ಸರಿತಾ ಮಧು
ನೀರಿನೊಂದಿಗೆ ನಂಬಿಕೆ ಇಟ್ಟು
ಮೀನು ಮರಿಗಳ ಅದರೊಳು ಬಿಟ್ಟು
ಅದಮ್ಯ ಆಸೆಯಿಂದ ದಿನಗಳೆದದ್ದು
ಅಪರಿಮಿತ ಮಳೆಗೆ ಕನಸೆಲ್ಲವೂ
ಕೊಚ್ಚಿ ಹೋದದ್ದು ಅನೂಹ್ಯ!
ಜಲ ಸೌಂದರ್ಯ ನೋಡಲು
ಮುಗಿಬಿದ್ದ ಜನಸಮೂಹ ಒಂದೆಡೆ
ಅಳಿದುಳಿದ ಕನಸ ಶೋಧಿಸಲು
ತೆಪ್ಪ ಹತ್ತಿ ಹೊರಟ ಬೆಸ್ತರ ಹುಡುಗಿ ಇನ್ನೊಂದೆಡೆ
ಹೂಗಳಂತೆ ಬದುಕು ಸುಂದರವಾದೀತೆಂದು
ತೆಪ್ಪವನೇರಿ ಹೊರಟಿದೆ ಬಾಲೆಯ ಕನಸು
ಅವಳ ಮುಗ್ಧ ನಗೆ ಹೂವ ಸೌಂದರ್ಯದಂತೆ
ಬಣ್ಣ ಬಣ್ಣದ ಆಸೆಗಳು ಗರಿಗೆದರಿ ನಿಂತಂತೆ
ಹೂವ ಹಿಡಿದು ಅದೇನು ಉಸುರಿದಳೋ
ಅದೂ ತಲೆ ತೂಗಿ ಅವಳೆಡೆಗೆ ನಗುವ ಚೆಲ್ಲಿದೆ
ಆನಂದಮಯ ಸಮಯ ಈರ್ವರ ನಡುವೆ
ಬಾಲೆ ಮತ್ತು ಹೂವು ಜಗದ ನೋವ ಮರೆತಂತೆ
ಸಂತಸದ ಸಂಗತಿ ದಡದ ಹೊರಗೆ
ನೀರ ಸೌಂದರ್ಯ ಕಣ್ತುಂಬಿಕೊಂಡವರಿಗೆ
ಬಯಸಿದ ಫಲಕಾಣದ ಹುಡುಗಿ ಕೆರೆಯೊಳಗೆ
ಮಳೆಯೊಂದೇ ಬದುಕು -ಭಿನ್ನ ಈ ಜಗದೊಳಗೆ
********
,