“ನಾವೇನು ಕಲಿಯಬೇಕಿದೆ? “ ಪ್ರವಾಸ ಕಥನ

ರೂಪ ಮಂಜುನಾಥ್ ತಮ್ಮ ಅಮೇರಿಕಾ ಪ್ರವಾಸದ

ತಮ್ಮ ವಿಶಿಷ್ಟ ಅನುಭವಗಳನ್ನು ಸಂಗಾತಿಗಾಗಿ ಬರೆದಿದ್ದಾರೆ

“ನಾವೇನು ಕಲಿಯಬೇಕಿದೆ? “

ರೂಪ ಮಂಜುನಾಥ್‍

  “ಸರ್ವಜ್ಞನೆಂಬುವನು ಗರ್ವದಿಂದಾವನೇ?

ಸರ್ವರೊಳೊಂದೊಂದು ನುಡಿಯ ಕಲಿತು,

ವಿದ್ಯೆಯ ಪರ್ವತವೇ ಆದ ಸರ್ವಜ್ಞ!”,

    ಮೇಲಿನ ತ್ರಿಪದಿ,ಸರ್ವಜ್ಞ ಕವಿಗಳ ಅತಿ ಶ್ರೇಷ್ಠ ತ್ರಿಪದಿಗಳಲ್ಲಿ ಒಂದು. ಹಾಗೆಂದ ಮಾತ್ರಕ್ಕೆ ಮಿಕ್ಕವುಗಳ ಬೆಲೆ ಕಡಿಮೆ ಏನಿಲ್ಲ.ಆ ಮಹಾ ಕವಿಯ ತ್ರಿಪದಿಗಳನ್ನು ಹೆಚ್ಚು ಓದದಿದ್ದರೂ, ಓದಿದ್ದೆಲ್ಲವೂ ಶ್ರೇಷ್ಠ ವಿಚಾರಗಳನ್ನು, ಜೀವನಾನುಭವಗಳನ್ನೂ, ಹಿತೋಪದೇಶವನ್ನೂ ಹೊತ್ತಿರುವಂಥವೇ.ಆದರೆ, ನನ್ನ ಈ ದಿನದ ಬರಹಕ್ಕೆ ಅತಿ ಸೂಕ್ತವಾದ ಈ ಮೇಲಿನ ತ್ರಿಪದಿಯನ್ನು ಉಲ್ಲೇಖಿಸಿ, ಬರಹದ ಪ್ರಯಾಣ ಮುಂದುವರೆಸುತ್ತೇನೆ.

ಆ ದೇಶದಿಂದ ನಾವೇನಾದರೂ ಕಲಿಯಬಹುದಾದ ವಿಷಯಗಳು ಏನಾದರೂ ಇದ್ದರೆ ತಿಳಿಸಿ ಎಂದು ಕೆಲವರು ಕೇಳಿದ್ದರು.ಯಾವ ದೇಶವಾಗಲೀ, ವ್ಯವಸ್ಥೆಯಾಗಲೀ, ಯಾವ ಧರ್ಮವಾಗಲೀ, ಲೋಕದ ಯಾವ ಮೂಲೆಯಲ್ಲೇ ಇರಲಿ,ಆ ಜನ ವಿದ್ಯಾವಂತರಾಗಲಿ, ಅವಿದ್ಯಾವಂತರಾಗಲೀ,ಅಭಿವೃದ್ದಿ ಹೊಂದಿರಲಿ,ಹೊಂದದೇ ಹೋಗಲಿ,ಹಿರಿಯರಿರಲಿ, ಕಿರಿಯರಿರಲಿ,ಯಾರಿಂದಲಾದರೂ ಸರಿಯೆ, ನಾವು ಕಲಿತು ಅಳವಡಿಸಿಕೊಳ್ಳಬೇಕಾದ ಕೆಲವು ಸದ್ವಿಚಾರಗಳಂತೂ ಇದ್ದೇ ಇರುತ್ತದೆ. ಆದರೆ, ಅದನ್ನು ಅಳವಡಿಸಿಕೊಳ್ಳುವ, ಒಪ್ಪಿಕೊಳ್ಳುವ, ಮೆಚ್ಚಿಕೊಳ್ಳುವ ದೊಡ್ಡ ಮನಸ್ಸಿರಬೇಕು ಅಷ್ಟೇ.ಹೌದು, ವೈಯಕ್ತಿಕವಾಗಿ ಆಗಲಿ, ವ್ಯವಸ್ಥೆಯಲ್ಲಾಗಲೀ ಒಳಿತು,ಪ್ರಗತಿ ಕಾಣಬೇಕಾದರೆ ಬದಲಾವಣೆಗಳನ್ನ ಅಳವಡಿಸಿಕೊಳ್ಳುವುದು ಬಹಳ ಆವಶ್ಯಕ.ಆದರೆ, ಅಳವಡಿಕೆಗೂ ಕೆಲವು ಅಡಚಣೆಗಳು ಎಲ್ಲೆಡೆ ಇರುವುದು ಸತ್ಯ.ಉದಾಹರಣೆಗೆ ಹೇಳಬೇಕೆಂದರೆ, ಒಂದು ತರಗತಿಯಲ್ಲಿ ಇಪ್ಪತ್ತು ಹುಡುಗರಿದ್ದರೆ,ಮಾಸ್ತರರು ಎಲ್ಲರನ್ನೂ ವೈಯುಕ್ತಿಕವಾಗಿ ಗಮನಿಸಿ, ತಿದ್ದಿ, ತಿಳಿ ಹೇಳಲು ಸಾಧ್ಯ. ಅದೇ ತರಗತಿಯಲ್ಲಿ ಕುರಿ ಮಂದೆಯಂತೆ ನೂರೈವತ್ತು ಹುಡುಗರಿದ್ದರೆ,ಆಗ ಮಾಸ್ತರರ ಸ್ಥಿತಿ ಹೇಗಿರಬಹುದು ನೀವೇ ಯೋಚಿಸಿ.ಖಂಡಿತ, ಏನೇ ಬದಲಾಯಿಸಲೂ ಬಲು ಕಷ್ಟವಾಗುತ್ತದೆ.ಹೋಗಲೀಂದ್ರೆ, ಈ ಶಾಲೆಯಲ್ಲಿ, ಬೇರೆಯ ಶಿಸ್ತಾದ ಶಾಲೆಗಳಲ್ಲಿ ಮೇಷ್ಟರು  ದೊಣ್ಣೆ ಹಿಡಿದು ಬಾರಿಸುವಂತೆ, ಬೇರೆ ವಿಧವಾದ ಶಿಕ್ಷೆ, ಜುಲ್ಮಾನೆ ವಿಧಿಸುವಂತೆ, ವಿಧಿಸುವಂತಿಲ್ಲ.ಸ್ವಲ್ಪ ಕಟುವಾದರೂ, ಚಿಕ್ಕಪುಟ್ಟ ಸಕಾರಾತ್ಮಕ  ಬದಲಾವಣೆಗಳನ್ನ ತರಲು ಪ್ರಯತ್ನಿಸಿದರೂ, ಕಾಲುಕೆರೆದುಕೊಂಡು ಮೇಷ್ಟರ ಮೇಲೆಯೇ ದಂಗೆ ಏಳುವುದೇನೂ? ಹರತಾಳ ಮಾಡುವುದೇನೂ?ಈ ಮಂದೆ ಮೇಷ್ಟರು ಸ್ವಲ್ಪ ಹಿಂದುಮುಂದಾದರೂ, ಅವರನ್ನೇ ಮೇಯಿಸುವ ಪುಂಡಪಟಿಂಗರಾದರೆ,ಅವರನ್ನೇ ಎತ್ತಂಗಡಿ ಮಾಡಿ, ಮೂಲೆಗೆ ಸೇರಿಸುವ ಚತುರರಾದರೆ, ಮೇಷ್ಟರಾದರೂ ಎಷ್ಟು ಬದಲಾವಣೆ ತರಲು ಸಾಧ್ಯಾ? ಇಂಥ ಶಾಲೆಯಲ್ಲಿನ ಹುಡುಗರನ್ನು ಹಿಡಿತಕ್ಕೆ ತೆಗೆದುಕೊಳ್ಳಲೂ ಬಲು ಕಷ್ಟಪಡಬೇಕಾಗುತ್ತದೆ. ಬಹಳ ಬಹಳ ಚತುರತೆ ಉಪಯೋಗಿಸಬೇಕಾಗುತ್ತದೆ.

ಆದರೇನೂ?ಗಾಂಧಿಯವರು ಹೇಳಿದಂತೆ,” ಪ್ರತಿಯೊಬ್ಬರೂ ಅವರವರ ಮನೆಯ ಮುಂದಿನ ಕಸವನ್ನು ತೆಗೆದು ಹಾಕಿದರೆ ಊರಿಗೆ ಊರೇ ಸ್ವಚ್ಛವಾಗುತ್ತದೆ”ಎನ್ನುವಂತೆ, ಚಿಕ್ಕದಾಗಿ,ವೈಯುಕ್ತಿಕವಾಗಿ,ಮಾಡಿಕೊಳ್ಳಬಹುದಾದ ಬದಲಾವಣೆಗಳನ್ನ ಮಾಡಿಕೊಳ್ಳೋಣ.ದೊಡ್ಡ ವಿಚಾರಗಳನ್ನ ನಮ್ಮನ್ನಾಳುವ ನಾಯಕರು ನೋಡಿಕೊಳ್ಳಲಿ.ನಮಗೆ ದೊಡ್ಡ ತಲೆ ನೋವುಗಳು ಬೇಡ.

          ಕೆಲವು ದೇಶಗಳಲ್ಲಿ ಕಾನೂನು ಬಲು ಬಿಗಿಯಾಗಿರುವುದರಿಂದ,ಎಂಥವರೇ ಆಗಲಿ, ನಿಯಮ ಮೀರುವ ಬಗ್ಗೆ ಹೆದರಲೇಬೇಕಾಗುತ್ತದೆ. ಅಂಥ ದೇಶಗಳು ಬೇಗ ಬೆಳವಣಿಗೆಯನ್ನು ಕಾಣುತ್ತವೆ.

