ಅಂಕಣ ಬರಹ

ಸೂಚನೆ: ಲೇಖಕರ ಖಾಸಗಿ ಕಾರ್ಯದೊತ್ತಡಗಳಿಂದಾಗಿ ನಾಲ್ಕು ವಾರಗಳ ಕಾಲನಿಂತು ಹೋಗಿದ್ದ ಅಂಕಣ ಈ ವಾರದಿಂದ ಮುಂದುವರೆಯಲಿದೆ

ಮಾತು ಬಾರದ ಪಾತ್ರಗಳು

ಹೊರಗಡೆ ಕಪ್ಪು ಇರುಳು. ತೆಂಗಿನಪಾತಿ ಕಪ್ಪಾಗಿ ಅದರ ಹಿಂಬದಿ ಚಿತ್ತಾರಗೊಂಡು ಅರಳಿದ ಚಂದಿರನನ್ನು ಆ ಮರದ ಕಿಟಕಿಯ ಸರಳುಗಳ ನಡುವಿನಿಂದ ನೋಡುತ್ತಲೇ ಇದ್ದೆ. ಮಲಗಿದ ಭಂಗಿ ಸಡಿಲಿಸಿ ಅದೇ ಹಳೆಯ ದೊಡ್ಡ ಮಂಚದ ಮೇಲೆ ಕೂತು ಕಣ್ಣಬೊಗಸೆಗೆ ದಕ್ಕುವಷ್ಟು ದೂರ ದೃಷ್ಟಿ ನೆಟ್ಟರೆ, ಎದೆಗಿಳಿಯುತ್ತಿದ್ದ ಚಂದ್ರಿಕೆಯ ಒಡಲ ರಾಗ ತುಂಡಾಗಿ ಬಿಡುವ ಅಂಜಿಕೆ. ಯಾವುದೋ ಅವರ್ಣನೀಯ ಸುಪ್ತ ರಾಗದ ಮೋಹ. ನೋಡನೋಡುತ್ತಾ ಕಿಟಕಿಯ ದಂತಿಗೆ ಸುತ್ತಿದ ಬೆರಳು ಸಡಿಲಗೊಂಡು ನಿದ್ರೆ ಕಣ್ಣಿನಾಳಕೆ ಇಳಿದು ದೇಹ,ಮನಸ್ಸುಗಳನ್ನು ತನ್ನ ಅಧೀನಕ್ಕೆ ತಂದುಕೊಳ್ಳುತ್ತಿತ್ತು. 

ಕಣ್ತೆರೆದರೆ ಹಸಿರು ಲೋಕ. ತೆಂಗು, ಕಂಗು, ಬಾಳೆ, ಜುಳುಜುಳು ಹರಿವ ನೀರು. ಅಂಗಳದಲ್ಲಿ ನಿಂತರೆ ಒಂದೆಡೆ ತೊಂಡೆಕಾಯಿ ಚಪ್ಪರ. ಅದರಾಚೆ ಬೆಂಡೆ ಗಿಡಗಳಿಗೆ ಮಾಡಿದ ದಳಿಗಳು. ಮಾಡಲ್ಲಿ ಪವಡಿಸಿದ ಹಳೆಯ ಮಂಗಳೂರು ಹಂಚಿನ ಮನೆ. ಅಂಗಳದ ತುದಿಗೆ ಬಂದು ಕೆಂಪು ಕಲ್ಲಿನ ಮೂರು ಮೆಟ್ಟಲು ಇಳಿದರೆ ತೋಟ. ಅದರ ಸೊಂಟಕ್ಕೆ ಬಿಗಿದ ಬೆಲ್ಟ್ ನಂತಿರುವ ತೋಡು. ಅದರ ಮೇಲೆ ಹಾಕಿರುವ ಅಡಿಕೆ ಮರದ ಕಾಂಡದ ಸಂಕ ದಾಟಿ ನಡೆದರೆ, ನಡೆದಷ್ಟು ಹಸಿರು ತೋಟ. ಕೆಸುವಿನ ಗಿಡಗಳು, ತಿಮರೆ( ಬ್ರಾಹ್ಮಿ) ನೆಲನೆಲ್ಲಿ, ತುಂಬೆ. ಬದಿಬದಿಯಲ್ಲಿ ಮಾವು ಹಲಸಿನ ಮರಗಳು. ಮದುಮಗಳು ದಾಟಿದ ಹೊಸ್ತಿಲಿನ ಹೊರಗೂ ಒಳಗೂ ಹೊಸ ರಂಗಪರಿಕರಗಳ ಖಜಾನೆ. ಅಚ್ಚರಿಯ ಕಣ್ಣುಗಳನ್ನು ಅರಳಿಸಿ ದಕ್ಕಿದ ಮಿತಿಯೊಳಗೆ ತುಂಬಿಕೊಳ್ಳುತ್ತಿದ್ದೆ.  ಮಗ್ಗದ ಸೀರೆಯನ್ನು ವಾರೆವಾರೆಯಾಗಿ ಪಾದದ ಗಂಟಿಗಿಂತಲೂ ತುಸು ಮೇಲೆ ಉಟ್ಟು ಮನೆ ತುಂಬ ಓಡಾಡುವ ಮನೆಯೊಡತಿಯರು.

