ಹುಕ್ಕೇರಿ ತಾಲೂಕಿನ ಮಹಿಳಾ ಸಾಹಿತ್ಯ ಪರಿಚಯ

ವಿಶೇಷ ಲೇಖನ

ಹುಕ್ಕೇರಿ ತಾಲೂಕಿನ ಮಹಿಳಾ ಸಾಹಿತ್ಯ ಪರಿಚಯ

ಹಮೀದಾಬೇಗಂ ದೇಸಾಯಿ

“ಜೀವನಕ್ಕಾಗಿ ಒಂದು ವೃತ್ತಿ ಆನಂದಕ್ಕಾಗಿ ಒಂದು ಕಲೆ’ – ನೆಮ್ಮದಿಯ ಬದುಕಿಗೆ ಇಷ್ಟಾದರೂ ಅವಶ್ಯಕ ಎನ್ನುವುದು ಅನುಭವಿಕರ ಹೊನ್ನುಡಿ ! ಸಂದೇಶ ಸಂತಸಗಳೆರಡನ್ನೂ ನೀಡಿ ಜೀವನದ ಅಂದ ಮತ್ತು ಆನಂದಗಳನ್ನು ಹೆಚ್ಚಿಸುವ ಸಾಮರ್ಥ್ಯ ಸಾಹಿತ್ಯ ಕಲೆಗೆ ಇದೆ. ಪರಂಪರೆಯಿಂದ ಬಂದ ಬರಹ ಕಲೆ ಹಲವು ಕಾರಣಗಳಿಂದ ಮಹತ್ವದ್ದೆನಿಸಿದೆ. ಕರ್ನಾಟಕದ ಬೆಳಗಾವಿ ಜಿಲ್ಲೆ ಹಲವಾರು ಬರಹಗಾರ್ತಿಯರ ತವರು ಮನೆಯಾಗಿದೆ. ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಚರಿತ್ರೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿಗೆ ವಿಶಿಷ್ಟ ಸ್ಥಾನವಿದೆ. ಹುಕ್ಕೇರಿ ತಾಲೂಕಿನ ಅನೇಕ ಪ್ರತಿಭಾವಂತ ಕಲಾವಿದರು, ಕವಿಗಳು, ರಾಜಕಾರಣಿಗಳು ಹಾಗೂ ಪುಣ್ಯ ಪುರುಷರು ಅಪೂರ್ವ ಕಾಣಿಕೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ನೀಡಿ ಈ ನಾಡನ್ನು ಸಂಪದ್ಭರಿತ ಗೊಳಿಸಿದ್ದಾರೆ. ಅಂತೆಯೇ ಹುಕ್ಕೇರಿ ತಾಲೂಕಿನ ಮಹಿಳೆಯರೂ ಸಾಹಿತ್ಯ ಕ್ಷೇತ್ರದಲ್ಲಿ ಹಿಂದೆ ಬಿದ್ದಿಲ್ಲ. ಒಂದು ಕಾಲದಲ್ಲಿ ಮಹಿಳಾ ಸಾಹಿತ್ಯ ‘ಅಡುಗೆ ಮನೆ ಸಾಹಿತ್ಯ’ ಎಂಬ ಮೂದಲಿಕಿಗೆ ಒಳಗಾಗಿದ್ದುಂಟು. ಆದರೆ ಇಂದು ಮಹಿಳೆಯರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಹಾಗೂ ತಮ್ಮ ಮೌಲಿಕ ಸಾಹಿತ್ಯ ಸೃಷ್ಟಿಗಾಗಿ ಹಲವಾರು ಪ್ರಶಸ್ತಿಗಳಿಗೆ ಪುರಸ್ಕೃತರೂ ಆಗಿದ್ದಾರೆ.

