ವಲಸೆಯ ಹಾದಿಯಲ್ಲಿ

ಪುಸ್ತಕ- ಮಲಾಣ್
ಲೇಖಕರು- ಶಾಂತಾ ನಾಯ್ಕ ಶಿರಗಾನಹಳ್ಳಿ
ಬೆಲೆ-೩೧೦/-
ಪ್ರಕಾಶಕರು- ದೇಸಿ ಪುಸ್ತಕ


       ಸೃಷ್ಟಿ ನಾಗೇಶ್ ಒಂದಿಷ್ಟು ಪುಸ್ತಕಗಳನ್ನು ಕಳಿಸಿದ್ದರು. ಅದರಲ್ಲಿ ಮಲಾಣ್ ಕೂಡ ಒಂದು. ನೋಡಿದ ಕೂಡಲೇ ಬೇರೆಲ್ಲ ಕೆಲಸ ಬಿಟ್ಟು ಅದನ್ನೇ ಓದಲಾರಂಭಿಸಿದೆ. ಯಾಕೆಂದರೆ ಅದು ನಾನು ತುಂಬಾ ಗೌರವಿಸುವ ಶಾಂತಾ ನಾಯ್ಕ ಶಿರಗಾನಹಳ್ಳಿಯವರ ಪುಸ್ತಕ. ಹಿಂದೊಮ್ಮೆ ಸುಮಾರು ನಾನು ಹೈಸ್ಕೂಲಿನಲ್ಲಿದ್ದಾಗ ಅವರು ಕಾರವಾರದ ಆಕಾಶವಾಣಿಯಲ್ಲಿದ್ದವರು. ಆಗಲೇ ಇವಳು ಬರೆಯುತ್ತಾಳೆ ನೋಡಿ ಎಂದು ಬೆನ್ನು ತಟ್ಟಿದವರು. ಹೀಗಾಗಿ ಅವರ ಹೆಸರು ನೋಡಿದಾಕ್ಷಣ ಅದನ್ನೇ ಮೊದಲು ಓದಬೇಕೆನಿಸಿತ್ತು. ಈ ಸಲ ಸೃಷ್ಟಿ ನಾಗೇಶ್ ಹೇಳಿದ ಇದನ್ನು ಮೊದಲು ಓದಿ ಎನ್ನುವ ಎಲ್ಲ ಮಾತುಗಳನ್ನೂ ಗಾಳಿಗೆ ತೂರಿಯಾಗಿತ್ತು.


    ಇದೊಂದು ಶತಮಾತಗಳ ವಲಸೆಯ ಕಥೆ. ರಾಜಸ್ಥಾನದ ಒಂದು ಹಳ್ಳಿಯಿಂದ  ಕರ್ನಾಟಕ, ಆಂದ್ರದ ಕಡೆಗೆ ಗುಳೆ ಬಂದಂತಹ ಈ ಜನಾಂಗದ ಕಥೆಯನ್ನು ಓದಿದರೆ ಮೈನವಿರೇಳದೇ ಇರದು. ಕೆಲವು ಕಡೆ ಕೋಪ, ಕೆಲವು ಕಡೆ ಕಣ್ಣೀರು ನಮ್ಮನ್ನು ಕೇಳದೇ ನುಸುಳದಿದ್ದರೆ ನೀವು ಈ ಕಾದಂಬರಿಯನ್ನು ಓದಿದ್ದೂ ವ್ಯರ್ಥ ಎನ್ನುವಷ್ಟು ಸೊಗಸಾಗಿ ಮೂಡಿ ಬಂದಿದೆ.

    ಬಂಜಾರಾ ಜನಾಂಗವು ರಾಜಸ್ಥಾನದ ಹಳ್ಳಿಗಳಲ್ಲಿ ವೈಭವದಿಂದ ಜೀವನ ಮಾಡಿಕೊಂಡಿದ್ದವರು. ವ್ಯಾಪಾರ ವಹಿವಾಟಿನಿಂದಾಗಿ ಸಾಕಷ್ಟು ಗಟ್ಟಿ ಕುಳ ಎನ್ನಿಸಿಕೊಂಡವರು. ಆದರೆ ಯಾವಾಗ ದೆಹಲಿಯಲ್ಲಿ ಮುಸ್ಲಿಂ ಆಡಲಿತ ಪ್ರಾರಂಭವಾಯಿತೋ ಅದರಲ್ಲೂ ಔರಂಗಜೇಬ್ ದೆಹಲಿಯ ಸಿಂಹಾಸನವನ್ನೇರಿದನೋ ಆಗ ಪ್ರಾರಂಭವಾಯಿತು ನೋಡಿ, ಬಂಜಾರಾಗಳ ದುರ್ವಿಧಿ.


