ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸಸ್ಯ ಶಾಸ್ತ್ರಜ್ಞೆ

ಜಾನಕಿ ಅಮ್ಮಲ್ (1897-1984)

       ಕೇರಳದ ತೆಲ್ಲಿಚೇರಿ (ಥಲ್ಲಾಚೇರಿ) ಎಂಬಲ್ಲಿ ನವೆಂಬರ್ 4, 1897ರಲ್ಲಿ ಜನಿಸಿದರು. ಇವರಿಗೆ ಆರು ಜನ ಸಹೋದರರು ಮತ್ತು ಐದು ಜನ ಸಹೋದರಿಯರು. ಇವರ ತಂದೆ ದಿವಾನ್ ಬಹುದ್ದೂರ್ ಇ. ಕೆ ಕೃಷ್ಣನ್. ಇವರು ಮದ್ರಾಸ್ ಪ್ರೆಸಿಡೆನ್ಸಿಗೆ ಉಪನ್ಯಾಯಧೀಶರಾಗಿದ್ದರು. ಇವರ ತಂದೆ ಸಸ್ಯ ವಿಜ್ಞಾನದಲ್ಲಿ,  ನೈಸರ್ಗಿಕ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದರು. ಹಾಗಾಗಿ ತಂದೆಯಿಂದ ಬಳುವಳಿಯಾಗಿ ಈ ಜ್ಞಾನವನ್ನು ಪಡೆದುಕೊಂಡರು.