ಹುಕ್ಕೇರಿ ತಾಲೂಕಿನ ಮಹಿಳಾ ಲೇಖಕಿಯರಲ್ಲಿ ಅಗ್ರಸ್ಥಾನವನ್ನು ಪಡೆದವರೆಂದರೆ ಶ್ರೀಮತಿ ಶಾಂತಾದೇವಿ ಕಣವಿಯವರು. ಖ್ಯಾತ ಕವಿ ನಾಡೋಜ ಚನ್ನವೀರ ಕಣವಿಯವರ ಧರ್ಮಪತ್ನಿಯಾಗಿದ್ದು ಸಾಹಿತ್ಯಲೋಕದಲ್ಲಿ ಹೆಸರು ಮಾಡಿದ್ದಾರೆ. ಯಮಕನಮರಡಿಯ ದಿ ಸಿದ್ಧ ಬಸಪ್ಪ ಗಿಡ್ಡವರ – ಅವರ ಮಗಳು ಶಾಂತಾದೇವಿಯವರು. ತಂದೆಯವರು ಕಂದಾಯ ಇಲಾಖೆಯ ಅಧಿಕಾರಿಗಳಾಗಿದ್ದರೂ, ಸಾಹಿತ್ಯ ಪ್ರೇಮಿಗಳು ಮನೆಯಲ್ಲಿಯೇ ಒಂದು ಗ್ರಂಥಾಲಯವನ್ನು ಹೊಂದಿದ್ದರು. ಅಂಥ ಒಂದು ಪರಿಸರದಲ್ಲಿ ಬೆಳೆದ ಶಾಂತಾದೇವಿ ಕಣವಿಯವರಿಗೆ ಸಹಜವಾಗಿಯೇ ಸಾಹಿತ್ಯದ ಕಡೆಗೆ ಒಲವು ಬೆಳೆಯಿತು. ನಂತರ ಚೆನ್ನವೀರ ಕಣವಿಯವರ ಧರ್ಮಪತ್ನಿಯಾಗಿ ಧಾರವಾಡಕ್ಕೆ ಬಂದನಂತರ ಅವರ ಸಾಹಿತ್ಯ ಕೃಷಿ ಹೆಚ್ಚು ಫಲವತ್ತತೆಯನ್ನು ಹೊಂದಿತು. ತಮ್ಮ ಲೇಖನಗಳಿಂದ ನಾಡಿನ ಮೂಲೆ ಮೂಲೆಯಲ್ಲಿ ಸಾಹಿತ್ಯದ ಕಂಪನ್ನು ಬೀರಿದರು. ಸಣ್ಣ ಕತೆಗಳು, ಹರಟೆ – ಪ್ರಬಂಧಗಳು, ಮಕ್ಕಳಿಗಾಗಿ – ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಕಥಾ ಲೋಕಕ್ಕೆ ಶಾಂತಾದೇವಿ ಕಣವಿಯವರು ಕಾಲಿರಿಸಿ ಐದು ದಶಕಗಳು ಸಂದಿವೆ. ‘ಸಂಜೆಮಲ್ಲಿಗೆ’, ‘ಬಯಲು ಆಲಯ’, ‘ಮರು–ವಿಚಾರ’, ‘ಜಾತ್ರೆ ಮುಗಿದಿತ್ತು’, ‘ಕಳಚಿ ಬಿದ್ದ ಪೈಜಣ’ – ಇವು ಅವರ ಕಥಾ ಸಂಗ್ರಹಗಳು ‘ಬಯಲು – ಆಲಯ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕೆಡೆಮಿ ಗೌರವ ಸಂದಿದೆ. ಅಜ -ಗಜಾಂತರ’ ಹರಟೆ ಪ್ರಬಂಧವಾದರೆ, ‘ನಿಜಗುಣ ಶಿವಯೋಗಿ’ ಮಕ್ಕಳಿಗಾಗಿ ಬರೆದ ಕೃತಿ. ಹೆಣ್ಣಿನ ಒಡಲ-ಸಂಕಟವನ್ನು ಹೃದಯ ವಿದ್ರಾವಕವಾಗಿ ತೆರೆದಿಡುವುದರ ಜೊತೆಗೆ, ಪುರುಷ ಪ್ರಧಾನ ಕುಟುಂಬ ಸಮಾಜ ವ್ಯವಸ್ಥೆಯಲ್ಲಿ ತುಳಿಯಲ್ಪಡುವ ಆಕೆಯ ದುರವಸ್ಥೆಯ ಕಾರ-ಕಾರಣ ಸಂಬಂಧವನ್ನು ಅನುಕಂಪ – ಸಹಾನುಭೂತಿ ಮತ್ತು ಸೌಮ್ಯ ಕನಲುವಿಕೆಯಿಂದ ವಿಶ್ಲೇಷಿಸುವ ಶಾಂತಾ ದೇವಿಯವರ ಅನುಸಂಧಾನ, ವಸ್ತು ನಿಷ್ಠತೆಯತ್ತ ಒಲಿಯುತ್ತ ಬಂದಿರುವುದು ಗಮನಾರ್ಹವಾಗಿದೆ. ಯಾವುದು ಆತ್ಮಿಕ ವಿಷಯವೋ, ಪರಿಸರದಿಂದ ಬಂದು ಅಂತರಂಗ ಸಂಕೇತವಾಗಿ ಪರಿವತ್ರನೆಗೊಳ್ಳುವ ಅನುಭವವೋ, ಯಾವುದು ಅವರ ಸುಕುಮಾರ ಸಂವೇದನೆಗೆ