  ಈ ಕಾದಂಬರಿ ಪ್ರಾರಂಭವಾಗುವುದೂ ಕೂಡ ದಕ್ಷಿಣಕ್ಕೆ ವಲಸೆ ಹೋಗುವ ಸೈನ್ಯದೊಂದಿಗೆ ಸೇರಿಕೊಳ್ಳುವ ಇಬ್ಬರು ಸಹೋದರರ ಕಥೆಯೊಂದಿಗೆ. ಅವರು ದಕ್ಷಿಣದ ಕಡೆಗೆ ವಲಸೆ ಹೋಗಲು ನಿರ್ಧರಿಸಿರುವುದೂ ಕೂಡ ಮುಸ್ಲಿಂ ಯುವಕರು ತಮ್ಮ ಸಹೋದರಿಯರನ್ನು ‘ಆಗ್ವಾ’ ಮಾಡಿಕೊಂಡು ಹೋದಾರೆಂಬ ಭಯದಿಂದಲೇ. ಬಂಜಾರಾ ಹುಡುಗಿಯರು ತಾಂಡಾದಿಂದ ಹೊರಗೆ ಬರುವುದೇ ದೀಪಾವಳಿ ಹಬ್ಬದಂದು ಮಾತ್ರ. ತಾಂಡಾದ ಆದಿದೇವತೆ ಮರಿಯಮ್ಮನ ಮಟ್ಟೋದ ಮುಂದೆ ನೃತ್ಯ ಮಾಡಲು. ಆಗ ಮಾತ್ರ ಮುಸ್ಲಿಂ ಯುವಕರಿಗೆ ಆ ಹುಡುಗಿಯರು ಕಾಣಸಿಗುತ್ತಿದ್ದುದು. ಹೀಗಾಗಿ ಗುಂಪು ಗುಂಪಾಗಿ ಬರುವ ಮುಸ್ಲಿಂ ಯುವಕರು ಬಂಜಾರಾ ಯುವತಿಯರನ್ನು ಅಪಹರಿಸಿಕೊಂಡು ಹೋಗಿಬಿಡುತ್ತಿದ್ದರು. ಹಾಗೆ ಅಪಹರಿಸಿಕೊಂಡು ಹೋದ ನಂತರ ಆ ಯುವತಿಯರು ಅತ್ತ ಮುಸ್ಲಿಂ ಕೂಡ ಆಗಲಾರದೇ, ಇತ್ತ ಬಂಜಾರಾ ಸಮುದಾಯಕ್ಕೂ ಸೇರಿದವರಾಗಿ ಉಳಿಯದೇ ಜೀವನದಲ್ಲಿ ನೊಂದು ಬದುಕೇ ಬೇಸರವಾಗಿ ಆತ್ಮಹತ್ಯೆಗೂ ಹೇಸದ ಸ್ಥಿತಿ ತಲುಪಿಬಿಡುತ್ತಿದ್ದರು. ಈ ಕಾರಣದಿಮದಾಗಿಯೇ ಎತ್ತುಗಳನ್ನು ಸಾಕಿಕೊಂಡು ದೊಡ್ಡ ವ್ಯಾಪಾರಸ್ಥರಾಗಿದ್ದ ಬಂಜಾರ ಸಮುದಾಯ ಗುಜರಾತ ಕಡೆಗೆ ಅತ್ತ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ಕಾಡುಗಳೊಳಗೆ ಸೇರಿಕೊಂಡು ಬುಡಕಟ್ಟುಜನಾಂಗದವರಂತೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಬಂಜಾರರ ವ್ಯಾಪಾರದ ನೈಪುಣ್ಯತೆ, ಅವರ ವ್ಯವಹಾರಿಕ ಜ್ಞಾನ ಮತ್ತು ಎಲ್ಲದ್ದಕ್ಕಿಂತ ಮುಖ್ಯವಾಗಿ ಅವರ ಧೈರ್‍ಯ ಸಾಹಸ ಹಾಗೂ ದೇಹದೃಢತೆಯಿಂದಾಗಿ ಮುಸ್ಲಿಂ ಆಡಳಿತಗಾರರಿಗೆ ಬಂಜಾರರ ಮಾರ್ಗದರ್ಶನ ಅನಿವಾರ್ಯವಾಗಿದ್ದಿತು. ಇತ್ತ ಬಂಜಾರರಿಗೂ ಮುಸ್ಲಿಂ ಆಡಳಿತದಿಂದ ದೂರ ಸರಿದು ತಮ್ಮ ಹೆಣ್ಣುಮಕ್ಕಳ ರಕ್ಷಣೆ ಮಾಡಿಕೊಳ್ಳುವ ಆತುರದಲ್ಲಿದ್ದರು. ಇಂತಹುದ್ದೇ ಹೊತ್ತಿನಲ್ಲಿ ತಮ್ಮ ತಂಗಿ ರೂಪ್ಕಿ ಹಾಗೂ ಅವಳ ತಂಗಿ ಪಾರೂವನ್ನು ರಕ್ಷಣೆ ಮಾಡುವ ಭರದಲ್ಲಿ ಹತ್ತು ಮುಸ್ಲಿಂ ಯುವಕರನ್ನು ಕೊಂದು ಹಾಕಿದ್ದ ಮೀಟು ಹಾಗೂ ಥಾವು ಔರಂಗಜೇಬನ ಸೇನಾಧಿಪತಿಯರಲ್ಲಿ ಒಬ್ಬನಾದ ಜುಲ್ಮಾನ್‌ಖಾನ ಎಂಬುವವನಿಗೆ ತಿಳಿದರೆ ಇಡೀ ತಾಂಡಾ ಸರ್ವನಾಶವಾಗುವುದನ್ನು ಅರಿತು ಸಂಕೆಭಾಕ್ರಿ ಎನ್ನುವ ತಾಂಡಾವನ್ನು ಬಿಟ್ಟು ಜೈಪುರದ ಹತ್ತಿರ ದಕ್ಷಿಣ ಭಾರತದ ವ್ಯಾಪಾರಕ್ಕೆಂದು ತಮ್ಮೊಂದಿಗೆ ಸೈನ್ಯವನ್ನು ಆಯ್ಕೆ ಮಾಡುತ್ತಿರುವ ಜಂಗಿ ಭಂಗಿ ಎಂಬ ಸಹೋದರರ ಕಡೆ ಬಂದಿದ್ದರು. ಅವರ ಬಳಿ ತಾವು ಚವ್ಹಾಣರು ಎಂದು ಕೆಲಸಕ್ಕೆ ಸೇರಿಕೊಂಡು ಹೊರಡುವ ಮಹಾ ವಲಸೆಯ ಕಥೆ ಇದು. ಆ ವಲಸೆಯಲ್ಲಿಯೇ ಮದುವೆ ಮಾಡಿಕೊಳ್ಳುವ ಮೀಟುವಿನ ಬಾಳಿನ ತಿರುವಿನ ಕಥೆ ಇಲ್ಲಿದೆ.
