ಅಂಕಣ ಸಂಗಾತಿ

ಗಜಲ್ ಲೋಕ

ಸಹದೇವ ಅವರ ಗಜಲ್ ಗಳಲ್ಲಿ

ಬೆವರ ಹನಿ

ಹಲೋ ನನ್ನ ಗಜಲ್ ಕನಸುಗಳೆತಮಗೆಲ್ಲರಿಗೂ ಹೃನ್ಮನದಿ ಸಲಾಮು

ಕಾಯುವುದು, ಕನವರಿಸುವುದು ಪ್ರೇಮಿಗಳೊಂದಿಗೂ ಕಲಾರಸಿಕರ ಸ್ವತ್ತೂ ಕೂಡ ಹೌದು. ಅಂತೆಯೇ ನೀವೆಲ್ಲರೂ ಈ ವಾರವೂ ಸಹ ಗಜಲ್ ಗೋ ಒಬ್ಬರ ದರ್ಶನಕ್ಕಾಗಿ ಹಂಬಲಿಸುತಿರುವಿರಿ ಎಂದು ಬಲ್ಲೆ ನಾನು. ನಿಮ್ಮ ಇಚ್ಛೆಯಂತೆ ಇಂದು ಮತ್ತೊರ್ವ ಪ್ರತಿಭಾನ್ವಿತ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಾನು ತಮ್ಮ ಮುಂದೆ ಹಾಜರಾಗಿದ್ದೇನೆ. ಎಂದಿನಂತೆ ತಾವು ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವಿರಿ ಎಂದು ನಂಬಿರುವೆ. ನಂಬಿಕೆಯೆ ಜೀವನವಲ್ಲವೇ…!!

