ಅಂಕಣ ಸಂಗಾತಿ

ಗಜಲ್ ಲೋಕ

ಸುಮನಾ ಹೇರ್ಳೆಯವರ ಗಜಲ್ ಚಿತ್ತಾರ..

ಗಜಲ್ ಗಂಗೆಯ ಉಗಮ ಸ್ಥಾನವೆ ನಮ್ಮ ಎದೆಯ ಎಡಭಾಗ. ರಸಿಕರ ತನು-ಮನವನ್ನು ಸಂತೈಸುತ್ತ ಇಡೀ ಲೋಕವನ್ನೇ ವ್ಯಾಪಿಸಿದೆ… ಇಂಥಹ ಗಜಲ್ ಜನ್ನತ್ ಕುರಿತು ಮಾತನಾಡುತಿದ್ದರೆ ಹುಣ್ಣಿಮೆಯ ಬೆಳದಿಂಗಳ ಫೀಲ್ ಆಗುತ್ತೆ…!! ಆ ಅನುಭಾವದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸು ಸದಾ ತುಡಿಯುತಿರುತ್ತದೆ. ಕರುನಾಡಿನ ಅಸಂಖ್ಯಾತ ಸುಖನವರ್ ರಲ್ಲಿ ಒಬ್ಬರ ಪರಿಚಯದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇನೆ. ಪ್ರೀತಿಯಿಂದ ನೀವೆಲ್ಲರೂ ಗಜಲ್ ಚಾಂದನಿಯನ್ನು ಸ್ವಾಗತಿಸುವಿರೆಂಬ ಭಾವನೆಯೊಂದಿಗೆ ನನ್ನ ಲೆಕ್ಕಣಿಕೆಗೆ ಚಾಲ್ತಿ ನೀಡುವೆ…!!

ಅವಳ ಮುಖದ ಹೊಳಪಿನ ಮುಂದೆ ಸರಳ ಎನಿಸಿತು

ಆಕಾಶದಲ್ಲಿ ಚಂದ್ರ ಪೂರ್ಣವಾಗಿದ್ದರೂ  ಅರ್ಧ ಎನಿಸಿತು” 

ಇಫ್ತಿಖಾರ ನಸೀಮ್

      ಭಾವನೆಗಳು ಜೀವಂತಿಕೆಯ ಪ್ರಮುಖ ಲಕ್ಷಣ. ಮನುಷ್ಯ ಮಾತ್ರವಲ್ಲ ಎಲ್ಲ ಜೀವಜಂತುಗಳಲ್ಲೂ ಭಾವನೆಗಳಿವೆ. ಭಾವನೆಗಳ ಹೊರತಾಗಿ ಜೀವಿಗೆ ಅಸ್ತಿತ್ವವೇ ಇಲ್ಲ. ಯಂತ್ರವಾಗಿ ಉಳಿಯುತ್ತಾನೆಯಷ್ಟೇ. ಭಾವನೆಗಳಿಲ್ಲದ ಜೀವಿ ಯಾವುದಾದರೂ ಇದ್ದರೆ ಅದು ಕಾಲಾಂತರದಲ್ಲಿ ನಶಿಸಿ ಹೋಗಿರುತ್ತಿತ್ತೇನೋ. ಹಾಗೇಯೇ ಮನುಷ್ಯ ಕೂಡ ಭಾವನೆಗಳಿಲ್ಲದಿದ್ದಲ್ಲಿ ನಶಿಸಿ ಹೋಗುತಿದ್ದನೇನೋ…!! ಈ ಭಾವನೆಗಳ ಜಾಡನ್ನು ಅರಸುತ್ತಾ ಹೋದರೆ ನಮಗೆ ‘ಮನಸ್ಸು’ ಎಂಬ ಪಾದರಸದ ಪರಿಚಯವಾಗುತ್ತದೆ. ಆಲೋಚನೆಯ ಪ್ರಕ್ರಿಯೆ ಅಥವಾ ಬುದ್ಧಿಯನ್ನು ‘ಮನಸ್ಸು’ ಎನ್ನಲಾಗುತ್ತದೆ. ಇದಕ್ಕೆ ಹಲವಾರು ಆಯಾಮಗಳಿವೆ. ಅವುಗಳಲ್ಲೊಂದು ತಾರ್ಕಿಕ ಆಯಾಮ. ಇನ್ನೊಂದು ಆಳವಾದ ಭಾವನಾತ್ಮಕ ಆಯಾಮ. ಮನಸ್ಸಿನ ಆಳವಾದ ಭಾವನಾತ್ಮಕ ಆಯಾಮವೇ ‘ಹೃದಯ’. ಇದು ಸ್ಮರಣೆಗಳ ಕೋಶವಾಗಿದ್ದು, ಭಾವನೆಗಳನ್ನು ನಿರ್ದಿಷ್ಟ ಸ್ವರೂಪಕ್ಕೆ ತರುತ್ತದೆ. ಇಂಥಹ ಹೃದಯವಂತಿಕೆಯಿಂದಲೇ ಸಾಂಸ್ಕೃತಿಕ ಲೋಕವು ಜೀವಂತವಾಗಿದೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ಜನಸಾಮಾನ್ಯರ ಮನಕ್ಕೆ ರವಾನಿಸುವ ಕೆಲಸವನ್ನು ಸಂಗೀತ ಮಾಡಿದೆ, ಮಾಡುತ್ತಿದೆ; ಮಾಡುತ್ತದೆ. ಅಂತೆಯೇ ಸಂಗೀತವು ಸಾಹಿತ್ಯದ ಒಂದು ಭಾಗವಾಗಿದ್ದು, ಕಾವ್ಯವನ್ನು ಅಜರಾಮರವಾಗಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.‌ ಗೇಯತೆಯ ನೆಲೆಯಲ್ಲಿ ಕಾವ್ಯ ಪ್ರಕಾರಗಳ ಕಡೆಗೆ ಗಮನ ಹರಿಸಿದರೆ ಮೇಹಫಿಲ್, ಮುಶಾಯರಾಗಳಿಂದಲೇ ಮನೆಮಾತಾಗಿರುವ ಗಜಲ್ ಮುಸ್ಕಾನ್ ನಮ್ಮ ಮನಸನ್ನು ಸೂರೆಗೊಳ್ಳುತ್ತದೆ. ಗಜಲ್ ಎನ್ನುವುದು ಪ್ರತಿ ಹೃದಯದ ಬಡಿತ ಎನ್ನುವಷ್ಟರ ಮಟ್ಟಿಗೆ ಇಂದು ಸಾರಸ್ವತ ಲೋಕದಲ್ಲಿ ಆವರಿಸಿದ್ದು, ಅಸಂಖ್ಯಾತ ಹೃದಯವಂತರು ಗಜಲ್ ಗಳನ್ನು ಬರೆಯುತ್ತಿದ್ದಾರೆ. ಅಂತವರಲ್ಲಿ ಶ್ರೀಮತಿ ಸುಮನಾ ಆರ್. ಹೇರ್ಳೆ ಅವರೂ ಒಬ್ಬರು.

