ಅಂಕಣ ಸಂಗಾತಿ
ಗಜಲ್ ಲೋಕ
ಭಾಸ್ಕರ್ ಅವರ ಗಜಲ್ ಗಳಲ್ಲಿ ಭಾವಯಾನ
ಭಾಸ್ಕರ್ ಅವರ ಗಜಲ್ ಗಳಲ್ಲಿ ಭಾವಯಾನ
ಹೇಗಿದ್ದೀರಿ…ಗಜಲ್ ಗಂಗೆಯಲ್ಲಿ ಮೀಯುತ್ತಿದ್ದೀರಾ; ಗಜಲ್ ಕನವರಿಕೆಯ ತಮ್ಮ ಕೂಗು ನನ್ನ ಹೃದಯವನ್ನು ತಟ್ಟುತ್ತಿದೆ. ಅದರ ಪ್ರತಿಧ್ವನಿವಾಗಿಯೊ ಏನೊ ಗುರುವಾರ ಬರುತಿದ್ದಂತೆ ಗಜಲ್ ಗುಲ್ಜಾರ್ ನ ಪರಿಮಳ ನನ್ನನ್ನು ಆವರಿಸಿಬಿಡುತ್ತದೆ. ಆ ಕಾರಣಕ್ಕಾಗಿಯೇ ಇಂದು ಮತ್ತೊಮ್ಮೆ ಗಜಲ್ ಲೋಕದ ಚಾಂದ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ಚಂದಮಾಮನನ್ನು ಪ್ರೀತಿಸುವ, ಪೂಜಿಸುವ ಸಹೃದಯಿಗಳ ಮುಂದೆ ಪ್ರಸ್ತುತ ಪಡಿಸಲು..!!
“ಪ್ರೀತಿಯಲ್ಲಿ ಸಣ್ಣ ವಿಷಯಕ್ಕೂ ಹೃದಯಗಳು ಒಡೆಯುತ್ತವೆ
ನೆಲಕ್ಕೆ ಉರುಳಿದರೆ ಮಣ್ಣಿನ ಪಾತ್ರೆಗಳು ಒಡೆಯುತ್ತವೆ”
–ರಾಜ್ ನವಾದ್ವಿ
ಸಾಹಿತ್ಯದ ಋಷಿತ್ವದಲ್ಲಿ ಓದು ಮತ್ತು ಬರಹಕ್ಕೆ ವಿಶೇಷವಾದ, ವಿಭಿನ್ನವಾದ ಸ್ಥಾನವಿದೆ. ಒಂದಕ್ಕೊಂದು ಪೂರಕವಾಗಿದ್ದು, ಪ್ರತ್ಯೇಕತೆಯನ್ನು ಬಯಸುವುದೆ ಇಲ್ಲ. ಇಂತಹ ಓದು ಮತ್ತು ಬರವಣಿಗೆ ಭೂತ ಮತ್ತು ಭವಿಷ್ಯಕ್ಕೆ ಸೇತುವೆಯಾಗಿ ಮನುಕುಲದ ಪರಂಪರೆಯನ್ನು ಕಟ್ಟಿಕೊಡುತ್ತಿದೆ. ಐತಿಹಾಸಿಕ ವ್ಯಕ್ತಿಗಳ ಬರವಣಿಗೆಯು ಅವರ ದೃಷ್ಟಿಕೋನದಿಂದ ಜಗತ್ತನ್ನು ನೋಡಲು ನಮಗೆ ಅನುಮತಿಸುತ್ತದೆ. ಅಂದರೆ ಉತ್ತಮ ಬರವಣಿಯು ನಮಗೆ ಬೇರೆಯವರ ಕಣ್ಣುಗಳಿಂದ ಜಗತ್ತನ್ನು ನೋಡುವ ಸಾಮರ್ಥ್ಯವನ್ನು ನೀಡುತ್ತದೆ. ಇದು ನಮ್ಮ ಆಧುನಿಕ ವಿಶ್ವ ದೃಷ್ಟಿಕೋನದಿಂದ ಹಿಂದಿನದನ್ನು ನೋಡುವ ಮಿತಿಯಿಂದ ನಮ್ಮನ್ನು ಪಾರು ಮಾಡುವುದರ ಜೊತೆಗೆ ಹಿಂದಿನದನ್ನು ನೋಡುವುದು ನಮಗೆ ವರ್ತಮಾನದಲ್ಲಿ ಅಗತ್ಯವಿರುವ ಉತ್ತರಗಳನ್ನು ನೀಡುತ್ತದೆ. ಇದು ಸಾಧ್ಯವಾಗಬೇಕಾದರೆ ಬರಹವು ಯಾವಾಗಲೂ ದೃಶ್ಯವನ್ನು ಮೀರಿದ ಸಂವೇದನಾ ಅನುಭವಗಳನ್ನು ವಿವರಿಸಬೇಕು, ಓದುಗರ ಮನಸ್ಸಿನಲ್ಲಿ ಚಿತ್ರವನ್ನು ಚಿತ್ರಿಸಲು ಪ್ರಯತ್ನಿಸಬೇಕು. ಪ್ರತಿ ಓದುಗರು