ಐದನೇ ವಾರ್ಷಿಕೋತ್ಸವ ವಿಶೇಷ

ನಾನು ಓದುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರು ಭಾಗದಲ್ಲೇ ಖ್ಯಾತ ಕಾದಂಬರಿಕಾರ ಶ್ರೀ ತರಾಸುರವರ ಮನೆ ಇದ್ದುದು. ಅವರನ್ನು ಪ್ರತಿನಿತ್ಯ ನೋಡಿದರು ಅವರಾರೆಂದು ತಿಳಿಯದ ವಯಸ್ಸು. ಚಂದಮಾಮ, ಬೊಂಬೆಮನೆಯಂತ ಮಕ್ಕಳ ಪುಸ್ತಕಗಳಲ್ಲದೆ ಸುಧಾ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬರುತ್ತಿದ್ದ ಬೇಕಾದ ವಿಷಯಗಳನ್ನು ಓದುವ ಅಭ್ಯಾಸ ಇತ್ತು. ನಾನು ಹತ್ತನೇ ತರಗತಿ ಓದುವ ಸಂದರ್ಭದಲ್ಲಿ ಕನ್ನಡ ಮಾಸ್ತರರು ಒಬ್ಬ ವಿದ್ಯಾರ್ಥಿ ಏನಾದರೂ ಕಲಿಯಬೇಕು ಎಂದರೆ ಅವನು ಹೇಗಿರಬೇಕು ಎಂಬುದನ್ನು ತಿಳಿಯಲು ನೀವು ತರಾಸು ರವರು ಬರೆದ “ಹಂಸಗೀತೆ” ಕಾದಂಬರಿ ಓದಬೇಕು ಎಂದು ಅದರ ಕುರಿತು ತುಂಬಾ ಚೆಂದದ ವಿವರಣೆ ಕೊಟ್ಟಿದ್ದರು. ಅಂದೇ ಅದನ್ನು ಓದಬೇಕು ಎಂಬ ತುಡಿತ ಉಂಟಾಗಿತ್ತು. ಆದರೆ ಆ ಪುಸ್ತಕವನ್ನು ಓದಿದ್ದು ಪ್ರಥಮ ಪಿಯುಸಿಗೆ ಸೇರಿದ ಮೇಲೆ.

ಸುಬ್ಬಯ್ಯ ಒಬ್ಬ ಸಾಮಾನ್ಯ ಹುಡುಗ. ಎಲ್ಲಾ ತಂದೆ ತಾಯಿಯರಂತೆ ಇವನ ತಂದೆ ತಾಯಿಯರು, ವಿದ್ಯೆ ಕಲಿಯಲು ಶಾಲೆಗೆ ಕಳಿಸಿದರೆ ಇವನ ತಲೆಗೆ ಅದು ಹತ್ತುವುದಿಲ್ಲ. ಇವನ ಆಸಕ್ತಿ ಸಂಗೀತದ ಕಡೆ ಇರುತ್ತದೆ. ಹಾಗಾಗಿ ಇವನ ಸೋದರ ಮಾವ ಅನಂತಯ್ಯನವರು ಇವನಿಗೆ ಗುರುವೊಬ್ಬರನ್ನು ಹುಡುಕಿ ಸಂಗೀತ ಕಲಿಯಲು ಕಳಿಸುತ್ತಾರೆ. ಸುಬ್ಬಯ್ಯ ಶ್ರದ್ಧೆಯಿಂದ ಅವರ ಬಳಿ ಸಂಗೀತ ಕಲಿಯುತ್ತಾನೆ. ಆದರೆ ಅವರಿಬ್ಬರ ನಡುವೆ ನಡೆಯುವ ಘಟನೆಯೊಂದರಿಂದ ಮತ್ತೆ ಸಂಗೀತದ ಗುರುವೊಬ್ಬರನ್ನು ಹುಡುಕಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಇವನ ಬಗ್ಗೆ ತಿಳಿದ ಯಾರೊಬ್ಬ ಗುರುವು ಸಂಗೀತ ಹೇಳಿಕೊಡಲು ಒಪ್ಪುವುದಿಲ್ಲ. ಆಗ ಸೋದರ ಮಾವ, ನಿನ್ನ ಗುರುವನ್ನು ನೀನೇ ಹುಡುಕಿಕೋ ಎನ್ನುತ್ತಾರೆ.