    ಚಿಕ್ಕವಳಿರುವಾಗ ನನಗೆ ರಾಧಾ ಕೃಷ್ಣರ ಕಥೆ ಅಚ್ಚರಿ ಹುಟ್ಟಿಸುತ್ತಿತ್ತು. ಇಡೀ ಜಗತ್ತಿಲ್ಲಿ ಅತ್ಯುನ್ನತ ಪ್ರೇಮಕ್ಕೆ ಉದಾಹರಣೆಯಾಗಿ ನೀಡುವ ಈ ಕಥೆಯ ನಾಯಕಿ  ರಾಧಾ ಕೃಷ್ಣನ ಪತ್ನಿಯಲ್ಲ. ಆಕೆ ಬರೀ ಕೃಷ್ಣನ ಪ್ರೇಯಸಿ. ಆಕೆಗೊಬ್ಬ ಗಂಡನಿದ್ದಾನೆ. ಅವಳದ್ದೇ ಆದ ಒಂದು ಸಂಸಾರವಿದೆ. ಆದರೆ ಕೃಷ್ಣನ ಮೇಲಿರುವ ಅವಳ ಪ್ರೇಮಕ್ಕೆ ಯಾವುದೇ ಹೋಲಿಕೆಯಿಲ್ಲ. ಅಚ್ಚರಿಯೆಂದರೆ ಈ ಪ್ರೇಮ ಎಂದೂ ಅನೈತಿಕ ಎಂದು ಅನ್ನಿಸಿಕೊಳ್ಳಲೇ ಇಲ್ಲ. ತೀರಾ ಮಡಿವಂತರಿಂದ ಹಿಡಿದು ತೀರಾ ಕರ್ಮಠ ಸಂಪ್ರದಾಯಿಗಳವರೆಗೆ ಎಲ್ಲರೂ ಈ ಪ್ರೇಮವನ್ನು ಅತ್ಯಂತ ಸಹಜ ಎಂದು ಒಪ್ಪಿಕೊಂಡಿದ್ದರು. ಆದರೆ ನಿಜ ಜೀವನಕ್ಕೆ ಬಂದ ಕೂಡಲೇ ಈ ತರಹದ ಪ್ರೇಮಗಳೆಲ್ಲ ಅನೈತಿಕ ಅಥವಾ ಹಾದರ ಎನ್ನಿಸಿಕೊಳ್ಳುತ್ತದೆ. ಬಾಜಿರಾವ್ ಎಂಬ ಮರಾಠಾ ಶೂರ ಮಸ್ತಾನಿ ಎಂಬ ಮುಸ್ಲಿಂ ಯುವತಿಯನ್ನು ಪ್ರೇಮಿಸಿದರೆ ಅದು ಅಪ್ಪಟ ಸಾಮಾಜಿಕ ಬಹಿಷ್ಕಾರಗೊಂಡ ಪ್ರೇಮವಾಗುತ್ತದೆ. ಕೊನೆಯಪಕ್ಷ ಬಾಜಿರಾವ್ ಹಾಗೂ ಮಸ್ತಾನಿಯ ಈ ಪ್ರೇಮ ಕಥಾನಕವಾಗಿಯಾದರೂ ಅದೆಷ್ಟೋ ಕಾಲದ ನಂತರ ಒಪ್ಪಿತವಾಗುತ್ತದೆ. ಆದರೆ ಜನಸಾಮಾನ್ಯರ, ನಮ್ಮ ನಿಮ್ಮ ನಡುವೆಯೇ ಇಂತಹ ಪ್ರೇಮವನ್ನು ಕಂಡರೆ ನಾವು ಹೇಗೆ ಅವರೊಡನೆ ವ್ಯವಹರಿಸಬಹುದು ಎಂದು ಒಮ್ಮೆ ಯೋಚಿಸಿ ನೋಡಿ. ವಿವಾಹದ ಆಚೆಗಿರುವ ಗಂಡು ಹೆಣ್ಣಿನ ಸಂಬಂಧವನ್ನು ನಾವು ಯಾವ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕೆಲವು ವರ್ಷಗಳ ಹಿಂದೆ ಒಬ್ಬ ವಿವಾಹಿತ ಯುವತಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣವಿಷ್ಟೇ. ಅರಬ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಗಂಡ ಊರಿಗೆ ಬಂದವನು ಅವಳ ಬಳಿ ಬರದೇ ಸೀದಾ ಅವನ ತಾಯಿಯ ಬಳಿ ಹೋಗಿದ್ದ. ಅದಕ್ಕೆ ಕಾರಣವೂ ಇತ್ತೂ ಈ ಯುವತಿ ಬೇರೆ ಯುವಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆತನಿಗೆ ತಿಳಿಸಲಾಗಿತ್ತು. ಗಂಡ ಬರುತ್ತಾನೆ ಎಂದು ಎರಡು ದಿನ ಕಾದ ಆಕೆ ನಂತರ ಬೆಂಕಿ ಹಚ್ಚಿಕೊಂಡಿದ್ದಳು. ಆಗಲೆಲ್ಲ  ಆಕೆ ರಾತ್ರಿ ಹೊತ್ತು ಹೊರಗೆ ನಿಂತು ಒಬ್ಬನ ಬಳಿ ಮಾತನಾಡುತ್ತಿರುತ್ತಾಳೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ನಿಜಕ್ಕೂ ನನಗೆ ಅಚ್ಚರಿ. ‘ಆ ಯುವಕನೊಂದಿಗೆ ಆಕೆಯ ಸಂಬಂಧ ಇದ್ದಿದ್ದೇ ನಿಜವಾದರೆ ಮನೆಯ ಹೊರಗೆ ನಿಂತು ಮಾತನಾಡುವ ಅಗತ್ಯವಾದರೂ ಏನಿದೆ? ಹೊರಗೆ ನಿಂತು ಮಾತನಾಡುತ್ತಿದ್ದಾಳೆಂದರೆ ಅವರಿಬ್ಬರ ನಡುವೆ ನಾವೆಲ್ಲ ಅನುಮಾನಿಸುವ ಸಂಬಂಧ ಇರಲಿಕ್ಕಿಲ್ಲ. ಅದು ಕೇವಲ ಸ್ನೇಹವಿರಬಹುದು.’ ಎಂದು ಅವಳ ಪರವಾಗಿ ಮಾತನಾಡಿದ್ದೆ. ಆದರೆ ಏನೇ ಆದರೂ ವಿವಾಹದ ಆಚೆಗಿನ ಹೆಣ್ಣು ಗಂಡಿನ ಸ್ನೇಹ ಕೂಡ ಅನುಮಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ಗಮನಿಸುವಾಗ ಈ ಕಾದಂಬರಿಯಲ್ಲಿನ ಅಂತಹುದ್ದೊಂದು ಸಂಬಂಧ ಹೇಗೆ ಇಡೀ ಬಂಜಾರಾ ಜನಾಂಗವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂಬುದನ್ನು ಗಮನಿಸಬೇಕಿದೆ.


