
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಉನ್ನತ ಶಿಕ್ಷಣವೇ ಬದುಕಿನ ಧ್ಯೇಯವಲ್ಲ

ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲ ಎಂದು ತನ್ನ ಮಗಳನ್ನು ಥಳಿಸಿ ಆಕೆಯ ಸಾವಿಗೆ ಕಾರಣವಾಗಿರುವ ವ್ಯಕ್ತಿ ಇದೀಗ ಜೈಲು ಪಾಲಾಗಿದ್ದಾನೆ. ಪತ್ನಿಯ ದೂರಿನ ಮೇರೆಗೆ ಜೈಲು ಸೇರಿರುವ ಆತ ಕಾಲೇಜ್ ಒಂದರಲ್ಲಿ ಪ್ರಾಂಶುಪಾಲನಾಗಿದ್ದ. ಸಾವಿರಾರು ಮಕ್ಕಳ
ಶೈಕ್ಷಣಿಕ ಅಭಿವೃದ್ಧಿಗೆ ಮಾರ್ಗದರ್ಶಕನಾಗಬೇಕಾದ ವ್ಯಕ್ತಿ ಕೇವಲ ತನ್ನ ಮಗಳು ನೀಟ್ ಪರೀಕ್ಷೆಗೆ ಬೇಕಾದ ಅರ್ಹತೆಯನ್ನು ಗಳಿಸಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಸಾಯುವಂತೆ ಹೊಡೆಯುವ ರಾಕ್ಷಸೀ ಪ್ರವೃತ್ತಿಗೆ ಇಳಿದದ್ದೇಕೆ?
ಮತ್ತೊಬ್ಬ ವಿದ್ಯಾರ್ಥಿ ‘ಇನ್ನು ನನಗೆ ಸಾಧ್ಯವಿಲ್ಲ’ ಎಂದು ಹೇಳಿ ಪಾಲಕರಿಗೆ ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒತ್ತಡದಿಂದ ತಮ್ಮ ತಲೆ ಸಿಡಿಯುತ್ತಿದ್ದು ತಾವು ಬದುಕಿನಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಹತಾಶ ಭಾವದಿಂದ ಕೂಡ ಹಲವಾರು ಮಕ್ಕಳು ಆತ್ಮಹತ್ಯೆಗೆ ಎಳಸುತ್ತಿದ್ದಾರೆ.
ರಾಜಸ್ಥಾನದ ಕೋಟ ಜಿಲ್ಲೆಯಲ್ಲಿನ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಹಲವಾರು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಎಳಸುತ್ತಾರೆ. ದೇಶದ ಉಳಿದ ತರಬೇತಿ ಕೇಂದ್ರಗಳು ಕೂಡ ಇದಕ್ಕೆ ಹೊರತಲ್ಲ.
10ನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದರೆ ನಿನಗೆ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ದೊರೆಯುತ್ತದೆ, ಬದುಕು ಸೆಟಲ್ ಆಗುತ್ತದೆ ಎಂದು ಹೇಳುವ ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ರೀತಿಯ ಆಟ, ಮನರಂಜನೆಗಳಿಗೆ ಅವಕಾಶ ನೀಡದೆ ಟ್ಯೂಷನ್ ಗಳಿಗೆ, ಕೋಚಿಂಗ್ ಕ್ಲಾಸ್ ಗಳಿಗೆ ಕಳುಹಿಸಿ
ಅವರು ಹೆಚ್ಚಿನ ಅಂಕ ಗಳಿಸಲು ಒತ್ತಡ ಹೇರುತ್ತಾರೆ. ಪಾಲಕರ ಇಚ್ಛೆಯ ಭವ್ಯ ಭವಿಷ್ಯದ ಕನಸನ್ನು ಹೊತ್ತ ಮಕ್ಕಳು ತಮಗರಿವಿಲ್ಲದೆ ಒತ್ತಡಕ್ಕೆ ಒಳಗಾಗುತ್ತಾರೆ. ಅಂತೂ ಇಂತೂ ಅವಿರತ ಪ್ರಯತ್ನದ ಫಲವಾಗಿ 10ನೇ ತರಗತಿಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದು ಒಳ್ಳೆಯ ಕಾಲೇಜುಗಳಿಗೆ ಪ್ರವೇಶ ಪಡೆಯುವ ಮಕ್ಕಳು ಅಲ್ಲಿಯೂ ಕೂಡ ಪಿಯುಸಿಯ ಎರಡು ವರ್ಷಗಳನ್ನು ತಪಸ್ಸಿನಂತೆ ಓದು, ವಿದ್ಯಾಭ್ಯಾಸಗಳಲ್ಲಿ ಕಳೆದು ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದು ವೃತ್ತಿಪರ ಕೋರ್ಸ್ ಗಳಿಗೆ ಸೇರಿಕೊಳ್ಳಲು ಮಕ್ಕಳನ್ನು ಒಂದೇ ಸಮನೆ ಬೆನ್ನಟ್ಟುತ್ತಾರೆ. ಎಷ್ಟೋ ಬಾರಿ ವಿಜ್ಞಾನ ಮತ್ತು ಗಣಿತ ವಿಷಯಗಳು ಕಬ್ಬಿಣದ ಕಡಲೆ ಎಂದು ಭಾವಿಸುವ ಮಕ್ಕಳನ್ನು ಕೂಡ ವಿಜ್ಞಾನ ವಿಷಯವನ್ನು ತೆಗೆದುಕೊಳ್ಳಲು ಒತ್ತಾಯಪೂರ್ವಕವಾಗಿ ಒಪ್ಪಿಸುವ ಪಾಲಕರು ಮಗುವಿನ ಮಾನಸಿಕ ಸ್ಥಿತಿಯ ಕುರಿತು ಅಜ್ಞರಂತೆ ವರ್ತಿಸುತ್ತಾರೆ.