ನೀರ ಗುಳ್ಳೆಯಂತೆ ನನ್ನ ಅಸ್ತಿತ್ವವಿಹುದು

ಬಿಸಿಲುಗುದುರೆಯಂತೆ ಎಲ್ಲ ಪ್ರದರ್ಶನವಿಹುದು

ಮೀರ್

       ಮಣ್ಣು.. ಮಣ್ಣು ಎಂದಾಗ ನಮ್ಮ ಕಣ್ಣ ಮುಂದೆ ಹಲವಾರು ಚಿತ್ರಗಳು, ಹಲವಾರು ವಿಚಾರಗಳು ನಮ್ಮ ಸ್ಮೃತಿ ಪಟಲದ ಮೇಲೆ ಹಾದು ಹೋಗುತ್ತವೆ. ಭೂಮಿ, ಕೃಷಿ, ಬೆವರು, ರೈತ, ಅನ್ನ, ಹೆಣ್ಣು, ಸಂಪತ್ತು, ಸಾವು… ಎನ್ನುವ ಮೂರ್ತ-ಅಮೂರ್ತದ ಕಲ್ಪನೆಗಳು ನಮಗೆ ಇದಿರುಗೊಳ್ಳುತ್ತವೆ. ಇವುಗಳಲ್ಲಿ ಬೆವರು, ಅನ್ನ, ರೈತ.. ಎನ್ನುವ ಪರಿಕಲ್ಪನೆಗಳು ನಮಗೆ ಯೋಚಿಸಲು ಹಚ್ಚುತ್ತವೆ. ಕಾರಣ, ರೈತ ನಮ್ಮ ದೇಶದ ಬೆನ್ನೆಲುಬು ; ಬೆವರಿನಿಂದಲೆ ಅನ್ನಕ್ಕೆ ಸ್ವಾದ ಬರುತ್ತದೆ. ಈ ಸ್ವಾದದ ಹಿಂದೆ ಭೂಮಿತಾಯಿಯ ಚೊಚ್ಚಲ ಮಗನ ಅಗಣಿತ ಪರಿಶ್ರಮ ಇರುತ್ತದೆ. ಮಣ್ಣನ್ನು ಶುಚಿಗೊಳಿಸುವುದು, ಆ ಮಣ್ಣನ್ನು ಬೆವರಿನಿಂದ ಹದಗೊಳಿಸಿ ಕಳೆ ಕೀಳಿದಾಗಲೆ ಅದು ಫಲವಂತಿಕೆಯ ರೂಪವನ್ನು ಪಡೆಯುತ್ತದೆ. ಇದೇ ಮಾದರಿಯಲ್ಲಿ ಮನಸ್ಸು ನಿರ್ಮಲವಾಗಿ ಇರಬೇಕಾದರೆ ಆವಾಗಾವಾಗ ಮನಸ್ಸಿನಲ್ಲಿ ಬೇರೂರಿದ ಕಳೆಯನ್ನು ಕೀಳಬೇಕಾಗುತ್ತದೆ. ಮನುಷ್ಯನ ಅನುಭವ ಮತ್ತು ಅಭಿರುಚಿಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುವುದರಿಂದ ವರ್ತಮಾನದ ನಿಲುವುಗಳು ಶಾಶ್ವತವಾಗಿ ಇರುವುದಿಲ್ಲ. ಇದನ್ನು ಅರಿತು ಬಾಳಿನಲ್ಲಿ ಅಳವಡಿಸಿಕೊಳ್ಳಬೇಕಾದರೆ ಆಧ್ಯಾತ್ಮಿಕ ರೂಪದ ಸ್ಥಿತಪ್ರಜ್ಞೆ ತುಂಬಾ ಅತ್ಯವಶ್ಯಕ. ಇದು ಒಡಮೂಡುವುದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮುಖಾಂತರ. ಅಕ್ಷರವು ತನ್ನ ಮಡಿಲಲ್ಲಿ ಸಾಮಾಜಿಕ ವ್ಯವಸ್ಥೆಯ ಇಡೀ ಚಿತ್ರಣವನ್ನು ಗರ್ಭಿಕರಿಸಿಕೊಂಡಿದೆ. ನಾವು ಅಕ್ಷರಗಳನ್ನು ಎಷ್ಟೆಷ್ಟು ಪ್ರೀತಿಸುತ್ತೇವೆಯೊ, ಎಷ್ಟೆಷ್ಟು ಆರಾಧಿಸುತ್ತೇವೆಯೊ ಅಷ್ಟಷ್ಟು ಅಕ್ಷರಗಳು ನಮ್ಮ ಒಡನಾಡಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ಅಕ್ಷರಲೋಕದ ಹಿರಿಯ ಮಗಳೆಂದರೆ ಅದು ಕಾವ್ಯ ಎನ್ನಬಹುದು. ಪ್ರಪಂಚದ ಎಲ್ಲ ಭಾಷೆಯ ಕಾವ್ಯ ನಮ್ಮ ಹೃದಯದ ಬಾಗಿಲನ್ನು ಸದಾ ತಟ್ಟುತ್ತಲೆ ಇರುತ್ತದೆ. ಇಂಥಹ ಕಾವ್ಯದಲ್ಲಿಯೆ ಅಪರೂಪದ ಅನನ್ಯ ಕಾಮನಬಿಲ್ಲು ಎಂದರೆ ಅದು ಅರಬ್ ಸ್ತಾನದಲ್ಲಿ ಚಿಗುರೊಡೆದ ‘ಗಜಲ್’ ಎಂಬ ಓಯಾಸಿಸ್! ಇಂದು ‘ಗಜಲ್’ ರೇಗಿಸ್ತಾನದ ಸ್ವತ್ತಾಗಿ ಉಳಿಯದೆ ಇಡೀ ಮನುಕುಲದ ತಂಬೆಲರಾಗಿದೆ. ಈ ತಂಗಾಳಿಗೆ ಮೈಯೊಡ್ಡಿದ ಅಸಂಖ್ಯಾತ ಗಜಲ್ ಪ್ರೇಮಿಗಳಲ್ಲಿ ನಮ್ಮ ಮಣ್ಣಿನ ಮಗ ಶ್ರೀ ಸಹದೇವ ಯರಗೊಪ್ಪ ಅವರೂ ಒಬ್ಬರು.

