ಯಾರ ಜೀವನವೆಲ್ಲೋ…

ಕಥೆ

ಯಾರ ಜೀವನವೆಲ್ಲೋ…

ಟಿ.ಎಸ್‍.ಶ್ರವಣಕುಮಾರಿ

Old Temple, Painting by Professional Artist Natubhai Mistry

ವನಜಾಕ್ಷಿ ಮತ್ತು ಕೃಷ್ಣಮೂರ್ತಿ ಮಗ ಪ್ರಸಾದಿಯೊಂದಿಗೆ ದೇವಪುರಿಗೆ ಹೋಗಲು ಬೆಳಗ್ಗೆ ಆರುಗಂಟೆಯ ಬಸ್ಸಿಗೆ ಬೆಂಗಳೂರಿಂದ ಹೊರಟಿದ್ದರು. ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಯಾವುದಾದರೂ ಬೇರೆ ಪ್ರೈವೇಟ್‌ ಬಸ್ಸಿನಲ್ಲೋ, ಇಲ್ಲವೇ ಮಿನಿಬಸ್ಸಿನಲ್ಲೋ ಅಲ್ಲಿಗೆ ತಲುಪಬೇಕಿತ್ತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಶಿವಮೊಗ್ಗ ತಲುಪಿದರೆ, ತಕ್ಷಣವೇ ಅಲ್ಲಿಗೆ ಹೋಗಲು ವಾಹನ ಸಿಕ್ಕರೆ, ಒಂದರ್ಧ ಗಂಟೆಯ ಪಯಣವಷ್ಟೇ. ಈಗೊಂದು ವಾರದಿಂದ, ಈ ನಿರ್ಣಯ ತೆಗೆದುಕೊಂಡಾಗಿನಿಂದಲೂ ವನಜಾಕ್ಷಿಯ ಮನಸ್ಸಿಗೆ ನೆಮ್ಮದಿಯಿಲ್ಲ. ಕೃಷ್ಣಮೂರ್ತಿಗಳಿಗೆ ತಾನೇ ಏನು, ವಿಧಿಯಿಲ್ಲ, ಕಠಿಣವಾದರೂ ನಿರ್ಧಾರವನ್ನು ತೆಗೆದುಕೊಳ್ಳಲೇ ಬೇಕಿತ್ತು, ತೆಗೆದುಕೊಂಡದ್ದಾಗಿದೆ, ಈಗ ವ್ಯವಸ್ಥೆ ಮಾಡಿ ಬರಬೇಕು. ನೂರನೆಯ ಬಾರಿಗೆ ಇನ್ನಾದರೂ ಎಲ್ಲರ ಮನಸ್ಸಿಗೆ ನೆಮ್ಮದಿ ಸಿಕ್ಕರೆ ಸಾಕು ಅಂದುಕೊಂಡಳು ವನಜಾಕ್ಷಿ.

ಅವರಿಬ್ಬರೂ ದೇವಪುರಿಗೆ ಹೋಗಿ ಇಪ್ಪತ್ತು ವರ್ಷಗಳ ಮೇಲೇ ಆಗಿತ್ತೇನೋ. ಅಲ್ಲಿದ್ದ ಕೃಷ್ಣಮೂರ್ತಿಯ ತಾತ ಭುಜಂಗ ಶಾಸ್ತ್ರಿಗಳು ದೈವಾದೀನರಾದ ನಂತರ ಅಲ್ಲಿಗೆ ಹೋಗುವ ಪ್ರಮೇಯವೂ ಇರಲಿಲ್ಲ. ವರ್ಷಾಂತಿಕ ಕಾರ್ಯಕ್ರಮಗಳನ್ನು ಅಲ್ಲಿಯೇ ಮುಗಿಸಿ ತಾತನ ಮನೆಯನ್ನು ಸಂಸ್ಕೃತ ಪಾಠಶಾಲೆ ಮಾಡಲು ಬಿಟ್ಟುಕೊಟ್ಟು ಬಂದದ್ದಾಗಿತ್ತು. ಒಂದೊಳ್ಳೆಯ ಉದ್ದೇಶಕ್ಕಾಗಿ ತಾವೆಲ್ಲಾ ಹುಟ್ಟಿಬೆಳೆದ ಮನೆಯನ್ನು ಕೊಟ್ಟಿದ್ದೇನೆ ಎನ್ನುವ ಸಮಾಧಾನ ಕೃಷ್ಣಮೂರ್ತಿಗಳಿಗಿತ್ತು. ಅಲ್ಲಿದ್ದ ಒಬ್ಬಿಬ್ಬರು ದೂರದ ಬಂಧುಗಳು ಯಾವಾಗಾದರೂ ಫೋನ್‌ ಮಾಡಿದಾಗ ಅಲ್ಲಿನ ಸಮಾಚಾರಗಳು ತಿಳಿಯುತ್ತಿದ್ದವು. ಅವರಿಗಿದ್ದ ಅಸ್ಥೆಗೆ ಅದೂ ಹೆಚ್ಚೇ. ಹೀಗೆ ಹೆಚ್ಚುಕಡಿಮೆ ಸಂಪರ್ಕ ಬಿಟ್ಟೇಹೋಗಿದ್ದ ಊರಿಗೆ ಇಂತಹ ಒಂದು ಕಾರಣಕ್ಕಾಗಿ ಮುಂದೊಂದು ದಿನ ಬರಬೇಕಾಗಬಹುದೆಂಬ ಊಹೆಯೂ ಅವರಿಗಿರಲಿಲ್ಲ. ಯೋಚನೆಗೆ ಬಿದ್ದಿದ್ದವರು ಪ್ರಸಾದಿಯ ಮುಖವನ್ನೊಮ್ಮೆ ನೋಡಿ ನಿಟ್ಟುಸಿರಿಟ್ಟರು. ಅವನು ತನ್ನ ಪಾಡಿಗೆ ಕಿಟಕಿಯಿಂದ ಹೊರಗೆ ನೋಡುತ್ತಿದ್ದ. ಅವನ ಮನಸ್ಸಿನಲ್ಲಿ ಅದೇನು ನಡೆಯುತ್ತಿತ್ತೋ! ಪಕ್ಕದಲ್ಲಿ ಕುಳಿತಿದ್ದ ವನಜಾಕ್ಷಿ ʻಏನು?ʼ ಎನ್ನುವಂತೆ ನೋಡಿದಳು. ʻಏನಿಲ್ಲʼ ಎನ್ನುವಂತೆ ತಲೆಯಾಡಿಸಿ ಮತ್ತೆ ಯೋಚನೆಯಲ್ಲಿ ಮುಳುಗಿದರು.

ʻರಾಘವನಾಗಲೀ, ರಾಜೀವನಾಗಲೀ ತಮ್ಮ ಹೆಂಡತಿಯರೊಂದಿಗೆ ಇವನ ಬಗ್ಗೆ ಸ್ವಲ್ಪ ಅಭಿಮಾನ ತೋರಿದ್ದರೆ ಈ ಸಮಸ್ಯೆ ಇಷ್ಟು ಬೇಗ ಬರುತ್ತಿರಲಿಲ್ಲವೇನೋ. ಗಂಡುಮಕ್ಕಳೇ ಹೀಗಾದ ಮೇಲೆ ಸೊಸೆಯರನ್ನೇಕೆ ಅನ್ನಬೇಕು? ಅವರಿಬ್ಬರೂ ಜಾಣರು, ಸ್ವಂತ ಶಕ್ತಿಯಲ್ಲೇ ಕೆಲಸ ಗಿಟ್ಟಿಸಿಕೊಂಡು ಬದುಕಿನಲ್ಲಿ ಮುಂದೆ ಬಂದರು ಎನ್ನುವ ಹೆಮ್ಮೆ ನಮಗಿಲ್ಲವೇ. ಆದರೆ ಪ್ರಪಂಚದವರೆಲ್ಲರೂ ತಮಗೆ ಸರಿಸಾಟಿಯಾಗೇ ಇರಬೇಕು, ಇಲ್ಲದಿರುವವರು ಜೀವಿಸುವುದೇ ವ್ಯರ್ಥ ಅನ್ನುವ ಹಾಗೇಕೆ ಆಡಬೇಕು? ಸ್ವಂತ ತಮ್ಮನನ್ನೇ ಹೆಂಡತಿಯರೆದುರು ಸದಾ ಹಂಗಿಸಿ, ಬೈದು ಮಾತಾಡಿಸುತ್ತಿದ್ದರೆ ಹೊರಗಿಂದ ಬಂದವರಿಗೆ ಏಕೆ ಮಮತೆ ಹುಟ್ಟುತ್ತದೆ? ಗಂಡನಿಗೇ ಬೇಕಿಲ್ಲದ್ದನ್ನು ತಾವೇಕೆ ಹಚ್ಚಿಕೊಳ್ಳುತ್ತಾರೆ. ಅವರ ದೂರಿಗೆ ತಮ್ಮ ಉಪ್ಪುಖಾರವನ್ನೂ ಸೇರಿಸುತ್ತಾರಷ್ಟೇ. ನಮಗಾದರೆ ಮಗ; ಹೇಗಿದ್ದರೂ ಬೇಕು. ಅವರೇಕೆ ಜೀವಮಾನ ಪೂರ್ತಿ ಮೈದುನನನ್ನು ಸಾಕುವ ಹೊಣೆಹೊರುತ್ತಾರೆ? ನೂರೊಂದು ಸಲ ಅಂದುಕೊಂಡಿದ್ದನ್ನೇ ಮತ್ತೊಂದು ಬಾರಿ ಅಂದುಕೊಂಡರು. ಏನೋ ಅವರವರು ಗಂಡ ಹೆಂಡತಿಯ ಮಧ್ಯೆ ಇನ್ನು ಮುಂದಾದರೂ, ಇವನ ದೆಸೆಯಿಂದ ಆಗುತ್ತಿದ್ದ ಜಗಳಗಳು ನಿಂತರೆ ಸಾಕು. ಎಲ್ಲಕ್ಕೂ ಮೊದಲು ಈಗ ಹೋಗುತ್ತಿರುವ ಕೆಲಸ ಅಂದುಕೊಂಡಂತೆ ಸುರಳೀತವಾಗಿ ಆದರೆ ಸಾಕುʼ ಎಂದುಕೊಳ್ಳುತ್ತಿರುವಾಗ ಬಸ್ಸು ಅರಸೀಕೆರೆಯನ್ನು ಮುಟ್ಟಿತು. ಇನ್ನೂ ಎರಡು ಗಂಟೆಯ ಪ್ರಯಾಣ. ಕಾಫಿಗೆ ನಿಲ್ಲಿಸಿದರು. “ಕಾಫಿ ಕುಡಿಯೋಣ್ವಾ” ವನಜಾಕ್ಷಿಯನ್ನು ಕೇಳಿದರು. “ನಂಗೆ ಬೇಡ, ನೀವಿಬ್ರೂ ಕುಡಿದ್ಬನ್ನಿ” ಎಂದಳು ವನಜಾಕ್ಷಿ. ಅಪ್ಪ ಮಗ ಇಬ್ಬರೂ ಕೆಳಗಿಳಿದು ಹೋದರು.

