“ಗೊರೂರು ಶಿವೇಶ್‌ರ ನಗೆಯ ರಸ ಪ್ರಸಂಗಗಳು”ಕೃತಿ ಕುರಿತು ಬರೆಯುತ್ತಾರೆ-ಗೊರೂರು ಅನಂತರಾಜು, ಹಾಸನ.

ಗೊರೂರು ರಸಪ್ರಸಂಗಗಳು ಗೊರೂರು ಶಿವೇಶ್‌ರ ಹಾಸ್ಯ ಲೇಖನಗಳ ಸಂಕಲನ. ಇವರ ಲಘು ಬರಹ ಪತ್ರಿಕೆಗಳಲ್ಲಿ ಆಗಾಗ ಪ್ರಕಟಗೊಳ್ಳುತ್ತಿರುತ್ತವೆ. ಗಹನವಾದ ವಿಚಾರಗಳ ಪ್ರತಿಪಾದನೆಗೆ ಹೋಗದೆ ದಿನನಿತ್ಯದ ಅನುಭವಗಳ ಹೊಳವುಗಳಲ್ಲಿ ಹಾಸ್ಯದ ಸುಳಿಮಿಂಚುಗಳನ್ನು ನುಸುಳಿಸುವುದು ಲೇಖನ ಶೈಲಿಯಾಗಿದೆ. ಇಲ್ಲಿನ ೪೪ ಬರಹಗಳು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಒಂದೊಂದು ಬಗೆಯಲ್ಲಿ ಬಂದು ಹೋದಂತಹ ಪ್ರಸಂಗಗಳೇ. ಆದರೆ ಅದಕ್ಕೆ ಹಾಸ್ಯ ಲೇಪನ ಹಚ್ಚಿ ಸುಲಲಿತವಾಗಿ ಓದಿಸಿಕೊಳ್ಳುತ್ತಲೇ ನಗೆಯ ಮಿಂಚು ನಮ್ಮ ಮುಖದಲ್ಲಿ ಮೂಡಿಸುವುದೇ ಬರಹದ ವೈಶಿಷ್ಟ್ಯ.
 ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನಿಸಿದ ಹೇಮಾವತಿ ನದಿ ತೀರದ ಗೊರೂರು ಗ್ರಾಮದಲ್ಲಿ ಬಸವರಾಜು ಪುಟ್ಟಲಕ್ಮ್ಷಮ್ಮ ದಂಪತಿಗಳ ಸುಪುತ್ರರಾದ  ಗೊರೂರು ಶಿವೇಶ್ ಈಗ ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕರು.  
ಬರಹಗಳಲ್ಲಿ ವಿಶೇಷವಾಗಿ ಲಲಿತ ಪ್ರಬಂಧಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರ ಹಾಸ್ಯ ಕೃತಿ ಅರ್ಥ ಅನರ್ಥದಲ್ಲಿ  ೩೭  ನಗೆಬರಹಗಳಿವೆ. ಪ್ರತಿದಿನ ನಮ್ಮ ಸುತ್ತಲೂ ಅನೇಕ ಹಾಸ್ಯ ಪ್ರಸಂಗಗಳು ಸಂಭವಿಸುತ್ತ ಇರುತ್ತವೆ. ಬಹುತೇಕ ಹಾಸ್ಯ ಪ್ರಸಂಗಗಳು ಸನ್ನಿವೇಶಗಳು ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಉಂಟಾಗುವ ಗೊಂದಲದಿಂದ ಉಂಟಾಗುವ ಹಾಸ್ಯ ಪ್ರಸಂಗಗಳು ಇವರ ಲೇಖನಿಯಲ್ಲಿ   ಸ್ವಾರಸ್ಯಕರವಾಗಿ  ನಿರೂಪಿತವಾಗಿವೆ.
