
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಬಳೆಗಳ ಬಗ್ಗೆ ಒಂದಷ್ಟು

ಹಸಿರು ಗಾಜಿನ ಬಳೆಗಳೆ
ಸ್ತೀ ಕುಲದ ಶುಭ ಸ್ವರಗಳೆ
ಈ ಕೈಗಳಿಗೆ, ಶೃಂಗಾರವೇ
ನೀವು ಘಲ್ಲೆಂದರೆ, ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮ
ಹಸಿರು ಗಾಜಿನ ಬಳೆಗಳೇ
ಈ ಹಾಡು ಕಿವಿಯ ಮೇಲೆ ಬಿದ್ದಾಗಲೆಲ್ಲ,ಏನೋ ಒಂದು ರೀತಿಯ ಪುಳಕ.ಬಂಗಾರ ಕಾಣದ ಕೈ ತುಂಬ ಹಸಿರು,ಕೆಂಪು ಚಿಕ್ಕಿ ಬಳೆಗಳು ಅದೆಷ್ಟು ಖುಷಿ ಕೊಡುತ್ತಿತ್ತು ಅಂದರೆ;ಕೈ ತಿರುವುತ್ತ ಅಡ್ಡಾಡಿದಷ್ಟು ಅದರ ಸದ್ದು ಮನಸ್ಸಿಗೆ ಮುದ ನೀಡುತ್ತಿತ್ತು. ಹೀಗಾಗಿ
ಬಳೆಗೆ ತಲೆಬಾಗದ ಯುವತಿಯರಿಲ್ಲ,ಬಳೆಯೊಂದು ನೂರುಭಾವಗಳ ಮರು ಸೃಷ್ಟಿಗೆ ಕಾರಣವಾಗುವ ದಿವ್ಯ ಅಸ್ತ್ರ ಎಂದರೆ ತಪ್ಪಾಗದು..ಜಗತ್ತು ಸೃಷ್ಟಿಯಾದಾಗ ಗಂಡು ಹೆಣ್ಣು ಬದುಕುತ್ತಿದ್ದ ರೀತಿ, ದೇಹದ ಸೌಂದರ್ಯ ಹೆಚ್ಚಿಸುವ ಸಲುವಾಗಿ ಪಡುತ್ತಿದ್ದ ಸಂಕಷ್ಟ ಇದ್ಯಾವುದು ಮಹತ್ವ ಪಡೆದಿರಲಿಲ್ಲ.ಕಾರಣ ಜೀವಿಗಳಿಗೆ ತಮ್ಮ ಅಸ್ತಿತ್ವ ಹೇಗಾಯಿತು? ನಾವ್ಯಾರು? ಎಂಬೆಲ್ಲ ಚಿಂತನೆಗಿಂತ,ಅವತ್ತಿನ ಬದುಕು ಹೇಗೆ ನಿಭಾಯಿಸಬೇಕು ಎಂಬೆಲ್ಲ ಭಯಾನಕ ದೃಶ್ಯಗಳಿಂದ ಹೊರಬರಲು ಸಾಕಷ್ಟು ಸಮಯ ಹಿಡಿದಿರಬಹುದು.ಕಾಲಕ್ರಮೇಣ ಬದಲಾವಣೆಯ ಗಾಳಿ ಪುರಾತತ್ವ ಕಾಲದಿಂದಲೂ ಜಾಗೃತವಾಗಿದ್ದರಿಂದ,ಸೌಂದರ್ಯ ಎನ್ನುವ ಹೆಸರಿನ ಮಾಯೆ ಕ್ರಮೇಣ; ಮಹಿಳೆ,ಪುರುಷರಲ್ಲಿ ವಿಭಿನ್ನವಾಗಿ ಕಂಡು ಬಂದಿತು. ಇತಿಹಾಸ ಸಾಕ್ಷಿಯಾಗಿದೆ. ಸಿಂಧುನದಿಯ ನಾಗರಿಕತೆ,ಹರಪ್ಪಮೊಹೆಂಜೋದಾರೊ ನಾಗರೀಕತೆಗಳಲ್ಲಿ ಬರುವ ಪಾತ್ರ ಚಿತ್ರಗಳನ್ನು ಗಮನಿಸಿದಾಗ,ಆಗಿನ ರಾಜ ಮಹಾರಾಜರು, ರಾಣಿಯರು,ಜನಸಾಮಾನ್ಯರು ಧರಿಸುವ ವಸ್ತ್ರವಿನ್ಯಾಸಗಳನ್ನು ಗಮನಿಸಿದಾಗ, ಆಭರಣಗಳೊಂದಿಗೆ ಮಹಿಳೆಯರು ಬಳೆಯನ್ನು ಧರಿಸಿದ್ದು ಕಂಡು ಬರುತ್ತದೆ.ಶತಮಾನಗಳು ಉರುಳಿದಂತೆ,ಧರಿಸುವ ಮಾದರಿಯಲ್ಲೂ ಬದಲಾವಣೆ.