 ಉದ್ದದ ಅಡುಗೆ ಮನೆಯಲ್ಲಿ ಸಾಲಾಗಿ ಕೂತ ಒಲೆಯ ಬಾಯೊಳಗೆ ತುರುಕಿದ ಉರಿಯುವ ಕಟ್ಟಿಗೆ ತುಂಡುಗಳು. ಬೇಯುವ ಅನ್ನ. ಆ ಪಾತ್ರೆಯ ಮೇಲೆ ಕೂತ ಹಾಲಿನ ಪಾತ್ರೆ.  ಅನ್ನ ಬೇಯುವಾಗ ಅದರ ಆವಿಗೆ ಕೆನೆಗಟ್ಟುವ ಹಾಲು. ದೊಡ್ಡದಾದ ದೇಹ ಹೊತ್ತು ಒಂದು ಬದಿಯಲ್ಲಿ ಕೂತ ಕಡೆಯುವ ಕಲ್ಲು. ಮರದ ಜಂತಿ ತನ್ನ ನಡುವಿನ ಮೇಲೆ ಧರಿಸಿಕೊಂಡ ಹಜಾರ, ಚಾವಡಿಯ ಉದ್ದನೆಯ ಗೋಡೆಗಳು.

ಎಲ್ಲದರ ಒಳಗೂ ಮಾತಿದೆ. ಗಲಗಲ ಮಾತುಗಳು ಡಿಕ್ಕಿಗೊಳ್ಳುವಲ್ಲಿ ಮೊರೆಯುವ ಮೌನವಿದೆ.  ಅದೆಷ್ಟು ಸಂಬಂಧಗಳ ಪಾತ್ರ ಪರಿಚಯ, ಅತ್ತೆ, ಚಿಕ್ಕತ್ತೆ, ಮಾವನ ತಮ್ಮ, ಅತ್ತೆಯ ತಂಗಿ, ಭಾವ, ವಾರಗಿತ್ತಿ, ಚಿಲಿಪಿಲಿಯಾಡುವ ಮಕ್ಕಳು.

 ಅಂಗಳದಲ್ಲಿ ಸೊಂಟಕ್ಕೆ ಎತ್ತಿ ಕಟ್ಟಿದ ಸೀರೆಯ,  ತೋಟದಲ್ಲಿ ದುಡಿಯುವ ಹೆಂಗಳೆಯರ ” ಅಮ್ನಾ” ” ಅಕ್ಕಾ ” ಎಂಬ ಕೂಗು. ಅದಕ್ಕೆ ಶ್ರುತಿಯಾಗಿಸುವ ತೋಟದಂಚಿನ ಹಾಡಿಯಲ್ಲಿ ಮೇಯುವ ದನಗಳ ಅಂಬಾ. ಅಪರಿಚಿತರ ಬೆನ್ನಟ್ಟುವ ನಾಯಿಗಳು. ಹೊಸಿಲೊಳಗೆ ಕೂತು ನಾಯಿಗಳನ್ನು ಛೇಡಿಸುವ ಬೆಕ್ಕುಗಳು. ಒಂದೇ ಎರಡೇ.

 ” ಬಾ, ಇಲ್ಲಿ ಕೂತು ಕೋ. ಗೊತ್ತಿದೆಯಾ ಕಡೆಯುವ ಕಲ್ಲಿನಲ್ಲಿ ಅರೆಯುವುದು. ಶುರು ಮಾಡಿದರೆ ಯಾವುದು ಕಷ್ಟ. ಆಗದಿದ್ದರೆ ತಾರನನ್ನು ಕರಿ.”

