ಕನ್ನಡ ಉಳಿಸಿ- ಬೆಳೆಸುವಲ್ಲಿ ಕನ್ನಡಿಗರ ಪಾತ್ರ .

ರಾಜ್ಯೋತ್ಸವ ವಿಶೇಷ

ಕನ್ನಡ ಉಳಿಸಿ- ಬೆಳೆಸುವಲ್ಲಿ

ಕನ್ನಡಿಗರ ಪಾತ್ರ .

ಹಮೀದಾಬೇಗಂ ದೇಸಾಯಿ.

   ” ಕನ್ನಡ ” ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು. ಕನ್ನಡ ಭಾಷೆಯಲ್ಲಿ ಕಾವ್ಯಗಳು ರಚನೆಯಾಗುವ ಕಾಲದಲ್ಲಿ ಇನ್ನೂ ಕೆಲವೊಂದು ಭಾಷೆಗಳು
ಜನ್ಮ ತಾಳಿರಲಿಲ್ಲ. ತರ್ಕಬದ್ಧವಾದ ಲಿಪಿಯನ್ನು ಹೊಂದಿದ್ದು , ವಿನೋಬಾ ಭಾವೆಯವರು ಕನ್ನಡವನ್ನು ” ವಿಶ್ವಲಿಪಿಗಳ ರಾಣಿ ” ಎಂದು ಕರೆದಿದ್ದಾರೆ..!ಒಂದು ಕಾಲದಲ್ಲಿ ಅನೇಕ ಸಾಮ್ರಾಜ್ಯಗಳ ರಾಜ್ಯಭಾಷೆಯಾಗಿ ಮೆರೆದ ನಮ್ಮ ಕನ್ನಡ, ಇಂದು ಅಳವಿನಂಚಿನತ್ತ ಸಾಗುತ್ತಿದೆ. ಅದರಲ್ಲೂ ಗಡಿಭಾಗದಲ್ಲಿ ಕನ್ನಡದ ಸ್ಥಿತಿ ಚಿಂತಾಜನಕ. ಇದಕ್ಕೆ, ರಾಜಕೀಯ ಇಚ್ಛಾಶಕ್ತಿ ಕೊರತೆ, ಅಭಿಮಾನಶೂನ್ಯ ಆಡಳಿತ ವರ್ಗ, ಕನ್ನಡ ಪರ ಸಂಘಟನೆಗಳ ಬೇಜವಾಬ್ದಾರಿತನ-ಕಾರಣಗಳೂ ಹೌದು.
   ಬೆಂಕಿ ಬಿದ್ದಿದೆ ಮನೆಗೆ
  ಎಲ್ಲರೂ ಎದ್ದೆದ್ದು ಓಡಿಬನ್ನಿ
ಕನ್ನಡದ ಗಡಿಕಾಯೆ ಗುಡಿಕಾಯೆ ನುಡಿ ಕಾಯೆ
ಕಾಯದಿದ್ದರೆ ಹೋಗಿ ಸಾಯೆ..

ದಿ.ಕವಿ ‘ ಕಯ್ಯಾರ ‘ರ ಈ ಮಾತು ನಮ್ಮ ನಾಡು-ನುಡಿಗೆ ಬಂದಿರುವ ದುಸ್ಥಿತಿಯನ್ನು ನೋಡಿ ನೆನಪಾಗುವುದು. ನಿರಭಿಮಾನಿ ಕನ್ನಡಿಗರೇ ಹೆಚ್ಚಾಗಿರುವ ನಮ್ಮ ನಾಡಿನಲ್ಲಿ ,
ಕನ್ನಡ-ಕನ್ನಡಿಗರು ಅತಂತ್ರರಾಗಿ, ಅಲ್ಪಸಂಖ್ಯಾತರಾಗುವ ಮೊದಲು ಎಚ್ಚೆತ್ತುಕೊಂಡು, ತಮ್ಮತನ, ತಮ್ಮ ಭಾಷೆ-ಸಂಸ್ಕೃತಿಗಳ ಆತ್ಮಾವಲೋಕನ ಮಾಡಿಕೊಳ್ಳಲು ಜಾಗೃತವಾಗುವ ಸಕಾಲವಿದು. ಗಡಿಭಾಗದಲ್ಲಿ ಭೌತಿಕವಾಗಿ ಕನ್ನಡದ ಕೊಲೆಯಾದ ಬಗ್ಗೆ ರಾಷ್ಟ್ರಕವಿ ಕುವೆಂಪು ಅಂದು ಹೇಳಿದ ಮಾತು ಸ್ಮರಣೀಯ.

ರಾಜನುಡಿಯೊಂದು ರಾಷ್ಟ್ರ ನುಡಿಯೊಂದು
ದೇವನುಡಿಯೊಂದು
ಹತ್ತಿ ಜಗ್ಗಿ ನಿಟಿ-ನಿಟಿಲು
ಮುದಿಮೂಳೆಯ ಮುರಿಯುತ್ತಿದೆ
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ..

  ಕನ್ನಡ ನಾಮಫಲಕಗಳು ಕೇವಲ ಘೋಷಣೆ- ಭಾಷೆಗಳಿಗೆ ಸೀಮಿತ..! ಕನ್ನಡ ಶಾಲೆಗಳಿಗೆ ಸೌಲಭ್ಯಗಳು ಮರೀಚಿಕೆ ಆಗಿವೆ.