ಅಷ್ಟು ಹೊತ್ತೂ ತಡೆದಿಟ್ಟುಕೊಂಡಿದ್ದ ಅಳು ನುಗ್ಗಿಬಂದಂತಾಗಿ ವನಜಾಕ್ಷಿ ಸೆರಗನ್ನು ಮುಖಕ್ಕೊತ್ತಿಕೊಂಡು ಬಿಕ್ಕಿದಳು. ತಮಗಿಬ್ಬರಿಗೂ ವಯಸ್ಸಾಗಿದೆ. ತನಗಾಗಲೇ ಅರವತ್ಮೂರು ವರ್ಷ. ಇವರಿಗೆ ಎಪ್ಪತ್ತು ದಾಟಿದೆ. ಬ್ಯಾಂಕಿನಲ್ಲಿರುವ ದುಡ್ಡಿಗೆ ಬರುವ ಬಡ್ಡಿ ಐದಾರು ಸಾವಿರ ಬಿಟ್ಟರೆ ತಮಗೆ ಬೇರೇನೂ ಆದಾಯವಿಲ್ಲ. ದುಡಿದದ್ದೆಲ್ಲಾ ಮಕ್ಕಳಿಗಾಗೇ ಖರ್ಚಾಗಿ ಉಳಿದದ್ದಷ್ಟೇ. ಬೇರೆ ಮನೆ ಮಾಡಿಕೊಂಡು ಪ್ರಸಾದಿಯನ್ನು ಜೊತೆಗಿಟ್ಟುಕೊಳ್ಳುವ ಯೋಚನೆಯನ್ನು ಮಾಡಲೂ ಸಾಧ್ಯವಿಲ್ಲ. ಇನ್ನೆಷ್ಟು ಕಾಲ ನಾವಿಬ್ಬರೂ ಇರಬಹುದು! ಇನ್ನೂ ಮೂವತ್ತು ವರ್ಷದ ಪ್ರಸಾದಿಯ ಮುಂದೆ ಇಡೀ ಜೀವನ ಬಿದ್ದಿದೆ. ಈಗಲೇ ಅಣ್ಣಂದಿರ ಕಣ್ಣಲ್ಲಿ ಕಸವಾಗಿದ್ದಾನೆ. ತಾವು ಹೋದಮೇಲೆ ಅವನ ಗತಿ ಏನು. ಏನಾದರೂ ವ್ಯವಸ್ಥೆ ಆಗಲೇಬೇಕಲ್ಲವೆ? ಏನೋ… ಈಗ ಅಂದುಕೊಂಡಿರುವ ಹಾಗೆ ಸಾಧ್ಯವಾದರೆ ನಮ್ಮ ಮನಸ್ಸಿಗೂ ಸ್ವಲ್ಪ ನಿಶ್ಚಿಂತೆ ಸಿಗಬಹುದೇನೋ. ಅವರಿಬ್ಬರೂ ಅವಳಿ ಮಕ್ಕಳು, ಇವನಿಗಿಂತ ಮೂರುವರ್ಷಕ್ಕೆ ದೊಡ್ಡವರು, ಚೆನ್ನಾಗಿ ಓದಿ, ಒಳ್ಳೆಯ ಉದ್ಯೋಗ ಗಳಿಸಿಕೊಂಡು, ಮದುವೆಯಾಗಿ, ಜೀವನದಲ್ಲಿ ಚೆನ್ನಾಗಿಯೇ ಸೆಟಲ್‌ ಆಗಿದ್ದಾರೆ. ಇವನೊಬ್ಬನು ಏನೋ ಸಣ್ಣಪುಟ್ಟ ಕೆಲಸವನ್ನಾದರೂ ಮಾಡಿ, ಅಷ್ಟೋಇಷ್ಟೋ ದುಡಿದುಕೊಂಡು ತಕ್ಕಮಟ್ಟಿಗಿದ್ದಿದ್ದರೆ…

ಎಷ್ಟುಸಲ ಅಂದುಕೊಂಡರೂ ಅಷ್ಟೇ. ಅಷ್ಟು ಚೆನ್ನಾಗಿ ದೃಷ್ಟಿ ತಾಗುವಂತೆ ಇದ್ದವನಿಗೆ ಐದು ವರ್ಷದವನಿದ್ದಾಗ ಬಂದ ಆ ಹಾಳು ಜ್ವರವೇ ಮುಳುವಾಯಿತು. ತಿಂಗಳುಗಟ್ಟಲೇ ಕಾದ ಜ್ವರ ಅವನು ಉಳಿದಿದ್ದೇ ಹೆಚ್ಚಾಯಿತು. ತುಂಬಾ ದುರ್ಬಲನಾದ. ಫಿಟ್ಸ್‌ ಬರಲು ಆರಂಭವಾಗಿ ಅದೆಷ್ಟು ದೇವರಿಗೆ ಹರಕೆ ಹೊತ್ತದ್ದೋ. ಕಡೆಗೆ ಬದುಕಿದ್ದೇ ಒಂದು ಪವಾಡವೇನೋ ಅನ್ನಿಸಿಬಿಟ್ಟಿತು. ಉಗ್ಗು ಶುರುವಾಯಿತು. ಕಲಿತದ್ದು ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಹೇಗೋ ಹೈಸ್ಕೂಲಿನ ತನಕ ತಳ್ಳಿದರು. ಆಮೇಲೆ ಎಂಟನೇ ಕ್ಲಾಸು ಕೂಡಾ ದಾಟಲಿಲ್ಲ. ಬೇರೆ ಯಾವುದಾದರೂ ಟ್ರೈನಿಂಗ್‌ಗೆ ಕಳಿಸಲು ಶ್ರಮದ ಕೆಲಸಗಳಿಗೆ ಬೇಕಾಗುವಷ್ಟು ಶಕ್ತಿಯಿಲ್ಲ. ಕಲಿಯುವ ಕೆಲಸಗಳಿಗೆ ಬುದ್ಧಿ ಸಾಲದು. ಮನೆಯಲ್ಲೇ ತಮ್ಮಿಬ್ಬರಿಗೆ ಸಣ್ಣಪುಟ್ಟ ಸಹಾಯ ಮಾಡಿಕೊಂಡಿರುತ್ತಾನೆ. ಅದಕ್ಕೂ ನೂರೆಂಟು ಆಕ್ಷೇಪಣೆಗಳು ಅಣ್ಣಂದಿರಿಂದ. ಮೊದಮೊದಲಿಗೆ ಪ್ರೀತಿ ಅಂತಃಕರಣವೇ ಇತ್ತು. ಇತ್ತೀಚೆಗೆ ಹೀಗೆ ಅಸಡ್ಡೆ ತೋರುತ್ತಿದ್ದಾರೆ. ಅವರಿಬ್ಬರಿಗೆ ಹೆಣ್ಣು ನೋಡುವಾಗಲೂ ಎಷ್ಟೋ ಸಂಬಂಧಗಳು ಇವನ ಕಾರಣದಿಂದಲೇ ಮುರಿದುಬಿದ್ದಿದ್ದವು. ಕಡೆಗೆ, ʻಮುಂದೆʼ ಇವನಿಗೊಂದು ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ತಾವು ಹೊತ್ತುಕೊಂಡ ಮೇಲೇ ಅವರಿಬ್ಬರಿಗೂ ಮದುವೆಗಳು ಕುದುರಿದ್ದು. ʻಮುಂದೆಂದೋʼ ಎಂದುಕೊಂಡಿದ್ದನ್ನು ಇಷ್ಟು ಬೇಗನೇ, ಈ ರೀತಿಯಲ್ಲಿ ಮಾಡುವಂತಾಯಿತಲ್ಲ ಎಂದು ಮತ್ತೊಮ್ಮೆ ಕಣ್ಣೊರಸಿಕೊಂಡಳು. ಡ್ರೈವರ್‌ ಸೀಟಿನಲ್ಲಿ ಕುಳಿತು ಹಾರ್ನ್‌ ಮಾಡಿದ. ಎಲ್ಲರೂ ಬಸ್ಸು ಹತ್ತಿದರು…

ಅಂತೂ ಶಿವಮೊಗ್ಗ ಬಂತು. ಹತ್ತು ನಿಮಿಷದಲ್ಲೇ ತೀರ್ಥಳ್ಳಿಯ ಕಡೆಗೆ ಹೋಗುವ ಮಿನಿ ಬಸ್ಸು ಸಿಕ್ಕಿ ಒಂದು ಗಂಟೆಗೆಲ್ಲಾ ದೇವಪುರಿ ತಲುಪಿದರು. ಹೆಚ್ಚೇನೂ ಬದಲಾವಣೆಯಾಗಿಲ್ಲ. ಆಗಿದ್ದ ಮಣ್ಣಿನ ರಸ್ತೆಗಳಿಗೆ ಒಂದಷ್ಟು ಫುಟ್ಪಾತ್‌ ಟೈಲ್ಸ್‌ ಬಂದಿವೆಯಷ್ಟೇ. ಎಲ್ಲೋ ಒಂದೆರಡು ಮನೆಗಳು ಹೊಸದಾಗಿ ಕಟ್ಟಿರುವುದನ್ನು ಬಿಟ್ಟರೆ ಮಿಕ್ಕವೆಲ್ಲಾ ಆ ಕಾಲದ ನಾಡಹೆಂಚಿನ, ಮಂಗಳೂರು ಹೆಂಚಿನ ಮನೆಗಳೇ. ಊರಿಗೆಲ್ಲಾ ನಾಲ್ಕು ರಸ್ತೆಗಳು. ಊರಿನ ಹಿಂಬಾಗದಲ್ಲಿ ಎಂದಿನಿಂದಲೋ ತುಂಗೆ ಹರಿಯುತ್ತಲೇ ಇದ್ದಾಳೆ. ನದಿ ದಡದಲ್ಲಿ ಒಂದಷ್ಟು ಗಾರೆ ಕೆಲಸಮಾಡಿ ಯಾಗಶಾಲೆಯನ್ನು ಕಟ್ಟಿದ್ದಾರೆ. ಹಿಂದಿನಂತೆಯೇ ದೇವಪುರಿಗೂ ಆಕಡೆಯ ದಡದಲ್ಲಿರುವ ವಿಷ್ಣುಪುರಿಗೂ ಮಧ್ಯೆ ಉಕ್ಕಡ ಓಡಾಡುತ್ತದೆ. ಸಂಗೀತ ಶಾಲೆ ಆರಂಭವಾಗಿದೆ. ಇನ್ನೊಂದು ದೊಡ್ಡ ಮನೆ, ಪ್ರಾಯಶಃ ರಾಂಭಟ್ಟರದಿರಬೇಕು, ಈಗ ಗ್ರಂಥಾಲಯವಾಗಿದೆ. ತಮ್ಮ ಮನೆಯಲ್ಲಿ ಸಂಸ್ಕೃತ ಮತ್ತು ವೇದ ಪಾಠಶಾಲೆ ಅಂದಿನಂತೆಯೇ ನಡೆಯುತ್ತಿದೆ. ಕಾಲಕಾಲಕ್ಕೆ ತಕ್ಕಂತೆ ಸ್ವಲ್ಪ ರಿಪೇರಿ, ಮಾರ್ಪಾಟುಗಳನ್ನು ಮಾಡಿಕೊಂಡಂತೆ ಕಾಣಿಸುತ್ತಿದೆ. ಬಸ್ಸಿನಿಂದಿಳಿದು ಎಲ್ಲವನ್ನೂ ಗಮನಿಸುತ್ತಾ ಊರೊಳಗೆ ನಡೆದು ಬಂದರು.