ಒಳಪಟ್ಟುದೋ- ಅದರ ಚಿತ್ರಣದಲ್ಲಿ ಇವರು ಪಡೆದ ಯಶಸ್ಸು ಮಹಿಳೆ ಕುಳಿತಲ್ಲಿಯೇ ಏನನ್ನೂ ಸಾಧಿಸಬಲ್ಲಳೆಂಬುದಕ್ಕೆ ಒಂದು ಉತ್ತಮ ನಿದರ್ಶನ !

ಹಳ್ಳಿಯ ಸಾಮಾನ್ಯ ಮನೆತನವೊಂದರಲ್ಲಿ ಹುಟ್ಟಿದ ವಿದ್ಯಾ ಕುಂದರಗಿಯವರ ಪ್ರಥಮ ಕವನ ಸಂಗ್ರಹ “ನನ್ನೊಳಗಿನ ಕವಿತೆ’ ಬದುಕಿನ ಹೋರಾಟದಲ್ಲಿ ಗಡಿಬಿಡಿಯಲ್ಲಿ ಹಲಬಗೆಯ ಒತ್ತಡಗಳಲ್ಲಿ ಕವಿತೆ ಕಳೆದು ಹೋಗುವ ಇಲ್ಲವೇ ಬತ್ತಿ ಹೋಗುವ ಪ್ರಸಂಗಗಳೇ ಹೆಚ್ಚು ‘ನನ್ನೊಳಗಿನ ಕವಿತೆ’ ಅದನ್ನು ಜೀವಂತವಾಗಿ ಚಿತ್ರಿಸುತ್ತದೆ. ಈ ಕೃತಿಗೆ ಮಹಿಳಾ ಸಾಹಿತ್ಯ ಪರಿಷತ್ತು, ಬೆಂಗಳೂರು ಇವರಿಂದ ಪ್ರಶಸ್ತಿ ದೊರಕಿದೆ. ಇವರ ಇನ್ನೊಂದು ಕೃತಿ ‘ಕನ್ನಡ ವಿಷಯ ಸಂಪದೀಕರಣ’ ಡಿ.ಎಡ್.

ಶಿಕ್ಷಣ ತರಗತಿಗೆ ಪಠ್ಯಪುಸ್ತಕವಾಗಿದೆ. ಪ್ರವಾಸ ಕಥನ (ನೈಲ್‌ನ ಅಲೆ ಅಲೆಯಲ್ಲಿ ‘ ಪ್ರಕಟಣೆಯ ಹಂತದಲ್ಲಿದೆ. ಜುಲೈ ೨೦೧೦ರಲ್ಲಿ ಇಜಿಪ್ತ ಟರ್ಕಿಯಲ್ಲಿ ಜರುಗಿದ ‘ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನದಲ್ಲಿ ಭಾಗವಹಿಸಿ ಹೊರ ದೇಶಗಳಿಗೂ ಕನ್ನಡ ಸಾಹಿತ್ಯ ಸೌರಭವನ್ನು ಸೂಸಿದ್ದಾರೆ.

