ಚರಗ’ ಚೆಲ್ಲಿ ಸಿಹಿಯುಣ್ಣುವ ‘ಮಣ್ಣಿನ ಮಕ್ಕಳೂ’..!

ವಿಶೇಷ ಲೇಖನ

ಚರಗ’ ಚೆಲ್ಲಿ ಸಿಹಿಯುಣ್ಣುವ ‘ಮಣ್ಣಿನ ಮಕ್ಕಳೂ’..!

ಕೆ.ಶಿವು.ಲಕ್ಕಣ್ಣವರ

 ಚರಗ’ ಚೆಲ್ಲಿ ಸಿಹಿಯುಣ್ಣುವ ‘ಮಣ್ಣಿನ ಮಕ್ಕಳೂ’..!

ಜಾನಪದೀಯ ಸೊಗಡಿನ ಸೀಗೆಹುಣ್ಣಿಮೆ ಎಂಬ ಮಣ್ಣಿನ ಮಕ್ಕಳ ಹಬ್ಬವೂ.!! —

ಚರಗ ಅಂದರೆ ನಿಮಗೆ ಗೊತ್ತೇ..? ಜಾನಪದೀಯ ಸೊಗಡಿನ ಸೀಗೆಹುಣ್ಣಿಮೆ ಅಂದರೆ ಗೊತ್ತೇ..? ಮಣ್ಣಿನ ಮಕ್ಕಳ ಈ ಹಬ್ಬದ ವೈಶಿಷ್ಟತೆ ನಗರ ಕೇಂದ್ರೀತ ಜನರಿಗೆ ಗೊತ್ತೇ..? ಗೊತ್ತಿಲ್ಲವೆಂದರೆ ಈ ಲೇಖನ ಓದಿರಿ. ಅಲ್ಲದೇ ನಾವು ನೀವೇಲ್ಲಾ ಆದುನಿಕೀರಣಗೊಂಡ ನಮ್ಮ ಬದುಕಿನ ಜೀವನದಲ್ಲಿ ನಮ್ಮ ಮೂಲಭೂತ ಕೆಲವು ಆಚರಣೆಗಳನ್ನು ಮರತೇಬಿಟ್ಟಿದ್ದೇವೆ. ನಗರೀಕರಣಗೊಂಡ ಬದುಕಿನಲ್ಲಿ ನಮ್ಮ ಜೀವನದ ಅರ್ಥಪೂರ್ಣ ಆಚರಣೆ ಮತ್ತು ನಂಬಿಕೆ, ನಡಾವಳಿಗಳನ್ನು ಮರೆತು ನಾವು ಪೂರ್ಣವಾಗಿ ಜೀವನಸೆಲೆಯನ್ನೇ ಕಳಿದುಕೊಂಡಿದ್ದೇವೆ..! ಆ ಕಳೆದುಕೊಂಡ ಜೀವನಸೆಲೆಯನ್ನು ಮತ್ತೆ ಮತ್ತೇ ಹುಡುಕುವ ಪ್ರಯತ್ನವನ್ನು ಮಾಡೋಣ ಈಗ. ನಮ್ಮ ಕಾಂಕ್ರೀಟೀಕರಣಗೊಂಡ ನಮ್ಮ ಬದುಕಿನಲ್ಲಿ ನಮ್ಮ ಅಮೂಲ್ಯವಾದ ಹಬ್ಬ ಹರಿದಿನಗಳ ಅರ್ಥವನ್ನು ಹುಡುಕೋಣ ಈಗ..! ಅದುವೇ ಈಗ ಈ ಭೂತಾಯಿಯ ಪೂಜೆ ಅಂದರೆ ಸೀಗೆಹುಣ್ಣಿಮೆಯ ಅರ್ಥವನ್ನು ನೋಡೋಣ ಈಗ..!

ಸೀಗೆಹುಣ್ಣಿಮೆ..! —

ತರಹೇವಾರಿ ಖಾದ್ಯ ಸಿದ್ಧಪಡಿಸಿಕೊಂಡು ಕುಟುಂಬ ಸದಸ್ಯರೆಲ್ಲರೂ ಹೊಲಕ್ಕೆ ಹೋಗಿ ಭೂಮಿತಾಯಿಗೆ ಪೂಜೆ ಮತ್ತು ನೈವೇದ್ಯ ಮಾಡುವ ಮೂಲಕ ಆಚರಿಸುವ ‘ಸೀಗಿ ಹುಣ್ಣಿಮೆ’ ಹಬ್ಬವನ್ನು ಸಂಭ್ರಮದಿಂದ ಆಚರಣೆಯನ್ನು ಆಚರಿಸಲಾಯಿತು.