ಈಶ್ವರನ ದೇವಸ್ಥಾನದ ಪಕ್ಕದ ಮನೆಯೇ ಗಣಪತಿ ಘನಪಾಠಿಗಳದ್ದು. ಆವರಿಗೆ ಎಂಭತ್ತೈದರ ಹತ್ತಿರವೇನೋ. ತಾತ ಅಲ್ಲಿದ್ದಾಗ ಕೃಷ್ಣಮೂರ್ತಿಗಳೂ ಘನಪಾಠಿಗಳಿಂದ ಸಂಸ್ಕೃತವನ್ನೂ, ಸ್ವಲ್ಪ ಮಟ್ಟಿಗೆ ವೇದ ಪಾಠವನ್ನೂ ಒಂದಷ್ಟು ಕಾಲ ಕಲಿತಿದ್ದರು. ಮನೆಗೆ ಮಂಗಳೂರು ಹೆಂಚನ್ನು ಹೊದಿಸಿರುವುದನ್ನು ಬಿಟ್ಟರೆ ಹೆಚ್ಚೇನೂ ಬದಲಾವಣೆಯಾಗಿಲ್ಲ. ಅವರು ಜಗಲಿಯ ಮೇಲೇ ಯಾವುದೋ ಗ್ರಂಥವನ್ನಿಟ್ಟುಕೊಂಡು ಓದುತ್ತಾ ಕುಳಿತಿದ್ದರು. ವಯಸ್ಸಾಗಿರುವುದು ಕಾಣುತ್ತದೆ. ಸ್ವಲ್ಪ ಬಾಗಿದ್ದಾರೆ. ಇವರನ್ನು ಕಂಡೊಡನೆಯೇ ಸಂಭ್ರಮದಿಂದೆದ್ದು ಶಲ್ಯವನ್ನು ಸರಿಯಾಗಿ ಹೊದ್ದುಕೊಂಡು “ಬನ್ನಿ ಬನ್ನಿ…” ಎನ್ನುತ್ತಾ ತಮ್ಮ ಕೈಯಲ್ಲಿದ್ದ ಗ್ರಂಥವನ್ನು ಮಡಿಚಿಟ್ಟು ಎದ್ದರು. “ಬೆಳಗ್ಗೆ ಆರು ಗಂಟೆ ಹೊತ್ತಿಗೆ ಮನೆ ಬಿಟ್ಟದ್ದೇನೋ, ಅಲ್ವೇ… ಆರೇಳು ಗಂಟೆ ಪ್ರಯಾಣ, ಆಯಾಸವಲ್ವೇ” ಮಾತನಾಡಿಸುತ್ತಲೇ ಮನೆಯ ಒಳಹೊಕ್ಕರು. “ಲೇ… ಇವ್ಳೇ… ಅವ್ರೆಲ್ಲಾ ಬಂದಾಯ್ತು ಕಂಡ್ಯಾ… ಮಜ್ಜಿಗೆಯೋ, ಪಾನಕವೋ ಎಂತಾದ್ರೂ ಕೊಡ್ತೀಯಾ ನೋಡು” ಎಂದು ಹೆಂಡತಿಯನ್ನು ಕರೆದರು. ಇವರ ಕಡೆ ತಿರುಗಿ “ಕೈಕಾಲು ತೊಳೆದು ಬನ್ನಿ. ಸ್ವಲ್ಪ ಆಸರಿಗೆ ಕುಡ್ದು ನಂತ್ರ ಊಟ ಮಾಡೋಣ” ಎನ್ನುತ್ತಾ ಬಚ್ಚಲಮನೆಯ ಕಡೆಗೆ ಕೈತೋರಿದರು. ಎಲ್ಲರೂ ಕೈಕಾಲು ತೊಳೆದು ಬರುವ ವೇಳೆಗೆ ತೊಟ್ಟಿಯ ಚೌಕಿಗೆ ಬೇಲದ ಹಣ್ಣಿನ ಬೆಲ್ಲದ ಪಾನಕವನ್ನು ತಂದರು ರತ್ನಮ್ಮ. ಆಕೆಯ ಬೆನ್ನೂ ಬಾಗಿಹೋಗಿದೆ. ಅವರಿಗೂ ಎಂಭತ್ತಕ್ಕೆ ಹತ್ತಿರವಾಯ್ತಲ್ವೇ. ಏನೋ ಹಳೇಕಾಲದವರು ಆರೋಗ್ಯವಂತರೆಂದೇ ಹೇಳಬೇಕು. ಏಲಕ್ಕಿ ಹಾಕಿದ ತಣ್ಣಗಿನ ಪಾನಕ ನಿಜಕ್ಕೂ ಹಿತವಾಗಿತ್ತು. ದೊಡ್ಡ ಲೋಟದ ತುಂಬಾ ಕುಡಿದರೂ, ಇನ್ನೊಂದು ಸಲ ಹಾಕಿದಾಗ ಬೇಡವೆನ್ನದೆ ಹಾಕಿಸಿಕೊಂಡು ಕುಡಿದರು. ವನಜಾಕ್ಷಿ ಕುಡಿದ ಲೋಟಗಳನ್ನು ಹಿತ್ತಲಿಗೆ ತೆಗೆದುಕೊಂಡು ಹೋಗಿ ತೊಳೆದು ಬಾರಲು ಹಾಕಿ ಬಂದಳು.

ಒಂದಷ್ಟು ಹೊತ್ತು ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತರು. ಇನ್ನಿಬ್ಬರು ಮಕ್ಕಳ, ಸೊಸೆಯರ ಬಗ್ಗೆ ವಿಚಾರಿಸಿಕೊಂಡರು. ತಮ್ಮ ಮಗ ಸುಬ್ರಹ್ಮಣ್ಯನೇ ಈಗ ಸಂಸ್ಕೃತ ಶಾಲೆಯನ್ನು ನಡೆಸುತ್ತಿರುವ ಬಗ್ಗೆ ಹೇಳಿದರು. ಅವನ ಇಬ್ಬರು ಗಂಡುಮಕ್ಕಳಲ್ಲಿ ಒಬ್ಬ ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವುದನ್ನೂ, ಇನ್ನೊಬ್ಬ ವೇದಾದ್ಯಯನದಲ್ಲೇ ಆಸಕ್ತಿ ತೋರಿ ಅದರಲ್ಲೇ ಮುಂದುವರಿಯುತ್ತಿರುವುದನ್ನೂ ಹೇಳಿದರು. ಇನ್ನೂ ಏನು ಮಾತು ಮುಂದುವರೆಸುತ್ತಿದ್ದರೋ… “ಪಾಪ ಅವ್ರು ಅಷ್ಟೊತ್ತಿಗೇ ಊರು ಬಿಟ್ಟೋರು. ಹಸಿವಾಗಿರುತ್ತೆ. ಎಲೆ ಹಾಕ್ತಿನಿ” ಎನ್ನುತ್ತಾ ರತ್ನಮ್ಮನವರು ಎದ್ದರು. ವನಜಾಕ್ಷಿಯೂ ಸಹಾಯಕ್ಕೆಂದು ಎದ್ದಳು. ಎಲ್ಲರಿಗೂ ಎಲೆ ಹಾಕಿದರು. ಮಿಡಿ ಉಪ್ಪಿನಕಾಯಿ, ಸಾರು, ಹುಳಿ, ಚಟ್ನಿಯ ಜೊತೆಗೆ ಮನೆಯ ಮೊಸರಿನ ಹಿತವಾದ ಊಟ. ಪ್ರಯಾಣದ ಆಯಾಸಕ್ಕೂ, ಬಿಸಿಬಿಸಿಯಾದ ಸೊಗಸಾದ ಊಟ ಮಾಡಿದ್ದಕ್ಕೂ ಹೊಂದಿಕೆಯಾಗಿ ಕಣ್ಣು ಎಳೆಯತೊಡಗಿತು. ಗಂಡಸರಿಗೆಲ್ಲಾ ಚೌಕಿಯಲ್ಲಿ ಚಾಪೆ ಹಾಸಿ ತಮ್ಮಿಬ್ಬರಿಗೂ ಒಳಗಿನ ಕೋಣೆಯಲ್ಲಿ ಚಾಪೆ ಹಾಸಿದರು ರತ್ನಮ್ಮ. ಹೆಚ್ಚು ಉಪಚಾರ ಬೇಕಿಲ್ಲದೆ ಮೂವರೂ ನಿದ್ರೆಗೆ ಜಾರಿದರು.

ಎಚ್ಚರವಾದ ಮೇಲೆ ಬಿಸಿ ಬಿಸಿ ಕಾಫಿ ಜೊತೆಗೆ ಕೋಡುಬಳೆ, ಚಕ್ಕುಲಿಗಳು ಬಂದವು. ನಂತರ ಒಂದಷ್ಟು ಹೊತ್ತು  ಊರಿಗೆ ಹೊಸದಾಗಿ ಬಂದವರು, ಹೊರ ಹೋದವರು, ಇತ್ತೀಚೆಗೆ ಶುರುವಾದ ಗ್ರಂಥಾಲಯ, ಹೊರಭಾಗದಲ್ಲಿ ತಲೆಎತ್ತಿರುವ ಗೃಹ ಕೈಗಾರಿಕೆಗಳು, ಹಿಂದೂಸ್ಥಾನಿ ಸಂಗೀತವನ್ನು ಕಲಿಸಲು ಬಂದಿರುವ ಹುಬ್ಬಳ್ಳಿಯ ಗವಾಯಿಗಳು, ಯಾಗಶಾಲೆಯಲ್ಲಿ ಎಲ್ಲೆಂಲ್ಲಿಂದಲೋ ಜನ ಬಂದು ಹೋಮಗಳನ್ನು, ಯಜ್ಞ ಯಾಗಾದಿಗಳನ್ನು ನಡೆಸಲು ಅಪೇಕ್ಷಿಸುತ್ತಿರುವುದು, ಅವರಿಗಾಗಿ ಮಾಡಿರುವ ವಸತಿ, ಊಟದ ವ್ಯವಸ್ಥೆ ಎಲ್ಲದರ ಬಗ್ಗೆ ಒಂದು ಗಂಟೆಯ ಕಾಲಕ್ಷೇಪವಾಯಿತು. ನಂತರ ನದಿ ತೀರಕ್ಕೆ ಹೋಗಿಬರುತ್ತೇವೆಂದು ಮೂವರೂ ಹೊರಟರು.

