ಅಂಕಣ ಸಂಗಾತಿ
ಗಜಲ್ ಲೋಕ
ಮಮದಾಪೂರ ಗಜಲ್ ಗಳಲ್ಲಿ ಜೀವಯಾನ
…
ಗುಂಡಾಗಿರುವ ಈ ಭೂಮಿಯಲ್ಲಿ ಪಂಚಾಂಗವೂ ಗುಂಡಾಗಿದೆ, ಏನಂತೀರಿ ; ಅದಕ್ಕೆ ಅಲ್ಲವೇ ‘ಗುರುವಾರ’ ಮತ್ತೆ ಮತ್ತೆ ಬರುತ್ತಿದೆ! ಗುರುವಾರ ಹತ್ತಿರವಾಗುತಿದ್ದಂತೆ ಗಜಲ್ ಗುಲ್ಶನ್ ನ ಮಹೆಕ್ ನನ್ನನ್ನು ಆವರಿಸಿಬಿಡುತ್ತದೆ. ಅದರ ಪ್ರತಿಫಲವಾಗಿ ಇಂದು ಮತ್ತೊಮ್ಮೆ ಗಜಲ್ ಲೋಕದ ಗುಲಾಬ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ. ಗುಲಾಬಿಯನ್ನು ಪ್ರೀತಿಸದ ಅರಸಿಕರುಂಟೆ ಜಗದಲ್ಲಿ, ಇಲ್ಲ ಎನ್ನುವ ವಿಶ್ವಾಸದೊಂದಿಗೆ….!!
“ನಿರಾಸೆ ಹೇಳುತ್ತದೆ ಸಾವಿಗೆ ನಿನ್ನ ಕೆಲಸ ನೀನು ಮಾಡು ಎಂದು
ಆಸೆ ಹೇಳುತ್ತದೆ ಸ್ವಲ್ಪ ನಿಲ್ಲು ಪತ್ರಕ್ಕೆ ಉತ್ತರ ಬರಲಿದೆ ಎಂದು”
–ಫಾನಿ ಬದಾಯುನಿ
ಅವನಿಯಲ್ಲಿ ಉಸಿರಾಡುತ್ತಿರುವ ಜೀವ ಜಂತುಗಳಲ್ಲಿ ಸಂವೇದನಾಶೀಲ ಪ್ರಾಣಿಯೆಂದರೆ ಅದು ಮನುಷ್ಯ. ಕಾಲದ ಏರಿಳಿತದೊಂದಿಗೆ ಸಂವೇದನೆಯೊಂದಿಗೆ ಸಂಸ್ಕೃತಿಯ ಅಲೆಯೂ ಸಾಮಾಜಿಕ ವ್ಯವಸ್ಥೆಯನ್ನು ಆಪ್ತವನ್ನಾಗಿಸಿದ್ದು, ಆತಂಕಕ್ಕೆ ಈಡು ಮಾಡಿದ್ದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಜನರಲ್ಲಿ ಹಿಂದಿರುತ್ತಿದ್ದಷ್ಟು ಮಟ್ಟದ ಸಂಸ್ಕೃತಿ ಮತ್ತು ಸಂವೇದನಶಕ್ತಿ ಇಲ್ಲವೆನ್ನುವುದು ಇಂದಿನ ಕೊರಗಾಗಿದೆ. ಈ ಕೊರಗನ್ನು ನೀಗಿಸುವಲ್ಲಿ ಭಾವ ಮತ್ತು ಆಲೋಚನೆಗಳ ಸಹಚರ್ಯದಿಂದ ಉದಯಿಸುವ ಸಾಹಿತ್ಯದ ಪಾತ್ರ ಅನನ್ಯವಾಗಿದೆ. ಇದು ಸಾಧ್ಯವಾಗಬೇಕಾದರೆ ಅಸಹಜವೂ ಅತಿಪಾಂಡಿತ್ಯಮಯವು ಆದ ಶಬ್ದಪ್ರಯೋಗ ಇರಬಾರದು. ಕಾರಣ, ಬರಹ ಸಮಕಾಲೀನ ಆಡುಮಾತಿಗೆ ಆದಷ್ಟು ಸಮೀಪವಾಗಿರಬೇಕು. ಇದರಿಂದ ಜಟಿಲವಾಗಿರುವ ಆಧುನಿಕ ಯುಗದ ಜೀವನವನ್ನು ಅಕ್ಷರದ ಅಂಗಳದಲ್ಲಿ ಪ್ರತಿಬಿಂಬಿಸಲು ಸಾಧ್ಯ. ಅಂತೆಯೇ ಮಾನವ ಜೀವನದ ಕ್ಷಣಿಕತೆಯನ್ನು ಅತೀವ ವಿಷಾದದಿಂದ ಧ್ಯಾನಿಸುವ, ಅದಕ್ಕೆ ಪರ್ಯಾಯವಾಗಿ ಚಿರಸ್ಥಾಯಿ ಸೌಂದರ್ಯವನ್ನು ಕಲೆ, ನಿಸರ್ಗಗಳಲ್ಲಿ ಕಾಣುವ ಕಾರ್ಯವನ್ನು ಸಾಹಿತ್ಯ ರೂಪಗಳು ಮಾಡುತ್ತ ಬಂದಿವೆ. ಇದರಲ್ಲಿ ಅರಬ್ ನ ಮರುಭೂಮಿಯಲ್ಲಿ ಅರಳಿದ ಗಜಲ್ ನ ಪಾತ್ರವನ್ನು