         ಯಾರಲ್ಲೇ ಆಗಲಿ, ಸಮಯದ ಪರಿಪಾಲನೆಯಲ್ಲಿ ಶಿಸ್ತು ಇಲ್ಲದಿದ್ದರೆ,ಅಂದುಕೊಂಡ ಗುರಿ,ಅಂದುಕೊಂಡ ಹಾಗೆ ಮುಟ್ಟಲು ಸಾಧ್ಯವೇ ಇಲ್ಲ.ಅಮೆರಿಕದ ಜನರು ಸಮಯಕ್ಕೆ ಬೆಲೆಯನ್ನು ಕೊಡುವುದನ್ನ ನೋಡಿದ್ದೇನೆ. ಹಾಗೇ ಅಪರೂಪಕ್ಕಾದರೂ ಸಮಯದಲ್ಲಿ ವ್ಯತ್ಯಾಸವೇನಾದರೂ ಆದ ಪಕ್ಷದಲ್ಲಿ, ಯಾವ ಮುಜುಗರವೂ ಇಲ್ಲದೆ, ವಯಸ್ಸಿನಲ್ಲಿ  ಹಿರಿಯರಾಗಲಿ, ಕಿರಿಯರಾಗಲೀ , ಕ್ಷಮೆಯನ್ನೂ ಕೇಳುತ್ತಾರೆ.ಆದರೆ,ನಾವು ನಮ್ಮ ದೇಶದಲ್ಲಿ ಇಷ್ಟು ಶಿಸ್ತು ಪಾಲಿಸಿದರೆ,ನಮ್ಗೆ ಬೇಜಾನು ಸಮಯ ಹಾಳು. ಯಾಕಂತೀರೋ,ಸುಮ್ಮನೆ ಹೇಳಬೇಕೆಂದರೆ,ನಮ್ಮ ಕಡೆಗಳಲ್ಲಿ  ಯಾವುದೇ ಕಾರ್ಯಕ್ರಮಗಳಾಗಲಿ,ಸಮಯಕ್ಕೆ ಸರಿಯಾಗಿ ನಡೆಯೋದು ಅತೀ ಅಪರೂಪ. ನಮ್ಮ ಮನೆಯ ಕಾರ್ಯಕ್ರಮವನ್ನೇ ಸಮಯಕ್ಕೆ ಸರಿಯಾಗಿ ನಡೆಸಿದರೆ, ನಾಲ್ಕು ಜನರೂ ಸೇರಿರುವುದಿಲ್ಲ.ಬೇರೆಯವರ ಕಾರ್ಯಕ್ರಮಕ್ಕೆ ಹೇಳಿದ ಸಮಯಕ್ಕೆ ಹೋದರೆ, ಗಂಟೆಗಳು ಕಾದರೂ ಪ್ರಾರಂಭವಾಗುವುದಿಲ್ಲ. ಸಮಯದ ಮಹತ್ವ ಇರುವವರು, ಹೇಗೆ ನಡೆದುಕೊಂಡರೆ ಸರಿ ಹೋಗುತ್ತದೆ ತಿಳಿಸಿ. ಈ ವಿಚಾರದಲ್ಲಿ ನನಗೂ ಸಾಕಷ್ಟು ಕಸಿವಿಸಿಗಳಾಗಿದೆ.ಸಮಯಕ್ಕೆ ಹೋಗದೆ ಹೋದರೆ, ಮನಸ್ಸಿಗೆ ಕೆಡುಕೆನಿಸುತ್ತದೆ.ಸರಿಯಾಗಿ ಹೋದರೆ, ವ್ಯರ್ಥವಾದ ಸಮಯಕ್ಕೆ ಮನ ನೋಯುತ್ತದೆ. ಈ ಅವ್ಯವಸ್ಥೆಯನ್ನು ಹೇಗೆ, ಎಲ್ಲಿಂದ ಸರಿ ಮಾಡಬೇಕು ಎನ್ನುವ ಗೊಂದಲವಂತೂ ಇದ್ದೇ ಇದೆ.

         ಆಮೇಲೆ ಇನ್ನೊಂದು ವಿಚಿತ್ರವೇನೆಂದರೆ, ನಾವೇನೇ ವಿಷಯವಾಗಿ ಒಂದು ನಿರ್ಧಾರಕ್ಕೆ ಬಂದು,”ಅಲ್ಲಿ ಹೀಗೆ, ಇಲ್ಲಿ ಹಾಗೆ”, ಎಂದು ತೀರ್ಮಾನಕ್ಕೆ ಬಂದರೂ,ಕೆಲವೊಮ್ಮೆ ವಿಷಯ ಉಲ್ಟಾ ಆಗಿ ನಮ್ಮನ್ನ ಮುಜುಗರಕ್ಕೀಡಾಗಿಸುತ್ತದೆ. ಯಾಕಂತೀರೋ,ನನ್ನ ಮಗ ಇಲ್ಲಿ “ಟೋಲ್ ಬ್ರದರ್ಸ್”, ಎನ್ನುವ ಕನ್ಸ್‌ಟ್ರಕ್ಷನ್ ಕಂಪನಿಯವರಿಂದ ಒಂದು ಮನೆಯನ್ನು ಕೊಂಡುಕೊಳ್ಳುವವನಿದ್ದಾನೆ.ಅಂದರೆ, ಆ ಕಮ್ಯೂನಿಟಿಯಲ್ಲಿ ನಾಲ್ಕು ರೀತಿಯ ಮನೆಗಳನ್ನು ಕಟ್ಟುತ್ತಿದ್ದಾರೆ.ನಮಗೆ ಯಾವ ರೀತಿಯ ಮನೆ ಬೇಕೋ ಅದನ್ನು ಆಯ್ಕೆ ಮಾಡಬಹುದು. ಕಾಂಟ್ರಾಕ್ಟ್ ಸೈನ್ ಮಾಡುವ ಸಮಯದಲ್ಲಿ ಮನೆಯನ್ನು ಜುಲೈ ಕೊನೆಗೋ, ಆಗಸ್ಟ್ ಮೊದಲ ವಾರದಲ್ಲೋ ಮುಗಿಸಿ ಕೊಡಲು ಒಪ್ಪಿದ್ದರು.ಇಲ್ಲಿ ಯಾವ ಕಾಂಟ್ರಾಕ್ಟಾದರೂ ಪಕ್ಕಾ, ಹೇಳಿದ ಸಮಯಕ್ಕೆ ಆಗಿ ತೀರುವುದು.

ಹಾಗಾಗಿ, ನನ್ನ ಮಗ ತಾನಿರುವ ಮನೆಯನ್ನ ಮತ್ತೊಬ್ಬರಿಗೆ ಮೂರು ತಿಂಗಳ ಹಿಂದೆಯೇ ಮಾರಿಬಿಟ್ಟ.ಅವರೂ ಕೂಡಾ ಮನೆ ಬಿಟ್ಟುಕೊಡಲು ಎರಡು ತಿಂಗಳ ಗಡುವು ನೀಡಿದ್ದರು. ಆದರೆ,ಗ್ರಹಚಾರಕ್ಕೆ ಕೋವಿಡ್ ಕರ್ಮಕಾಂಡದಿಂದ ರಾ ಮೆಟೀರಿಯಲ್ಗಳ ಸಪ್ಲೈ ಸರಿಯಾಗಿ ಆಗದೇ ಕೆಲಸ ಮುಂದಕ್ಕೆ ಹೋಗುತ್ತಲೇ ಇದೆ.ನಮಗೂ ಈ ಸಮಯದಲ್ಲಿ ಬಂದರೆ ಸರಿಹೋಗುವುದೆಂಬ ಉದ್ದೇಶದಿಂದ ಇಲ್ಲಿ ಕೊಟ್ಟ ಗಡವಿಗೆ ಕೆಲಸ ಆಗಿಯೇ ತೀರುವುದೆಂಬ ನಂಬಿಕೆಯಿಂದ ಟಿಕೆಟ್ಸ್ ಬುಕ್ ಮಾಡಿದ್ದ. ಆದರೆ, ಬಂದ ಪರ್ಪಸ್ ಸರ್ವಾಗಲಿಲ್ಲ.ಹೀಗಾಗಿ ಮನೆ ಕೆಲಸ ಪೂರ್ತಿಯಾಗುವುದು ೨೦೨೩,ಜನವರಿಯೇ ಆಗಬಹುದೆಂದು ಹೇಳುತ್ತಿದ್ದಾರೆ.ಈಗ ನನ್ ಮಗನದು ಎಡಬಿಡಂಗಿ ಸ್ಥಿತಿ. ಇದ್ದ ಮನೆ ಮಾರಿಬಿಟ್ಟಿದ್ದಾನೆ. ಹೊಸ ಮನೆ ಕೆಲಸವಾಗಿಲ್ಲ. ಅದಕ್ಕೆ ಸಧ್ಯಕ್ಕೆ ಹೊಸ ಮನೆ ಆಗುವವರೆಗೂ ತಾತ್ಕಾಲಿಕವಾಗಿ ಒಂದು ಅಪಾರ್ಟ್ಮೆಂಟಿಗೆ ಹೋಗಬೇಕಾಗಿದೆ. ಈಗ ಆದರ ಹುಡುಕಾಟದಲ್ಲಿದ್ದಾನೆ. ತಾತ್ಕಾಲಿಕವೆಂದು ಚಿಕ್ಕ ಮನೆ ಮಾಡಲು ಸಾಮಾನುಗಳಿಗೆ ಜಾಗವಾಗುವುದಿಲ್ಲ. ದೊಡ್ಡದೂಂದ್ರೆ, ತಿಂಗಳಿಗೆ ಮೂರು ಮೂರುವರೆ ಸಾವಿರ ಡಾಲರುಗಳು. ಜೊತೆಗೆ ಮೇನ್ಟೆನೆನ್ಸ್ ಖರ್ಚುಗಳು ಪ್ರತ್ಯೇಕ.ಹೀಗೆ, ಸಮಯ ಪರಿಪಾಲನೆ ಮಾಡುವ ಉದ್ದೇಶ, ಹಾಗೂ ಮನಸ್ಸು ಎರಡೂ ಇದ್ದರೂ ಕೆಲವು ಪರಿಸ್ಥಿತಿಗಳು ಯಾರದ್ದಾದರೂ ಸರಿ, ಎಲ್ಲಿಯಾದರೂ ಸರಿ, ಕೈಮೀರಿ ನಡೆದೇ ಹೋಗುತ್ತದೆ. ( ಈ ವಿಷಯ ತಿಂಗಳ ಹಿಂದೆ ನಡೆದು, ಈಗ ಅಪಾರ್ಟ್ಮೆಂಟ್ ಒಂದಕ್ಕೆ ಮನೆ ಬದಲಾಯಿಸಿ ಸೆಟಲಾಗಿದ್ದಾನೆ. ಒಟ್ಟಿನಲ್ಲಿ ನಮಗೆ ಮನೆ, ಅಪಾರ್ಟ್ಮೆಂಟ್, ಎಲ್ಲ ಕಡೆ ಬದುಕುವ ಅನುಭವವವೂ ಆದಂತಾಯಿತು)