ಮುಸ್ಸಂಜೆಯಾಗಿದ್ದರಿಂದ ಅಲ್ಲಲ್ಲಿ ತೀರದ ಬಂಡೆಗಳ ಮೇಲೆ ಕೂತು ಕೆಲವರು ಸಂಧ್ಯಾವಂದನೆಯಲ್ಲಿ ನಿರತರಾಗಿದ್ದರು. ಮುಳುಗುತ್ತಿರುವ ಸೂರ್ಯ, ಹರಿಯುತ್ತಿರುವ ನದಿಯಲ್ಲಿ ತೇಲುತ್ತಿರುವ ಉಕ್ಕಡ, ಹಕ್ಕಿಗಳ ಚಿಲಿಪಿಲಿ, ಪಕ್ಕದಲ್ಲಿದ್ದ ವೇದ ಶಾಲೆಯಿಂದ ಕೇಳುತ್ತಿದ್ದ ವೇದ ಪಠಣ, ಅರಳೀಮರದ ಮರ‍್ಮರ, ದೇವಸ್ಥಾನದಿಂದ ಆಗಾಗ ಕೇಳುತ್ತಿದ್ದ ಗಂಟಾನಾದ ಎಲ್ಲವೂ ಒಂದು ಅಲೌಕಿಕ ವಾತಾವರಣವನ್ನೇ ನಿರ್ಮಿಸಿದ್ದವು. ಅರಳೀಮರದ ಕಟ್ಟೆಯಲ್ಲಿ ಕುಳಿತು ಇಬ್ಬರೂ ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದರು. ಪ್ರಸಾದಿ ಸ್ವಲ್ಪ ದೂರ ನಡೆದು ನದಿ ದಂಡೆಯ ಮೇಲೆ ಕಾಲನ್ನು ನೀರಲ್ಲಿ ಬಿಟ್ಟು ಕುಳಿತ. “ನಾವೇನೋ ವಯಸ್ಸಾದವರು, ಚಿಕ್ಕಂದಿನಲ್ಲಿ ಇಂತಹ ಜೀವನ ಕಂಡವರು, ಇದೆಲ್ಲಾ ಚೆನ್ನಾಗಿದೆ ಅಂತನ್ಸತ್ತೆ. ಪ್ರಸಾದಿ ಹುಟ್ಟಿದಾಗಿನಿಂದ ಸಿಟೀಲೇ ಬೆಳೆದವನು. ಇಂಥಾಲ್ಲಿ ಹೇಗಿರ‍್ತಾನೆ. ಒಂದು ಸಿನಿಮಾ, ಹೋಟ್ಲು, ಅಂಗಡಿ, ಒಂದೂ ಇಲ್ವಲ್ಲ. ಅವರ ಮನೇಲಿ ಟೀವಿ ಕೂಡಾ ಇದ್ಯೋ, ಇಲ್ವೋ ಗೊತ್ತಾಗ್ಲಿಲ್ಲ” ಅಂದಳು ವನಜಾಕ್ಷಿ ಚಿಂತೆಯಿಂದ. ಕೃಷ್ಣಮೂರ್ತಿಯೂ “ನಾನೂ ಅದನ್ನೇ ಯೋಚಿಸ್ತಿದ್ದೆ” ಅಂದರು. “ಅದಷ್ಟೇ ಅಲ್ಲ, ಅಲ್ಲಾದ್ರೆ ಅವನವರೂ ಅಂತ ನಾವಿಬ್ರಾದ್ರೂ ಇದ್ವಿ; ಇಲ್ಲೆಲ್ರೂ ಹೊಸಬರೇ. ಹೇಗೆ ಹೊಂದಿಕೊಳ್ತಾನೋ” ವನಜಾಕ್ಷಿಗೆ ಇನ್ನೊಂದು ಚಿಂತೆ. “ಅದೂ ನಿಜವೇ. ಆದ್ರೇನ್ಮಾಡೋದು. ದಿನವೂ ರಾಮಾಯ್ಣ, ಮಹಾಭಾರ‍್ತ ನೋಡ್ನೋಡಿ ಸಾಕಾಗಿದೆ. ಅನ್ನೋಂಗಿಲ್ಲ, ಅನುಭವಿಸಕ್ಕಾಗಲ್ಲ. ನಾವೂ ಅವ್ನಿಗೆ ಒಂಥರಾ ಪರಕೀಯರೇ ಆಗ್ಬಿಟ್ಟಿದೀವಿ. ನಂಪಾಡಿಗೆ ನಾವಿರೋಣ ಅನ್ನೋಷ್ಟು ಆದಾಯವಿಲ್ಲ; ವಯಸ್ಸಾದ ಹಾಗೆ ಖಾಯಿಲೆಗಳು ಬೆನ್ನಿಗೆ ಬಿದ್ದಿವೆ. ಪರಾಧೀನರಾಗಿಬಿಟ್ಟಿದೀವಿ,  ಅವ್ರನ್ನ ಬಿಟ್ಟಿರ‍್ಲಾರ‍್ವಿ ಇವ್ನನ್ನ ಕಟ್ಕೊಳ್ಲಾರ‍್ವಿ. ಅವ್ನಿಲ್ಲಿರಕ್ಕೊಪ್ಕೊಂಡ್ರೆ ಒಂಥರಕ್ಕೆ ನಿಶ್ಚಿಂತೆ” ಕಂಡಿರೋ ಊರು, ಜನ” ಕೃಷ್ಣಮೂರ್ತಿಗಳು ದುಗುಡದಿಂದ ಹೇಳಿದರು. ಇಬ್ಬರೂ ಸ್ವಲ್ಪ ಹೊತ್ತು ಮೌನವಾಗಿ ತಮ್ಮ ಆಲೋಚನೆಗಳಲ್ಲೇ ಮುಳುಗಿದರು. ಕತ್ತಲಾಗುತ್ತಾ ಬಂತು. “ಪ್ರಸಾದಿ ಹೊರಡೋಣ” ಎಂದು ಕೂಗಿದರು. ಸರಿಯೆಂಬಂತೆ ಅವನೆದ್ದು ಇವರು ಕೂತಿದ್ದಲ್ಲಿಗೆ ಬಂದ. ವನಜಾಕ್ಷಿ ತಡೆಯಲಾಗದೆ “ಪ್ರಸಾದಿ, ನಿಂಗಿಲ್ಲಿರಕ್ಕಾಗತ್ತೇನೋ?” ಕೇಳಿದಳು ನೋವಿನಿಂದ. “ಬೇರೆ ಏನು..ನುಪಾಯ ಇದೆ..ದ್ಯಮ್ಮಾ?” ಎಂದ ತಲೆ ಕೆಳಗೆಹಾಕಿ. “ನಮ್ಮನ್ನ ಕ್ಷಮಿಸಿಬಿಡೋ. ಸೋತ್ಬಿಟ್ಟಿದೀವೋ” ಕಣ್ಣೊರೆಸಿಕೊಂಡಳು. “ನೀನುನುಅಳ್ಬೇಡಮ್ಮಾ, ತುಂಬಾ ಬೇಜಾ..ರಾಗ..ಗತ್ತೆ. ನಂಗ…ರರ್ಥವಾಗ..ಗತ್ತೆ. ಈಗ… ಹೋಗೋಣ” ಎಂದ ಉಗ್ಗುತ್ತಾ. ಮೂವರೂ ಅಲ್ಲಿಂದೆದ್ದರು.

ಮನೆಗೆ ಹೋಗುವ ಹೊತ್ತಿಗೆ ಚೌಕಿಯಲ್ಲಿ ಜಮಖಾನೆ ಹಾಸಿ ಅದರ ಮೇಲೆ ಒಂದು ವ್ಯಾಸಪೀಠವನ್ನು ಇಟ್ಟಿದ್ದರು. ಪಕ್ಕದಲ್ಲಿ ಹೆಂಗಸರಿಗಾಗಿ ಇನ್ನೊಂದು ಜಮಖಾನೆ ಹಾಕಿತ್ತು. ಆಗಲೇ ಒಂದಷ್ಟು ಜನ ಸೇರಿದ್ದರು. ಇವರನ್ನು ನೋಡುತ್ತಿದ್ದಂತೆಯೇ ಘನಪಾಠಿಗಳು “ಬನ್ನಿ, ಬನ್ನಿ ಒಂದ್ವಾರದಿಂದ ಸುಂದರ ಕಾಂಡದ ವಾಚನ ನಡೀತಿದೆ. ಇನ್ನೇನು ನರಸಿಂಹ ಶಾಸ್ತ್ರಿಗಳು ಬಂದ್ಬಿಡ್ತಾರೆ. ಶುರು ಮಾಡೋದೇ” ಎಂದರು. ಮೂವರೂ ಕುಳಿತರು. ಸ್ವಲ್ಪ ಹೊತ್ತಿನಲ್ಲೇ ಶಾಸ್ತ್ರಿಗಳು ಬಂದರು. ಒಂದುಗಂಟೆ ಕಾಲ ವಾಚನ, ವ್ಯಾಖ್ಯಾನ ಎಲ್ಲವೂ ನಡೆಯಿತು. ವನಜಾಕ್ಷಿಗೂ ಕೃಷ್ಣಮೂರ್ತಿಗಳಿಗೂ ತಮ್ಮ ಬಾಲ್ಯದ ನೆನಪಾಯಿತು. ಪ್ರಸಾದಿಗೆ ಇದು ಹೊಸತು. ವಿಧಿಯಿಲ್ಲದೆ ಕೇಳುತ್ತಾ ಕೂತ. ಕೋಸಂಬರಿಯ ಚರಪು ವಿತರಣೆಯಾದ ನಂತರ ಎಲ್ಲರೂ ಹೊರಟರು.