   ಮೀಟು ಹೊರಟಿದ್ದು ಆಸೀಫ್‌ಖಾನ್ ಎನ್ನುವವನೊಡನೆ. ಆದರೆ ಆತನ ಮಗಳು ಮೀಟುವಿನ ಶೌರ್‍ಯಕ್ಕೆ ಮರುಳಾಗಿ ಆತನಿಗೆ ಒಲಿದು ಬಂದಿದ್ದಳು. ಇತ್ತ ಆಗತಾನೆ ಮದುವೆಯಾದ ಮೀಟು ಸೈನಾಜ್‌ಳ ಒತ್ತಾಯಕ್ಕೆ ಅನಿವಾರ್‍ಯವಾಗಿ ಅವಳೊಂದಿಗೆ ಸಂಬಂಧ ಬೆಳೆಸಬೇಕಾಗಿತ್ತು. ಅವಳ ಮದುವೆಯ ನಂತರವೂ ಈ ಸಂಬಂಧ ಮುಂದುವರೆದು ಆಕೆ ಮಿಟುವಿನಿಂದ ಒಬ್ಬ ಮಗನನ್ನು ಪಡೆಯುವ ಆಕೆ ಬಾಣಂತಿಯ ನಂಜಿನಿಂದ ಸಾವನ್ನಪ್ಪುತ್ತಾಳೆ. ಆದರೆ ಮುಂದೊಮ್ಮೆ ಅವಳ ಗಂಡ ಲತೀಫ್‌ಖಾನ್‌ನಿಗೆ ಇವರ ವಿಷಯ ಗೊತ್ತಾಗಿದ್ದಲ್ಲದೇ ಮಾವನ  ಅಧಿಕಾತರವನ್ನು ಪಡೆಯುವುದಕ್ಕೋಸ್ಕರ ಮೀಟುನನ್ನು ಕೊಂದು ಹಾಕುವುದರೊಂದಿಗೆ ಕಥೆ ಮತ್ತೊಂದು ತಿರುವು ಪಡೆಯುತ್ತದೆ.
   ಮೀಟುವಿನ ತಮ್ಮ ಥಾವೂ ಅಣ್ಣನ ಹೆಂಡತಿ ಹಾಗೂ ಮಗ ದೇಸೂನನ್ನು ತುಂಬ ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಾನಾದರೂ ಪೀಳಿಗೆಗಳು ಮುಂದುವರೆದಂತೆ ಹಳೆಯ ಬಾಂಧವ್ಯದ ಎಳೆ ಬಿಚ್ಚಿಕೊಳ್ಳುತ್ತ ಸಡಿಲವಾಗುತ್ತದೆ. ಇತ್ತ ಥಾವೂ ಕೂಡ ಹೈದರಾಬಾದಿನ ಕಡೆ ವ್ಯಾಪಾರಕ್ಕೆಂದು ಮಗ ಲಚ್ಮಿ ಜೊತೆ ಹೋದವನು ಅಲ್ಲಿ ನಿಜಾಮರ ಜೊತೆಗಿದ್ದ ಲತೀಫ್‌ಖಾನನ ಮಗನ ಸೈನಿಕರಿಂದ ಸತ್ತು ಹೋಗುತ್ತಾನೆ. ಇರಿತದ ಗಾಯದ ನಂಜೇರಿ ಲಚ್ಮ ಕೂಡ ಮರಣ ಹೊಂದುತ್ತಾನೆ. ಲಚ್ಮನ ಹೆಂಡತಿ ಗುಜಾ ಸತಿಯಾಗುತ್ತಾಳೆ. ಆಕೆ ದೈವಿಸ್ಥಾನ ಪಡೆಯುತ್ತಾಳೆ. ಇಂದಿಗೂ ಭರಮ್‌ಕೋಟ್‌ದ ಜನಾಂಗ ಗುಜಾಸತಿಯನ್ನು ಪ್ರಾರ್ಥಿಸಿಯೇ ಮುಂದುವರೆಯುವ ಸಂಪ್ರದಾಯವಿದೆ.