ಹೀಗೆ ಗುರುವಿನ ಹುಡುಕಾಟದಲ್ಲಿ ಇದ್ದ ವೆಂಕಟಸುಬ್ಬಯ್ಯನಿಗೆ ಅದೊಂದು ದಿನ ಅದೆಲ್ಲೋ ತುಂಬಾ ಅದ್ಭುತವಾಗಿ ಹಾಡುತ್ತಿರುವುದು ಕಿವಿಗೆ ಬೀಳುತ್ತದೆ. ಅದು ಕಿವಿಗೆ ಬೀಳುತ್ತಲೇ ತಾನು ಸಂಗೀತ ಕಲಿತರೆ ಇವರಿಂದಲೇ ಎಂದು ನಿರ್ಧರಿಸಿ ಆ ಧ್ವನಿ ಬಂದತ್ತ ಹೋಗುತ್ತಾನೆ.  ಅವರೋ ಪುರ್ವಾಶ್ರಯದ ಕಾರಣದಿಂದಾಗಿ ನಿಂತಲ್ಲಿ ನಿಲ್ಲದೆ, ಇದ್ದಲ್ಲಿ ಇರದೆ ಸದಾ ಸಂಚಾರಿಯಾಗಿರುವ ವ್ಯಕ್ತಿ. ಸಾಧಾರಣಕ್ಕೆ ಅವರು ವೆಂಕಟಸುಬ್ಬಯ್ಯನನ್ನು ಶಿಷ್ಯನಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಹಠಬಿಡದ ವೆಂಕಟಸುಬ್ಬಯ್ಯ ಅವರ ಹಿಂದಿದೆಯೇ ಊರೂರು ಸುತ್ತಿ, ಅವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಮಾಡಿ ಅವರು ಸಂಗೀತ ಹೇಳಿಕೊಡುವಂತೆ ಮಾಡುತ್ತಾನೆ. ಅವರು ಸಂಗೀತ ಹೇಳಿಕೊಡುವುದಕ್ಕೆ ಒಂದು ಹೊತ್ತು ಗೊತ್ತು ಯಾವುದೂ ಇರುವುದಿಲ್ಲ. ಆದರೂ ಛಲ ಬಿಡದ ವೆಂಕಟಸುಬ್ಬಯ್ಯ ಹೇಳಿಕೊಟ್ಟಾಗಲೇ ಬಿಡದೆ ಶ್ರದ್ಧೆಯಿಂದ ಕಲಿಯುತ್ತಾನೆ. ಆದರೆ ಆ ಗುರು ತೀರಿಕೊಂಡಾಗ ವಿಧಿಯಿಲ್ಲದೆ ಊರಿಗೆ ಹಿಂದಿರುಗಿ ಬಂದು ರಾಜಾಶ್ರಯದಲ್ಲಿ ಹಾಡಲು ಆರಂಭಿಸಿ ಹೆಸರು ಮಾಡುತ್ತಾನೆ. ಜೊತೆಗೆ ವಯೋಸಹಜ ಆಸೆಯಿಂದ ಊರಿನ ಹೆಸರಾಂತ ವೇಶ್ಯೆಯ ಸಹವಾಸ ಮಾಡುತ್ತಾನೆ.

