
ಧಾರಾವಾಹಿ 87
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಇನ್ಸಲಿನ್ ಪಡೆಯಲು ದಾರಿ
ತೋರಿಸಿದ ದಯಾಳುವಾದ
ಸಾಹುಕಾರರ ಕುಟುಂಬ

ತಜ್ಞರ ಸಲಹೆಯಂತೆ ದಾದಿಯು ಇನ್ಸುಲಿನ್ ಚುಚ್ಚುಮದ್ದನ್ನು ಹೇಗೆ ತೆಗೆದುಕೊಳ್ಳಬೇಕು ಅನ್ನುವುದನ್ನು ಸುಮತಿಗೆ ಅಭ್ಯಾಸ ಮಾಡಿಸಿದ ನಂತರ ಸುಮತಿ ಆಸ್ಪತ್ರೆಯಿಂದ ಮನೆಗೆ ಬಂದಳು. ಎರಡು ದಿನಗಳ ನಂತರ ಪುನಹ ಬಂದು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಪರಿಶೀಲಿಸಲು ತಜ್ಞರು ಹೇಳಿದ್ದರಿಂದ ಮತ್ತೊಮ್ಮೆ ಸುಮತಿ ಪ್ರಯೋಗಾಲಯಕ್ಕೆ ಹೋಗಿ ಪರಿಶೋಧನೆಯನ್ನು ಮಾಡಿಸಿ ಅದರ ವರದಿಯನ್ನು ತಂದು ನೇತ್ರ ತಜ್ಞರಿಗೆ ತೋರಿಸಿದಳು. ಸುಮತಿಯ ದೇಹದಲ್ಲಿ ಸಕ್ಕರೆ ಅಂಶ ತಗ್ಗಿರುವುದನ್ನು ಅರಿತ ಕಣ್ಣಿನ ತಜ್ಞರು ಸುಮತಿಯನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಲು ಸೂಚಿಸಿದರು. ಅದರಂತೆ ಸುಮತಿ ಆಸ್ಪತ್ರೆಯಲ್ಲಿ ದಾಖಲಾದಳು. ಬೇಕಾದ ಎಲ್ಲಾ ಪರೀಕ್ಷೆಗಳನ್ನು ಮಾಡಿದ ನಂತರ ಸುಮತಿಯ ಬಲಗಣ್ಣಿನ ಶಸ್ತ್ರ ಚಿಕಿತ್ಸೆ ನಡೆಯಿತು. ಒಂದು ಕಣ್ಣಿನ ಪೊರೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದ ವೈದ್ಯರು ಮತ್ತೊಂದು ಕಣ್ಣಿನ ಶಸ್ತ್ರಚಿಕಿತ್ಸೆಯನ್ನು 15 ದಿನಗಳ ನಂತರ ಮಾಡುವುದಾಗಿ ತಿಳಿಸಿದರು. ಶಸ್ತ್ರ ಚಿಕಿತ್ಸೆ ನಡೆದ ಕಣ್ಣನ್ನು ಒಂದು ಬಟ್ಟೆಯಿಂದ ಮುಚ್ಚಿ ಕೊಳ್ಳುವಂತೆ ಹೇಳಿ ಒಂದು ಕಣ್ಣನ್ನು ಮುಚ್ಚುವಂತಹ ಪಟ್ಟಿಯನ್ನು ಹಣೆಯ ಮೇಲೆ ಕಟ್ಟಿದರು. ಕೆಲವು ದಿನಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಎಂದು ಹೇಳಿ 15 ದಿನಗಳ ನಂತರ ಮತ್ತೆ ಬಂದು ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರು. ಸುಮತಿ ಡಾಕ್ಟರ್ ಮನೆಗೆ ಬಂದ ನಂತರ ಅಮ್ಮ ಅವಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಂಡರು. ಅವಳ ಆರೈಕೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದರು. ಪಥ್ಯವನ್ನು ಚಾಚು ತಪ್ಪದೇ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದರು. 15 ದಿನಗಳ ನಂತರ ಮತ್ತೊಂದು ಕಣ್ಣಿನ ಶಸ್ತ್ರಚಿಕಿತ್ಸೆಯು ನಡೆಯಿತು. ಒಂದು ತಿಂಗಳ ಸಂಪೂರ್ಣ ವಿಶ್ರಾಂತಿಯ ನಂತರ ಸುಮತಿ ಮತ್ತೊಮ್ಮೆ ನೇತ್ರ ತಜ್ಞರಲ್ಲಿ ಗೆ ಹೋದಳು. ತಜ್ಞರು ಅವಳಿಗೆ ಎರಡು ಬಗೆಯ ಕನ್ನಡಕಗಳನ್ನು ಕೊಂಡುಕೊಳ್ಳುವಂತೆ ಬರೆದುಕೊಟ್ಟರು.