         ಶ್ರೀ ಸಹದೇವ ಯರಗೊಪ್ಪ ಅವರು ಶ್ರೀ ದ್ಯಾವಪ್ಪ ಮತ್ತು ಶ್ರೀಮತಿ ಭೀಮವ್ವ ದಂಪತಿಗಳ ಐದನೇಯ ಮಗನಾಗಿ ಗದಗ್ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಎಂಬ ಹಳ್ಳಿಯಲ್ಲಿ ೧೯೭೬ ರ ಡಿಸೆಂಬರ್ ೦೧ರಂದು ಜನಿಸಿದ್ದಾರೆ. ಬಾಲ್ಯದಿಂದಲೂ ಗ್ರಾಮೀಣ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮ ಜೀವನವನ್ನು ಕಳೆದ ಶ್ರೀಯುತರು ಅಪ್ಪಟ ದೇಶಿ ಪ್ರತಿಭೆ. ಇವರ ತಂದೆಯವರು ಹವ್ಯಾಸಿ ರಂಗಭೂಮಿಯ ಕಲಾವಿದರು. ಸಹಜವಾಗಿಯೇ ಯರಗೊಪ್ಪ ಅವರ ಸೃಜನಶೀಲತೆ, ಮಣ್ಣಿನ ಪ್ರೀತಿ ಮನೆಯಿಂದಲೇ ಪ್ರಭಾವಿತಗೊಂಡು, ವಿಕಸನಗೊಂಡಿದೆ. ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮೆಣಸಗಿಯಲ್ಲಿ, ಪದವಿಪೂರ್ವ ಶಿಕ್ಷಣವನ್ನು ರೋಣ ತಾಲ್ಲೂಕಿನ ಹೊಳೆ ಆಲೂರು ಪಟ್ಟಣದಲ್ಲಿ ಹಾಗೂ ಸ್ನಾತಕ, ಸ್ನಾತಕೋತ್ತರ ಕೃಷಿ ಪದವಿ (ಬೇಸಾಯ ಶಾಸ್ತ್ರ)ಯನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದಾರೆ. ೨೦೦೭ರಲ್ಧಿ ಕರ್ನಾಟಕ ರಾಜ್ಯ ಕೃಷಿ ಇಲಾಖೆಗೆ ಸಹಾಯಕ ಕೃಷಿ ನಿರ್ದೇಶಕರಾಗಿ ಸೇವೆಗೆ ಸೇರಿಕೊಂಡು, ಸದ್ಯ ಬಳ್ಳಾರಿಯ ಹೊಸಪೇಟೆ ಉಪ ವಿಭಾಗದ ಉಪ ಕೃಷಿ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

      ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸದಾ ಓದು-ಬರಹದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತಿದ್ದರು. ‘ಸಾಹಿತ್ಯ ಸಂಪ್ರೀತಿ’, ‘ಗದಗಿನ ಕೃಷಿ ಸಾಧಕರು’, ‘ಗದಗಿನ ಹಸಿರು ಪ್ರವರ್ತಕರು’, ‘ಕೃಷಿ ಬೆಳೆಗಳಲ್ಲಿ ಕಳೆನಾಶಕಗಳ ಬಳಕೆ’, ಕೃತಿಗಳೊಂದಿಗೆ ‘ಸಾಚಿ ಗಜಲ್’, ‘ಬಿರಿದ ನೆಲದ ಧ್ಯಾನ ‘, ಎಂಬ ಎರಡು ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವುಗಳೊಂದಿಗೆ ಹಲವಾರು ಸಂಶೋಧನಾ ಲೇಖನಗಳನ್ನು, ಪ್ರಬಂಧಗಳನ್ನೂ ಮಂಡಿಸಿದ್ದಾರೆ.‌ ಇವರ ‘ವಚನಗಳಲ್ಲಿ ಕೃಷಿ ವಿಜ್ಞಾನದ ಹೊಳಹುಗಳು’, ಎನ್ನುವ ಲೇಖನಕ್ಕೆ “ಉತ್ತಮ ಕನ್ನಡ ಕೃಷಿ ಲೇಖನ ಪ್ರಶಸ್ತಿ”, “ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ”, “ಅಮ್ಮ ಪ್ರಶಸ್ತಿ”.. ಮುಂತಾದ ಪ್ರಶಸ್ತಿ ಪುರಸ್ಕಾರಗಳು ಇವರ ನಿಸ್ವಾರ್ಥ ಸೇವೆ ಹಾಗೂ ಸಾಹಿತ್ಯಕ್ಕೆ ಸಂದಿವೆ.

      ಆನಂದವಾಗಿರುವುದು ಎಂದರೆ ಸಂತೋಷವಾಗಿರುವುದು ಎಂದಲ್ಲ. ಏಕೆಂದರೆ ಸಂತೋಷವಾಗಿರಲು ಅದಕ್ಕೊಂದು ಕಾರಣ ಬೇಕಾಗುತ್ತದೆ. ಅದನ್ನು ಪಡೆಯುವ ದಾರಿ ನಮಗೆ ಕೆಲವೊಮ್ಮೆ ದುಃಖಕ್ಕೂ ನೂಕಬಹುದು. ಆದರೆ ಆನಂದಕ್ಕೆ ಯಾವ ಕಾರಣಗಳೂ ಬೇಕಾಗಿಲ್ಲ. ಅದು ಗೊಂದಲಗಳಿಲ್ಲದ, ವಿಚಲಿತವಲ್ಲದ ಒಂದು ಅಪೂರ್ವ ಮಾನಸಿಕ ಸ್ಥಿತಿ. ಇದು ದೊರೆಯುವುದು ಗಜಲ್ ನ ಅಶಅರ್ ನಲ್ಲಿ. ಬದುಕಿನ ವಿವಿಧ ಆಯಾಮಗಳ ದರ್ಶನವನ್ನು ನಾವು ಗಜಲ್ ಚಾಂದನಿಯಿಂದ ಪಡೆಯಲು ಸಾಧ್ಯ. ಪ್ರೀತಿ ಎನ್ನುವುದು ಕೊಡಬಲ್ಲ ಹಾಗೂ ತೆಗೆದುಕೊಳ್ಳಬಲ್ಲ ಒಂದು ಮಹೋನ್ನತ ಉಡುಗೊರೆ. ಪ್ರೀತಿಯಿಲ್ಲದೆ ಬದುಕಿದ ಬದುಕು ಅಪರಿಪೂರ್ಣ ಎನ್ನುವುದನ್ನು ‘ಗಜಲ್’ ಪಾರಿಜಾತ ನಮಗೆ ಮನವರಿಕೆ ಮಾಡಿ ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಸಹದೇವ ಯರಗೊಪ್ಪ ಅವರ ಗಜಲ್ ಗಳಲ್ಲಿ ಶ್ರಮ ಸಂಸ್ಕೃತಿಯ ಪ್ರೀತಿಯಿದೆ, ಬೆವರಿನ ರುಚಿಯಿದೆ, ಸಮತಾವಾದದ ಕನಸಿದೆ, ಬಂಡವಾಳಶಾಹಿಯ ಸಾತ್ವಿಕ ವಿರೋಧವಿದೆ, ಜಾತಿಯತೆಯನ್ನು ಹರಿದೊಗೆಯುವ ಸಮಾನತೆಯ ಪ್ರೀತಿಯಿದೆ. ಇವರ ಗಜಲ್ ಗಳನ್ನು ಓದುತ್ತಾ ಹೋದಂತೆ ನಮಗೆ ಮಣ್ಣಿನ ವಾಸನೆ, ಮಣ್ಣಿನ ಮಹಿಮೆ, ಮಣ್ಣಿನ ಪ್ರೀತಿ, ಮಣ್ಣಿನ ನ್ಯಾಯ… ಎಲ್ಲವುಗಳ ಇಬಾದತ್ ಆಗುತ್ತದೆ. ಇವುಗಳೊಂದಿಗೆ ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಧರ್ಮ-ದೇವರುಗಳ ತಾಕಲಾಟ, ಹಸಿದ ಒಡಲಿನ ಸಂಕಟ…. ಎಲ್ಲವೂ ತನ್ನಿಂದ ತಾನೇ ತೆರೆದುಕೊಳ್ಳುತ್ತ ಹೋಗುತ್ತದೆ. ರಾಜಕೀಯದ ಸೋಂಕಿನಿಂದ ಜಗವೆಲ್ಲ ಬಂಜೆಯಾಗುತ್ತಿದೆ ಎಂಬ ಆತಂಕ ಇವರ ಗಜಲ್ ಗಳಲ್ಲಿ ಕಾಣುತ್ತೇವೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಈ ಕೆಳಗಿನ ಷೇರ್. 