        ಶ್ರೀಮತಿ ಸುಮನಾ ಹೇರ್ಳೆಯವರು ಉಡುಪಿ ಚಿತ್ರಪಾಡಿಯ ದಿ.ಕೆ. ಶಂಕರನಾರಾಯಣ ಸೋಮಯಾಜಿ ಮತ್ತು ದಿ.ಸಾವಿತ್ರಿಯವರ ಸುಪುತ್ರಿ. ಬಿ.ಎಸ್ಸಿ. ಪದವೀಧರೆಯಾದ ಇವರು ಕೈ ಹಿಡಿದದ್ದು ವಿಮಾ ಸಲಹೆಗಾರರಾಗಿ ಸ್ವಂತ ಉದ್ಯೋಗ ನಡೆಸುತ್ತಿರುವ ಶ್ರೀ ಪಿ. ರವೀಂದ್ರ ಹೇರ್ಳೆಯವರದ್ದು. ಮದುವೆಯ ಬಳಿಕ ಡಿ.ಸಿ.ಎ. ಮಾಡಿದ್ದಲ್ಲದೆ ಒಂದು ವರ್ಷ ಜೀವ ಶಾಸ್ತ್ರದ ಅಧ್ಯಾಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆ ಬರೆದಿರುವ ಇವರು ತೋಟಗಾರಿಕೆ, ಹೊಲಿಗೆ, ಕರಕುಶಲತೆ… ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವುಗಳೊಂದಿಗೆ ರಂಗಭೂಮಿ, ತಾಳ ಮದ್ದಳೆ ಹಾಗೂ ಯಕ್ಷಗಾನದಲ್ಲಿ ಆಸಕ್ತಿಯನ್ನು ಹೊಂದಿದ್ದು, ತಮ್ಮ ಅಭಿನಯದ ಮುಖಾಂತರ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ‘ಕೋಶಿಕಾ ಚೇರ್ಕಾಡಿ’ ಎಂಬ ರಂಗತಂಡ ಆಯೋಜಿಸಿದ್ದ “ಸಾಯೋ ಆಟ” ನಾಟಕದಲ್ಲಿ ಮುಖ್ಯ ಪಾತ್ರ ವಹಿಸಿ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ರಾಷ್ಟ್ರೀಯ ಖ್ಯಾತಿಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯಿರಿಯವರ ನಿರ್ದೇಶನದಲ್ಲಿ “ನಾವು ಬದಲಾಗುತಿದ್ದೇವೆ” ಎನ್ನುವ ಹೊಸ ಪ್ರಯೋಗದಲ್ಲಿ “ಅಂಬೆ”ಯ ಪಾತ್ರ ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ಕುರಿತು ವಿಶೇಷ ಆಸಕ್ತಿ, ಅಭಿರುಚಿಯನ್ನು ಹೊಂದಿರುವ ಶ್ರೀಮತಿ ಸುಮನಾ ಹೇರ್ಳೆ ಯವರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಭಕ್ತಿ ಗೀತೆ, ಭಾವಗೀತೆ, ಮುಕ್ತಕಗಳು, ರುಬಾಯಿ, ಕತೆ, ಲೇಖನ, ಗಜಲ್… ಮುಂತಾದವುಗಳಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ‘ಮುಕ್ತಕ ಸುಮ‌ಮಾಲೆ’ ಹಾಗೂ ‘ಬಿಸುಪಿನೆದೆಯ ಕನವರಿಕೆ’, ಎಂಬ ಗಜಲ್ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

        ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಇವರ ಬಹಳಷ್ಟು ಬರಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಕವಿಗೋಷ್ಟಿಗಳಲ್ಲಿ ಭಾಗವಹಿಸಿರುವ ಇವರು ೨೦೨೧ ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಾಲಯದಲ್ಲಿ ‘ಗಜಲ್ ಕವಯಿತ್ರಿ’ ಎಂದು ಸನ್ಮಾನಕ್ಕೆ ಭಾಜನರಾಗಿದ್ದಾರೆ. ಇವುಗಳೊಂದಿಗೆ ಇನ್ನೂ ಕೆಲವು ಸಂಘ, ಸಂಸ್ಥೆಗಳು ಇವರಿಗೆ ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ.‌   