ಹೆಣ್ಣು ಮಕ್ಕಳಿಗೆ ಕೈಗೆ ಬಳೆ,ಕಾಲಿಗೆ ಚೈನು,ಕಾಲುಬೆರಳಿಗೆ ಕಾಲುಂಗುರ,ಮೂಗಿಗೆ ಮೂಗುತಿ,ಕಿವಿಗೆ ಕಿವಿಯೊಲೆ,ಹಣೆಗೆ ಕುಂಕುಮ,ನೆತ್ತಿಗೆ ಶೃಂಗಾರದ ಲೇಪನ..ಮೇಲ್ಮೂಸುಕು..ಹೀಗೆ ಹೆಣ್ಣು ಒಂದು ಸೌಂದರ್ಯದ ಗಿಣಿಯಾಗಿ..ಕಣ್ಮುಂದೆ ಬಂದು ನಿಲ್ಲುತ್ತಾಳೆ.
ರೂಪಗಳು ಭಿನ್ನವಾದರೂ,ಅವಳನ್ನು ಗುರುತಿಸುವ ಲಕ್ಷಣಗಳು ಮಾತ್ರ ಒಂದೇ. ಉಳ್ಳವರು ಬಂಗಾರದ ಬಳೆ ಧರಿಸಿದರೆ,ಬಂಗಾರ ಖರೀದಿಸಲಾಗದ ಮಧ್ಯಮ ಹಾಗೂ ಬಡವರು ಗಾಜಿನ ಬಳೆ ಧರಿಸಿ ಸಂಭ್ರಮಿಸುತ್ತಾರೆ.ಹೌದು..ಬಳೆಗಳುಯಾವುದಾದರೇನು? ಅವು ಶೃಂಗರಿಸುವುದು ಮುದ್ದಾದ ಮುಂಗೈಗಳಿಗೆ…ಬಳೆಗಳ ಸದ್ದಿನಲಿ ಭಾವನೆಗಳ ಅಭಿವ್ಯಕ್ತಿಗೊಳಿಸುವ ಕಲೆ ಈ ಬಳೆಗಳಿಗಿದೆ.ಬಳೆಗಳು ಎಲ್ಲ ಹೆಣ್ಣು ಮಕ್ಕಳ ಆಕರ್ಷಣೆ. ಇದಕ್ಕೆ ಜಾತಿ,ಧರ್ಮದ ಬೇಧ ಭಾವವಿಲ್ಲ.ಬಳೆ ಇಷ್ಟ ಪಡದ ಮನಸ್ಸುಗಳಿಲ್ಲ.

“ಬ್ಯಾಂಗಲ್ಸ್ “ಎಂಬ ಪದವು ಬಾಂಗ್ರಿಯಿಂದ ಬಂದಿದೆ. ಕೈಯನ್ನು ಸುಂದರಗೊಳಿಸುವ ಆಭರಣ ಎಂದರ್ಥ.ಬಳೆಗಳನ್ನು ಚಿನ್ನ, ಹಿತ್ತಾಳೆ, ತಾಮ್ರ, ಪ್ಲಾಸ್ಟಿಕ್, ಜೇಡಿಮಣ್ಣು ಇತ್ಯಾದಿಗಳಿಂದ ತಯಾರಿಸಲಾಗುತ್ತದೆ. ಇಂತಹ ಅಮೂಲ್ಯ ಬಳೆಯ ಬಳಕೆಗೆ ಅದರದ್ದೆ ಆದ ಕೆಲವೊಂದು ಪ್ರಮುಖ ಪದ್ದತಿಗಳಿವೆ.ಬಳೆ ಮಾನಸಿಕವಾಗಿ,ಭಾವನಾತ್ಮಕವಾಗಿ ನಮ್ಮ ಭಾರತೀಯ ಸಂಸ್ಕೃತಿಯ ಜೀವಾಳವಾಗಿದೆ.ಅದರಲ್ಲಿ ಬಳೆಯ ಶಾಸ್ತ್ರದ ವಿಷಯ ಬಂದಾಗ ನಮ್ಮ ಸನಾತನ ಧರ್ಮದ ಕೆಲವೊಂದು ವಿಶಿಷ್ಟ ಸಂಪ್ರದಾಯಗಳು,ನಮ್ಮ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ತೋರಿಸುತ್ತದೆ.ಪಾಶ್ಚಾತ್ಯರು ಭಾರತೀಯ ವೇಷಭೂಷಣಗಳತ್ತ ಆಸಕ್ತರಾಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.ಮದುವೆ,ಸೀಮಂತ ವಿಶೇಷ ಕಾರ್ಯಕ್ರಮದಲ್ಲಿ ಬಳೆಗಳಿಗೆ ಅತಿ ಮಹತ್ವದ ಸ್ಥಾನವಿದೆ…ಶುಭ ಸಮಾರಂಭ ಪೂರ್ಣಗೊಳ್ಳುವುದೇ ಬಳೆತೊಡಿಸುವ ಶಾಸ್ತ್ರದಿಂದ. ಕೈತುಂಬ ಹಸಿರು ಚಿಕ್ಕಿ ಬಳೆಗಳು ಮಿಂಚುತ್ತಿದ್ದರೆ ಇನ್ನೇನು ಬೇಕು?. ಹಿರಿಯರ ಮಾತು ಅನುಭವದ ಮಾತೆಂದು ನಂಬುತ್ತೆವೆ.ಯಾಕೆಂದರೆ ನಮಗಿಂತ ಹೆಚ್ಚು ಮಳೆ ಕಂಡ ಜೀವಗಳು..ಅವರಿಗೆ ಸರಿ ಅನ್ನಿಸಿದ್ದು ಅಥವಾ ಅವರ ಹಿರಿಯರು ಹೇಳಿಕೊಟ್ಟಿದ್ದು ನಮಗೆ ವರ್ಗಾವಣೆ ಮಾಡಿದ್ದಂತೂ ಸತ್ಯ.
ಬಾಲ್ಯದ ಬಾಲಕಿಯಿಂದ,ಮುಪ್ಪಾನು ಮುದುಕಿ ತನಕ ಈ ಬಳೆಗಳ ಸಾಂಗತ್ಯ ಅವಿನಾಭಾವ ಸಂಬಂಧ ಹೊಂದಿವೆ.ಮದುವೆಯ ಬಳಿಕ ಕೈ ತುಂಬಾ ಗಾಜಿನ ಬಳೆಗಳನ್ನು ಧರಿಸುವುದು ವಾಸ್ತು ಪ್ರಕಾರವೂ ಪ್ರಯೋಜನವಿದೆ. ಬಳೆಗಳ ಸದ್ದು ಮನೆಯಲ್ಲಿ ಹರಡುವ ಕಾರಣ ಯಾವುದೇ ಋಣಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶ ಮಾಡುವುದಿಲ್ಲ. ಇದರಿಂದ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎನ್ನಲಾಗುತ್ತದೆ. ದುಷ್ಟಶಕ್ತಿಗಳ ಮನೆಯೊಳಗೆ ಪ್ರವೇಶಿಸದಂತೆ ಈ ಗಾಜಿನ ಬಳೆಗಳ ಸದ್ದು ತಡೆಯುತ್ತದೆ ಎಂಬ ನಂಬಿಕೆಯೂ ಇದೆ.ಮದುವೆ ಮನೆಯ ಸಡಗರದಲ್ಲಿ ಮಾಯವಾಗುತ್ತಿರುವ ಬಳೆ ಶಾಸ್ತ್ರ.ಬಳೆಗಾತಿ ಮನೆಗೆ ಬಂದು ಬಳೆ ಇಡಿಸುವುದು….