ಸದಾ ಉಪಯೋಗಿಸುವಂತಹ ಹಾಗೂ ಪುಸ್ತಕಗಳನ್ನು ಓದುವಾಗ ಉಪಯೋಗಿಸುವಂತಹ ಕನ್ನಡಕವನ್ನು ಕೊಂಡುಕೊಳ್ಳುವಂತೆ ಸೂಚಿದರು. ಅವಳ ಶಸ್ತ್ರಚಿಕಿತ್ಸೆಯ ಹಾಗೂ ಕನ್ನಡಕ ಖರೀದಿಯ ಸಂಪೂರ್ಣ ಖರ್ಚನ್ನು ಡಾಕ್ಟರ್ (ಸಣ್ಣ ಸಾಹುಕಾರರು) ವಹಿಸಿಕೊಂಡರು. ಡಾಕ್ಟರ್ ಹಾಗೂ ಅವರ ಪತ್ನಿಯು ತನ್ನನ್ನು ಇಷ್ಟು ಕಾಳಜಿ ವಹಿಸಿ ನೋಡಿಕೊಂಡಿದ್ದನ್ನು ಅವಳು ಎಂದಿಗೂ ಮರೆಯುವಂತೆ ಇರಲಿಲ್ಲ. ಇಬ್ಬರಿಗೂ ಮನ ತುಂಬಿ ಕೃತಜ್ಞತೆಯನ್ನು ಸಲ್ಲಿಸಿದಳು. ಅನಾಥಯಂತೆ ಇರುವ ತನ್ನನ್ನು ತಾಯಿಯಂತೆ ಪ್ರೀತಿಯಿಂದ ನೋಡಿಕೊಂಡ ಅಮ್ಮನನ್ನು ದೇವರಂತೆ ಕಂಡಳು ಸುಮತಿ. ಅವಳ ದೃಷ್ಟಿ ಮರುಕಳಿಸಿದ್ದು ಅವಳಿಗೆ ಅತ್ಯಂತ ಸಂತೋಷದ ವಿಷಯವಾಗಿತ್ತು. ನನಗಿದು ಪುನರ್ಜನ್ಮವೇನೋ ಎನ್ನುವಷ್ಟು ಖುಷಿ ಪಟ್ಟಳು. ಬೆಂಗಳೂರಿನಿಂದ ಅವಳು ಸಕಲೇಶಪುರಕ್ಕೆ ಹೊರಡುವ ದಿನ ಬಂದಿತು. ಅಮ್ಮ ಅವಳಿಗೆ ಉಡಲು ಬೇಕಾದ ಹಲವು ಸೀರೆಗಳನ್ನು ಹಾಗೂ ಮಗಳಿಗೆ ಬಟ್ಟೆಗಳನ್ನು ಕೊಟ್ಟರು. ಸುಮತಿಗೆ ಕಣ್ಣು ಸರಿಯಾಗಿ ಕಾಣದಿದ್ದ ಕಾರಣ ಡಾಕ್ಟರ್ ರವರ ಪತ್ನಿ ಹಾಗೂ ಮಕ್ಕಳನ್ನು ಸರಿಯಾಗಿ ನೋಡಿರಲಿಲ್ಲ. ಈಗ ಅಮ್ಮ ಮತ್ತು ಅವರ ಮೂವರು ಮಕ್ಕಳನ್ನು ಕಂಡು ಸಂತೋಷಗೊಂಡಳು. ಇಂತಹ ಉತ್ತಮರಾದ ಅಪ್ಪ ಅಮ್ಮನನ್ನು ಪಡೆಯಲು ಈ ಮಕ್ಕಳು ಪುಣ್ಯ ಮಾಡಿದ್ದರು ಎಂದು ಮನದಲ್ಲಿ ಅಂದುಕೊಂಡಳು. ತಾನು