ಐದನೇ ವಾರ್ಷಿಕೋತ್ಸವದ ವಿಶೇಷ
ಪ್ರೇಮ ಪತ್ರ
ಸುಧಾ ಹಡಿನಬಾಳ
ನನ್ನೆದೆಯ ವೀಣೆಯ
ಶೃತಿಗೊಳಿಸುವೆಯಾ??
ಪ್ರಿಯಾ .
ನಾನು ಸುವಿಧಾ.ನಿಮ್ಮ ವಿದ್ಯಾರ್ಥಿನಿ ನೋಡುವವರ ಕಣ್ಣಲ್ಲಿ.. ಅರೆರೆ … ಇದೇನಿದು ಹೀಗೆಂದು ಸಂಬೋಧಿಸುತ್ತಿದ್ದಾಳಲ್ಲ ಎಂದು ನಿನಗೆ ಸಖೇದಾಶ್ಚರ್ಯ ಆಗಿರಲಿಕ್ಕಿಲ್ಲ! ನಿನಗೂ ಸಣ್ಣ ನಿರೀಕ್ಷೆ ಇರಲೇಬೇಕು ಎಂದುಕೊಂಡಿದ್ದೇನೆ. ನಾನೆಂದೂ ನಿಮ್ಮ ಗುರುವಾಗಿ ನೋಡಿದ್ದಿಲ್ಲ ನಿನ್ನ ನೋಡಿದ ದಿನದಿಂದ! ನನಗೆ ನಿಮ್ಮನ್ನು ಹಾಗೆ ನೋಡಲಾಗುತ್ತಿಲ್ಲವಲ್ಲ…
ಮೊದಲ ದಿನ ಆ ssಆ ನಿನ್ನ ಗುಂಗುರು ಕೂದಲು, ಹಾಲ್ಬೆಳುಪಿನ ಕೋಲು ಮುಖದಲ್ಲಿ ಮಿರ ಮಿರನೆ ಮಿಂಚುವ ಜೋಡಿ ಕಂಗಳು… ಆರಡಿ ಎತ್ತರದ ಸ್ಫುರದ್ರೂಪಿ …ಓಹೋ… ಅರೆ ಬಾಪ್ರೆ !! ನಾನು ಮದುವೆ ಎಂದಾದರೆ ಅದು ಸಂಗೀತಗಾರನನ್ನು ; ಅದೂ ಪ್ರೀತಿಸಿಯೆ ಮದುವೆಯಾಗಬೇಕೆಂದು ಕನಸುತ್ತಿದ್ದ ನನ್ನ ಕನಸಿನ ರಾಜಕುಮಾರ ನೀನೆ ಎಂದು ಅಂದೇ ಪಕ್ಕಾ ಆಗಿ ಹೋಯ್ತು!! ಕಪ್ಪು ಬಣ್ಣದ ಕುರ್ತಾ ಅದಕ್ಕೊಪ್ಪುವ ಬಿಳಿ ಪೈಜಾಮಾ ತೊಟ್ಟು ಇಂಪಾಗಿ ತೇಲಿ ಬರುತ್ತಿದ್ದ ಸಂಗೀತದ ತಾಳಕ್ಕೆ ಹೆಜ್ಜೆ ಹಾಕುತ್ತಾ ನೆರೆದ ಸಭಾಂಗಣದಲ್ಲಿ ಕಿವಿಗಡಚಿಕ್ಕುವ ಚಪ್ಪಾಳೆ ನಡುವೆ ವಿನಮ್ರವಾಗಿ ಕೈಮುಗಿದು ಹಸನ್ಮುಖಿಯಾಗಿ ವೇದಿಕೆ ಏರಿದ ಮುದ್ದಿಕ್ಕುವ ಆ ನಿನ್ನ ಮುಖಾರವಿಂದ ನಿನ್ನಾಣೆ ಸುಳ್ಳಲ್ಲ!! ನೋಡ ನೋಡುತ್ತಲೇ ನನ್ನೆದೆಯ ತಾಳ ತಪ್ಪಿದೆ; ಹೃದಯ ವೀಣೆ ಶೃತಿ ಸೇರುತ್ತಿಲ್ಲ …
