌ ಅದನ್ನು ಕೇಳಿದ ಹುಡುಗಿಯ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು. ಏನು ಮಾಡಬೇಕು ಎನ್ನುವುದು ಹೊಳೆಯಲಿಲ್ಲ. ವೈದ್ಯರಿಗೆ ಧನ್ಯವಾದ ತಿಳಿಸಿ, ಕೊಠಡಿಯಿಂದ ಹೊರ ನಡೆದಳು.  ಆಸ್ಪತ್ರೆಯ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡು ಆಲೋಚನೆ ಮಾಡ ತೊಡಗಿದಳು. ಅಕ್ಕ-ಬಾವನಿಗೆ ಹೇಳಿದರೆ ಹೇಗೆ? ಅವರು ಏನಾದರೂ ಸಹಾಯ ಮಾಡಬಹುದೇ? ಹಾಗೆ ಯೋಚಿಸಿದಾಗ ಅವರಿಂದ ಅದು ಸಾಧ್ಯವಿಲ್ಲ ಎಂದು ಅವಳಿಗೆ ಅನಿಸಿತು. ಏಕೆಂದರೆ ಅವರು ಕೂಡ ಹೆಚ್ಚು ಹಣವಂತರಾಗಿರಲಿಲ್ಲ. ಬಾವ ಟಿಂಬರ್ ಕೆಲಸದಿಂದ ಬರುವ ಆದಾಯದಲ್ಲಿ ಅಕ್ಕ ಮತ್ತು ಮಕ್ಕಳ ಖರ್ಚು ವೆಚ್ಚ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಿದ್ದಾರೆ.  ತಾಯಿಯ ತಮ್ಮಂದಿರು ಹಾಗೂ ನೆಂಟರಿಷ್ಟರನ್ನು ಕೇಳುವಂತೆ ಇಲ್ಲ. ತಾಯಿಯ ಎರಡನೇ ತಮ್ಮ ಅವರ ಕೈಲಿ ಆಗುವಷ್ಟು ಮತ್ತು ಅವರ ಶಕ್ತಿಯನ್ನೂ ಮೀರಿ ಹಲವು ಸಲ ನಮಗೆ ಸಹಾಯ ಮಾಡಿದ್ದಾರೆ. ಇನ್ನು ನೆಂಟರಿಷ್ಟರು ಇದ್ದರೂ ಕೂಡ ಅಮ್ಮನ ಕಷ್ಟಕರ ಜೀವಿತ ಹಾಗೂ ಅಪ್ಪ ತೀರಿ ಹೋದ ನಂತರ ಒಬ್ಬರ ಸುಳಿವೂ ಇಲ್ಲ. ನೆಂಟರಿಷ್ಟರಾದ ಯಾರನ್ನೂ ಆಶ್ರಯಿಸದೇ ಸ್ವಾಭಿಮಾನದಿಂದ ಬದುಕಿದ ತಾಯಿ ನಮಗೂ ಅದನ್ನೇ ಕಲಿಸಿದ್ದಾರೆ. ಇನ್ನು ಉಳಿದಿರುವುದು ನಮಗೆ ಆಶ್ರಯವಿತ್ತು ನಮ್ಮ ಕಷ್ಟಕ್ಕೆ ಸದಾ ಹೆಗಲಾಗಿ ನಿಂತಿರುವವರು ನಮ್ಮ ಎಸ್ಟೇಟಿನ ದಯಾಳುವಾದ ಸಾಹುಕಾರರು ಮತ್ತು ಅವರ ಪತ್ನಿ ‘ಅಮ್ಮ’. ಅವರಲ್ಲಿ ಈ ಬಗ್ಗೆ ತಿಳಿಸಿ ನೋಡೋಣ. ಏಕೆಂದರೆ ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದಲ್ಲದೇ, ಈವರೆಗೂ ಅಮ್ಮನಿಗೆ ಬೇಕಾದ ಇನ್ಸುಲಿನ್ ಚುಚ್ಚುಮದ್ದು ಹಾಗೂ ಕಣ್ಣಿನ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮತ್ತು ಇನ್ನಿತರೆ ಚಿಕಿತ್ಸೆಗಳಿಗೆ ಅವರು ಸಹಾಯ ಮಾಡಿದ್ದಾರೆ. ಬಹುಶಃ ಈ ವಿಚಾರ ತಿಳಿದರೆ ಖಂಡಿತ ನಮಗೆ ಏನಾದರೂ ಒಂದು ಸಹಾಯ ಮಾಡಿಯೇ ಮಾಡುತ್ತಾರೆ ಎಂಬ ವಿಚಾರ ಮನಸ್ಸಿಗೆ ಬಂದಾಗ, ನನ್ನ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿ ಇರುವಾಗಲೇ ನಾನು ಎಸ್ಟೇಟ್ ಗೆ ಹೋಗಿ ಅಲ್ಲಿ ಸಾಹುಕಾರರನ್ನು ಕಂಡು ಅವರಲ್ಲಿ ಈ ಬಗ್ಗೆ ಮಾತನಾಡಿ ವಿನಂತಿಸಿಕೊಳ್ಳುತ್ತೇನೆ. ಅವರು ಖಂಡಿತ ನಮಗೆ ಸಹಾಯ ಮಾಡುತ್ತಾರೆ ಎನ್ನುವ ಭರವಸೆ ಮೂಡಿದ ಕೂಡಲೇ ಕುಳಿತಲ್ಲಿಂದ ಎದ್ದು ನೇರವಾಗಿ ವಾರ್ಡಿಗೆ ಹೋದಳು.  ಈ ವಿಷಯವನ್ನು ತಾಯಿಗೆ ತಿಳಿಸಲಿಲ್ಲ. ಏನಾದರೂ ಒಂದು ವ್ಯವಸ್ಥೆ ಆದ ಮೇಲೆ ತಿಳಿಸಿದರಾಯ್ತು. ಈಗಲೇ ಹೇಳಿ ಮನಸ್ಸಿನಲ್ಲಿ ಇಲ್ಲದ ಆಸೆಯನ್ನು ತರಿಸುವುದು ಬೇಡವೆಂದು ತೀರ್ಮಾನಿಸಿದಳು. ತಾಯಿ ಊಟ ಮಾಡಿದ ನಂತರ ಅಲ್ಲಿಂದ ಆಶ್ರಮಕ್ಕೆ ಹೊರಟಳು. ಅವಳ ಕಾಲೇಜಿನ ಕಲಿಕೆ ಆಶ್ರಮದ ಮಕ್ಕಳಿಗೆ ಪಾಠ ಮಾಡುವುದು ಜೊತೆಗೆ ಅಮ್ಮನ ಆರೈಕೆ ಅವಳ ಗೆಳತಿಯ ಸಹಾಯದಿಂದ ನಿರಾತಂಕವಾಗಿ ನಡೆಯುತ್ತಿತ್ತು. ಆಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ ಅವರನ್ನು ಭೇಟಿ ಮಾಡಿದಳು. ನಾಳೆ ತಾನು ಕಾಲೇಜಿಗೆ ರಜೆ ಹಾಕಿ ಎಸ್ಟೇಟಿಗೆ ಹೋಗಿ ಸಾಹುಕಾರರನ್ನು ಹಾಗೂ ಅವರ ಪತ್ನಿ ‘ಅಮ್ಮ’ನನ್ನು ಕಂಡು ತನ್ನ ತಾಯಿಯ ಡಯಾಲಿಸಿಸ್ ಗೆ ಸಹಾಯವನ್ನು ಕೋರಿ, ಅಲ್ಲಿರುವ ತನ್ನ ತಂಗಿಯನ್ನು ಕಂಡು ಅವಳಿಗೆ ವಿಷಯ ತಿಳಿಸಿ ಸಂಜೆ ಪುನಹ ಆಶ್ರಮಕ್ಕೆ ಬರುರುವುದಾಗಿ ವಿನಂತಿಸಿಕೊಂಡು ಅವರ ಅನುಮತಿಯನ್ನು ಪಡೆದಳು. ಆತ ಒಬ್ಬ ದಯಾಳು ಮನುಷ್ಯನಾದ ಕಾರಣ ಹಾಗೂ ಸುಮತಿಯ ಮಗಳ ಜವಾಬ್ದಾರಿಯುತ ನಡೆಯನ್ನು ಮೆಚ್ಚುತ್ತಿದ್ದ ಕಾರಣ ಅವಳಿಗೆ ತನ್ನಿಂದಾದ ಎಲ್ಲಾ ಸಹಾಯವನ್ನು ಮಾಡುತ್ತಿದ್ದರು. ತನ್ನ ಗೆಳತಿಗೂ ಈ ವಿಷಯವನ್ನು ತಿಳಿಸಿದಳು. ಅವಳು…. “ನಿಶ್ಚಿಂತೆಯಿಂದ ಹೋಗಿ ಬಾ… ಇಲ್ಲಿನ ಎಲ್ಲಾ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ…. ಮೊದಲು ನಿನ್ನ ತಾಯಿಯ ಆರೋಗ್ಯದ ಕಡೆ ನಿನ್ನ ಗಮನವನ್ನು ಹರಿಸು…. ಆದಷ್ಟು ಬೇಗ ನಿನ್ನ ತಾಯಿ, ಚಿಕಿತ್ಸೆಯನ್ನು ಪಡೆಯುವಂತಾಗಲಿ”… ಎಂದಳು.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-124 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಮೊಮ್ಮಕ್ಕಳು ಬಂದ ಖುಶಿ ಆಸ್ಪತ್ರೆಗೆ ಬಂದ ಸುಮತಿಯ ಎರಡನೇ ಮಗಳು ಸಂಜೆ ವಾರ್ಡಿಗೆ ಕಾಫಿ-ಬ್ರೆಡ್ ಬಂದಾಗ ಸರತಿಯಲ್ಲಿ ನಿಂತು ಪಡೆದುಕೊಂಡು ಅಮ್ಮನಿಗೆ ಕೊಟ್ಟಳು. ಕಾಫಿ ಕುಡಿದು ತಾಯಿ ಮಲಗಿದ ನಂತರ ವಾರ್ಡಿನ ಹೊರಗಿನ ವೆರಾಂಡಾದ ಮೆಟ್ಟಿಲಿನ ಮೇಲೆ ಕುಳಿತು ತನ್ನ ಪಠ್ಯ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಓದಿನಲ್ಲಿ ಸಂಪೂರ್ಣ ಮಗ್ನಳಾಗಿದ್ದ ಅವಳ ಕುತ್ತಿಗೆಯನ್ನು ಎರಡು ಪುಟ್ಟ ಕೈಗಳು ಬಿಗಿಯಾಗಿ ಅಪ್ಪಿಕೊಂಡವು. ತಿರುಗಿ ನೋಡಿದಾಗ ತನ್ನ ಹಿಂದೆ ತುಂಟತನದಿಂದ ನಗುತ್ತಾ ನಿಂತಿದ್ದ ಅಕ್ಕನ ಮಗನನ್ನು ಕಂಡಳು. ತಲೆ ಎತ್ತಿ ನೋಡಿದಾಗ ಬಾವ ಹಾಗೂ ಮಗುವನ್ನು ಎತ್ತಿಕೊಂಡು ನಿಂತಿರುವ ಅಕ್ಕನನ್ನು ಕಂಡಳು. ಅವಳಿಗೆ ಬಹಳ ಆನಂದವಾಯಿತು. ಅಕ್ಕನ ಮಗನನ್ನು ಎತ್ತಿಕೊಂಡು…”ಬನ್ನಿ…ಅಮ್ಮ ಈಗತಾನೇ ಮಲಗಿದ್ದಾಳೆ”…ಎಂದು ಹೇಳುತ್ತಾ ಅಕ್ಕ-ಬಾವನನ್ನು ಒಳಗೆ ಕರೆದುಕೊಂಡು ನಡೆದಳು. ಅಕ್ಕನ ಕಂಕುಳಲ್ಲಿ ಇದ್ದ ಪುಟ್ಟ ಮಗು ಚಿಕ್ಕಮ್ಮನ ಕಡೆಗೆ ಎತ್ತಿಕೋ ಎನ್ನುವಂತೆ ಎರಡೂ ಕೈಗಳನ್ನು ಚಾಚಿತು. ಅಕ್ಕನ ಮಗನ ಕೆನ್ನೆಯನ್ನು ಮೃದುವಾಗಿ ಸವರುತ್ತಾ… “ಪುಟ್ಟಾ ನೀನು ಇಲ್ಲಿ ಕುಳಿತು ಅಜ್ಜಿಯನ್ನು ಎಬ್ಬಿಸು….ನಾನು ನಿನ್ನ ತಂಗಿಯನ್ನು ಎತ್ತಿಕೊಳ್ಳುತ್ತೇನೆ”… ಎಂದ ಚಿಕ್ಕಮ್ಮನ ಮಾತಿಗೆ… “ಹೂಂ”….ಎಂದ ಆ ಮಗು ಖುಷಿಯಿಂದ ಅಜ್ಜಿಯ ಪಕ್ಕ ಕುಳಿತು…..”ಅಮ್ಮಾಮ್ಮಾ…ಣೀಚೇ…ಞಾಯೀ.. ವನ್ನಿಟ್ಟುಂಡ್”….( ಅಜ್ಜೀ ಎದ್ದೇಳು ನಾನು ಬಂದಿದ್ದೇನೆ) ಎಂದು ತೊದಲು ನುಡಿಯಲು, ಮೊಮ್ಮಗನ ಧ್ವನಿ ಕೇಳಿ ಎಚ್ಚೆತ್ತ ಸುಮತಿ ಎದ್ದು ಕುಳಿತು ಮೊಮ್ಮಗನನ್ನು ಅಪ್ಪಿಕೊಂಡಳು. ಹಿರಿಯ ಮಗಳು, ಪುಟ್ಟ ಮೊಮ್ಮಗಳು ಮತ್ತು ಅಳಿಯ ಎಲ್ಲರನ್ನೂ ಕಂಡು ಸುಮತಿ ಹರ್ಷಿತವಾದಳು. ಅಳಿಯನನ್ನು ಉದ್ದೇಶಿಸಿ ಅಲ್ಲಿಯೇ ಇದ್ದ ಸ್ಟೂಲ್ ನ ಮೇಲೆ ಕುಳಿತುಕೊಳ್ಳುವಂತೆ ಹೇಳಿದಳು.  ಅಳಿಯ ‘ಹ್ಮೂ’ಎಂದು ತಲೆಯಾಡಿಸಿ ಸ್ಟೂಲ್ ಮೇಲೆ ಕುಳಿತುಕೊಂಡ. ಹಿರಿಯಮಗಳು ಅಮ್ಮನ ಪಕ್ಕದಲ್ಲಿಯೇ ಕುಳಿತುಕೊಂಡಳು. ಮೊಮ್ಮಗ ಅಜ್ಜಿಯ ತೊಡೆಯನ್ನು ಏರಿ ಕುಳಿತುಕೊಂಡ….”