ತಮ್ಮದೇ ಆದ ಅನುಭವಗಳನ್ನು ಮತ್ತು ದೃಷ್ಟಿಕೋನಗಳನ್ನು ಹೊಂದಿರುತ್ತಾರೆ ಎಂಬುದನ್ನು ಬರಹಗಾರರು ಮರೆಯಬಾರದು. ಬರಹಗಾರು ತಾವು ಬರೆದ ವಿಷಯಗಳನ್ನು ತಮ್ಮ ರೀತಿಯಲ್ಲಿಯೇ ನೋಡುವಂತೆ ಸಹೃದಯ ಓದುಗರನ್ನು ಒತ್ತಾಯಿಸಲು ಸಾಧ್ಯವಿಲ್ಲ, ಒತ್ತಾಯಿಸಲು ಬಾರದು. ಸಹೃದಯಿಗಳು ಬರಹವನ್ನು ಬರಹಗಾರರು ಉದ್ದೇಶಿಸುವುದಕ್ಕಿಂತ ವಿಭಿನ್ನವಾಗಿ ಅರ್ಥೈಸಲು ಸಾಧ್ಯ ಎಂಬುದನ್ನು ಅಲ್ಲಗಳೆಯಲಾಗದು. ಅಂದಾಗ ಮಾತ್ರ “A book, too, can be a star, a living fire to lighten the darkness, leading out into the expanding universe.” ಅಮೇರಿಕಾದ ಕಾದಂಬರಿಕಾರ ಮೆಡೆಲೀನ್ ಎಲ್ ಎಂಗಲ್ ರವರ ಈ ಮಾತಿಗೆ ಪುಷ್ಟಿ ಲಿಭಿಸುತ್ತದೆ. ಈ ನೆಲೆಯಲ್ಲಿ ಓದುವುದು ಹಾಗೂ ಬರೆಯುವುದು ಧ್ಯಾನದ ರೂಪಗಳು. ಉತ್ತಮ ಬರಹ ರೂಪಗೊಳ್ಳಬೇಕಾದರೆ ಪ್ರತಿ ಬರಹಗಾರ ತನ್ನನ್ನು ತಾನು ಅರಿತುಕೊಂಡು, ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಈ ಕಾರಣಕ್ಕಾಗಿಯೇ ಲೀಯೋ ಟಾಲ್ಸ್ಟಾಯ್ ಅವರ ಈ ಹೇಳಿಕೆ “In a writer there must always be two people – the writer and the critic.” ಸಾರ್ವತ್ರಿಕ ಮಹತ್ವವನ್ನು ಪಡೆದುಕೊಂಡಿದೆ. ಈ ಎಲ್ಲ ಅಂಶಗಳು ಸಾಹಿತ್ಯದ ಎಲ್ಲ ಪ್ರಕಾರಗಳಿಗೆ ಅನ್ವಯಿಸುತ್ತವೆ. ಈ ದಿಸೆಯಲ್ಲಿ ಬರಹ ಸಾಗಿದಾಗ ಮಾತ್ರ ಸಹೃದಯ ಓದುಗರ ಎದೆಗೂಡಲ್ಲಿ ಬೆಚ್ಚಗೆ ಉಳಿಯಲು ಸಾಧ್ಯ. ೬-೭ ನೇ ಶತಮಾನದಲ್ಲಿ ಅರಬ್ ನ ಬಿಸಿಲಿನ ಬೇಗೆಯಲ್ಲಿ ಅರಳಿದ ಗಜಲ್ ಪಾರಿಜಾತವು ಇಂದು ಎಲ್ಲ ಭಾಷೆಗಳ ಅಚ್ಚುಮೆಚ್ಚಿನ ಕಾವ್ಯ ಪ್ರಕಾರವಾಗಿ ಉಳಿದಿರುವುದಕ್ಕೆ ಕಾರಣವೇ ಓದು-ಬರಹದ ಜುಗಲ್ ಬಂಧಿಯಿಂದ! ಇಂದು ನಮ್ಮ ಕನ್ನಡದಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಕೃಷಿಯಲ್ಲಿ ನಿರತರಾಗಿದ್ದಾರೆ. ಅವರುಗಳಲ್ಲಿ ಡಾ. ಟಿ. ಎಂ. ಭಾಸ್ಕರ್ ಅವರೂ ಸಹ ಒಬ್ಬರು.
ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಅಪ್ಪಿಕೊಂಡು ತಮ್ಮ ಬಾಳಿನಲ್ಲಿ ಅಳವಡಿಸಿಕೊಂಡು ಸಾಗುತ್ತಿರುವ
ಪ್ರೊ. ಟಿ.ಎಂ. ಭಾಸ್ಕರ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಲಗರ ಗ್ರಾಮದವರು. ಕಂಬನಿಯ ಕಡಲಲ್ಲಿ ಈಜಿ ನೆಮ್ಮದಿಯ ತಾಣವನ್ನು ತಲುಪಿರುವ ಇವರು ತಮ್ಮ ಸ್ನಾತಕ, ಸ್ನಾತಕೋತ್ತರ, ಎಮ್.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಪದವಿ ಪೂರ್ವ, ಪದವಿ, ಸ್ನಾತಕೋತ್ತರ ವಿಭಿಗಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸಿ ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿ ನಂತರ ಅದೇ ವಿಶ್ವವಿದ್ಯಾಲಯದ ಪ್ರಭಾರಿ (೨೦೨೦) ಕುಲಪತಿಗಳಾಗಿ, ಹಾವೇರಿಯ ಸ್ನಾತಕೋತ್ತರ ಕೇಂದ್ರದಲ್ಲಿ ೦೮ ವರ್ಷ ಆಡಳಿತಾಧಿಕಾರಿಯಾಗಿ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಶುದ್ಧ ದೇಸಿ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟಿರುವ ಡಾ. ಟಿ.ಎಂ. ಭಾಸ್ಕರ್ ಅವರು ಕಾವ್ಯ, ನಾಟಕ, ವಿಮರ್ಶೆ, ವ್ಯಕ್ತಿ ಪರಿಚಯ, ವೈಚಾರಿಕ ಸಾಹಿತ್ಯ, ಜಾನಪದ ಸಾಹಿತ್ಯ, ಸಂಶೋಧನೆ ಗಜಲ್ .. ಮುಂತಾದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಐವತ್ತಕ್ಕೂ ಹೆಚ್ಚು ಮೌಲ್ಯಿಕ ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಭಾರತೀಯರೆ ಎಚ್ಚರ, ಮಹಾಗಾಂವ ಮೀರಾಸಾಬ್, ಸಾವಿರದ ಸ್ಲೋಗನ್ಸ್, ನೀರು, ಗಾಂಧಿ ಟೋಪಿ, ತಾಲಿಬಾನ್ ಪ್ರಹಾರ ಬುದ್ಧ ವಿಗ್ರಹಗಳ ನಾಶ, ಬುದ್ಧ ಚಿಂತನೆ, ಮಾತಾಡುವ ಎಲುಬುಗಳು, ಬುದ್ಧನ ಜೀವನ ಸಂದೇಶ, ನನ್ನ ಮನದ ಗಜಲ್ ಎಂಬ ಗಜಲ್ ಸಂಕಲನ… ಪ್ರಮುಖವಾಗಿವೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು, ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಇವರು ಹತ್ತಾರು ವಿಚಾರ ಸಂಕಿರಣ, ಕಮ್ಮಟ, ಸಮ್ಮೇಳನ, ಸಂವಾದ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ವಿದ್ವತ್ತನ್ನು ಹಂಚಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ಎಮ್.ಫಿಲ್, ಪಿಎಚ್. ಡಿ ಪದವಿಯನ್ನು ಪಡೆದಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ನಾಡಿನ ಹಲವಾರು ಸರಕಾರ, ಖಾಸಗಿ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಸತ್ಕರಿಸಿವೆ. ಇವರಿಗೆ ೨೦೦೨ರಲ್ಲಿ ಆಳಂದ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಲಭಿಸಿದೆ.
ಸಹೃದಯ ಓದುಗರು ಗಜಲ್ ಲೋಕದ ಪ್ರವೇಶದೊಂದಿಗೆ ಪ್ರಪಂಚವನ್ನೂ ಪ್ರವೇಶಿಸುತ್ತಾರೆ. ಅಲ್ಲಿಯ ಕನಸುಗಳು ಭೂತಕಾಲವನ್ನು ವರ್ತಮಾನಕ್ಕೆ ಅನ್ವಯಿಸುವ ಜ್ಞಾನವಾಗಿ, ವರ್ತಮಾನವನ್ನು ಭವಿಷ್ಯದ ಅಸಾಧಾರಣ ಸಾಧ್ಯತೆಗಳಾಗಿ ಕಂಗೊಳಿಸುತ್ತವೆ. ಪ್ರೀತಿ-ಪ್ರೇಮದ ಮಾರ್ಗವಾಗಿ ಜೀವನದ ನಾಡಿಮಿಡಿತವಾಗಿ ಸಾಗುತ್ತಿರುವ ಗಜಲ್ ಪರಿ ಅನನ್ಯ. ಕಾದ ಮನಸನ್ನು ತಂಪಾಗಿಸಲು, ನೆನಪಿನ ಅಂಗಳದಲ್ಲಿ ನಿಧಾನವಾಗಿ ಸಾಗಲು ಗಜಲ್ ಉತ್ತಮ ಸಾಧನವಾಗಿದೆ. ಪ್ರೀತಿಯ ಹುಡುಕಾಟವೆ ಯಾವತ್ತೂ ಗಜಲ್ ನ ಸ್ಥಾಯಿ ಭಾವವಾಗಿದೆ. ವ್ಯಷ್ಟಿ ಸೆಲೆಯಿಂದ ಸಮಷ್ಟಿಯತ್ತ ಸಾಗುತ್ತ ಬಂದು ಇಡೀ ಮನುಕುಲವನ್ನೇ ತನ್ನ ಅಶಅರ್ ನಲ್ಲಿ ಪೋಣಿಸುತ್ತಿದೆ. ಈ ನೆಲೆಯಲ್ಲಿ ಸುಖನವರ್ ಡಾ. ಟಿ.ಎಂ.ಭಾಸ್ಕರ್ ಅವರ ಗಜಲ್ ಗಳಲ್ಲಿ ಇದ್ದು ಇಲ್ಲದರ ಬಗ್ಗೆ ಹುಡುಕಾಡುವ, ಇಲ್ಲದ್ದು ವಶವಾಗಿ ಇರುವುದು ದೂರಾಗುವ ಕ್ಷಣಗಳ ಸುಂದರ ಚಿತ್ರಣವನ್ನು ಆನಂದಿಸಬಹುದು. ಏನೆಲ್ಲ ಆಗುವ ಆಗದೆ ಹಾಗೆಯೇ ಇರುವ ಚಿತ್ರ-ವಿಚಿತ್ರ ಲೋಕದೊಳಗಿನ ಮನಸ್ಸುಗಳ ತುಡಿತವಿದೆ. ಇದರೊಂದಿಗೆ ಇವರ ಗಜಲ್ ಗಳಲ್ಲಿ ಮಧುರಸ, ಕಾವ್ಯರಸ, ಪ್ರೇಮರಸ, ಸ್ನೇಹರಸ, ಜೀವರಸ ಹರಿದಿದೆ. ಮನುಷ್ಯನ ಮನಸ್ಸಿನ ಹೊಯ್ದಾಟ, ವೈಚಾರಿಕತೆಯ ಚಿಂತನೆ, ಜೀವನಪ್ರೀತಿ, ತಾತ್ವಿಕತೆ, ಹೆತ್ತವರ ತೊಳಲಾಟ… ಮುಂತಾದ ವಿಷಯಗಳು ಇಲ್ಲಿ ಅಕ್ಷರಗಳ ರೂಪದಲ್ಲಿ ನಮ್ಮನ್ನು ಆಲಂಗಿಸಿ ಸಂತೈಸುವಂತೆ ಮೂಡಿಬಂದಿವೆ.