ನಾವು ಸಮಾಜದಲ್ಲಿ ಕಾಣಬಹುದಾದ ಅನೇಕ ಬಗೆಯ ಘಟನಾವಳಿಗಳನ್ನು ಚಿತ್ರಿಸುವಾಗ ಆರಿಸಿಕೊಳ್ಳಬಹುದಾಗಿರುವ ಕಥೆ, ಕಾವ್ಯ, ಪ್ರಬಂಧ, ಲೇಖನ, ಹಾಸ್ಯ ವಿಡಂಬನೆ ಹೀಗೆ ಹಲವು ಬಗೆಯ ಬರಹ ಶೈಲಿಯ ಆಯ್ಕೆಯಲ್ಲಿ ಗೊರೂರು ಶಿವೇಶ್ ನಿರೂಪಿಸುವ ಕಥನಾ ಶೈಲಿ ವಿಡಂಬನೆ ಸ್ವರೂಪದ್ದು. ಸಮಾಜದ ನಡವಳಿಯ ಲೇವಡಿ, ಬದುಕಿನ ಅದ್ವಾನಗಳ ಹುಡುಕಾಟದ ಒಳನೋಟದಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ.
ಇವರ ಎದೆಯೊಳಗಿನ ಹಾಡು ಹಾಸನವಾಣಿ ಪತ್ರಿಕೆಗೆ ಬರೆದ ೬೩ ಅಂಕಣ ಬರಹಗಳ ಸಂಕಲನ.  ಆ ದಿನದ ಆ ಕ್ಷಣದ ತುರ್ತಿಗೆ ಹುಟ್ಟಿಕೊಳ್ಳುವ ಅಂಕಣದ ಲೇಖನಗಳು ಆಯಾಕಾಲ ಘಟ್ಟದಲ್ಲಿ ಸಂಭವಿಸುವ ಘಟನೆಗಳು ಹಾಗೂ ಅವು ಬೀರಿದ ಪರಿಣಾಮವನ್ನು ಗ್ರಹಿಸಿ ಸುಳಿಮಿಂಚು ಬಳ್ಳಿಮಿಂಚು ಸಿಡಿಲಂಚುಗಳಂತೆ ಸುಳಿವ ಹನಿ ಪ್ರಬಂಧಗಳು ಓದುಗರಿಗೆ ತಲುಪಿವೆ. ವರ್ಷದಲ್ಲಿ ಬರುವ ಹಬ್ಬ ಹರಿದಿನಗಳ ವಿಶೇಷತೆಗಳು ಜನರ ಮನರಂಜನೆಯ ಮಾದ್ಯಮ ಸಿನಿಮಾ, ಕ್ರಿಕೆಟ್ ಲೇಖಕರು ಸ್ವತಃ ಉಪನ್ಯಾಸಕರಾಗಿರುವ ಕಾರಣ  ಶಿಕ್ಷಣ ಪರೀಕ್ಷೆ ಸಾಹಿತ್ಯ ಇತ್ಯಾದಿ ವಿಷಯಗಳನ್ನು ವಾರದ ತುರ್ತಿಗೆ ಕೈಗೆತ್ತಿಕೊಂಡು ಸರಳ  ಅಪ್ಯಾಯಮಾನ ಶೈಲಿಯಲ್ಲಿ ಒಂದೆರೆಡು ಪುಟಗಳಲ್ಲಿ ಬರೆದವುಗಳು ಎದೆಯ ಹಾಡಾಗಿವೆ.
