ಕಾವ್ಯ ಸಂಗಾತಿ
ರಾಜನ ಪ್ರತಿಮೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಕೆಲವು ವ್ಯಕ್ತಿಗಳೇ ಹಾಗೆ
ಅಸಹಜ ತೆವಲು ಭರಿತ
ಮೂಟೆ ಹೊತ್ತ ತಿಕ್ಕಲರು
ಒಂದು ಕಾಲದ ಭರತವರ್ಷದ
ಕಿರಿದಾದೊಂದು ರಾಜ್ಯದಲಿ
ಅಂಥ ತೆವಲುಗಳ ಗೆದ್ದಲು
ಮೈ ಮುತ್ತಿದ್ದ ತಿಕ್ಕಲ ರಾಜ
ಆ ರಾಜ್ಯದಲೊಂದು ಪರ್ವತ
ಬಹುತೇಕ ಹಿಮಾಲಯದೆತ್ತರ!
ರಾಜನ ಕನಸಲೊಮ್ಮೆ ತನ್ನ
ಬೃಹದಾಕಾರ ಪ್ರತಿಮೆ ಕಂಡ
ಮಾರನೆ ದಿನ ಡಂಗುರ
ರಾಜ್ಯಾದ್ಯಂತ ಮೊಳಗಿತು
ಅಂಥ ಒಬ್ಬ ಚತುರ ಶಿಲ್ಪಿಗಾಗಿ
ಅಂತೂ ಸಾಹಸಿಗನೊಬ್ಬ
ಅರಮನೆ ಬಾಗಿಲು ಬಡಿದ
ಪ್ರತಿಮೆ ಪರ್ವತ ಮೀರಿ
ಎತ್ತರ ನಿಂತು ದಿನನಿತ್ಯ
ಪರ್ವತ ನಾಚಿಸಬೇಕು
ಇಂಥ ಕಟ್ಟುನಿಟ್ಟಿನ ಆದೇಶ
ಅಮೃತಶಿಲೆ ಆಮದಾಯಿತು
ಪರ ರಾಜ್ಯ ವಿದೇಶದಿಂದ
ಕೆಲ ವರುಷ ಹಗಲಿರುಳು
ಕುಶಲ ಕೆತ್ತನೆ ಕಡೆದು
ಶಿಲ್ಪಿ ಎದ್ದು ನಿಲ್ಲಿಸಿದ
ಆಜಾನುಬಾಹು ಕಲ್ಲು ರಾಜ
ರಾಜ್ಯದೆಲ್ಲ ಕಲ್ಲು ಪ್ರತಿಮೆಗಳರಸನ
ಪರ್ವತ ಮೀರಿದೆತ್ತರ
ಮತ್ತು ಇದೀಗ ಕುಬ್ಜ ಪರ್ವತ
ಕಂಡ ಕಲ್ಲು ರಾಜ
ಗಹಗಹಿಸಿ ಅಣಕಿಸಿದ ತದೇಕ!
ರಾಜನಾದೇಶದ ಜನತೆಗೆ
ದರ್ಶನ ಪಡೆಯಲು
ನೂಕುನುಗ್ಗಲಿನಲಿ ಪ್ರಜೆಗಳು
ದರ್ಶಿಸಿದರು ಹಗಲಿರುಳು
ಒಮ್ಮೆ ದಿಢೀರಂತ ಭೂಕಂಪ
ಬಡಿದು ಭೂಮಿ ಗಡಗಡ ನಡುಗಿ
ರಾಜನ ಕಲ್ಲು ಪ್ರತಿಮೆ ನೆಲಕ್ಕುರುಳಿ
ಅಮೃತಶಿಲೆ ಚೂರು ಚೂರು ರಾಶಿ
ಪಕ್ಕದ ಪರ್ವತ ನಡುಗಲಿಲ್ಲ
ಮತ್ತು ಛಿದ್ರ ಪ್ರತಿಮೆ ಕಂಡು
ಅಣಕವಾಡಲಿಲ್ಲ
ನಿಂತ ಭಂಗಿಯಲೆ ನಿಂತಿತ್ತು…