 ಬಾಳೆ ಎಲೆಯಲ್ಲಿ ಬಿಳಿ ಗೋಪುರದಂತೆ ಇದ್ದ ತೆಂಗಿನತುರಿ ಆ ಕಲ್ಲಿನ ಮಡಿಲಿಗೆ ಸುರಿದು ಆಗಷ್ಟೆ ಹುರಿದು ಘಮಿಸುವ ಕೆಂಪುಮೆಣಸು  ಮೆಲ್ಲನೆ ಮಂತ್ರದಂತೆ ಮಣಮಣಿಸಿ ಲೆಕ್ಕ ಹಾಕಿ ಉದುರಿಸುತ್ತಾರೆ. ಹಳೆಯ ಡಬ್ಬದಲ್ಲಿದ್ದ ಹುಣಿಸೆ ಹುಳಿ ಚೆಂಡು ಉರುಳಿದಂತೆ ಬಿದ್ದು ಅರೆಯಲು ತಯಾರು.

“ಒಂದು ತಂಬಿಗೆ ನೀರು ಮಾಡು. ಪ್ರಯತ್ನ ಬೇಕು. ಆಗದಿದ್ದರೆ ಕರಿ. ತಾರಾ ಬರುತ್ತಾಳೆ. ” ದಪ್ಪ ಶರೀರದ ಅತ್ತೆ ನಿರ್ದೇಶನ ಮಾಡಿ ಹೊರಹೋದರೆ ರಂಗ ಸ್ಥಳದಲ್ಲಿ ಕಥಾಪ್ರಸಂಗ ಪುಸ್ತಕಕ್ಕೂ  ರಂಗದ ನೆಲಕ್ಕೂ ಪ್ರಣಾಮಗೈದು ಆಸೀನರಾಗುವ ಭಾಗವತರಂತೆ ನಾನು ತಯಾರಾಗುತ್ತಿದ್ದೆ. ವೃತ್ತಾಕಾರದಲ್ಲಿ ಗಿರಿಗಿಟಿ ಹಾಕಿ, ‘ತಾರಕ್ಕ’ನ ಧ್ಯಾನ ಮಾಡುತ್ತಿದ್ದೆ.

 ಸೊಂಟದಲ್ಲಿ ಕೊಡಪಾನವೋ, ಕೈಯಲ್ಲಿ ಬಕೇಟು ಕಂಕುಳಲ್ಲಿ ಮೈಲಿಗೆ ಬಟ್ಟೆ ಏನಾದರೊಂದು ಪರಿಕರಗಳೊಂದಿಗೆ ತಾರಕ್ಕನ ರಂಗಪ್ರವೇಶ.  “ಹ್ಹೂ.ಹೂಹೂಂ..ವ್ಯಾ.ಹ್ಹುವೇವ್ಯಾ.” ಎನ್ನುವ ಸ್ವರದಲ್ಲಿನ ಮಾತು ಹೆಕ್ಕುವ ಪ್ರಯತ್ನ ನಡೆಸುವಾಗಲೇ ‘ಹೂ ಹೂ..ಹ್ಞೂ’.ಎನ್ನುತ ಕೈ ಹಿಡಿದೆಳೆಯುತ್ತ ನನ್ನ ಎಬ್ಬಿಸಿ ಕೂತು ಬಿಡುತ್ತಿದ್ದರು.

ಬಾಯಿ ಬಾರದ, ಕಿವಿ ಕೇಳದ ಜೀವ. ಎಲ್ಲವನ್ನೂ ಸನ್ನೆ ಭಾಷೆಯಲ್ಲಿ ಅರ್ಥ ಮಾಡಿಕೊಂಡು  ನಿರಂತರ ಗೆಯ್ಮೆ  ನಡೆಸುವವರು.  ಮದುವೆ, ಮಕ್ಕಳು ಸಂಸಾರ ಯಾವುದೂ ಇಲ್ಲ. ದುಡಿತ, ದುಡಿತ. ಒಂದಷ್ಟು ಸಮಯ ಅಕ್ಕನ ಮನೆಯಲ್ಲಿ, ಮತ್ತೆ ತಮ್ಮನ ಮನೆ, ಅಣ್ಣನ ಮನೆ. ವಲಸೆ ಬದುಕು.

ತಾರಕ್ಕನೆಂಬ ಮೌನಮಾತು.