ಅಜ್ಜಿಗೆ ಹುಷಾರಿಲ್ಲ ಕಂದಾ… ಬೆಡ್ ಮೇಲೆ ಕುಳಿತುಕೋ”…. ಎಂದು ಸುಮತಿಯ ಅಳಿಯ ತನ್ನ ಮಗನಿಗೆ ಹೇಳಿದರೂ ಅವನು ಕೇಳಲಿಲ್ಲ. …”ಉಹೂಂ… ಞಾ…. ಇವೀಡೆಯೇ ಇಚ್ಚಾಂ”… (ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ) ಎಂದು ಹೇಳುತ್ತಾ ಅಜ್ಜಿಯ ಮುಖವನ್ನೊಮ್ಮೆ ನೋಡಿದ. ಸುಮತಿ ಪ್ರೀತಿಯಿಂದ ಮೊಮ್ಮಗನ ಕೆನ್ನೆಗೆ ಹೂ ಮುತ್ತೊಂದನ್ನು ಕೊಟ್ಟು….”ಕುಳಿತುಕೊಳ್ಳಲಿ ತೊಂದರೆಯಿಲ್ಲ”…. ಎಂದು ಹೇಳುತ್ತಾ ಮೊಮ್ಮಗನ ತಲೆಯನ್ನು ನೇವರಿಸಿದಳು.‌ ಅಳಿಯ ಒಂದು ಕ್ಷಣ ಏನನ್ನೋ ಯೋಚಿಸುತ್ತಾ …”ಅಮ್ಮಾ ಹೇಗಿದ್ದೀರಿ?…ಎಂದು ಕೇಳಿದಾಗ….”ಪರವಾಗಿಲ್ಲಪ್ಪ”… ಎಂದು ಉತ್ತರಿಸಿದಳು ಸುಮತಿ…. “ಡಾಕ್ಟರ್ ಏನು ಹೇಳಿದರು ಅಮ್ಮಾ”…..ಎಂದು ಹಿರಿಯ ಮಗಳು ಸುಮತಿಯನ್ನು ಕೇಳಲು,…”ಸ್ವಲ್ಪ ದಿನ ಇಲ್ಲಿದ್ದು ಔಷಧೋಪಚಾರ ತೆಗೆದುಕೊಂಡರೆ ಸರಿ ಹೋಗುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ”….ಎಂದು ಹೇಳುತ್ತಾ ಸುಮತಿ ಎರಡನೇ ಮಗಳ ಕಡೆಗೆ ನೋಡಿದಳು. ಅಕ್ಕನ ಮಗಳನ್ನು ಎತ್ತಿಕೊಂಡು ಅವಳನ್ನು ಮುದ್ದು ಮಾಡುತ್ತಿದ್ದ ಎರಡನೇ ಮಗಳ ಮುಖ ಅಮ್ಮನ ಮಾತು ಕೇಳಿ ಮ್ಲಾನವಾಯಿತು. ಇದನ್ನು ಗಮನಿಸಿದ ಹಿರಿಯ ಮಗಳು ತಂಗಿಯ ಕಡೆಗೆ ನೋಡುತ್ತಾ….”ಏನು ಹೇಳಿದರು ಡಾಕ್ಟರ್?…ನೀನೇಕೆ ಹೀಗೆ ಇದ್ದಕ್ಕಿದ್ದ ಹಾಗೆ ಮಂಕಾದೆ”…. ಎಂದು ಕೇಳಲು ಆಮೇಲೆ ಹೇಳುತ್ತೇನೆ ಎಂಬಂತೆ ಸನ್ನೆ ಮಾಡಿದಳು. ಸುಮತಿ ಇದ್ಯಾವುದನ್ನೂ ಗಮನಿಸದೇ ಮೊಮ್ಮಗನ ಬಾಲಭಾಷೆಯನ್ನು ಕೇಳುವುದರಲ್ಲೇ ಮಗ್ನಳಾಗಿದ್ದಳು.  ತನ್ನ ಅಣ್ಣ ಅಜ್ಜಿಯ ತೊಡೆಯ ಮೇಲೆ ಕುಳಿತು ಮುದ್ದು ಮಾಡಿಸಿಕೊಳ್ಳುತ್ತಿರುವುದನ್ನು ಕಂಡ ಅವನ ಪುಟ್ಟ ತಂಗಿ ತಾನೂ ಅಜ್ಜಿಯ ಬಳಿ ಹೋಗುತ್ತೇನೆ ಎನ್ನುವಂತೆ ಚಿಕ್ಕಮ್ಮನ ತೋಳಿಂದ ಕೆಳಗೆ ಇಳಿಯುವ ಪ್ರಯತ್ನ ಮಾಡುತ್ತಿದ್ದಳು. ಅದನ್ನು ಗಮನಿಸಿದ ಸುಮತಿ…. “ಬಾ ನನ್ನ ಮುದ್ದು ಮೊಮ್ಮಗಳೇ…. ಅಜ್ಜಿಯ ತೊಡೆ ಮೇಲೆ ಕುಳಿತುಕೋ”… ಎಂದು ಹೇಳುತ್ತಾ ಮೊಮ್ಮಗಳನ್ನು ಎತ್ತಿಕೊಂಡು ಮಗುವಿನ ಕೆನ್ನೆಗೆ ಮುತ್ತಿಟ್ಟಳು. ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಾ ಸುಮತಿ ತನ್ನ ಅನಾರೋಗ್ಯದ ಆಯಾಸವನ್ನು ಮರೆತಳು. ಅವರಿಬ್ಬರನ್ನು ಮುದ್ದಾಡುತ್ತಾ ಅವಳಿಗೆ ಸಮಯ ಹೋದದ್ದೇ ತಿಳಿಯಲಿಲ್ಲ. ವಾರ್ಡಿನ ಬಾಗಿಲಿನ ಮುಂದೆ ಆಸ್ಪತ್ರೆಯ ಊಟದ ತಳ್ಳುಗಾಡಿ ಬಂದು ನಿಂತಿತು. ಅಡುಗೆಯವ…..” ಎಲ್ಲರೂ ಬನ್ನಿ ಬೇಗ ಊಟ ತೆಗೆದುಕೊಳ್ಳಿ”…. ಎಂದು ಕೂಗಿದ. ಸುಮತಿಯ ಎರಡನೇ ಮಗಳು ಊಟದ ತಟ್ಟೆ ಹಾಗೂ ಒಂದು ಬಟ್ಟಲನ್ನು ಹಿಡಿದು ಸರತಿಯ ಸಾಲಿನಲ್ಲಿ ನಿಂತಳು. ರಾತ್ರಿಯ ಊಟಕ್ಕೆ ಅನ್ನ ಮತ್ತು ಸಾರು ಇತ್ತು. ಮಧ್ಯಾಹ್ನದ ಊಟಕ್ಕೆ ಅನ್ನ ಸಾರು ಒಂದು ಮೊಟ್ಟೆ ಎರಡು ಬಾಳೆಹಣ್ಣು ಆಸ್ಪತ್ರೆಯಿಂದ ಕೊಡುತ್ತಿದ್ದರು. ಅಡುಗೆಯವರು ಊಟ ಬಡಿಸಿದಾಗ ಅದನ್ನು ತೆಗೆದುಕೊಂಡು ಬಂದು ಅಲ್ಲಿದ್ದ ಸಣ್ಣ ಕಪಾಟಿನ ಮೇಲೆ ಮತ್ತೊಂದು ತಟ್ಟೆಯಿಂದ ಮುಚ್ಚಿಟ್ಟಳು….”ಬನ್ನಿ ಮಕ್ಕಳೇ…. ಅಜ್ಜಿ ಊಟ ಮಾಡಲಿ…. ನಾವು ಈಗ ಮನೆಗೆ ಹೋಗೋಣ…. ನಾಳೆ ಮತ್ತೆ ಅಜ್ಜಿಯನ್ನು ನೋಡಲು ಅಮ್ಮನ ಜೊತೆ ನೀವಿಬ್ಬರೂ ಇಲ್ಲಿಗೆ ಬರಬಹುದು”… ಎಂದು ಹೇಳಿ, ಹೆಂಡತಿಯ ಕಡೆಗೆ ತಿರುಗಿ ಹೋಗೋಣವೇ ಎಂಬಂತೆ ನೋಡಿದ. ಪತಿಯ ನೋಟದ ಅರ್ಥವನ್ನು ಅರಿತ ಸುಮತಿಯ ಹಿರಿಯ ಮಗಳು ‘ಸರಿ’ ಎನ್ನುವ ತಲೆ ಆಡಿಸಿ ಮಗಳನ್ನು ಸುಮತಿಯ ಮಡಿಲಿನಿಂದ ಎತ್ತಿಕೊಂಡಳು.  