     ಹಾಗೇ, ರಸ್ತೆಯಲ್ಲಿ ಪಾದಾಚಾರಿಗಳಿಗೆ ಆದ್ಯತೆ!ಯಾವ ಕಾರಣಕ್ಕೂ ನುಗ್ಗದೆ, ಯಾರಾದರೂ ಪಾದಾಚಾರಿಗಳಿದ್ದರೆ, ದೂರದಲ್ಲಿದ್ದರೂ ಕೂಡಾ,  ವಾಹನವನ್ನು,  ನಡೆಯುವವರು ರಸ್ತೆ ದಾಟುವವರೆಗೂ ನಿಲ್ಲಿಸಿಯೇ ಬಿಡುತ್ತಾರೆ. ಇದನ್ನು ಅಳವಡಿಸಿಕೊಳ್ಳುವುದೂ ಕೂಡಾ ಅಸಾಧ್ಯದ ಮಾತೇ.ಅಮೆರಿಕದಲ್ಲಿ ಶೇಕಡ ತೊಂಭತ್ತೊಂಭತ್ತಕ್ಕೂ  ಹೆಚ್ಚು ಕಾರುಗಳದ್ದೇ ಸಂಚಾರ.ಚಿಕ್ಕಪುಟ್ಟ ಸಂದಿಯಲ್ಲಿ ತೂರಿಕೊಳ್ಳುವಂಥ ದ್ವಿಚಕ್ರ, ತ್ರಿಚಕ್ರ ವಾಹನಗಳು ಇಲ್ಲವೇ ಇಲ್ಲ.ಇನ್ನೂ ವಾಹನ ದಟ್ಟಣೆಯೂ ನಮ್ಮಲ್ಲಿಯಷ್ಟು ಇಲ್ಲವೇ ಇಲ್ಲ ಬಿಡಿ. ಕೆಲವು ಮಹಾ ನಗರಗಳಲ್ಲಿ ಸ್ವಲ್ಪ ಮಟ್ಟಿಗೆ ಇರಬಹುದೇನೋ.ಇತ್ತೀಚೆಗಂತೂ ಹೊಳೆನರಸೀಪುರದಲ್ಲಿಯೂ ಕೂಡಾ ಟ್ರಾಫಿಕ್ ಜಾಮ್ ಆಗಿ ರೋಡುಗಳು ಬ್ಲಾಕಾಗುತ್ತವೆ!!!!ಇನ್ನು ಇಲ್ಲಿಯ ಜನ ಸ್ಪೀಡು ಲಿಮಿಟ್ಟುಗಳನ್ನು ಯಾರೂ ಮೀರಿ ಹೋಗುವ ಮಾತೇ ಇಲ್ಲ. ನಿಯಮ ಮೀರಿದರೆ, ಟಿಕೆಟ್ ಕೊಡುತ್ತಾರೆ. ಮೂರು ಸಲಕ್ಕಿಂತಲೂ ಹೆಚ್ಚು ಟಿಕೆಟ್ ಪಡೆದುಕೊಂಡರೆ,ಡ್ರೈವಿಂಗ್ ಲೈಸೆನ್ಸ್ ಕಿತ್‌ಕೊಂಡು ಕಳಿಸುತ್ತಾರೆ. ಯಾವ ಲಂಚ,ಪ್ರಭಾವ ಯಾವುದೂ ನಡೆಯೋಲ್ಲ. ನಮ್ಮಲ್ಲಿದು ಸಾಧ್ಯವೇ ಹೇಳಿ? ಹಾಗಾಗಿ, ನಮ್ಮ ಜನರೇ ಇಲ್ಲಿದ್ದವರು ಕೂಡಾ ನಿಯಮಗಳಿಗೆ ಹೆದರಿ, ತೆಪ್ಪಗೆ ಫಾಲೋ ಮಾಡ್ತಾರೆ.

      ಇನ್ನು ಯಾವ ದೇಶದವರಾಗಲೀ, ಯಾವ ಧರ್ಮದವರಾಗಲೀ, ಅಂತಸ್ತು,ವಯಸ್ಸು, ಯಾವುದನ್ನೂ ಅಳೆಯದೇ,ಯಾರು ಸಿಕ್ಕರೂ ಇಲ್ಲಿನ ಜನರು,

Hi, hello,

Good morning/night

how was your day?

How are you doing?

nice dress,

I like the tradition,

ooooh, that’s cool. ಈ ರೀತಿಯಾಗಿ ಸಂಭಾಷಿಸಿ ಶುಭ ಕೋರುತ್ತಾರೆ.

     ಆದರೆ, ಕೆಲವೊಮ್ಮೆ ಇಂಡಿಯನ್ ಸ್ಟೋರುಗಳಲ್ಲಿ,ಕಾಸ್ಟ್ ಕೋ, ವಾಲ್ ಮಾರ್ಟು, ದೇವಾಲಯಗಳಲ್    ಲಿಭಾರತೀಯರೂ ಸಿಕ್ಕರೂ, ಅಷ್ಟಾಗಿ ಪ್ರತಿಕ್ರಯಿಸುವುದಿಲ್ಲ. ಎಲ್ಲೋ ಹತ್ತಕ್ಕೆ ಒಬ್ಬರೋ ಇಬ್ಬರು ಅಷ್ಟೇ. ಅದೇನು ಕಾರಣವೋ ತಿಳಿಯಲಿಲ್ಲ. ನಾವೇ ಖುಷಿಯಾಗಿ ಹೋಗಿ ಮಾತನಾಡಿಸಿದರೆ, ಆಗ ಮಾತನಾಡುತ್ತಾರೆ.

ಕೆಲವರ ಆಟಿಟ್ಯೂಡ್ ನೋಡಿದರೆ, ಮಾತನಾಡಿಸಲೂ ಮನಸ್ಸು ಹಿಂಜರಿಯುತ್ತದೆ. ಜೊತೆಗೆ ಉತ್ತರ ಭಾರತದ ಬಿಳಿ ತೊಗಲಿನವರಿಗೆ ಮದ್ರೀಸಿಗಳೆಂದರೆ ಕೇವಲ. ಇಂಥ ವಿಚಾರಗಳೆಲ್ಲಾ

ಇಲ್ಲಿ ಮಾತ್ರವೇಕೇ? ನಮ್ಮ ಊರುಗಳಲ್ಲೇ ಮೂವತ್ತು ವರ್ಷಗಳಿಂದಲೂ ನೋಡುತ್ತಾ ಬಂದಿದ್ದರೂ,ಅಪರಿಚಿತರಂತೆ ಮುಖ ತಿರುಗಿಸುವವರೂ ಇದ್ದಾರೆ.ಈ ವರ್ತನೆಗಳಿಗೆ ಏನು ಹೇಳ್ತೀರೀ?ಈ ವಿಚಾರದಲ್ಲಿ ಬದಲಾವಣೆ ಹೇಗೆ ಮಾಡಿಕೊಳ್ಳಬಹುದು?ಒಂದು ನಾವೇ ಮುನ್ನುಗ್ಗಿ ಮಾತನಾಡಿಸುವುದು ಮಾಡಬಹುದು.ಆ ಪ್ರಯತ್ನಗಳು ನಡೆದಿದೆ. ಆದರೆ, ಮುಖಕ್ಕೆ ಮುಖವೇ ಕೊಡದಿದ್ದರೆ??

       ಇಲ್ಲಿನ ಜನ, ಯಾರು ಏನಂದುಕೊಳ್ತಾರೋ, ಎಂದು ಯೋಚಿಸುವುದು ಬಹಳ ಕಮ್ಮಿಯೆಂದು ನನಗನ್ನಿಸುತ್ತದೆ.ಯಾಕಂದ್ರೆ, ಲಿಂಗ, ವಯಸ್ಸು, ಆಕಾರ, ಬಣ್ಣ ಯಾವುದನ್ನೂ ಲೆಕ್ಕ ಮಾಡದೆ, ತಮಗಿಷ್ಟವಾದಂತೆ ಉಡುಪು, ಅಲಂಕಾರ,ಶೋಕಿಗಳನ್ನ ಮಾಡುತ್ತಾರೆ. ನನಗನ್ನಿಸುವಂತೆ ಯಾರು ಯಾರಿಗೂ ನಿರ್ಬಂಧವೂ ಹಾಕುವುದಿಲ್ಲವೇನೋ ಎಂದು.ಯಾಕೆಂದರೆ,ಆಪಲ್ ಸ್ಟೋರಿನಲ್ಲಿ ಆಪಲ್ ಫೋನನ್ನು ಹೇಗೆಲ್ಲಾ ಸುಲಭವಾಗಿ ಬಳಸಬಹುದು, ಯಾವ ಆಪ್‌ಗಳಿಂದೇನು ಪ್ರಯೋಜನ ಎಂದು ತಿಳಿಸುವ ಸಲುವಾಗಿ ಉಚಿತ ಕ್ಲಾಸುಗಳನ್ನು ಮಾಡುತ್ತಿದ್ದರು. ನನ್ನ ಮಗ,”ಹೋಗೋಂಗಿದ್ರೆ ಹೋಗಿ ಅಮ್ಮ”, ಎಂದಿದ್ದ. ನನಗೂ ಕುತೂಹಲ. ಏನೇ ಅವಕಾಶ ಸಿಕ್ಕರೆ ಬಳಸಿಕೊಳ್ಳುವ ಪ್ರಯತ್ನವಂತೂ ಮಾಡ್ತೀನಿ. “ಹೂ ಕರಕೊಂಡು ಹೋಗೋ”, ಎಂದಿದ್ದೆ. ಕ್ಲಾಸಿನಲ್ಲಿ ಮೂರು ಜನರಿದ್ದೆವು. ನಾನೊಬ್ಬಳು, ಮತ್ತಿಬ್ಬರು ಇಲ್ಲಿಯವರೇ. ಒಬ್ಬರಿಗೇನೋ ಎಪ್ಪತ್ತು ದಾಟಿ ವಯಸ್ಸಾಗಿದ್ದರೆ, ಮತ್ತೊಬ್ಬರು ಅಜ್ಜಿ, ಹಣ್ ಹಣ್ ಮುದುಕಿ. ಆಗೆಂದುಕೊಂಡೆ, ಓ…….ಇಂಥ ತರಗತಿಗಳಿಗೆ ಮನೆಯಲ್ಲಿ ವಿಶ್‌ರಾಂತಿ ಜೀವನ ನಡೆಸೋರು ಬರೋದೇನೋ ಎಂದು.ಎಪ್ಪತ್ತು ಮೀರಿದ ಹೆಂಗಸೂ, ಕೃತಕ ಉಗುರು, ಅದಕ್ಕೆ ನೇಲ್ ಆರ್ಟು,ಕೃತಕ ಕಣ್ ರೆಪ್ಪೆಗಳು,ಆಫ್ರಿಕನ್ ಅಮೇರಿಕನ್ ಎಂದು ಕಾಣುತ್ತದೆ,ಜಡೆ ಸಣ್ಣದಾಗಿ ಹೆಣೆದು, ಅದಕ್ಕೆ ಬಣ್ಣಬಣ್ಣದ ಅಲಂಕಾರ, ಸಿಂಗಾರ!ತೊಡೆಗೂ ಮೇಲಕ್ಕೆ ಚಡ್ಡಿ, ಒಂದಡಿಯ ಬೂಟುಗಳು,ಬೆರಳುಗಳಿಗೆ ಮೂರ್ನಾಕು ಉಂಗುರಗಳು, ನೆಕ್ಲೇಸ್, ಸ್ಲೀವ್ ಲೆಸ್ ಟಾಪ್ ಇತರೆ ಇತರೆ…..

