ಎ.ಎನ್.ರಮೇಶ್.ಗುಬ್ಬಿ ಅವರ ಹನಿಗಳು

  1. ನಿವೃತ್ತ..?

ಕಡೆಗಣಿಸಬೇಡಿರಿ ನಿವೃತ್ತನೆಂದು
ವೃತ್ತಿ ಸಮಯಕ್ಕಿಂತಲೂ ಇಂದು
ಅವನೀಗ ಹೆಚ್ಚು ಕಾರ್ಯಪ್ರವೃತ್ತ
ಮನೆಕೆಲಸದಲ್ಲೀಗವನು ನಿಷ್ಣಾತ.!

  1. ವೃತ್ತಿ-ಪ್ರವೃತ್ತಿ.!

ವೃತ್ತಿಗಿಹುದು ನಿವೃತ್ತಿ
ಪ್ರವೃತ್ತಿಗೆಲ್ಲಿಹುದು ನಿವೃತ್ತಿ?
ಉಸಿರಿರುವವರೆಗೂ ನಿತ್ಯ
ನಡೆಸಬಹುದು ದಿನಂಪ್ರತಿ.!

  1. ಸಿಂಹಸ್ವಪ್ನ.!

ಅಂದು ಅವನು ವೃತ್ತಿಯಲ್ಲಿದ್ದಾಗ
ಎಲ್ಲರಿಗೂ ಅಕ್ಷರಶಃ ಸಿಂಹಸ್ವಪ್ನ.!
ನಿವೃತ್ತಿಯಾದ ಮೇಲೆ ಇಂದೀಗ
ಹೆಂಡತಿಯೇ ಅವನಿಗೆ ಸಿಂಹಸ್ವಪ್ನ.!
ಇರುಳಲ್ಲು ಬೀಳುತಿಲ್ಲ ಸಿಹಿಸ್ವಪ್ನ.!!

  1. ಕಾಲ.!

ವೃತ್ತಿಯಲ್ಲಿರುವಾಗ ಅಧಿಕಾರವಿರುವಾಗ
ಕಾಲು ಕಾಲಿಗೂ ಎಲ್ಲಕ್ಕು ಆಳು-ಕಾಳು.!
ನಿವೃತ್ತಿಯಾಗಿ ವಿಶ್ರಾಂತನಾದ ಮೇಲೀಗ
ನಾನೆ ಹೋಗಬೇಕು ತರಲು ಬೇಳೆಕಾಳು.!

  1. ಅನಾವರಣ.!

ವೃತ್ತಿ ಪದವಿಗಳಿರುವಾಗ ಬಹುಪಾಲು
ಕಾಣುವುದೆಲ್ಲ ಮಿಥ್ಯ ಮಾಯ ನರ್ತನ
ಭ್ರಮೆ ಭ್ರಾಂತಿ ಭಟ್ಟಂಗಿಗಳ ಸಂಕೀರ್ತನ
ನಿವೃತ್ತರಾದ ಮೇಲೆಯೇ ಸಾಲು-ಸಾಲು
ಸಾಕಾರವಾಗುವುದು ವಾಸ್ತವ ನಗ್ನದರ್ಶನ
ಸುತ್ತ-ಮುತ್ತಲಿನವರ ನಿತ್ಯ ಸತ್ಯದರ್ಶನ.!

  1. ಅಜಗಜಾಂತರ.!

ವೃತ್ತಿಯಲ್ಲಿದ್ದಾಗ ನಿತ್ಯ ಅವನಿಗಂದು
ಎರಡು ಪಂಚು ಒಂದು ಲಂಚು
ಬದುಕು ಸುಖಸೌಖ್ಯದ ಮಿಂಚು.!
ನಿವೃತ್ತಿಯಾದ ಮೇಲೀಗ ಇಂದು
ಮನೆಗುಡಿಸಿ ಒರೆಸಬೇಕು ಇಂಚಿಂಚು
ತೊಳೆಯಬೇಕು ಪಾತ್ರೆಯ ಅಂಚಂಚು
ನಿಲ್ಲಬೇಕು ಅಮ್ಮಾವ್ರೆದುರು ಕೈಚಾಚುತ್ತ
ಒಂದುಲೋಟ ಚಹಾಕ್ಕು ಅಂಗಲಾಚುತ್ತ.!


Leave a Reply

Back To Top