ಅಲ್ಲಗಳೆಯಲಾಗದು. ಜೀವನದ ತಹೇಜಿಬ್ ಕಲಿಸುವ ಗಜಲ್ ಗೌರಿ ಇಂದು ಜಾಗತಿಕವಾಗಿ ಕಂಗೊಳಿಸುತ್ತ, ಪ್ರಾದೇಶಿಕವಾಗಿಯೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿರುವುದನ್ನು, ಮೂಡಿಸುತ್ತಿರುವುದನ್ನು ಕಾಣುತ್ತೇವೆ. ಇಂದು ಕನ್ನಡ ವಾಙ್ಮಯ ಲೋಕದಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಕೃಷಿಯಲ್ಲಿ ನಿರತರಾಗಿದ್ದಾರೆ. ಇಂಥಹ ಕೃಷಿಕರಲ್ಲಿ ಗಜಲ್ ಗೋ ಶ್ರೀ ಈಶ್ವರ ಮಮದಾಪೂರ ಅವರೂ ಒಬ್ಬರು.
ಈಶ್ವರ ಮಮದಾಪೂರ ಅವರು ಬೆಳಗಾವಿ ಜಿಲ್ಲೆಯ ಗೋಕಾಕದವರು. ಇವರು ೧೯೬೮ ರ ಜುಲೈ ೦೧ ರಂದು ವಿರೂಪಾಕ್ಷಪ್ಪ ಮತ್ತು ರತ್ನವ್ವ ದಂಪತಿಗಳ ಮಗನಾಗಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಗೋಕಾಕದಲ್ಲಿ ಮುಗಿಸಿದ ಇವರು ಟಿ.ಸಿ.ಹೆಚ್. ಪರೀಕ್ಷೆಯನ್ನು ಬೆಳಗಾವಿಯಲ್ಲಿ ಮುಗಿಸಿಕೊಂಡು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ೧೯೯೪ ರಿಂದ ಗೋಕಾಕ ತಾಲೂಕಿನ ನಲ್ಲಾನಟ್ಟಿ ಗ್ರಾಮ, ಗೋಕಾಕ ನಗರ ಮತ್ತು ಸಾವಳಗಿ ಗ್ರಾಮದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಕನಸಗೇರಿ ಎಂಬ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಶಿಕ್ಷಣದೊಂದಿಗೆ ಸಂಘಟನೆ, ಹೋರಾಟ, ಸಾಮಾಜಿಕ ಸೇವೆ ಹಾಗೂ ಸಾಹಿತ್ಯಿಕ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾವ್ಯ, ಹನಿಗವನ, ಚುಟುಕು, ಹೈಕು, ವಿಮರ್ಶೆ, ಸಂಶೋಧನೆ, ಅಂಕಣ ಬರಹ ಮತ್ತು ಗಜಲ್ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ, ಕನ್ನಡ ಸಾರಸ್ವತ ಲೋಕಕ್ಕೆ ಹಲವು ಅಮೂಲ್ಯ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ‘ಮಮದಾಪೂರ ಚುಟುಕುಗಳು’, ‘ಮಮದಾಪೂರ ಹನಿಗವಿತೆಗಳು’, ‘ಕಾವ್ಯಯಾನ,’ ಎಂಬ ಕವನ ಸಂಕಲನ, ‘ದಿಗಂತದ ಅಪ್ಪುಗೆ’, ಎಂಬ ಹೈಕು ಸಂಕಲನ, ಗೋಕಾಕ ತಾಲೂಕ ದರ್ಶನ (ಗದ್ಯ ಪುಸ್ತಕ) ಹಾಗೂ ‘ಗೋರಿಯೊಳಗಿನ ಉಸಿರು’, ಎಂಬ ಗಜಲ್ ಸಂಕಲನ….. ಮುಂತಾದವುಗಳನ್ನು ಹೆಸರಿಸಬಹುದು. ‘ಗುರುಮಾರ್ಗ’ ಶೈಕ್ಷಣಿಕ ಮಾಸಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಸೇವೆ ಸಲ್ಲಿಸಿ ನಿರಂತರ ಒಂದು ವರ್ಷ ಲೇಖನ ಬರೆದಿರುವುದು ಇವರ ಬರವಣಿಗೆಯ ವೃತ್ತಿಪರತೆಗೆ ಹಿಡಿದ ಕೈಗನ್ನಡಿಯಾಗಿದೆ. ಶ್ರೀಯುತರ ಅನೇಕ ಬರಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಉತ್ತಮ ಸಂಘಟಕರಾಗಿರುವ ಮಮದಾಪೂರ ಅವರು “ಸಾಹಿತ್ಯ ಚಿಂತನ ಕಮ್ಮಟ”ದ ಸಂಸ್ಥಾಪಕ ಮಾಜಿ ಸಂಚಾಲಕರಾಗಿದ್ದು , ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆಯನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಮಕ್ಕಳ ಸಾಹಿತ್ಯ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸಂಘ ..ಇವುಗಳೊಂದಿಗೆ ಹಲವು ವೇದಿಕೆಗಳಲ್ಲಿ ಸಕ್ರಿಯವಾಗಿದ್ದು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದಾರೆ. ಗೋಕಾಕ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿಗೆ ಮೂರು ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದು, ಸಧ್ಯ ತಾಲೂಕ ಗೌರವ ಅಧ್ಯಕ್ಷರಾಗಿದ್ದಾರೆ. ಸಿರಿಗನ್ನಡ ವೇದಿಕೆಯ ತಾಲೂಕಾ ಅಧ್ಯಕ್ಷರಾಗಿದ್ದ ಇವರು ಸಧ್ಯ ತಾಲೂಕಾ ಗೌರವಾಧ್ಯಕ್ಷರಾಗಿದ್ದಾರೆ. ತಾಲ್ಲೂಕು, ಜಿಲ್ಲೆ ಹಾಗೂ ನಾಡಿನ ಹಲವೆಡೆ ಆಯೋಜಿಸಿದ್ದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ, ಖ್ಯಾತ ಸಾಹಿತಿಗಳಿಂದ, ನಾಡಿನ ಗಣ್ಯರಿಂದ, ಮಠಾಧೀಶರಿಂದ ಸನ್ಮಾನಿತಗೊಂಡಿದ್ದಾರೆ. ಇವರ ಶಿಕ್ಷಕ ವೃತ್ತಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ನಾಡಿನ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಬೆಳಕು ಸಂಸ್ಥೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ನವ ಕರ್ನಾಟಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ (ರಿ.) ಬೆಂಗಳೂರು ಇವರಿಂದ “ಶಿಕ್ಷಣ ಸೇವಾ ರತ್ನ” ಪ್ರಶಸ್ತಿ, ಮುಂಬೈನ ಕನ್ನಡ ಸಂಘಗಳ ವತಿಯಿಂದ ಸನ್ಮಾನ ಹಾಗೂ “ಸಾಹಿತ್ಯ ಭೂಷಣ” ಪ್ರಶಸ್ತಿ, ನಾಡಿನ ಸಮಾಚಾರ ಪತ್ರಿಕೆ ಬಳಗದಿಂದ “ಕುವೆಂಪು ರತ್ನ” ಪ್ರಶಸ್ತಿ, ೨೦೧೮ ರಲ್ಲಿ ಮರಡಿಮಠ ಶ್ರೀ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಸಾಧನಾ ಪ್ರಶಸ್ತಿ ಪುರಸ್ಕಾರ, ೨೦೧೯ ರಲ್ಲಿ ಬೆಳಕು ಸಂಸ್ಥೆಯಿಂದ “ಬೆಳಕು ಕಾಯಕ ರತ್ನ” ಪ್ರಶಸ್ತಿ, ಸ್ನೇಹ ಸಂಗಮ ಬಳಗದಿಂದ “ಸ್ಫೂರ್ತಿ ರತ್ನ” ಪ್ರಶಸ್ತಿ, ೨೦೨೦ ರ ಜನೆವರಿ ತಿಂಗಳಲ್ಲಿ ಅಥಣಿಯ ವಿನೂತನ ವಿಚಾರ ವೇದಿಕೆ ವತಿಯಿಂದ “ಕವಿರತ್ನ” ಪ್ರಶಸ್ತಿ…. ಮುಂತಾದವುಗಳನ್ನು ಇಲ್ಲಿ ದಾಖಲಿಸಬಹುದು.
ಗಿಡವೊಂದರಲ್ಲಿ ಎಲೆ ಹೊಮ್ಮಿದಂತೆ ಸಹಜವಾಗಿ ಮೂಡದಿದ್ದರೆ ಅದು ಗಜಲ್ ಆಗಲಾರದು. ಸತತ ಬದಲಾವಣೆಗಳ ಭೌತಿಕ ವಾಸ್ತವದ ನಡುವೆ ಸ್ಥಿರತೆಗಾಗಿ ಶಾಯರ್ ಹಂಬಲಿಸಬೇಕು. ಪ್ರತಿಯೊಬ್ಬ ಸುಖನವರ್ ಅವರು ಸುಪ್ತಪ್ರಜ್ಞೆಯಲ್ಲೂ ಮುನ್ನಿನೆಲ್ಲ ಭಾವವನ್ನು ದಹಿಸಿ, ಭೂತದ ಹೊರೆಯಿಂದ ಮುಕ್ತವಾದ ಬಾನಿನಲ್ಲಿ ಹಾರುವ ಹಂಬಲ ಹೊಂದಿರಬೇಕು. ಎಷ್ಟರ ಮಟ್ಟಿಗೆ ಅದು ಸಾಧ್ಯವೋ ಅಷ್ಟು ಪ್ರತಿಭೆ ಗಜಲ್ ಗೋ ಅವರದು. ಪರಂಪರೆಯು ತನ್ನನ್ನು ಕಬಳಿಸದಂತೆ ನಡೆಸುವ ಹೋರಾಟವೇ ಗಜಲ್ ನ ಅನನ್ಯತೆಯನ್ನು ರೂಪಿಸುತ್ತದೆ. ಈ ದಿಸೆಯಲ್ಲಿ ಒಲುಮೆಯ ಪಾವಿತ್ರ್ಯ ಮತ್ತು ಕಲ್ಪನೆ ಸೃಷ್ಟಿಸುವ ಸತ್ಯದ ಕುರಿತು ಗಜಲ್ ಕಾರರು ಅಪಾರ ಭರವಸೆ ಇಟ್ಟುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾವ ತೀವ್ರತೆ, ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ಸಾಮರಸ್ಯ, ಹಸಿವು, ಸಾವು-ನೋವು, ಪ್ರಾಣಿದಯೆ, ಕಾರ್ಮಿಕರ ನೋವು, ಬಂಡವಾಳಶಾಹಿಯ ಅಟ್ಟಹಾಸ, ಮನುಷ್ಯನ ವಿಕೃತಿ, ಸಿದ್ದಾಂತಗಳ ತಾಕಲಾಟ, ಮನುಷ್ಯ ಸಂವೇದನೆ…. ಮುಂತಾದ ಲೋಕಾಂತದ ಭಾವನೆಗಳೊಂದಿಗೆ ಪ್ರೀತಿ, ಪ್ರೇಮ, ಪ್ರಣಯ ಹಾಗೂ ವಿರಹದಂತ ಮೆದು ಭಾವಗಳೂ ಗಜಲ್ ಗೋ ಈಶ್ವರ ಮಮದಾಪೂರ ಅವರ ಗಜಲ್ ಗಳಲ್ಲಿ ಮುಪ್ಪುರಿಗೊಂಡಿವೆ. ನಮ್ಮ ಬಾಳಿಗೆ ನಾವೇ ಶಿಲ್ಪಿಗಳು ಎಂಬ ಧೋರಣೆಯನ್ನು ಪುಷ್ಟೀಕರಿಸುವ ಅವರ ಗಜಲ್ ನ ಷೇರ್ ಅನ್ನು ಇಲ್ಲಿ ಗಮನಿಸಿ ಮುಂದೆ ಸಾಗಬಹುದು.
