ಕಾವ್ಯ ಸಂಗಾತಿ
ಗುಜರಿ
ಹುಳಿಯಾರ್ ಷಬ್ಬೀರ್
ಎದೆಯ ಕರೋಲ್ ಬಾಗಿನಲ್ಲಿ
ಕಮ್ಮಿ ರೇಟಿನ ಬೂಟುಗಳಿಗೆ
ಕೆಮ್ಮುತ್ತಾ ಪಾಲೀಶು ಮಾಡಿ
ಗಿರಾಕಿಗಳ ಮರುಳಿಗೆ ತಳ್ಳಿ
ವಿಪರೀತಕ್ಕೆ ಮಾರುವಾಗ
ನಾನು ಹೇಳಿದೆ…
ನಾನು ಸತ್ತಾಗ ನೀನು ಬದುಕುತ್ತೀಯಾ
ಬರ್ಕತ್ತಿಲ್ಲದ
ತಾಕತ್ತಿಲ್ಲದ
ನಿನ್ನದನ್ನು
ಎಷ್ಟೆಂದು ಹೇಳಿಕೊಳ್ಳುತ್ತೀಯ ಗೆಳೆಯ..?
ಆಕಾಶ ನೋಡು
ಗಾಂಚಾಲಿ ಬಿಟ್ಟು
ಹುದುಗಿರುವ ನಿನ್ನ ರೆಕ್ಕೆ ಬಿಚ್ಚಿ ಸುಮ್ಮನೆ ಹಾರು
ಮೇಲೆ ಹೋಗುವುದಕ್ಕೆ ಬೇಕಾಗಿರುವುದು
ಭಿಕಾರಿಯಾದ ನಿನಗೆ ನಸೀಬಲ್ಲ
ನಿನ್ನೊಳಗಿನ ಹುಕುಂ
ಪ್ರಶ್ನೆಗೆ
ಹುಡುಕಬೇಕಾಗಿರುವುದು
ಉತ್ತರ
ಪ್ರಶ್ನೆಗೆ ಉತ್ತರ ಪ್ರಶ್ನೆಯಲ್ಲ..
ನಿಂತಲ್ಲೇ ಜೇಡಿಯ ಮಣ್ಣನ್ನು
ಬೇಕೂಫನಂತೆ ಸುಮ್ಮನೆ ತುಳಿಯುತ್ತಿದ್ದರೆ
ಮಡಿಕೆಯಾಗುವುದಿಲ್ಲ
ನೀರು ನಿಲ್ಲುವುದಿಲ್ಲ
ನಿನ್ನ ತಲೆ ಕೈಕಾಲು ಕಣ್ಣುಗಳು
ದಯವಿಟ್ಟು ಗುಜರಿ ಸೇರಿದರೆ
ಮೂರ್ತಿ ಮೂಡುವುದಿಲ್ಲ…
ತ್ರಿವಿಕ್ರಮನ ಹೆಜ್ಜೆ ಹುಟ್ಟುವುದಿಲ್ಲ
ಬುದ್ಧತ್ವಕ್ಕೆ
ಸಿದ್ಧತೆ ಬದ್ಧತೆ ಬೇಕೋ
ಗಗ್ಗ
ಮೌನದೇಕಾಂತ ನೇಯ್ಗೆಯೊಳು
ಬಹಿಷ್ಕ್ರತವು ನಿನ್ನ ಕಗ್ಗ.