   ಮುಂದೆ ದೇಸು ಹೈದರಾಬಾದಿನ ಕಡೆ ಪುನಃ ವ್ಯಾಪಾರಕ್ಕೆ ಹೊರಟಾಗ ಮತ್ತೆ ಲತೀಫ್‌ಖಾನನ ಮಗ ಜಂಗ್ಲಿಖಾನ್‌ನ್ನು ಭೇಟಿಯಾಗುವ ಸಂದರ್ಭ ಎದುರಾಗುತ್ತದೆ. ತನ್ನಂತೆಯೇ ಇರುವ ಬಂಜಾರಾನನ್ನು ನೋಡಲು  ಆಸಕ್ತನಾದ ಜಂಗ್ಲಿಖಾನನನ್ನು ಸಂಧಿಸಿದಾಗ ಇಬ್ಬರಿಗೂ ಒಳಮರ್ಮ ಅರ್ಥವಾದರೂ ಏನೂ ಅರಿವಾಗದಂತೆ ಇಬ್ಬರೂ ದೂರವಾಗಿದ್ದರೂ ದರೋಡೆಕೋರರು ದಾಳಿ ಮಾಡಿದಾಗ ಪುನಃ ಜಂಗ್ಲಿಖಾನನೇ ಬಂದು ದೇಸುವಿನ ರಕ್ಷಣೆ ಮಾಡಿದ್ದ. ಇದು ಕಥೆಯೊಳಗೆ ಕಾಣುವ ಮಾನವ ಸಂಬಂಧದ ಮಿತಿ ಮತ್ತು ಶ್ರೇಷ್ಠತೆಯನ್ನು ತೋರಿಸುತ್ತದೆ. ಆದರೆ ದೇಸುವಿನ ಚಿಕ್ಕಪ್ಪ ಥಾವೂನ ಮಗ ತೋತ್ಯಾ ಬೇರೆಯಾಗಿದ್ದ. ಸಂಬಂಧಗಳು ನಿಧಾನವಾಗಿ ಹರಿದು ಹೋಗತೊಡಗಿತ್ತು.
   ಇದಾದ ನಂತರ ಈ ಬಂಜಾರರಿಗೆ ದೊಡ್ಡ ಏಟು ಬಿದ್ದಿದ್ದು ಬ್ರಿಟೀಷ್ ಆಡಳಿತದಲ್ಲಿ. ಸ್ವತಃ ವ್ಯಾಪಾರಿಗಳಾದ ಬ್ರಿಟೀಷರು, ಈ ಚಿಕ್ಕಪುಟ್ಟ ವ್ಯಾಪಾರಿಗಳನ್ನೆಲ್ಲ ಹೊಸಕಿ ಹಾಕಿಬಿಟ್ಟಿದ್ದರು. ತಮ್ಮ ಅನುಮತಿಯಿಲ್ಲದೇ ವ್ಯಾಪಾರ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಬಂಜಾರರನ್ನೆಲ್ಲ ದರೋಡೆಕೋರರೆಂದು ಬಿಂಬಿಸಿ ಬಿಟ್ಟಿದ್ದರು. ಬ್ರಿಟೀಷರಿಂದ ತಮ್ಮನ್ನು ಕಾಪಾಡಿಕೊಳ್ಳುವ ಸಲುವಾಗಿ ಮತ್ತೆ ಈ ಜನಾಂಗ ಕಾಡುಗಳನ್ನೇ ಆಶ್ರಯಿಸಬೇಕಾದದ್ದು ವಿಪರ್‍ಯಾಸ. ದೇಸೂನ ನಂತರ ಧನಸಿಂಗ್, ಅವನ ನಂತರ ಹನುಮನಾಯ್ಕ ಹಾಗೆಯೇ ಸಾಗಿ ಸೂರ್ಯನಾಯ್ಕನವರೆಗಿನ ಕಥೆಯನ್ನು ಹೇಳುತ್ತದೆ.


