ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಬೆರಗು _  ಲೇಖನಗಳ ಸಂಗ್ರಹ

ಬೆರಗು ಲೇಖನಗಳ ಸಂಗ್ರಹ

ಲೇಖಕಿ ಕಮಲಾ ಹಂಪನಾ

ಪ್ರಕಾಶಕರುಸಪ್ನಾ ಬುಕ್ ಹೌಸ್

ಪ್ರಥಮ ಮುದ್ರಣ _ ೨೦೧೧

ಶ್ರೀಮತಿ ಕಮಲಾ ಹಂಪನಾ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಸ್ಮರಿಸಬೇಕಾದ ಹೆಸರು . ವಿಚಾರ ಸಾಹಿತ್ಯ ವಿಮರ್ಶೆ ಕವನ ಸಣ್ಣಕಥೆ ಕಾದಂಬರಿ ಎಲ್ಲ ರೀತಿಯ ಸಾಹಿತ್ಯ ಪ್ರಕಾರಗಳಲ್ಲೂ ಕೃಷಿ ನಡೆಸಿ ಸೈ ಎನಿಸಿಕೊಂಡವರು . ಕನ್ನಡ ಮಹಿಳಾ ಲೇಖಕರಲ್ಲಿ ಸಮಗ್ರ ಸಾಹಿತ್ಯ ಹೊರಬಂದಿರುವುದು ಇವರದ್ದು ಮಾತ್ರ ಎಂಬುದು ಒಂದು ಗಮನಾರ್ಹ ಗರಿಮೆ. ಈ ಹಿಂದಿನ ಬದುಕು ಬರಹ ಪ್ರಬಂಧ ಮಂಡನೆ ಗಳಲ್ಲಿ ಇವರ ಬಗ್ಗೆ ಸಾಕಷ್ಟು ವಿವರವಾಗಿ ಹೇಳಿರುವುದರಿಂದ ನಾನು ಈಗ ನೇರ ಪುಸ್ತಕ ಪರಿಚಯಕ್ಕೆ ಬರುವೆ.

ನಾನು ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿರದಿದ್ದುದರಿಂದಲೋ ಅಥವಾ ಹಳಗನ್ನಡ ಸಾಹಿತ್ಯ ಓದಿ ಲ್ಲದಿರುವುದರಿಂದಲೂ ಈವರೆಗೂ ಕಮಲಾ ಹಂಪನಾ ಅವರ ಕೃತಿಗಳನ್ನು ಓದಿರಲಿಲ್ಲವೆಂದೂ ಸ್ವಲ್ಪ ಅಪರಾಧಿ ಮನೋಭಾವದಿಂದಲೇ ಹೇಳಿಕೊಳ್ಳುವೆ.ಪ್ರಬಂಧ ಮಂಡನೆಗಾಗಿ ವಿಚಾರ ಸಂಗ್ರಹಿಸುವಾಗ ಇವರ ವಿಸ್ತೃತ ಓದು ಹಾಗೂ ಸಾಹಿತ್ಯ ರಚನೆಯ ವಿಶಾಲ ನೋಟ ನನಗೆ ಒದಗಿ ಬಂತು . ಸಮಗ್ರ ಸಾಹಿತ್ಯ ಸಂಪುಟಗಳ ನಾಲ್ಕನೆಯ ಸಂಚಿಕೆ ಬೆರಗು ವ್ಯಕ್ತಿ ಚಿತ್ರಗಳ ಬಗೆಗಿನ ಪುಸ್ತಕದ ಬಗ್ಗೆ ನಾನೀಗ ಹೇಳ ಹೊರಟಿರುವೆ .ಇದು ಆ ಮುಖ ಮುಡಿಮಲ್ಲಿಗೆ ಇತ್ತ ಕೈ ದಾನವೀರ ಎಂಎಲ್ ವರ್ಧಮಾನಯ್ಯ ಹಾಗೂ ಬಂಧುರ ಈ 4 ಪುಸ್ತಕಗಳ ಸಂಕಲನ. ಇದರಲ್ಲಿ ನಾನೀಗ ಪರಿಚಯಿಸುತ್ತಿರುವ ಪುಸ್ತಕ ಆ ಮುಖ . ಪ್ರಸಿದ್ಧ ಲೇಖಕರ ಪತ್ನಿಯರ ಸಂದರ್ಶನಗಳ ಸಂಗ್ರಹ ಇದು .ಒಟ್ಟು ಹತ್ತೊಂಬತ್ತು ಪ್ರಸಿದ್ಧ ಲೇಖಕರ ಪತ್ನಿಯರನ್ನು ಸಂದರ್ಶಿಸಿ ಪ್ರಜಾಮತ ಪತ್ರಿಕೆಯ ಅಂಕಣಕ್ಕಾಗಿ ಇದನ್ನು ಕಮಲಾ ಹಂಪನಾ ಅಮ್ಮ  ಅವರು  ಸಿದ್ಧಪಡಿಸಿದ್ದಾರೆ.

Behind every successful man there is a woman ಎಂಬುದು ಇಂಗ್ಲಿಷಿನ ಪ್ರಸಿದ್ಧ ನಾಣ್ಣುಡಿ .ಖಂಡಿತ ಇದು ನಿಜವೂ ಹೌದು. ಇದನ್ನು ಉದಾಹರಣೆಗಳ ಮೂಲಕ ಈ ಅಂಕಣ ಸ್ಪಷ್ಟೀಕರಿಸುತ್ತದೆ .  ಪ್ರಸಿದ್ಧ ತತ್ತ್ವಶಾಸ್ತ್ರಜ್ಞ ಸಾಕ್ರೆಟಿಸ್ ಹೇಳುತ್ತಾನೆ “ಮದುವೆಯಾಗಿ ಒಳ್ಳೆಯ ಹೆಂಡತಿ ಸಿಕ್ಕಿದರೆ ನೀನು ಸುಖವಾದ ಜೀವನ ಮಾಡುತ್ತೀಯಾ ಇಲ್ಲದಿದ್ದರೆ ನನ್ನಂತೆ ತತ್ವಜ್ಞಾನಿ ಆಗುತ್ತೀಯ” ಎಂದು . ಸುಗುಣ ಶೀಲ ಒಳ್ಳೆಯ ಹೆಂಡತಿಯರು ಸಿಕ್ಕಿದ್ದರಿಂದಲೇ ಈ ಎಲ್ಲ ಲೇಖಕರು ತತ್ವಜ್ಞಾನಿಗಳಾಗದೆ ತಮ್ಮ ತಮ್ಮ ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದರು ಅಂತ ಹೇಳಬಹುದಲ್ಲವೇ ?