ಸಕಲೇಶಪುರದ ತೋಟಕ್ಕೆ ಬಂದಾಗ ಉಡಲು ಬಟ್ಟೆಯ ಅಗತ್ಯವಿದ್ದರೆ ತನಗೆ ತಿಳಿಸಲು ಅಮ್ಮ ಸುಮತಿಗೆ ಹೇಳಿದರು. ಇಷ್ಟು ದಿನ ತನ್ನನ್ನು ನೋಡಿಕೊಂಡ ಅಮ್ಮನನ್ನು ಸುಮತಿ ಮನಸಾ ಹೊಗಳಿದಳು. ಸುಮತಿ ಮತ್ತು ಮಗಳು ಬೆಂಗಳೂರಿಂದ ಸಕಲೇಶಪುರದ ಕಡೆಗೆ ಡಾಕ್ಟರ್ ಅವರ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಈಗ ಕಣ್ಣುಗಳು ಸರಿಯಾಗಿ ಕಾಣುತ್ತಿದ್ದ ಕಾರಣ ಕಾರಿನಲ್ಲಿ ಪ್ರಯಾಣಿಸುವಾಗ ಬೆಂಗಳೂರಿನ ಗಗನಚುಂಬಿ ಕಟ್ಟಡಗಳನ್ನು ಅದ್ಭುತವೆನ್ನುವಂತೆ ನೋಡಿದಳು.

ಬೆಳಗಿನ ಜಾವವೇ ಬೆಂಗಳೂರಿನಿಂದ ಹೊರಟಿದ್ದರಿಂದ ಎಲ್ಲರೂ ಮಧ್ಯಾಹ್ನದ ವೇಳೆಗೆ ಸಕಲೇಶಪುರದ ತೋಟವನ್ನು ತಲುಪಿದರು. ಬಂಗಲೆಯ ಎದುರಿಗೆ ಕಾರನ್ನು ನಿಲ್ಲಿಸುವಂತೆ ಡಾಕ್ಟರ್ ಡ್ರೈವರ್ ಗೆ ಸೂಚಿಸಿದರು. ತಮ್ಮ ವಸ್ತುಗಳನ್ನೆಲ್ಲ ಬಂಗಲೆ ಒಳಗೆ ತೆಗೆದುಕೊಂಡ ಹೋಗುವಂತೆ ಡ್ರೈವರ್ ಗೆ ಹೇಳಿದರು. ತಾವು ಪುಟ್ಟ ಸೂಟ್ಕೇಸ್ ಒಂದನ್ನು ಕೈಯಲ್ಲಿ ಹಿಡಿದುಕೊಂಡು ನೇರವಾಗಿ ತೋಟದ ಆಫೀಸ್ ಕಡೆಗೆ ನಡೆದರು. ಜೊತೆಗೆ ಬರುವಂತೆ ಸುಮತಿಗೆ ಹೇಳಿದರು. ಡಾಕ್ಟರ್ ತನ್ನನ್ನು ಏಕೆ ಕರೆದಿರಬಹುದು ಎಂದು ಆತಂಕದಿಂದಲೇ ಸುಮತಿ ಡಾಕ್ಟರನ್ನು ಹಿಂಬಾಲಿಸಿದಳು. ಡಾಕ್ಟರ್ ತೋಟದ ಮ್ಯಾನೇಜರ್ ಅನ್ನು ಕರೆದು…. “ನೋಡಿ ಟೀಚರಮ್ಮನಿಗೆ ಪ್ರತಿ ತಿಂಗಳು ಇನ್ಸುಲಿನ್ ತೆಗೆದುಕೊಳ್ಳಬೇಕೆಂದು ತಜ್ಞರು ಸೂಚಿಸಿದ್ದಾರೆ…. ಹಾಗಾಗಿ ನಮ್ಮ ತೋಟದ ಪರವಾಗಿ ಇವರಿಗೆ ತಿಂಗಳಿಗೆ ಬೇಕಾದಷ್ಟು ಇನ್ಸುರೆನ್ಸ್ ತರಿಸಿ ಕೊಡಬೇಕಾಗಿದ್ದು ನಿಮ್ಮ ಜವಾಬ್ದಾರಿ”…. ಎಂದು ಹೇಳಿ ಸುಮತಿಯ ಕಡೆಗೆ ತಿರುಗಿ ಪ್ರತಿ ತಿಂಗಳು ಆಫೀಸಿನಿಂದ ಇನ್ಸುಲಿನ್ ಅನ್ನು ಪಡೆದುಕೊಳ್ಳಿ ಎಂದು ಹೇಳಿದರು. ಡಾಕ್ಟರ್ ರವರ ಮಾತನ್ನು ಕೇಳಿದ ಮ್ಯಾನೇಜರ್….”ಸರ್ ಇನ್ಸುಲಿನ್ ಚುಚ್ಚುಮದ್ದಿನ ದರ ಬಹಳ ಹೆಚ್ಚು ಇದರಿಂದ ನಮ್ಮ ಖರ್ಚುವೆಚ್ಚ ಕೂಡ ಹೆಚ್ಚಾಗುತ್ತದೆ”….ಎಂದು ಸ್ವಲ್ಪ ಮೆಲುವಾಗಿ ಹೇಳಿದರು. ಇದನ್ನು ಕೇಳಿದ ಡಾಕ್ಟರ್….”ಈಕೆ ಜೀವಂತವಾಗಿರಬೇಕೆಂದರೆ ಪ್ರತೀ ದಿನ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಲೇಬೇಕು…. ಈಕೆಯ ಶರೀರದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದ ಕಾರಣವೇ ಇಷ್ಟು ಸಣ್ಣ ವಯಸ್ಸಿನಲ್ಲಿ ಕಣ್ಣಿನಲ್ಲಿ ಪೊರೆ ಬಂದಿದೆ…. ಅವರ ಜೀವನೋಪಾಯಕ್ಕಾಗಿ ನಾಲ್ಕಾರು ಮಕ್ಕಳಿಗೆ ಪಾಠವನ್ನು ಹೇಳಿ ಕೊಡಬೇಕೆಂದರೆ ಕಣ್ಣು ಕಾಣಬೇಕು….. ಕಣ್ಣಿಲ್ಲದಿದ್ದರೆ ಅದು ಹೇಗೆ ಸಾಧ್ಯ? ನೀವೇ ಯೋಚಿಸಿ ನೋಡಿ”…. ಎಂದು ಹೇಳುತ್ತಿರುವಾಗ ದೊಡ್ಡ ಸಾಹುಕಾರರು ಅಲ್ಲಿಗೆ ಬಂದರು. ಏನು ವಿಷಯ ಎಂದು ಕೇಳಿದಾಗ ಡಾಕ್ಟರ್ ಇರುವ ಸಂಗತಿಯನ್ನು ಅಪ್ಪನಿಗೆ ತಿಳಿಸಿದರು.