ನಮ್ಮ ದೇಶದಲ್ಲಿ ಅತ್ಯಂತ ಪ್ರತಿಷ್ಠಿತ ಎಂದು ಹೇಳಲ್ಪಡುವ ಐಐಟಿ, ಮೆಡಿಕಲ್, ಇಂಜಿನಿಯರಿಂಗ್, ಕೆಎಎಸ್, ಐಎಎಸ್ ಮುಂತಾದ ವೃತ್ತಿಪರ ಪರೀಕ್ಷೆಗಳನ್ನು ಪಾಸಾಗಿ ಉನ್ನತ ಹುದ್ದೆ, ಹಣ ಗೌರವವನ್ನು ಸಂಪಾದಿಸಬೇಕೆಂಬ ಆಶಯದಿಂದ ಪ್ರತಿ ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ಪ್ರವೇಶ ಬಯಸುತ್ತಾರೆ, ಇದೊಂದು ರೀತಿಯ ರೇಸಿನಂತೆ. ಮುಂದೆ ಬಂದವರು ಉನ್ನತ ಹುದ್ದೆಗಳಿಗೆ ಇರುತ್ತಾರೆ ಎಂಬುದೇನೋ ನಿಜ. ಎಷ್ಟೋ ಬಾರಿ ಕಠಿಣ ತರಬೇತಿ, ಅಪಾರ ಶ್ರದ್ಧೆ ಮತ್ತು ಪರಿಣತಿಯ ನಂತರವೂ ಕೆಲವು ಜನ ಈ ಪರೀಕ್ಷೆಗಳಲ್ಲಿ ಪಾಸ್ ಆಗುವುದು ಅಸಾಧ್ಯ. ಪ್ರತಿ ವರ್ಷವೂ 20 ಸಾವಿರಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಈ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳು ಕಾರಣವಾಗಿವೆ.
ಕೇವಲ ಪರೀಕ್ಷೆಯ ಕಾಠಿಣ್ಯತೆಯೊಂದೇ ಮಕ್ಕಳ ಆತ್ಮಹತ್ಯೆಗೆ ಕಾರಣವಲ್ಲ. ಪಾಲಕರ ಆಸೆ ಆಕಾಂಕ್ಷೆ ಮತ್ತು ಮಕ್ಕಳ ಅತಿಯಾದ ಆಶಯ ಅವರನ್ನು ಈ ನಿಟ್ಟಿನಲ್ಲಿ ಸೆಳೆಯುತ್ತದೆ. ಪಾಸ್ ಆಗಲೇಬೇಕೆಂಬ ಒತ್ತಡ ಪಾಸಾಗದಿದ್ದರೆ ಸ್ನೇಹಿತರು ಸರೀಕರಲ್ಲಿ ಅವಮಾನಗಳು, ಪರೀಕ್ಷೆಯಲ್ಲಿ ಪಾಸಾಗದಿದ್ದರೆ ತಮ್ಮ ಆಶಯದ ಹುದ್ದೆ ತಮಗೆ ದೊರೆಯುವುದಿಲ್ಲ ಎಂಬ ಹತಾಶ ಭಾವ ಅವರನ್ನು ಈ ರೀತಿಯ ಕೃತ್ಯಗಳಿಗೆ ಈಡು ಮಾಡುತ್ತದೆ.