ಶ್ರೀಮತಿ ಕಮಲಾ ಹಂಪನಾ ಅವರು ಮುನ್ನುಡಿಯ ಮಾತು ನಲ್ಲಿ ಹೇಳುತ್ತಾರೆ “ಪ್ರಸಿದ್ಧ ಸಾಹಿತಿಗಳ ಪರಿಚಯ ಓದುಗ ಸಹೃದಯರಿಗೆ ಇರುತ್ತದೆ. ಆದರೆ ಅವರ ಸಾಹಿತ್ಯ ಕೃಷಿಗೆ ಎಲ್ಲ ರೀತಿಯ ನೆರವು ಸಹಕಾರ ಸಹಾಯ ಹಸ್ತವನ್ನು ನೀಡಿ ಅನುವು ಮಾಡಿಕೊಟ್ಟ ಅವರ ಪತ್ನಿಯರ ಮನೋಭಾವವನ್ನು ಆ ಇನ್ನೊಂದು ಮುಖವನ್ನು ಸಹೃದಯ ಓದುಗರಿಗೆ ಪರಿಚಯಿಸಲೆಂದೇ ಈ ಸಂದರ್ಶನ  ಲೇಖನಗಳು ಸಿದ್ಧವಾದವು”.  ನಿಜಕ್ಕೂ ಇದೊಂದು ತುಂಬಾ ಉತ್ತಮ  ಹಾಗೂ ಐತಿಹಾಸಿಕ ನಡೆ ಎಂದೇ ಹೇಳಬಹುದು .

ಕನ್ನಡ ಸಾಹಿತ್ಯದಲ್ಲಿ ಇದೊಂದು ಹೊಸ ಹೆಜ್ಜೆ ಅಂತಾನೇ ಹೇಳಬಹುದು .

ಒಟ್ಟು ಹತ್ತೊಂಬತ್ತು ಪ್ರಸಿದ್ಧರ ಪತ್ನಿಯರ ಸಂದರ್ಶನದ  ಅಂಕಣಗಳು ಅಂದಿನ ಪ್ರಸಿದ್ಧ ಪ್ರಜಾಮತ ವಾರಪತ್ರಿಕೆಯಲ್ಲಿ ೧೪.೦೧.೧೯೬೮ ರಿಂದ ಪ್ರಾರಂಭವಾಗಿ ೧೨.೦೭.೧೯೬೮ ರಂದು ಮುಕ್ತಾಯವಾಯಿತು. ಸಾಹಿತ್ಯದಲ್ಲಿ ಹೊಸ ಪ್ರಯೋಗವಾದ ಈ ಎಲ್ಲವುಗಳ ಸಂಗ್ರಹ ಪುಸ್ತಕವಾಗಿ ಹೊರ ಬಂದದ್ದು ನವೆಂಬರ್ ೧೯೮೫ ರಲ್ಲಿ.ಆ ಸಮಯಕ್ಕೆ ಸಂದರ್ಶನ ನಡೆಸಿದ್ದ ಎಷ್ಟೋ ಹಿರಿಯರು ತಮ್ಮ ಜತೆ ಇರಲಿಲ್ಲವೆಂಬ ದುಃಖವನ್ನು ವ್ಯಕ್ತಪಡಿಸಿದ್ದಾರೆ ಲೇಖಕಿಯವರು .  

ಪ್ರತಿಯೊಬ್ಬರ ವ್ಯಕ್ತಿ ವ್ಯಕ್ತಿತ್ವ ಚಿತ್ರಣಗಳೊಂದಿಗೆ ಅವರ ವೈಶಿಷ್ಟ್ಯಗಳನ್ನು ಮತ್ತು ಅವರ ಬಗ್ಗೆ ಪತಿ ತಮ್ಮ ಪತ್ನಿಯ ಬಗ್ಗೆ ನುಡಿದ ನುಡಿಗಳನ್ನು ಸಂದರ್ಶನದಲ್ಲಿ ಸೇರಿಸಿದ್ದಾರೆ ಲೇಖಕಿಯವರು .

ಮೊದಲಿಗೆ ಶ್ರೀಮತಿ ಪಂಕಜಮ್ಮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬಗ್ಗೆ ಹೇಳುತ್ತಾ ಅವರ ಲಲಿತಕಲೆಗಳ ಪರಿಣತಿ ವಿಶಿಷ್ಟವಾಗಿ ಚಿತ್ರಕಲೆಯ ಪರಿಣತಿಯನ್ನು ಹೇಳುತ್ತಾರೆ . ಮಾಸ್ತಿಯವರ ಬರಹಗಳಿಗೆ ಸಾಹಿತ್ಯಕ್ಕೆ ಮೊಟ್ಟಮೊದಲ ಓದುಗರು ಹಾಗೂ ಸಹೃದಯ ವಿಮರ್ಶಕರು ಅವರ ಶ್ರೀಮತಿಯವರೇ . ಹಾಗಾಗಿಯೇ ಮಾಸ್ತಿಯವರು ತಮ್ಮ “ನಾಲ್ವತ್ತರ ನಲಗು” ಎಂಬ ಕವಿತೆಯಲ್ಲಿ ತಮ್ಮ ಪತ್ನಿ  ಬಗ್ಗೆ ಹೀಗೆ ಹೇಳುತ್ತಾರೆ

ಬಾಳಿನ ಬೆಳಕೆ, ಜೀವದ ಕಳೆಯೆ

ಒದವಿದ ಸೊಗಸೆ,

ನೀತಿಯ ನೆಲೆಯೆ

ಹೇಳದೆ ಧರ್ಮವ

ಕಲಿಸುವ ಗುರುವೆ

ಬದುಕಿದು ಬದುಕೆ 

ನೀನಿದನುಳಿಯೆ?

ಎಂತಹ ಸೊಗಸಾದ ಧನ್ಯವಾದಗಳನ್ನರ್ಪಿಸುವ ಪರಿ !

ಶ್ರೀಮತಿ ಶೇಷಮ್ಮನವರ ಬಗ್ಗೆ ಅವರ ಪತಿ ಪುತಿ ನರಸಿಂಹಾಚಾರ್ ಅವರು ಸಚೇತಕಿ ಎಂದು ಸಂಬೋಧಿಸುತ್ತಾ “ತಮ್ಮ ಹಂಸ ದಮಯಂತಿ ಮತ್ತು ಇತರ ರೂಪಕಗಳು” ಎನ್ನುವ ಪುಸ್ತಕವನ್ನು ಕೃತಜ್ಞತೆಯಿಂದ ಅರ್ಪಿಸಿದ್ದಾರೆ .    ಅವರ ನುಡಿಗಳಲ್ಲೇ ಹೇಳುವುದಾದರೆ

ಪಾಡೆಲ್ಲ ನನಗಿರಲಿ

ಹಾಡು ನಿನಗಿರಲೆಂದ

ಬೀಡಿನೊಡತಿಗೆ 

ಎನ್ನ  ಕೂಡಿಗೆ….

ಇಲ್ಲಿ ಮತ್ತೊಂದು ಸ್ವಾರಸ್ಯಕರ ಘಟನೆಯನ್ನು ಹಂಚಿಕೊಳ್ಳುತ್ತಾರೆ ಲೇಖಕಿ. ಈ ಲೇಖನ ಬರೆಯುವಾಗ ತಪ್ಪಾಗಿ 7 ಜನ ಹೆಣ್ಣು ಮಕ್ಕಳು ಎನ್ನುವ ಬದಲು 6 ಜನ ಎಂದು ಬರೆದು ಬಿಟ್ಟಿದ್ದರಂತೆ .ಹಾಗಾಗಿ ಪುತಿನ ಅವರು ಹೆಣ್ಣುಮಕ್ಕಳ ಪತ್ರಕ್ಕೆ ಉತ್ತರ ಬರೆಯುವುದು ತಡವಾದಾಗಲೆಲ್ಲ ಕಮಲಾ ಅವರು ಬಿಟ್ಟುಬಿಟ್ಟಿದ್ದ ನತದೃಷ್ಟ ಮಗಳು ನಾನೇ ಎಂದು ಅವರುಗಳು ಹೇಳುತ್ತಿದ್ದರಂತೆ. ಹೀಗೆ ತಮ್ಮ ಸಂಸಾರದಲ್ಲಿ ಈ ವಿಷಯ ಹಾಸ್ಯದ ಹೊನಲನ್ನು ಹರಿಸುತ್ತಿತ್ತು ಎಂಬ ವಿಷಯವನ್ನ  ಪುತಿನ ದಂಪತಿಗಳು ತಮ್ಮೊಂದಿಗೆ ಹಂಚಿಕೊಂಡಿದ್ದರು ಎನ್ನುತ್ತಾರೆ.