     ಮನುಷ್ಯ ಸದಾ ಬುದ್ದಿ ಮತ್ತು ಭಾವನೆಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ತೊಳಲಾಟದಲ್ಲಿಯೆ ಉಸಿರಾಡುತ್ತಿರುತ್ತಾನೆ. ಆದರೆ ಯಾವಾಗ ‘ಎಮೋಷನಲ್ ಇಂಟೆಲಿಜೆನ್ಸ್’ ಅರ್ಥೈಸಿಕೊಳ್ಳುವನೊ ಆವಾಗ ಬದುಕು ಜನ್ನತ್ ಆಗುತ್ತದೆ. ಜನ್ನತ್ ಎಂದರೆ ಕೇವಲ ಸಂಭ್ರಮವಲ್ಲ, ಆ ಸಂಭ್ರಮಕ್ಕೆ ಕಾರಣವಾದ ನೋವಿನ ಕಡಲೂ ಅಲ್ಲಿ ಪಾಲುದಾರಾಗಿದೆ. ಈ ನೋವಿನ ರಸದಲ್ಲಿ ಅರಳಿದ ಗುಲ್ದಸ್ಥವೆ ಗಜಲ್.‌ ಭಾವನಾತ್ಮಕ ಬುದ್ಧಿವಂತಿಕೆಯು ಆಂತರಿಕವಾಗಿ ಮತ್ತು ಬಾಹ್ಯವಾಗಿ ಭಾವನೆಗಳನ್ನು ಗ್ರಹಿಸಿ ಅದನ್ನು ನಿರ್ವಹಿಸಿದಾಗಲೆ ಒಂದು ಮುಖಮ್ಮಲ್ ಗಜಲ್ ರೂಪ ಪಡೆಯುವುದು. ನೋವು, ನಿರಾಸೆ, ಮೋಸ, ಒಡೆದ ಹೃದಯ, ಪ್ರೀತಿಯ ಕನವರಿಕೆ, ಅನುರಾಗದ ಅನುಬಂಧ, ಪ್ರಣಯದ ರಸಾನುಭೂತಿ, ವಿರಹದ ಸುಂದರ ಜ್ವಾಲೆ, ಸಮಾಜವನ್ನು ಪ್ರೀತಿಸುವ ಹೃದಯವಂತಿಕೆ, ಸಂಬಂಧಗಳನ್ನು ಪೂಜಿಸುವ-ಗೌರವಿಸುವ-ರಕ್ಷಿಸುವ ಸೂಫಿತನ… ಇವೆಲ್ಲವುಗಳ ಹದವಾದ ಮಿಶ್ರಣವೇ ಗಜಲ್. ಗಜಲ್ ದುನಿಯಾದಲ್ಲಿ ವಿಹರಿಸುವ ಪ್ರತಿ ಜೀವಿಗೂ ಆ ಅಶಅರ್ ತಮ್ಮ ಸುತ್ತಮುತ್ತಲೆ ಪ್ರದಕ್ಷಿಣೆ ಹಾಕುತ್ತಿದೆ ಎಂದನಿಸದೆ ಇರದು. ಇದುವೆ ಗಜಲ್ ಅನ್ನು ಜೀವಂತವಾಗಿರಿಸಿರೋದು!! ಇನ್ನೂ ಶ್ರೀಮತಿ ಸುಮನಾ ಹೇರ್ಳೆ ಯವರ ಗಜಲ್ ಗಳಲ್ಲಿ ನವಿರಾದ ಪ್ರೇಮ, ಒಲವು, ನಲಿವು, ಕಾತುರತೆ, ಮಿಲನ, ನಲ್ಮೆಯ ಭಾವ, ನೋವು, ವಿರಹ, ಸ್ತ್ರೀ ಸಂವೇದನೆಯ ನೆಲೆಯಲ್ಲಿ ಹೆಣ್ಣಿನ ಮರುಕ, ದುಃಖ-ದುಮ್ಮಾನಗಳ ಚಿತ್ರಣ, ದುಡ್ಡಿನ ದರ್ಪ, ಸಾಮಾಜಿಕ ವ್ಯವಸ್ಥೆಯ ತಲ್ಲಣಗಳು, ಲೌಕಿಕ, ಆಧ್ಯಾತ್ಮಿಕ, ಪ್ರಕೃತಿಯ ಸೊಬಗು… ಮುಂತಾದ ವೈವಿಧ್ಯಮಯ ವಿಷಯಗಳು ನಮಗೆ ಜೀವನದ ದರ್ಶನವನ್ನು ಮಾಡಿಸುತ್ತವೆ. ಇವರ ಗಜಲ್ ಗಳಲ್ಲಿ ಆಂತರಿಕ ತುಡಿತ, ಜೀವನದ ಅಸ್ಥಿರತೆ.. ಪ್ರಮುಖವಾಗಿ ಗೋಚರಿಸುತ್ತದೆ.