ಉರ್ದು ಮಾತೃಭಾಷೆಯಾದರೂ ಕನ್ನಡ ಭಾಷೆ – ಸಾಹಿತ್ಯದ ಮೇಲೆ ಪ್ರಭುತ್ವವನ್ನು ಹೊಂದಿದ ‘ಕನ್ನಡತಿ’ ಕಾವ್ಯ ನಾಮದೊಂದಿಗೆ ಕಾವ್ಯಲೋಕವನ್ನು ಪ್ರವೇಶಿಸಿ, ‘ಮನೋಗೀತೆ’ ಎಂಬ ಪ್ರಥಮ ಕವನ ಸಂಕಲನವನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದವರು ಸಂಕೇಶ್ವರರ ಹಮೀದಾಬೇಗಂ ದೇಸಾಯಿಯವರು. ಪ್ರೌಢ ಶಾಲಾ ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿದ್ದು ಇದೀಗ ನಿವೃತ್ತರಾಗಿದ್ದು ಸಾಹಿತ್ಯದಲ್ಲಿ ಮೊದಲಿನಿಂದಲೂ ಆಸಕ್ತಿಯುಳ್ಳವರು. ದಿನಪತ್ರಿಕೆಗಳಲ್ಲಿ ವಾರಪತ್ರಿಕೆಗಳಲ್ಲಿ ಬಿಡಿಲೇಖನಗಳನ್ನು ಬರೆಯುತ್ತಾ ಬಂದವರು. ಜೀವನದ ಆಗುಹೋಗುಗಳನ್ನು, ಸುತ್ತಲಿನ ವಿದ್ಯಾಮಾನಗಳನ್ನು ಓದುಗರ ಮನಮುಟ್ಟುವಂತೆ ರಚಿಸುವ ಇವರ ಕವಿತಾ ಶೈಲಿ ವಿಶಿಷ್ಟವಾದುದು. ಒಂದು ನಿರ್ದಿಷ್ಟ ಛಂದದಲ್ಲಿ ತಾತ್ವಿಕ ನೆಲೆಗಟ್ಟಿನ ಮೇಲೆ ‘ಸಿದ್ದ ಗುರುವೆ’ ಎಂಬ ವಚನಾಂಕಿತದೊಂದಿಗೆ ಕುಸುಮ ಷಟ್ಟದಿಯಲ್ಲಿ ರಚಿಸಿದ ೫೧ (ಐವತ್ತೊಂದು) ವಚನಗಳ ಸಂಕಲನ ‘ವಚನಾಂಜಲಿ’ ಕೃತಿಗೆ ಕರ್ನಾಟಕ ವಚನ ಸಾಹಿತ್ಯ ಅಕೆಡೆಮಿಬೆಂಗಳೂರು ಇವರಿಂದ ಪ್ರಶಸ್ತಿ ಲಭಿಸಿದೆ. ಬದುಕಿನ ಅನುಭವಗಳ ಬಗ್ಗೆ ಚಿಂತನೆ ಮಾಡಿದ ಚಿಂತನೆಯ ಬೆಳಕಲ್ಲಿ ಎಂಬ ಪ್ರಬಂಧ ಲೇಖನಗಳ ಸಂಗ್ರಹ ಪ್ರಕಟಣೆಯ ಹಂತದಲ್ಲಿದೆ.

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಹುಲ್ಲೋಳಿ ಗ್ರಾಮದ ವೇಣುತಾಯಿ ಚೌಗಲಾ ಅವರಿಗೆ ಚಿಕ್ಕಂದಿನಿಂದಲೇ ಕವನ ಬರೆಯುವ ಹವ್ಯಾಸ ‘ಹೃದಯ ಗೀತೆ’ (ಕವನ ಸಂಕಲನ), ಕೋನಾರ್ಕ (ಪ್ರವಾಸ ಕಥನ), ಸಣ್ಣ ಕತೆಗಳು, ಮಕ್ಕಳಿಗಾಗಿ ಲೇಖನಗಳು ಮತ್ತು ಕವನಗಳು – ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಇನ್ನೋರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಹಿಡಕಲ್ ಡ್ಯಾಮ್‌ನ ಶ್ರೀಮತಿ ಸುನಂದಾ ಬೆನ್ನೂರ ‘ನವಿಲು ಕುಣಿತಾವ’ ಮಕ್ಕಳ ಗೀತೆಗಳ ಸಂಕಲನ, ಕವನ ಸಂಕಲನಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಗೈದಿದ್ದಾರೆ.

ಹುಕ್ಕೇರಿಯ ಲೀಲಾವತಿ ಪಾಟೀಲರ ‘ಕಾವ್ಯಾಂಜಲಿ’, ಸಂಕೇಶ್ವರದ ಅಕ್ಕಮಹಾದೇವಿ ಸುಭೇದಾರರ ‘ತ್ರಿದಳ’ ಕವನ ಸಂಕಲನಗಳು ಪ್ರಕಟಗೊಂಡಿವೆ. ಸಂಕೇಶ್ವರದ ಪ್ರಭಾ ಬೋರಗಾಂವಕರ ಇವರು ‘

ಶ್ರೀದುರದುಂಡೇಶ್ವರ ಸಿದ್ದ ಸಂಸ್ಥಾನಮಠ, ನಿಡಸೋಸಿ – ಒಂದು ಸಾಂಸ್ಕೃತಿಕ ಅಧ್ಯಯನ’ – ಎಂಬ ಪ್ರೌಢ ಪ್ರಬಂಧ ಪ್ರಕಟಿಸಿದ್ದಾರೆ. ಡಾ. ಶ್ರೀಮತಿ. ಎಸ್.ಎಚ್. ನಾಯಕ ಅವರ ಗೌರೀಶ