ತಾವೇ ಪತ್ರಕರ್ತೆಯೂ ಲೇಖಕಿಯೂ ಆಗಿ ಪತಿಯ ಹೆಗಲಿಗೆ ಹೆಗಲಾಗಿ ದುಡಿಯುತ್ತಿದ್ದ  ಶ್ರೀಮತಿ ತಿರುಮಲೆ ರಾಜಮ್ಮ ತೀ ತಾ ಶರ್ಮ “ಭಾರತಿ” ಅವರ ಬಗ್ಗೆ, ಗಾಂಧೀಜಿಯವರಿಗೆ ಇವರ ಹಾಡುಗಾರಿಕೆ ಪ್ರಿಯವಾಗಿದ್ದರ ಬಗ್ಗೆ ತುಂಬಾ ಸ್ವಾರಸ್ಯಕರವಾಗಿ ಹೇಳುತ್ತಾರೆ.ಪತ್ರಿಕೆಯ ಕಾರ್ಯಕ್ಕಾಗಿ ತಮ್ಮ ಚಿನ್ನದ ಬಳೆಗಳನ್ನು ಬಿಚ್ಚಿಕೊಟ್ಟ ಪ್ರಸಂಗವನ್ನು ಉದಾಹರಿಸುತ್ತಾರೆ . ಇವರ ದಾಂಪತ್ಯದ ಬಗ್ಗೆ ಲೇಖಕಿಯವರು ಶ್ರೇಷ್ಠಕವಿ ರತ್ನಾಕರನ ರಚನೆಯೊಂದನ್ನು ಹೋಲಿಕೆಯಾಗಿ ನೀಡುತ್ತಾರೆ

ಜಾಣೆ ಜಾಣನು ಕೂಡಲದು 

ತಂತಿ ಗೂಡಿದ ವೀಣೆಯ

ನುಡಿಸಿದಂತಿಹುದು

ಎಷ್ಟು ಸುಂದರ ಅನ್ವಯ!

ಪತಿಯ ಜತೆ ಜೊತೆಗೂಡಿ ತಾವೂ ಕವನಗಳನ್ನು ರಚಿಸಿ “ಒಲವೇ ನಮ್ಮ ಬದುಕು” ಎಂಬ ಆತ್ಮಚರಿತ್ರೆಯನ್ನು ಬರೆದಿರುವ ಶ್ರೀಮತಿ ಶಾರದಾಬಾಯಿ ವಿನಾಯಕ ಗೋಕಾಕ್ ಅವರು ಗೋಕಾಕ್ ಅವರನ್ನು ವರಿಸಲು ಕಾರಣವಾದ “ವನಮಾಲಿಯ ಒಲವಿನೋಲೆಗಳು” ಪುಸ್ತಕದ ಬಗ್ಗೆ ವಿಶೇಷವಾಗಿ ತಿಳಿಸುತ್ತಾರೆ . ಇವರ ಹಾಲು ಜೇನಿನಂಥ ಸಂಸಾರದ ಬಗ್ಗೆ ಗೋಕಾಕರು ‘ಗೆ’ ಕವನದ ಸಾಲುಗಳನ್ನು ಲೇಖಕಿಯವರು ಉದಾಹರಿಸುತ್ತಾರೆ

ಸಂಸಾರವೆಲ್ಲ ಕನಸಾದಾಗ

ಕಾಣಿಸಲಿ ದಾರಿಹೋಕರಿಗೆ

ನಾವಿಬ್ಬರೊಸೆದಿದ್ದ ಪಾಂಗು

ಕೇಳಿಸಲಿ ಪಥಿಕರಿಗೆಲ್ಲಾ

ನಾವು ನಲಿದುಲಿದ ರಾಗ 

ಹಾಗೆಯೇ ಶ್ರೀಮತಿ ಮುತ್ತಮ್ಮ ಡಿ ಎಲ್ ನರಸಿಂಹಾಚಾರ್  ಅವರ  ವಿನಯ ಮತ್ತು ಪತಿಯ ಅನಾರೋಗ್ಯದ ಸಮಯದಲ್ಲಿ ಅವರು ನಡೆಸಿಕೊಂಡು ಬಂದ ದೈವಪೂಜೆಯ ಬಗ್ಗೆ ಹೇಳುತ್ತಾರೆ . “ಇಂಥ ಮಡದಿಯ ಸಂಪೂರ್ಣ ಸಹಾಯ ಸಹಕಾರ ಗಳೇ ಅಲ್ಲವೇ ಪ್ರೋಫೆಸರ್ ಡಿ ಎಲ್ ನರಸಿಂಹಾಚಾರ್ಯರಿಗೆ ದೇವರು ಕರುಣಿಸಿದ ಮಹಾ ವರಪ್ರಸಾದ ” ಎಂಬ ಲೇಖಕಿಯರ ಯವರ ಮಾತುಗಳು ಅದೆಷ್ಟು ಸಮಂಜಸ ಸೂಕ್ತ !

ಶ್ರೀಮತಿ ಶಾರದಾ ಹಾಗೂ ಆದ್ಯ ರಂಗಾಚಾರ್ಯರ ಆದರ್ಶ ದಾಂಪತ್ಯವನ್ನು ಹೊಗಳುತ್ತಾ ಶ್ರೀರಂಗರ ವಿಶಿಷ್ಟ ಸ್ವಭಾವದ ಬಗ್ಗೆ ಹೀಗೆ ಹೇಳುತ್ತಾರೆ “ಸಂಸಾರಕ್ಕೆ ಅಂಟಿಯೂ ಅಂಟದಂತಿರುವಂತಹ ಮಹನೀಯರು ಕೆಲವರು ನಮಗೆ ಸಿಗಬಹುದು. ಆದರೆ ಸಂಸಾರಕ್ಕೆ ಅಂಟದಂತಿದ್ದು ಅಂಟಿರುವ ಮಹನೀಯರು ನಮಗೆ ಸಿಗುವುದು ಶ್ರೀರಂಗರೊಬ್ಬರೇ”. ಎಷ್ಟು ಸೂಕ್ಷ್ಮ ಅವಲೋಕನ ನೋಡಿ .

ಶ್ರೀಮತಿ ಸಾವಿತ್ರಮ್ಮ ಹಾಗೂ ದೇ. ಜವರೇಗೌಡರ ದಾಂಪತ್ಯದ ಬಗ್ಗೆ ಹೇಳುತ್ತಾ ಅವರ ಆತಿಥ್ಯದ ಬಗ್ಗೆ ಹೇಳಿ ಜನಪದ ಸಾಹಿತ್ಯ ಪ್ರೀತಿಯ ಬಗ್ಗೆಯೂ ಪ್ರಸ್ತಾಪ ಮಾಡುತ್ತಾರೆ . ಲೇಖಕಿಯವರ ಈ ನುಡಿಗಳು ನನಗೆ ಬಹಳ ಇಷ್ಟವಾಯಿತು

“ಸಾವಿತ್ರಮ್ಮನವರು ಕನ್ನಡದ ಕುವರಿ ಆ ಕುವರಿಯನು ಕೈಹಿಡಿದ ದೇ.ಜವರೇಗೌಡರು ಕನ್ನಡಮ್ಮನ ಭಕ್ತರಾಗಿ ಇರುವುದರಲ್ಲಿ ಆಶ್ಚರ್ಯವೇನಿದೆ ?”