ಮತ್ತೆ ಕೆಲ ಮಕ್ಕಳು ತಮ್ಮ ಪಾಲಕರ ಒತ್ತಾಯಕ್ಕೆ ಈ ರೀತಿಯ ತರಬೇತಿಗಳಿಗೆ ಹಾಜರಾಗಿದ್ದು ಅವರಿಗೆ ಎಳ್ಳಷ್ಟು ಈ ತರಬೇತಿಗಳಲ್ಲಿ ಆಸಕ್ತಿ ಇಲ್ಲದೆ ಹೋದಾಗ ಅವರು ಆತ್ಮಹತ್ಯೆಗೆ ಶರಣಾದದ್ದು ಉಂಟು. ನೀಟ್ ಪರೀಕ್ಷೆಯನ್ನು ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಯು ವೈದ್ಯನಾಗಲು ಸಾಧ್ಯವಿಲ್ಲ. ಐಎಎಸ್ ತರಬೇತಿ ಪಡೆಯುವ ಪ್ರತಿ ವಿದ್ಯಾರ್ಥಿಯು ಜಿಲ್ಲಾಧಿಕಾರಿಯಾಗಲು ಸಾಧ್ಯವಿಲ್ಲ….. ಪ್ರಯತ್ನ ಮಾಡಬಹುದು ಆದರೆ ಪ್ರತಿ ಪ್ರಯತ್ನಕ್ಕೂ ಫಲ ದೊರೆಯುತ್ತದೆ ಎಂದು ಹೇಳುವಂತಿಲ್ಲ.
ಬದುಕಿಗೆ ಶಿಕ್ಷಣ ಬೇಕು ನಿಜ, ಆದರೆ ಶಿಕ್ಷಣವೇ ಬದುಕಲ್ಲ. ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಣ ನಮಗೆ ನೆರವನ್ನು ನೀಡುತ್ತದೆ , ಹಾಗೆಂದು ಶಿಕ್ಷಣವಿಲ್ಲದ ವ್ಯಕ್ತಿ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದರ್ಥವಲ್ಲ.
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅತ್ಯಂತ ಚಿಕ್ಕ ಅಂಗಡಿಯನ್ನು ಹೊಂದಿರುವ ವ್ಯಕ್ತಿಯೂ ಕೂಡ ತಿಂಗಳಿಗೆ ಲಕ್ಷಾಂತರ ದುಡಿಯುತ್ತಾನೆ. ಹೈಸ್ಕೂಲನ್ನು ಕೂಡ ದಾಟಿರದ ಅವರು ಲೆಕ್ಕ ಮಾಡುವುದರಲ್ಲಿ ಅಪ್ರತಿಮರಾಗಿರುತ್ತಾರೆ. ಇನ್ನು ಗ್ರಾಹಕರನ್ನು ಸೆಳೆಯುವ ವಿಷಯದಲ್ಲಿ ಅವರಿಗೆ ಅವರೇ ಸಾಟಿ. ಲೀಲಾಜಾಲವಾಗಿ ನಾಲ್ಕಾರು ಭಾಷೆಗಳನ್ನು ಮಾತನಾಡುವ, ಒಳ್ಳೆಯ ವ್ಯವಹಾರ ಪ್ರಜ್ಞೆಯುಳ್ಳ ದಿನದ ಬಹುಪಾಲು ಸಮಯವನ್ನು ತಮ್ಮ ಉದ್ಯೋಗ ಮತ್ತು ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಲು ವಿನಿಯೋಗಿಸುವ ಅವರು ಯಾವುದೇ ಐಟಿ ಉದ್ಯೋಗಿಗಳಿಗೆ ಕಡಿಮೆ ಇಲ್ಲದಂತೆ ಹಣ ಗಳಿಸುತ್ತಾರೆ. ಮೂಲಭೂತ ಶಿಕ್ಷಣ ಮಾತ್ರ ಅವರಿಗಿರುತ್ತದೆ.
ದೊಡ್ಡ ದೊಡ್ಡ ಮ್ಯಾನೇಜ್ಮೆಂಟ್ ಕಾಲೇಜುಗಳಲ್ಲಿ ಹೇಳಿಕೊಡುವ ಪಾಠಗಳನ್ನು ಚಿಕ್ಕಂದಿನಿಂದಲೇ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಯಶಸ್ವಿಯಾಗಿರುವ ಸಹಸ್ರಾರು ವ್ಯಾಪಾರಿಗಳನ್ನು ನಾವು ನೋಡುತ್ತಿದ್ದೇನೆ.
