ಅಂಕಣ ಸಂಗಾತಿ

ನೆನಪಿನದೋಣಿಯಲಿ

ಅಮ್ಮಹೇಳ್ತಿದ್ಲುಸಾಲಅಂದ್ರೆಶೂಲ 

ರೇಡಿಯೋ ಅರಚುತ್ತಿತ್ತು “ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಗೋಳು ಸಹವಾಸ ಸಾಕಿನ್ನು ” . ಕೇಳುತ್ತಿದ್ದ ಮನಕ್ಕೆ ತಕ್ಷಣ ಅಮ್ಮನ ಮಾತುಗಳು ನೆನಪಾದವು . ನಿಜ ದೈನಂದಿನ ಪ್ರತೀ ಘಟನೆಗಳು ಅಮ್ಮನನ್ನೇ ನೆನಪಿಗೆ ತರುತ್ತವೆ . ಅವಳ ಜೀವನದ ಮುಂದುವರಿಕೆಯೇ ನಾವು ಎನ್ನುವ ಹಾಗೆ.. 

ತುಂಬಾ ಪುಟ್ಟವರಿರುವಾಗ ಬಾಡಿಗೆ ಮನೆ . ಅಮ್ಮ ಹೇಳ್ತಿದ್ದಿದ್ದು “ಸಂಬಳವಾದ ತಕ್ಷಣ ಬಾಡಿಗೆ ಕಟ್ಟಿ ಬಿಟ್ರಾಯ್ತು . ಇನ್ನೊಂದು ತಿಂಗಳು ನಾವೇ ಮಾಲೀಕರು. ಉಪ್ಪೋ ಸೊಪ್ಪೋ ತಿಂದುಕೊಂಡಿದ್ದರೂ ನಮ್ಮನ್ನ ಯಾರೂ ಕೇಳೋರಿರಲ್ಲ “. ನಮಗೆ ಅರ್ಥವಾಗ್ತಾ ಇರಲಿಲ್ಲ ಅಂದ್ರೆ  ಯಾರ ಋಣವು ಇರದ ಹಾಗೆ ಅಂತ ಅರ್ಥ ಆಗೋ ಹೊತ್ತಿಗೆ ಕೆ ಆರ್ ಎಸ್ ನಲ್ಲಿ  ಎಷ್ಟೋ ಬಾರಿ ಅಣೆಕಟ್ಟು ತುಂಬಿಯಾಗಿತ್ತು . 

ಚಾರ್ವಾಕ ತತ್ವದ ಪ್ರಕಾರ ಇರುವುದರಷ್ಟರಲ್ಲೇ ಅಲ್ಲದೆ ಸಾಲ ಮಾಡಿಯಾದರೂ ಸರಿ ಜೀವನದ ಸುಖಗಳನ್ನು ಅನುಭವಿಸಬೇಕು . ಚಾರ್ವಾಕ ಸಿದ್ಧಾಂತ ಮುರಿದು ಲೋಕದಲಿ ಧರ್ಮ ನೆಲೆಸಲೆಂದೇ ಶಂಕರಾಚಾರ್ಯರು ಜನ್ಮತಳೆದದ್ದು ಅಂತಾರೆ . ಅಂತಹ ಶಂಕರರ ಅನುಯಾಯಿ ನನ್ನಮ್ಮ.  ಸಾಲಾ ಅನ್ನುವ ಪದವೇ ನಮ್ಮ ಮನೆಯಲ್ಲಿ ವರ್ಜ್ಯ.  ಸರ್ವಜ್ಞನ  ಈ ಪದವನ್ನು ಅಮ್ಮ ಹೇಳ್ತಾನೇ ಇರೋಳು 

   ಸಾಲವನು ಕೊಂಬಾಗ ಹಾಲೋಗರುಂಡಂತೆ 

   ಸಾಲಿಗನು ಬಂದು ಎಳೆವಾಗ 

   ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ .

ಹಾಗಾಗಿಯೇ ತನ್ನ ಸಂಪಾದನೆಯಲ್ಲಿ ಮಿತವ್ಯಯದಲ್ಲಿ ಬಾಳುವೆ ನಡೆಸಿ ಮನೆ ಕಟ್ಟಿ 3 ಹೆಣ್ಣುಮಕ್ಕಳ ಮದುವೆ ಮಾಡಿದರೂ ಅಪ್ಪ ಸಾಲದ ಸಂಕೋಲೆಯಲ್ಲಿ ಎಂದೂ ಸಿಲುಕಲಿಲ್ಲ.  ಆ ಕಾಲದಲ್ಲಿ ತುಂಬಾನೇ ಕಾಮನ್.  ನೆಂಟರು ಬಂದರೆ ಅಕ್ಕಪಕ್ಕದ ಮನೆಗಳಿಗೆ ಲೋಟ ಹಿಡಿದು ಹಾಲೋ ಸಕ್ಕರೆಯೋ ಕಾಫಿ ಪುಡಿಯೋ ಸಾಲ ಕೇಳಲು ಹೊರಡುವುದು.  ಆದರೆ ಅಮ್ಮ ಅಂತಹ ಸಂದರ್ಭ ಬರಲೇ ಬಿಡುತ್ತಿರಲಿಲ್ಲ . ರಿಸರ್ವ್ ಫಂಡ್ ತರಹ ಸಾಮಾನುಗಳನ್ನು ಎತ್ತಿಟ್ಟು ಮುಂದಿನ ತಿಂಗಳ ಸಾಮಾನು ತಂದಾಗ ಹಳೆಯದನ್ನು ಬಳಕೆಗೆ ತೆಗೆದುಕೊಳ್ಳುತ್ತಿದ್ದಳು.  ಹಾಗಂತ ಸಾಲ ಕೇಳಲು ಬಂದವರನ್ನು ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ.  ಇನ್ನೂ ಸಾಸಿವೆ ಡಬ್ಬಿಯಲ್ಲಿನ ಚಿಲ್ಲರೆ ಉಳಿತಾಯ ಅವೇ ನೋಟುಗಳಾಗಿ ನಂತರ ಕಬ್ಬಿಣದ ಟ್ರಂಕಿಗೆ ಸ್ಥಳಾಂತರ . ತೀರಾ ಅನಿವಾರ್ಯ ಸಂದರ್ಭದಲ್ಲಿ ಅಪ್ಪನಿಗೆ ಕೊಟ್ಟು ಮತ್ತೆ ವಾಪಸ್ಸು ಪಡೆದು ಸ್ವಸ್ಥಾನಕ್ಕೆ.  ಹೊರಗಿನವರ ಬಳಿ ಸಾಲಕ್ಕೆ ಮಾತ್ರ ಸುತಾರಾಂ ಒಪ್ಪುತ್ತಿರಲಿಲ್ಲ ಅಮ್ಮ.  “ಸಾಲ ಅಂದ್ರೆ ಶೂಲ ರಾತ್ರಿ ನಿದ್ರೆ ಬರಲ್ಲ ” ಎನ್ನುವುದು ಅವಳ ಡೈಲಾಗು.  ಅವಳ ಅದೃಷ್ಟಕ್ಕೆ ಸರಿಯಾಗಿ ಪಾಲಿಸಿ ದುಡ್ಡುಗಳು ಬೆಂಗಳೂರಿನ ಸೈಟ್ ಮಾರಾಟವಾಗಿ ಮನೆ ಕೊಳ್ಳಲು ಮದುವೆ ಮಾಡಲು ಸಾಲದ ಪ್ರಸಂಗವೇ ಬರಲಿಲ್ಲ.  ನಂತರ ಆಪ್ಪ ನಿವೃತ್ತರಾದ ಮೇಲಂತೂ ಸಾಲದತ ಪ್ರಸಕ್ತಿಯೇ ಇರಲಿಲ್ಲ ಹಾಗಾಗಿ ಅಮ್ಮನ ಸಿದ್ಧಾಂತಗಳಿಗೆ ಅವರು ನಂಬಿದ ದೇವರೂ ಸಹ ಸಾಥ್ ಕೊಟ್ಟ.  ನಂತರ ಅವಳ ಉಳಿತಾಯ ಕಾಯಿಲೆ ಕಸಾಲೆ ಬಂದರೆ ಇರಲಿ ಅಂತ ಅದು ಎಷ್ಟು ಸತ್ಯವಾಯಿತು ಅಂದರೆ ಅವರು ಉಳಿಸಿದ ಹಣದಲ್ಲೇ ಅಪ್ಪ ಅಮ್ಮನ ವೈದ್ಯಕೀಯ ಖರ್ಚು ಆಯಿತು . ನಾವ್ಯಾರೂ 1 ಪೈಸೆ ಖರ್ಚು ಮಾಡಲಿಲ್ಲ 