ಶ್ರೀಮತಿ ವಸಂತಾದೇವಿ ಅನಕೃ ಅವರು ಐವತ್ತರ ಹರೆಯದಲ್ಲಿ ಪುಸ್ತಕ ಪ್ರಕಟಣೆ ಆರಂಭಿಸಿ 4 ಕಾದಂಬರಿಗಳನ್ನು ಪ್ರಕಟಿಸಿರುವ ವಿಷಯ ತಿಳಿಸುತ್ತಾ ಅವರ ಖಚಿತವಾದ ಆದರ್ಶಗಳ ಬಗ್ಗೆ ತಿಳಿಸುತ್ತಾರೆ. ಅಶಿಸ್ತು ಗುರಿ ಇಲ್ಲದಿರುವಿಕೆ ನಿಯಮರಹಿತ ಜೀವನದಲ್ಲಿ ಅವರಿಗೆ ನಂಬಿಕೆ ಇಲ್ಲದಿರುವುದನ್ನು ಹೇಳುತ್ತಾ ಅನಕೃ ಅವರ ಕೃತಿಗಳಲ್ಲಿ ಕಾಣುವ ಒಳ್ಳೆಯ ಹೆಣ್ಣುಮಕ್ಕಳ ಪಾತ್ರಗಳಲ್ಲಿ ಶಾಂತಾದೇವಿಯವರ ಉತ್ಕೃಷ್ಟ ಗುಣಗಳು ಪ್ರತಿಬಿಂಬಿತವಾಗಿದೆ ಎನ್ನುತ್ತಾರೆ .

ನಯ ವಿನಯ ಸೌಜನ್ಯ ಗಳಲ್ಲಿ ಸತಿ ಪತಿಯರು ಒಬ್ಬರನ್ನೊಬ್ಬರು ಮೀರಿಸುತ್ತಾರೆ ಎಂದು ಶ್ರೀಮತಿ ರಾಧಾ ಬಾಯಿ ಹಾಗೂ ರಂ ಶ್ರೀ ಮುಗಳಿ ಅವರ ಬಗ್ಗೆ ಹೇಳುತ್ತಾ ಮುಗುಳಿಯವರು ರಚನೆಗಳ ಮೊಟ್ಟಮೊದಲ ರಸದೌತಣ ಗೃಹಲಕ್ಷ್ಮಿಗೆ ಎಂಬ ವಿಷಯ ತಿಳಿಸುತ್ತಾರೆ . ಮುಗಳಿಯವರನ್ನು ಕಂಡಾಗ “ಅರಳಲಿರುವ ಮುಗುಳಿನಂತಿದ್ದರೆ ಅವರ ಗೃಹಲಕ್ಷ್ಮಿಯನ್ನು ಕಂಡಾಗ ಅರಳಿದ ಹೂವಿನಂಥ ಸಮಜೋಡಿ ನಮ್ಮ ನಾಡಿನ 1ಅಸಾಮಾನ್ಯ ಜೋಡಿಯಾಗಿದೆ” ಎನ್ನುವ ಲೇಖಕಿಯವರ ನುಡಿಗಳು ಗಮನಾರ್ಹವಾಗಿದೆ .

ಇಲ್ಲಿ ಕಗ್ಗದ ಸಾಲುಗಳು ನೆನಪಿಗೆ ಬರ್ತಾ ಇದೆ

ಕಾಯ ಮಾತ್ರದುದಲ್ಲವಾತ್ಮಮಾತ್ರದುದಲ್ಲ

ವಾಯೆರಡುವೊದಾಗಲದು ಜೀವ ಲೀಲೆ ತಾಯಿವೊಲು  ನಿನಗಾತ್ಮ ಮಡದಿವೊಲು ಕಾಯವವ_

ರಾಯವನು ಸರಿ ನೋಡು ಮಂಕುತಿಮ್ಮ

ತಾಯಿ ಆತ್ಮವಾದರೆ ಮಡದಿ ಕಾಯವಿದ್ದಂತೆ.

ಪುರುಷಾರ್ಥ ಸಾಧನೆ ಕೇವಲ ಮನುಷ್ಯದೇಹದಿಂದ ಆಗಲಿ ಅಥವಾ ಬರಿ ಆತ್ಮದಿಂದ  ಸಾಧ್ಯವಿಲ್ಲ ಈ ಎರಡೂ ಒಂದಾಗಿದ್ದರೆ ಮಾತ್ರ ಜೀವ ಲೀಲೆ . ಹಾಗಾಗಿ ಅಡವಿ ಮತ್ತು ತಾಯಿ ಇವರಿಗೆ ಸಲ್ಲಬೇಕಾದ ಪ್ರೀತಿ ವಾತ್ಸಲ್ಯದ ವ್ಯಾಪ್ತಿಗಳನ್ನು ಮಿತಿಗಳನ್ನು ಸರಿಯಾಗಿ ಅರಿತುಕೊಂಡು ಜೀವನ ಸಾಫಲ್ಯ ಸಾಧಿಸ ಬೇಕಾಗುತ್ತದೆ . ಹೀಗೆ ತಮ್ಮ ಮಡದಿಗೆ ಸಲ್ಲಬೇಕಾದ ಪ್ರೀತಿ ಗೌರವಗಳನ್ನು ಸಲ್ಲಿಸಿ ಪರಸ್ಪರ ಸೌಹಾರ್ದದ ಎಂದಿದ್ದರೆ ಅದು ಸುಖಿ ಸಂಸಾರ . ಈ ಎಲ್ಲಾ ಮಾದರಿ ಸಂಸಾರಗಳ ಗುಟ್ಟು ಅದೇ ಇರಬಹುದಲ್ಲವೇ ?

ಶ್ರೀಮತಿ ಹೇಮಾವತಿ ಹಾಗೂ ಕುವೆಂಪು ಅವರ ಬಗ್ಗೆ ಹೇಳುತ್ತಾ ಪತಿಯ ಸಾಹಿತ್ಯವನ್ನೆಲ್ಲಾ ಓದಿ ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ .ಕುವೆಂಪು ಅವರಿಗೆ “ದಾಂಪತ್ಯ ಎನ್ನುವುದು ಕೇವಲ ಗಂಡು ಹೆಣ್ಣು ಕೂಡಿ ನಡೆಸುವ ಜೀವನ ಮಾತ್ರ ಎಂದು ತೋರದೆ ಅದೊಂದು ಅರ್ಥಗರ್ಭಿತವಾದ ಮಹಾ ತತ್ವವೆಂದು ಕಂಡಿದೆ” ಎನ್ನುವ ಲೇಖಕಿಯವರು “ಕವಿಯ ಹೃದಯವನ್ನು ಮಹಾಮಡದಿ ಪ್ರವೇಶಿಸುತ್ತಿದ್ದಂತೆ ಜಗದ್ಭವ್ಯವಾದ ಮೇರುಕೃತಿ ರಚನೆಯಾಗಿ ಕವಿ ಕುವೆಂಪು ಮಹಾಕವಿಯಾದರು” ಎನ್ನುತ್ತಾರೆ .