ಪರಿಕರಗಳನ್ನು ಎತ್ತಿಡಲು ಘನಪಾಠಿಗಳು ಎದ್ದಾಗ ಪ್ರಸಾದಿ “ಎಲ್ಲಿಡ್ಬೇಕು..ಕು ಹೇಳಿ..ಳಿ” ಎನ್ನುತ್ತಾ ಎದ್ದ. ಅವನಿಗೆ ಜಾಗ ತೋರಿಸಿ ಮಾತಿಗೆ ಕುಳಿತರು. ಒಂದಷ್ಟು ಔಪಚಾರಿಕ ಮಾತುಗಳಾದ ಮೇಲೆ ಕೃಷ್ಣಮೂರ್ತಿಗಳು ಆರಂಭಿಸಿದರು. “ನಟ್ರಾಜು ನಮ್ಮನೆಗೆ ಬಂದಿದ್ದಾಗ ಹೀಗೀಗೆ ಅಂತ ನಮ್ಮ ಸಮಸ್ಯೇನ ಹೇಳಿದ್ವಿ. ಇನ್ನೂ ಚಿಕ್ಕ ಹುಡುಗ, ಏನು ವ್ಯವಸ್ಥೆ ಮಾಡ್ಬಹುದೂಂತ ನಮಗೆ ತೋಚ್ತಿಲ್ಲ ಅಂದ್ವಿ. ಅವ್ನು ಯೋಚ್ನೆ ಮಾಡ್ಹೇಳ್ತೀನಿ ಅಂದವ್ನು ನಿಮ್ಮತ್ರ ಮಾತಾಡಿ, ಹೀಗೆ ಘನಪಾಠಿಗಳ ಮನೇಲಿ ಅವ್ನನ್ನ ಬಿಡಬಹುದು ಅಂದ. ಮಗನ್ನ ಕೇಳಿದ್ವಿ. ಅವ್ನೂ ಸರೀಂತೊಪ್ಕೊಂಡ. ನೀವೀಗ ನಮ್ಮ ಹುಡುಗನ್ನ ನೋಡ್ತಿದೀರಿ. ನಿಮ್ಗೆ ಪರವಾಗಿಲ್ಲ ಅನ್ನಿಸಿದರೆ ಮಾತ್ರಾ ಬಿಟ್ಟು ಹೋಗ್ತೀವಿ” ಅಂದರು. “ಏನ್‌ ಮಾತೂಂತ ಹೇಳ್ತಿ ಮೂರ್ತಿ. ನಮ್ಮ ನಂಜುಂಡಣ್ಣನ ಮೊಮ್ಮಗ ನಮಗೆ ಹೊರಗಿನವನೆ? ನಮಗೂ ಮನೇಲಿ ಓ ಅನ್ನಕ್ಕೆ ಒಬ್ಬ ಹುಡುಗರಂತವರು ಬೇಕಿತ್ತು. ಧಾರಾಳವಾಗಿ ಇರ‍್ಲೀನಪ್ಪ. ಅವನಿಗೆ ಇಂತ ಹಳ್ಳಿಯಂತ ಊರು ಹೊಂದಬೇಕಷ್ಟೇ. ಏನಪ್ಪಾ ಇರ‍್ತೀಯೇನಪ್ಪಾ ಪುಟ್ಟಣ್ಣ” ಕೇಳಿದರು ಪ್ರಸಾದಿಯನ್ನ. ಅವನು ತಲೆತಗ್ಗಿಸಿಕೊಂಡೇ ತಲೆಯಾಡಿಸಿ ಒಪ್ಪಿಗೆ ಸೂಚಿಸಿದ. “ನಮ್ಮ ಜವಾಬ್ದಾರಿಯನ್ನು ನಿಮ್ಮೇಲೆ ಹಾಕ್ತಿರೋದಕ್ಕೆ ತುಂಬಾ ಸಂಕೋಚವಾಗ್ತಿದೆ. ಕ್ಷಮಿಸಿಬಿಡಿ. ನಮಗಿರೋ ಸ್ವಂತ ಆದಾಯಾಂದ್ರೆ ತಿಂಗಳಿಗೆ ಬರೋ ಆರು ಸಾವಿರ ಬಡ್ಡಿಯಷ್ಟೇ. ಅದೂ ಈಗ ಕಡಿಮೆಯಾಗಿ ಐದು ಸಾವಿರವಾಗಿದೆ. ಅದ್ರಲ್ಲಿ ಮೂರು ಸಾವಿರವನ್ನ ಪ್ರತಿತಿಂಗಳೂ ಕಳಿಸಿಕೊಡ್ತೀವಿ. ಅವ್ನನ್ನ ನೋಡಿಕೊಳ್ಳೋದಕ್ಕೆ ಅಂತಲ್ಲ; ದಯವಿಟ್ಟು ಅದನ್ನ ಗುರುಕಾಣಿಕೆ ಅಂತ ಸ್ವೀಕರಿಸಿ. ನಿಮ್ಮ ದೊಡ್ಡ ಮನಸ್ಸಿಗೆ ನಾವೇನು ಕೊಟ್ರೂ ಕಡಿಮೆಯೇ” ಎಂದು ಕೈಮುಗಿದರು. “ಅಯ್ಯಾ ಕೃಷ್ಣಮೂರ್ತಿ, ನನ್ನತ್ರ ಇಷ್ಟೆಲ್ಲಾ ಒಸಗೆ ಯಾಕಯ್ಯಾ. ನಿಮ್ಮಪ್ಪ ನನಗಿಂತ ಒಂದ್ಹತ್ತು ವರ್ಷ ದೊಡ್ಡೋನೇನೋ. ನಿಂಗೂ ಒಂದಷ್ಟು ದಿನ ಸಂಸ್ಕೃತ, ಅಮರ ಹೇಳ್ಕೊಟ್ಟಿದೀನಿ. ನಿಮ್ತಾತ ಊರಿಗೇ ಬೇಕಾಗಿದ್ದೋರು. ಅವರಿದ್ದ ಮನೇನ ಒಳ್ಳೇ ಕಾರ‍್ಯಕ್ಕೆ ಬಿಟ್ಟುಕೊಟ್ಟಿದೀಯ. ಎಲ್ಲರೂ ಅದರ ಸದುಪಯೋಗ ಪಡಕೊಳ್ತಿದಾರೆ. ನಿನ್ಮಗನಿಗೆ ಈ ಊರಲ್ಲಿರಕ್ಕೆ ಹಕ್ಕಿಲ್ವೇನಯ್ಯ” ಎಂದು ನಕ್ಕರು. “ಹಾಗಲ್ಲ ಇವನ ಅಣ್ಣಂದಿರು ಸ್ವಲ್ಪ ಮನಸ್ಸು ಮಾಡಿದ್ರೆ ಈ ಸ್ಥಿತಿ ಇರ‍್ತಿರ‍್ಲಿಲ್ಲ. ಸೊಸೇರ ಬಗ್ಗೆ ಏನ್ಹೇಳ್ಳಿ. ಅವ್ರಿಗೆ ಇವ್ನೊಬ್ಬ ಹೊರೆ ಅನ್ನಿಸ್ತಿದೆ, ದುಡ್ಡಿನ ಹೊರೆಗಿಂತ ಜವಾಬ್ದಾರಿಯ ಹೊರೆ. ಸಣ್ಣಪುಟ್ಟ ಕಾರಣಕ್ಕೂ ಮನೇಲಿ ಕದನಗಳಾಗತ್ತೆ. ನಮಗೋ ಇಬ್ಬಂದಿ, ಆಡೋ ಹಾಗಿಲ್ಲ; ಅನುಭವಿಸೋ ಹಾಗಿಲ್ಲ. ಹೀಗಾಗಿ ಈ ತೀರ‍್ಮಾನಕ್ಕೆ ಬರಬೇಕಾಯ್ತು” ಸಂಕೋಚದಿಂದ ಹಿಡಿಯಾದರು ಮೂರ್ತಿಗಳು. “ಎಲ್ರ ಮನೆ ದೋಸೇನೂ ತೂತೇ ಕಣಯ್ಯ, ನಿಮ್ಮನೇದೊಂದು ಕತೆಯಾದ್ರೆ, ನಮ್ಮನೇದಿನ್ನೊಂದು. ಇದ್ದೂರಲ್ಲೇ ಮಗ, ಸೊಸೆ ಬೇರೆ ಇದಾರೆ. ಹೋಗಿ ಬಂದು ಮಾಡ್ಕೊಂಡು ನಮ್ಜೊತೆ ಚೆನ್ನಾಗಿದಾರೆ, ಅಷ್ಟು ಸಾಕು ನಮ್ಗೆ. ಈಗ ಈ ಪುಟ್ಟಣ್ಣ ಇಲ್ಲಿದ್ರೆ ನಮ್ಗೂ ಮನೇಲೊಬ್ಬ ಮಗ ಇದ್ದಹಾಗಿರತ್ತೆ. ಏನೂ ಯೋಚ್ನೆ ಮಾಡ್ಬೇಡ. ನಮ್ಮಧ್ಯೆ ದುಡ್ಡುಗಿಡ್ಡಿನ ವ್ಯವಹಾರ ಬೇಡ. ನೀನು ನೆಮ್ಮದಿಯಾಗಿ ಊರಿಗ್ಹೋಗು” ಎಂದರು. “ಸರಿ, ಇನ್ನೇನು ಎಲ್ಲಾ ಮಾತಾಯ್ತಲ್ಲ. ಈಗ ಊಟ ಮಾಡೋಣ” ಎನ್ನುತ್ತಾ ಅಡುಗೆಮನೆಯ ಕಡೆಗೆ ತಿರುಗಿ “ಏನೂ…” ಕರೆದರು. ಒಳಗಿನಿಂದ “ಎಲೆ ಹಾಕಿದೆ” ಎಂದು ಕರೆಬಂತು.

ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಹೊರಳಾಡಿದರು ಮೂವರೂ ಅವರವರದೇ ಯೋಚನೆಯಲ್ಲಿ. ವನಜಾಕ್ಷಿಯಂತೂ ಅದೆಷ್ಟು ದುಃಖಿಸಿದಳೋ… ವಿಧಿಯಿಲ್ಲ; ಬೆಳಗ್ಗೆ ಬೇಗನೆ ತಿಂಡಿತಿಂದು ಶಿವಮೊಗ್ಗಕ್ಕೆ ಹೊರಟರು. ಅಲ್ಲಿಂದ ಹತ್ತು ಗಂಟೆಯ ಬಸ್ಸಿಗೆ ಹತ್ತಿದರೆ ಸಂಜೆಯೊಳಗೆ ಮನೆ ತಲುಪಬಹುದು. ಹೊರಡುವ ಮುನ್ನ ವನಜಾಕ್ಷಿ ಪ್ರಸಾದಿಯನ್ನಪ್ಪಿಕೊಂಡು ಅತ್ತಳು. “ಒಳ್ಳೇ ಮಗಳನ್ನ ಗಂಡನ ಮನೇಲಿ ಬಿಟ್ಟುಹೋಗೋ ಹಾಗೆ ಆಡ್ತಿದೀಯಲ್ಲಮ್ಮಾ” ಎಂದು ನಕ್ಕರು ಘನಪಾಠಿಗಳು. “ಹಾಗೆ ಯಾವಾಗ ನೋಡ್ಬೇಕು ಅನ್ಸಿದ್ರೂ ಗಂಡ, ಹೆಂಡ್ತಿ ಇಬ್ರೂ ಬನ್ನಿ, ಎರಡ್ದಿನ ಜೊತೆಗಿದ್ದು ಹೋಗಿ” ಎಂದು ರತ್ನಮ್ಮ ಅವರನ್ನು ಸಮಾಧಾನಿಸಿ ಕಳಿಸಿದರು. ಬಸ್ಸು ಕಣ್ಣಿಂದ ಮರೆಯಾಗುವವರೆಗೂ ಪ್ರಸಾದಿ ನೋಡುತ್ತಲೇ ನಿಂತಿದ್ದ. ನಂತರ ಅಲ್ಲಿದ್ದ ಅರಳಿಕಟ್ಟೆಯ ಮೇಲೆ ತಲೆತಗ್ಗಿಸಿ ಕುಳಿತ. “ಬೇಕಾದ್ರೆ ಸ್ವಲ್ಹೊತ್ತು ಕೂತಿದ್ದು ಮನೆಗ್ಬಾ ಪುಟ್ಟಣ್ಣ” ಎಂದು ಹೇಳಿ ಘನಪಾಠಿಗಳು ಹೊರಟರು. ಕಟ್ಟೆಯ ಮೇಲೆ ಒಬ್ಬನೇ ಕುಳಿತು ಬಿಕ್ಕಿಬಿಕ್ಕಿ ಅತ್ತ. ತನ್ನ ಅಷ್ಟೂ ದಿನಗಳ ದುಃಖ ಹರಿದುಹೋಗುವ ಹಾಗೆ ಮನಸಾರೆ ಅತ್ತ. ಬಸ್ಸಿನಲ್ಲಿ ಕುಳಿತಿದ್ದ ವನಜಾಕ್ಷಿಯೂ ಹಾಗೆಯೇ ಬಿಕ್ಕಿದಳು. ಕೃಷ್ಣಮೂರ್ತಿಗಳೂ ಆಗಾಗ ಕಣ್ಣೊರೆಸಿಕೊಂಡರು…

*

ಕಾಲ ಎನ್ನುವುದು ಎಲ್ಲವನ್ನೂ ಮರೆಸುತ್ತದೆ; ಮರೆಸಲೇಬೇಕು. ಇಲ್ಲದಿದ್ದರೆ ಜೀವನ ನಡೆಯುವುದು ಹೇಗೆ? ಬಿಟ್ಟು ಬಂದಮೇಲೆ ಒಂದು ವಾರ ಪ್ರಪಂಚವೇ ಶೂನ್ಯವಾಗಿದ್ದಂತೆ ಕುಳಿತಿದ್ದ ವನಜಾಕ್ಷಿ, ಚೇತರಿಸಿಕೊಂಡು ಮನೆಕೆಲಸಗಳಲ್ಲಿ ತೊಡಗಿಸಿಕೊಂಡಳು. ಈಗ ಪ್ರಸಾದಿಯ ಕಾರಣವಾಗಿ ಆಗಾಗ ಭುಗಿಲೇಳುತ್ತಿದ್ದ ಕಿರಿಕಿರಿಗಳಿಲ್ಲ. ಮನೆ, ಯುದ್ಧ ಮುಗಿದ ರಣರಂಗದಂತಿದೆ. ಮೊದಮೊದಲು ದಿನವೂ ಪ್ರಸಾದಿಯ ಮೊಬೈಲ್ಗೆ ಕರೆಮಾಡುತ್ತಿದ್ದವರು, ಈಗ ಮೂರ‍್ನಾಲ್ಕು ದಿನಕ್ಕೋ, ವಾರಕ್ಕೊಮ್ಮೆಯೋ ಮಾಡುತ್ತಾರೆ. ಮೊದಮೊದಲು ಬೇಜಾರಿನಲ್ಲಿರುತ್ತಿದ್ದ ಅವನ ಸ್ವರದಲ್ಲಿ ಒಂದಿಷ್ಟು ಶಕ್ತಿ ತುಂಬಿಕೊಂಡಿದೆ. ಯಾವುದೋ ಹೋಮವೆಂದೋ, ದೇವಸ್ಥಾನದ ಉತ್ಸವವೆಂದೋ, ಊರಲ್ಲಿ ನಡೆಯುವ ಇನ್ನೇನೋ ಕಾರ‍್ಯಕ್ರಮದ ಬಗ್ಗೆಯೋ ಹೇಳುತ್ತಿರುತ್ತಾನೆ. ಅವನು ಅಲ್ಲಿ ಸಮಾಧಾನವಾಗಿ ಇರಬಹುದು ಎಂಬ ಊಹೆಯಲ್ಲಿ ಇವರಿಗೆ ನೆಮ್ಮದಿಯಿದೆ.