ಶಿಕ್ಷಣ ನಮಗೆ ಒಳ್ಳೆಯ ಜ್ಞಾನ, ವ್ಯವಹಾರ ಪ್ರಜ್ಞೆ, ಉತ್ತಮ ಸಂಬಳ ಕೆಲ ಉನ್ನತ ಗುರಿಗಳನ್ನು ಸಾಧಿಸುವ, ಐಷಾರಾಮಿ ಸುಖ ಭೋಗಗಳನ್ನು ತಂದುಕೊಡುತ್ತದೆ ಎಂದು ಭಾವಿಸುವ ಪಾಲಕರೇ ನಿಮ್ಮ ಮಕ್ಕಳು ನಿಮ್ಮ ಕನಸುಗಳನ್ನು ಹೊರುವ ಕತ್ತೆಗಳಲ್ಲ. ನಿಮ್ಮ ಆಸೆ ಆಕಾಂಕ್ಷೆಗಳು ಅವರಿಗೆ ಹೊರೆಯಾಗಬಾರದು. ಮುಖ್ಯವಾಗಿ ಅವರಿಗೆ ಆ ವಿಷಯದಲ್ಲಿ ಅನಾಸಕ್ತಿ ಇದ್ದರೆ ಅವರನ್ನು ಒತ್ತಾಯಿಸುವುದರಲ್ಲಿ ಅರ್ಥವಿಲ್ಲ.
ನಮ್ಮ ಮಕ್ಕಳು ನಮ್ಮವರಲ್ಲ. ನಮ್ಮ ಮಕ್ಕಳು ನಮ್ಮ ಬದುಕೆಂಬ ಬಿಲ್ಲಿನಿಂದ ಬಿಡಲ್ಪಟ್ಟ ಬಾಣಗಳು ಆ ಬಾಣಗಳು ಎಲ್ಲಿ ಹೋಗಿ ತಲುಪುತ್ತವೆ ಎಂಬುದು ನಮಗೆ ಅರಿವಿಲ್ಲ. ನಮ್ಮ ಮಕ್ಕಳು ನಮ್ಮ ಮನೆಗಳಲ್ಲಿ ವಾಸಿಸುತ್ತಿದ್ದಾರೆ,ನಿಜ ಆದರೆ ನಮ್ಮ ಮಕ್ಕಳಿಗೆ ಅವರದ್ದೇ ಅದ ಭವಿಷ್ಯದ ಮನೆಗಳಿವೆ ಆ ಮನೆಗಳನ್ನು ನಾವು ನಮ್ಮ ಕನಸಿನಲ್ಲಿಯೂ ನೋಡಲು ಸಾಧ್ಯವಿಲ್ಲ ಎಂಬ ಖಲೀಲ್ ಗಿಬ್ರಾನ್ ನ ಕವನದ ಮಾತುಗಳನ್ನು
ನಾವು ಇಲ್ಲಿ ಖಂಡಿತವಾಗಿಯೂ ನೆನಪಿಡಬೇಕು.
ನಮ್ಮ ಕನಸುಗಳನ್ನು ಆಸೆ ಆಕಾಂಕ್ಷಿಗಳನ್ನು ನಾವು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಅದನ್ನು ಪೂರೈಸಲೇಬೇಕೆಂದು ನಮ್ಮ ಮಕ್ಕಳ ಮೇಲೆ ಒತ್ತಾಯ ಹೇರುವುದು ಎಷ್ಟರಮಟ್ಟಿಗೆ ಸರಿ. ಮತ್ತೆ ಕೆಲ ಪಾಲಕರು ತಮ್ಮ ಬಡತನದ ದಿನಗಳನ್ನು ನೆನೆದು ನನ್ನ ಮಕ್ಕಳಿಗೆ
ಅಂತಹ ಕಷ್ಟವೇನೂ ಇಲ್ಲ. ಎಲ್ಲವನ್ನು ಅವರು ಕುಳಿತಲ್ಲಿಯೇ ಒದಗಿಸುತ್ತೇನೆ. ಒಳ್ಳೆಯ ಅಂಕಗಳನ್ನು ಪಡೆಯಲು ಇನ್ನೇನು ದಾಡಿ ! ಎಂದು ಬೇಸರಪಟ್ಟುಕೊಳ್ಳುತ್ತಾರೆ.