ಇನ್ನು ಆ ಮುದುಕಿಯೂ ಅದೆಷ್ಟು ಅಲಂಕಾರದಲ್ಲಿ ಬಂದಿದ್ದಳೆಂದರೆ, ನನಗೇ ಆಶ್ಚರ್ಯವಾಯಿತು.ಐಬ್ರೋ ತೀಡಿ, ಲಿಪ್ ಸ್ಟಿಕ್ಕೂ, ಕೈಗೆ ಏಳೆಂಟು ರೀತಿಯ ಬ್ರೇಸ್‌ಲೆಟ್ಟು,ಬಾಯ್ ಕಟ್ಟು,ಆ ಬಾಯ್ಕಟ್ಟಿನ ಕೂದಲಿಗೆ ಫ್ಲೋರೋಸೆಂಟ್ ಬಣ್ಣ, ,ಅದಕ್ಕೊಂದು ಹೇರ್ ಬ್ಯಾಂಡು, ಉಗುರುಗಳನ್ನ ಅಷ್ಟುದ್ದ ಬೆಳೆಸಿ ಚೆನ್ನಾಗಿ ಶೇಪ್ ಮಾಡಿಕೊಂಡು, ಒಂದೊಂದುಗುರಿಗೂ ಒಂದೊಂದು ಬಣ್ಣ……ದೇವ್ರೇ! ನಮ್ಮೂರಿನಲ್ಲೇನಾದರೂ ಹೀಗೆ ಹೋದರೆ,”ಅಯ್ಯೋ, ಏನಾಯ್ತೋ ಪಾಪ ರೂಪುಂಗೆ. ಹೋಗೋವಾಗ ಚೆನ್ನಾಗೇ ಹೋದ್ಲಲ್ಲಾ”, ಅಂತ ಜನ ಬಾಯ್ ಮೇಲೆ ಕೈ ಇಟ್ಕೊಂಡು, ನನ್ನನ್ನ ಪಾಪದವಳ ತರ ನೋಡಿ,ಸ್ವಲ್ಪ ಹೊತ್ತಿಗೆ ಊರಿನ್ ತುಂಬಾ ಡಂಗೂರ ಸಾರ್ತಾರೆ ಅಷ್ಟೇ. ಇನ್ನು ಮನೆಯಲ್ಲಾದರೂ ಸುಮ್ಮನೆ ಬಿಟ್ಟಾರ್ಯೇ? “ನಿನ್ಗೇನು ಬಂದಿದೆಯೇ? ಈ ಅವ್ತಾರ ಈ ವಯಸ್ಸಿಗ್ ಬೇಕಾ?ಹೋಗು ಲಕ್ಷಣವಾಗಿ,ಅಲಂಕಾರ ಮಾಡ್ಕೊಂಡ್ ಬಾ, ನನ್ ಮರ್ಯಾದೆ ತೆಗೀಬೇಡ”, ಅಂತ ಉಗ್ದು ಉಪ್ಪೂಕಾರ ಹಾಕೋದೇ!ಆದ್ರೆ ಇಲ್ಲಿನ ಸಮಾಜವೇ ಹೀಗೆ.ಇರುವುದೊಂದು ಜೀವನ! ನಮಗೆ ಹೆಂಗ್ ಬೇಕೋ ಹಂಗೆ ಬದ್ಕೋಣ! ಅನ್ನುವ ಧೋರಣೆ. ಇತ್ತೀಚೆಗೆ ನಮ್ಮ ದೇಶದಲ್ಲೂ ಈ ಧೋರಣೆ ಶುರುವಾಗಿದೆಯಾದರೂ,ಅಲ್ಲಿ ನಾವಿನ್ನೂ ಅಯ್ಯೋ, ಹೀಗಿದ್ದರೆ ಜನ ಏನೆಂದುಕೊಂಡಾರೂ? ಎಂದು ಸಮಾಜಕ್ಕಂತೂ ಹೆದರುವುದು ಇದ್ದೇ ಇದೆ.ಹಾಗೇ ತಿನ್ನುವ ವಿಚಾರದಲ್ಲೂ ಕೂಡಾ ಅಷ್ಟೇ.ಇಲ್ಲಿ ಸ್ಥಾಲಕಾಯದವರು ಹೆಚ್ಚು. ಒಬ್ಬೊಬ್ಬರು ನನ್ನ ಎರಡೂ ಕೈಗಳನ್ನ ಅಗಲಿಸಿ ತೋರಿಸುವುದಕ್ಕಾಗದಷ್ಟು ಸೈಜಿದ್ದರೂ, ಟನ್ನಿಗೂ ಹೆಚ್ಚಾಗಿ ತೂಗುತ್ತಿದ್ದರೂ, ಕ್ರೇಟುಗಟ್ಟಲೆ ಮಧ್ಯಪಾನ, ಕೂಲ್ ಡ್ರಿಂಕ್ಸು, ಮಾಂಸ, ಮೊಟ್ಟೆ,ಸಿಗರೇಟುಗಳು,ಡೆಸರ್ಟುಗಳನ್ನ ತುಂಬಿಕೊಂಡು ಹೋಗುವುದು ನೋಡಿದರೆ ಹುಬ್ಬೇರಿಸುವಂತಾಗುತ್ತದೆ. ಆದರೇನು, ಮೊದಲೇ ಹೇಳಿದಂತೆ ಇವರಿಗೆ ಜೀವನ ಅನುಭವಿಸಬೇಕು ಅಷ್ಟೇ. ಇದರ ಮೇಲೆ ಇಲ್ಲಿನ ಸರ್ಕಾರ ಹಿರಿಯ ನಾಗರೀಕರಿಗೆ ಹೆಲ್ತ್ ಇನ್ಶೂರೆನ್ಸು,ಸೋಶಿಯಲ್ ಸೆಕ್ಯೂರಿಟಿ, ಎಂದು ದಂಡಿಯಾಗಿ ಹಣ ವ್ಯಯಿಸುವುದರೆಂದ,ಇಲ್ಲಿನ ಜನ ಅಷ್ಟು ಗಂಭೀರವಾಗಿ ಆರೋಗ್ಯದ ವಿಚಾರವನ್ನು ತೆಗೆದುಕೊಳ್ಳುವುದಿಲ್ಲವೆಂದೆನಿಸುತ್ತದೆ.ಹಾಗೇ ಇಲ್ಲಿನ ಸರಕಾರ ನಿಗದಿ ಪಡಿಸಿರುವ ಆಹಾರದ ಗುಣಮಟ್ಟವಾಗಲೀ, ಔಷಧದ ಗುಣಮಟ್ಟವಾಗಲೀ,ವ್ಯಾಪಾರಸ್ಥರು ಕೆಡಿಸುವ ಸಾಧ್ಯವೇ ಇಲ್ಲ. ಕಠಿಣವಾದ ನಿಯಮಗಳಿಗೆ ಹೆದರಿ, ಒಳ್ಳೆಯ ವಸ್ತುಗಳನ್ನೇ ತಯಾರಿ ಮಾಡುತ್ತಾರೆ.ಅತಿ ಸ್ಥೂಲಕಾಯದವರೂ ಬೇಕಾಬಿಟ್ಟಿ ತಿನ್ನುವುದನ್ನು ನೋಡಿದಾಗ ಮಾತ್ರ ನನಗೆ ಬಹಳವೇ ಕೆಡುಕೆನಿಸುತ್ತದೆ.ಜೊತೆಗೆ ಇಲ್ಲಿ ಆರೋಗ್ಯಕರ ಆಹಾರಕ್ಕೆ ಬೆಲೆ ಹೆಚ್ಚು. ಪಿಜ್ಜಾ, ಬರ್ಗರ್ ಎಂದರೆ ಸಸ್ತಾ.ನಾಲಗೆಯ ದಾಸರು ಇಂಥ ತಿಂಡಿಗಳನ್ನು ಎಗ್ಗಿಲ್ಲದೆ ಸ್ವಾಹ ಮಾಡುತ್ತಾರೆ. ಆದರೂ ಇತ್ತೀಚೆಗೆ ಕೆಲ ಯುವ ಪೀಳಿಗೆಯೂ ವಿಗನ್ ಕಾನ್ಸೆಪ್ಟ್ ಅನ್ನು ಅಳವಡಿಸಿಕೊಂಡು ಜಾಗೃತರಾಗುತ್ತಿರುವುದು ಮೆಚ್ಚುವಂತಹ ವಿಚಾರ.

                ಜನರ ಪ್ರಾಮಾಣಿಕತೆ, ಕಳ್ಳತನ,ಸುಲಿಗೆ, ವಂಚನೆ ಮುಂತಾದ ವಿಷಯವಾಗಿಯೂ ಅಷ್ಟೇ.ನಮ್ಮಲ್ಲಿ ಈ ವಿಚಾರದ ಗುಣಮಟ್ಟಕ್ಕೆ ಕಾರಣ, ಲಂಚ, ಶಿಫಾರಸ್ಸು, ಮಾಫಿ, ಕೋರ್ಟುಗಳಲ್ಲಿ ವರ್ಷಗಟ್ಟಲೆ ಮುಗಿಯದ ಕೇಸುಗಳು,ಇವುಗಳಿಂದ ಜನರಿಗೆ ಹೆದರಿಕೆ ಕಮ್ಮಿ.ಜೊತೆಗೆ,ಈ ಕೆಲಸಗಳಿಗೆ ವ್ಯಕ್ತಿಯ ಆರ್ಥಿಕ ಸ್ಥಿತಿಯೂ ಕಾರಣವಾಗುತ್ತದೆ.ಬಡವ, ಕಷ್ಟ ಪಟ್ಟು ದುಡಿದರೂ ನಾಲ್ಕು ಕಾಸು ಸಿಗುವುದಿಲ್ಲವೆಂದೋ, ಸೋಂಬೇರಿತನದಿಂದಲೋ,ಕಳ್ಳತನ ಮಾಡುತ್ತಾನೆ. ಇನ್ನು ಅಧಿಕಾರದಲ್ಲಿರುವವರು, ಯಾವ ಕಾನೂನು ಕಟ್ಟಳೆ, ಮುಲಾಜಿಗೂ ಹೆದರದೆ ಸರಕಾರದ ಹಣವನ್ನೇ ದೋಚುತ್ತಾರೆ.ತಮ್ಮ ಪ್ರಭಾವವನ್ನು ಬಳಸಿಯೋ, ಮತ್ತೊಂದೋ ಮಾಡಿ,ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಹಾಗಾಗಿ ಕೆಲವು ವ್ಯವಸ್ಥೆಗಳ ಲೋಪದೋಷಗಳಿಂದ ಕೆಲವು ವಿಚಾರಗಳನ್ನು ನಾವು ಗಂಭೀರವಾಗಿ ಪರಿಗಣಿಸಲಾಗಲೀ, ಬದಲಾಯಿಸಲಾಗಲೀ ಅತೀ ಕಷ್ಟ.