ಇವರ ೧೮ ಪ್ರಬಂಧಗಳ ಮೀನಿನ ಹೆಜ್ಜೆಯನ್ನರಸುತ್ತಾ ಬರಹಗಳು ಪತ್ರಿಕೆಗಳಿಗಾಗಿ ಬರೆದವು. ಗಾತ್ರದಲ್ಲಿ ಕಿರಿದಾಗಿ ಪಾತ್ರದಲ್ಲಿ ಹಿರಿಮೆ ಸಾಧಿಸಿವೆ. ಬಾಲ್ಯದ ಸಿಹಿಯನ್ನು ಹೇಳುವ ಶಿವೇಶ್ ಕಹಿ ಪ್ರಸಂಗಗಳನ್ನು ಹೇಳುತ್ತಾರೆ. ಬಾಲ್ಯ  ಚಪ್ಪರಿಸುತ್ತಾ ವರ್ತಮಾನದ ಬಗ್ಗೆ ಬೇಸರಗೊಳ್ಳುತ್ತಾರೆ. ಮೀನಿನ ಹೆಜ್ಜೆಯನ್ನರಸುತ್ತಾ ಪ್ರಬಂಧದಲ್ಲಿ ಸೊಸಿಲಾಡಿ ಕೊರವನ ಸಿಗಿಸ್ತು ಗಾದೆ ಉಲ್ಲೇಖಿಸಿ ಮಾತಿಗೊಮೆ ಗಾದೆಯನ್ನು ಪೋಣಿಸಿ ಮಾತಾನಾಡುತ್ತಿದ್ದ ತಾಯಿಯನ್ನ ಸ್ಮರಿಸುತ್ತಾರೆ. ತಂದೆ ಮೀನು ಉಜ್ಜಿ ತೊಳೆದು ಸಾರು ಮಾಡಲು ತಾಯಿಗೆ ಕೊಡುತ್ತಿದ್ದ ಮೀನುಜ್ಜುವ ಪ್ರಕ್ರಿಯೆಯನ್ನು ಚಿತ್ರಿಸುತ್ತಾ, ಮೀನಿನ ಸಾರು ಒಂದು ಹೊತ್ತು ಕಳೆದ ನಂತರವೇ ಹೆಚ್ಚು ರುಚಿ ಎಂದು  ನಾಲಿಗೆ ಚಪ್ಪರಿಸುತ್ತಾರೆ.

ಹಾದಿಯಲ್ಲಿ ಬರುತ್ತಿರಲು ಮಸಾಲದೋಸೆ ನೆನಪಾಗಲು ಒಡನೆ ನೆನವುದೆನ್ನ ಮನಂ ವೆಂಕಟೇಶ ಭವನಂ… ಸಾಲುಗಳಿಂದ ಪ್ರಾರಂಭಗೊಂಡು ದೋಸೆ ಮಹಾತ್ಮೆಯ ‘ತತ್ ಥೇರಿಕೆ ಹಿಟ್ ಮೇಲೆ ಅವರೇಕಾಳ್ ಎಂಬ ನಾಣ್ಣುಡಿಯ ಬೆನ್ನತ್ತಿ ಹೈದರಾಲಿ ಕಥೆಗೆ ಲಿಂಕ್ ಮಾಡಿ ಜನಪದರ ಬಾಯಿಂದ ಬಾಯಿಗೆ ವೈರಲ್ ಆಗಿ ಹರಿದಾಡಿದ್ದನ್ನು ಸ್ವಾರಸ್ಯಕರವಾಗಿ ನಿರೂಪಿಸುತ್ತಾರೆ. ನಿರೂಪಕನೆಂಬ ನವ ಅವತಾರಿಯ ನಿರೂಪಣಾ
ಪುರಾಣವನ್ನು ಬಿಚ್ಚು ಮಾತುಗಳಿಂದ  ಚುಚ್ಚಿದ್ದಾರೆ. ಕನ್ನಡ ಸಿನಿಮಾ ಲೋಕ ಲೇಖಕರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಟೂರಿಂಗ್ ಟಾಕೀಸ್, ಕನ್ನಡದ ಹತ್ತು ಅತುತ್ತಮ ಸಿನಿಮಾ ಲೇಖನಗಳಲ್ಲಿ ಸಿನಿ ದುನಿಯ ಸುತ್ತಿದ್ದಾರೆ.