ಒಳ್ಳೆಯ ಆಹಾರ ವಿಹಾರ ವಸತಿ ಳು ಇದ್ದ ಮಾತ್ರಕ್ಕೆ ಎಲ್ಲ ಮಕ್ಕಳು ನೂರಕ್ಕೆ ನೂರು ಅಂಕಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಅಕ್ಷರಶಃ ಸುಳ್ಳು.
ಪ್ರತಿಯೊಂದು ಮಗುವಿಗೂ ತನ್ನದೇ ಆದ ಮನೋ ದೈಹಿಕ ಸಾಮರ್ಥ್ಯವಿರುತ್ತದೆ ಅಂತೆಯೇ ಬುದ್ದಿ ಸಾಮರ್ಥ್ಯವು ಕೂಡ. ಪ್ರಯತ್ನ ಮಾಡುವ ಮೂಲಕ ಕೆಲ ಪರ್ಸೆಂಟುಗಳಷ್ಟು ಬುದ್ಧಿಯನ್ನು ಹೆಚ್ಚಿಸಿಕೊಳ್ಳಬಹುದು, ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯಲೂಬಹುದು ಆದರೆ ಸೀಟು ಸಿಗದೇ ಇರಲು ಕಾರಣ ನಿಜವಾಗಿಯೂ ಆಸಕ್ತಿಯನ್ನು ಹೊಂದಿ ಅಗತ್ಯಕ್ಕಿಂತ ತುಸು ಹೆಚ್ಚೇ ಶ್ರಮ ವಹಿಸಿ ಓದಿದ ವಿದ್ಯಾರ್ಥಿ ಇವರಿಗಿಂತ ತುಸು ಹೆಚ್ಚು ಅಂಕಗಳನ್ನು ಪಡೆದು ಮಂಚೂಣಿಯಲ್ಲಿ ಇರುತ್ತಾನೆ. ಆತನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕಲ್ಲವೇ?
ಯಾವುದೇ ದೃಷ್ಟಿಕೋನದಿಂದ ನೋಡಿದರೂ ಕೂಡ ಅಂಕಗಳು ನಮ್ಮ ಬದುಕನ್ನು ಅಳೆಯುವ ಮಾನದಂಡಗಳಲ್ಲ. ಹೊಳೆ ದಾಟಲು ನಮಗೆ ಹುಟ್ಟಿನ ಅವಶ್ಯಕತೆ ಇದೆ ಆದರೆ ಹೊಳೆ ದಾಟಿದ ನಂತರ ನಾವು ನಮ್ಮದೇ ಆದ ರಸ್ತೆಯಲ್ಲಿ ನಡೆದು ಹೋಗಲು ನಮಗೆ ಬೇಕಾಗಿರುವುದು ನಮ್ಮದೇ ಕಾಲುಗಳು ಮಾತ್ರ.
ಅಂತೆಯೇ ಶೈಕ್ಷಣಿಕ ಅರ್ಹತೆಯು ನಮ್ಮ ಬದುಕಿನ ಸವಾಲುಗಳನ್ನು ಎದುರಿಸಲು ಒಂದು ಹರಿ ಗೋಲಿನಂತೆ ಆದರೆ ನೆಲದ ಮೇಲೆ ಹರಿಗೋಲಿಗೆ ಕೆಲಸವಿಲ್ಲ ಎಂಬುದನ್ನು ಪಾಲಕರು ಮರೆಯಬಾರದು.
ನಮ್ಮ ಮಕ್ಕಳು ಬದುಕಿನ ದೋಣಿಯಲ್ಲಿ ಸಾಗಲು
ಪ್ರೀತಿ, ವಿಶ್ವಾಸ, ಭರವಸೆಗಳನ್ನು ಅವರಲ್ಲಿ ತುಂಬಿ ನಾವು ಜೊತೆಗಿರುವ ಪ್ರಯತ್ನ ಮಾಡೋಣ. ಕರ್ಮ ಇಲ್ಲವೇ ಕೆಲಸ ಮಾತ್ರ ನಮ್ಮದು ಫಲಾಫಲ ಆ ಭಗವಂತನದ್ದು ಎಂಬ ತಾತ್ವಿಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರು ಬದುಕಿನಲ್ಲಿ ಮುಂದೆ ಸಾಗಲು ಬೇಕಾದ ಎಲ್ಲ ವ್ಯವಸ್ಥೆಗಳಿಗೆ ಸಹಾಯ ಹಸ್ತವನ್ನು ಚಾಚೋಣ ಜಯಶಾಲಿಗಳಾಗಲಿ ಎಂದು ಹಾರೈಸೋಣ.
ವೀಣಾ ಹೇಮಂತ್ ಗೌಡ ಪಾಟೀಲ್