        ಇನ್ನು ವಾಹನೆ ಚಲಾಯಿಸುವಾಗ ಇಲ್ಲಿಗೆ ಬಂದ ಮೇಲೆ ಹಾರ್ನ್ ಮಾಡುವ ಸದ್ದನು ನಾನು ಕೇಳಿಯೇ ಇಲ್ಲ. ಸ್ವಚ್ಛತೆ,ಶಿಸ್ತು,ಸಮಯ ಪರಿಪಾಲನೆ,ಇದೆಲ್ಲಾ ನಮ್ಮ ದೇಶದ ಜನಜಂಗುಳಿಯಲ್ಲಿ ಕಾಪಾಡಿಕೊಳ್ಳುವುದು ಬಹಳವೇ ಕಷ್ಟ.

    ಇನ್ನು ಶೌಚಾಲಯಗಳ ವಿಷಯಕ್ಕೆ ಬಂದಾಗ, ನೀವು ಎಲ್ಲಿಂದ ಎಲ್ಲಿಗಾದರೂ ಪ್ರಯಾಣ ಮಾಡಿದರೂ, ಕನಿಷ್ಟ ಪಕ್ಷ ಮೂವತ್ತು ನಲವತ್ತು ನಿಮಿಷಗಳ ಅಂತರಗಳಲ್ಲಿ ರೆಸ್ಟ್ ಏರಿಯಾಗಳನ್ನ ನಿರ್ಮಿಸಿರುತ್ತಾರೆ. ಎಲ್ಲವೂ ಸ್ವಚ್ಛವಾಗಿಯೇ ಇರುತ್ತದೆ.ಆದರೆ, ನಿಜ ಕಣ್ರೀ, ನಮ್ ದೇಶದಲ್ಲಿ ದೂರದ ಪ್ರಯಾಣ ಮಾಡುವಾಗ ಮಹಿಳೆಯರಿಗೆ ಅದೆಷ್ಟು ಕಷ್ಟಾಂತ ಅನುಭವಿಸಿದವರಿಗೇ ಗೊತ್ತು. ಒಂದು ಕಾಲದಲ್ಲಿ ನಾವುಗಳು ಊರಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬರುವಾಗ ಕೂಡಾ ಇಂಥ ಪರಿಸ್ಥಿತಿಗಳು ಅನೇಕ.ಕೆ ಎಸ್ ಆರ್ ಟಿ ಸಿ ಬಸ್ಸಿನ ಡ್ರೈವರ್ ಯಾವುದೋ ಕಿತ್ತೋಗಿರೋ ಹೋಟಲ್ ಮುಂದೆ ತಿಂಡಿಗೇಂತ ನಿಲ್ಸುತ್ತಾನೆ. ಅಲ್ಲೋ, ಆ ಟಾಯ್ಲೆಟ್ಗಳು, ಮೂಗು ಮುಚ್ಚಿಕೊಂಡು ಹೋದರೂ, ತಿಂದಿರೋದೆಲ್ಲಾ ಆಚೆ ಬರುವಂತಿರುತ್ತದೆ. ಚಳಿಗಾಲದಲ್ಲಂತೂ ನಮ್ಮ ಪಾಡು ದೇವರೇ ಬಲ್ಲ!ಅಪರೂಪಕ್ಕೆ ಆಚೆ ಬಂದಿದ್ದೀವಲ್ಲಾಂತ ತೃಪ್ತಿಯಾಗಿ ತಿನ್ನುವಂತೆಯೂ ಇಲ್ಲ, ಕುಡಿಯುವಂತೆಯೂ ಇಲ್ಲ. ಯಾಕ್ ಬೇಕಪ್ಪಾ, ದಾರೀಲಿ ಏನಾದ್ರೂ ತೊಂದ್ರೆ ಆದ್ರೆ ಎಲ್ ಹುಡುಕೊಂಡ್ ಹೋಗೋದೂಂತ ಅರೆಬರೆ ತಿನ್ನುತ್ತಿದ್ದೆ.ನೀರೂ, ಪಾನೀಯಗಳಂತೂ ಕುಡಿಯುತ್ತಲೇ ಇರಲಿಲ್ಲ.ಪರಿಣಾಮ ಕಾನ್ಸ್ಟಿಪೇಷನ್!ಈಗೀಗ  ಮಾಲುಗಳಿಂದ ಯಾವ ಚಿಕ್ಕ ಪುಟ್ಟ ವ್ಯಾಪಾರಿಗಳಿಗೇನು ತೊಂದರೆ ಆಗಿದೆಯೋ,ಪದಾರ್ಥಗಳ ಬೆಲೆ ಜಿಗಿದು ಕೂತಿವೆಯೋ ಗೊತ್ತಿಲ್ಲ. ನಮ್ ಪುಣ್ಯಕ್ಕೆ ಟಾಯ್ಲೆಟ್ಟುಗಳು ಸ್ವಚ್ಛವಾಗಿಟ್ಟಿರುತ್ತಾರೆ. ಅದೊಂದು ಸಂತೋಷದ ಸುದ್ದಿ. ಹಾಗೆಂದು ಸರಕಾರವೂ ಸುಲಭ ಶೌಚಾಲಯಗಳನ್ನು ನಿರ್ಮಿಸಿ,ಕಾಸು ತೆಗೆದುಕೊಂಡರೂ ಪರವಾಗಿಲ್ಲ ನಮ್ಮಂಥವರಿಗೆ ಅನುಕೂಲ ಮಾಡಿ ಕೊಟ್ಟಿದೆಯಾದರೂ, ಅದರ ಮೇಂಟೇನೆನ್ಸ್ ಸರಿಯಾಗಿ ಮಾಡದೆ,ಬಳಸಲು ಮುಜುಗರವಾಗುತ್ತದೆ. ಇಲ್ಲಿ ಮಾತ್ರ ಈ ತಪ್ಪಿಗೆ ಸಾರ್ವಜನಿಕರದ್ದೂ ತಪ್ಪಿದೆ. ತಮ್ಮ ಕೆಲಸವಾದ ಮೇಲೆ ಸರಿಯಾಗಿ ಸ್ವಚ್ಛ ಮಾಡದೇ ಬರುವುದು! ಆದರೇನೂ, ಕೆಲವೊಮ್ಮೆ ನೀರಿನ ಅನುಕೂಲವೇ ಇಲ್ಲದಿದ್ದರೆ, ಅವರಾದರೂ ಏನು ಮಾಡಿಯಾರೂ? ಹೀಗಾಗಿ ಎಲ್ಲಾ ಅವ್ಯವಸ್ಥೆಗಳ ಹಿಂದೆ ಹಲವಾರು ಕಾರಣಗಳಿರುವುದರಿಂದ, ಯಾರೊಬ್ಬರನ್ನೂ ಬೊಟ್ಟು ಮಾಡಿ ತೋರಿಸಿದರೆ ತಪ್ಪಾಗುತ್ತದೆ.

     ಮತ್ತೊಂದು ವಿಷಯ ನಾನಿಲ್ಲಿ ಗಮನಿಸಿದ್ದೇನೆಂದರೆ, ಮಕ್ಕಳು ಯಾವ ರಂಗದಲ್ಲೇ ಸಾಧನೆ ಮಾಡಲಿ, ಇವರು ನೀಡುವ ಪ್ರೋತ್ಸಾಹ ಬಲು ವಿಶೇಷ.ಮಕ್ಕಳು ಎಲಿಮೆಂಟರಿ ಸ್ಕೂಲು ಪಾಸಾಗಲೀ, ಹೈಸ್ಕೂಲು ಪಾಸಾಗಲೀ, ಗ್ರಾಜುಯೇಷನ್ ಪಾಸಾಗಲೀ,ಮನೆಗಳ ಮುಂದೆ ಮಕ್ಕಳಿಗೆ ಅಭಿನಂದನೆ ತಿಳಿಸುವ ಬೋರ್ಡುಗಳನ್ನು ಹಾಕಿ, ಮನೆಯ ಮುಂದೆ ಅಲಂಕಾರಗಳನ್ನು ಮಾಡಿ,ಮಕ್ಕಳನ್ನು ಪ್ರೋತ್ಸಾಹಿಸುವ ಹಿತನುಡಿಗಳ ಬೋರ್ಡುಗಳನ್ನ ಹಾಕಿ, ಪಾರ್ಟಿಗಳನ್ನು ಮಾಡಿ ಸಂಭ್ರಮಿಸುತ್ತಾರೆ.ಅವರು ಅಷ್ಟು, ಇಷ್ಟು ಮಾರ್ಕುಗಳನ್ನ ತೆಗೆದುಕೊಂಡಿದ್ದಾರೆ ಎಂಬ ಅಸಮಾಧಾನವಿಲ್ಲದೆಯೇ.ಮಕ್ಕಳಿಗೆ ಆ ರೀತಿಯ ಪ್ರೋತ್ಸಾಹ, ಉತ್ತೇಜನದಿಂದ, ಮುಂದೆ ಇನ್ನೂ ಹೆಚ್ಚು ಸಾಧಿಸಲು ಹುರುಪು ತುಂಬುತ್ತದೆ,ಅನ್ನುವುದು ನನ್ನ ಭಾವನೆ.ನಮ್ಮ ಕಡೆಗಳಲ್ಲಿ”ಅಷ್ಟು ಫೀಸು ಕೊಟ್ಟು, ಟ್ಯೂಷನ್ ಗೆ ಕಳಿಸಿದ್ರೂ ಬರೀ ಎಪ್ಪತ್‌ ಪರಿಸೆಂಟ್ ತಗೊಂಡಿದಾನೆ ಬೇಕೂಫ಼.”ಅಂತ ಬಾರ್ಕೋಲು ತಗೊಂಡು ಬಾರಿಸುವ ತಂದೆತಾಯಿಗಳಿಗೇನೂ ಕಮ್ಮಿ ಇಲ್ಲ. ಹಾಗೆಂದ ಮಾತ್ರಕ್ಕೆ ಯಾವುದು ಸರಿ, ಯಾವುದು ತಪ್ಪು ಎಂದು ನಿಖರವಾಗಿ ಹೇಳುವ ತಿಳಿವಳಿಕೆ ನನ್ನಲ್ಲಿಲ್ಲ.ಯಾಕೆಂದರೆ, ಯಾವ ಪರಿಸ್ಥಿತಿಯನ್ನು ಯಾವ ವ್ಯಕ್ತಿ ಹೇಗೆ ಸ್ವೀಕರಿಸುವನೋ, ಫಲಿತಾಂಶ ಅದರ ಮೇಲೆ ಅವಲಂಬಿತವಾಗಿರುತ್ತದೆ.ಈಗ ಒಂದು ಉದಾಹರಣೇಂತ ತಗೊಂಡರೆ, ಒಬ್ಬ ಕುಡುಕನ ಮಗ, ಪ್ರತಿದಿನ ತೂರಾಡಿಕೊಂಡು ಉಡಾಫೆಯಾಗಿ ಬದುಕುವ ಅಪ್ಪನ್ನನ್ನು ನೋಡುತ್ತಾ ಅದೇನು ಮಾಡಬಾರದ ಅಪರಾಧವಲ್ಲವೆಂದು ತಾನೂ ಕೂಡಾ ಅಪ್ಪನಂತೆಯೇ ಕುಡಿತ ಕಲಿತು ಬದುಕಬಹುದು. ಅಥವಾ,”ಛೇ, ನಮ್ಮಪ್ಪನಿಗಿರುವ ಈ ಕೆಟ್ಟ ಅಭ್‌ಯಾಸಗಳಿಂದ ಎಷ್ಟು ತೊಂದರೆ! ಏನೇ ಕಾರಣಕ್ಕೂ ನಾನು ಈ ದರಭ್ಯಾಸಗಳನ್ನು ಕಲಿಯಬಾರಪ್ಪಾ!”ಎಂದು ನಿರ್ಧರಿಸಲೂ ಬಹುದು.ಎಲ್ಲಾ ಅವರ ಮನಸ್ಥಿತಿ, ನಿರ್ಧಾರದ ಮೇಲೆ ಮುಂದಿನ ಬದುಕು ನಿಂತಿರುತ್ತದೆ.