ನಿನಗೆ ನನ್ನ ಪರಿಚಯಿಸಿಕೊಳ್ಳುತ್ತಾ, ನಿನ್ನ ನೋಡಿದ ಆ ದಿನದಿಂದ ನೆನಪಿನ ಮೆಲುಕು ನಮ್ಮಿಬ್ಬರ ಸಂಭ್ರಮಕ್ಕೆ! ನಾನು ಸಂಗೀತದ ಹುಚ್ಚು ಅಭಿಮಾನಿ. ಸಂಗೀತವನ್ನೇ ಉಸಿರಾಡುತ್ತಿರುವವಳು. ಚಿಕ್ಕಂದಿನಲ್ಲಿದ್ದಾಗಲೇ ರೇಡಿಯೋ ಕಾಲ ಮೇಲಿಟ್ಟುಕೊಂಡು ಹಾಡು ಕೇಳುತ್ತಾ, ಹಾಡಿನೊಂದಿಗೆ ಗುನುಗುತ್ತಾ ಬೆಳೆದವಳು.. ಬೆಳೆಯುತ್ತಾ ಶಾಸ್ತ್ರೀಯ ಸಂಗೀತದ ಗೀಳು ಅಂಟಿಸಿಕೊಂಡವಳು.. ಸುತ್ತಮುತ್ತಲಿನ ದೇವಾಲಯ, ವೇದಿಕೆಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳನ್ನು ರಾತ್ರಿ ಪೂರ್ತಿ ಕೇಳುತ್ತಲೇ ಬೆಳೆದವಳು… ಅದೆಷ್ಟು ಜನರ ಗಾಯನವನ್ನು ಕೇಳಿದ್ದೇನೆ.. ಆನಂದಿಸಿದ್ದೇನೆ … ಆದರೆ ಎಂದೂ ಈ ತರದ ಅನುಭೂತಿ ನನ್ನೆದೆಯ ನರನಾಡಿಗಳಲ್ಲಿ ಸಂಚಾರವಾಗಿದ್ದಿಲ್ಲ! ನಿನ್ನ ನೋಡಿದಂದಿನಿಂದ , ಅಂದು ಮೊದಲ ದಿನ ನೀ ಹಾಡಿದ್ದ ಶೃಂಗಾರ , ಪ್ರೇಮಭರಿತ ರಾಗ್ ಜೋಗ್ ರಾಗಾಲಾಪ… ‘ಸಾಜನ ಮೇರೆ ಘರ ಆsss ‘ ಛೀಜ್ , ಆಹಾ!! ಅದೇ ಭಾವ ಗುಂಗು ರಾಗಲಹರಿ ದಿನವೂ ಗುನುಗುತ್ತಿದ್ದೇನೆ ಕಣ್ತುಂಬ ನಿನ್ನ ತುಂಬಿಕೊಂಡು .. ಹೇಳು ಪ್ರಿಯಾ, ಇದನ್ನು ಪ್ರೇಮವಲ್ಲದೆ ಇನ್ನೇನೆಂದು ಕರೆಯಲಿ…??