   ಇಡೀ ಕಾದಂಬರಿಯ ಕೊನೆಯ ಹಂತದಲ್ಲಿ ಬಂಜಾರಾ ಜನಾಂಗ ಹೇಗೆ ಆಧುನಿಕತೆಯತ್ತ ಮುಖ ಮಾಡಿದೆ ಎನ್ನುವುದನ್ನು ಹಂತಹಂತವಾಗಿ ತಿಳಿಸುತ್ತದೆ. ಭಮರ್‌ಕೋಟ್ಯಾದ ಕವಲುಗಳು ಬೇರೆಬೇರೆಯಾಗಿ ಈಗಿನ ಕರಮ್‌ತೋಟ್ ಜನಾಂಗದ ಸೂರ್ಯನಾಯ್ಕ ಉಪನ್ಯಾಸಕನಾಗಿದ್ದ. ಹೆಂಡತಿ ವಂದನಾ ಕೂಡ ಸಂಶೋಧನೆ ಮಾಡಿ ವಿದ್ಯಾವಂತೆ ಅನ್ನಿಸಿಕೊಂಡಿದ್ದಳು. ನೇರ ನಡೆನುಡಿಯ ಸೂರ್‍ಯ ನಾಯ್ಕ ಬದುಕನ್ನು ಸರಳವಾಗಿ ಎದುರಿಸಿದವನು. ಬಡತನದ ಬದುಕಿನಿಂದ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಕೊಂಡಿದ್ದನಾದರೂ ಸಹೋದ್ಯೋಗಿಗಳ ತುಳಿತಕ್ಕೂ ಒಳಗಾದವನು. ತನ್ನ ಮಕ್ಕಳಾದರೂ ಮೇಲೆ ಬರಲಿ ಎಂದು ಕಾಯುತ್ತಿರುವವನು
ಇಷ್ಟೆಲ್ಲದರ ನಡುವೆ ಇಡೀ ಕಾದಂಬರಿಯಲ್ಲಿ ಬಂಜಾರಾಗಳ ಪದ್ದತಿಗಳು, ಆಚಾರ ವಿಚಾರಗಳು ಯಥೇಶ್ಚವಾಗಿ ಕಾಣಸಿಗುತ್ತವೆ. ಪ್ರತಿ ಸಂಪ್ರದಾಯದ ಸ್ಥೂಲ ಚಿತ್ರಣವನ್ನು ಕೊಡುವುದರಲ್ಲಿ ಕಾದಂಬರಿಕಾರರು ಯಶಸ್ವಿಯಾಗುತ್ತಾರೆ. ಜೊತೆಗೆ ಬಂಜಾರಾ ಜನಾಂಗದ ಭಾಷೆಯ ಸಣ್ಣ ಪರಿಚಯವೂ ಸಿಗುತ್ತದೆ.