ಒಂದು ಊರಲ್ಲಿ ಸೀಗೆಹುಣ್ಣಿಮೆ ಹಬ್ಬವನ್ನು ಸೀಗೆಹುಣ್ಣಿಮೆ ಹಬ್ಬದಂದೇ ಆಚರಿಸಿದರೆ, ಕೆಲವು ಊರುಗಳಲ್ಲಿ ಸೀಗೆಹುಣ್ಣಿಮೆಯನ್ನು ಮುಂದಿಟ್ಟುಕೊಂಡು ಈ ಹಬ್ಬವನ್ನು ಆಚರಿಸುತ್ತಾರೆ. ಹಾಗೇಯೇ ನಮ್ಮೂರಲ್ಲಿ ಇಂದು ಅಂದರೆ ಈ ಸೀಗೆಹುಣ್ಣಿಮೆಯ ಒಂದೆರಡು ದಿನಗಳ ಮುಂದೆ ಈ ಸೀಗೆಹುಣ್ಣಿಮೆ ಹಬ್ಬವನ್ನು ಆಚರಿಸುತ್ತಿದೆವು..! ಇದು ಇರಲಿ. ಈಗ ಈ ಸೀಗೆಹುಣ್ಣಿಮೆಯ ಹಬ್ಬದ ಮಹತ್ವವನ್ನು ಮತ್ತು ಆಚರಣೆಯ ಬಗೆಯನ್ನು ನೋಡೋಣವೀಗ..!

ಪರ ಊರುಗಳಿಂದ ಬಂದ ಸಂಬಂಧಿಕರೊಂದಿಗೆ ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಹೊಲಕ್ಕೆ ತೆರಳಿದ ರೈತರು, ಸಂಜೆಯವರೆಗೂ ಹೊಲದಲ್ಲಿಯೇ ಸಮಯ ಕಳೆದರು..!

ತರಹೇವಾರಿ ಅಡುಗೆ ಸಿದ್ಧಪಡಿಸಿಕೊಂಡ ರೈತರು, ಹೊಲದಲ್ಲೆಲ್ಲ ತಿರುಗಾಡಿ ಚರಗ ಚೆಲ್ಲಿದರು. ರೈತರು ಈ ಹುಣ್ಣಿಮೆಯಂದು ಜೋಳದ ಕಡಬು, ಅಕ್ಕಿ ಹುಗ್ಗಿ, ಕುಚ್ಚಿದ ಖಾರ, ಹುರಕ್ಕಿ ಹೋಳಗಿ, ವಡೆ ಸೇರಿದಂತೆ ಮತ್ತಿತರ ಅಡುಗೆ ಮಾಡಿಕೊಂಡು ಕುಟುಂಬದ ಸದಸ್ಯರೊಂದಿಗೆ ಹೊಲಕ್ಕೆ ತೆರಳಿದರು. ಬೆಳಗಿನ ಜಾವದಿಂದಲೇ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದ ಮಹಿಳೆಯರು, ಹೊಸ ಬಟ್ಟೆ ತೊಟ್ಟಿದ್ದರು..!

‘ಮುಂಗಾರಿನ ಫಸಲು ಮನೆ ತುಂಬಿಸಿಕೊಳ್ಳುವ ಮತ್ತು ಹಿಂಗಾರಿನ ಮಳೆಗಾಗಿ ಭೂಮಿ ಸಿದ್ಧತೆ ಮಾಡುವ ಕಾಲದಲ್ಲಿ ಫಸಲನ್ನು ಪೂಜಿಸುವ ಮತ್ತು ಮುಂದಿನ ಫಸಲು ಉತ್ತಮವಾಗಿರಲೆಂದು ಭೂಮಿ ಪೂಜಿಸುವ ರೈತ ಕುಲದ ತಾಯಿ’ ಪೂಜೆಯೇ ಚರಗವು..!

ವಿಜಯದಶಮಿ ಬಳಿಕ ಬರುವ ಸೀಗಿ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಬೆಳಗ್ಗೆ ಮನೆಯಲ್ಲಿ 5 ಬಗೆಯ ಕಾಳ್ನು ಕುದಿಸಿ ಅದನ್ನು ಹೊಲದ ಸುತ್ತಲೂ ಚರಗದ ರೂಪದಲ್ಲಿ ಚೆಲ್ಲುವ ಸಂಪ್ರದಾಯವಿದೆ..!