ಚಿಕ್ಕಂದಿನಲ್ಲಿ ಸಂಗೀತ ಕಲಿಯುವ ಅವಕಾಶ ದೊರೆಯಲಿಲ್ಲ ನನಗೆ.. ಹತ್ತನೇ ತರಗತಿಯ ನಂತರ ಪಿಯುದಲ್ಲಿ ಸಂಗೀತವನ್ನು ಆಯ್ದುಕೊಂಡು, ಡಿಗ್ರಿ ವರೆಗೂ ಮುಂದುವರಿಸಿ ಒಳ್ಳೆಯ ಅಂಕದೊಂದಿಗೆ ಆಗ ತಾನೇ ಪದವಿ ಮುಗಿಸಿ ಹೊರ ಬಿದ್ದು ಭವಿಷ್ಯದ ಕನಸು ಕಾಣುತ್ತಿದ್ದ ದಿನಗಳು.. ಈಗ ನನ್ನ ಭವಿಷ್ಯ ನಿನ್ನೊಂದಿಗೆ ಎಂದು ನಿಶ್ಚಯಿಸಿ ಆಗಿದೆ ನನಗೆ..ಸರಿಯಾಗಿ ಎರಡು ವರ್ಷಗಳ ಹಿಂದೆ ನಮ್ಮ ಕಾಲೇಜಿಗೆ ಡಾ. ಚಿರಾಗ್ ಹೆಸರಿನ ಜನಪ್ರಿಯ ಸಂಗೀತ ಉಪನ್ಯಾಸಕರು ಬರುತ್ತಿದ್ದಾರೆ, ತುಂಬಾ ಅದ್ಭುತ ಗಾಯಕರು; ಎಂ ಎ ಸಂಗೀತದಲ್ಲಿ ಗೋಲ್ಡ್ ಮೆಡಲಿಸ್ಟ್ ಅಂತೆಲ್ಲ ಕೇಳಿದಾಗ ನಿಮ್ಮ ಗಾಯನಕ್ಕಾಗಿ ತಡಕಾಡಿದ್ದೆ.. ಕೇಳಿದೆ ಕೂಡ..ನಿಮ್ಮನ್ನು ನೋಡುವ ಕಾತರವೂ ಇತ್ತು ನನ್ನೊಳಗೆ …
ನೀವು ಕಾಲೇಜಿಗೆ ಜಾಯ್ನ್ ಆಗುವ ದಿನ ಕಾಲೇಜಿನಲ್ಲಿ ನಿಮ್ಮ ಗಾಯನವನ್ನು ಏರ್ಪಡಿಸಿದ ಸುದ್ದಿ ತಿಳಿದು ಮೈ ಮನಸ್ಸು ಗರಿಗೆದರಿ ಕುಣಿದಿತ್ತು. ಅದೊಂದು ಅದ್ಧೂರಿ ಕಾರ್ಯಕ್ರಮ.. ತಯಾರಿಗಾಗಿ ಸಂಗೀತ ವಿಭಾಗದಿಂದ ಬುಲಾವ್ ಬಂದಾಗ ನನ್ನ ಸಂತಸ ಹೇಳತೀರದು..ಕಲಾವಿದರ ಸ್ವಾಗತ , ಪ್ರಾರ್ಥನೆಗಾಗಿ ನಾವು ಐವರು ಪೂರ್ವ ವಿದ್ಯಾರ್ಥೀನಿಯರು ಒಂದು ವಾರದಿಂದ ಕಾಲೇಜಿನಲ್ಲಿ ಮತ್ತೆ ಹಿಂದಿಗಿಂತಲೂ ಹೆಚ್ಚು ಲವಲವಿಕೆಯಿಂದ ತೊಡಗಿಸಿಕೊಂಡಿದ್ದೆವು. ಅಂದು ಐವರೂ ತಿಳಿ ಗುಲಾಬಿ ಬಣ್ಣದ ಸೀರೆ ಉಟ್ಟು ಕಲಾವಿದರ ಬರುವಿಕೆಗಾಗಿ ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ನಿಂತಿದ್ದೆವು..
ನೀವು ನಿಮ್ಮ ತಂಡದವರ ನಡುವೆ ಹದವಾದ ಹೆಜ್ಜೆ ಇಡುತ್ತ ಸಭಾಂಗಣದಲ್ಲಿ ನಡೆದು ಬರುತ್ತಿದ್ದರೆ, ಸಂಗೀತವೇ ಮೂರ್ತರೂಪ ಧರಿಸಿ ಬಂದಂತಿತ್ತು!! … ಅತಿಥಿಗಳು ಬಂದೊಡನೆ ಶಿರಬಾಗಿ ನಮಿಸಿ ಗೌರವ ಸೂಚಿಸುವ ಪರಿಪಾಠ ನನ್ನದು… ಆದರೆ ಆಶ್ಚರ್ಯ ! ಅಂದು