    ಇಲ್ಲಿನ ಮತ್ತೊಂದು ಅಳವಡಿಸಿಕೊಳ್ಳುವ ವಿಚಾರವೆಂದರೆ, ಇಲ್ಲಿ ಕೂಲಿಗಾರರು, ಕಾರ್ಮಿಕರ ಸುರಕ್ಷತೆಯ ಬಗೆಗಿನ ಕಾಳಜಿ.ತಂತ್ರಜ್ಞಾನದ ವಿಷಯವಾಗಿ ನಮ್ಮ ಭಾರತವೇನೂ ಯಾವ ದೇಶಕ್ಕೇನೂ ಕಮ್ಮಿ ಇಲ್ಲ. ಆದರೆ,ಕೆಲವು ರಂಗಗಳಲ್ಲಿ ಬೇಕಾದ ಅನುಕೂಲಗಳನ್ನು ಮಾಡಿಕೊಳ್ಳುವತ್ತ ಗಮನ ಕೊಡದಿರುವುದು ನಮ್ಮನ್ನು ನಾವು ಬದಲಿಸಿಕೊಳ್ಳಬೇಕಾದ ಅಂಶ. ಉದಾಹರಣೆಗೆ ಹೇಳುವುದಾದರೆ, ನಮ್ಮ ಕಡೆ ಬಹು ಮಹಡಿಯ ಕಟ್ಟಡಗಳಿಗೆ ಬಣ್ಣ ಹೊಡೆಯುವ ಕಾರ್ಮಿಕರು ಪಡುವ ಪಾಡನ್ನು ನೀವೆಲ್ಲರೂ ನೋಡಿರಬೇಕು. ನನಗಂತೂ ಅವರು ಸೊಂಟಕ್ಕೆ ಹಗ್ಗಗಳನ್ನ ಕಟ್ಟಿಕೊಂಡು, ಉಲ್ಟಾ ಜೋಲಿ ಹೊಡೆಯುತ್ತಾ ಬಣ್ಣ ಹೊಡೆಯುತ್ತಿದ್ದರೆ, ಎದೆಯೇ ಡವಡವ ಎಂದು ಸೂಪರ್ ಸ್ಪೀಡಿನಲ್ಲಿ ಹೊಡೆದುಕೊಳ್ಳುತ್ತದೆ.ಪಾಪ,ತಮ್ಮ ಜೀವವನ್ನ ಹಿಡಿಯಲ್ಲಿಟ್ಟುಕೊಂಡು ಕೆಲಸ ಎನ್ನುವ ಸಾಹಸವನ್ನ ಕೆಲವಾರು ನೂರು ರೂಪಾಯಿಗಳ ಕೂಲಿಗಾಗಿ ಮಾಡುತ್ತಾರೆ. ಹಾಗೇ ಚಲನಚಿತ್ರದ ಶೂಟಿಂಗ್ ಸಮಯದಲ್ಲಿ ಡೂಪ್ ಗಳಾಗಿ ಕೆಲಸ ಮಾಡುವ “ನಿಜ ಸಾಹಸಿಗರ” ಕಥೆಯೂ ಇದೆ ಅಲ್ಲವೇ?  ಮರ ಹತ್ತುವವರು, ಬಹು ಮಹಡಿ ಕಟ್ಟಡಗಳಿಗೆ ಬಣ್ಣ ಹೊಡೆಯುವವರು, ಮಾಲುಗಳಲ್ಲಿ ಮೇಲಿನ ಪತಿಕೆಗಳಲ್ಲಿ ಸಾಮಾನು ಜೋಡಿ ತೆಗೆಯುವವರು,

 ಕಟ್ಟಡ ಕಟ್ಟುವ ಕಾರ್ಮಿಕರು, ಅಥವಾ ಇನ್ಯಾವುದೇ ಜೀವವನ್ನ ಪಣಕಿಡುವ ಕೆಲಸಗಾರರಾಗಿರಬಹುದು.ಕಾರ್ಮಿಕರುಗಳ ಜೀವನದ ಸುರಕ್ಷೆಗಾಗಿ, ಅಮೆರಿಕದಲ್ಲಿ ಪ್ರತಿಯೊಂದಕ್ಕೂ ಬಹಳ ಸೇಫಾದ ಯಂತ್ರಗಳಿರುತ್ತದೆ.ನಮ್ಮ ದೇಶದಲ್ಲೂ ಆ ಯಂತ್ರಗಳನ್ನು ಅಳವಡಿಸಿಕೊಳ್ಳುವ ನಿಯಮವನ್ನು ಈ ಕೂಲಿಕಾರರಿಂದ ಕೆಲಸ ತೆಗೆಯುವ ಮಾಲೀಕರು ಹೊಂದಿರಲೇಬೇಕೆಂಬ ನಿಯಮವನ್ನು ಸರಕಾರ ಜಾರಿಗೆ ತರಬೇಕು.ಜೀವ, ಜೀವನ, ಯಾರದ್ದಾದರೂ ಒಂದೇ! ವಿಶೇಷವಾಗಿ ಹೇಳಬೇಕೆಂದರೆ, ಆರ್ಥಿಕವಾಗಿ ಹಿಂದುಳಿದವರ ಮನೆಗಳಲ್ಲಿ ದುಡಿಯುವ ಕೈ ಮುರಿದು ಹೋದರೆ, ಇನ್ನೂ ದಾರುಣ!ಹೆಂಡತಿಮಕ್ಕಳು ಭವಿಷ್ಯ ಕಾಣದೆ ಬೀದಿಗೆ ಬೀಳಬೇಕಾಗುತ್ತದೆ.

ಈ ಯಂತ್ರಗಳಿಗೇನೂ  ರಾಕೆಟ್ ತಂತ್ರಜ್ಞಾನ ಬೇಡ.ಆದರೆ, ಆ ಕೂಲಿಜನರ ರಕ್ಷಣೆಯ ಕಾಳಜಿ ಬೇಕು ಅಷ್ಟೇ.ಆ ವಿಷಯವಾಗಿ ನಮ್ಮ ದೇಶದಲ್ಲಿ ಬದಲಾವಣೆ ಇನ್ನೂ ಸಾಕಷ್ಟು ಆಗಬೇಕಿದೆ.

          ಇನ್ನು ಅಮೆರಿಕದಲ್ಲಿ ನೀವು ಯಾವ ಮಾರುಕಟ್ಟೆಗೇ ಹೋಗಿ, ಅಥವಾ ಅಂಗಡಿಗೇ ಹೋಗಿ, ಎಲ್ಲೆಡೆ ಸಾಮಾನ್ಯ ಕಸ್ಟಮರ್ ಈಸ್ ಗಾಡ್, ಎನ್ನುವಂತೆ ಅತ್ಯಂತ ಸೌಜನ್ಯದಿಂದ ಸೇವೆ ಮಾಡಿ, ಮಾತನಾಡಿಸುತ್ತಾರೆ. ನೀವು ಅವರ ತಲೆ ತಿನ್ನಿ, ವ್ಯಾಪಾರ ಮಾಡಿ, ಇಲ್ಲ ಬಿಡಿ. ಅವರುಗಳು ತಮ್ಮ ದನಿಯನ್ನು ಬದಲಿಸುವುದಿಲ್ಲ. ಹಾಗೇ ಅವರ ಪದಾರ್ಥದ ಗುಣಮಟ್ಟ ಇಷ್ಟವಾಗದೇ, ಹಿಂದಿರುಗಿಸಲು ತಂದರೂ ನಗುನಗುತ್ತಲೇ ಸ್ವೀಕರಿಸಿ, ತಾಳ್ಮೆಯಿಂದಲೇ ಕಾರಣ ಕೇಳಿ, ಸಲಹೆಯ ಅವಶ್ಯಕತೆಯಿದ್ದರೆ ಕೊಡುತ್ತಾರೆ.ಕೊಂಡುಕೊಳ್ಳುವವರೇ ಆಗಲಿ, ವಾಪಸ್ಸು ಮಾಡಲು ಬಂದವರೇ ಆಗಲಿ,ಇಬ್ಬರಲ್ಲೂ ಒಂದೇ ರೀತಿಯಾಗಿ ವ್ಯವಹರಿಸುತ್ತಾರೆ.ಇನ್ನು ಕೊತ್ತಂಬರಿಯಿಂದ ಹಿಡಿದು ಹಲ್ಲು ರಿಪೇರಿಯವರೆಗೂ ಚೌಕಾಸಿಯ ಮಾತೇ ಇಲ್ಲ. ಪಿಕ್ಸೂಂದ್ರೆ ಫಿಕ್ಸು!