ಹೀಗೆಯೇ ಚರಗ ಚೆಲ್ಲುವುದರಿಂದ ಫಸಲು ಸಮದ್ಧವಾಗಿರಲಿದೆ ಎನ್ನ್ನುವ ನಂಬಿಕೆ ಜನಪದರಲ್ಲಿದೆ. ಜಾನುವಾರುಗಳ ಮೈತೊಳೆದು ಸಿಂಗರಿಸಿ ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರ ಜೊತೆಗೆ ತಮ್ಮ ಕೃಷಿ ಭೂಮಿಗೆ ತೆರಳಿದ ರೈತರು ಬೆಳೆದು ನಿಂತ ಫಸಲಿಗೆ ಪೂಜೆ ಸಲ್ಲಿಸಿದರು..!

ಫಸಲಿಗೆ ಉಡಿ ಕಟ್ಟಿ ಸೀರೆ, ಕುಪ್ಪಸ ತೊಡಿಸಿ ಪೂಜಿಸಿ ಆರಾಧಿಸಿದ ರೈತ ಸಮೂಹ ಅಲ್ಲಿಯೇ ಪಾಂಡವರ ಮೂರ್ತಿಗಳನ್ನು ನಿರ್ಮಿಸಿ ಅವುಗಳಿಗೂ ಪೂಜೆ ಸಲ್ಲಿಸಿದರು..!

ಕುಟುಂಬದ ಯಜಮಾನ ಫಸಲಿಗೆ ಅರ್ಪಿಸಿರುವ ಎಡೆ (ಊಟ)ವನ್ನು ಸೇವಿಸುವ ಪದ್ಧತಿ ಆಚರಿಸಲಾಯಿತು. ಪ್ರಸಾದ ಸ್ವೀಕರಿಸುವ ಸಂದರ್ಭ ಯಾರೊಂದಿಗೂ ಮಾತನಾಡದೇ ಮೌನವಾಗಿ ಅತ್ಯಂತ ಶ್ರದ್ಧೆಯಿಂದ ಪ್ರಸಾದ ಸ್ವೀಕರಿಸಿದರೆ ಮುಂದಿನ ವರ್ಷದವರೆಗೆ ಯಾವುದೇ ತೊಂದರೆ ಇಲ್ಲದಂತೆ ಫಸಲು ಕೈಹಿಡಿಯಲಿದೆ ಎನ್ನ್ನುವ ನಂಬಿಕೆ ಇದೆ ಜಾನಪದೀಯ ಜನರಲ್ಲಿ.

ಚಕ್ಕಡಿಯಲ್ಲಿ ಮನೆ ಮಂದಿಯೆಲ್ಲಾ ಬುತ್ತಿಗಂಟು ಹೊತ್ತು ಹೊಲದತ್ತ ಸಾಗಿದಾಗ ಮಧ್ಯಾಹ್ನ ಸುಮಾರು 1 ಗಂಟೆ ಆಗಿತ್ತು. ಮುತ್ತೈದೆಯರು ಮತ್ತು ಮಕ್ಕಳು ಎಲೆಯಲ್ಲಿ ನೈವೇದ್ಯ ಮಾಡಿ ಹೊಲದ ತುಂಬೆಲ್ಲ ‘ಹುಲ್ಲಲಿಗೋ.. ಸುಲಾಂಬ್ರಿಗೋ..’ ಎನ್ನುತ್ತ ‘ಚರಗ’ ಎರಚಿ ಭೂತಾಯಿಗೆ ನಮನ ಸಲ್ಲಿಸಿದರು.

ನಂತರ ಹೊಲದಲ್ಲಿನ ಮರದ ಕೆಳಗಿನ ನೆರಳಿನಲ್ಲಿ ಕುಳಿತು ಸವಿಯೂಟ ಸವಿದರು. ಹಸಿರು ತುಂಬಿದ ಹೊಲದಲ್ಲಿ ತಿರುಗಾಡಿದರು. ಮಕ್ಕಳು ಹೊಲದ ತುಂಬೆಲ್ಲಾ ಓಡಾಡಿ ಆಟವಾಡಿದರು. ನಗರ ಪ್ರದೇಶದ ಜನರು ಮಕ್ಕಳೊಂದಿಗೆ ಗ್ರಾಮೀಣ ಪ್ರದೇಶದಲ್ಲಿದ್ದ ಬೀಗರ ಮನೆಗೆ ಹೋಗಿ ಹೊಲದಲ್ಲಿ ರುಚಿಯಾದ ಅಡುಗೆ ಸವಿ ಸವಿದರು..!