ಕಾಯ್ಕಿಣಿಯವರ ಬದುಕು-ಬರಹ’ ಸಂಶೋಧನೆಯ ಮಹಾ ಪ್ರಬಂಧ ಮಹಾನಂದಾ ಪಾಟೀಲರ ಪಟ್ಟ ಮಹಾದೇವಿ ಶಾಂತಲಾದೇವಿ ಕಾದಂಬರಿ ಒಂದು ಅಧ್ಯಯನ’ – ಎಂಬ ಸಂಪ್ರಬಂಧಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪೂರ್ವ ಕೊಡುಗೆಗಳಾಗಿವೆ.

ಹುಕ್ಕೇರಿ ಸಮೀಪದ ಎಲಿಮುನ್ನೋಳಿ ಗ್ರಾಮದವರಾದ ಸದ್ಯ ಸಂಕೇಶ್ವರದ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳಾಗಿ ಕಾರ ನಿರ್ವಹಿಸುತ್ತಿರುವ ಡಾ. ಶೀಲಾ ಪೋತದಾರ ಅವರು ಮಹಿಳೆಯರಿಗೆ ಉಪಯುಕ್ತವಾಗುವ ವೈದ್ಯಕೀಯ ಸಾಹಿತ್ಯ ಕೃಷಿಯಲ್ಲಿ ಅನೇಕ ಪ್ರಬಂಧಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ಹದಿಹರೆಯದ ಗರ್ಭಿಣಿ ಎಂಬ ಪ್ರಬಂಧ ಮಹತ್ವಪೂರ್ಣವಾಗಿದೆ. ಅಲ್ಲದೇ ಅನೇಕ ಕವನಗಳನ್ನೂ ಕೂಡ ಬರೆದು ವೈದ್ಯಕೀಯ ಕ್ಷೇತ್ರದಷ್ಟೇ ಕೈ ಚಳಕವನ್ನು ಸಾಹಿತ್ಯಕ್ಷೇತ್ರದಲ್ಲೂ ತೋರಿಸಿದ್ದಾರೆ. ಹುಲ್ಲೋಳಿ ಹಟ್ಟಿ ಗ್ರಾಮದವರಾಗಿದ್ದು, ಸಂಕೇಶ್ವರದಲ್ಲಿ ತಮ್ಮ ಸಾಹಿತ್ಯ ಸೇವೆಯನ್ನು ಆರಂಭಿಸಿ, ಇದೀಗ ಬೆಳಗಾವಿಯಲ್ಲಿರುವ ಸುನೀತಾ ಪಾಟೀಲರು ಅನೇಕ ಪ್ರಬಂಧ, ಕಾವ್ಯಗಳನ್ನು ದಿನ ಪತ್ರಿಕೆ, ವಾರಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ‘ಬಸವೇಶ್ವರ ವಚನಗಳು ನಿರಂತರ ಸ್ಫೂರ್ತಿ ಎಂಬ ಮಹಾ ಪ್ರಬಂಧಕ್ಕೆ ಬೆಂಗಳೂರಿನ ಬಸವ ಸಮಿತಿಯಿಂದ ಪ್ರಶಸ್ತಿ ಸಿಕ್ಕಿದೆ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಮಾಧವಿ ಗುರವ ಸಂಗೀತದೊಂದಿಗೆ ಸಾಹಿತ್ಯದಲ್ಲೂ ಆಸಕ್ತಿ ವಹಿಸಿ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಹುಕ್ಕೇರಿಯ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಕಾವ್ಯ ನಿರ್ವಹಿಸುತ್ತಿರುವ ರೇವತಿ ಮಠದ ಅವರು ಅನೇಕ ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ. ಸಂಕೇಶ್ವರದ ಬಿ.ಎಸ್.