ನಾಗರಾಜ ಜಿ. ಎನ್. ಬಾಡ-ಹಳ್ಳಿ ಎಂಬ ವೃದ್ಧಾಶ್ರಮ…

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ-

ಹಳ್ಳಿ ಎಂಬ ವೃದ್ಧಾಶ್ರಮ…

ಕಳಚಿ ಕೊಳ್ಳುತ್ತಿರುವ ಸಂಬಂಧ
ಹಳಸಿ ಹೋಗುತ್ತಿದೆ ಅನುಬಂಧ
ಹಳ್ಳಿ ಆಗುತ್ತಿದೆ ವೃದ್ಧಾಶ್ರಮ
ಯಾರಿಗೂ ಬೇಕಿಲ್ಲ ಪರಿಶ್ರಮ
ದನ ಕರುಗಳನ್ನ ಸಾಕುವವರಿಲ್ಲ
ಮೇವುಗಳನ್ನ ತಂದು ಹಾಕುವವರಿಲ್ಲ
ಗದ್ದೆಯಲ್ಲಿ ಬೆಳೆ ಬೆಳೆಯುವವರಿಲ್ಲ
ತೋಟದಲ್ಲಿ ದುಡಿಯುವವರಿಲ್ಲ
ಕಳೆಯನ್ನು ತೆಗೆಯುವವರಿಲ್ಲ


ಮನೆಯನ್ನ ನೋಡಿ ಕೊಳ್ಳುವವರಿಲ್ಲ
ಎಲ್ಲರಿಗೂ ಪೇಟೆಯ ಹುಚ್ಚು
ಒಳಗೊಳಗೆ ಬೇಯುತಿದೆ ಕಿಚ್ಚು
ಎಲ್ಲರಿಗೂ ಬೇಕು ಐಷಾರಾಮಿ ಬದುಕು
ಹಗಲು ರಾತ್ರಿಯ ಪಾಳಿಯ ನಡುವೆ ನೆಮ್ಮದಿಯ ಹುಡುಕು
ಹೊಕ್ಕಿದೆ ತಲೆಯಲ್ಲಿ
ಪೇಟೆಯ ಪಿಡುಗು
ತುಂಬಲು ಆಗುತ್ತಿಲ್ಲ
ಬೇಕುಗಳ ಹಡಗು
ಬದುಕಲ್ಲಿ ಸಾಗಿದೆ
ಇಲ್ಲಗಳ ಕೊರಗು
ಆದರೂ ಕರಗುತ್ತಿಲ್ಲ
ಪೇಟೆಯ ಬೆರಗು
ಹಿಟ್ಟಿಲ್ಲದಿದ್ದರೂ ಜುಟ್ಟಿಗೆ
ಮಲ್ಲಿಗೆಯ ಹುಚ್ಚು
ನಾಳೆಗಳ ಕನಸಲ್ಲಿ ಇಂದಿನ ದಿನವ
ಈ ಕ್ಷಣಗಳ ಖುಷಿಯ
ಕಳೆದು ಕೊಳ್ಳುವವರೆ ಹೆಚ್ಚು
ಕಾದಿದೆ ಮುಂದೆ ಆಪತ್ತು
ಹಳ್ಳಿಗಳ ಭವಿಷ್ಯಕ್ಕೆ ಕುತ್ತು
ಅರಿಯ ಬೇಕಿದೆ ಬದುಕಿನ
ಅಮೂಲ್ಯ ಸಂಪತ್ತು
ಅಲ್ಲಿ ಇಲ್ಲಿ ಹುಡುಕುವುದ
ಬಿಟ್ಟರೆ… ಸಿಗುವುದು
ನಮ್ಮೊಳಗೆ
ಅಡಗಿದೆ ನೆಮ್ಮದಿಯೆಂಬ
ಮಹಾ ಸಂಪತ್ತು


ನಾಗರಾಜ ಜಿ. ಎನ್. ಬಾಡ

3 thoughts on “ನಾಗರಾಜ ಜಿ. ಎನ್. ಬಾಡ-ಹಳ್ಳಿ ಎಂಬ ವೃದ್ಧಾಶ್ರಮ…

  1. ಹಳ್ಳಿ ಎಂಬುದು ಅದ್ಭುತ ಜಗತ್ತು. ಅಲ್ಲಿ ಪ್ರೀತಿ, ಸ್ನೇಹ, ಅಭಿಮಾನದ ಜೊತೆ ಕೊಂಡುಕೊಳ್ಳುವ ಬದುಕಿದೆ. ನೋವಿಗೆ ಸ್ಪಂದಿಸುವ ಗುಣವಿದೆ. ಸಂಬಂಧಗಳಿಗೆ ಋಣವಾಗುವ ಸಹಜತೆ ಇದೆ. ಕುಳಿತು ಮಾತನಾಡುವ ಸೌಜನ್ಯವಿದೆ. ಅಲ್ಲೊಂದು ಬದುಕಿಗೆ ಬೇಕಾದ ಏನೋ ಹೊಸತನ ಸಿಗುತ್ತದೆ. ಅಲ್ಲಿಯ ಸೋಗಿಲ್ಲದ ಜನಪದರ ಬದುಕು ಸದಾ ಕುತೂಹಲದ್ದು. ಎಲ್ಲವನ್ನೂ ಖುಷಿಗಾಗಿ ಮಾಡುವ ಹಳ್ಳಿ ಜನರ ಬದುಕು ವಿಶಾಲವಾದದ್ದು. ಕವನದ ಸಾಲುಗಳು ಹಳ್ಳಿ ಬದುಕನ್ನು ಜತನದಿಂದ ಕಟ್ಟಿಕೊಟ್ಟಿದೆ….. ಸಾಲುಗಳಲ್ಲಿ ಶಕ್ತಿಯಿದೆ….ಹಳ್ಳಿಯ ಚೈತನ್ಯವಿದೆ……..

Leave a Reply

Back To Top