ಇವರ ಸಂತೆಯೊಳಗೊಂದು ಮನೆಯ ಮಾಡಿ ಕೃತಿ ವ್ಯಕ್ತಿಗಳ ಭಾವನೆಯನ್ನು ಆತ್ಮೀಯವಾಗಿ ಹಂಚಿಕೊಳ್ಳುವ ವೈಶಿಷ್ಟ್ಯ ಲಲಿತ ಪ್ರಬಂಧಗಳ ಸಂಕಲನ. ನವೋದಯ ಕಾಲದ ಕುವೆಂಪು ಬೇಂದ್ರೆ, ಪುತಿನ, ಎಂ.ಎನ್. ಮೂರ್ತಿರಾಯರು, ಡಾ. ಗೊರೂರರ ಲಲಿತ ಪ್ರಬಂಧಗಳನ್ನು ಓದಿಕೊಂಡು ಈ ನಿಟ್ಟಿನಲ್ಲಿ ತಮ್ಮ ಪ್ರಬಂಧಗಳ ಕೃಷಿ ನಡೆಸಿದ್ದಾರೆ. ತಮ್ಮ  ತಂದೆಯವರ ವ್ಯವಸಾಯ ಕಾಯಕದ ಬಗ್ಗೆ ಕೊರೆವ ಚಳಿಯು ಸುರಿದ ಮಳೆಯು, ಧರೆ ಸೇರಿದ ಬೆಳೆಯು ಪ್ರಬಂಧದಲ್ಲಿ ವ್ಯವಸಾಯ ಮನೆಮಂದಿಯೆಲ್ಲ ಸಾಯ ಎಂಬ ನೊಂದು ನಾಣ್ನುಡಿಗೆ ಅನ್ವಯವಾಗಿ ಕಷ್ಟ ಜೀವಿ ರೈತನ ಸಂಕಷ್ಟಗಳನ್ನು ಉಳುವ ಯೋಗಿಯ ನೋಡಲ್ಲಿ….. ಕುವೆಂಪು ಅವರ ರೈತ ಗೀತೆಗೆ ಮಾದರಿಯಾಗಿ ಕಾಯಕ ಯೋಗಿಯಾಗಿ ತಮ್ಮ ತಂದೆ ಬಸವಣ್ಣನವರ ರೈತ ಬದುಕನ್ನು ಕಟ್ಟಿಕೊಡುತ್ತಾರೆ.
ಇವರ ‘ಹುತ್ತಗಟ್ಟಿದ ಚಿತ್ತ’ ಸಾಹಿತ್ಯ, ಶಿಕ್ಷಣ, ಸಿನಿಮಾ, ಕಲೆ  ಕ್ರೀಡೆ ಕುರಿತಾದ ಬಿಡಿ ಲೇಖನಗಳ ಸಂಗ್ರಹ ವರ್ಷಗಳ ಅವಧಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ  ೩೨ ಲೇಖನಗಳು ಯಾವುದೇ ಪಾರಿಭಾಷಿಕ ಶೈಲಿಯ ಇಕ್ಕಟ್ಟಿಗೆ ಸಿಲುಕದೆ ಸರಳತೆಯ ಸೊಗಸಿನಿಂದ ಹೃದಯದ ಸಂವಾದದ ಸಿಹಿ ಓದುಗರಿಗೆ ಉಣ ಬಡಿಸುತ್ತವೆ.
 ಗೊರೂರು ರಸ ಪ್ರಸಂಗಳು ಕೃತಿಯಲ್ಲಿ ತ್ರೇತಾಯುಗದಲ್ಲಿ ಜನಪ್ರಿಯ ವಾಹಿನಿಯಲ್ಲಿ ಪ್ರಸಾರವಾಗುವ ವಾರ್ತೆ ಓದಿ. ‘ನಮಸ್ಕಾರ ಆ ಟಿವಿ ವಿಶೇಷ ವಾರ್ತೆಗಳಿಗೆ ಸ್ವಾಗತ. ಮುಖ್ಯಾಂಶಗಳು. ಶ್ರೀರಾಮನ ಪತ್ನಿ ಸೀತಾಮಾತೆ ಅಪಹರಣ. ತಲ್ಲಣಗೊಂಡ ಪಂಚವಟಿ. ಅಪಹರಣದಲ್ಲಿ ಲಂಕಾದ ರಾವಣನ ಕೈವಾಡದ ಶಂಕೆ. ಸೀತಾಮಾತೆಯ ರಕ್ಷಣೆಗಾಗಿ ಹೋರಾಡಿ ಮಡಿದ ಜಟಾಯು. ಈಗ ವಾರ್ತೆಗಳ ವಿವರ. ಹೀಗೆ ಟಿವಿ ಇಂದಿನ ವರದಿಗಾರಿಕೆಯನ್ನು ಅಂದಿಗೆ ಹೋಲಿಸಿ ತಮಾಷೆ ಸೃಜಿಸುತ್ತಾರೆ.