ಡಬ್ಲ್ಯೂ ಕಾಲೇಜಿನ ವಿದ್ಯಾರ್ಥಿನಿ ಕವಿತಾ ತಂಗಡಿ ಹೈಸ್ಕೂಲಿನ ದಿನಗಳಲ್ಲೇ ಕವನ ರಚಿಸುವ ಹವ್ಯಾಸ ಹೊಂದಿ ಕವನ ಸಂಕಲನ ಪ್ರಕಟಿಸಿದ್ದಾರೆ. # ಇನ್ನೂ ಅನೇಕ ಮಹಿಳೆಯರು ಸಾಹಿತ್ಯ ಸಾಧನೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಹುಕ್ಕೇರಿ ತಾಲೂಕಿನ ಮಹಿಳಾ ಸಾಹಿತಿಗಳು ಹಲವಾರು ದಿಶೆಗಳಲ್ಲಿ ಸಾಹಿತ್ಯ ಕೃಷಿ ನಡೆಸಿ ತಾಲೂಕಿನ ಸಾಹಿತ್ಯ, ಸಾಂಸ್ಕೃತಿಕ ಸತ್ವವನ್ನು ಸಂಪದ್ಭರಿತ ಗೊಳಿಸುವಲ್ಲಿ ಗಣನೀಯವಾದ ಪಾತ್ರವಹಿಸಿದ್ದಾರೆ. ಬಹಳಷ್ಟು ಮಹಿಳೆಯರು ಎಲೆ ಮರೆಯ ಕಾಯಿಯಂತೆ ಮರೆಯಲ್ಲಿದ್ದು ಯಾವ ಪ್ರಚಾರ ಬಯಸದೆ, ಒಂದು ಪ್ರದೇಶದ ನಾನಾ ಮೂಲೆಯಲ್ಲಿ ಕುಳಿತುಕೊಂಡು ಕೃತಿ ರಚನೆ ಮಾಡುತ್ತಾರೆ. ಇಂಥ ಬರಹಗಾರ್ತಿಯರನ್ನು, ಅವರ ಎಲ್ಲ ಬಗೆಯ ಕೃತಿಗಳನ್ನು ಒಂದೆಡೆ ಕಲೆ ಹಾಗುವ ಸಂಗ್ರಹಣ ಕ್ಷೇತ್ರ ಕಾವ್ಯ ನಡೆಯಬೇಕಾದುದು ಅಗತ್ಯ. ಇಲ್ಲವಾದಲ್ಲಿ ಮಹತ್ವದ ಲೇಖಕಿಯರು, ಮೌಲಿಕ ಕೃತಿಗಳು ನಮ್ಮ ತಲೆಮಾರಿನ ಜನಕ್ಕೆ ಪರಿಚಯವಾಗದೆ ಕಾಲನ ಗರ್ಭದಲ್ಲಿ ಕಣ್ಮರೆಯಾಗುವ ಅಪಾಯವಿದೆ. ಕನ್ನಡ ಮಹಿಳಾ ಸಾಹಿತ್ಯ ಎರಡು ಸವಾಲುಗಳನ್ನು ಎದುರಿಸುತ್ತಲಿದೆ. ಪುರುಷರಷ್ಟು ಮುಕ್ತ, ಗಂಭೀರವಾಗಿ ಬರೆಯದಿರುವುದು ಒಂದಾದರೆ, ಪುರುಷರಂತೆ ಧಾವಿಸಿ ಪ್ರಕಾಶನ ಅವಕಾಶಗಳನ್ನು ದೊರಕಿಸಿಕೊಳ್ಳದಿರುವುದು ಎರಡನೆಯದು. ಇವುಗಳಿಂದ ಮಹಿಳೆ ಹೊರಬಂದು ತನ್ನ ಅಸ್ತಿತ್ವವನ್ನು ನೆಲೆಗೊಳಿಸಬೇಕಾಗಿದೆ. ಅದಕ್ಕೆ ಸಮಾಜವೂ ಸಹಕರಿಸಬೇಕಾದ ಅಗತ್ಯವಿದೆ.

ಕನ್ನಡ ನಾಡು ನುಡಿಯ ಸೇವೆಯಲ್ಲಿ ಸಾಹಿತ್ಯಲೋಕಕ್ಕೆ ಇನ್ನೂ ಹೆಚ್ಚಿನ ಮಹಿಳಾ ಲೇಖಕಿಯರ ಕೊಡುಗೆಗಳು ಲಭಿಸಲು ಮಹಿಳಾ ಸಾಹಿತ್ಯದ ಕಂಪು ನಾಡಿನಾದ್ಯಂತ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಪಸರಿಸಲಿ. ಕನ್ನಡಾಂಬೆಯ ಉಡಿಯನ್ನು ಇನ್ನಷ್ಟು ಮಹಿಳಾ ಸಾಹಿತ್ಯ ಫಲ-ಪುಷ್ಪಗಳು ತುಂಬುವಂತಾಗಲಿ.


Leave a Reply

Back To Top