ಆ ಪುಟ್ಟ ಮಗು ತಾನು ಬರುವುದಿಲ್ಲವೆಂದು ಹಠ ಮಾಡಿತು. ಮೊಮ್ಮಗನೂ ಅಜ್ಜಿಯ ಕುತ್ತಿಗೆಯನ್ನು ಬಿಗಿಯಾಗಿ ಅಪ್ಪಿಕೊಂಡು ಞಾಯಿ…ವನ್ನಿಲ್ಲ….ಅಮ್ಮಾಮ್ಮೆಡೆ ಕೂಡೆ ಇಚ್ಚಾಂ….(ನಾನು ಬರುವುದಿಲ್ಲ ಅಜ್ಜಿಯ ಜೊತೆ ಇಲ್ಲೇ ಇರುತ್ತೇನೆ) ಎಂದು ಹೇಳಿದ. ಅವನನ್ನು ಪುಸಲಾಯಿಸಿ ಕರೆದುಕೊಂಡು ಹೋಗಲು ಅಳಿಯ ಹರಸಾಹಸ ಪಡಬೇಕಾಯಿತು…._ನಾಳೆ ಮತ್ತೆ ಬರೋಣ”… ಎಂದು ಹೇಳಿದಾಗ ಒಲ್ಲದ ಮನಸ್ಸಿನಿಂದ ವಾರ್ಡಿನ ಬಾಗಿಲಿನಿಂದ ಆಚೆ ಮರೆಯಾಗುವವರೆಗೂ ಅಜ್ಜಿಯನ್ನೇ ನೋಡುತ್ತಾ ಅಪ್ಪ ಅಮ್ಮನ ಜೊತೆಗೆ ಹೋದ. ಮೊಮ್ಮಕ್ಕಳನ್ನು ಕಳುಹಿಸಲು ಸುಮತಿಗೆ ಮನಸ್ಸಿಲ್ಲದಿದ್ದರೂ ಮತ್ತೆ ಬರುತ್ತಾರೆ ಅಲ್ಲವೇ ಎನ್ನುವ ಕಾರಣದಿಂದ ಕಳುಹಿಸಿಕೊಟ್ಟಳು.‌….”ಅಮ್ಮ ಈಗ ಊಟ ಮಾಡು…. ನರ್ಸ್ ಬಂದು ಔಷಧಿ ಕೊಡುವ ಸಮಯವಾಯಿತು…. ತಡ ಮಾಡಬೇಡ”… ಎಂದ ಮಗಳ ಮಾತಿಗೆ ತಲೆಯಾಡಿಸಿ, ಊಟದ ತಟ್ಟೆಯನ್ನು ಅವಳ ಕೈಯಿಂದ ಪಡೆದಳು. ತಾಯಿ ಊಟ ಮುಗಿಸಿದ ನಂತರ ಅಲ್ಲಿಯೇ ತಟ್ಟೆಯಲ್ಲಿ ಕೈ ತೊಳೆಯಲು ನೀರನ್ನು ಕೊಟ್ಟಳು. ಆಸ್ಪತ್ರೆಯ ಕೈ ತೊಳೆಯುವ ಜಾಗ ಸ್ವಲ್ಪ ದೂರ ಇದ್ದಿದ್ದರಿಂದ ದಿನವೂ ಹೀಗೆ ತಟ್ಟೆಯಲ್ಲಿ ಕೈ ತೊಳೆಯಲು ಹೇಳುತ್ತಿದ್ದಳು. ನಂತರ ತಾನು ಹೋಗಿ ಶುಚಿಯಾಗಿ ತಟ್ಟೆಯನ್ನು ತೊಳೆದುಕೊಂಡು ಬಂದು ಇಡುತ್ತಿದ್ದಳು. ನರ್ಸ್ ಬಂದು ರಾತ್ರಿಯ ಔಷಧಿಯನ್ನು ಕೊಟ್ಟರು. ಔಷಧಿಯನ್ನು ಕುಡಿದು ಸುಮತಿ ದಿಂಬನ್ನು ಬೆನ್ನಿನ ಹಿಂದೆ ಇಟ್ಟು ಒರಗಿ ಕುಳಿತುಕೊಂಡಳು. ತಾಯಿಯ ಹಾಸಿಗೆ ಪಕ್ಕದಲ್ಲಿಯೇ ಸ್ಟೂಲನ್ನು ಎಳೆದುಕೊಂಡು ಮಗಳು ಕುಳಿತುಕೊಂಡು ತಾಯಿಯ ಹಸ್ತವನ್ನು ತನ್ನ ಎರಡೂ ಕರಗಳಲ್ಲಿ ಹಿಡಿದುಕೊಂಡ ತಾಯಿಯ ಮುಖವನ್ನೇ ಎವೆಯಿಕ್ಕದೇ ದಿಟ್ಟಿಸಿ ನೋಡಿದಳು.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-23 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಗೆಳತಿಯ ಸಹಾಯ ತಾಯಿ ಊಟ ಮಾಡಿದ ನಂತರ ಅಕ್ಕ ತಂಗಿಯರಿಬ್ಬರೂ ಹೊರಡಲು ಅನುವಾದರು….. “ಅಮ್ಮಾ…. ನಾವಿಬ್ಬರೂ ಹೊರಗೆ ಹೋಟೆಲ್ ನಲ್ಲಿ ಊಟ ಮಾಡುತ್ತೇವೆ….ತಂಗಿ ದೊಡ್ಡಕ್ಕನ ಮನೆಗೆ ಹೋಗುತ್ತಿದ್ದಾಳೆ…. ಅಕ್ಕನಿಗೂ ನೀನು ಆಸ್ಪತ್ರೆಯಲ್ಲಿ ಇರುವ ವಿಷಯ ತಿಳಿಸಬೇಕಿದೆ…. ಅಲ್ಲಿಂದ ಹಾಗೇ ನಾನು ಆಶ್ರಮಕ್ಕೆ ತೆರಳುತ್ತಿದ್ದೇನೆ…. ಸಂಜೆ ನಿನ್ನೊಂದಿಗಿರಲು ಬರುತ್ತೇನೆ…. ನನ್ನ ಗೆಳತಿಯೊಬ್ಬಳು ಅನಾಥಾಶ್ರಮದಲ್ಲಿ ಇರುವುದರಿಂದ ನಿನ್ನ ಜೊತೆ ನನಗಿರಲು ಅವಕಾಶವಾಗಿದೆ… ಆಕೆ ಇತ್ತೀಚೆಗೆ ಬಂದಿದ್ದರು ಕೂಡ ಎಷ್ಟೋ ವರ್ಷಗಳ ಗೆಳತಿಯಂತೆ ನನ್ನ ಸಹಾಯಕ್ಕೆ ಹೆಗಲು ಕೊಡುತ್ತಿದ್ದಾಳೆ… ಆದರೂ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ…. ಎಂದು ಮಗಳು ತಿಳಿಸಿದಾಗ, ಸರಿ ಎನ್ನುವಂತೆ ತಲೆಯಾಡಿಸಿದಳು ಸುಮತಿ. ಏನೋ ನೆನಪಾದಂತೆ ಅನಿಸಿ….. ಒಂದು ನಿಮಿಷ ಇರು ಮಗೂ… ನನ್ನ ವಿಧವಾ ಪೆನ್ಷನ್ ಬರುವುದಿದೆಯಲ್ಲ…. ಅದನ್ನು ಹೇಗೆ ಪಡೆದುಕೊಳ್ಳುವುದು?