ಪತಿಯಂತೆಯೇ ಮೇರು ವ್ಯಕ್ತಿತ್ವದ ಲೇಖಕಿಯಾದ ಶ್ರೀಮತಿ ಶಾಂತಾದೇವಿ ಮಾಳವಾಡ ಅವರ ಸಾಹಿತ್ಯ ರಚನೆಯ ಉತ್ಕೃಷ್ಟತೆ ಬಗ್ಗೆ ಹೇಳುತ್ತಲೇ ಪತಿಯ ಕೃತಿ ಗಳ ಪ್ರತಿಯನ್ನು ಮಾಡಿಕೊಡುತ್ತಾರೆ ಎಂಬ ವಿಷಯ ಹೇಳುತ್ತಾ ಅವರ ನುಡಿಗಳನ್ನೇ ಉಲ್ಲೇಖಿಸುತ್ತಾ “ಮೂವತ್ತು ವರುಷಗಳ ದಾಂಪತ್ಯ ಜೀವನದಲ್ಲಿ ಅನೇಕ ಕಷ್ಟಗಳು ಬಂದರೂ ಒಬ್ಬರಿಗೊಬ್ಬರು ಪೂರಕಶಕ್ತಿಗಳಾಗಿ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಂಡು ಸಂತೃಪ್ತಿಯಿಂದ ಬಾಳುತ್ತಿದ್ದೇವೆ ” ಎಂಬ ಅವರ ಆದರ್ಶ ದಾಂಪತ್ಯ ಜೀವನದ ಗುಟ್ಟನ್ನು ಬಿಚ್ಚಿಡುತ್ತಾರೆ.

ರಾಶಿ ಎಂದೇ ಪರಿಚಿತರಾದ ಡಾಕ್ಟರ್ ಎಂ ಶಿವರಾಂ ಹಾಗೂ ಶ್ರೀಮತಿ ನಾಗಮ್ಮ ಅವರ ದಾಂಪತ್ಯವನ್ನು ಈ ರೀತಿ ವರ್ಣಿಸುತ್ತಾರೆ “ರಾಶಿಯವರು ಮಾತುಗಾರರು ನಾಗಮ್ಮನವರು ಮಿತಭಾಷಿ. ರಾಶಿಯವರು ಹೆಚ್ಚಾಗಿ ಮಾತನಾಡಿದರೂ ಅದು ಅಷ್ಟೇ ಚೇತೋಹಾರಿಯಾಗಿರುತ್ತದೆ. ಗೌರಮ್ಮನವರು ತುಂಬಾ ಮಿತವಾಗಿ ಮಾತನಾಡಿದರೂ ಆ ಮಾತು ಅಷ್ಟೇ ಆಹ್ಲಾದಕಾರಿಯಾಗಿರುತ್ತದೆ “ಮಾತು ಬೆಳ್ಳಿ ಮೌನ ಬಂಗಾರ” ಎಂದು ಹೇಳುವುದುಂಟು. ಈ ಹೇಳಿಕೆಯ ಔಚಿತ್ಯವನ್ನು ಮನಗಾಣಬೇಕಾದರೆ ನಮ್ಮ ರಾಶಿ ದಂಪತಿಗಳನ್ನು ಪರಿಚಯ ಮಾಡಿಕೊಳ್ಳಬೇಕು .” ಅನುಭವದ ಸಾರ ಭಟ್ಟಿ ಇಳಿಸಿದ ಇಂತಹ ನುಡಿಗಳು .

“ನಾನು ಏಳುವುದಕ್ಕೆ ಮೊದಲೇ ನನ್ನ ಮನೆ ಎದ್ದಿರುತ್ತದೆ” ಎಂಬ ಅರ್ಥವತ್ತಾದ ನುಡಿಗಳನ್ನು ತಮ್ಮ ಪತ್ನಿಯ ಬಗ್ಗೆ ಆಡುವ ಶ್ರೀ ಎಸ್ ವಿ ರಂಗಣ್ಣ ಅವರ ಶ್ರೀಮತಿ ಇಂದಿರಮ್ಮ ಅವರ ಬಗ್ಗೆ ಹೇಳುತ್ತಾ ರಂಗಣ್ಣನವರಿಗೆ ತಮ್ಮ ಕಾವ್ಯಗಳಲ್ಲಿ ಒಳ್ಳೆಯ ಹೆಣ್ಣಿನ ಪಾತ್ರವನ್ನು ಚಿತ್ರಿಸುವುದಕ್ಕೆ ಇಂದಿರಮ್ಮನವರೇ ಉತ್ತಮ ನಿದರ್ಶನವಾಗಿದ್ದಾರೆ ಎನ್ನುತ್ತಾರೆ .  ಇದಕ್ಕಿಂತ ಮಿಗಿಲಾದ ಹೊಗಳಿಕೆಯುಂಟೇ?    

ಶ್ರೀಮತಿ ಚಂಪಾಬಾಯಿ ಮಿರ್ಜಿ ಅಣ್ಣಾರಾಯರದು 1ರೀತಿಯಲ್ಲಿ ವಿಶಿಷ್ಟಾದ್ವೈತ ಜೀವನ ಎಂದು ಹೇಳುವ ಲೇಖಕಿಯವರು ಚಂಪಾಬಾಯಿ  ಅವರ ಮಾತುಗಳಲ್ಲಿ ನಾರಿ ಲೋಕದ ನಯವಿನಯಗಳು ಕೆನೆಗಟ್ಟಿ ನಿಂತಿದೆ ಎನ್ನುತ್ತಾರೆ .ಪ್ರಖ್ಯಾತ ಕಾದಂಬರಿಗಾರರಾದ ಮಿರ್ಜಿ ಅಣ್ಣಾರಾಯರ ಉತ್ತಮ ಕಾದಂಬರಿಗಳಾದ ನಿಸರ್ಗ ಹದಗೆಟ್ಟ ಹಳ್ಳಿ ರಾಮಣ್ಣ ಮಾಸ್ತರು ಇವುಗಳಲ್ಲಿ ಜನತೆಯನ್ನು ಸೆಳೆದಿರುವ ಶಿಕ್ಷಕನ ಹೆಂಡತಿಯ ಪಾತ್ರಗಳಲ್ಲಿ ಚಂಪಾಬಾಯಿ ಅವರು ಪ್ರತ್ಯಕ್ಷರಾಗಿದ್ದಾರೆ ಎಂದು ಹೇಳುವಲ್ಲಿ ಪತಿಯ ಮೇಲೆ ಸತಿಯ ಸುಸಂಸ್ಕೃತ ನಡವಳಿಕೆ ಬೀರಿದ ಪ್ರಭಾವವನ್ನು ಕಾಣಬಹುದು .