ಈಗ ಪ್ರೀ ಬಸ್ ಪ್ರಯಣ ಕಾಲ. ಕಂಡಕ್ಟರ್ ಮುಂದಿನಿಂದ ಟಿಕೇಟು ನೀಡುತ್ತಾ ಬಂದ. ಮುಂದಿದ್ದ ಹೆಂಗಸು  ಸುಜಾತ ಕೊಡಿ ಎಂದು ಟಿಕೇಟ್ ಪಡೆದಳು. ಅವಳ ಹಿಂದಿದ್ದವ ಪ್ರಸನ್ನ ಕೊಡಿ ಎಂದು ಟಿಕೇಟ್ ಪಡೆದ. ಕಂಡಕ್ಟರ್ ಯಜಮಾನರ ಹತ್ತಿರ ಬಂದಾಗ ಪುಟ್ಟೇಗೌಡ ಕೊಡಿ ಎಂದರು. ಒಮ್ಮೆಲೆ ಬಸ್‌ನಲ್ಲಿದ್ದವರು ನಗಲು ಪ್ರಾರಂಭಿಸಿದರು. ಕಂಡಕ್ಟರ್ ಎಲ್ಲಿದೆ ಯಜಮಾನರೆ ಪುಟ್ಟೇಗೌಡ ಸ್ಟಾಪ್ ಎಂದನು. ಆಮೇಲೆ ಸುಜಾತ ಟಾಕೀಸ್ ಸ್ಟಾಪ್, ಪ್ರಸನ್ನ ಟಾಕೀಸ್ ಎಂಬುವುಗಳು ಬಸ್‌ಸ್ಟಾಪ್‌ಗಳು ಎಂದು ಲೇಖಕರು ತಿಳಿ ಹೇಳಲು ಯಜಮಾನರು ನಸುನಗುತ್ತಾ ಮೊದಲು ಟಿಕೇಟ್ ಪಡೆದವರು ಅವರವರ ಹೆಸರ ಹೇಳಿ ಪಡೆದರೆಂದು ಭಾವಿಸಿ ನನ್ನ ಹೆಸರು ಪುಟ್ಟೇಗೌಡ ಹೇಳಿದೆ ಎಂದರಂತೆ.!  
ಹೀಗೊಂದು ಆಧುನಿಕ ನೀತಿ ಕಥೆ. ಮಾಸ್ತರೊಬ್ಬರು ಮದ್ಯಾಹ್ನದ ಬಿಸಿಲಿನ ಝಳಕ್ಕೆ ಟೇಬಲ್ಲಿನ ಮೇಲೆ ಉಡುಪುಗಳನ್ನು ಕಳಚಿ ಮಲಗಿದ್ದಾಗ ಶಾಲಾ ತನಿಖಾಧಿಕಾರಿಗಳು ಬಂದೊಡನೆ ‘ಇದು ಕಣ್ಣು, ಇದು ಕಿವಿ, ಇದು ಚರ್ಮ, ಇದು ಎದೆ  ಮುಂತಾಗಿ ವಿವರಿಸಿ ಜೀವಶಾಸ್ತೃದಲ್ಲಿ ಮಾನವನ ದೇಹ ರಚನೆಯ ಪಾಠ ಮಾಡುತ್ತಿರುವುದಾಗಿ ತಿಳಿಸಿ ತನಿಖಾಧಿಕಾರಿಗಳನ್ನು ಏಮಾರಿಸಿದ ಕಥೆ ಹಳೆಯದು.  