      ಇನ್ನು ಕುಟುಂಬದೊಳಗಿನ ವಿಚಾರಕ್ಕೆ ಬಂದರೆ,ನಾನು ಗಮನಿಸಿದಂತೆ ಈ ಕೆಲಸ ಮೇಲು,ಕೀಳು,ಮೇಲು  ಮಾಡುವುದು, ಫೀಮೇಲು ಮಾಡುವುದು ಎಂಬ ಬೇಧ ಮಾಡದೆ, ಕುಟುಂಬದ ಎಲ್ಲ ಕೆಲಸಗಳನ್ನೂ ಯಾರಾದರೂ  ಸರಿಯೆ, ವಿಭಾಗಗಳನ್ನ ಮಾಡಿಕೊಳ್ಳದೆ ಸಂದರ್ಭಕ್ಕೆ ಸರಿಯಾಗಿ ಮಾಡುತ್ತಾರೆ.ಅದು ಮೆಚ್ಚಬೇಕಾದ ಅಂಶ.ಇಬ್ಬರೂ ದುಡಿಯುವಾಗ, ಇಬ್ಬರೂ ಸಮಭಾಗಿಗಳಾಗಿ ಮನೆಕೆಲಸ ಮಾಡುವುದೂ ಅತೀ ಆವಶ್ಯಕ. ಇತ್ತೀಚೆಗೆ ನಮ್ಮಲ್ಲಿ ಹೆಚ್ಚು ವಿಚ್ಛೇದನಗಳಾಗುತ್ತಿರುವುದಕ್ಕೆ ಇದೂ ಒಂದು ಕಾರಣ.ಮೇಲ್ ಮೇಲೆಂಬ ಭಾವನೆಯಲ್ಲಿದ್ದರೆ, ದರ್ಬಾರು ನಡೆಸಿದರೆ, ಫೀಮೇಲು ತಾನೀಗ ಮೇಲಿಗಿಂತೇನೂ ಕಡಿಮೆಯಿಲ್ಲವೆಂದು ಮೆಲ್ಲಗೆ ದೂರ ಸರಿಯತೊಡಗುವಳೇ! ಇದೇನ್ ನಮ್ ಕಾಲ ಕೆಟ್ಟೋಯ್ತೇ? ಫೀಮೇಲು ಈಗ ಎಲ್ಲದರಲ್ಲೂ ಸಮಪಾಲು, ಸಮಬಾಳು ನಮ್ಮ ಹಕ್ಕು ಎಂದು ಟೇಬಲ್ ಮೇಲೆ ಕುಟ್ಟಿ ಕುಟ್ಟಿ ಹೇಳುವ ಕಾಲವಿದು.ಜೊತೆಗೆ, ಫೀಮೇಲಿಗೆ ಸೈರಣಾಶಕ್ತಿ ಹೆಚ್ಚಿದೆ ನಿಜ ಕಣ್ರೀ ಒಪ್ತೀನಿ. ಆದ್ರೆ, ದೈಹಿಕ ಶಕ್ತಿ ಮೇಲಿಗೇ ಮೇಲಲ್ಲವೇ? ಈಗಿ ಆಹಾರ,ಜೀವನಶೈಲಿಗೆ ಒಂದೋ ಎರಡೋ ಹೆತ್ತ ಹೆಣ್ಣು ,ನಲವತ್ತರೊಳಗೇ ಒಳಗಿರುವ ಬಾಡಿ ಪಾರ್ಟುಗಳೆಲ್ಲಾ ಹಣ್ಣಾಗಿ, ಸ್ವಲ್ಪ ಸಹಾಯ ನಿರೀಕ್ಷಿಸುವುದರಲೇನೂ ತಪ್ಪಿಲ್ಲ.ಯಾಕಂದ್ರೆ, ಇಲ್ಲಿ ಯಾರ ಮನೇಲೂ ಮುನಿಯಮ್ಮಗಳು ಇರೋಲ್ಲ. ಕಸ, ಮುಸ್ರೆ, ಬಟ್ಟೆಬರೆ, ಅಂತ ಮಿಶಿನುಗಳಿದ್ದರೂ, ಅದನ್ನಾದರೂ ಉಪಯೋಗಿಸಲೇಬೇಕಲ್ಲಾ! ಜನಕ್ಕೆ  ಈಗ ಡೈವರ್ಷನ್ಗಳು ವಿಪರೀತವಾಗಿ, ಆ ಪೇಷನ್ಸೂ ಇಲ್ಲ ಬಿಡಿ.

ಜಿಮ್ಮು, ವರ್ಕೌಟ್ಗೆ ಜೈ, ಮನೆ ಚಾಕ್ರಿಗೆ ಬೈ.ಇದು ಈ ಕಾಲ!

       ಇನ್ನು ನಮಗೆಲ್ಲ ಕೊರತೆ ಕಾಣುವ ವಿಚಾರವೆಂದರೆ,ಪುಟ್ಪಾತ್ ಗಳಲ್ಲಿ ಯಾವ ವ್ಯಾಪಾರವಾಗಲೀ ಇರುವುದಿಲ್ಲ. ಚುರುಮುರಿ, ಪಾನೀಪುರಿ,ಬೇಲ್ ಪುರಿ ಕೊನೆಪಕ್ಷ ಕಡಲೆಕಾಯಿ, ಮಾವಿನಕಾಯಿ ಕೂಡಾ ಸಿಗುವುದಿಲ್ಲ.ಕೆಲವು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಮಾತ್ರ ರೋಡ್ ಸೈಡ್ ಅಂಗಡಿಗಳು ಕಾಣುತ್ತವೆ ಅಷ್ಟೆ.

ಬೀದಿ ತಿಂಡಿಯ ಚಪಲ ಇರುವವರಿಗಂತೂ ಇಲ್ಲಿ ತುಂಬಾ ನಿರಾಸೆಯಾಗುವುದಂತೂ ಖಂಡಿತಾ!

         ಇನ್ನು ಬೀದಿಯಲ್ಲಿ ಎಲ್ಲಿ ನೋಡಿದರೂ ಕಾರುಗಳದ್ದೇ ಕಾರುಬಾರು. ಸಾವಿರಾರು ಕಾರುಗಳ ನಡುವೆ ಒಂದು ಸ್ಪೋರ್ಟ್ಸ್ ಬೈಕ್ ಕಂಡರೆ ಅದೇ ಹೆಚ್ಚು.ಇನ್ನು ಫ್ರೀ ವೇ ಗಳಲ್ಲಿ ಹಲವಾರು ಸಾಮಾನು ಸರಂಜಾಮಿನ ಬೃಹದಾಕಾರದ ಟ್ರಕ್ಕುಗಳನ್ನ ಕಾಣುತ್ತೇವೆ.

ಅಷ್ಟು ವಾಹನಗಳು ಬೀದಿಗಳಲ್ಲಿದ್ದರೂ, ಒಂದೇ ಒಂದು ಗಾಡಿಯಿಂದಲೂ ಹೊಗೆ ಆಚೆ ಬರುವುದು ಕಾಣುವುದಿಲ್ಲ.ಅಷ್ಟು ವಾಹನಗಳು ಓಡಾಡುತ್ತಿವೆ ಎಂಬ ಅನುಭವವೂ ಆಗುವುದಿಲ್ಲ. ಅವರು,ನಮ್ಮಂತೆ ಪೆಟ್ರೋಲು, ಡೀಸೆಲ್ ಅನ್ನದೆ ಗ್ಯಾಸ್ ಅನ್ನುತ್ತಾರೆ. ಅದು ಇಂಧನದ ಬೇರೆ ರೂಪವೇ ಇರಬಹುದೋ ಏನೋ ಗೊತ್ತಿಲ್ಲ. ಹಾಗೆ ಅಲ್ಲಿ ಗ್ಯಾಸ್ ಲೆಕ್ಕ ಮಾಡುವುದು ಗ್ಯಾಲನ್ ಗಳಲ್ಲಿ.ಅಷ್ಟು ವಾಹನಗಳು ಓಡಾಡಿದರೂ ಹೊಗೆಯಾಗಲೀ,ಪೆಟ್ರೋಲಿನ ವಾಸನೆಯಾಗಲೀ,ಗೊತ್ತಾಗುವುದೇ ಇಲ್ಲ. ಇಂಧನದ ಗುಣಮಟ್ಟ ಕೂಡಾ ಬಹಳ ಉತ್ತಮವಾದದ್ದಿರಬೇಕೆಂದು ನನ್ನ ಅನಿಸಿಕೆ.ಇನ್ನು ಎಲ್ಲೋ ಕೆಲವೆಡೆ ಸೈಕಲ್ ಸವಾರರನ್ನು, ಹಾಗೇ, ಹದಿಹರೆಯದ ಹುಡುಗರು ಹೋವರ್ ಬೋರ್ಡುಗಳ ಮೇಲೆ ಸ್ಟೈಲಾಗಿ ಓಡಾಡುವುದನ್ನ ಬಿಟ್ಟರೆ, ಬೇರೊಂದು ಚಿಕ್ಕಪುಟ ಗಾಡಿ ಕಾಣುವುದೇ ಅಪರೂಪ.

               ಆ ದೇಶದಲ್ಲಿನ ಜನ ಏನೇ ಮಾಡಿದರೂ, ಅಚ್ಚುಕಟ್ಟಾಗಿ, ಶಿಸ್ತಿನಿಂದ ಮಾಡುತ್ತಾರೆ. ಅದು,ಕಛೇರಿಯಾಗಿರಬಹುದು ಅಥವಾ ಕಸ ಸೇರಿಸುವ ಡಂಪಿಂಗ್ ಯಾರ್ಡ್ ಆಗಿಬಹುದು. ಎಲ್ಲೆಡೆ ಸ್ವಚ್ಛ, ಸ್ವಚ್ಛ!ಯಾವ ವಸ್ತುವಿನ ವಿಲೇವಾರಿ ಹೇಗಾಗಬೇಕೋ, ಹಾಗೇ ಮಾಡುತ್ತಾರೆ. ಯಾವುದರಲ್ಲೂ ಮೈಗಳ್ಳತನವಿಲ್ಲ, ಹಾಗಂಥ ಕತ್ತೆ ಚಾಕರಿ ಮಾಡುತ್ತಾರೆಂದಲ್ಲ. ಎಲ್ಲವೂ ವ್ಯವಸ್ಥಿತ, ಸುಲಭೋಪಾಯ. ಎಲ್ಲೂ ನಿಯಮ ಮೀರುವುದಿಲ್ಲ.ರೈತರು ಹುಲ್ಲಿನ ಹೊರೆಯನ್ನು ಅಚ್ಚುಕಟ್ಟಾಗಿ ಪೆಟ್ಟಿಗೆಯಂತೆ ಒಟ್ಟಿರುವ ಚಿತ್ರ ಹಾಕಿರುವೆ ನೋಡಿ.ನಿಜ ಅಲ್ಲವೇ? ಯಾವುದೇ ಕೆಲಸ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ  ಆದಾಗ, ಕಾಣುವ ದೃಷ್ಟಿಯೇ ಬೇರೆ ರೀತಿಯಲ್ಲಿರುತ್ತದೆ. ಮನಸ್ಸಿಗೆ ಖುಷಿ ಕೊಡುತ್ತದೆ.ಸುಮ್ಮನೆ ಹೇಳುವುದಾದರೆ, ಗೋಡೆಯ ಮೇಲೆ  ಸಾಲುಸಾಲಾಗಿ ಒಂದೇ ಸಮನಾಗಿ ಬೆರಣಿಯನ್ನೇ ತಟ್ಟಿ ಹಾಕಿದ್ದರೂ ಅಂದವಾಗಿ ಕಾಣುತ್ತದೆ.ಬೀದಿಗಳಲ್ಲಿ ಉಗಿಯುವುದು, ಸೀನುವುದು,ಒಂದ ಮಾಡುವುದು, ಇಂಥ ಯಾವ ಸೀನುಗಳನ್ನೂ ಕಾಣುವ ಭಾಗ್ಯ ಯಾರಿಗೂ ಇರುವುದಿಲ್ಲ.