ನಾವೆಲ್ಲಾ ಕೆಲಸಗಳಿಗೆ ಸೇರಿದ ಮೇಲೂ ಅವಳು ಬೋಧಿಸಿದ್ದು ಸಾಲ ಮಾಡಬೇಡಿ ಆದಷ್ಟು ಉಳಿತಾಯ ಮಾಡಿ ಅಂತಾ.  ಚಿನ್ನದ ಮೇಲೆ ಹೆಚ್ಚು ವಿನಿಯೋಗಿಸಲೂ ಇಷ್ಟಪಡುತ್ತಿರಲಿಲ್ಲ .ಮತ್ತೆ ಅದನ್ನು ಮಾರುವುದು ಅಶುಭ ಎಂದು . 

Over 800 Farmers Committed Suicide in Maharashtra This Year, Says Report |  NewsClick

ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹಾಗೂ ಈ ಕ್ರೆಡಿಟ್ ಕಾರ್ಡ್ ಯುಗದಲ್ಲಿ ಅಮ್ಮ ಇದ್ದಿದ್ದರೆ ಏನನ್ನುತ್ತಿದ್ದಳೋ .  ಪ್ರತಿಯೊಂದಕ್ಕೂ ಸಾಲ ಮಾಡಿ ಇ ಎಂ ಐ ಗಳಲ್ಲಿ ತೀರಿಸುತ್ತಾ ಹೋಗುವ ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡು ಅಕ್ಷರಶಃ ಬೀದಿಗೆ ಬರುವ ಇಂದಿನ ಯುವಜನಾಂಗಕ್ಕೆ ಅಮ್ಮ ವಿಚಿತ್ರ ಎನ್ನಿಸಬಹುದು.  ಅಮ್ಮನ ಈ ಸಾಲ ಮಾಡಬೇಡಿ ಅನ್ನುತ್ತಿದ್ದ ಮಾತು ನಮ್ಮ ತಲೆಯಲ್ಲಿ ಎಷ್ಟು ಬೇರೂರಿದೆಯೆಂದರೆ ಗೃಹಸಾಲ ಅದು ಕಛೇರಿಯ ಕಡೆಯಿಂದ ಬಿಟ್ಟು ಮತ್ಯಾವ ಸಾಲ ಮಾಡಲು ಅಮ್ಮನ ಭಯ . ಅಲ್ಲೆ ಎಲ್ಲಿಂದಲೋ ನಮ್ಮ ಕಡೆ ಉರಿನೋಟ ಬೀರ್ತಾ ಇರ್ತಾಳೆ ಅನ್ನೋ ಭಾವ. 

ಆದರೂ

…  ಇದೆಷ್ಟು ಒಳ್ಳೆಯ ಸಲಹೆ ಹಾಗೂ ನಡೆ ಅಲ್ವಾ?


ಸುಜಾತಾ ರವೀಶ್  

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top