” ಆಂಗಿಕಂ ಭುವನಂ ಯಸ್ಯ..”

ಜಗತ್ತನ್ನೇ ತನ್ನೊಳಗಿನ ಮೌನಪ್ರಪಂಚದೊಳಗೆ ಸೆಳೆದು ಸಂಭಾಷಿಸುವ ಅದಮ್ಯತೆ. ಪ್ರತಿಯೊಬ್ಬರ ಮಾತುಗಳನ್ನು ಆಲಿಸುತ್ತಾರೆ. ಏನು ಕೇಳಿಸುವುದು?. ಎದುರಿನವರ ದೇಹದ ಹಾವ ಭಾವ, ಚಲನೆ. ನಮ್ಮನ್ನು ಮಾತನಾಡಿಸಿದಂತೆ ಅಂಗಳದಲ್ಲಿ ಬಿದ್ದಿರುವ, ಬೊಗಳುವ ನಾಯಿಗಳನ್ನೂ ಮಾತನಾಡಿಸುತ್ತಾರೆ. ತನ್ನ ಪಾಲಿನ ದೋಸೆಯನ್ನು ತುಂಡುಮಾಡಿ ಅವರನ್ನೇ ದಿಟ್ಟಿಸುವ ನಾಯಿಗಳ ಮುಖನೋಡದೆ ಥ್ರೋಬಾಲ್ ಎಸೆದಂತೆ, ತಿನ್ನುವ ತಟ್ಟೆಯ ನೋಡುತ್ತಲೇ ಎಸೆದು ಆ ನಾಯಿಗಳು ಅದನ್ನು ಹುರುಪಿನಿಂದ ಕ್ಯಾಚ್ ಹಿಡಿದು ತಿನ್ನುವುದನ್ನು ಕಿರುಗಣ್ಣಿನಿಂದ ನೋಡಿ ತನ್ನಷ್ಟಕ್ಕೆ ವ್ಯಾ..ವ್ಯಾ… ಅನ್ನುತ್ತಾರೆ. ಕೆಲಸದ ನಡುವೆ ಬಿಡುವು ಸಿಕ್ಕರೆ ಅಂಗಳದಲ್ಲಿ ಪಚಾಲೆಂದು ಒಂದು ಕಾಲು ನಿಡಿದಾಗಿ ಬಿಟ್ಟು ಒಂದು ಕಾಲು ಅರ್ಧ ಮಡಚಿ ಮೂಕಪ್ರಾಣಿಗಳ ಮೈ ಸವರಿ ” ವ್ಯಾ .. ವ್ಯಾ”  ಎನ್ನುತ್ತಾರೆ. ಅವುಗಳು ಪಟಪಟ ಬಾಲ ಬಿಡುವಿಲ್ಲದೆ ಅಲುಗಾಡಿಸಿ ನೆಲಕ್ಕೆ ಬಡಿದು, ನಾಲಗೆಯಿಂದ ಅವರ ಕೈ ನೆಕ್ಕಿ ಸಂಭಾಷಿಸುತ್ತವೆ.

 ಪದಗಳ ಬಾಲ ಹಿಡಿದು ನಾವು ಮಾಡುವ ಸಂಭಾಷಣೆಯ ವ್ಯರ್ಥ ಅನಿಸುತ್ತದೆ. ಅದೆಷ್ಟು ಮಾತುಗಳು ಆಡಲು ಸೂಕ್ತ  ಮಾತು ಸಿಗದೆ ಅವ್ಯಕ್ತವಾಗಿಯೇ ಉಳಿದುಬಿಡುತ್ತವೆ. ಇವರ ಭಾಷೆಯೇ ಚೆಂದ.

ನಾಯಿಗಳನ್ನು ನೂಕಿ ಅಡುಗೆಮನೆಯ ಮೂಲೆಯಲ್ಲಿ ಬಕೇಟಿನಲ್ಲಿದ್ದ ಅಕ್ಕಚ್ಚು ಹಿಡಿದು ಹಟ್ಟಿಗೆ ನಡೆಯುತ್ತಾರೆ. ದನಗಳಿಗೆ ಹುಲ್ಲು ಹಾಕಿ ಮೈ ಸವರಿ, ಅವುಗಳ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿ ಬರುತ್ತಾರೆ.