ಅಣ್ಣಂದಿರು ಇವನು ಮನೆ ಬಿಟ್ಟಿದ್ದರಿಂದ ಸ್ವಲ್ಪ ಮಟ್ಟಿಗೆ ನಿರಾಳವಾಗಿದ್ದಾರೆ. ತಮ್ಮನೆಂಬ ಅಂತಃಕರಣದಿಂದಾದರೂ, ಒಮ್ಮೆಯಾದರೂ, ಫೋನ್ಮಾಡಿ  ವಿಚಾರಿಸಿಕೊಳ್ಳಬೇಕು ಎಂದವರಿಗನ್ನಿಸಲಿಲ್ಲ. ಒಂದಾರು ತಿಂಗಳಲ್ಲೇ ರಾಘವನಿಗೆ ದೆಹಲಿಯಲ್ಲಿ ಇನ್ನೂ ಒಳ್ಳೆಯ ಕೆಲಸ ಸಿಕ್ಕು ಅಲ್ಲಿ ಸಂಸಾರವನ್ನು ಹೂಡಬೇಕಾಯಿತು. ಅವನ ಹೆಂಡತಿಯೂ ಅಲ್ಲೇ ಕೆಲಸವನ್ನು ಹುಡುಕಿಕೊಂಡಳು. ಮೊಮ್ಮಗಳನ್ನು ನೋಡಿಕೊಳ್ಳುವ ಸಲುವಾಗಿ ಅವರೊಂದಿಗೆ ಇವರಿಬ್ಬರೂ ದೆಹಲಿಗೆ ಹೊರಡಲೇಬೇಕಾಯಿತು. ಹೊರಡುವ ಮುಂಚೆ ಪ್ರಸಾದಿಯನ್ನೊಮ್ಮೆ ನೋಡಿಕೊಂಡು ಬರುವುದೇನೋ ಅಂದುಕೊಂಡರೂ ಗಡಿಬಿಡಿಯಲ್ಲಿ ಸಾಧ್ಯವಾಗಲಿಲ್ಲ. ಹಿಂದೆಯೇ ರಾಜೀವನಿಗೂ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿತು. ಅವನೂ ಖುಷಿಯಾಗಿ ಹೆಂಡತಿಯೊಂದಿಗೆ ಅಮೇರಿಕಾಗೆ ಹಾರಿದ. ಮನೆಯೇ ಖಾಲಿಯಾದಮೇಲೆ ಇನ್ನು ಬೆಂಗಳೂರಿಗೆ ಬರುವ ಮಾತೆಲ್ಲಿ? ದೇವಪುರಿಗೆ ಹೋಗುವ ಮಾತೆಲ್ಲಿ. ಯಾವಾಗಲಾದರೂ ಆ ಮಾತು ಬಂದಾಗ ರಾಘವ “ಈಗ ರಾಜೀವನೂ ಬೆಂಗಳೂರಲ್ಲಿಲ್ಲ. ನೀವಿಬ್ಬರೇ ಹೇಗೆ ಎರಡು ದಿನ ರೈಲಲ್ಲಿ ಪ್ರಯಾಣ ಮಾಡಿ, ಅಲ್ಲಿಂದ ಶಿವಮೊಗ್ಗಕ್ಕೆ, ಅಲ್ಲಿಂದ ದೇವಪುರಿಗೆ ಹೋಗಲು ಸಾಧ್ಯ. ಬೆಂಗಳೂರಲ್ಲಿ ಯಾರು ನಿಮ್ಮನ್ನು ಇಳಿಸಿಕೊಳ್ತಾರೆ? ಎಲ್ಲಿರ‍್ತೀರಿ ಅಲ್ಲಿ? ಹೀಗ್ಹೋಗಿ ಹಾಗೆ ಬರಕ್ಕಾಗತ್ಯೇ? ಆಗೋ ಹೋಗೋ ಸಮಾಚಾರ ಅಲ್ಲ ಬಿಡಿ” ಎಂದು ಆ ವಿಷಯವನ್ನೇ ಮುಗಿಸಿಬಿಡುತ್ತಿದ್ದ. ʻಅವನೂ ಜೊತೆಗೆ ಬಂದರೆ ಹೋಗಿ ಒಮ್ಮೆ ನೋಡಿಕೊಂಡು ಬರಬಹುದೇನೋʼ ಎನ್ನುವ ಆಸೆ ಇಣುಕಿದರೂ, ಅದನ್ನು ಆಡಿದರೆ ಆಗುವ ಪರಿಣಾಮವನ್ನು ನೆನೆದು ಸುಮ್ಮನಿರಬೇಕಾಯಿತು.

ಹೀಗೇ ಎರಡು ವರ್ಷ ಕಳೆದು ಹೋಯಿತು. ಅಮೇರಿಕಾದಲ್ಲಿ ರಾಜೀವನ ಹೆಂಡತಿ ಬಸುರಿಯಾಗಿದ್ದಳು. ಅವಳಮ್ಮ ಸಧ್ಯಕ್ಕೆ ಬರಲು ಸಾಧ್ಯವಿಲ್ಲದ್ದರಿಂದ ಹೆರಿಗೆಯ ಸಮಯಕ್ಕೆ ಅಮ್ಮ, ಅಪ್ಪನನ್ನು ಕಳಿಸು ಎಂದು ಅವನು ರಾಘವನಿಗೆ ಫೋನ್‌ ಮಾಡಿದ್ದ. ಇಲ್ಲವೆನ್ನಲಾಗದೆ ರಾಘವ ಮಗಳಿಗೆ ಒಂದಾರು ತಿಂಗಳಿಗೆ ಬೇಬಿಸಿಟಿಂಗನ್ನು ಹೊಂದಿಸಿಕೊಂಡು, ಇಬ್ಬರಿಗೂ ಪಾಸ್‌ಪೋರ್ಟ್‌ ವೀಸಾ ಮಾಡಿಸಿದ. ರಾಜೀವ ಇಬ್ಬರಿಗೂ ಟಿಕೆಟ್‌ ಕಳಿಸಿಕೊಟ್ಟ. “ನೋಡು ಎಂಥಾ ಛಾನ್ಸ್‌ ಹೊಡಿದ್ರಿ, ಅಮೇರಿಕಾ ನೋಡ್ಕೊಂಡು ಬರೋದು. ಪ್ರಸಾದಿ ಜೊತೆಗಿದ್ದಿದ್ರೆ ಇದೆಲ್ಲಾ ಸಾಧ್ಯವಾಗ್ತಿತ್ತಾ? ಮಜವಾಗಿ ತಿರುಗಾಡ್ಕೊಂಡು ಬನ್ನಿ” ಎಂದು ವಿಮಾನ ಹತ್ತಿಸಿದ. ಹೋಗುವ ಮುಂಚೆಯಾದರೂ ಒಂದ್ಸಲ ಪ್ರಸಾದಿಯನ್ನು ನೋಡಿಕೊಂಡು ಬರಬೇಕೆನ್ನುವ ಅವರ ಆಸೆ ಕೈಗೂಡಲೇ ಇಲ್ಲ.

ವಿಮಾನ ಹತ್ತಿದ ಮೇಲೆ ವನಜಾಕ್ಷಿ ಮೂರ್ತಿಗಳೊಂದಿಗೆ ಅಲವತ್ತುಕೊಂಡಳು “ಅಲ್ಲಾ, ಒಂದ್ಸಲಕ್ಕಾದ್ರೂ ನಿಮಗೆ ಹೋಗಕ್ಕೆ ಇಷ್ಟವಿದ್ಯಾ ಅಂತ ಇವನು ಕೇಳಲಿಲ್ಲ; ಬನ್ನಿ ಅಂತ ಅವ್ನು ಕರೀಲಿಲ್ಲ. ಅವನು ಹೇಳ್ದ, ಇವ್ನು ಕಳಿಸ್ದ. ಇವ್ನ ಮಗ್ಳು ಈಗ ಸ್ವಲ್ಪ ದೊಡ್ಡವಳಾದ್ಲು ಅಂತ ಇವ್ನೂ ಒಪ್ಕೊಂಡ. ಇವರಿಬ್ರೂ ನಮ್ಮನ್ನೇನಂತ ತಿಳ್ಕೊಂಡಿದಾರೆ. ಇವ್ರ ಅವಶ್ಯಕತೆಗಳಿಗೆ ಮಾತ್ರಾ ಇರೋದು ಅಂತಾನಾ. ಪ್ರಸಾದೀನ ನೋಡಿ ಎರಡ್ವರ್ಷದ ಮೇಲಾಯ್ತು. ಪಾಪ ಹೇಗಿದಾನೋ. ಬರೀ ಫೋನಲ್ಲಿ ಮಾತಾಡೋದೇ ಆಯ್ತು. ಅಲ್ಹೋದ್ಮೇಲೆ ಅದೂ ಆಗತ್ತೋ ಇಲ್ವೋ. ಕನಸಲ್ಲೆಲ್ಲಾ ಅವ್ನೇ ಬರ‍್ತಾನೆ. ಏನೋ ನಾವಿಬ್ರೂ ಇವರತ್ರ ಸಿಕ್ಕಾಕ್ಕೊಂಡುಬಿಟ್ವಿ ಅನ್ನಿಸ್ತಿದೆ”. “ಈಗ ಯೋಚಿಸಿ ಏನು ಪ್ರಯೋಜ್ನ. ನಮ್ಗೆ ಬೇರೆ ದಾರಿ ತಾನೇ ಏನಿದೆ ವನಜಾ. ಏನೋ ಅವ್ನಲ್ಲಿ ಸುಖವಾಗಿದಾನೆ ಅಂತ ನಂಬ್ಕೊಂಡು ಸಮಾಧಾನ ಮಾಡ್ಕೋಬೇಕಷ್ಟೆ” ಎಂದರು ಮೂರ್ತಿಗಳು. “ಪಾಪ ಮೊದ್ಲೇ ಅದು ಬಾಯಿಲ್ಲದ ಮೂಕಪ್ರಾಣಿ. ನಮ್ಮತ್ರ ಹೇಳ್ಕೊಳ್ದೆ ಅಲ್ಲೇನು ಅನುಭವಿಸ್ತಿದ್ಯೋ, ಯಾರಿಗ್ಗೊತ್ತು?” ಅಂದಳು ವನಜಾಕ್ಷಿ. “ಎಷ್ಟು ಅಂದುಕೊಂಡ್ರೂ ಈಗಷ್ಟೇ, ನಾವಲ್ಲಿಗೆ ಹೋಗೋ ಹಾಗಿಲ್ಲ, ನೋಡ್ಕೊಂಡು ಬರೋಹಾಗಿಲ್ಲ. ಈಗ ನಮಗೆ ಗೊತ್ತಿಲ್ಲದ ದೇಶ, ಭಾಷೆ, ಅಲ್ಲಿ ಕಾಲ ಕಳ್ಯೋದು ಹೇಗೆ ಹೇಳು” ಎಂದು ಮಾತು ತಿರುಗಿಸಿದರು. “ನಂಗೂ ಅದೇ ಆತಂಕ” ಎಂದಳು ವನಜಾಕ್ಷಿ.