ನನ್ನವ್ವ ಯಾವಾಗಲೂ ಹೇಳುತ್ತಿರುತ್ತಾಳೆ,ಬಳೆಗಳೆಂದರೆ ಲಕ್ಷ್ಮೀ ದೇವಿಗೆ ಹೆಚ್ಚು ಇಷ್ಟವೆಂದು,ಅದರ ಇಂಪಾದ ಸದ್ದು ಸಮೃದ್ಧಿಯ ಸಂಕೇತವೆಂದು. ಆ ಮನೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ.ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ವೃದ್ಧಿಸಲು ಗಾಜಿನ ಬಳೆಯನ್ನು ಧರಿಸಬೇಕು.ಗಾಜಿನ ಬಳೆ ಧರಿಸುವುದರಿಂದ ಮಹಿಳೆಯರ ಮನಸ್ಸು ಶಾಂತವಾಗಿರುತ್ತದೆ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ಈ ಮೊದಲೇ ಹೇಳಿದಂತೆ ಬಳೆಗಳ ಸದ್ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ವರ್ಧಿಸುತ್ತದೆ. ಬಳೆಗಳನ್ನು ಧರಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರಾಗುತ್ತವೆ. ಉತ್ತಮ ಆರೋಗ್ಯ ಹಾಗೂ ವಿಶ್ರಾಂತಿಗಾಗಿ ಬಳೆಗಳನ್ನು ಧರಿಸುವುದು ಮುಖ್ಯವಾಗುತ್ತದೆ. ಆರೋಗ್ಯಕದ ದೃಷ್ಟಿಯಿಂದಲೂ ಬಳೆಗಳನ್ನು ಧರಿಸುವುದು ಪ್ರಯೋಜನಕಾರಿಯಾಗಿದೆ. ನಿಮ್ಮ ಮಣಿಕಟ್ಟಿನ ಮೇಲೆ ನೀವು ಬಳೆಗಳನ್ನು ಧರಿಸಿದಾಗ, ಅದು ಘರ್ಷಣೆಯನ್ನು ಉಂಟುಮಾಡುತ್ತದೆ, ಇದು ರಕ್ತ ಪರಿಚಲನೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ರಕ್ತದೊತ್ತಡದ ಹೆಚ್ಚಳದ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಕೆಲವು ಸಂಪ್ರದಾಯಗಳಲ್ಲಿ, ಪ್ರತಿ ಹತ್ತು ದಿನಗಳಿಗೊಮ್ಮೆ ಬಳೆಗಳನ್ನು ಬದಲಾಯಿಸುವ ಪದ್ಧತಿ ಇದೆ. ಬಳೆ ಒಡೆದರೆ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ ಎಂದು ನಂಬಲಾಗುತ್ತದೆ.
ಗರ್ಭಿಣಿಯರು ಬಳೆ ಧರಿಸುವ ಸಮಯ ಏಳು ತಿಂಗಳ ನಂತರ ಏಕೆಂದರೆ,ಮಗುವಿನ ಮೆದುಳಿನ ಕೋಶಗಳ ಬೆಳವಣಿಗೆ ಉಂಟಾಗುತ್ತದೆ ಮತ್ತು ಅವರು ವಿಭಿನ್ನ ಶಬ್ದಗಳನ್ನು ಗುರುತಿಸಲು ಪ್ರಾರಂಭಿಸುತ್ತಾರೆ. ಶಬ್ದವು ಮಗುವಿನ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಶೀಘ್ರದಲ್ಲೇ ತಾಯಿಯಾಗಲಿರುವ ತಾಯಿಗೆ ಪ್ರಯೋಜನವನ್ನು ನೀಡುತ್ತದೆ ಏಕೆಂದರೆ ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಅವರ ಮನಸ್ಸನ್ನು ಶಾಂತಗೊಳಿಸುತ್ತದೆ.ಬಳೆಗಳ ಬಣ್ಣವೂ ಪ್ರಮುಖವಾದದ್ದು,ನಿರ್ದಿಷ್ಟ ಬಣ್ಣಗಳನ್ನು ಧರಿಸುವುದು ಸೂಕ್ತ.ಕೆಂಪು ಮತ್ತು ಹಸಿರು ಬಣ್ಣಗಳನ್ನು ಅತ್ಯಂತ ಮಂಗಳಕರ ಬಣ್ಣಗಳೆಂದು ಪರಿಗಣಿಸಲಾಗುತ್ತದೆ. ಕೆಂಪು ಮತ್ತು ಹಸಿರು ಬಳೆಗಳು ಧನಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ತರುತ್ತವೆ. ಆದಾಗ್ಯೂ, ಈ ಬಣ್ಣಗಳನ್ನು ವಿವಾಹಿತ ಮಹಿಳೆಯರು ಮಾತ್ರ ಧರಿಸಬೇಕು ಅನ್ನುವುದು ಇದೆ.ಮದುವೆಯಲ್ಲಿ ಬಳೆ ಶಾಸ್ತ್ರವು ವಧುವಿನ ಕಡೆಯಿಂದ ಕುಟುಂಬದ ವಿವಾಹಿತ ಮಹಿಳೆಯರಿಗೆ ಬಳೆಗಳನ್ನು ವಿತರಿಸುವ ಒಂದು ಸಣ್ಣ ಪೂರ್ವ-ವಿವಾಹ ಸಮಾರಂಭವಾಗಿದೆ. ಬಳೆಗಳು ಮಹಿಳೆಯರಿಗೆ ಕೇವಲ ಫ್ಯಾಷನ್ ಪರಿಕರ ಮಾತ್ರವಲ್ಲ, ಆರೋಗ್ಯ, ಅದೃಷ್ಟ ಮತ್ತು ಸಮೃದ್ಧಿಗೆ ಸಂಬಂಧಿಸಿದ ಸಾಂಕೇತಿಕ ಮಹತ್ವವನ್ನು ಹೊಂದಿವೆ.