“ಜ್ಞಾನದ ಬೆಳಕು ಮೂಡಬೇಕಾಗಿದೆ ನನ್ನೊಳಗಿಂದು
ಅಜ್ಞಾನದ ಕತ್ತಲೆ ಕಳೆಯಬೇಕಾಗಿದೆ ನನ್ನೊಳಗಿಂದು”
ಜ್ಞಾನ-ಅಜ್ಞಾನ ಎಂಬುವವು ಒಂದೇ ನಾಣ್ಯದ ಎರಡು ಮುಖಗಳು. ಇವುಗಳು ನಮ್ಮೊಳಗಿದ್ದು ನಮ್ಮನ್ನು ನಿಯಂತ್ರಿಸುತ್ತವೆ, ಮುನ್ನಡೆಸುತ್ತವೆ. ಇದನ್ನು ಗಜಲ್ ಗೋ ಮಮದಾಪೂರ ಅವರು ತಾತ್ವಿಕ ನೆಲೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ನೇಸರನ ಕಿರಣಗಳು ಭೂಲೋಕಕ್ಕೆ ಬೆಳಕು ನೀಡಿದರೆ, ನಮ್ಮೊಳಗಿನ ಅರಿವು ನಮ್ಮನ್ನು ಆವರಿಸಿದ ಕತ್ತಲೆಯನ್ನು ತೊಡೆದು ಹಾಕಿ ಬೆಳಕಿನ ಸಾಕ್ಷಾತ್ಕಾರವನ್ನು ಮಾಡಿಸುತ್ತದೆ ಎಂದಿದ್ದಾರೆ. ಇದೊಂದು ಸರಳವಾದ ಹಾಗೂ ಅಷ್ಟು ಸರಳವಾಗಿ ಅನುಸರಿಸಲು ಆಗದ ಚಿಂತನೆಯಾಗಿದೆ. ಇದು ಕ್ಲೌಡ್ ಎಫೆಕ್ಟ್ ಸಿದ್ದಾಂತವನ್ನು ಒಳಗೊಂಡಿದೆ.
ಶ್ರೀಮಂತಿಕೆ ಎಂಬ ಜಗಮಗಿಸುವ ದೀಪವನ್ನು ಅದರ ಕೆಳಗಿರುವ ಕತ್ತಲು ಸದಾ ಅಣಕಿಸುತ್ತಿರುವುದು ಡಯಲೆಕ್ಟಿಕ್ ಥೇರಿಯಾಗಿದೆ. ಇದನ್ನು ಈ ಮುಂದಿನ ಷೇರ್ ಪ್ರತಿಧ್ವನಿಸುತ್ತಿದೆ. ಹಲವು ಬಾರಿ ಬದುಕಬೇಕು ಎನ್ನುವ ಆಸೆಯೆ ಬಾಳಿನಂಗಳದಲ್ಲಿ ಕಮರಿ ಹೋಗುತ್ತಿರುತ್ತದೆ. ಇದಕ್ಕೆಲ್ಲ ಕಾರಣವೆಂದರೆ ಅಸಹಾಯಕತೆಯ ಮನೋಬಲ, ಉಳ್ಳವರ ಹಣದ ಕಪಿಮುಷ್ಠಿ!! ಆರ್ಥಿಕ ಅಸಮಾನತೆ ಸಾಮಾಜಿಕ ವ್ಯವಸ್ಥೆಯಲ್ಲಿ ಕಂದಕವನ್ನು ಉಂಟುಮಾಡುತ್ತ ಅಶಾಂತಿಗೆ ಮುನ್ನುಡಿ ಬರೆಯುತ್ತಿರುವುದನ್ನು ಸುಖನವರ್ ಅವರು ಇಲ್ಲಿ ವಿಷಾದಿಸಿದ್ದಾರೆ.