   ಚಿಕ್ಕವಳಿದ್ದಾಗ ಲಂಬಾಣಿ ಜನಾಂಗದ ಉಡುಪು ನೋಡುವುದೇ ಒಂದು ವಿಶೇಷ ಎನ್ನಿಸುತ್ತಿತ್ತು ನನಗೆ. ಕಟ್ಟಡ ಕೆಲಸ ಮಾಡಲು ಬಂದ ಬಂಜಾರಾ ಹೆಂಗಸರ ಬಳಿ ಮಾತನಾಡುತ್ತ ನಾಣ್ಯಗಳನ್ನು ಪೋಣಿಸಿ ಹೊಲೆದ ಅವರ ದುಪಟ್ಟಾಗಳನ್ನು ಮುಟ್ಟಿಮುಟ್ಟಿ ನೋಡಿ ಖುಷಿಪಡುತ್ತಿದ್ದೆ. ಯಾರ ಬಳಿಯಲ್ಲಾದರೂ ಸರಿ ಸಲೀಸಾಗಿ ಸ್ನೇಹ ಬೆಳೆಸುವ ನನ್ನ ಗುಣ ಆ ಹೆಂಗಳೆಯರ ಬಳಿ ಹೋಗುವಂತೆ ಮಾಡುತ್ತಿತ್ತು. ಕಾದಂಬರಿ ಓದಿ ಮುಗಿಸಿದ ನಂತರ ಶಾಂತಾ ನಾಯ್ಕರಿಗೆ ಫೋನ್ ಮಾಡಿ ನನಗೆ ನಿಮ್ಮ ಹೆಂಗಸರು ಹಾಕುವಂತಹ ಡ್ರೆಸ್ ಬೇಕು ಪುಟ್ಟ ಮಕ್ಕಳಂತೆ ಹಠ ಹಿಡಿದು ಹೇಳಿದ್ದೆ. ಮುಂದಿನ ಸಲ ಇಲ್ಲಿಗೆ ಬಂದಾಗ ಕೊಡಸ್ತೀನಿ. ಆದರೆ ಈಗ ಅದನ್ನು ಮಾಡೋದು ಕಡಿಮೆ ಆಗಿದೆ. ಹೇಳಿ ಮಾಡಿಸಬೇಕು. ಎಂದಿದ್ದಾರೆ. ಚಂದದ ನಾಣ್ಯ ಹೊಲಿದು ಮಾಡಿದ ಆ ದುಪಟ್ಟಾಗೋಸ್ಕರ ಈಗ ಕಾಯುತ್ತಿದ್ದೇನೆ.
                         —–