*

ಅಮೇರಿಕೆಯ ಜೀವನವೋ… ಮನೆಗೆಲಸಕ್ಕೆ ಜನವಿಲ್ಲ; ಮಾತಾಡಲು ನೆರೆಹೊರೆಯಿಲ್ಲ. ಅಡುಗೆ ಕೆಲಸ, ಪಾತ್ರೆ ತೊಳಿ, ಬಟ್ಟೆಗಳನ್ನು ಮೆಷೀನಿಗೆ ಹಾಕು, ಮನೆಯನ್ನೆಲ್ಲಾ ವ್ಯಾಕ್ಯೂಮ್‌ ಮಾಡಿ ಗುಡಿಸು, ಬಾತ್ರೂಮ್‌ ತೊಳಿ. ರಾತ್ರಿಯೆಲ್ಲಾ ಅಳುವ ಮಗುವನ್ನು ಎತ್ತಿಕೊಂಡು ಸುಧಾರಿಸು ಹೈರಾಣಾಗಿ ಹೋದರು ದಂಪತಿಗಳು. ಇಬ್ಬರೂ ಹಂಚಿಕೊಂಡು ಮಾಡಿದರೂ ಮುಗಿಯದಷ್ಟು ಕೆಲಸ. ಹೊರಗೆ ಸುತ್ತುವುದಿರಲಿ, ಅಪಾರ್ಟ್‌ಮೆಂಟಿನ ಮೆಟ್ಟಿಲನ್ನು ಕೂಡಾ ಒಮ್ಮೆಯೂ ಇಳಿಯಲಿಲ್ಲ. ಅದೆಲ್ಲಾ ಪಕ್ಕಕ್ಕಿರಲಿ, ಅಷ್ಟು ದಿನಗಳಲ್ಲಿ ಪ್ರಸಾದಿಗೆ ಒಮ್ಮೆಯೂ ಫೋನ್‌ ಮಾಡಲೂ ಆಗಲಿಲ್ಲ. ಇಲ್ಲಿ ಮಾಡುತ್ತಿದ್ದ ಹಾಗೆ ತಮ್ಮ ಮೊಬೈಲ್ನಿಂದ ಮಾಡಲು ಸಾಧ್ಯವಿಲ್ಲ. ಒಂದೆರಡು ಸಲ ರಾಜೀವನೊಂದಿಗೆ ಕೇಳಿದಾಗ ಇಲ್ಲಿ ಹಗಲಿರುವಾಗ ಅಲ್ಲಿ ರಾತ್ರೀನಮ್ಮ, ಇಲ್ಲಿನ ರಾತ್ರಿಯಲ್ಲಿ ಅಲ್ಲಿ ಹಗಲು. ಹಾಗಾಗಿ ಫೋನ್‌ ಮಾಡೋದು ಕಷ್ಟ. ಆರಾಮಾಗೇ ಇರ‍್ತಾನ್ಬಿಡಿ. ಅವ್ನಂಥಾ ಶೋಂಭೇರಿಗೆ ಲಾಯಕ್ಕಾಗಿದೆ ಆ ಊರು” ಎಂದು ನಕ್ಕುಬಿಟ್ಟ. ಹತಾಶೆಯಿಂದ ಸುಮ್ಮನಾದರು.

ದುಡಿತ ಮುಗಿದರೆ ಸಾಕಪ್ಪ ಎನ್ನುವಷ್ಟು ಸುಸ್ತಾಗಿ ಹೋದರು ಇಬ್ಬರೂ. ಅಂತೂ ಆರು ತಿಂಗಳು ಕಳೆದು ಹೊರಡುವಾಗ “ಈ ಸಲ ನಿಮಗೇನೂ ತೋರಿಸಕ್ಕೆ ಆಗಲಿಲ್ಲ. ಮುಂದಿನ ವರ್ಷ ಮತ್ತೆ ಕರೆಸ್ಕೋತೀವಿ. ಆಗ ದೇಶವೆಲ್ಲಾ ಸುತ್ತಿಸ್ತೀವಿ” ಎಂದು ಹೇಳಿ ದಂಪತಿಗಳಿಬ್ಬರೂ ವಿಮಾನವನ್ನು ಹತ್ತಿಸಿದರು. ʻಮತ್ತೆ ಬರ‍್ಬೇಕಾʼ ಎಂದು ಹೆದರಿಕೊಂಡೇ ವಿಮಾನವನ್ನು ಹತ್ತಿದರು ದಂಪತಿಗಳು.

*

ಮೊದಮೊದಲಿಗೆ ಸುಮ್ಮನೇ ಕುಳಿತಿರುತ್ತಿದ್ದ ಪ್ರಸಾದಿಯನ್ನು ಘನಪಾಠಿಗಳೂ ನಿಧಾನವಾಗಿ ಅವರ ಮನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪೂಜೆಗೆ ಹೂ ಬಿಡಿಸಿಕೊಂಡು ಬರುವುದು, ದೇವರ ಪೂಜೆಗೆ ಅಣಿ ಮಾಡುವುದು, ಹಿತ್ತಲಿನಲ್ಲಿರುವ ತರಕಾರಿ, ಹೂಗಿಡಗಳಿಗೆ ನೀರು ಹಾಕುವುದು, ತರಕಾರಿ ಕಿತ್ತುಕೊಂಡು ಬರುವುದು, ಸಣ್ಣಪುಟ್ಟ ಮನೆಕೆಲಸಗಳಲ್ಲಿ… ಹೀಗೇ ಅವನೂ ತನ್ನ ಕೈಲಾದ ಕೆಲಸ ಮಾಡುತ್ತಾ ಕ್ರಮೇಣ ಆ ಮನೆಯವರಲ್ಲಿ ಒಬ್ಬನಾಗಿ ದಂಪತಿಗಳಿಬ್ಬರ ಬಾಯಲ್ಲಿ ಪುಟ್ಟಣ್ಣನಾಗಿದ್ದಾನೆ. ಅವನಿಗೆ ಅವರಿಬ್ಬರೂ ಅಜ್ಜಿ, ತಾತ ಆಗಿದ್ದಾರೆ. ಮರೆತೇಹೋಗಿದ್ದ ಸಂಧ್ಯಾವಂದನೆಯನ್ನು ಅವರಿಂದ ಕಲಿತಿದ್ದಾನೆ. ನಿತ್ಯಪೂಜೆಯ ಸಮಯದಲ್ಲಿ ಒಬ್ಬ ಮರಿಭಂಟನಂತೆ ಕುಳಿತಿದ್ದು ಎಲ್ಲವನ್ನೂ ಗಮನಿಸುತ್ತಿರುತ್ತಾನೆ. ದಿನವೂ ಸ್ವಲ್ಪ ಹೊತ್ತು ವೇದ ಪಾಠ ನಡೆಯುವಲ್ಲಿಗೆ ಹೋಗಿ ಕುಳಿತುಕೊಳ್ಳುತ್ತಾನೆ. ಮಂತ್ರಗಳನ್ನು ಕೇಳುತ್ತಾ, ಹಾಗೆಯೇ ತಾನು ಹೇಳಲು ಪ್ರಯತ್ನಿಸುತ್ತಾ ಅವನ ಉಗ್ಗು ನಿಧಾನವಾಗಿ ಕಡಿಮೆಯಾಗುತ್ತಿದೆ. ಮೊದಮೊದಲು ಮನಸ್ಸಿನಲ್ಲಿ, ನಂತರ ಮೆಲ್ಲಗೆ ಹೇಳುತ್ತಿದ್ದವನು ಈಗ ಬಾಯಿಬಿಟ್ಟು ಹೇಳುತ್ತಾನೆ. ಹೇಳಿದ್ದನ್ನೇ ದಿನವೂ ಹೇಳಿ ಹೇಳಿ ನೆನಪಿನ ಶಕ್ತಿಯೂ ಹೆಚ್ಚಾಗುತ್ತಿದೆ. ಯಾವುದಾದರೂ ಹೋಮ, ಯಜ್ಞಗಳು ನಡೆಯುವಾಗ ಅಲ್ಲಿ ಬೇಕಾದ ಪರಿಚಾರಿಕೆಯನ್ನು ಮಾಡುತ್ತಿದ್ದು ಒಂದಷ್ಟು ದಕ್ಷಿಣೆ ಗಿಟ್ಟಿಸುತ್ತಾನೆ. ನಿತ್ಯ ಪೂಜೆಯ ಮಂತ್ರಗಳನ್ನು, ವಿಧಿಯನ್ನು ಕಲಿತಿದ್ದು ಸಮಯವೆಂದರೆ ಯಾರ ಮನೆಗಾದರೂ ಹೋಗಿ ಪೂಜೆ ಮಾಡಿಬರುತ್ತಾನೆ. ಮೊದಮೊದಲಿಗೆ ಬಲವಂತದಿಂದ, ಅವರೆಲ್ಲಿ ತಪ್ಪು ತಿಳಿಯುತ್ತಾರೋ ಎನ್ನುವ ಸಂಕೋಚದಿಂದ ಕಲಿಯುತ್ತಿದ್ದದ್ದು ಈಗವನಿಗೆ ಒಂದು ಜೀವನಮಾರ್ಗವಾಗಿ ತೋರಿ ಸ್ವಾಭಿಮಾನ ಮೂಡುತ್ತಿದೆ.

