ಬೊಗಸೆಯಲ್ಲೊಂದು ಹೂನಗೆ
ನೆನಪೊಂದು ಮಳೆಯಾಗಿ ಸುರಿದಾಗಲೆಲ್ಲ ನಗುವೊಂದು ಮಳೆಯ ಹನಿಗಳಾಗಿ ಅಂಗೈಯನ್ನು ಸ್ಪರ್ಶಿಸುತ್ತದೆ. ಹಾಗೆ ಸ್ಪರ್ಶಿಸಿದ ಒಂದಿಷ್ಟು ಹನಿಗಳು ಜಾರಿಬಿದ್ದು ನೆಲವನ್ನು ಹಸಿಯಾಗಿಸಿದರೆ, ಉಳಿದವು ಬೊಗಸೆಯಲ್ಲೊಂದು ಹೊಸ ಪ್ರಪಂಚವನ್ನು ಬಿಚ್ಚಿಡುತ್ತವೆ. ಹಾಗೆ ನಮ್ಮೆದುರು ತೆರೆದುಕೊಳ್ಳುವ ಪ್ರಪಂಚದಲ್ಲಿ ಕೈಗೂಸಿನ ಕನಸಿನಂಥ ನಗುವೊಂದು ಅಮ್ಮನ ಮಡಿಲಿನಲ್ಲಿ ಕದಲಿದರೆ, ಹೂನಗೆಯ ಹೊತ್ತ ಹುಡುಗಿಯೊಬ್ಬಳು ಸೈಕಲ್ಲನ್ನೇರಿ ಕನಸಿನಂತೆ ಮರೆಯಾಗುತ್ತಾಳೆ; ಹನಿಮೂನ್ ಪ್ಯಾಕೇಜಿನ ರೆಸಾರ್ಟ್ ಒಂದರ ಡೈನಿಂಗ್ ಹಾಲ್ ನಲ್ಲಿ ನಾಚಿಕೆಯ ನಗುವೊಂದು ಮೋಂಬತ್ತಿಯಾಗಿ ಕರಗಿದರೆ, ಆಪರೇಟಿಂಗ್ ರೂಮೊಂದರಿಂದ ಹೊರಬಂದ ವೈದ್ಯರ ನಗುವೊಂದು ಕಣ್ಣೀರನ್ನೆಲ್ಲ ಕರಗಿಸಿ ಕಣ್ಮರೆಯಾಗಿಸುತ್ತದೆ. ಹೀಗೆ ನಗುವಿನಲ್ಲಿ ಕಣ್ತೆರೆವ ಬದುಕೊಂದು ಜಾತ್ರೆಯಲ್ಲಿ ಖರೀದಿಸಿದ ಹೇರ್ ಕ್ಲಿಪ್ಪಿನಲ್ಲಿ, ಬಾಲ್ಯದ ಗೆಳೆಯನೊಬ್ಬನ ನೆನಪಿನಲ್ಲಿ, ಕಾಲೇಜಿನ ಗ್ರೂಪ್ ಫೋಟೋಗಳಲ್ಲಿ, ಕಂಟ್ರೋಲಿಗೆ ಸಿಕ್ಕುವ ಶುಗರ್ ಲೆವಲ್ಲಿನಲ್ಲಿ, ತಾನೇ ನಗುವಾಗಿ ಅರಳುತ್ತದೆ.