       ಪ್ರಾಥಮಿಕ ಶಿಕ್ಷಣವನ್ನು ತೆಲ್ಲಚೇರಿಯಲ್ಲಿ ಮುಗಿಸಿ ಇವರು ಉನ್ನತ ಶಿಕ್ಷಣಕ್ಕಾಗಿ ಮದ್ರಾಸಿನ ಕ್ವೀನ್‍ಮೇರಿಸ್ ಕಾಲೇಜಿನಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದುಕೊಂಡರು. 1921 ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನಿಂದ ಸಸ್ಯಶಾಸ್ತ್ರ ವಿಷಯದಲ್ಲಿ ಪದವಿ ಪಡೆದುಕೊಂಡರು. ಇವರು ಶಿಕ್ಷಣ ಮುಗಿಸಿದ ನಂತರ ವುಮೆನ್ಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರಾಧ್ಯ್ಯಾಪಕಾರಾಗಿ ಸೇವೆ ಸಲ್ಲಿಸಿದರು. ಸೇವೆ ಸಲ್ಲಿಸುತ್ತಿರುವಾಗ ಅಮೇರಿಕಾದ ಮಿಚಿಗನ್ ವಿಶ್ವವಿದ್ಯಾನಿಲಯದಿಂದ ಪ್ರತಿಷ್ಠಿತ ಬಾರ್ಬೋರ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದರು. ಹಾಗಾಗಿ ಅಮೇರಿಕಾಗೆ ಉನ್ನತ ಶಿಕ್ಷಣಕ್ಕಾಗಿ ತೆರೆಳಿದರು. ಅಲ್ಲಿ ಅವರು 1925 ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು. ಭಾರತಕ್ಕೆ ಮರಳಿದ ನಂತರವೂ ಮಹಿಳಾ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬೋಧಿಸುತ್ತಿದ್ದರು. ಆದರೆ ಮಿಚಿಗನ್‍ನಲ್ಲಿ ಮತ್ತೆ ಡಾಕ್ಟರೇಟ್ ಪದವಿಗಾಗಿ ಸಂಶೋಧನೆಯನ್ನು ಮುಂದುವರೆಸಿದರು. ಇವರು ‘ಕ್ರೋಮ್‍ಜೋಮ್ ಸ್ಟಡಿ ಇನ್ ನಿಕಂಡ್ರಾ ಫಿಸಾಲಾಯ್ಡಸ್’ ವಿಷಯದಲ್ಲಿ ಪಿಎಚ್‍ಡಿ ಪದವಿಯನ್ನು ಪಡೆದರು. ಅಲ್ಲಿಂದ ಹಿಂದುರಿಗಿದ ನಂತರ ಇವರು ಟ್ರಿವಂಡ್ರಮ್ ಮಹಾರಾಜ ಕಾಲೇಜ್ ಆಫ್ ಸೈನ್ಸ್‍ನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಪಕಾರಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಸೈಟೋಜೆನೆಟಿಕಸ್‍ನಲ್ಲಿ ಪರಿಣಿತ ಪಡೆದ (ವರ್ಣತಂತುಗಳು ಮತ್ತು ಉತ್ತರಾಧಿಕಾರಗಳ ಅಧ್ಯಯನ) ಇವರು ಕಬ್ಬು ಜೀವಶಾಸ್ತ್ರದಲ್ಲಿ ಕೆಲಸ ಮಾಡಲು ಕೋಯಮತ್ತೂರಿನಲ್ಲಿರುವ ಕಬ್ಬು ಸಂತಾನವೃದ್ಧಿ ಕೇಂದ್ರವನ್ನು ಸೇರಿದರು. ಆ ಕೇಂದ್ರದಲ್ಲಿ ಆಗ್ನೇಯ ಏಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಬ್ಬೊಂದರ ತಳಿಯು ವಿಶ್ವದ ಸಿಹಿಯಾದ ಕಬ್ಬು ಎಂದೇ ಪ್ರಖ್ಯಾತಿಯನ್ನು ಪಡೆದಿತ್ತು. ಆ ಕಬ್ಬುತಳಿಯನ್ನು ಭಾರತದ ವಾತಾವರಣಕ್ಕೆ ಹೊಂದಿಕೆಯಾಗುವಂತೆ ಪ್ರಯೋಗಾಲಯದಲ್ಲಿ  ಪ್ರಯೋಗಕ್ಕೆ ಒಳಪಡಿಸಿದರು. ಪ್ರಯೋಗಾಲಯದಲ್ಲಿ ಹೈಬ್ರಿಡ್‍ಗಳ ಮಿಶ್ರತಳಿಗಳ ಮೂಲಕ ಪಾಲಿಪ್ಲಾಯ್ಡ ಕೋಶಗಳನ್ನು ಮ್ಯಾನಿಪುಲೇಟ್ ಮಾಡುವ ಮೂಲಕ ಜಾನಕಿಯವರು ಭಾರತದ ವಾತಾವರಣದಲ್ಲಿ ಬೆಳೆಯುವ ಕಬ್ಬಿನ ಅಧಿಕ ಇಳುವರಿಯ ರಚನೆಯನ್ನು ಸೃಷ್ಟಿಸಿದರು. ಅವರ ಸಂಶೋಧನೆಯು ಭಾರತದಾದ್ಯಂತ ಕಬ್ಬು ಬೆಳೆಯನ್ನು ಭೌಗೋಳಿಕವಾಗಿ ವಿತರಣೆ ಮಾಡಲು ಮತ್ತು ವಿಶ್ಲೇಷಣೆ ಮಾಡಲು ಸಹಕಾರಿಯಾಯಿತು.

      ಭಾರತದ ಪ್ರಸಿದ್ಧ ವಿಜ್ಞಾನಿ ಮತ್ತು ನೋಬಲ್ ಪ್ರಶಸ್ತಿ ವಿಜೇತ ಸಿ.ವಿ ರಾಮನ್‍ರ ಭಾರತೀಯ ವಿಜ್ಞಾನ ಅಕಾಡೆಮಿಗೆ ಸಂಶೋಧನಾ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿ ಒಂದು ಜಾತಿಯ ಕಬ್ಬಿನ ಬಗೆಗಿನ ಸಂಶೋಧನೆ ಮಾಡಲು ಪ್ರಾರಂಭಿಸಿದರು. ಅಲ್ಲಿ ಜಾನಕಿಯವರು ಅಪಾರವಾದ ಸ್ಥಾನಮಾನಗಳಿಸಿದರು. ಇದು ಪುರುಷ ಪ್ರಧಾನ ವ್ಯವಸ್ಥೆಗೆ ಸಹಿಸಿಕೊಳ್ಳಲು ಆಗದೆ ಈಕೆಗೆ ಸಾಕಷ್ಟು ಸಮಸ್ಯೆಗಳನ್ನು ಮಾಡಿದರು. ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯವನ್ನು ಎದುರಿಸಿದ ಜಾನಕಿಯವರು ಮುಂದೆ ಲಂಡನ್‍ಗೆ ತೆರಳಿ ಜಾನ್ ಇನೆಸ್ ಹಾರ್ಟಿಕಲ್ಚರಲ್ ಇನ್ಸಿಟ್ಯೂಟ್‍ನಲ್ಲಿ ಸಹಾಯಕ ಸೈಟೋಲಾಜಿಸ್ಟ ಆಗಿ ಸೇರಿಕೊಂಡರು.