ಕಸ, ಕಡ್ಡಿ, ಕಾಗದ, ಪ್ಲಾಸ್ಟಿಕ್ ಇಂಥ ಯಾವ ಪದಾರ್ಥಗಳ ದರ್ಶನವೂ ರಸ್ತೆಯ ಬದಿಗಳಲ್ಲಿ ಬಲು ಅಪರೂಪ.ಯಾವಯಾವ ವಸ್ತು ಹೇಗೆ ವಿಲೇವಾರಿ ಆಗಬೇಕೋ, ಅದಕ್ಕೆ ವ್ಯವಸ್ಥೆ ಹೇಗಿರಬೇಕೋ,ಅದೆಲ್ಲಾ ಬಹಳ ಶಿಸ್ತಿನಿಂದ ಮಾಡುತ್ತಾರೆ. ಸೊಳ್ಳೆ, ನೊಣ, ಹುಳ, ಹುಪ್ಪಟೆ ಇವುಗಳ ದರ್ಶನವಂತೂ ಕಾಣೆ.ಇನ್ನು ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೂ ಇಲ್ಲಿನ ಜನ ಎತ್ತಿದ ಕೈ. ಯಾವುದಾದರೂ ಕಟ್ಟಡ ಕಾಮಗಾರಿ ರಸ್ತೆ ಬದಿಯಲ್ಲಿಯೋ ಅಥವಾ ಮತ್ತೆಲ್ಲಾದರೂ ನಡೆಯಬೇಕಾದರೆ, ಅಡ್ಡಕ್ಕೆ ಬರುವ ಮರಗಳ( ಸಾಮಾನ್ಯ ತಾಳೆಮರಗಳು) ಟೊಂಗ ಹಾಗೂ ಗರಿಗಳನ್ನ ಕೂಡಿಸಿ ಕ್ಲಿಪ್ ಹಾಕಿ ಕೆಲಸ ಮಾಡುತಾರೆಯೇ ಹೊರತು ಗರಿ, ಟೊಂಗೆಗಳನ್ನೂ ಕೀಳುವುದಿಲ್ಲ.

      ಕೊನೆಯದಾಗಿ ಹೇಳಬೇಕೆಂದರೆ, ನಿಜ ಕಣ್ರೀ, ಅಮೆರಿಕದಲ್ಲಿ ಎಲ್ಲೆಡೆ ಸುವ್ಯವಸ್ಥೆ, ನಿಯಮ ಪರಿಪಾಲನೆ, ಸ್ವಚ್ಛತೆ ಏನೇ ಇದ್ದರೂ, ನಮ್ಮ ದೇಶದಲ್ಲಿರುವಂತೆ ಲವಲವಿಕೆ ಇರುವುದಿಲ್ಲ. ವಾಕ್ ಮಾಡಲೆಂದು ರಸ್ತೆಗಿಳಿದರೆ, ರಸ್ತೆಯೆಲ್ಲಾ ನಿರ್ಜನ, ಯಾವ ಸದ್ದೂ ಇರದೆ ನೀರವ ಮೌನ!ಎಲ್ಲೋ ಒಬ್ಬರು ನಾಯಿಗಳನ್ನ ಹಿಡಿದವರು ಬೀದಿಗೆ ಬರುವುದು ಬಿಟ್ಟರೆ, ಇನ್ಯಾರ ಮುಖದರ್ಶನವೂ ಕಾಣೆ.( ಸಾಮಾನ್ಯ ಕೆಲವು ದೊಡ್ಡ ನಗರಗಳನ್ನು ಬಿಟ್ಟರೆ ಮಿಕ್ಕೆಲ್ಲ ಕಡೆ ಹೀಗೆ)

ಎಲ್ಲಿಯಾದರೂ ಹೊರಗೆ ಹೋದರೂ, ಸರದಿ ಸಾಲುಗಳಲ್ಲಿ ನಿಂತವರು ಶಿಸ್ತು ಪಾಲಿಸುತ್ತಾ ನಿಯಮಾನುಸಾರ ನಡೆಯುವುದರಿಂದ, ಎಲ್ಲೂ ಜಗಳ, ಗಲಾಟೆ, ಗಲಭೆ, ಕಾಮಿಡಿ, ಚರ್ಚೆಗಳೇ ಇರುವುದಿಲ್ಲ.ಹೀಗಾಗಿ ನಮಗಲ್ಲಿ  ಎಲ್ಲಿ ಹೋದರೂ ಬಿಮ್ ಎನಿಸುತ್ತದೆ.ಖಾಲಿ ಖಾಲಿ ಭಾಸವಾಗುತ್ತದೆ. ನಮ್ಮ ದೇಶದಲ್ಲಿರುವ ಜೀವ ಕಳೆಯ ಕೊರತೆ ಅಲ್ಲಿ,ಎದ್ದು ಕಾಣುತ್ತದೆ.ಗೌಜು ಗದ್ದಲದ ಜೊತೆಗೆ ಬೆಳೆದ ನಮಗೆ ಅಲ್ಲಿನ ವಾತಾವರಣ ಬಿಕೋ ಎಂಬ ಭಾವನೆ ಕೊಡುತ್ತದೆ.ಜೊತೆಗೆ ಹವಾಮಾನದ ವಿಪರೀತ ಏರುಪೇರಿನ ಆ ದೇಶಕ್ಕಿಂತಲೂ ಎಲ್ಲಾ ಕಾಲದಲ್ಲಿಯೂ ಸೈರಿಸುವ ಹವಾಮಾನದ ನಮ್ಮ ದೇಶ, ನನಗೆ ವೈಯುಕ್ತಿಕವಾಗಿ ಬಹಳ ಆಪ್ಯಾಯವೆನಿಸುತ್ತದೆ.ಧನುರ್ಮಾಸ,ಭಾದ್ರಪದ,ಆಶ್ವೀಜ, ಹೀಗೆ ವಿಶೇಷ ಮಾಸಗಳಲ್ಲಿ ಬೆಳ್ಳಮ್ಬೆಳಗ್ಗೆ ನಮ್ಮ ಮನೆಯ ಸುತ್ತ ದೇಗುಲಗಳಲ್ಲಿ ಕೇಳಿ ಬರುವ ವೇದಮಂತ್ರಗಳಾಗಲಿ, ಭಕ್ತಿಗೀತೆಗಳಾಗಲಿ, ಕೇಳದೆ ಏನೋ ಕಳೆದುಕೊಂಡ ಭಾವನೆ ಮೂಡುತ್ತದೆ.ದೇವಾಲಯಗಳು,ಜಾತ್ರೆ, ತೇರು, ಊರಹಬ್ಬಗಳ ಸಂಭ್ರಮ, ಸಡಗರದಲ್ಲಿ ನಮ್ಮ ಭಾವನೆಗಳು ಬೆರೆತುಹೋಗಿ,ಅವುಗಳ ಕೊರತೆಯಿಂದ ಆ ನಾಡಿನಲ್ಲಿರುವಾಗ ಏನೋ ಬಣಗುಟ್ಟಿದಂತೆ ಬಿಕೋ ಎನಿಸುತ್ತದೆ. “ಸಂಸ್ಕೃತಿ”ಯ ವಿಚಾರವಾಗಿ ಬಂದಾಗ,ನನಗೆ,”ಮೇರಾ ಭಾರತ್ ಮಹಾನ್!”

ಊಡುಗೆ, ತೊಡುಗೆ, ಆಹಾರ, ವಿಹಾರಗಳಲ್ಲಿ ನಮ್ಮ ದೇಶದಲ್ಲಿರುವ ವೈವಿದ್ಯತೆ ಬಹುಶಃ ಲೋಕದ ಇನ್ಯಾವ ಮೂಲೆಯಲ್ಲೂ ಕಾಣಲು ಸಿಗುವುದಿಲ್ಲವೇನೋ!

ಈ ಕೆಲವು ಕಾರಣಗಳಿಗೆ,”ನಮ್ಮವ್ವಾ ನಮ್ಮವ್ವಾನೇ”, ಎನ್ನುವ ನುಡಿಯಂತೆ, ”ಏ ಮೇರಾ ಇಂಡಿಯಾ, ಐ ಲವ್ ಮೈ ಇಂಡಿಯಾ!”ನಮ್ಮವ್ವನನ್ನು ಮೆಚ್ಚಿಕೊಳ್ಳಲು ಇನ್ನೂ ಹೇರಳವಾದ ಕಾರಣಗಳಿದ್ದು, ಬರೆಯುತ್ತಾ ಕೂತರೆ, ಮುಗಿಯುವ ಮಾತೇ ಇಲ್ಲ.ನಮ್ಮವ್ವ ಯಾವ ವಿಚಾರದಲ್ಲೂ ಬಡವಳಲ್ಲ. ಆದರೆ, ಅವಳ ಮಕ್ಕಳಾದ ನಾವು, ಅವಳ ಹಿರಿಮೆ, ಗರಿಮೆಯನ್ನ ಸರಿಯಾಗಿ ಗುರುತಿಸಿ, ಗೌರವಿಸದೇ ಇರುವುದು ನಮ್ಮವ್ವನ ದುರ್ದೈವ! ಅವಳನ್ನು ಎಲ್ಲ ರೀತಿಯಿಂದಲೂ ಕಾಪಾಡಿಕೊಳ್ಳುವುದು ಮಕ್ಕಳಾದ ನಮ್ಮ ಕರ್ತವ್ಯ!

           ಏನಾದರಾಗಲಿ, ಒಳ್ಳೆಯ ವಿಚಾರಗಳು ಎಲ್ಲಿಯಾದರೂ ಇರಲಿ, ಯಾರಿಂದಲಾದರೂ ಬರಲಿ, ತೆರೆದ ಮನಸ್ಸಿನಿಂದ ಒಪ್ಪಿಕೊಂಡು, ಅಳವಡಿಸಿಕೊಳ್ಳುವತ್ತ ಗಮನ ಹರಿಸಿದರೆ, ನಾವು ದೇಶ ಸುತ್ತಿದ್ದಕ್ಕೂ ಸಾರ್ಥಕ!

ಸದ್ವಿಚಾರಗಳ ಅಳವಡಿಕೆ ನಮ್ಮ ಏಳಿಗೆಗಾಗಿಯೇ ತಾನೇ? ಅಷ್ಟು ಮಾತ್ರ ಮನಸ್ಸಿನಲ್ಲಿಟುಕೊಂಡು ಬದಲಾವಣೆಯನ್ನು ಒಪ್ಪಿಕೊಳ್ಳೋಣ, ಅಪ್ಪಿಕೊಳ್ಳೋಣ!

          ಸಧ್ಯಕ್ಕೆ ನೆನಪಿಗೆ ಬಂದ ಕೆಲವು ವಿಚಾರಗಳನ್ನ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ.ನಾವು ಕೂಡಾ ಸಮಷ್ಟಿಯ ಬದಲಾವಣೆಯತ್ತ ಕಾಯುತ್ತಾ ಕೂರದೆ, ನಮಗೆ ಆಗುವ ಬದಲಾವಣೆಗಳನ್ನ ನಾವು ಅಳವಡಿಸಿಕೊಳ್ಳುತ್ತ,ನಮ್ಮ ಜೀವನವನ್ನ ಮತ್ತಷ್ಟು ಸುಂದರವಾಗಿಸೋಣ.ಎಲ್ಲರಿಗೂ ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಶುಭಾಶಯಗಳು.

*********

ಫೋಟೊ ಆಲ್ಬಂ


ರೂಪ ಮಂಜುನಾಥ

Leave a Reply

Back To Top