ನಗುವೊಂದು ಬದುಕಿನೊಂದಿಗೆ ತೆರೆದುಕೊಳ್ಳುವ ರೀತಿಯೇ ಒಂದು ವಿಸ್ಮಯ. ಕ್ಯಾಮರಾಗಳಿಲ್ಲದ ಕಾಲದಲ್ಲಿ ಅಪ್ಪನ ಕಣ್ಣುಗಳಲ್ಲಿ, ಅಮ್ಮನ ಹೃದಯದಲ್ಲಿ ಪ್ರಿಂಟಾಗುತ್ತಿದ್ದ ಮಗುವಿನ ನಗೆಯೊಂದು ಬಿಡುವಿನ ಸಮಯದಲ್ಲಿ ಎಳೆಎಳೆಯಾಗಿ ಧಾರಾವಾಹಿಯಂತೆ ಜಗಲಿಯಲ್ಲಿ ಬಿಚ್ಚಿಕೊಳ್ಳುತ್ತಿತ್ತು. ಮಗುವಿಗೆ ಮೊದಲಹಲ್ಲು ಹುಟ್ಟಿದಾಗ ಅಮ್ಮನ ಮುಖದಲ್ಲರಳಿದ ನಗುವನ್ನು ಎಷ್ಟೇ ದುಬಾರಿಯ ಕ್ಯಾಮರಾದಿಂದಲೂ ಸೆರೆಹಿಡಿಯಲಾಗದು. ಅಂಬೆಗಾಲಿಡುತ್ತಲೋ, ಗೋಡೆಯನ್ನು ಹಿಡಿದು ಒಂದೊಂದೇ ಹೆಜ್ಜೆಯನ್ನಿಡುತ್ತಲೋ ಅಮ್ಮನ ತೆಕ್ಕೆ ಸೇರುವ ಮಗುವೊಂದು ಅಮ್ಮನ ಮಡಿಲಿಗೆ ಸುರಿಯುವ ನಗುವಿಗೆ ಪರ್ಯಾಯ ನಗುವೊಂದನ್ನು ಸೃಷ್ಟಿಸಲಾಗದು. ಮಗುವಿನ ಬೆಳವಣಿಗೆಯ ಪ್ರತೀಹಂತವೂ ಸುಂದರವೆನ್ನಿಸುವುದು ಅದು ಕಟ್ಟಿಕೊಡುವ ಬದುಕಿನ ಸಾಧ್ಯತೆಗಳಲ್ಲಿ. ಆ ಸಾಧ್ಯತೆಗಳೆಲ್ಲ ನೆನಪುಗಳಾಗಿ, ಕನಸಾಗಿ, ಒಮ್ಮೊಮ್ಮೆ ದುಗುಡವಾಗಿ, ನಗುವಿನಲ್ಲಿ ಸುಖಾಂತ್ಯವಾಗುವ ಸನ್ನಿವೇಶಗಳಾಗಿ, ಸಂಸಾರವೊಂದರ ರಸವತ್ತಾದ ಕಥೆಗಳಾಗಿ ಉಳಿದುಕೊಳ್ಳುತ್ತವೆ. ಅಂತಹ ದುಗುಡವೊಂದು ನಗುವಾಗಿ ಬದಲಾಗಿ ನನ್ನ ಬದುಕಿನಲ್ಲಿ ಉಳಿದ ಕಥೆ ಕೂದಲಿನದು. ನಾನು ಹುಟ್ಟಿ ಒಂದು ವರ್ಷವಾದರೂ ನನ್ನ ತಲೆಯಲ್ಲಿ ಒಂದೇ ಒಂದು ಕೂದಲು ಹುಟ್ಟುವ ಲಕ್ಷಣವೂ ಕಾಣಿಸಿಕೊಳ್ಳಲಿಲ್ಲವಂತೆ. ಏನಾದರೂ ಸಮಸ್ಯೆಯಿರಬಹುದೆಂದು ಡಾಕ್ಟರಿಗೆ ತೋರಿಸಲು ಕರೆದೊಯ್ದರೆ ಗುಂಡುಗುಂಡಾಗಿ ಮುದ್ದಾಗಿದ್ದ ನನ್ನನ್ನು ಎತ್ತಿಕೊಂಡೇ ರೌಂಡ್ಸ್ ಮುಗಿಸಿದ ಡಾಕ್ಟರು, ಏನೂ ಸಮಸ್ಯೆಯಿಲ್ಲವೆಂದು ಸಮಾಧಾನ ಮಾಡಿದರೂ ಅಮ್ಮನ ಚಿಂತೆ ಕರಗಲಿಲ್ಲವಂತೆ. ದೇವತೆಯಂಥ ಅಮ್ಮ ದೇವರಿಗೆ ಹರಕೆ ಹೊತ್ತು ನನ್ನ ತಲೆಯಮೇಲೆ ಕೂದಲು ಕಾಣಿಸಿಕೊಂಡು, ಅಮ್ಮನ ದುಗುಡವೊಂದು ದೇವರು ಕಣ್ಬಿಡುವಲ್ಲಿಗೆ ಸುಖಾಂತ್ಯ ಕಂಡಿತು. ಈಗಲೂ ಪಾರ್ಲರಿನ ಕತ್ತರಿಗೆ ಕೂದಲು ಕೊಡುವಾಗಲೆಲ್ಲ ಅಮ್ಮನ ದುಗುಡವೇ ಕಣ್ಮುಂದೆ ಬಂದು ನಿಂತಂತಾಗಿ, ಕಾಣದ ದೇವರಲ್ಲೊಂದು ಕ್ಷಮೆ ಯಾಚಿಸುತ್ತೇನೆ. ಒಂದೊಂದೇ ಕೂದಲು ಬೆಳ್ಳಗಾಗುತ್ತಿರುವುದು ಕಾಣಿಸಿದಾಗಲೆಲ್ಲ ಈ ದುಗುಡಕ್ಕೆ ಯಾವ ದೇವರಲ್ಲಿ ಪರಿಹಾರವಿರಬಹುದೆಂದು ಯೋಚಿಸಿ, ನಕ್ಕು ಸುಮ್ಮನಾಗುತ್ತೇನೆ.
ದೇವರಿಗೂ ಡಾಕ್ಟರಿಗೂ ಜಾಸ್ತಿ ವ್ಯತ್ಯಾಸವಿಲ್ಲ ಎನ್ನುವ ನಂಬಿಕೆ ನನ್ನದು. ದೇಹಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಡಾಕ್ಟರ್ ಹತ್ತಿರ ಸಿಗದ ಪರಿಹಾರವೊಂದು ದೇವರ ಹತ್ತಿರ ಇದ್ದಿರಬಹುದಾದ ಸಾಧ್ಯತೆಗಳೆಲ್ಲವೂ ನನ್ನ ನಂಬಿಕೆಯಿಂದ ಹೊರಗೆ ಇರುವಂಥವುಗಳು. ದೇವರಂಥ ಡಾಕ್ಟರ್ ಎನ್ನುವ ನಂಬಿಕೆಯೊಂದು ನಿಜವಾಗಬಹುದೇ ಹೊರತು ದೇವರನ್ನೇ ಡಾಕ್ಟರನ್ನಾಗಿಸಿದರೆ ದೇವರ ನಗುವನ್ನೂ ಕಸಿದುಕೊಂಡಂತಾದೀತು. ಇಂತಹ ದೇವರ ರೂಪದ ವೈದ್ಯರೊಬ್ಬರು ಪ್ರತಿಯೊಬ್ಬರ ಜೀವನದಲ್ಲೂ ನಗುವನ್ನು ಮರಳಿಸಲು ಅಥವಾ ಇಲ್ಲದ ನಗುವೊಂದನ್ನು ಹೊಸದಾಗಿ ಹುಟ್ಟಿಸಲು ಕಾರಣೀಕರ್ತರಾಗಿರುತ್ತಾರೆ. ಸ್ವರ್ಗದ ಕಲ್ಪನೆಯನ್ನು ಸರಾಗವಾಗಿ ಕಟ್ಟಿಕೊಡುವ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನಾನು ಬೆಂಗಳೂರಿಗೆ ಬಂದಾಗ ಅನಾರೋಗ್ಯ ಎನ್ನುವುದು ಸಮಯ ಸಿಕ್ಕಾಗಲೆಲ್ಲ ಬೆನ್ನಹಿಂದೆ ಬಿದ್ದು ಹಿಂಸಿಸುತ್ತಿತ್ತು. ಗಂಭೀರವೂ ಅಲ್ಲದ, ನಿರ್ಲಕ್ಷ್ಯಿಸಲೂ ಆಗದ ಸಣ್ಣಪುಟ್ಟ ತೊಂದರೆಗಳೆಲ್ಲ ಸಂಜೆಯಾದಂತೆ ಸಮಯ ತಪ್ಪದೇ ಹಾಜರಾಗುವ ಸೊಳ್ಳೆಗಳಂತೆ ಕಾಟ ಕೊಡುತ್ತಿದ್ದವು. ಅವರಿವರು ಸೂಚಿಸಿದ ಆಸ್ಪತ್ರೆ, ಡಾಕ್ಟರುಗಳನ್ನೆಲ್ಲ ಭೇಟಿ ಮಾಡಿದ್ದಾಯಿತು. ಬಣ್ಣಬಣ್ಣದ ಮಾತ್ರೆಗಳೆಲ್ಲ ಕಣ್ಮುಂದೆ ಬಂದು ಕುಣಿದಂತೆನ್ನಿಸಿ, ಮುಖದ ಮೇಲಿಂದ ನಗುವೊಂದು ಅದೆಲ್ಲಿಯೋ ಮಾಯವಾಗಿಹೋಯಿತು. ಈ ಅನಾರೋಗ್ಯದ ಕಥೆಗೊಂದು ತಿರುವು ಸಿಕ್ಕಿದ್ದು ಪರಿಚಿತರೊಬ್ಬರು ತೋರಿಸಿದ ದವಾಖಾನೆಯಿಂದ. ತಪಾಸಣೆ ಮಾಡಿದ್ದಕ್ಕೆ ಶುಲ್ಕವನ್ನು ಕೂಡಾ ಪಡೆಯದೇ ಔಷಧದ ಖರ್ಚನ್ನು ಮಾತ್ರವೇ ತೆಗೆದುಕೊಳ್ಳುತ್ತಿದ್ದ ವೈದ್ಯರೊಬ್ಬರು ನಡೆಸುತ್ತಿದ್ದ ಆ ದವಾಖಾನೆ, ಅವರ ಮುಖದಲ್ಲಿದ್ದ ಮಂದಹಾಸದಿಂದಾಗಿ ಪುಟ್ಟದೊಂದು ದೇವಸ್ಥಾನದಂತೆ ಭಾಸವಾಗುತ್ತಿತ್ತು. ಅಂಥ ದೇವಸ್ಥಾನದಂಥ ದವಾಖಾನೆಯ ಪ್ರವೇಶದಿಂದ ವರ್ಷಗಟ್ಟಲೇ ಕಷ್ಟಪಟ್ಟ ಮೂಗು, ಗಂಟಲುಗಳೆಲ್ಲ ಎರಡೇ ತಿಂಗಳಿಗೆ ನೆಮ್ಮದಿಯಿಂದ ಉಸಿರಾಡಲಾರಂಭಿಸಿದವು. ಆರೋಗ್ಯ ಸುಧಾರಿಸಿ ಜೀವನಕ್ಕೆ ನಗುವೊಂದು ಮರಳಿ ದೊರಕಿದರೂ, ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗುವ ಭಕ್ತಿಯಲ್ಲಿ ದವಾಖಾನೆಗೆ ಹೋಗಿ ವೈದ್ಯರ ಆರೋಗ್ಯವನ್ನೇ ವಿಚಾರಿಸಿಕೊಂಡು ಪರಿಪಾಠವೊಂದು ಖಾಯಂ ಆಯಿತು. ಮನೆಯನ್ನು ಬದಲಾಯಿಸಿ ಬೇರೆ ಏರಿಯಾಕ್ಕೆ ಶಿಫ್ಟ್ ಆದರೂ ಔಷಧಿಯ ಅಗತ್ಯ ಬಿದ್ದಾಗಲೆಲ್ಲ, ನಗುವಿನಿಂದಲೇ ಅರ್ಧರೋಗವನ್ನು ವಾಸಿಮಾಡುತ್ತಿದ್ದ ದೇವರಂಥ ಡಾಕ್ಟರನ್ನು ನೆನಪಿಸಿಕೊಂಡು ನಗುನಗುತ್ತಲೇ ಮಾತ್ರೆಯನ್ನು ನುಂಗಿ ನೀರು ಕುಡಿಯುತ್ತೇನೆ.
ಹೀಗೇ ನೆನಪುಗಳೊಂದಿಗೆ ನಗುವೆನ್ನುವುದು ಒಂದಿಲ್ಲೊಂದು ವಿಧದಲ್ಲಿ ಅಂಟಿಕೊಂಡೇ ಇರುತ್ತದೆ. ಇನ್ನೆಂದೂ ಮರಳಿ ಬಾರದಂತೆ ನಮ್ಮನ್ನಗಲಿ ದೂರವಾದವರು, ಬದುಕಿದ್ದೂ ಸಂಪರ್ಕವಿಲ್ಲದೇ ಮರೆಯಾಗಿ ಹೋದವರು ಎಲ್ಲರೊಂದಿಗೂ ನೆನಪೊಂದು ನಗುವಾಗಿ ಬೆಸೆದುಕೊಂಡು ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನನ್ನೊಂದಿಗೆ ಓದುತ್ತಿದ್ದ ಹುಡುಗನೊಬ್ಬ ಯಾವಾಗಲೂ ಜಿದ್ದಿಗೆ ಬಿದ್ದವನಂತೆ ಜಗಳವಾಡುತ್ತಿದ್ದ. ಆ ವಯಸ್ಸಿನಲ್ಲಿ ಅದೊಂದು ಗಂಭೀರವಾದ ವಿಷಯವೇ ಆಗಿದ್ದರೂ ಈಗ ಅವನ ನೆನಪಾದಾಗಲೆಲ್ಲ, ಆ ಜಗಳಕ್ಕೆ ಕಾರಣವೇನಿದ್ದಿರಬಹುದೆಂದು ಯೋಚಿಸಿ ನನ್ನಷ್ಟಕ್ಕೆ ನಾನೇ ನಗುತ್ತಿರುತ್ತೇನೆ. ಕಾಮನ್ ಫ್ರೆಂಡ್ಸ್ ಎನ್ನುವಂಥವರು ಯಾರೂ ಇಲ್ಲದ ಕಾರಣ ಆತನನ್ನು ಇನ್ನುವರೆಗೂ ಹುಡುಕಲು ಸಾಧ್ಯವಾಗದೇ, ಆ ಜಗಳದ ಕಾರಣವೂ ಬಗೆಹರಿಯದೇ, ಅದು ದಯಪಾಲಿಸಿದ ಸಣ್ಣದೊಂದು ನಗುವನ್ನು ನನ್ನದಾಗಿಯೇ ಉಳಿಸಿಕೊಂಡಿದ್ದೇನೆ. ಆತ ಎಲ್ಲಾದರೂ ಒಮ್ಮೆ ಎದುರಾಗಿ ಜಗಳದ ಕಾರಣ ತಿಳಿದುಬಿಟ್ಟರೆ ಅಪರೂಪದ ನಗೆಯೊಂದು ಮರೆಯಾಗಿಬಿಡುವ ಭಯವಿದ್ದರೂ, ಸದ್ಯಕ್ಕೆ ಆ ನಗು ನನ್ನದೆನ್ನುವ ಸಮಾಧಾನದೊಂದಿಗೆ ಜಗಳದ ನೆನಪನ್ನೂ ಕಾಪಾಡಿಕೊಳ್ಳುತ್ತೇನೆ. ಇಂತಹ ಚಿಕ್ಕಪುಟ್ಟ ನೆನಪುಗಳೊಂದಿಗೆ ಶಾಶ್ವತ ನೆಂಟಸ್ತನ ಬೆಳೆಸಿಕೊಳ್ಳುವ ನಗುವೊಂದು ತನ್ನ ಕರ್ತವ್ಯವೆನ್ನುವಂತೆ ಮನಸ್ಸುಗಳನ್ನು ಬೆಸೆಯುತ್ತ, ಮಾತುಗಳನ್ನು ಬೆಳೆಸುತ್ತ, ಮೌನವನ್ನೂ ಗೌರವಿಸುತ್ತ ಸಂಬಂಧಗಳನ್ನೆಲ್ಲ ಕಾಪಾಡುತ್ತಿರುತ್ತದೆ. ಶಾಪಿಂಗ್ ಮಾಲ್ ನ ಅಂಗಡಿಗಳ ಗ್ಲಾಸುಗಳಲ್ಲಿ ಹೊಳೆಯುವ ಹೊಟ್ಟೆಪಾಡಿನ ನಗು, ಆಫೀಸಿನ ಕನ್ನಡಕದೊಳಗಿನ ಒತ್ತಡಕ್ಕೆ ಉತ್ತರವೆಂಬಂಥ ರಿಸೆಪ್ಷನ್ನಿನ ನಗು, ಸ್ಮೋಕಿಂಗ್ ಝೋನ್ ಒಂದರ ಬಿಡುಗಡೆಯ ನಗು, ಕಾಫಿಶಾಪ್ ಒಂದರ ಮೊದಲಭೇಟಿಯ ನಗು ಎಲ್ಲವೂ ಜೀವಂತವಾಗಿರುವವರೆಗೂ ಬೊಗಸೆಯಲ್ಲೊಂದಿಷ್ಟು ಸುಂದರ ಸಂಬಂಧಗಳು ನಸುನಗುತ್ತಿರುತ್ತವೆ.
*******************************
ಲೇಖಕರ ಬಗ್ಗೆ ಎರಡು ಮಾತು:
ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಆಹಾ…..ನೆನಪಂತಹ ನಗುವೇ… ನಗುವಂತಹ ನೆನಪೇ..! ಎಂಬೆಲ್ಲವನ್ನು ಮೀರಿದ ತಾಜಾ, ಆಪ್ತ ಬರಹ… ದೇವರಂತಹ ಡಾಕ್ಟರ್ ಎಂಬ ಜಿಜ್ಞಾಸೆಗೆ ಒತ್ತಾಸೆ ನೀಡಿರುವುದು ತುರ್ತಿನ ಕರೆ..ಇಷ್ಟವಾಯಿತು… ಕೆಲವು ಅಪರೂಪದ ಹೊಳವುಗಳು . ಧನ್ಯವಾದ ಮೇಡಮ್.. ಅಭಿನಂದನೆ ಸಹ.
ಗೋಪಾಲ್ ಅವರಿಗೆ ಧನ್ಯವಾದ. ನಿಮ್ಮ ವಿಶ್ವಾಸ ದೊಡ್ಡದು !
Hey sweetie
Nice
ಚಂದದ ಬರಹ ಅಂಜನಾ ❤️
ಥ್ಯಾಂಕ್ಸ್ ಸುಧಾ !
Nice One. Good Read!!!All the Best..
ನೆನಪುಗಳನ್ನು ನಗುವಿನ ಲೇಬಲ್ ಹಚ್ಚಿ ಸಂರಕ್ಷಿಸಿಡುವ ಪರಿ ಚೆನ್ನಾಗಿದೆ.
ಬರಹದ ಶೈಲಿ ಆಪ್ತವಾಗಿದೆ
ಥ್ಯಾಂಕ್ಯೂ ಸರ್ !