ನೀನು ಎದುರಿಗೆ ಬಂದಾಗ ಕೈಯೆತ್ತಿ ಮುಗಿಯಬೇಕೆನಿಸಲಿಲ್ಲ … ವಯಸ್ಸಿನಲ್ಲಿ ಹೆಚ್ಚು ಕಮ್ಮಿ ನನಗಿಂತ ಮೂರ್ನಾಲ್ಕು ವರ್ಷ ದೊಡ್ಡವನಿರಬಹುದು ನೀನು ; ಕಳೆದ ಮೂರು ವರ್ಷಗಳಿಂದ ಸತತವಾಗಿ ಯುತ್ ಫೆಸ್ಟ್ ನಲ್ಲಿ ಕಾಲೇಜಿಗೆ ಸುಗಮ ಸಂಗೀತದಲ್ಲಿ ಪ್ರಥಮ ಸ್ಥಾನ ತಂದು ಕೊಟ್ಟ ಹೆಗ್ಗಳಿಕೆ ನನ್ನದು; ಈ ಕಾರಣಕ್ಕೆ ನಿನಗೆ ಪುಷ್ಪ ನೀಡಿ ವೇದಿಕೆಗೆ ಕರೆತರುವ ಅದೃಷ್ಟವೂ ನನ್ನದೆ! ..ಹೀಗಾಗಿ ಕೈ ಕುಲುಕಿ ಪುಷ್ಪ ನೀಡಿ ಕಣ್ಣಲ್ಲಿ ಕಣ್ಣಿಟ್ಟು ಅಭಿನಂದಿಸುವಾಗ ಎದೆಯಲ್ಲಿ ನಗಾರಿ! ಕಣ್ಣು ಕೀಳಲಾಗಲಿಲ್ಲ.. ಎರಡು ಜೊತೆ ಜೋಡಿ ಕಣ್ಣುಗಳು ಆ ಕ್ಷಣದಲ್ಲಿ ಏನನ್ನೋ ಪಿಸುಗುಟ್ಟಿದ್ದವು. ನಿಜ ತಾನೇ ? ಹೇಳು ಪ್ರಿಯಾ… ಅಕ್ಕ-ಪಕ್ಕ ಪ್ರಿನ್ಸಿಪಾಲ್ , ಲೆಕ್ಚರರ್ಸ , ಸುತ್ತಮುತ್ತ ನೋಡುವವರಿದ್ದಾರೆ ಎಂಬ ಪರಿವೆ ಇಲ್ಲದೆ ಒಂದರೆಗಳಿಗೆ ಮೈ ಮರೆತಿದ್ದು ಸುಳ್ಳಲ್ಲ. ನೆನಪಿಸಿಕೊ…
ನಾನೇನು ಇದು ಜನ್ಮ ಜನ್ಮಾಂತರದ ಸಂಬಂಧವೆಂದು ಹೇಳುತ್ತಿಲ್ಲ. ಖಂಡಿತ ಇದು ಹದಿನಾರರ ಹರೆಯದ ಹುಚ್ಚು ಕೋಡಿ ಮನಸ್ಸಲ್ಲ. ಆ ಕ್ಷಣದಲ್ಲಿ ನನ್ನೆದೆಯಲ್ಲಿ ಮಡುಗಟ್ಟಿದ ಭಾವ ಲಹರಿ.’ Love At First Sight ‘ ಇರಬಹುದೇನೊ…
ಸಭಾ ಕಾರ್ಯಕ್ರಮದ ನಂತರದಲ್ಲಿ ನಿಮ್ಮನ್ನು ಪರಿಚಯಿಸುವಾಗ ಬಾಲ್ಯದಿಂದಲೇ ನಿಮ್ಮ ಸಾಧನೆ, ನಿಮಗೊಲಿದ ಪ್ರಶಸ್ತಿ ಪುರಸ್ಕಾರಗಳ ಲಿಸ್ಟ್ ಕೇಳುತ್ತಲೇ ಮನಸ್ಸಿನಲ್ಲಿ ನಿಮಗೊಂದು ಸೆಲ್ಯೂಟ್ ಅಂದಿದ್ದೆ! ಮುಂದಿನದು. ಪೂರ್ಣ ಪ್ರಮಾಣದಲ್ಲಿ ನಾನು ನಿನ್ನಲ್ಲಿ, ನಿನ್ನ ಗಾಯನದಲ್ಲಿ ಲೀನವಾಗಿದ್ದೆ.. ಗಾನ ಲೋಕದ ಯುವರಾಜ ನನ್ನೆದೆಯನ್ನು ಆಳಲೆಂದೇ ಬಂದ ರಾಜಕುಮಾರ , ನಿನ್ನ ಪಡೆಯಚ್ಚನ್ನು ನನ್ನೆದೆಯಲ್ಲಿ ತುಂಬಿಕೊಳ್ಳುತ್ತಲೇ ಗಾಯನವನ್ನು ಇಂಚಿಂಚಾಗಿ ಕಣ್ಣು ಮಿಟುಕಿಸದೆ ನನ್ನ ತನು ಮನದಲ್ಲಿ ತುಂಬಿಕೊಂಡೆ ..