ಜಾನಕಿಯವರು ತಮ್ಮ ಸಂಶೋಧನಾ ಕಾರ್ಯದಲ್ಲಿ ತೊಡಗಿದ ಸಂದರ್ಭದಲ್ಲಿ ವಿಶ್ವದ ಅತ್ಯಂತ ಪ್ರಭಾವಿತ ಸೈಟೋಲಾಜಿಸ್ಟ್ ಜೆನೆಟಿಸ್ಟ್ ಮತ್ತು ಸಸ್ಯಶಾಸ್ತ್ರಜ್ಞರನ್ನು ಭೇಟಿಯಾಗಲು ಅವಕಾಶ ದೊರೆಯಿತು. 1945 ರಲ್ಲಿ ಜೀವಶಾಸ್ತ್ರಜ್ಞ ಸಿಡಿ ಡಾರ್ಲಿಂಗಸ್ಟನ್ ಜೊತೆಗೆ “ದಿ ಕ್ರೋಮೊಸೋಮ್ ಅಟ್ಲಾಸ್ ಆಫ್ ಕಲ್ಟಿವೇಟಡ್ ಪ್ಲ್ಯಾಂಟ್” ಗ್ರಂಥದ ಸಹ ಲೇಖಕರಾಗಿರುವರು.

       1951ರಲ್ಲಿ ಆಗಿನ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರು ಅವರು ಜಾನಕಿಯವರಿಗೆ ವೈಯಕ್ತಿಕವಾಗಿ ಭಾರತಕ್ಕೆ ಹಿಂದುರಿಗಲು ಮತ್ತು ಬಟಾನಿಕಲ್ ಸರ್ವೆ ಆಫ್ ಇಂಡಿಯಾ ಅನ್ನು ಪುನರ್ ನಿರ್ಮಿಸಲು ಆಹ್ವಾನಿಸಿದರು. ಹಾಗಾಗಿ ಭಾರತಕ್ಕೆ ಮರಳಿ ಬಿಎಸ್‍ಐ ನ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ನೇಮಕಗೊಂಡರು. ಅಲ್ಲಿ ಜಾನಕಿಯವರು ಹಲವು ಸುಧೀರ್ಘವಾದ ಯೋಜನೆಗಳನ್ನು ಹಾಕಿಕೊಂಡು ಅನೇಕ ಕೆಲಸಗಳನ್ನು ಮಾಡಿದರು.

           ಜಾನಕಿಯವರು ಸ್ಥಳೀಯ ಜನರ ಸಸ್ಯಕುಲದ ಹುಡುಕಾಟದಲ್ಲಿ ದೇಶದ ದೂರದೂರದ ಪ್ರದೇಶಗಳಿಗೆ ಭೇಟಿನೀಡಿದರು. ಸುಸ್ಥಿರ ಕೃಷಿಯ ವಿಧಾನಗಳನ್ನು ಅನ್ವೇಶಿಸಲು ಅವರು ಲಡಾಕ್‍ಗೆ ಭೇಟಿ ನೀಡುವ ಮೊದಲು ವಯನಾಡ್ನನಲ್ಲಿ ಔಷಧೀಯ ಸಸ್ಯಗಳನ್ನು ಹುಡುಕಿದರು. ಇವರು ಪರಿಸರ ಮತ್ತು ಜೀವ ವೈವಿಧ್ಯದ ಬಗೆಗೆ ಅಧ್ಯಯನ ಮಾಡಿದ ಒಬ್ಬ ಮಹಿಳಾ ವಿಜ್ಞಾನಿ ಜೊತೆಗೆ ಪರಿಸರವಾದಿಯೂ ಕೂಡ ಆಗಿದ್ದರು.