ಈಗ ಇಂಥದೇ ಸನ್ನಿವೇಶ. ಮದ್ಯಾಹ್ನದ ಬಿಸಿಯೂಟ ಮಾಡಿ ನಿದ್ದೆ ತಡೆಯಲಾರದೆ ಎರಡು ಬೆಂಚನ್ನು ಸೇರಿಸಿ ಮಾಸ್ತರರು ನಿದ್ರೆ ಹೋದರು. ಇದೇ ಸಮಯಕ್ಕೆ ತನಿಖಾಧಿಕಾರಿಗಳು ಶಾಲೆಗೆ ಆಗಮಿಸಿದರು. ಹಿಂದಿನ ಮಾಸ್ತರರ ಕಥೆ ಗೊತ್ತಿದ್ದರಿಂದ ಸದ್ದಾಗದೇ ಶಾಲೆಯೊಳಕ್ಕೆ ಪ್ರವೇಶಿಸಿದರು. ಒಮ್ಮೆಲೇ ಮಕ್ಕಳು ಗದ್ದಲ ನಿಲ್ಲಿಸಿ ನಿಶ್ಯಬ್ಧ ಆವರಿಸಿತು. ಇದ್ದಕ್ಕಿದ್ದಂತೆಯೇ ಸದ್ದು ನಿಂತ ಪರಿಣಾಮ ಮಾಸ್ತರಿಗೆ ಒಮ್ಮೆಲೇ ಎಚ್ಚರವಾಯಿತು. ಕಿರುಗಣ್ಣಿನಲ್ಲಿ ತನಿಖಾಧಿಕಾರಿಗಳನ್ನು ಗಮನಿಸಿದರು. ಥಟ್ಟನೇ ‘ನೋಡಿ, ಯಾವುದೇ ವ್ಯಾಯಾಮದ ಅಂತಿಮ ಹಂತ ಶವಾಸನ. ಎರಡು ಕಾಲುಗಳನ್ನು ಚಾಚಿ, ಕೈಗಳನ್ನು ಪಕ್ಕಕ್ಕಿಟ್ಟು ಕಣ್ಣು ಮುಚ್ಚಬೇಕು.. ಈಗಲೂ  ತನಿಖಾಧಿಕಾರಿ ಮತ್ತೊಮ್ಮೆ ಮೂರ್ಖರಾದರು.
 ಆಧುನಿಕ ಮುದ್ದಣ ಮನೋರಮೆಯ ಸಂವಾದದ ಪ್ರಾರಂಭ ಹೀಗೆ. ಬಂಗಾಳ ಕೊಲ್ಲಿಯಲ್ಲಿ ಎದ್ದ ಬಿರುಗಾಳಿಯಿಂದಾಗಿ ಬಿದ್ದ ಜಡಿಮಳೆಯಿಂದಾಗಿ ಎತ್ತಲೂ ಹೋಗಲಾರದೆ ಸ್ನೇಹಿತರೂ ಸಿಗದೆ, ಬಾರ್‌ಗೂ ಹೋಗಲಾರದೆ ನಿರಾಶೆಯಿಂದ ಮುದ್ದಣ ಮನೆಗೆ ಬಂದನು. ಮನೋರಮೆ ಬಾಗಿಲ ಪಿನ್‌ಹೋಲ್‌ನಿಂದ ನೋಡಿ ಗಂಡನೆಂದು ಖಚಿತಪಡಿಸಿಕೊಂಡು ಬಾಗಿಲು ತೆರೆದಳು.. ನಂತರ ಮನೋರಮೆ ಮಾತನಾಡಲು ತೊಡಗಿ ‘ನೋಡಿ ಈ ಕಣ್ಣಾಮುಚ್ಚಾಲೆಯಾಡುತ್ತಿರುವ ಕರೆಂಟಿನಿಂದಾಗಿ ಧಾರಾವಾಹಿಗಳನ್ನು ನೋಡದಂತಾಗಿ ನನ್ನ ಮನ ಬೇಸರಗೊಂಡಿದೆ. ಈ ಬೇಸರವನ್ನು ಹೋಗಲಾಡಿಸಲು ಒಂದು ಸಸ್ಪೆನ್ಸ್ ಥ್ರಿಲರ್ ಕಥೆ ಹೇಳುವಂತರಾಗಿ.. ಎಂದು ಕೇಳಿದಳು.  