ಸಂಜೆ ಬಾವಿಯ ನೀರು ಸೇದಿ ಹೂ ಗಿಡಗಳಿಗೆ ತರಕಾರಿ ಗಿಡಗಳಿಗೆ ಹೊಯ್ದು ತೊಂಡೆ, ಬೆಂಡೆ ಕೊಯ್ದು ಬರುವಾಗ ಮನೆಯವರು ಸಿಕ್ಕಿದರೆ ದರದರ ಗಿಡದ ಬಳಿ ಎಳೆದೊಯ್ದು ಕೈಯಲ್ಲಿದ್ದ ಬೆಂಡೆ ಗಿಡದ ಮುಖದ ಬಳಿ ಹಿಡಿದು “ಇದು ಇವಳ ಕೂಸು”  ಎನ್ನುವಂತೆ ನಮಗೆ ತೋರಿಸಿ ಎಲೆ ಸವರುತ್ತ ” ವ್ಯಾವ್ಯಾ.‌” ಎನ್ನುತ್ತಾರೆ.

Golden Hills Farm OKRA LADY FINGER F1 HYBRID SEEDS 100% ORGANIC 100 Seeds:  Amazon.in: Garden & Outdoors

ಈ ತಾರಕ್ಕನೆಂಬ ಪಾತ್ರ ಸುಸ್ತಾಗಲಾರದೇ ಎಂಬ ಯೋಚನೆ ನನ್ನ ಕಾಡಿಸಿದ್ದುಂಟು. ಕಳೆದ ಕೆಲವು ವರ್ಷಗಳಿಂದ ನಾನು ರಂಗದಲ್ಲಿ ನಿರಂತರವಾಗಿ ಒಂದೂವರೆ  ಗಂಟೆಯ ಕಾಲ ದಣಿವಿಗೆ  ಕೊಡದೆ ಅಭಿನಯಿಸುವ ರಂಗಕ್ಕೆ ಸಮರ್ಪಿಸಿ ಕೊಳ್ಳುವ ಏಕ ಪಾತ್ರ ನಾಟಕ ‘ ಸಿರಿ’ ಪಾತ್ರದ ಶಕ್ತಿಸ್ವರೂಪಿಣಿಯಾಗಿ, ಪ್ರೇರಣೆಯಾಗಿ ಅದಮ್ಯ ಚೇತನದ ತಾರಕ್ಕ ಇರುವುದಂತೂ ನಿಜ.

ಹದ ಎತ್ತರದ, ಎಣ್ಣೆಕಪ್ಪು ಮೈಬಣ್ಣ. ದಪ್ಪವೂ, ತೆಳ್ಳಗೂ ಅಲ್ಲದ ಮೈಕಟ್ಟು. ತೋಟದ ಕೆಲಸಕ್ಕೆ ಬರುವ ತುಕ್ರನನ್ನು ದೂಡಿ ಮಾತನಾಡಿಸುವ, ಚಹಾ, ತಿಂಡಿ ತಂದಿಡುವ ಇವರಿಗೆ ಯೌವನದ ಸಹಜ ಬಿಸಿ ತಲುಪಿಯೇ ಇಲ್ಲವೇ. ದುಡಿತ, ಜೀತ. ಕೊಟ್ಟದ್ದನ್ನು ಉಂಡು, ಮನೆಯ ಸಿಕ್ಕಿದ ಮೂಲೆಯಲ್ಲಿ ಬಿದ್ದುಕೊಳ್ಳುವ ಜೀವದ ಒಳಗಿನ ಸಂಭಾಷಣೆ ಓದಿದವರಿದ್ದಾರೆಯೇ? ಇವರ ಕದ ತಟ್ಟಿದ ಜೀವ ಇರಬಹುದೇ?

  ಹಳ್ಳಿಯ ಆ ದೊಡ್ಡ ಮನೆಯಲ್ಲಿ ನನ್ನ ಪ್ರವೇಶದ ಮೊದಲ ನಾಲ್ಕು ವರ್ಷ ಈ ಪಾತ್ರ ಓಡಾಡಿ ನಡುನಡುವೆ ತಮ್ಮ, ಅಣ್ಣ ಎಂದು ಜಾಗೆ ಬದಲಿಸಿ ಕೊನೆಗೆ ಅಣ್ಣನ ಮನೆಯ ತೋಟದಲ್ಲೇ ‘ದುಡಿ’ ಯಾಗಿ ನೆಲೆ ಕಂಡರು.

*******************************************

ಪೂರ್ಣಿಮಾ ಸುರೇಶ್

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

One thought on “

Leave a Reply

Back To Top