ಕಾವ್ಯ ಸಂಗಾತಿ
ಅರುಣಾ ನರೇಂದ್ರ /ವೈ.ಎಂ.ಯಾಕೊಳ್ಳಿ
“ಗಜಲ್ ಜುಗಲ್ ಬಂದಿ”.

ಅವಳನ್ನು ಸದಾ ಮೆಚ್ಚಿಸುವ ಸಾಲುಗಳ ಎಲ್ಲಿಂದ ತರಲಿ
ಅವಳ ಚಿತ್ತ ನನ್ನತ್ತ ಹೊರಳಿಸುವ ಮಾತುಗಳ ಎಲ್ಲಿಂದ ತರಲಿ
ನುಡಿಯುವ ವೀಣೆಯ ತಂತಿಗಳು ಹರಿದು ಜಖಂಗೊಂಡಿವೆ
ಒಲವ ಆಲಾಪ ಹೊರಹೊಮ್ಮಿಸುವ ರಾಗಗಳ ಎಲ್ಲಿಂದ ತರಲಿ
ಅವಳು ನನ್ನ ನೋಡಿಯೂ ನೋಡದಂತೆ ನಡೆದಿದ್ದಾಳೆ
ತಡೆದು ನಿಲ್ಲಿಸಿ ನಗಿಸುವ ಚಟಾಕಿಗಳ ಎಲ್ಲಿಂದ ತರಲಿ
ಶತಮಾನದ ವಿರಹ ಎದೆಯನ್ನೇ ಸುಡುತಿದೆ ಹೇಳಲಿ ಹೇಗೆ
ಅವಳನ್ನು ನಂಬಿಸುವ ನೂರು ದಾಖಲೆಗಳ ಎಲ್ಲಿಂದ ತರಲಿ
ಜೋಗಿ ತನಗಾಗಿ ಹಂಬಲಿಸುತ್ತಾನೆಂದು ಅವಳಿಗೂ ಗೊತ್ತಿದೆ
ಅವಳನು ಮಂಜಂತೆ ಕರಗಿ ನೀರಾಗಿಸುವ ಚಳಕಗಳ ಎಲ್ಲಿಂದ ತರಲಿ

ವೈ ಎಂ ಯಾಕೊಳ್ಳಿ
ಅವನನ್ನು ಮೆತ್ತಗೆ ಮೇಣವಾಗಿಸುವ ಶಬ್ದಗಳ ಎಲ್ಲಿಂದ ತರಲಿ
ಉರಿಯುವ ಕೋಪ ತಣ್ಣಗಾಗಿಸುವ ಪದಗಳ ಎಲ್ಲಿಂದ ತರಲಿ
ಸ್ವರ ನುಡಿಸುವ ಕೊಳಲೇಕೋ ಉಸಿರು ಮರೆತು ಮೂಲೆ ಸೇರಿದೆ
ಮನಕ್ಕೆ ಮುದ ನೀಡಿ ಖುಷಿಗೊಳಿಸುವ ಗೀತೆಗಳ ಎಲ್ಲಿಂದ ತರಲಿ
ಅವನು ಎಲ್ಲವನ್ನು ಮರೆಯಬೇಕೆಂದು ಮಧು ಶಾಲೆ ಸೇರಿದ್ದಾನೆ
ಮತ್ತೆ ಮತ್ತೆ ನನ್ನ ನೆನಪಾಗಿಸುವ ಚಿತ್ರಗಳ ಎಲ್ಲಿಂದ ತರಲಿ
ಖಾಲಿಯಾಗಿರುವ ಬಟ್ಟಲನ್ನೇ ನೋಡಿ ಬಡ ಬಡಿಸುತ್ತಾನೆ ಅವನು
ಜನುಮದ ಅನುಬಂಧ ತಿಳಿಸುವ ಉಸ್ತಾದ್ ಗಳ ಎಲ್ಲಿಂದ ತರಲಿ
ಅವನಿಗಂತೂ ಗೊತ್ತಿದೆ ದಿನ್- ರಾತ್ ಅರುಣಾ ಕೊರಗುತ್ತಾಳೆಂದು
ಉದಾಸೀನಕ್ಕೆ ಮದ್ದರೆದು ಮೆಚ್ಚಿಸುವ ತಂತ್ರಗಳ ಎಲ್ಲಿಂದ ತರಲಿ

ಅರುಣಾ ನರೇಂದ್ರ