 ದೈವಭಕ್ತಿಯೇ ಮೂರ್ತಿಗೊಂಡಂತೆ ಇರುವ ಶ್ರೀಮತಿ ಮುದ್ದಮ್ಮನವರು ಹಾಗೂ ಆಧುನಿಕ  ಅಲ್ಲಮನಂತಿರುವ ಪುಟ್ಟಸ್ವಾಮಯ್ಯನವರ ದಾಂಪತ್ಯದ ಬಗ್ಗೆ ಹೇಳುತ್ತಾ “ಸೌಮ್ಯ ರೀತಿಯ ಕ್ರಾಂತಿ ಜೀವನ ಈ ದಂಪತಿಗಳದು. ಮುತ್ತಿನ ಹಾರದಂತೆ ನುಡಿದು ಲಿಂಗ ಮೆಚ್ಚಿ ಅಹುದು ಅಹುದು” ಎಂಬಂತೆ ಹುಸಿ ಇಲ್ಲದೆ ಸಾಗಿಸುತ್ತಿರುವ ಪುಟ್ಟಸ್ವಾಮಯ್ಯ ದಂಪತಿಗಳ ನಿರ್ಮಲ ಜೀವನ ಅನುಕರಣ ಯೋಗ್ಯವಾಗಿದೆ ಎಂದು ಮನದುಂಬಿ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ .

ಮಾತೃಭಾಷೆ ತಮಿಳಾದರೂ ಶ್ರೀಮತಿ ಮುದ್ದುವೀರಮ್ಮನವರು ಶ್ರೀ ಶಿವಮೂರ್ತಿ ಶಾಸ್ತ್ರಿಗಳ ಸಂಶೋಧನಾ ಕಾರ್ಯದಲ್ಲಿ 1ಸಹಾಯಕ ಗ್ರಂಥ ಭಂಡಾರವಿದ್ದಂತೆ . ಲೇಖಕಿ ಅವರ ಮಾತುಗಳಲ್ಲೇ ಹೇಳುವುದಾದರೆ “ಮುದ್ದುವೀರಮ್ಮನವರು ನಿರಾಡಂಬರ ಜೀವನ ನೇರ ನಡೆ ನುಡಿ ಉಡುಗೆ ತೊಡುಗೆಗಳಲ್ಲೂ ಅಷ್ಟೇ .ಹೊಸದಾಗಿ ಪರಿಚಯ ಆದವರನ್ನು ಒಮ್ಮೆಲೆ ಸೆಳೆಯುವ ಸರಳತೆ ಅವರ ವ್ಯಕ್ತಿತ್ವಕ್ಕೆ ಮೆರುಗು ಕೊಟ್ಟಿದೆ. ಇವರ ಸಂದರ್ಶನದಿಂದ ತಿಳಿಯುವ ಅಂಶವೆಂದರೆ ಬುದ್ಧಿವಂತಿಕೆಗಿಂತ ವಿನಯವಂತಿಕೆಯ ದೊಡ್ಡದೆಂಬುದು ಶ್ರೀಮತಿ ಶಾಸ್ತ್ರಿಗಳು ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಶರಣರ ಸೂಳ್ನುಡಿಗಳನ್ನು ನೆನಪಿಗೆ ತರುತ್ತಾರೆ . “ವಿದ್ಯಾ ದಧಾತಿ ವಿನಯಂ” ಎಂಬುದಕ್ಕೆ ಉತ್ತಮ ನಿದರ್ಶನ.

ಸಂಪ್ರದಾಯ ನಮ್ಮನ್ನು ಅಳಬಾರದು ವಿಚಾರ ನಮ್ಮನ್ನು ಆಳಬೇಕು ಎಂಬುದರಲ್ಲಿ ಹೆಂಡತಿಯ ಸಹಕಾರ ಬಹಳಷ್ಟಿದೆ ಹೀಗೆ ಹೆಜ್ಜೆ ಹೆಜ್ಜೆಗೂ ಗಂಡನನ್ನು ನೆರಳಿನಂತೆ ಅನುಸರಿಸಿ ಪತಿಯ ಮನವನ್ನು ಸಂಪೂರ್ಣವಾಗಿ ಗೆದ್ದ ಧೀರ ಹೆಣ್ಣು ಪಾರ್ವತಿಬಾಯಿ ಶ್ರೀ ಶಂಬಾ ಜೋಷಿ ಅವರ ಧರ್ಮಪತ್ನಿ .”ದೇವಿ ಯರ ಬಗ್ಗೆ ಬರೆಯುವಾಗ ಕುಟುಂಬ ಸಂಸ್ಥೆಯ ವಿಚಾರ ಬರೆಯುವಾಗ ನನ್ನ ಹೆಂಡತಿಯ ಸಂಬಂಧವೇ ಮಾರ್ಗದರ್ಶಿ.  ಅರ್ಥ ಮೀಮಾಂಸೆ ಇದು ನನ್ನ ಹೆಂಡತಿಯ ಸಹವಾಸದಿಂದಲೇ ಮತ್ತು ಪ್ರೇರಣೆಯಿಂದಲೇ ಬರೆದದ್ದು. ಪ್ರೀತಿಯಲ್ಲಿ ಪ್ರಾಮಾಣಿಕತೆ ಇದ್ದರೆ ಜೀವನದ ಜ್ಞಾನದೀಕ್ಷೆ ಸಿಗುತ್ತದೆ .ಇದು ಕೇವಲ ಓದಿದರೆ ಬರುವುದಿಲ್ಲ ಅನುಭವದಿಂದ ಬರುತ್ತದೆ.” ಪತಿಯ ಬಾಯಿಂದ ಇಂತಹ ಮಾತುಗಳು ಹೆಂಡತಿಗೆ ನಿಜಕ್ಕೂ ಎಷ್ಟು ಸಂತಸ ತರುತ್ತದೆ ಅಲ್ಲವೇ ?

ನಾಡಿನ ಹಿರಿಯ ಸಾಹಿತಿಗಳಾದ ಶ್ರೀ ಸಿ ಕೆ ವೆಂಕಟರಾಮಯ್ಯ ಅವರು ತಮ್ಮ ಪತ್ನಿಯ ವಿಷಯದಲ್ಲಿ “ಇವಳ ಪ್ರೇರಣೆ ಒತ್ತಾಯ ಗಳಿಲ್ಲದಿದ್ದರೆ ನಾನು ಬರೆಯುತ್ತಲೇ ಇರಲಿಲ್ಲ. ಇವಳು ನನ್ನ ಭಾಗ್ಯ” ಎಂದು ಅರ್ಥಗರ್ಭಿತವಾಗಿ ತುಂಬು ಹೃದಯದಿಂದ ತಮ್ಮ ಪತ್ನಿ ವೆಂಕಟಸುಬ್ಬಮ್ಮನವರ ಬಗ್ಗೆ ನುಡಿಯುತ್ತಾರೆ . “ಸಂಸಾರ ಸಾಗರ. ಕಷ್ಟವೂ ಇದೆ ಸುಖವೂ ಇದೆ .ಸುಖ ಬಂದಾಗ ಹಿಗ್ಗದೆ ಇರಬಹುದು ;ಆದರೆ ಕಷ್ಟ ಬಂದಾಗ ಕುಗ್ಗದೆ ಇರುವುದು ಕಷ್ಟ. ಎಲ್ಲಾ ದೇವರ ಇಚ್ಛೆ” ಎನ್ನುವ ಶ್ರೀಮತಿ ವೆಂಕಟಸುಬ್ಬಮ್ಮ ನವರ ಮಾತುಗಳನ್ನು ಉದ್ಧರಿಸುತ್ತಾ ಇಂತಹ ಆದರ್ಶ ಪತ್ನಿಯನ್ನು ಪಡೆದ ಸಿ ಕೆ ವೆಂಕಟರಾಮಯ್ಯನವರು ಉತ್ತಮ ಸಾಹಿತಿಯಾಗಿ ರೂಪುಗೊಂಡಿರುವದರಲ್ಲಿ ಆಶ್ಚರ್ಯವೇನು? ಎಂದು ಲೇಖಕಿಯವರು ಪ್ರಶ್ನಿಸುತ್ತಾರೆ