ಗಲ್ಲಿ ಗಲ್ಲಿಯಲ್ಲಿ ಧರ್ಮ ದೇವರುಗಳು ಮಂದಿರ ಮಸೀದೆಗಳಾಗಿ ರಕ್ತ ಸುರಿಸುತ್ತಿದ್ದಾರೆ ಸಾಕಿ

ಜಗದ ಸೆರಗಿನೊಳಗಿನ ದ್ವೇಷದ ಕೆಂಡ ಉಂಡು ರುಂಡ ಚೆಂಡಾಡುತ್ತಿದ್ದಾರೆ ಸಾಕಿ

ದೇವರು-ಧರ್ಮ ಎಂಬುದು ಪ್ರಜ್ಞಾವಂತ ನಾಗರಿಕರ ಪರ್ಸನಲ್ ವಿಚಾರಗಳು. ಅವು ಯಾವತ್ತೂ ಪಬ್ಲಿಕ್ ನಲ್ಲಿ ಚರ್ಚೆ ಆಗಬಾರದು. ಆದರೆ ದುರಂತವೆಂದರೆ ಇಂದು ಖಾಸಗಿಯಾಗಿರಬೇಕಾದ ವಿಚಾರಗಳು ಬೆತ್ತಲೆಯಾಗುತ್ತಿವೆ! ಮನುಕುಲದ ಸೃಷ್ಟಿಕರ್ತನೆಂದು ಹಲವರಿಂದ ಪೂಜೆಗೆ ಒಳಗಾಗುತ್ತಿರುವ ದೇವರು ತನ್ನ ಸೂರಿಗಾಗಿ ಲಾಂಗು ಮಚ್ಚು ಹಿಡಿದು ರೋಡಿಗಿಳಿದಿರುವುದು ಕಂಡರೆ ದೇವರೆಂದರೆ ಭಯವಾಗುತ್ತದೆ, ದೇವರ ಸಹವಾಸವೇ ಬೇಡ ಎನಿಸುತ್ತದೆ ಎಂಬ ಭಾವದುಂಗುರವನ್ನು ಈ ಷೇರ್ ಪ್ರತಿಧ್ವನಿಸುತ್ತಿದೆ.

         ಮನುಷ್ಯನಿಗೆ ಆಧುನಿಕತೆಯು ಇಂದು ವರದಾನವಾಗಿರುವುದಕ್ಕಿಂತ ಶಾಪವಾಗಿಯೆ ಕಾಡುತ್ತಿದೆ. ಆಧುನಿಕತೆಯ ಸೋಗಿನಲ್ಲಿ ಭೋಗ ಸಂಸ್ಕೃತಿಯನ್ನು ತನ್ನವರ ಬಾಂಧವ್ಯದ ಅಗ್ನಿಯಲ್ಲಿ ಪೂಜಿಸುತ್ತ ವಿಕೃತ ಖುಷಿ ಪಡುತಿದ್ದಾನೆ. ಸಂಸಾರದಲ್ಲಿ ನೆಮ್ಮದಿಯ ಜೀವನ ಇಂದು ಕೇವಲ ಮಾತಾಗಿ ಉಳಿದಿದೆ. ತಕ್ಕಡಿ ಹಿಡಿದು ವ್ಯಾಪಾರ ಮಾಡಲು ಕುಳಿತಿರುವ ಮನುಷ್ಯನು ಇಂದು ಮೊದಲಿಗೆ ತನ್ನ ಆತ್ಮಸಾಕ್ಷಿಯನ್ನು ಬಲಿ ಕೊಡುತಿದ್ದಾನೆ. ಸಂಬಂಧಗಳ ನೆಲೆಯಲ್ಲಿ ಹೂವಿನಂತೆ ಸುಗಂಧವನ್ನು ಬೀರಬೇಕಾದ ಮನುಷ್ಯನು ತನ್ನದೆಯಾದ ಮತಲಬಿ ಲೋಕವೊಂದನ್ನು ಸೃಷ್ಟಿಸಿ ಕೊಡು-ಕೊಳ್ಳುವಿಕೆಗಾಗಿ ತುದಿಗಾಲಲ್ಲಿ ನಿಂತಿದ್ದಾನೆ. ಮಾನವೀಯತೆ, ಮೌಲ್ಯಗಳು ಎಂಬ ಶಬ್ಧಗಳು ಹೆಣಬಾರವಾಗಿ ಮಸಣದತ್ತ ಮುಖ ಮಾಡಿವೆ. ಗಜಲ್ ಗೋ ಸಹದೇವ ಯರಗೊಪ್ಪ ಅವರು ತಮ್ಮ ಗಜಲ್ ನಲ್ಲಿ ಮನುಷ್ಯನ ಗುಣ ಹೇಗೆ ಅಧಃಪತನದತ್ತ ಸಾಗುತ್ತಿದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಆರ್ಥಿಕ ಅಸಮಾನತೆ ಸಮಾಜವನ್ನು ಯಾವ ಮಟ್ಟಕ್ಕೆ ತಲುಪಿಸಬಹುದು ಎಂಬುದರ ಜಿಜ್ಞಾಸೆ ಇದರಲ್ಲಿ ಅಡಕವಾಗಿದೆ.

ಬೆಣ್ಣೆ ಮುಗಿದ ಮೇಲೆ ಬಂಧು ಬಳಗ ಯಾರು ಇಲ್ಲ ಎಣ್ಣೆ ಇರದ ದೀಪದಂತೆ

ಮಾನವೀಯತೆ ಬಿಕರಿಯಾಗಿ ಬಡವರ ಕನಸು ಹೊಸಕಿ ಹಾಕುತಿದ್ದಾರೆ ಅವರು

        ಚೂಪಾದ ಹಲ್ಲುಗಳ ನಡುವೆ ಮೆದುವಾದ ನಾಲಿಗೆಯು ನಮಗೆ ಬದುಕಲು ಕಲಿಸುವಂತೆ ಗಜಲ್ ಕಾವ್ಯವು ಹೃದಯದ ಬಡಿತಕ್ಕೆ ತಂಗಾಳಿಯನ್ನು ಬೀಳುವಂತೆ ಗಜಲ್ ಗೋ ಶ್ರೀ ಸಹದೇವ ಯರಗೊಪ್ಪ ಅವರಿಂದ ಗಜಲ್ ಝೇಂಕಾರ ನಿರಂತರವಾಗಿ ಮೊಳಗಲಿ ಎಂದು ಶುಭ ಕೋರುತ್ತೇನೆ.

ತಾರೆಗಳ ಮುಂದೆ ಪ್ರಪಂಚ ಇನ್ನೂ ಇದೆ

ಇದೇ ಅಲ್ಲ, ಪ್ರೇಮದ ಪರೀಕ್ಷೆ ಇನ್ನೂ ಇದೆ

ಇಕ್ಬಾಲ್

        ಗಜಲ್ ಕಾರವಾನ್ ನ ರಮಣೀಯತೆ ತಮ್ಮ ಮನಸುಗಳಿಗೆ ಮುದ ನೀಡುತ್ತಿದೆ ಎಂದುಕೊಂಡಿರುವೆ, ಏನಂತೀರಿ.. ಹೌದೆಂದು ತಲೆಯಾಡಿಸುತ್ತಿರುವರೊ..ನನಗೊತ್ತು, ನಮ್ಮ ಗಜಲ್ ಮಾಶುಕಗಳ ಮನಸು. ಆದರೂ ವಾಟ್ ಟು ಡು, ಟೈಮ್ ಟೈಮ್ ಕೀ ಬಾತ್ ಹೈ …ಇಂದಿನ ಈ ಪರಿಚಯದ ದೇಹಲಿಜ್ ಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ತಮ್ಮ ಮುಂದೆ ಹಾಜರಾಗುವೆ ಎಂದು ವಾದಾ ಮಾಡುತ್ತ, ಇಲ್ಲಿಂದ ನಿರ್ಗಮಿಸುವೆ…!!


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

  1. ‘ವಚನಗಳಲ್ಲಿ ಕೃಷಿ ವಿಜ್ಞಾನದ ಹೊಳಹುಗಳು’
    ಈ ಲೇಖನ ನಂಗೆ ಬೇಕು ಸರ್
    8123856595

Leave a Reply

Back To Top