ಕಾರ್ಯಕ್ರಮ ಮುಗಿಸಿ ಅಷ್ಟೇ ಸನ್ನಡತೆಯಿಂದ ವೇದಿಕೆಯಿಂದ ಇಳಿದು ಬಂದ ನಿಮ್ಮ ಅದ್ಭುತ ಪ್ರದರ್ಶನಕ್ಕೆ ಕೈಯೆತ್ತಿ ಮುಗಿದರೂ ಹೃದಯದಲ್ಲಿ ಪ್ರೇಮಾಂಕುರವಾಗಿತ್ತು ಎಂದಿನಂತೆ ಕಲಾವಿದರೊಂದಿಗೆ ಒಂದು ಸೆಲ್ಫಿ ತೆಗೆದುಕೊಳ್ಳುವ ನನಗೆ ನಿಮ್ಮೊಟ್ಟಿಗೆ ನಿಮ್ಮ ಸನಿಹದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಸಣ್ಣದೊಂದು ಪುಳಕ!! ಹಾಗೆ ಹಸ್ತಾಕ್ಷರ ಪಡೆದು ನಿಮ್ಮ ಪರ್ಸನಲ್ ನಂಬರ್ ಕೇಳಿ ಪಡೆಯುವಾಗ ಬೇಕಂತಲೇ ಕಾಯಿಸಿ ಹೆಸರು ಕೇಳಿ ತಿಳಿದ ನಿಮ್ಮಲ್ಲೂ ತುಂಟತನ ಇಣುಕುತ್ತಿರುವುದನ್ನು ಗ್ರಹಿಸಿದೆ. ಇತ್ತು ಅಲ್ವಾ? ಅಂದಿನಿಂದ ಮತ್ತೆ ಯಾವಾಗ ನಿನ್ನನ್ನು ನೋಡುವೆನೆಂಬ ಹಂಬಲ.
ನಿಮ್ಮ ನೋಡಿದ ದಿನದಿಂದ ನಾನು ನಾನಾಗಿರಲಿಲ್ಲ ಪ್ರತಿದಿನ ನಿಮ್ಮ ಗಾಯನದ ವಿಡಿಯೋ ನೋಡುತ್ತಾ, ನಿಮ್ಮೊಟ್ಟಿಗೆ ತೆಗೆದುಕೊಂಡ ಸೆಲ್ಫಿಯಲ್ಲಿ ಕಳೆದು ಹೋಗುತ್ತಾ ನನ್ನೆದೆಯ ಅರಮನೆಯಲ್ಲಿ ನಿಮ್ಮನ್ನು ರಮಿಸಿ ಆರಾಧಿಸುತ್ತಿದ್ದೆ ಇದು ಸಂಗೀತದ ಆರಾಧನೆಯೊ, ಪ್ರೇಮ ಪೂಜೆಯೊ ಗೊತ್ತಾಗುತ್ತಿರಲಿಲ್ಲ.