ಕಾವ್ಯಾನಂದ ಶ್ರೀ ಸಿದ್ದಯ್ಯ ಪುರಾಣಿಕ ಹಾಗೂ ಶ್ರೀಮತಿ ಗಿರಿಜಾ ದೇವಿ ದಂಪತಿಗಳ ಬಗ್ಗೆ ಹೇಳುತ್ತಾ ಪತಿಯ ಅನೇಕ ಕವಿತೆಗಳ ಭಾವನೆಗಳಿಗೆ ಇವರೇ ಸ್ಫೂರ್ತಿದಾಯಿ ನಿಯಾಗಿದ್ದಾರೆ ಅಂತರಂಗ ಗಂಗೆ ಯಾಗಿದ್ದರೆ ಇನ್ನೂ ಕೆಲವು ಕವಿತೆಗಳಲ್ಲಿ ಗಿರಿಜಾ ದೇವಿಯವರು ನಾಯಕಿಯಾಗಿದ್ದಾರೆ ಎನ್ನುವ ಲೇಖಕಿ ಇವರು  ಸಿದ್ದಯ್ಯ ಪುರಾಣಿಕರ ಈ ಕವನದ ಸಾಲುಗಳನ್ನು ಉದಾಹರಿಸುತ್ತಾರೆ

ಜಗವೆ ದೇಗುಲ ಜೀವ ಬೇವನು

ಜೀವನವೆ ಆರಾಧನೆ

ಹಗಲು ದೀಪವು ರಾತ್ರಿ ಅಕ್ಷತೆ

ಗೈದುದೆಲ್ಲವು ಸಾಧನೆ

ಪ್ರೀತಿ ತುಳುಕುವ ಮನೆಯೆ ಸ್ವರ್ಗವು

ಪ್ರೀತಿಸಿರೆ ದೇವತೆಗಳು

ಘನತರವು ಗ್ರಾಹಸ್ಥ್ಯ ಯೋಗ್ಯವು

ಪ್ರೀತಿಸಿರೆ ದಂಪತಿಗಳು

ಬದುಕಿನಲ್ಲಿ ಕಷ್ಟ ಸುಖ ಎರಡೂ ಇದೆ ಕಷ್ಟದಿಂದಲೇ ಸುಖದ ಮಹತ್ವ ತಿಳಿಯುವುದು ಎನ್ನುವ ಗಿರಿಜಾ ದೇವಿಯವರದು ಶಿಸ್ತು ಸಂಯಮದ ಬದುಕು .ಮಕ್ಕಳಿಗೂ ತಾಯಿಯದೇ ಮೇಲ್ಪಂಕ್ತಿ ಎನ್ನುವಲ್ಲಿ ಲೇಖಕಿಯವರ ಮೆಚ್ಚುಗೆಯ ಆಳ ತಿಳಿಯುತ್ತದೆ .

ಪ್ರಜಾಮತ ವಾರಪತ್ರಿಕೆಯ ಸಂಪಾದಕರಾದ ಹಾಗಂತ ನಾಗರಾಜರವರು ಬೆನ್ನುಡಿ ಯಲ್ಲಿ ಹೇಳಿದಂತೆ ಭಾವುಕರು ಬುದ್ಧಿಜೀವಿಗಳು ತೀವ್ರ ಸಂವೇದನಾಶೀಲರು ಕೇವಲ ಅಂತರ್ಮುಖಿಗಳು ಆದವರು ಲೇಖಕರು ಇಂಥವರನ್ನು ಅನುಸರಣೆ ಮಾಡುವುದೆಂದರೆ ಅದೊಂದು ಕಠಿಣವಾದ ಕೆಲಸವೇ .ಅಂತಹ ಗುರುತರವಾದ ಕಾರ್ಯವನ್ನು ಮಾಡಿಕೊಂಡು ತಮ್ಮ ಪತಿಯ ಕೆಲಸಕ್ಕೆ ಬೆನ್ನೆಲುಬಾಗಿ ನಿಂತು ಗೃಹಸ್ಥ ಧರ್ಮವನ್ನು ನೆರವೇರಿಸಿ ಮನೆಯ ಶಾಂತಿ ಸಾಮರಸ್ಯ ಅತಿಥಿ ಧರ್ಮ ಎಲ್ಲವನ್ನು ಸೂಕ್ತ ಸಫಲ ರೀತಿಯಲ್ಲಿ ನೆರೆವೇರಿಸಿ ಯಶಸ್ಸು ಕಂಡ ಈ ಮಹಿಳಾ ಮಣಿಗಳ ಪರಿಚಯ ನಿಜಕ್ಕೂ ಅರ್ಥಪೂರ್ಣ ಹಾಗೂ ಉಪಯುಕ್ತ .

ಈಗೇನಾದರೂ ಈ ರೀತಿಯ ಮಾಲಿಕೆ ತರಲು ಹೊರಟರೆ ಆ ಪಟ್ಟಿಯಲ್ಲಿನ ಮೊದಲ ಹೆಸರು ಶ್ರೀಮತಿ ಕಮಲಾ ಹಾಗೂ ಹಂಪಾನಾ ಅವರದೇ ಇರುತ್ತದೆ ಎಂಬುದು ನಿಸ್ಸಂದೇಹ ನಿರ್ವಿವಾದ . ಸುಧೀರ್ಘ ಸಫಲ ಸಂಸಾರದ ಮಾದರಿಯನ್ನು ಲೋಕಕ್ಕೆ ಹಾಕಿಕೊಟ್ಟಿರುವ ಈ ಅನುರೂಪ ದಂಪತಿಗಳು     ಪ್ರಸಿದ್ಧ ಲೇಖಕರ ಪತ್ನಿ ಯಶಸ್ವೀ ಲೇಖಕಿಯರ ಪತಿ ಈ ಎರಡೂ ಶೀರ್ಷಿಕೆಯಡಿ ಅಗ್ರಸ್ಥಾನ ಪಡೆಯುವಂತಹ ಜೋಡಿ ಇವರದು .

1 ಅಂಶ ನಾನು ಗಮನಿಸಿದ್ದೇನೆಂದರೆ ಪ್ರಾಯಶಃ ಅಂದಿನ ಕಾಲದಲ್ಲೇ ಸಹಜವಾಗಿದ್ದಂತೆ ಬಹಳ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಬಂದಿದ್ದರಿಂದ ಪತಿಯ ಮನೆಗೆ ಅದರ ರೀತಿ ರಿವಾಜುಗಳಿಗೆ ಪೂರ್ಣ ಮನದಿಂದ ಒಗ್ಗಿಕೊಂಡಿದ್ದದ್ದು ತಾನು ತನ್ನದು ಎಂಬ ಭಾವನೆ ಇಲ್ಲದೆ ನಿಸ್ವಾರ್ಥದಿಂದ ಸಂಸಾರದಲ್ಲಿ ತೊಡಗಿಕೊಂಡಿರುವುದು.