       ಮನುಕುಲದಲ್ಲಿ ಬಯಕೆಗಳಿಗೆ ಪೂರ್ಣ ವಿರಾಮವೇ ಇಲ್ಲ. ಒಂದರ ನಂತರ ಮತ್ತೊಂದು ಎನ್ನುವಂತೆ ಬೇಕು-ಬೇಡಿಕೆಗಳು ಸರತಿಯಲ್ಲಿ ನಿಂತಿರುತ್ತವೆ. ಸುಖನವರ್ ಶ್ರೀಮತಿ ಸುಮನಾ ಹೇರ್ಳೆ ಅವರು ದಾವಾ- ದಲೀಲ್ ನೆಲೆಯಲ್ಲಿ ಕೊನೆಯಿರದ ಬಯಕೆಗಳ ಪರಿಣಾಮ ಯಾವತ್ತೂ ದುಃಖಕರ ಎಂಬುದನ್ನು ದಾಖಲಿಸಿದ್ದಾರೆ. ಇದರೊಂದಿಗೆ ನಿರೀಕ್ಷೆಯ ಭಾರ ಇಡೀ ವ್ಯಕ್ತಿತ್ವವನ್ನು ಕುಂಠಿತಗೊಳಿಸಿ ಕಣ್ಣೀರ ಧಾರೆಯನ್ನು ಮುಕ್ತವಾಗಿ ಹಂಚುತ್ತದೆ.

ಬಯಸಿದ್ದು ದೊರಕಲು ಬದುಕಿನ ಬವಣೆ ಸುಲಭದಿ ನೀಗುವುದೇನು

ಆಶಿಸಿದ್ದು ನಿಲುಕದಾದಾಗ ಹೃದಯದಿ ನೋವುಗಳು ಕಾಡದೇ ಹೇಳು”

         ಮನುಷ್ಯ ಜೀವಂತವಾಗಿರಲು ಅವನಿಗೆ ಪ್ರೀತಿಯ ಅವಶ್ಯಕತೆ ಇದೆ.‌ ಅನ್ನವಿಲ್ಲದೆ ಬದುಕಬಹುದು, ಆದರೆ ಪ್ರೀತಿಯಿಲ್ಲದೆ ಬದುಕಲು ಸಾಧ್ಯವಿಲ್ಲ. ಈ ಪ್ರೀತಿಗೆ ಹಲವು ಮುಖಗಳಿವೆ. ಆ ಮುಖಗಳು ಕನವರಿಕೆಯನ್ನು ಉಡುಗೊರೆಯಾಗಿ ನೀಡುತ್ತವೆ, ಲವಲವಿಕೆಯನ್ನು ಬಳುವಳಿಯಾಗಿ ಕೊಡುತ್ತವೆ, ಆಶಾಭಾವನೆಯನ್ನು ಬಿತ್ತುತ್ತವೆ, ಆನಂದಭಾಷ್ಪ ಜಿನುಗುವುದೆ ತಡ ಕಂಬನಿಯನ್ನೂ ದಯಪಾಲಿಸುತ್ತದೆ. ಇಲ್ಲಿ ಗಜಲ್ ಗೋ ಅವರು ಭಗ್ನ ಪ್ರೇಮಿಯ ಹಸಿಗಾಯದ ಅನುಭವವಾಗುವಂತೆ ತಮ್ಮ ಗಜಲ್ ಮುಖಾಂತರ ಆಪ್ತವಾಗಿ ನಿರೂಪಿಸಿದ್ದಾರೆ.‌ ಮನದ ಬೇಗುದಿ ತಂಪಾಗಬೇಕಾದರೆ ಪ್ರೀತಿಯ ಆಲಿಂಗನ ಬೇಕು, ಅದಿಲ್ಲದಿದ್ದರೆ ಕಿಚ್ಚು ಶಮನಗೊಳ್ಳುವುದೆ ಇಲ್ಲ! ಒಲವು ಯಾವತ್ತೂ ಅಗಲುವಿಕೆಯನ್ನು ಸಹಿಸುವುದಿಲ್ಲ. ಪ್ರೀತಿಯ ದುರಂತವೆಂದರೆ ಭಗ್ನಗೊಂಡ ಹೃದಯದ ನಾಲಿಗೆ ಸಡಿಲವಾಗುವುದೆ ಹೆಚ್ಚು!! ಇದು ಪ್ರೀತಿಯನ್ನು ಅಣಕಿಸುವಂತಿದೆ. ಈ ಕೆಳಗಿನ ಷೇರ್ ಅನುರಾಗದ ವಿವಿಧ ಮಗ್ಗುಲಗಳನ್ನು ಅನಾವರಣಗೊಳಿಸುತ್ತದೆ.