ಲೇಖಕರ ಬಗ್ಗೆ ಎರಡು ಮಾತು:
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

15 thoughts on “

  1. ಪುಸ್ತಕ ಪರಿಚಯ
    ಬಂಜಾರಾ ಜನಾಂಗದ
    ಹಲವಾರು ಕುತೂಹಲಕಾರಿ ಸಂಗತಿಗಳನ್ನು
    ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟಿದೆ.
    ಪುಸ್ತಕವನ್ನು ಓದಲೇಬೇಕು
    ಎನ್ನುವ ಕುತೂಹಲವನ್ನು ಮೂಡಿಸುವಷ್ಟು
    ಸೊಗಸಾಗಿ ಮೂಡಿ ಬಂದಿದೆ.
    ಅಭಿನಂದನೆಗಳು ಲೇಖಕರಿಗೆ
    ಸಂಪಾದಕರಿಗೆ ಧನ್ಯವಾದಗಳು

  2. ಕಥೆ ಕಣ್ಣಿಗೆ ಕಟ್ಟುವಂತಹ ವಿಶ್ಲೇಷಣೆ…. ತುಂಬ ಸುಂದರವಾದ ಪರಿಚಯ…

  3. ಬಹಳ ಸೊಗಸಾದ ವಿವರಣೆ ಮೇಡಮ್.
    ನಿಮ್ಮ ಪರಿಚಯವು ನಾವೇ ಪುಸ್ತಕ ಓದಿದಂತಹ
    ಅನುಭವ ನೀಡುತ್ತಾ ಸಾಗಿದೆ . ಅಭಿನಂದನೆಗಳು.

  4. ಬಹಳ ಸೊಗಸಾದ ವಿವರಣೆ ಮೇಡಮ್.
    ನಿಮ್ಮ ಪುಸ್ತಕ ಪರಿಚಯದ ಪರಿಯು ನಾವೇ
    ಪುಸ್ತಕ ಓದಿದಂತಹ ಅದ್ಭುತ ಅನುಭವ ನೀಡುತ್ತಾ
    ಸುಂದರವಾಗಿ ಮೂಡಿಬಂದಿದೆ .
    ಅಭಿನಂದನೆಗಳು ಮೇಡಮ್.

  5. Congratulations to the novelist Prof. Shantha Naik sir for writing another novel on the marginalised Lambani community . A review is insightful and descriptive.

  6. ತುಂಬಾ ಅದ್ಬುತವಾದ ಕಾದಂಬರಿ….. ಲಂಬಾಣಿ ಜನಾಂಗದ ನೈಜ ಘಟನೆ ಆಧಾರಿತ ಕಥೆ….

  7. ಅಪರೂಪದ ಕಥೆ …ಪ್ರತಿಯೊಬ್ಬ ಸಾಹಿತ್ಯ ಪ್ರೀಯರು ಓದಲೇಬೇಕಾದ ಕಥೆ , ಬಂಜಾರ ಜನಾಂಗದ ಸಾಮಾಜಿಕ ಭದ್ರತೆ ಮತ್ತು ಅವರ ನಲಿವುಗಳನ್ನು ವಿಭಿನ್ನ ಶೈಲಿಯ ಪದಪುಂಜಗಳಲ್ಲಿ ಫ್ರೋ.ಶಾಂತನಾಯ್ಕರ ಕೈಚಳಕವನ್ನು ನಾವು ಕಾಣಬಹುದಾಗಿದೆ, ಪ್ರಸ್ತುತ ಸಾಮಾಜಿಕ ವಿದ್ಯಮಾನದಲ್ಲಿ ಈ ರೀತಿಯ ಕಥಾವಸ್ತು ಅತ್ಯಂತ ಓದುಗರನ್ನು ಚಕಿತಗೊಳಿಸುವುದರಲ್ಲಿ ಅನುಮಾನವಿಲ್ಲ…
    ಶಶಿಧರ ಟಿ.ಎಂ. ಬಳ್ಳಾರಿ .

  8. ಪುಸ್ತಕ ಪರಿಚಯಕ್ಕೆ ಇತಿಹಾಸದ ಮಾಹಿತಿ ಪೂರಕವಾಗಿದೆ.
    ಧನ್ಯವಾದಗಳು ಉತ್ತಮ ಪುಸ್ತಕ ಪರಿಚಯಿಸಿದಕ್ಕೆ

  9. ನಿಮ್ಮ ಈ ವಿಮರ್ಶೆಯಿಂದ ನನಗೆ ಈ ಪುಸ್ತಕ ಓಡುಬೇಕೆಂಬ ಆಸೆ ಹುಟ್ಟಿದೆ ಧನ್ಯವಾದಗಳು ಮಾಡಮ್ ಬಹಳ ಅದ್ಭುತವಾಗಿ ವಿಮರ್ಶೆ ಮಾಡಿದ್ದೀರಿ ಧನ್ಯವಾದಗಳು

  10. ನಿಮ್ಮ ಈ ವಿಮರ್ಶೆಯಿಂದ ನನಗೆ ಈ ಪುಸ್ತಕ ಓದಬೇಕೆಂಬ ಆಸೆ ಹುಟ್ಟಿದೆ ಧನ್ಯವಾದಗಳು ಮಾಡಮ್ ಬಹಳ ಅದ್ಭುತವಾಗಿ ವಿಮರ್ಶೆ ಮಾಡಿದ್ದೀರಿ ಧನ್ಯವಾದಗಳು

Leave a Reply

Back To Top