… ನಾನು ಇಲ್ಲಿ ಆಸ್ಪತ್ರೆಯಲ್ಲಿದ್ದೇನೆ…. ನನ್ನ ಸಹಿ ಇಲ್ಲದೆ ಆ ರೂ.50 ಸಿಗುವುದಿಲ್ಲ…. ನನ್ನ ಕಷ್ಟವನ್ನು ಅರಿತ ನಮ್ಮೂರಿನ ಪೋಸ್ಟ್ ಮಾಸ್ಟರ್ ನನ್ನಿಂದ ಅರ್ಜಿಯನ್ನು ಹಾಕಿಸಿ, ಈ ವಿಧವಾ ಪೆನ್ಷನ್ ಬರುವಂತೆ ಮಾಡಿದ್ದರು…. ಅವರ ಈ ಸಹಾಯವನ್ನು ನಾನೆಂದಿಗೂ ಮರೆಯುವುದಂತೆ ಇಲ್ಲ…. ಎಂದು ಸುಮತಿ ಅಂದಾಗ, ಮಕ್ಕಳಿಗೆ ತಾಯಿ ಹೇಳಿದ್ದು ಸರಿ ಅನಿಸಿತು. ತಾಯಿ ಈ ವಿಧವಾ ಪೆನ್ಷನ್ ಗಾಗಿ ಕಚೇರಿಗಳಿಗೆ ಓಡಾಡಿದ್ದು ನೆನಪಾಯಿತು…. ಅದಕ್ಕಾಗಿ ನಮ್ಮ ಹೋಬಳಿಯ ಪೋಸ್ಟ್ ಮಾಸ್ಟರ್ ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅವರ ಪರಿಶ್ರಮದಿಂದ ನಮ್ಮ ತಾಯಿಗೆ ತಿಂಗಳಿಗೆ 50 ರೂಪಾಯಿ ವಿಧವಾ ಪೆನ್ಷನ್ ಬರುತ್ತಿದೆ. ಕೆಲವೊಮ್ಮೆ ಪ್ರತಿ ತಿಂಗಳೂ ಬರದೇ ಎರಡು ಮೂರು ತಿಂಗಳಿನ ಹಣ ಒಟ್ಟಾಗಿ ಬರುತ್ತಿತ್ತು.  ಅದನ್ನು ತಾಯಿ ನಮಗಾಗಿ ತಿಂಡಿ ತಿನಿಸುಗಳನ್ನು ಮಾಡಿಕೊಡಲು ಅಥವಾ ಬಟ್ಟೆ-ಬರೆ ಕೊಡಿಸಲು ಖರ್ಚು ಮಾಡುತ್ತಿದ್ದಳು. ಈವರೆಗೂ ನಾವು ಗಮನಿಸಿದಂತೆ ನಮ್ಮ ತಾಯಿ ಅದರಿಂದ ಒಂದು ನಯಾ ಪೈಸೆಯನ್ನು ಕೂಡ ತನಗಾಗಿ ಖರ್ಚು ಮಾಡಿಕೊಂಡಿರಲಿಲ್ಲ. ಈ ಹಣವು ಕೂಡ ತಾಯಿಗೆ ಕೆಲವೊಮ್ಮೆ ಆಪದ್ಬಾಂಧವನಂತೆ ಸಹಾಯ ಮಾಡಿದ್ದೂ ಇದೆ. ಅದೂ ಕೂಡ ನಮಗಾಗಿ, ಎನ್ನುವುದನ್ನು ನೆನೆದಾಗ ಮಕ್ಕಳಿಬ್ಬರ ಕಣ್ಣುಗಳು ಹನಿ ಗೂಡಿದವು. ತಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಈಗಲೂ ನಮ್ಮ ತಾಯಿಗೆ ನಮ್ಮದೇ ಚಿಂತೆ ಅಲ್ಲವೇ?…..”ನೋಡೋಣ ಅಮ್ಮಾ…. ನಾನು ದೊಡ್ಡಕ್ಕನ ಮನೆಯಿಂದ ನಮ್ಮ ಮನೆಗೆ ಹಿಂತಿರುಗುವಾಗ ಪೋಸ್ಟ್ ಮಾಸ್ಟರ್ ಮನೆಗೆ ಹೋಗಿ ಈ ಬಗ್ಗೆ ತಿಳಿದುಕೊಳ್ಳುತ್ತೇನೆ”…. ಎಂದು ಮೂರನೇ ಮಗಳು ಹೇಳಿದಳು. ಸರಿ ಎನ್ನುವಂತೆ ತಲೆ ಆಡಿಸಿದಳು ಸುಮತಿ. ಅಕ್ಕತಂಗಿಯರಿಬ್ಬರೂ ಆಸ್ಪತ್ರೆಯಿಂದ ಹೊರ ನಡೆದರು.  ತಂಗಿಯ ಜೊತೆಗೆ ಬಸ್ ನಿಲ್ದಾಣದವರೆಗೂ ಬಂದು, ಅವಳನ್ನು ದೊಡ್ಡಕ್ಕನ ಮನೆಯ ಕಡೆಗೆ ಹೋಗುವ ಬಸ್ ಹತ್ತಿಸಿ ತಾನು ಆಶ್ರಮದ ಕಡೆಗೆ ನಡೆದಳು. ದೊಡ್ಡಕ್ಕನ ಮನೆಗೆ ಹೋದ ತಂಗಿಯು ಅಮ್ಮನ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದಳು. ಅಮ್ಮನ ಅನಾರೋಗ್ಯದ ಬಗ್ಗೆ ತಿಳಿದು ಅವಳಿಗೂ ಬಹಳ ಸಂಕಟವಾಯಿತು….. “ಬಾವ ಕೆಲಸಕ್ಕೆ ಹೋಗಿದ್ದಾರೆ…. ಸಂಜೆ ಅವರು ಬಂದ ನಂತರ ನಾನು ಮತ್ತು ಬಾವ ಆಸ್ಪತ್ರೆಗೆ ಹೋಗುತ್ತೇವೆ”…. ಎಂದಳು ದೊಡ್ಡಕ್ಕ.  ದೊಡ್ಡಕ್ಕನ ಮಾತಿಗೆ ಹೂಂಗುಟ್ಟಿದಳು. ತನ್ನ ಎರಡನೇ ಅಕ್ಕ ಉಳಿದ ವಿಷಯಗಳನ್ನು ತಾನೇ ದೊಡ್ಡಕ್ಕನಿಗೆ ತಿಳಿಸುತ್ತೇನೆ ಎಂದು ಹೇಳಿದ್ದರಿಂದ ಅವಳು ಹೆಚ್ಚಾಗಿ ಇನ್ನೇನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಅಕ್ಕನ ಮನೆಯಲ್ಲಿದ್ದು ಮಕ್ಕಳ ಜೊತೆ ಕಾಲ ಕಳೆದು ನಂತರ ಸಕಲೇಶಪುರದ ಬಸ್ ನಿಲ್ದಾಣಕ್ಕೆ ಬಂದು ತನ್ನ ಊರ ಕಡೆಗೆ ಹೋಗುವ ಬಸ್ ಹತ್ತಿ ಒಬ್ಬಳೇ ಊರ ಕಡೆಗೆ ಹೊರಟಳು. ಒಬ್ಬಳೇ ಬಸ್ಸ್ ನಲ್ಲಿ ಕುಳಿತು ಕಿಟಕಿಯ ಆಚೆಗೆ ನೋಡುತ್ತಾ ನಿಟ್ಟಿಸಿರು ಬಿಟ್ಟಳು. ನಮ್ಮ ತಾಯಿ ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾಳೆಯೇ? ಎನ್ನುವ ವಿಷಯ ಮನಸ್ಸಿಗೆ ಬಂದಾಗ ಅವಳಿಗ ಅರಿವಿಲ್ಲದಂತೆಯೇ ಕಣ್ಣುಗಳಿಂದ ನೀರು ಜಾರಿತು. ಯಾರಿಗೂ ಕಾಣದೆಂದು ಕಿಟಕಿಯ ಆಚೆ ನೋಡುತ್ತಾ ಕುಳಿತಳು. ಮನದ ತುಂಬಾ ನೋವು ಮಡುಗಟ್ಟಿತ್ತು. ಬಸ್ಸು ಯಾವಾಗ ಊರಿಗೆ ತಲುಪಿತು ಎಂಬುದು ತಿಳಿಯಲಿಲ್ಲ. ಬಸ್ಸಿನಿಂದ ಇಳಿದು ಮನೆ ತಲುಪಿದಳು. ಇಂದೇಕೋ ಮನೆ ಎಂದಿಗಿಂತ ಬಿಕೋ ಎನ್ನುವಂತೆ ಇತ್ತು. ತೀವ್ರ ಮೌನ ಆವರಿಸಿದಂತೆ ಅನಿಸಿತು. ಅಮ್ಮ ಬೇಗ ಆರೋಗ್ಯಪೂರ್ಣಳಾಗಿ ಮನೆಗೆ ಹಿಂದಿರುಗುತ್ತಾಳೆ ಎನ್ನುವ ಆಸೆಯನ್ನು ಹೊತ್ತು ಒಬ್ಬಳೇ ಹೇಗೋ ಕಾಲ ಕಳೆಯುತ್ತಿದ್ದಳು. ಆದರೆ ಈಗ ಜೊತೆಗೆ ನೋವನ್ನು ಮರೆಯಲು ಅಕ್ಕನ ಹೆಗಲೂ ಇಲ್ಲ. ಅಮ್ಮನೂ ಇಲ್ಲ. ಹೊರಡುವಾಗ ದೊಡ್ಡಕ್ಕ….” ಇವತ್ತು ಇಲ್ಲೇ ಇರೇ… ಒಬ್ಬಳೇ ಮನೆಗೆ ಹೋಗಬೇಡ…. ಎಂದರೂ ಕೇಳಲಿಲ್ಲ ನಾನು…. ಏನು ಮಾಡುವುದು ಇಲ್ಲಿ ನಾನು ಶಾಲೆಗೆ ಹೋಗದಿದ್ದರೆ ಅಮ್ಮನ ಕೆಲಸ ಕೈ ಬಿಟ್ಟು ಹೋಗುತ್ತದೆ…..ನನಗೂ ಈಗ ಜೊತೆಗೆ ಅಕ್ಕಂದಿರಿಬ್ಬರಲ್ಲಿ ಯಾರಾದರೂ ಬೇಕಿತ್ತು…. ಈ ನೋವನ್ನು ನಾನೊಬ್ಬಳೇ ಸಹಿಸಲಾರೆ… ಏನು ಮಾಡಲಿ?…” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಹಾಸಿಗೆ ಮೇಲೆ ದೊಪ್ಪನೆ ಉರುಳಿದಳು. ಇತ್ತ ಆಶ್ರಮಕ್ಕೆ ಹೋದವಳಿಗೆ ತಂಗಿಯನ್ನು ಒಬ್ಬಳನ್ನೇ ಮನೆಗೆ ಕಳುಹಿಸಿದ್ದರ ಬಗ್ಗೆ ಬಹಳ ಬೇಸರವಿತ್ತು. ಆದರೆ ಏನು ಮಾಡುವುದು? ಅನ್ಯಮಾರ್ಗವಿರಲಿಲ್ಲ. ಆಶ್ರಮಕ್ಕೆ ಬಂದ ಕೂಡಲೇ ಅವಳ ಗೆಳತಿ ಅವಳ ತಾಯಿಯ ಬಗ್ಗೆ ವಿಚಾರಿಸಿಕೊಂಡಳು. ಈಗ ಈ ಗೆಳತಿಯ ಜೊತೆಯೇ ಈ ಹುಡುಗಿಗೆ ಆಧಾರ. ಅವಳ ಹೆಗಲ ಮೇಲೆ ತಲೆ ಇಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿದಳು. ಅವಳು ಇವಳ ತಲೆಯನ್ನು ನೇವರಿಸುತ್ತಾ ಸಮಾಧಾನಪಡಿಸಿದಳು. ಸ್ವಲ್ಪ ಹೊತ್ತಿನ ನಂತರ ಸುಮತಿಯ ಮಗಳು ಆಶ್ರಮದ ಮಕ್ಕಳ ಓದಿನ ಕಡೆಗೆ ಗಮನಹರಿಸಿದಳು. ಅವಳು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಗೆಳತಿ ಅಡುಗೆ ಮಾಡುತ್ತಿದ್ದಳು. ಅಷ್ಟೊತ್ತಿಗೆ ಸಂಜೆಯಾಗಿತ್ತು. ಮಾಡಿದ ಅಡುಗೆಯನ್ನು ಗೆಳತಿ ಈ ಹುಡುಗಿಗೆ ಬಡಿಸಿ, ಒಂದು ಪುಟ್ಟ ಡಬ್ಬಿಯಲ್ಲಿ ತಾನು ಮಾಡಿದ ಈರುಳ್ಳಿ ಸೋಗೆಯ ಪಲ್ಯವನ್ನು ತುಂಬಿಕೊಟ್ಟು….. “ಇಲ್ಲಿಯ ಉಳಿದ ಕೆಲಸವನ್ನು ಮಾಡಿ, ಮಕ್ಕಳ ಕಲಿಕೆಗೆ ನಾನು ಸಹಾಯ ಮಾಡುತ್ತೇನೆ…. ನೀನು ಆಸ್ಪತ್ರೆಗೆ ತೆರಳಿ ನಿನ್ನ ತಾಯಿಯ ಯೋಗ ಕ್ಷೇಮವನ್ನು ನೋಡಿಕೋ…. ಎಂದಳು. ತನಗೆ ಈ ಸಮಯದಲ್ಲಿ ಆಸರೆಯಾಗಿ ಬಂದ ತನ್ನದೇ ಪ್ರಾಯದ ಗೆಳತಿಯನ್ನು ಬಿಗಿಯಾಗಿ ಅಪ್ಪಿಕೊಂಡು…. ಯಾವ ಜನ್ಮದಲ್ಲಿ ನೀನು ನನಗೆ ಅಕ್ಕ ಅಥವಾ ತಂಗಿ ಆಗಿದ್ಯೋ ತಿಳಿಯದು… ನಿನ್ನ ಈ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಗೆಳತಿ…. ಎಂದು ಹೇಳುತ್ತಾ ತನ್ನ ಕೃತಜ್ಞತೆಯನ್ನು ತಿಳಿಸಿದಳು…. “ಹೇಯ್ ಇದೆಲ್ಲಾ ಏನೂ ದೊಡ್ಡ ಕೆಲಸವಲ್ಲ…. ನನಗೂ ತಾಯಿ ಇದ್ದಾಳೆ… ನಿನ್ನ ನೋವು ನನಗೂ ಅರ್ಥವಾಗುತ್ತೆ…. ನಡಿ ಮೊದಲು ಆಸ್ಪತ್ರೆಗೆ ಹೋಗು…. ಎಂದು ಹೇಳುತ್ತಾ ಬಾಗಿಲವರೆಗೂ ಜೊತೆಗೆ ಬಂದು ಬಿಳ್ಕೊಟ್ಟಳು.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-122 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಅಮ್ಮನ ಅನಾರೋಗ್ಯದ ಬಗ್ಗೆ ದೊಡ್ಡಕ್ಕನಿಗೆ ತಿಳಿಸುವ ಸಮಯ ವಿಷಯ ತಿಳಿದ ನಂತರ ಖಂಡಿತ ತಂಗಿ ಹೀಗೆಲ್ಲಾ ಪ್ರತಿಕ್ರಿಯಿಸಿವಳು ಎಂಬುದು ಮೊದಲೇ ತಿಳಿದಿದ್ದ ಅಕ್ಕನಿಗೆ ದುಃಖ ಉತ್ತರಿಸಿ ಬಂದರೂ, ತಾನು ಕೂಡಾ ಅಳುತ್ತಾ ಕುಳಿತರೆ, ತಂಗಿಯನ್ನು ಸಮಾಧಾನ ಪಡಿಸುವವರು