ಕಾಫಿ ಹೌಸ್ ಬಿಗ್ ಬಾಸ್‌ನಲ್ಲಿ ಮೊಟ್ಟೆ ಮಹೇಶನ ಪ್ರಶ್ನೆ.’ಸೆಲಿಬ್ರಿಟಿ ಆಗೋಕೆ ಏನು ಮಾಡ್ಬೇಕು? ‘ಏನು ಇಲ್ಲ ನೀವಿರೋ ಫಿಲ್ಡಲ್ಲಿ ಸ್ವಲ್ಪ ಹೆಸರು. ಹೆಸ್ರಿಗಿಂತ ವಿವಾದ ಹುಟ್ಟು ಹಾಕಿದ್ರೆ ಸಾಕು. ನೆಕ್ಸ್ಟ್ ನೀವು ಬಿಗ್‌ಬಾಸ್‌ಗೆ ಹೋಗ್ಬೋದು.. “ಅದೇನು ಅಂಥವರ‍್ನೆ ಕಳುಸ್ತಾರೆ..? ‘ಷೇಕ್ಸ್ಪಿಯರ್ ಏನು ಹೇಳವ್ನೆ ಗೊತ್ತಾ. ಕೆಟ್ಟ ಸುದ್ದಿಯನ್ನು ಹೊತ್ತು ಹಾರೋ ಹಕ್ಕಿಗೆ ನಾಲ್ಕು ರೆಕ್ಕೆ ಅಂಥ.!
ಕ್ರಿಕೆಟ್ ಕುರುಕ್ಷೇತ್ರದಲ್ಲಿ ದೃತರಾಷ್ಟ: ಸಂಜಯ, ಏನು ನಡೆದಿದೆ ಅಲ್ಲಿ. ಅತಿ ಬಲಿಷ್ಟ ಪಡೆಯೆಂದು ಭಾವಿಸಲಾಗಿದ್ದ ಸುಯೋಧನ ನೇತೃತ್ವ  ಪಡೆ ಹೀಗೇಕೆ ಕುಸಿಯಿತು.
ಸಂಜಯ: ಹತ್ತಾರು ಬಾಣಸಿಗರು ಸೇರಿದರೆ ಅಡುಗೆ ಹಾಳಾಗುತ್ತದೆ. ಭೀಷ್ಮ, ದ್ರೋಣ, ಕರ್ಣ, ಶಕುನಿ, ದುಶ್ಯಾಸನ ಸ್ವತ: ಸುಯೋಧನ ಎಲ್ಲರೂ ಅತಿರಥರೆ. ಆದರೆ ಎಲ್ಲರಿಗೂ ಆತ್ಮ ಪ್ರತಿಷ್ಠೆ. ಹೀಗಾಗಿ ತಂಡವಾಗಿ ಆಡದೆ ಈ ಪರಿಸ್ಥಿತಿ ತಂದೊಡ್ಡಿದ್ದಾರೆ.
ಗಾಂಧಾರಿ: ಆದರೆ ಸುಯೋದನ ಅಪಾರವಾಗಿ ನಂಬಿದ್ದ ಕರ್ಣ ಔಟಾದ ರೀತಿ ತೀರಾ ದುರದೃಷ್ಟಕರ.
ಸಂಜಯ: ಕರ್ಣ ಮ್ಯಾಚ್ ಫಿಕ್ಸಿಂಗ್‌ಗೆ ಒಳಗಾಗಿದ್ದಾನೆ. ವಿರೋದಿ ತಂಡದ ಕೋಚ್ ಕೃಷ್ಣ ಬೇರೆ ಬೇರೆ ಮೂಲಗಳಿಂದ ಕರ್ಣನ ಮೇಲೆ ಒತ್ತಡ ಹೇರಿದ್ದಾನೆ. ಒಮ್ಮೆ ಹೊಡೆದ ಷಾಟಿನ ರೀತಿ ಇನ್ನೊಂದು ಷಾಟನ್ನು ಹೊಡೆಯುವುದಿಲ್ಲವೆಂದು ಕರ್ಣನಿಂದ ಭಾಷೆ ಪಡೆದಿದ್ದಾನಂತೆ.! ಅರ್ಜುನನ ಬೌಲಿಂಗ್ ಹೊರತು ಉಳಿದವರ ಬೌಲಿಂಗ್‌ನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆಯುವುದಿಲ್ಲವೆಂದು ಕರ್ಣ ಶಪಥ ಮಾಡಿದ್ದಾನೆ.. ಇಂತಹ  ರಸಪ್ರಸಂಗಗಳನ್ನು ಸೃಷ್ಟಿಸುವಲ್ಲಿ  ಗೊರೂರು ಶಿವೇಶ್ ಪರಿಣಿತರಿದ್ದಾರೆ.  

——————–

Leave a Reply

Back To Top