“ದುಡಿಯುವ ವರ್ಗಕ್ಕೆ ಆಸೆಯೇ ಇಲ್ಲದಂತಾಗಿದೆ
ಮಾಲೀಕರು ಹೊರ ದಬ್ಬಿದಾಗ ನೆಲೆಗಳು ಕುಸಿಯುತ್ತಿವೆ”
ಮಾಲೀಕರು ಹಾಗೂ ಕಾರ್ಮಿಕರು ಒಬ್ಬರಿಗೊಬ್ಬರು ಪೂರಕವಾಗಿ ಇದ್ದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ. ಬಂಡವಾಳಶಾಹಿಯ ಅಟ್ಟಹಾಸಕ್ಕೆ ದುಡಿಯುವ ವರ್ಗ ನಲುಗಿ ಹೋಗುತ್ತಿರುವ ಪರಿ ಕಣ್ಣ ಮುಂದೆ ರಾಚುವಂತೆ ಈ ಮೇಲಿನ ಷೇರ್ ವಿಷದಿಕರಿಸುತ್ತಿದೆ.
ನೋವು ಮತ್ತು ನಲಿವು, ಪ್ರೀತಿ ಮತ್ತು ಸಂಕಟ, ಸುಖ ಮತ್ತು ಸಾವುಗಳ ನಡುವಿನ ಬೇರ್ಪಡಿಸಲಾಗದ ಬಂಧವೆ ಗಜಲ್ ನ ತಿರುಳು. ಯಾತನೆ ಎಂದರೇನೆಂದು ಎಂಬುದನ್ನು ಅನುಭವ ಮಾಡಿಸುವ, ಗಾಯಕ್ಕೆ ಮುಲಾಮು ಹಚ್ಚುವ ವಿಶೇಷತೆ ಗಜಲ್ ಕರಗತ ಮಾಡಿಕೊಂಡಿದೆ. ಇಂಥಹ ಗಜಲ್ ಲೋಕ ಶ್ರೀ ಈಶ್ವರ ಮಮದಾಪೂರ ಅವರಿಂದ ಮತ್ತಷ್ಟು ಮೊಗೆದಷ್ಟೂ ಪ್ರಕಾಶಿಸಲಿ ಎಂದು ಶುಭ ಹಾರೈಸುತ್ತೇನೆ.
“ಪ್ರೀತಿ ಗಾಯವೂ ಹೌದು ಮುಲಾಮು ಹೌದು
ಮೌನವೂ ಹೌದು ಪಿಸುಮಾತೂ ಹೌದು”
–ಅರ್ಶ್ ಮಲಶಿಯಾನಿ
ಹೂಬನದಲ್ಲಿ ಸುತ್ತಾಡುತಿದ್ದರೆ ಕಾಲುಗಳೂ ದಣಿಯವು, ಮನವೂ ತಣಿಯದು!! ಈ ಗಜಲ್ ಜನ್ನತ್ ಅಂದರೇನೆ ಹಾಗೆ, ಇಂಗದ ದಾಹ, ಸಾಕೆನಿಸದ ಮೋಹ. ಆದರೂ….ಬೇಲಿ ಹಾಕುವ ಕಾಲದ ಮುಂದಿರುವ ಮುಸಾಫಿರ್ ನಾನು. ಇಂದು ಹೋಗಿ, ಮತ್ತೆ ಮುಂದಿನ ಗುರುವಾರ ತಮ್ಮ ಪ್ರೀತಿಯನ್ನರಸುತ ಬರುವೆ.. ಹೋಗಿ ಬರುವೆ, ಬಾಯ್.. ಟೇಕ್ ಕೇರ್ ದೋಸ್ತೊ…
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಧನ್ಯವಾದಗಳು sir ತಮ್ಮೆಲ್ಲರಿಗೂ