ಎಲ್ಲಾ ಸುಖಿ ಸಂಸಾರಗಳಲ್ಲಿ ಮನದಟ್ಟಾಗುವ ಅಂಶವೆಂದರೆ ಶಾಂತಿ ಸಹನೆ ಸಾಮರಸ್ಯ ಪರಸ್ಪರ ಪ್ರೀತಿ ಒಡನಾಟ.ಕುಟುಂಬದ ಏಳಿಗೆಯ ಬಗ್ಗೆಗಿನ ಸಮಷ್ಟಿ ನೋಟ. ಸಮಕಾಲೀನ ಲೇಖಕರ ಮಧ್ಯೆ ಹೊಂದಾಣಿಕೆ ಒಬ್ಬರು ಅವರ ಮನೆಗಳಿಗೆ ಹೋಗಿ ಬರುವುದು ಅತಿಥಿ ಅಭ್ಯಾಗತರ ಬಗೆಗಿನ ಕಾಳಜಿ ಇದೆಲ್ಲವೂ ಮಾನವೀಯತೆ ಹಾಗೂ ಸಂಬಂಧಗಳ ಜತನಗೊಳಿಸುವಿಕೆ ಬಗೆಗಿನ ಅವರ ಕಕ್ಕುಲಾತಿಯನ್ನು ತೋರಿಸುತ್ತದೆ

ಶ್ರೀ ಕೆ ಎಸ್ ನರಸಿಂಹಸ್ವಾಮಿಯವರು ಹೇಳಿದಂತೆ

ಒಂದು ಹೆಣ್ಣಿಗೊಂದು ಗಂಡು

ಹೇಗೋ ಸೇರಿ ಹೊಂದಿಕೊಂಡು

ಕಾಣದೊಂದು ಕನಸ ಕಂಡು ಮಾತಿಗೊಲಿಯದಮೃತವುಂಡು

ದುಃಖ ಹಗುರವೆನ್ನಲು ಪ್ರೇಮವೆನಲು ಹಾಸ್ಯವೇ

ಖಂಡಿತ ಇಂತಹ ಸಫಲ ಯಶಸ್ವಿ ಸಂಸಾರದ ಸೂತ್ರಗಳ ಉದಾಹರಣೆ,ಮಾಗಿದ ಬದುಕಿನ ಮನೋಭಾವದ ನಿದರ್ಶನಗಳು ಉದಾಹರಣೆಗಳಾಗಿ ಕಣ್ಣ ಮುಂದೆ ಬಂದಾಗ ಜೀವನದ ಪಾಠಗಳಾಗುತ್ತವೆ, ಅನುಕರಣೀಯವೆನಿಸುತ್ತದೆ. ಇಂತಹ ಸುಂದರ ವ್ಯಕ್ತಿ ಚಿತ್ರಣಗಳನ್ನು ನಮ್ಮ ಮುಂದೆ ತಂದಿಟ್ಟ ಲೇಖಕಿಯವರ ಶ್ರಮ ಸಾರ್ಥಕ

ಪ್ರಶಂಸನೀಯ .

ಫೋನು ಜಂಗಮವಾಣಿ  ಯಾವುದೂ ಇರದ ಅಂತಹ ಕಾಲದಲ್ಲಿ ಪತ್ರ ಮುಖೇನ ಅಥವಾ ಪ್ರತ್ಯಕ್ಷವಾಗಿ ಭೇಟಿಯಾಗಿ ಸಂದರ್ಶನಗಳನ್ನು ನಡೆಸಬೇಕಾದಾಗಿನ  ಶ್ರದ್ದೆ ಶ್ರಮ ಇಲ್ಲಿನ ಪ್ರತಿಯೊಂದು ಬರಹಗಳಲ್ಲೂ ಎದ್ದು ಕಾಣುತ್ತದೆ . ಸಫಲ ಸುಖಿ ಸಂಸಾರಗಳ 1 ಮಾತಿನ ವಿವರ ಎನ್ನುವ ಪ್ರತಿಯೊಂದು ಲೇಖನದ ಚರಮ ವಾಕ್ಯಗಳು ಸಂಗ್ರಹ ಯೋಗ್ಯ ಎಂದೆನಿಸುತ್ತದೆ .

ಇಷ್ಟು ನಾನು ಹೇಳಿದ್ದು ಈ ಬರಹಗಳ ಟ್ರೈಲರ್ ಅಷ್ಟೇ. ಆತ್ಮೀಯ ಕ್ಷಣಗಳ ಬಗೆಗಿನ ಒಡನಾಟದ ಸವಿ ಗಳಿಗೆಗಳ ರಸಪೂರ ತಳಿಗೆ ಪುಸ್ತಕದಲ್ಲಿದೆ ಖಂಡಿತ ಓದಲೇಬೇಕಾದ ಪುಸ್ತಕಗಳಲ್ಲಿ ಒಂದು.

ಮತ್ತೆ ಮುನ್ನುಡಿಯಲ್ಲಿ ಲೇಖಕಿಯವರು ಹೇಳಿದಂತೆ ಃದೀಗ ಎಷ್ಟು ಸಫಲ ಯಶಸ್ವಿ ಪ್ರಸಿದ್ಧ ಬರಹಗಾರ್ತಿಯರು ಬೆಳಕಿಗೆ ಬಂದಿದ್ದಾರೆ . ಅಂತಹವರ ಪತಿ ಜತೆ  ಸಂದರ್ಶನವು ನಡೆದು “ಲೇಖಕಿಯರ ಪತಿಯರು” ಎನ್ನುವ ಶೀರ್ಷಿಕೆಯಲ್ಲಿ ಲೇಖನ ಗಳನ್ನು ಸಿದ್ಧಪಡಿಸುವ ಕಾಲ ಸನ್ನಿಹಿತವಾಗಿದೆ  . ಈ ಕಾರ್ಯ ನಡೆದಿದೆಯೋ ಇಲ್ಲವೋ ಖಂಡಿತ ತಿಳಿದಿಲ್ಲ .

ಆದರೂ ತುಂಬಾ ಸುಂದರ ಪರಿಕಲ್ಪನೆ  ಆಗಲೂ ಈಗಲೂ ಎಂದಷ್ಟೇ ಹೇಳಬಲ್ಲೆ .

ಇಂಥಹದೊಂದು ಒಳ್ಳೆಯ ಪುಸ್ತಕ ಪರಿಚಯ ಮಾಡಿಕೊಡುವ ಸುಸಂದರ್ಭ ನನಗೆ ದೊರಕಿದ್ದು ನಿಜಕ್ಕೂ ನನ್ನ ಭಾಗ್ಯ ಎಂದೇ ಭಾವಿಸುವೆ . ಲೇಖಕಿಯರ ಪುಸ್ತಕಗಳು ಕೊಳ್ಳಲು ಸಿಗುವುದು ಕಷ್ಟವಾಗಿದೆ ಪ್ರತಿಗಳು ಮುಗಿದು ಹೋಗಿದೆ .  ಈ ಅಂಶ ನಾನು ಕೊಳ್ಳಲು ಹೋದಾಗ ನನ್ನ ಅನುಭವಕ್ಕೆ ಬಂದದ್ದು . ಮರು ಮುದ್ರಣ ಯೋಜನೆ ಆದಷ್ಟು ಬೇಗ ಕೈಗೊಳ್ಳಲೆಂದು ನನ್ನ ಪ್ರಾರ್ಥನೆ .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top