ಆ ಸಂಬಂಧ ಮುರಿದು ಬಿದ್ದು ಹತಾಶೆಗೊಳಗಾದವನಿಗೆ ಪಂಡಿತರೊಬ್ಬರೂ, ಯಾವುದಾದರೂ ಒಂದು ಸಂಗೀತದ ರಾಗವನ್ನು ಒಲಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಾರೆ. ಅದರ ಬೆನ್ನು ಹತ್ತಿ ಹೊರಟವನು ಕೊನೆಗೆ ಭೈರವಿ ರಾಗವನ್ನು ಅಭ್ಯಾಸ ಮಾಡಿ ಒಲಿಸಿಕೊಂಡು ಭೈರವಿ ವೆಂಕಟಸುಬ್ಬಯ್ಯ ಎಂದು ಪ್ರಸಿದ್ಧನಾಗುತ್ತಾನೆ.  ಓದು ಬರಹಗಳ ಕಡೆಗೆ ಗಮನ ಇರದ ಹುಡುಗ ತನ್ನಿಷ್ಟದ ಸಂಗೀತ ಕಲಿಯಲು ಮೊದಲು ಗುರುವಿನ ಹುಡುಕಾಟದಲ್ಲಿ ನಂತರ ರಾಗದ ಹುಡುಕಾಟದಲ್ಲಿ ಪಡುವ ಶ್ರಮ ನಿಜಕ್ಕೂ ಬಹಳ ಸೊಗಸಾಗಿ ಕಾದಂಬರಿಯಲ್ಲಿ ಮೂಡಿಬಂದಿದೆ. ಅಷ್ಟೇ ಅಲ್ಲ ಓದಿದ ಪ್ರತಿಯೊಬ್ಬರೂ ಏನಾದರೂ ಸಾಧಿಸಬೇಕೆಂದರೆ ಏನೆಲ್ಲಾ ಮಾಡಬೇಕು, ಹೇಗೆಲ್ಲಾ ಇರಬೇಕು ಎನ್ನುವುದನ್ನು ಇದರಿಂದ ಖಂಡಿತಾ ಕಲಿಯಬಹುದು. ಒಟ್ಟಿನಲ್ಲಿ “ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕ್ತಿ” ಎನ್ನುವುದನ್ನು ಈ ಕಾದಂಬರಿ ಸಾರಿ ಸಾರಿ ಹೇಳುತ್ತದೆ.
ಇದೊಂದು, ಮದಕರಿ ನಾಯಕ ಮತ್ತು ಟಿಪ್ಪು ಸುಲ್ತಾನರ ಕಾಲದ ಕಾಲ್ಪನಿಕ ಅಥವಾ ದಂತಕಥೆಯಾಗಿ ಮೂಡಿಬಂದಿದ್ದರೂ ಎಲ್ಲೂ ಅನುಮಾನಕ್ಕೆ ಆಸ್ಪದವಿಲ್ಲದಂತೆ, ನಿಜವಾಗಿಯೂ ನಮ್ಮ ಕಣ್ಣ ಎದುರೇ ನಡೆಯುತ್ತಿದೆ ಎನ್ನುವಂತೆ ತರಾಸುರವರು ಕಾದಂಬರಿಯನ್ನು ಬರೆದಿದ್ದಾರೆ. ನಾನಂತೂ ಸಾಕಷ್ಟು ಬಾರಿ ಈ ಕಾದಂಬರಿಯನ್ನು ಓದಿದ್ದೇನೆ, ಓದಿದ ಪ್ರತಿ ಬಾರಿಯೂ ಮೊದಲ ಬಾರಿಗೆ ಓದುತ್ತಿದ್ದೇನೆ ಎನ್ನುವಂತೆ ಭಾಸವಾಗಿದೆ. ಹಾಗೆಯೇ ಪ್ರತಿಬಾರಿಯೂ ಹೊಸ ಹೊಸ ದೃಷ್ಟಿಕೋನಗಳು ಮೂಡಿರುವುದು ಸುಳ್ಳಲ್ಲ. ನೀವಿನ್ನೂ ಓದಿಲ್ಲವಾದರೆ ಮೊದಲು ಈ ಪುಸ್ತಕವನ್ನು ಕೊಂಡು ತಂದು ಓದಿ, ಖಂಡಿತಾ ನಿಮಗೆ ಇಷ್ಟವಾಗುತ್ತದೆ.


One thought on “ಐದನೇ ವಾರ್ಷಿಕೋತ್ಸವ ವಿಶೇಷ

  1. ನಿಜ ನಾನು ಹಂಸಗೀತೆ ಓದಿರುವೆ ಬಹಳ ಅದ್ಭುತ ಕಾದಂಬರಿ.

Leave a Reply

Back To Top