ಒಡಲ ಕಿಚ್ಚನು ಆರಿಸುವ ತಂಪಾದ ಒಲವ ನೀಡದೇ ದೂರಾಗಿ ಹೋದೆ

ಸಡಿಲ ನಾಲಿಗೆಯು ಆಡಿದ ಮಾತಿಗೆ ಅಂತರಂಗ ರೇಗದೇನು ಹೇಳು

         ಹೃದಯವನ್ನು ತಿಳಿಗೊಳಿಸಿ, ನೆಮ್ಮದಿಯ ಬಾಳಿಗೆ ಬುನಾದಿ ಹಾಕುವ ಗಜಲ್ ಕಂಬನಿಯನ್ನು ಒರೆಸುವ ಬೆರಳಿನಂತೆ ಜಾಗತಿಕ ಸಾರಸ್ವತ ಲೋಕದಲ್ಲಿ ಸದ್ದು ಮಾಡುತ್ತಿದೆ.‌‌ ಉರ್ದು, ಹಿಂದಿ ಗಜಲ್ ಗಳು ಜನಸಾಮಾನ್ಯರ ಹೃದಯದ ಬಾಗಿಲು ತಟ್ಟುವಲ್ಲಿ ಬಾಲಿವುಡ್ ನ ಪಾತ್ರ ಅನನ್ಯ.‌ ಈ ಹಿನ್ನೆಲೆಯಲ್ಲಿ ಕನ್ನಡ ‘ಗಜಲ್’ಲೋಕವು ಸಾಗಬೇಕಿದೆ. ಇದು ಸಾಧ್ಯವಾಗಲು ಪ್ರತಿ ಗಜಲ್ ಗೋ ಅವರು ಬದ್ಧತೆಯೊಂದಿಗೆ ಬರೆಯಬೇಕಿದೆ. ಸುಖನವರ್ ಶ್ರೀಮತಿ ಸುಮನಾ ಹೇರ್ಳೆ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ರಚನೆಯಾಗಲಿ, ಅವು ಸಂಕಲನ ರೂಪದಲ್ಲಿ ಹೊರಬರಲಿ ಎಂದು ಶುಭ ಹಾರೈಸುತ್ತೇನೆ.‌

ಸುತ್ತಾಡುತ್ತ ಕಂಗಳ ಮೂಲಕ ಪ್ರಕೃತಿಯನ್ನು ನೋಡಿದ್ದೇನೆ

ಸ್ವರ್ಗವನ್ನು ನೋಡಿಲ್ಲ ನಾನು ತಾಯಿಯನ್ನು ನೋಡಿದ್ದೇನೆ”

ಮುನವ್ವರ್ ರಾಣಾ

     ಗಜಲ್ ಗುಲ್ಜಾರ್ ನಲ್ಲಿ ವಿಹರಿಸುತಿದ್ದರೆ ಮಲ್ಲಿಗೆ ದಣಿವಾಗುವುದೆ ಇಲ್ಲ. ಅಶಅರ್ ನ ತಂಬೆಲರು ಜಗತ್ತಿನ ಕಂಬನಿಯನ್ನು ಒರೆಸುತ್ತಿದೆ.‌ ಆದರೆ ವಕ್ತ್ ಮಾತ್ರ ಕಾಲಕಾಲಕ್ಕೆ ಅಲ್ಪವಿರಾಮ ಹಾಕುತ್ತಲೆ ಇರುತ್ತದೆ ಅಲ್ಲವೇ… ಸೋ… ಗಡಿಯಾರದ ಮುಳ್ಳುಗಳನ್ನು ಗೌರವಿಸುತ್ತ ಇಲ್ಲಿಂದ ನಿರ್ಗಮಿಸುತ್ತಿರುವೆ. ಮತ್ತೆ ಮುಂದಿನ ಗುರುವಾರ ತಮ್ಮ ಭೇಟಿಗಾಗಿ ಗಜಲ್ ಗೋ ಒಬ್ಬರ ದಾಸ್ತಾನ್ ನೊಂದಿಗೆ ಬರುತ್ತೇನೆ. ಅಲ್ಲಿಯವರೆಗೆ ಅಲ್ವಿದಾ ಪ್ರೆಂಡ್ಸ್..


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top