ಯಾರು? ಎಂದು ಯೋಚಿಸುತ್ತಾ, ತಂಗಿಯ ತಲೆಯನ್ನು ನಿಧಾನವಾಗಿ ಸಾಂತ್ವನ ಪಡಿಸುವಂತೆ ನೇವರಿಸಿದಳು. ಅವಳು ಅತ್ತು ಸಮಾಧಾನವಾಗುವರೆಗೂ ಹಾಗೆ ನೇವರಿಸುತ್ತಾ ಏನೂ ಮಾತನಾಡದೇ ಕುಳಿತಿದ್ದಳು. ಅವಳು ಸ್ವಲ್ಪ ಸಮಾಧಾನಗೊಂಡಳು ಎಂದು ಅರಿತ ಮೇಲೆ…. “ನಿನ್ನ ನೋವು, ಸಂಕಟ ಏನೆಂದು ನನಗೆ ಅರ್ಥವಾಗುತ್ತದೆ…. ದಯವಿಟ್ಟು ನಿನ್ನನ್ನು ನೀನು ಸಮಾಧಾನಪಡಿಸಿಕೋ…. ನಾವಿಬ್ಬರೂ ಈಗ ಮಾನಸಿಕವಾಗಿ ಗಟ್ಟಿಯಾಗಬೇಕಿದೆ…. ನಮ್ಮ ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಜೊತೆ ಬೇರೆ ಯಾರೂ ಇಲ್ಲ…. ಅಕ್ಕನಿಗೆ ಅವಳದಾದ ಕುಟುಂಬವಿದೆ…. ಎಲ್ಲಾ ಜವಾಬ್ದಾರಿಯನ್ನು ಅಕ್ಕನಿಗೆ ಹೊರಿಸಲು ಸಾಧ್ಯವಿಲ್ಲ…. ನಮ್ಮಿಬ್ಬರ ಕೈಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಪ್ರಯತ್ನ ಮಾಡೋಣ…. ವೈದ್ಯರು ಹೇಳಿದ್ದರು ಡಯಾಲಿಸಿಸ್ ಚಿಕಿತ್ಸೆ ಕೊಡಿಸಿದರೆ, ಅಮ್ಮ ಇನ್ನೂ ಸ್ವಲ್ಪ ದಿನ ಅಮ್ಮ ಜೀವಂತವಾಗಿರಬಹುದು…. ಅಮ್ಮನ ಎಲ್ಲಾ ನೋವು ಸಂಕಟಗಳು ಸ್ವಲ್ಪ ದಿನದ ಮಟ್ಟಿಗಾದರೂ ಸುಧಾರಿಸಬಹುದು….. ನೋಡೋಣ…ಹೇಗೆ ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳುತ್ತೇನೆ….. ಎಂದಳು. ಅಕ್ಕನ ಮಾತನ್ನು ಕೇಳಿದಾಗ ತಂಗಿಯ ಮುಖವರಳಿತು. ….”ಹಾಗೆಯೇ ಮಾಡುವ ಅಕ್ಕಾ….. ನಮ್ಮಿಂದ ಆಗಿದ್ದನ್ನು ನಾವು ಮಾಡೋಣ…. ನಮಗೆ ಆಶ್ರಯ ಕೊಟ್ಟಿರುವ ಎಸ್ಟೇಟ್ ನವರು ಮೊದಲಿಂದಲೂ ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ…. ಅವರು ಖಂಡಿತಾ ನಮಗೆ ಸಹಾಯ ಮಾಡುತ್ತಾರೆ… ಹಾಗಾಗಿ ನಾವು ಮಾಡಬೇಕಾಗಿದ್ದು ಏನು ಎಂಬುದನ್ನು ಕೇಳಿ ತಿಳಿದುಕೋ…. ಎಂದಳು. ಸರಿ ಎನ್ನುವಂತೆ ಅಕ್ಕ ತಯಾರಿಸಿದಳು…. “ಈಗ ಡಾಕ್ಟರ್ ರೌಂಡ್ಸ್ ಮುಗಿಸಿರುತ್ತಾರೆ…. ನಡಿ ವಾರ್ಡಿಗೆ ಹೋಗೋಣ…. ಮೊದಲು ನಿನ್ನ ಕಣ್ಣುಗಳನ್ನು ಒರೆಸಿಕೊ…. ನಮಗೆ ತಿಳಿದಿರುವ ವಿಷಯ ಅಮ್ಮನಿಗೆ ಗೊತ್ತಾಗುವುದು ಬೇಡ….. ಅಮ್ಮ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಾಳೆ… ಆದಷ್ಟೂ ಅಮ್ಮನ ಮುಂದೆ ನಾವು ಖುಷಿಯಿಂದ ಇರುವಂತೆ ನಟಿಸೋಣ…. ಇದಲ್ಲದೇ ನಮಗೆ ಬೇರೆ ದಾರಿ ಇಲ್ಲ….. ಅಮ್ಮನಿಗೆ ಈ ವಿಷಯಗಳು ತಿಳಿದರೆ, ಖಂಡಿತಾ ಪೂರ್ತಿ ಕುಸಿದು ಹೋಗುತ್ತಾಳೆ…. ನಾವೆಲ್ಲರೂ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಕೆಲಸಕ್ಕೆ ಸೇರಿ ನಂತರ ನಾವು ಮದುವೆಯಾಗುವುದನ್ನು ನೋಡಬೇಕು…. ಖುಷಿಯಿಂದ ಮೊಮ್ಮಕ್ಕಳನ್ನು ಮುದ್ದಾಡಬೇಕು…. ಅವರೊಂದಿಗೆ ಕಾಲ ಕಳೆಬೇಕು….ಎನ್ನುವ ತನ್ನಾಸೆಯ ಮಾತುಗಳನ್ನು ಆಗಾಗ ಹೇಳುತ್ತಲೇ ಇರುತ್ತಾಳೆ…. ಅಮ್ಮನಿಗೆ ಏನೂ ಆಗಿಲ್ಲ… ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ಆಶಯವನ್ನು ಅಮ್ಮನ ಮನಸ್ಸಿನಲ್ಲಿ ತುಂಬೋಣ…. ಯಾವುದೇ ಕಾರಣಕ್ಕೂ ತನ್ನ ಆರೋಗ್ಯ ಸ್ಥಿತಿ ಈ ರೀತಿ ಇದೆ ಎಂದು ತಿಳಿಯುವುದು ಬೇಡ….. ಎಂದು ಅಕ್ಕ ಹೇಳಿದಾಗ ‘ಸರಿ’ ಎನ್ನುವಂತೆ ತಲೆಯಾಡಿಸುತ್ತಾ ದುಪ್ಪಟ್ಟಾದಿಂದ ಕಣ್ಣುಗಳನ್ನು ಮತ್ತು ಮುಖವನ್ನು ಒರೆಸಿ, ಆದಷ್ಟೂ ತಾನು ನಗುನಗುತ್ತಿರುವಂತೆ ಇರುವ ಪ್ರಯತ್ನ ಮಾಡಿದಳು. ತಂಗಿಯನ್ನು ನೋಡಿ ಮುಗುಳ್ನಕ್ಕು ಅವಳ ಹೆಗಲ ಮೇಲೆ ಕೈ ಹಾಕುತ್ತಾ…._ ಬಾ ನಡಿ ಹೋಗೋಣ”…. ಎಂದಳು ಈಗ ನಾನು ಅತ್ತಿರೋದು ಕಾಣೋದಿಲ್ಲವಲ್ಲವೇ? ಎಂಬಂತೆ ಪ್ರಶ್ನಾರ್ಥಕವಾಗಿ ಅಕ್ಕನನ್ನು ನೋಡಿದಳು ತಂಗಿ. ‘ಇಲ್ಲ’ ಎನ್ನುವಂತೆ ತಲೆ ಆಡಿಸಿದಳು, ಇಬ್ಬರೂ ವಾರ್ಡಿಗೆ ತೆರಳಿದಾಗ, ನರ್ಸ್ ತಾಯಿಗೆ ಚುಚ್ಚುಮದ್ದನ್ನು ಚುಚ್ಚುತ್ತಿರುವುದು ಕಂಡಿತು. ಅಮ್ಮ ನೋವಿನಿಂದ ಮುಖ ಹಿಂಡಿದ್ದು ಕಂಡಾಗ, ಇಬ್ಬರ ಎದೆಯಲ್ಲೂ ಏನೋ ಹರಿತವಾದದ್ದು ಚುಚ್ಚಿದ ಅನುಭವವಾಯಿತು. ಆದರೂ ತೋರಗೊಡದೆ…. “ಅಮ್ಮಾ ….ಡಾಕ್ಟರ್ ಏನು ಹೇಳಿದರು?… ಎಂದು ಇಬ್ಬರೂ ಕೇಳಿದಾಗ…. “ಏನೂ ತೊಂದರೆ ಇಲ್ಲ….ಇನ್ನೂ ಕೆಲವು ದಿನಗಳು ನಾನು ಇಲ್ಲಿಯೇ ಇರಬೇಕೆಂದು ಹೇಳಿದ್ದಾರೆ”… ಎಂದು ಹೇಳುತ್ತಾ ಸುಮತಿ ಇಬ್ಬರೂ ಮಕ್ಕಳ ಮುಖವನ್ನು ನೋಡಿದಳು. ಮಕ್ಕಳಿಬ್ಬರ ಕಣ್ಣುಗಳು ಅತ್ತು ಊದಿಕೊಂಡಿರುವಂತೆ ಅವಳಿಗೆ ಅನಿಸಿತು….. “ಏನಾಯ್ತು ಮಕ್ಕಳೇ?…. ನಿಮ್ಮಿಬ್ಬರ ಕಣ್ಣುಗಳು ಏಕೆ ಊದಿಕೊಂಡಿವೆ?…. ಎಂದು ಕೇಳಿದಾಗ,….”ಇಲ್ಲಮ್ಮಾ…. ಹಾಗೇನೂ ಇಲ್ಲ…. ನಿನಗೆ ಹಾಗೆ ಅನಿಸಿದೆಯಷ್ಟೇ”….. ಎಂದು ತಂಗಿ ಹೇಳಿದಾಗ, …. “ನೀನು ಯಾವಾಗ ಸುಳ್ಳು ಹೇಳುವುದನ್ನು ಕಲಿತುಕೊಂಡೆ?…. ನಿಜ ಹೇಳಿ….ಅದೇನಿದ್ದರೂ ನನಗೆ ತಿಳಿಸಿ” …. ಎಂದಳು ತುಸುಕೋಪದಿಂದ. …”ಏನಿಲ್ಲಮ್ಮಾ…. ಅವಳು ಸುಳ್ಳು ಹೇಳಿಲ್ಲ…. ನಮಗೇನೂ ಆಗಿಲ್ಲ…. ನಿನಗೆ ಹಾಗೆ ಅನಿಸುತ್ತಿದೆ ಅಷ್ಟೇ….. ನಾವು ಹೊರಗೆ ಕುಳಿತಿದ್ದಾಗ ಗಾಳಿಯಲ್ಲಿ ಏನೋ ಕಸ ಬಂದು ತಂಗಿಯ ಕಣ್ಣಿಗೆ ಬಿತ್ತು…. ಅವಳು ಹಣ್ಣುಗಳನ್ನು ಉಜ್ಜಿಕೊಂಡಳು…. ಹಾಗಾಗಿ ಅವಳ ಕಣ್ಣುಗಳು ಹಾಗಿವೆ”…. ಎಂದಳು….. “ಹಾಗಾದರೆ ನಿನ್ನ ಕಣ್ಣು?”…. ತುಸು ಏರು ಧ್ವನಿಯಲ್ಲಿ ಸುಮತಿ ಪ್ರಶ್ನಿಸಿದಾಗ…. “ನಾನು ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲಮ್ಮಾ…. ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ರಾತ್ರಿ ಹೆಚ್ಚು ಸಮಯ ಓದುತ್ತಾ ಕುಳಿತಿದ್ದೆ… ಹಾಗಾಗಿ ನನ್ನ ಕಣ್ಣುಗಳು ಊದಿಕೊಂಡಿವೆ…. ಸುಮ್ಮನೆ ಏನೇನೋ ಆಲೋಚಿಸಿ ತಲೆಕೆಡಿಸಿಕೊಳ್ಳಬೇಡ”… ಎಂದಳು ತಂಗಿಯನ್ನು ನೋಡುತ್ತಾ. ತಂಗಿ ‘ಹೌದು’ ಎನ್ನುವಂತೆ ತಲೆ ಆಡಿಸಿದಳು. ಇಬ್ಬರೂ ಮಕ್ಕಳು ಕೊಟ್ಟ ಉತ್ತರ ಯಾಕೋ ಸರಿ ಇಲ್ಲ ಎಂದು ಸುಮತಿಗೆ ಅನಿಸಿತು. ಆದರೆ ಇನ್ನೂ ವಾದ ಮಾಡುವುದು ಬೇಡ ಎಂದು ಸುಮ್ಮನಾದಳು. ತಂಗಿ ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಾಯಿ ಮತ್ತು ಅಕ್ಕನ ಜೊತೆ ಕಾಲ ಕಳೆದಳು. ಇದರ ನಡುವೆ…. “ಅಕ್ಕಾ ….ದೊಡ್ಡಕ್ಕನಿಗೆ ಅಮ್ಮನ ಅನಾರೋಗ್ಯದ ವಿಷಯ ತಿಳಿಸಿದ್ದೀಯಾ? ಎಂದು ಕೇಳಿದಳು….. “ಇಲ್ಲ ಕಣೇ…. ಹೇಳಬೇಕು…. ಒಂದು ಕೆಲಸ ಮಾಡುತ್ತೀಯಾ? ನಾವು ಇಲ್ಲಿ ಯಾವುದಾದರೂ ಹೋಟೆಲ್ನಲ್ಲಿ ಊಟ ಮಾಡಿಕೊಳ್ಳೋಣ…. ಅಮ್ಮನಿಗೆ ಆಸ್ಪತ್ರೆಯಿಂದ ಊಟ ಸಿಗುತ್ತದೆ…. ಅಮ್ಮನಿಗೆ ಊಟ ಕೊಟ್ಟು, ನಂತರ ಹೊರಗೆ ಹೋಗಿ ನಾವು ಊಟ ಮಾಡೋಣ…. ನಂತರ ನೀನು ಅಕ್ಕನ ಮನೆಗೆ ಹೋಗಿ, ಅಮ್ಮ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂಬುದನ್ನು ತಿಳಿಸು… ಎಂದಳು. ತಂಗಿ ಸರಿ ಎನ್ನುವಂತೆ ತಲೆಯಾಡಿಸಿದಳು.

Read Post »

You cannot copy content of this page

Scroll to Top