  ಒಂದು ಭಾಷೆ ಬೆಳೆಯಬೇಕಾದರೆ ಆ ಭಾಷೆಯ, ಅದರ ಸಾಹಿತ್ಯದ ಕುರಿತಾದ ಚಿಂತನೆಗಳು ನಡೆಯಬೇಕಾದ್ದು ಅವಶ್ಯಕ. ಕೇವಲ ನಗರ ಕೇಂದ್ರೀಕೃತವಾಗುತ್ತಿರುವ ಕಾರ್ಯಕ್ರಮಗಳು ಪ್ರತಿ ಹಳ್ಳಿಯಲ್ಲೂ ಆಯೋಜಿಸುವಂತಾಗಬೇಕು. ಗ್ರಾಮೀಣ ಭಾಗದ ಸಾಹಿತಿಗಳು, ಕಲಾವಿದರು, ಹೋರಾಟಗಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅವರ ಪ್ರತಿಭೆಯನ್ನು ಮುಖ್ಯ ವಾಹಿನಿಗೆ,ಬರುವಂತೆ ಮಾಡಬೇಕು. ಕನ್ನಡ ಪರ ಸಂಘಟನೆಗಳು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು,ಕನ್ನಡ ಶಾಲೆಗಳ ಸ್ಥಾಪನೆ ಮತ್ತು ಅವುಗಳ ಸೌಕರ್ಯಗಳ ಬಗ್ಗೆ ಸರಕಾರದ ಗಮನ ಸೆಳೆಯಬೇಕು. ಗಡಿಕಾವಲು ಸಮಿತಿಗೆ ಕ್ರಿಯಾಶೀಲರನ್ನು ಆಯ್ಕೆ ಮಾಡಿ ನೇಮಕ ಮಾಡಬೇಕು.
    ಒಟ್ಟಿನಲ್ಲಿ ಕನ್ನಡಿಗರು ಏನು ಮಾಡಬೇಕು/ಬಹುದು:
* ನಮ್ಮ ವ್ಯಕ್ತಿತ್ವದ ಹೆಗ್ಗುರುತಾದ ಸಹಿಯು ಕನ್ನಡದಲ್ಲಿರಲಿ.
* ಕೆಲ ಎ.ಟಿ.ಎಂ. ಯಂತ್ರಗಳಲ್ಲಿ ಕನ್ನಡ ಭಾಷೆ ಇದ್ದಾಗ ಅವಶ್ಯವಾಗಿ ಕನ್ನಡದಲ್ಲಿ ವ್ಯವಹರಿಸಿ.
* ನಮ್ಮ ವಾಹನಗಳ ಸಂಖ್ಯಾ-ಫಲಕಗಳಲ್ಲಿ ಕನ್ನಡ ಅಂಕಿಗಳಿಗೂ ಜಾಗವಿರಲಿ.
* ಕನ್ನಡ ಪತ್ರಿಕೆ ಕೊಂಡು ಓದಿ, ಕನ್ನಡ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸೋಣ.
* ಮದುವೆ, ಹುಟ್ಟು-ಹಬ್ಬದ ಸಮಾರಂಭದಲ್ಲಿ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡೋಣ.
* ಓದುವ ಸಂಸ್ಕೃತಿ ಬೆಳೆಸಿ, ಕನ್ನಡ ಪುಸ್ತಕೋದ್ಯಮಕ್ಕೆ ಉತ್ತೇಜನ ನೀಡೋಣ.
* ಎಲ್ಲೇ ಹೋದರೂ ಮೊದಲು ಕನ್ನಡ ಮಾತನಾಡೋಣ.
* ಕನ್ನಡೇತರರಿಗೆ ಕನ್ನಡ ಕಲಿಯುವ/ಕಲಿಸುವ ಅನಿವಾರ್ಯತೆ ಸೃಷ್ಟಿಸೋಣ.
* ನಾವಿರುವ ನಗರ, ಗ್ರಾಮ, ಬೀದಿಗಳಿಗೆ ಕನ್ನಡದ ಕವಿ, ಸಾಹಿತಿ, ಕಲಾವಿದರ ಹೆಸರು ಇಡೋಣ.
* ಕನ್ನಡಕ್ಕಾಗಿ ದುಡಿದವರನ್ನು ಸತ್ಕರಿಸಿ ಗೌರವಿಸೋಣ .
* ನಮ್ಮ ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಶಾಲೆಗಳಿಗೆ ಕಳಿಸೋಣ.
* ನಾವು ಎಲ್ಲೇ ಇದ್ದರೂ ನಮ್ಮ ಸುತ್ತ ಮುತ್ತ ಕನ್ನಡಮಯ ವಾತಾವರಣ ಇರುವಂತೆ ನೋಡಿಕೊಳ್ಳೋಣ.

ಕನ್ನಡವೇ ಸತ್ಯ ಕನ್ನಡವೇ ನಿತ್ಯ…!!


 ಹಮೀದಾಬೇಗಂ ದೇಸಾಯಿ. 

Leave a Reply

Back To Top