ಅದನ್ನು ಕೇಳಿದ ದೊಡ್ಡ ಸಾಹುಕಾರರು ಮ್ಯಾನೇಜರ್ ಗೆ ಹೇಳಿದರು…. “ಪರವಾಗಿಲ್ಲ ಏನೂ ತೊಂದರೆಯಾಗುವುದಿಲ್ಲ…. ಈಕೆಗೆ ಬೇರೆ ಯಾರಿದ್ದಾರೆ. ಅವರಿಗೆ ಸಿಗುವ ಸಂಬಳದಲ್ಲಿ ಹೊಟ್ಟೆ ಹೊರೆದುಕೊಳ್ಳುವುದು ಕಷ್ಟ…. ಹಾಗಿರುವಾಗ ಇನ್ಸುಲಿನ್ ಚುಚ್ಚುಮದ್ದನ್ನು ಆಕೆ ಖರೀದಿಸಲು ಸಾಧ್ಯವೇ?…. ನಮ್ಮ ತೋಟದ ಮಕ್ಕಳಿಗೆ ಅಕ್ಷರದ ಅರಿವನ್ನು ತುಂಬುತ್ತಿರುವ ಈಕೆಗೆ ನಾವು ಇಷ್ಟು ಕೂಡ ಸಹಾಯ ಮಾಡಲು ಸಾಧ್ಯವಿಲ್ಲವೇ”…. ಎಂದರು. ದೊಡ್ಡ ಸಾಹುಕಾರರ ಮಾತನ್ನು ಕೇಳಿದ ನಂತರ ಅಪ್ಪ ಮತ್ತು ಮಗ ಇಬ್ಬರಿಗೂ ವಂದಿಸಿದ ಮ್ಯಾನೇಜರ್ ಸರಿ ಎನ್ನುವಂತೆ ತಲೆ ಆಡಿಸಿ ಸುಮ್ಮನಾದರು. ಸುಮತಿಗೆ ಇವೆಲ್ಲವೂ ನಡೆಯುತ್ತಿರುವುದು ಕನಸಿನಂತೆ ಕಂಡಿತು. ತನಗಾಗಿ ಇಷ್ಟೆಲ್ಲ ಮಾಡುತ್ತಿರುವ ದೊಡ್ಡ ಸಾಹುಕಾರರಿಗೂ ಹಾಗೂ ಸಣ್ಣ ಸಾಹುಕಾರರಿಗೂ ವಂದಿಸಿದಳು. ತನ್ನ ಜೀವನಕ್ಕಾಗಿ ಇಷ್ಟೊಂದು ಸಹಾಯ ಮಾಡುತ್ತಿರುವ ಸಾಹುಕಾರರ ಕುಟುಂಬ ಸದಾ ಚೆನ್ನಾಗಿರಲಿ ಎಂದು ಮನಸ್ಸಿನಲ್ಲಿ ದೇವರಿಗೆ ಪ್ರಾರ್ಥಿಸಿದಳು. ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿರುವ ಸುಮತಿಯನ್ನು ಕಂಡು ದೊಡ್ಡ ಸಾಹುಕಾರರು…” ಅಮ್ಮ ,ಮಗಳು ಇಬ್ಬರೂ ಈಗ ಇಲ್ಲಿಯೇ ಊಟ ಮಾಡಿ ನಂತರ ಮನೆಗೆ ಹೋಗಿ….. ಪ್ರತಿ ತಿಂಗಳು ಸಂಬಳ ತೆಗೆದುಕೊಳ್ಳುವಾಗ ಇಲ್ಲಿಗೆ ಬಂದು ಜೊತೆಗೆ ಇನ್ಸುಲಿನ್ ಅನ್ನು ಪಡೆದುಕೊಂಡು ಹೋಗಿ”…. ಎಂದರು. ದೇವರಂತಹ ಮನುಷ್ಯರು ಎಂದು ಮನದಲ್ಲೇ ಅಂದುಕೊಂಡು ಇಬ್ಬರಿಗೂ ಕೈಮುಗಿದು ಬಂಗಲೆಯ ಅಡುಗೆ ಮನೆಯ ಕಡೆಗೆ ಮಗಳನ್ನು ಕರೆದುಕೊಂಡು ಹೊರಟಳು. ಸುಮತಿಯನ್ನು ಕಂಡ ಅಡುಗೆ ಭಟ್ಟರು ಮುಗುಳ್ನಗುತ್ತಾ…”ಬನ್ನಿ ಟೀಚರಮ್ಮಾ “…ಎಂದು ಹೇಳುತ್ತಾ ಅಡುಗೆ ಮನೆಯಿಂದ ಪಿಂಗಾಣಿ ತಟ್ಟೆಯಲ್ಲಿ ಇಬ್ಬರಿಗೂ ಊಟವನ್ನು ಬಡಿಸಿ ತಂದು ಕೊಟ್ಟರು. ಇಬ್ಬರೂ ಹೊಟ್ಟೆ ತುಂಬಾ ಊಟ ಮಾಡಿ, ಮನೆಗೆ ಹೋಗುವಾಗ ಭಟ್ಟರನ್ನು ಕೇಳಿ ಮಜ್ಜಿಗೆಯನ್ನು ಪಡೆದುಕೊಳ್ಳುವುದನ್ನು ಸುಮತಿ ಮರೆಯಲಿಲ್ಲ.