       ಇವರು ಔಷಧೀಯ ಮತ್ತು ಇತರೆ ಸಸ್ಯಗಳಲ್ಲದೆ ಸೋಲಾಮ್, ದತುರಾ, ಮೆಂಥಾ, ಸಿಂಬೋಪೋಗನ್ ಮತ್ತು ಡಯೋಸ್ಟೋರಿಯಾ ತಳಿಗಳಲ್ಲೂ ಕೆಲಸ ಮಾಡಿದರು. ಹಿಮಾಲಯದ ಶೀತ ಶುಷ್ಕ ವಾಯುವ್ಯದಲ್ಲಿ ಪಾಲಿ ಪ್ಲಾಯ್ಡಗಳಿಗೆ ಸಂಬಧಿಸಿದ ಸಸ್ಯಗಳ ಬಗೆಗಿನ ಹೆಚ್ಚಿನ ಸಂಶೋಧನಾತ್ಮಕ ಕೊಡುಗೆಯನ್ನು ನೀಡಿದ್ದಾರೆ. ಇದು ಅವರ ಸಸ್ಯ ವೈವಿಧ್ಯಕರಣಕ್ಕೆ ನೀಡಿದ ಮಹತ್ವದ ಕೊಡುಗೆಯಾಗಿದೆ. ಜಾನಕಿಯವರು ತಮ್ಮ ನಿವೃತ್ತಿಯ ನಂತರವು ಔಷಧೀಯ ಸಸ್ಯಗಳ ಇಥ್ನೋಬೊಟನಿಕ ಕುರಿತು ವಿಶೇಷ ಗಮನವನ್ನು ಹರಿಸಿದ್ದರು. ಅವರು ತಾವು ವಾಸಿಸುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ ಸೆಂಟರ್ ಆಫ್ ಅಡ್ವಾನ್ಸ್ ಸ್ಟಡಿ ಫಿಲ್ಡ್ ಲ್ಯಾಬೋರೇಟರಿಯಲ್ಲಿ ಔಷಧೀಯ ಸಸ್ಯಗಳ ಉದ್ಯಾನವನವನ್ನು ಅಭಿವೃದ್ಧಿ ಪಡಿಸಿದರು.

        ಜಾನಕಿ ಅಮ್ಮಲ್ ಅವರಿಗೆ 1935 ರಲ್ಲಿ ಭಾರತೀಯ ವಿಜ್ಞಾನ ಅಕಾಡೆಮಿ ವತಿಯಿಂದ ಪ್ರಶಸ್ತಿ ಲಭಿಸಿತು. 1957 ರಲ್ಲಿ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಇವರಿಗೆ ಫೆಲೋಶಿಪ್ ನೀಡಿ ಗೌರವಿಸಿತು. 1956 ರಲ್ಲಿ ಅಮೇರಿಕಾದ ಮಿಚಿಗನ್ ವಿಶ್ವವಿದ್ಯಾನಿಲಯವು ಇವರಿಗೆ ಎಲ್.ಎಲ್.ಡಿ ಪದವಿ ನೀಡಿ ಗೌವರವಿಸಿತು. 1957 ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌವರವಿಸಿತು. ಅಷ್ಟೇ ಅಲ್ಲದೆ 2000 ರಲ್ಲಿ ಭಾರತ ಸರ್ಕಾರದ ಪರಿಸರ ಹಾಗೂ ವನ್ಯ ಸಂರಕ್ಷಣ ಇಲಾಖೆಯು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇವರ ಹೆಸರಿನ ಮೂಲಕ ಪ್ರಶಸ್ತಿಯನ್ನು ನೀಡುವುದನ್ನು ಪ್ರಾರಂಭಿಸಿತು.


ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

One thought on “

  1. ಭಾರತದ ಮಹಿಳಾ ಸಾಧಕಿಯರ ಪರಿಚಯ ಮತ್ತು ಸಾಧನೆ ಕುರಿತು ಬರೆಯುವ ನಿಮ್ಮ ಶ್ರಮ ಹಾಗೂ ಉದ್ದೇಶ ಅರ್ಥಪೂರ್ಣ. ಭಾರತದ ಮಹಿಳಾ ಸಬಲೀಕರಣದ ಹಂತಗಳನ್ನು ನೀವು ದಾಖಲಿಸುತ್ತಿದ್ದೀರಿ. ಅಭಿನಂದನೆಗಳು

Leave a Reply

Back To Top