ಒಟ್ಟಾರೆಯಾಗಿ ಹೇಳುವುದಾದರೆ,
ಇಷ್ಟೆಲ್ಲ ಹೇಳಿರುವುದು ಕೇವಲ ನಾವು ನೀವು ಮೊದಲಿನಿಂದ ಅನುಸರಿಸಿಕೊಂಡು ಬಂದಿದ್ದು.ಬಳೆ ಧರಿಸದ ಕಾಲದಲ್ಲಿ ನಾವಿದ್ದಿವಿ.ಹಬ್ಬ ಹರಿದಿನಗಳು,ಮದುವೆ ಸಮಾರಂಭ ಇತ್ಯಾದಿಗಳಿಗೆ ಮಾತ್ರ ರೆಡಿಯಾಗಿ ಹೋಗೋ ಸಮಯಕ್ಕೆ ಒಗ್ಗಿಕೊಂಡಿದ್ದೆವೆ.ಸಂಪ್ರದಾಯಗಳು ಯಾರನ್ನು ಕಟ್ಟಿ ಹಾಕಲು ತಯಾರಿಲ್ಲ..ಓಟದ ಯುಗದಲ್ಲಿ ಇದ್ದಷ್ಟು ಸಮಯವಾದರೂ ಸಾಂಪ್ರದಾಯಿಕ ಶೈಲಿಯ ಜೀವನ ನಡೆಸುತ್ತಾರಲ್ಲ ಎಂದು ಖುಷಿಪಡಬೇಕಿದೆ.ಹೆಚ್ಚಿಗೆ ಹೇಳಿ ಒತ್ತಡ ಹಾಕುವ ಧೈರ್ಯ ಸಾಹಸ ಯಾರಿಗಿದೆ?.. ಬಳೆಗಳು ಹೆಣ್ಣಿನ ಸೌಂದರ್ಯದ ಪ್ರತೀಕ.ಬಣ್ಣಬಣ್ಣದ ಬಳೆಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.ಬಳೆ ಧರಿಸುವುದು, ಬಿಡುವುದು ಅವರವರ ವೈಯಕ್ತಿಕ.ಬಳೆ ಧರಿಸುವ ಮನಸ್ಸು ಮಾಡಬೇಕು ಅಷ್ಟೇ.
ಶಿವಲೀಲಾ ಶಂಕರ್

ಬಳೆಗಳು ಹೆಣ್ಣಿನ ಕೈಗಳಿಗೆ ಶ್ರಂಗಾರವಂತೆ.ಬಳೆಗಳಿದ್ದರೆ ಅದೇನೊ ಆನಂದ.ಅದಕ್ಕೆ ಹಿಂದಿನವರು ಕೈ ತುಂಬಾ ಬಳೆಗಳಿಟ್ಟು ಖುಷಿ ಪಡುತ್ತಾರೆ
ನಿನ್ನ ಲೇಖನ ಸುಂದರವಾಗಿ ಮೂಡಿ ಬಂದಿದೆ.
ಸೂಪರ್
ಬಳೆಗಳ ಅಲಂಕಾರ
ಕೈಗಳಿಗೆ ಹೆಚ್ಚುವುದು ಶೃಂಗಾರ.
ಬಳೆಗಳ ಕುರಿತು ಲೇಖನ ಸುಂದರವಾಗಿ ಮೂಡಿ ಬಂದಿದೆ.
ಸೊಗಸಾದ ಬಳೆಗಳ ಲೇಖನ ಮುದ ನೀಡುವಂತಿದೆ ಅಭಿನಂದನೆಗಳು ಶಿವಲೀಲಾ ಮೇಡಂ
ಬಳೆಗಳ ಕುರಿತು ಬರೆದ ಲೇಖನ ಚೆನ್ನಾಗಿ ಮೂಡಿ ಬಂದಿದೆ.
ಮೇಡಂ ನಮ್ಮ ಪೂರ್ವಜರು ಪ್ರತಿಯೊಂದು ಸಂಪ್ರದಾಯದ ಹಿಂದೆ ಒಂದು ವೈಜ್ಞಾನಿಕ ಕಾರಣ ಕಂದುಕೊಂಡಿರುವದು ಸತ್ಯ