ಹೊಲದಿಂದ ಮರಳುವ ಸಂದರ್ಭ ಸ್ವಲ್ಪ ಫಸಲನ್ನು ಕೊಯ್ದು ಮನೆಗೆ ತಂದು ಪೂಜೆ ಸಲ್ಲಿಸಲಾಯಿತು. ಮುಂದೆ ಫಸಲಿನ ರಾಶಿಯಲ್ಲಿ ಅದನ್ನ್ನು ಇಟ್ಟರೆ ಮತ್ತಷ್ಟು ಸಮದ್ಧವಾಗಲಿದೆ ಎನ್ನ್ನುವ ನಂಬಿಕೆ ಇದೆ ಜಾನಪದೀಯ ಗ್ರಾಮೀಣ ಜನರಲ್ಲಿ. ಒಟ್ಟಾರೆ ಭೂತಾಯಿಯ ಆರಾಧನೆಗೆ ಮೀಸಲಿರುವ ಸೀಗಿ ಹುಣ್ಣಿಮೆ ಈ ಪ್ರದೇಶದಲ್ಲಿ ಶ್ರದ್ಧೆಯಿಂದ ನಡೆಯಿತು..!

ಸೀಗಿ ಹುಣ್ಣಿಮೆ ಮಹತ್ವವೂ..! —

ಗ್ರಾಮೀಣ ಜನರಿಗೆ ಭೂಮಿ ಕೇವಲ ಮಣ್ಣಲ್ಲ. ಕೋಟ್ಯಂತರ ಜೀವಿಗೆ ಆಹಾರ, ರಕ್ಷಣೆ ನೀಡಿ ಸಲಹುವ ಮಹಾಮಾತೆ ಅದು. ಹಾಗಾಗಿ ಭೂಮಿ ತಾಯಿಯ ಆರಾಧನೆಗೆ ವಿವಿಧ ರೀತಿಯ ಆಚರಣೆಗಳು, ಮಾರ್ಗಗಳು ಭಾರತದ ಎಲ್ಲೆಡೆ ಪ್ರಚಲಿತದಲ್ಲಿವೆ. ಉತ್ತರ ಕರ್ನಾಟಕದ ‘ಸೀಗಿ ಹುಣ್ಣಿಮೆ’, ಮಲೆನಾಡಿನ ‘ಭೂಮಿ ಹುಣ್ಣಿಮೆ’, ಬಯಲು ಸೀಮೆಯ ‘ಹೊನ್ನ್ನಾರು’, ‘ಕೊಂತಿಹಬ್ಬ’, ತುಳುನಾಡಿನವರ ‘ಖೆಡ್ವಾಸ’, ಸೋಲಿಗ ಆದಿವಾಸಿಗಳ ‘ಭೂಮಿತಾಯಿ ಪೂಜೆ’, ಅಲ್ಲದೇ ದೇಶದ ಇತರ ರಾಜ್ಯಗಳಾದ ರಾಜಸ್ಥಾನದ ‘ಹಿರ್ಸೋತಿ’, ಪಶ್ಚಿಮ ಬಂಗಾಳದ ‘ಹಲ್ ಚಲ್’ ಇವೆಲ್ಲಾ ಭೂಮಿಗೆ ಧನ್ಯವಾದ ಸಲ್ಲಿಸುವ ಆಚರಣೆಗಳು.

ಪಂಚಭೂತಗಳಾದಿಯಾಗಿ ಪ್ರಕೃತಿಯ ಎಲ್ಲ ಘಟಕಗಳಲ್ಲೂ ರೈತರ ಮಕ್ಕಳು ದೈವತ್ವವನ್ನು ಕಂಡು ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ. ಅದರಲ್ಲಿಯೂ ಅವರಿಗೆ ನೆಲೆ, ಅನ್ನ್ನ, ಆಶ್ರಯ ನೀಡುವ ಭೂಮಿಯ ಮೇಲೆ ಅಪಾರ ಗೌರವ, ಭಕ್ತಿ, ಶ್ರದ್ಧೆಗಳನ್ನಿಟ್ಟುಕೊಂಡಿರುತ್ತಾರೆ. ಹಾಗಾಗಿ ಭೂಮಿ ಕುರಿತಾದ ಅವರ ಆಚರಣೆಗಳೂ ಸಹ ನಾಡಿನಾದ್ಯಂತ ಸಮೃದ್ಧವಾಗಿವೆ..!

ಹೀಗೆಯೇ ಗ್ರಾಮೀಣ ಸೊಗಡಿನ ಸೀಗೆಹುಣ್ಣಿಮೆ ಹಬ್ಬವನ್ನು ಆಚರಿಸಲಾಗುತ್ತದೆ


ಕೆ.ಶಿವು.ಲಕ್ಕಣ್ಣವರ

Leave a Reply

Back To Top