“ಮುರಿದು ಹಾಕುವ ಭಾವಗಳೆ ಮುರಿದುಕೊಂಡಿರಲು ನಿಲ್ಲುವುದು ಹೇಗೆ ತಿಳಿಯದು
ನಿಂತವರ ನಡುವೆ ನಿಲ್ಲಲಾಗದು ಕಲಿಯಬೇಕು ಚಲಿಸುವುದು”
ಜಗತ್ತು ಜಂಗಮವಲ್ಲ, ಸ್ಥಾವರ. ಇದರೊಂದಿಗೆ ಸಾಗಬೇಕಾದರೆ ನಮ್ಮ ಬದುಕು ಸಹ ಕಾಲದ ಗತಿಯೊಂದಿಗೆ ಮುಖಾಮುಖಿಯಾಗಲೆಬೇಕು. ಈ ದಿಸೆಯಲ್ಲಿ ಮನುಷ್ಯನ ಆಚಾರ, ವಿಚಾರಗಳು ಯಾವುದೊ ಒಂದು ಕಾಲದ ಕಟ್ಟಳೆಯಲ್ಲಿ ಬಂಧಿಯಾಗಿರದೆ ಸದಾ ಪರಿವರ್ತನೆ ಆಗುತ್ತಿರಬೇಕು ಎಂಬುದನ್ನು ಗಜಲ್ ಗೋ ಭಾಸ್ಕರ್ ಅವರು ವಾಸ್ತವದ ಸೆಲೆಯಲ್ಲಿ ತಮ್ಮ ವೈಚಾರಿಕ ನಿಲುವುಗಳನ್ನು ದಾಖಲಿಸಿದ್ದಾರೆ. ಭಾವನೆಗಳ ಸೂಕ್ಷ್ಮತೆಯನ್ನು ಅನಾವರಣಗೊಳಿಸುತ್ತಲೆ ನಿಂತವರ ಜೊತೆ ನಿಲ್ಲದೆ ಸದಾ ಚಲಿಸುತ್ತಿರಬೇಕು, ಬಾಳಿಗೊಂದು ಸಾರ್ಥಕತೆ ನೀಡಬೇಕು ಎಂದಿದ್ದಾರೆ.
“ಸುಖದ ನೆರಳಿದು ಸುಖಿಸುವುದಕ್ಕೆಂದು ತಿಳಿಯಬೇಡ
ಗೋಡೆ ಮೇಲಿನ ಸುಣ್ಣ ಮಳೆಬಂದು ನೀರು ಹರಿದು ಹೋದಂತೆ ತಿಳಿ”
ಮನುಷ್ಯ ಪಂಚೇಂದ್ರಿಯ, ಅರಿಷಡ್ವರ್ಗ ಮತ್ತು ಅಷ್ಟಮದಗಳ ದಾಸ. ಇದೊಂದು ಪ್ರಕೃತಿಯ ಪರಿಚಲನೆ ಎಂದು ಮೌನವಾಗದೆ, ಬೌದ್ಧಿಕತೆಯ ಹರಿಕಾರನಾದ ಮಾನವ ಅದನ್ನೆಲ್ಲ ದಾಟಿಕೊಂಡು ಮುಂದೆ ಸಾಗಬೇಕಿದೆ. ಈ ಹಿನ್ನೆಲೆಯಲ್ಲಿ ಮೇಲಿನ ಷೇರ್ ಗಮನಿಸಿದಾಗ ಸುಡುವುದನ್ನೆಲ್ಲ ಸುಟ್ಟುಬಿಡಬೇಕು, ಅವುಗಳನ್ನು ಮನದಲ್ಲಿ ಇಟ್ಟುಕೊಂಡರೆ ಮನವೆ ಬೂದಿಯಾಗುವುದು, ಸುಡುವುದು ಎಂಬ ತಾತ್ವಿಕ ಚಿಂತನೆಯನ್ನು ಶಾಯರ್ ಟಿ.ಎಂ.ಭಾಸ್ಕರ್ ಅವರು ಅರುಹಿದ್ದಾರೆ. ಮನುಷ್ಯ ಸದಾ ಸುಖಕ್ಕಾಗಿ ಹಾತೊರೆಯುತ್ತಿರುತ್ತಾನೆ. ಆದರೆ ಅದು ಶಾಶ್ವತವಲ್ಲ. ಅದೊಂದು ನೆರಳಿನಂತೆ ಚಲಿಸುತ್ತಿರುತ್ತದೆ, ಗೋಡೆಯ ಮೇಲಿನ ಸುಣ್ಣದಂತೆ. ಅದಕ್ಕೆ ಅಂಟಿಕೊಂಡು ಕೂರಬಾರದು ಎಂದು ರೂಪಕಗಳ ಮೂಲಕ ಜೀವನದ ಸಾರವನ್ನು ತಿಳಿಸಿದ್ದಾರೆ.
ಸಾಹಿತ್ಯ ಎನ್ನುವುದು ಸೂಜಿಯೆ ಹೊರತು ಕತ್ತರಿಯಲ್ಲ. ಆದಾಗ್ಯೂ ಅದೂ ಬರಹಗಾರರ ಮನಸ್ಥಿತಿ, ಪರಿಸರದ ಮೇಲೆ ಅವಲಂಬಿಸಿರುತ್ತದೆ. ಈ ನೆಲೆಯಲ್ಲಿ ಬರಹಗಳು ಹೃದಯಗಳನ್ನು ಬೆಸೆಯುವ ಕಾರ್ಯ ಮಾಡಬೇಕಿದೆ. ಗಜಲ್ ಯಾವಾಗಲೂ ಇದನ್ನು ಮಾಡುತ್ತ ಬಂದಿದೆ. ಇಂಥಹ ಗಜಲ್ ಪರಂಪರೆ ಗಜಲ್ ಗೋ ಡಾ. ಟಿ.ಎಂ.ಭಾಸ್ಕರ್ ಅವರಿಂದ ಮತ್ತಷ್ಟು ಪ್ರಕಾಶಿಸಲಿ ಎಂದು ತುಂಬು ಹೃದಯದಿಂದ ಶುಭ ಕೋರುತ್ತೇನೆ.
“ಬೆಳ್ಳಂಬೆಳಗ್ಗೆ ನಿನ್ನ ನೆನಪುಗಳ ಸಂತೆ ನೆರೆದು ಬಿಡುತ್ತದೆ
ನಾನು ಆ ಸಂತಸದಲ್ಲಿಯೆ ಪೂರ್ಣ ದಿನವನ್ನು ಕಳೆಯುವೆ”
–ಮಿರ್ಜಾ ಗಾಲಿಬ್
ಗಜಲ್ ಭಘೀಚಾದಲ್ಲಿ ಸುತ್ತಾಡುತಿದ್ದರೆ ಗಜಲ್ ನ ಗುಲ್ಶನ್ ನಮ್ಮ ಮೈ ಮನವನ್ನು ಉಲ್ಲಾಸಿತಗೊಳಿಸುವುದು. ಅದರಿಂದ ಮನಸು ಯಾವತ್ತೂ ದಣಿಯಲಾರದು, ಸದಾ ಚೇತೋಹಾರಿಯಾಗಿಯೆ ಇರುವುದು!! ಈ ಗಜಲ್ ನಾಕ ಅಂದರೇನೆ ಹಾಗೆ, ಇಂಗದ ದಾಹ, ಸಾಕೆನಿಸದ ಮೋಹ; ಬೇಕು ಬೇಕೆನಿಸುವ ತುಡಿತ. ಆದರೂ…ವಕ್ತ್ ನ ಸರಪಳಿಯಲ್ಲಿ ಬಂಧಿಯಾಗಿರುವ ಮುಸಾಫಿರ್ ನಾನು. ಇಂದು ನನಗೆ ಇಲ್ಲಿಂದ ಹೋಗಲೆಬೇಕಿದೆ, ಮತ್ತೆ ಮುಂದಿನ ಗುರುವಾರ ಪ್ರೀತಿಯನ್ನರಸುತ ಬರಲು.. ಹೋಗಿ ಬರಲೆ, ಬಾಯ್.. ಟೇಕ್ ಕೇರ್ ದೋಸ್ತೊ…
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