ನಿಮ್ಮನ್ನು ಮತ್ತೆ ಮತ್ತೆ ನೋಡಬೇಕೆಂಬ ಎದೆಯಾಸೆ; ಸಂಗೀತ ಕಲಿಯಬೇಕೆಂಬ ಹುಚ್ಚು ಒಟ್ಟಾರೆ ನೋಡಲು ,ಮಾತನಾಡಲು ಒಂದು ನೆಪ ಬೇಕಿತ್ತಲ್ಲ, ಹೀಗಾಗಿ ವಾರಕ್ಕೊಮ್ಮೆ ನಡೆಯುವ ನಿಮ್ಮ ವೈಯಕ್ತಿಕ ಸಂಗೀತ ಕ್ಲಾಸಿಗೆ ಸೇರಿಕೊಂಡೆ. ಒಂದು ಗಂಟೆ ನಿಮ್ಮೊಟ್ಟಿಗೆ ವೈಯಕ್ತಿಕವಾಗಿ ಕಳೆಯುವ ಆ ಕ್ಷಣಗಳೇ ರೋಮಾಂಚನವನ್ನುಂಟು ಮಾಡುತ್ತಿದ್ದವು ಮೊದಲ ದಿನ ನಿಮ್ಮ ಎದುರಿಗೆ ಹಾರ್ಮೋನಿಯಂ ಮುಟ್ಟಿ ನಮಸ್ಕರಿಸಿ ಕುಳಿತರೂ ಮನಸ್ಸು ಸ್ಥಿಮಿತದಲ್ಲಿರಲಿಲ್ಲ.. ಹಕ್ಕಿಯಂತೆ ಜೋಡಿಯಾಗಿ ನಿಮ್ಮೊಂದಿಗೆ ಹಾರಾಡುತ್ತಿತ್ತು. ದಿನಗಳೆದಂತೆ ಸಲುಗೆ, ನಿಮ್ಮ ಮೋಹಕ ನಗು, ಹಾರ್ಮೋನಿಯಂ ಕಲಿಸುವ ನೆಪದಲ್ಲಿ ಬೆರಳು ಸೋಕಿಸಿ ನನ್ನ ಮುಖದ ಭಾವ ಅರಿಯುವ, ಮನಸ್ಸು ಕದಿಯುವ ಚೋರ ನೀನು …ನೀವು ಭೀಮ್ ಪಲಾಸ್ , ಯಮನ್ ರಾಗದ ಆಲಾಪ ಮಾಡುತ್ತಿದ್ದರೆ ಓಹೋ !! ನಾನು ಕಳೆದು ಹೋಗುತ್ತಿದ್ದೆ.. ಹೆಸರಿನಲ್ಲೇ ರಾಗ ಧರಿಸಿದ ಯುವರಾಜ ನೀನು.ಒಮ್ಮೊಮ್ಮೆ ಏಕವಚನ ಪದ ಪ್ರಯೋಗ ಪ್ರೇಮಿಯಾಗಿ . ನನ್ನ ಸಂಗೀತದ ಹುಚ್ಚು, ನಿನ್ನ ಅಮೋಘ ಪ್ರತಿಭೆ ಮೇಳೈಸಿದರೆ ಹುಟ್ಟುವ ನಮ್ಮ ಮಗು ಪರಿಪೂರ್ಣ ಕಲಾವಿದನಾಗುವುದರಲ್ಲಿ ಅನುಮಾನವಿಲ್ಲ…
ಪ್ರಿಯಾ , ಇಂದಿಗೆ ಎರಡು ವರ್ಷಗಳೇ ಕಳೆದವು ನಿನ್ನ ನೋಡಿ.. ನನ್ನ ಮನದ ಇಂಗಿತ ಅರಿಯದವ ನೀನಲ್ಲ. ಆದರೂ ಯಾಕೆ ಈ ಮೌನ?? ಸಮ್ಮತಿಯೇ ಅಲ್ಲವೆ?
ನಿನ್ನ ಅಭಿಮಾನಿಯಾಗಿ ,ನಿನ್ನ ರಾಗಕ್ಕೆ ತಾಳವಾಗಿ, ಸ್ವರಕ್ಕೆ ಶ್ರುತಿಯಾಗಿ ನಿನ್ನೊಳಗೆ ಕಲೆತು ಬೆರೆತು ಆನಂದಿಸುವಾಸೆ. ಪ್ರಿಯಾ ಈ ನಿನ್ನ ಅಭಿಮಾನಿಯ ಸವಿನಯ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡು, ನನ್ನೆದೆಯ ಶ್ರುತಿ ತಪ್ಪಿದ ವೀಣೆಯ ಶ್ರುತಿ ಮಾಡುವೆಯಾ?
ಸುಧಾ ಹಡಿನಬಾಳ
Very nice super
Super
Thanks both of you …
ವಾವ್.. ಸುಂದರ ಸುಮಧುರ ಪ್ರಸ್ತುತಪಡಿಸುವಿಕೆ…