ಏನೂ ಕೆಲಸವಿಲ್ಲದೆ ಬೇಸರವಾದಾಗ ಊರಿನ ಮಿಕ್ಕ ಸಮವಯಸ್ಕರೊಡನೆ ಒಂದಷ್ಟು ಮಾತಾಡುತ್ತಾ ಕಾಲ ಕಳೆಯುತ್ತಾನೆ. ಬೆಂಗಳೂರಂಥ ಬೆಂಗಳೂರಲ್ಲಿ ಅವನಿಗೆ ಒಬ್ಬ ಸ್ನೇಹಿತನೂ ಇರಲಿಲ್ಲ. ಅಣ್ಣಂದಿರೊಂದಿಗಂತೂ ಸದಾ ಭಯವೇ. ಯಾವಾಗಲೂ ಅವರೆದುರು ತಲೆತಗ್ಗಿಸಿ ನಿಲ್ಲುತ್ತಿದ್ದವನಿಗೆ ಅದು ತಪ್ಪಿದ್ದು ದೊಡ್ಡ ಸಮಾಧಾನವಾಗಿದೆ. ಇಲ್ಲಿ ಅವನನ್ನು ಅವರೊಂದಿಗೆ ಹೋಲಿಕೆ ಮಾಡಿ ಹಂಗಿಸುವವರು ಯಾರೂ ಇಲ್ಲ. ʻಅಯ್ಯೋ ಪಾಪʼ ಎಂದು ತೋರಿಕೆಗೆ ಅನುಕಂಪ ಪಡುವವರೂ ಇಲ್ಲ. ಮಿಕ್ಕವರೊಂದಿಗೆ ಮಾತಾಡುವಾಗ ಕೀಳರಿಮೆ ಬಾಧಿಸುವುದಿಲ್ಲ. ಅವರೆಲ್ಲರೂ ಇವನ ವೇದಪಾಠದ ಸಹಪಾಟಿಗಳು ಸಂಜೆ ಸಂಧ್ಯಾವಂದನೆಗೆ ಜೊತೆಗೂಡುವವರು, ಇಲ್ಲವೇ ಹೋಮ ಹವನಗಳಲ್ಲಿ, ಹರಟೆ ಕಟ್ಟೆಗಳಲ್ಲಿ ಇವನಂತೆಯೇ ಭಾಗವಹಿಸುವವರು. ಯಾವಾಗಲಾದರೊಮ್ಮೆ ಅವರೊಂದಿಗೆ ಶಿವಮೊಗ್ಗಕ್ಕೆ ಬಸ್ಸಿನಲ್ಲೋ ಇಲ್ಲವೇ ಅವರ ಕಾರಿನಲ್ಲೋ ಹೋಗಿ ಸಿನಿಮಾ, ನಾಟಕಗಳನ್ನು ನೋಡಿ ಬರುತ್ತಾನೆ. ಕೆಲವೊಮ್ಮೆ ಒಬ್ಬನೇ ಬಸ್ಸಿನಲ್ಲಿ ಹೋಗಿ ಮನೆಗೆ ಬೇಕಾದ ಸಾಮಾನುಗಳನ್ನು ಅಲ್ಲಿಂದ ತರುತ್ತಾನೆ. ಬೆಂಗಳೂರಂಥ ಊರಲ್ಲಿ, ʻಅವನಿಗೇನೂ ಗೊತ್ತಾಗಲ್ಲʼ, ʻಅವನಿಗೆ ತಿಳಿಯಲ್ಲʼ, ʻಮೂಷಂಡಿ, ಒಬ್ಬರ ಜೊತೆ ಹೇಗೆ ಮಾತಾಡ್ಬೇಕೂಂತ ಗೊತ್ತಿಲ್ಲʼ, ʻಮ್ಯಾನರ್ಸ್‌ ಗೊತ್ತಿಲ್ಲʼ, ʻಬಿಹೇವಿಯರ್‌ ಗೊತ್ತಿಲ್ಲʼ ʻದಂಡಪಿಂಡಕ್ಕೆ ಬಿದ್ದಿದಾನೆ, ಮೂರ‍್ಕಾಸಿಗೆ ಪ್ರಯೋಜನಿಲ್ದೋನುʼ ಅನ್ನಿಸಿಕೊಳ್ಳುತ್ತಿದ್ದವನು ಒಂದು ದಿನ ಇಷ್ಟರಮಟ್ಟಿಗೆ ಬದಲಾಯಿಸಬಹುದೆಂಬ ಕಲ್ಪನೆ ಸ್ವತಃ ಅವನಿಗೇ ಇರಲಿಲ್ಲ. ಸದಾ ಇನ್ನೊಬ್ಬರಿಂದ ಅನ್ನಿಸಿಕೊಂಡು ಜಡ್ಡುಗಟ್ಟಿ ಹೋಗಿದ್ದವನು, ಇಲ್ಲಿ ತನಗೆ ಸಿಕ್ಕ ಸ್ವತಂತ್ರದಿಂದಲೋ ಏನೋ ಬದಲಾವಣೆಯ ಗಾಳಿಯಲ್ಲಿ ಉಸಿರಾಡುತ್ತಿದ್ದ. ಒಂದು ಆತ್ಮವಿಶ್ವಾಸ ತಾನೇತಾನಾಗಿ ಅವನಲ್ಲಿ ಮೂಡಿತ್ತು. ಅವನ ಪ್ರಪಂಚದಲ್ಲಿ ಅವನೊಬ್ಬನೇ ಈಗ ಸುಖವಾಗಿದ್ದ. ಆಗೀಗ ಅಪ್ಪ, ಅಮ್ಮನ ನೆನಪಾದರೂ, ಈಗಲಾದರೂ ಅವರಿಗೆ ಮನೆಯಲ್ಲಿ ನೆಮ್ಮದಿಯಿದೆಯಲ್ಲಾ ಎನ್ನುವ ಸಮಾಧಾನವೇ ಆಗುತ್ತಿತ್ತು.

ವಾರಕ್ಕೊಮ್ಮೆಯಾದರೂ ಬರುತ್ತಿದ್ದ ಅಪ್ಪ ಅಮ್ಮನ ಫೋನ್‌ ಕರೆ ತಿಂಗಳು, ಎರಡು ತಿಂಗಳಾದರೂ ಬರದಿದ್ದಾಗ ಪ್ರಸಾದಿಗೆ ಅಚ್ಚರಿಯಾಯಿತು. ಕಡೆಯ ಬಾರಿ ಕರೆ ಮಾಡಿದ್ದಾಗ ಅವರು ರಾಜೀವನ ಬಳಿಗೆ, ಅಮೇರಿಕಾಗೆ ಹೋಗಬೇಕಾಗಿದೆಯೆಂದು ಹೇಳಿದ್ದರು. ಏನೋ ಅಲ್ಲಿಂದ ಕರೆ ಮಾಡಲು ಆಗುತ್ತಿಲ್ಲವೇನೋ ಎಂದು ಅವನೂ ಅದರ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ.

*

ಅಮೇರಿಕೆಯಿಂದ ಬಂದ ಮೇಲೆ ವನಜಾಕ್ಷಿ ಕೃಷ್ಣಮೂರ್ತಿಗಳು ಪ್ರಸಾದಿಯನ್ನು ನೋಡಲೇಬೇಕೆಂದು ಹಟಹಿಡಿದರು. “ಅವನಿಗೆ ಅಲ್ಲಿ ಹೊಂದುತ್ತಿಲ್ಲ ಅಂತ ಕರ‍್ಕೊಂಡು ಬರೋ ಯೋಚ್ನೆ ಮಾತ್ರ ಮಾಡ್ಬೇಡಿ. ನಿಮ್ಮನ್ನ ಕಳ್ಸಕ್ಕೆ ನಂಗೆ ಅದೇ ಹಿಂದೇಟು” ಎಂಬ ಎಚ್ಚರಿಕೆಯನ್ನು ನೀಡಿಯೇ ರಾಘವ ಅವರ ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಟ್ಟ. ಅವರು ಬರುವ ದಿನ ಪ್ರಸಾದಿ ಶಿವಮೊಗ್ಗದ ಬಸ್ಟಾಪಿಗೆ ಹೋಗಿ ಎದುರುಗೊಂಡ. ಬಸ್ಸಿಂದಿಳಿದ ತಕ್ಷಣ ವನಜಾಕ್ಷಿ ಮಗನನ್ನಪ್ಪಿಕೊಂಡು ಅತ್ತಳು. ಪ್ರಸಾದಿಯ ಕಣ್ಣೂ ತೇವವಾಯಿತು. ಇಷ್ಟರಮಟ್ಟಿಗೆ ತಮ್ಮನ್ನು ಕರೆದೊಯ್ಯಲು ಶಿವಮೊಗ್ಗದ ತನಕ ಬರುವ ಹಾಗಾದ ಮಗನನ್ನು ಕಂಡು ಇಬ್ಬರಿಗೂ ನೆಮ್ಮದಿಯೆನಿಸಿತು. ಕರೆದೊಯ್ಯಲು ಕಾರು ತಂದ ಗೆಳೆಯನಿಗೆ ಅವರನ್ನು ಪರಿಚಯಿಸಿದ. ಇವರಿಬ್ಬರಿಗೂ ಅವನನ್ನು ನೋಡಿ ಸಂಭ್ರಮ.

ಘನಪಾಠಿಗಳ ಮನೆಯನ್ನು ತನ್ನ ಮನೆಯಂತೆಯೇ ಭಾವಿಸಿಕೊಂಡಿರುವುದನ್ನು ನೋಡಿ ಖುಷಿಯಾಯಿತು. ಅವನ ಸಂಧ್ಯಾವಂದನೆ, ನಿತ್ಯಪೂಜೆ, ಮಂತ್ರ ಪಠಣ ಪ್ರತಿಯೊಂದೂ ಅಚ್ಚರಿಯೋ ಅಚ್ಚರಿ. ಎಲ್ಲಕ್ಕಿಂತ ಹೆಚ್ಚಾಗಿ ಅವನ ಆರೋಗ್ಯ ಸುಧಾರಿಸಿದ್ದು, ಉಗ್ಗು ಕಡಿಮೆಯಾಗಿದ್ದು ಅವರಿಗೆ ಒಂದು ಪವಾಡವೆಂದೇ ಅನಿಸಿಬಿಟ್ಟಿತು. ಎರಡು ದಿನ ಮಗನೊಂದಿಗೆ ಸಂತೋಷವಾಗಿ ಕಾಲ ಕಳೆದರು. ಘನಪಾಠಿ ದಂಪತಿಗಳಿಗೆ ಎಷ್ಟೆಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು ಅನ್ನಿಸಿಬಿಟ್ಟಿತು. ನಮ್ಮ ಮಗನನ್ನ ಒಬ್ಬ ಮನುಷ್ಯನ್ನ ಮಾಡಿ ಜೀವನಕ್ಕೊಂದು ದಾರಿ ತೋರಿಸಿಕೊಟ್ಟಿರಿ ಎಂದು ನಮಸ್ಕರಿಸಿ ಅತ್ತೇಬಿಟ್ಟರು. “ನಾವ್ಯಾರಯ್ಯ ದಾರಿ ತೋರಿಸಕ್ಕೆ, ಯಾರ‍್ಯಾರ ಜೀವನ ಎಲ್ಲೆಲ್ಲಿರತ್ತೋ ಆ ಭಗವಂತನಿಗೇ ಗೊತ್ತು. ಆಯಾ ಕಾಲ ಬಂದಾಗ ಅವನೇ ತೋರಿಸ್ತಾನೆ. ನಾವೆಲ್ಲಾ ಒಂದು ನೆಪ ಮಾತ್ರಾ. ಈಗ ಅವ್ನಿಗೆ ಯಾರ ಜೊತೆಯೂ ಬೇಕಿಲ್ಲ. ಒಬ್ನೇ ಬೇಕಾದ್ರೂ ಜೀವ್ನ ಮಾಡ್ತಾನೆ. ಮಗನ ಬಗ್ಗೆ ನಿಶ್ಚಿಂತೆಯಾಯಿತಲ್ಲ. ನೆಮ್ಮದಿಯಾಗಿರಿ. ಸಾಧ್ಯವಾದಾಗ ಬಂದು ನೋಡ್ಕೊಂಡು ಹೋಗ್ತಿರಿ” ಎಂದು ಹಾರೈಸಿ ಕಳಿಸಿಕೊಟ್ಟರು.

ಹೊರಡುವಾಗ ಪ್ರಸಾದಿ ಅಮ್ಮನಿಗೆ ಐನೂರು ರೂಪಾಯಿ ಕೊಟ್ಟು “ಅಮ್ಮ, ನಂಗೆ ದಕ್ಷಿಣೆ ಅಂತ ಸಿಗೋ ದುಡ್ಡನ್ನೆಲ್ಲಾ ಪೋಸ್ಟ್‌ ಆಫೀಸಲ್ಲಿ ಕೂಡಿಡ್ತಿದೀನಿ. ಇದು ಮೊನ್ನೆ ನಡೆದ ಹೋಮದಲ್ಲಿ ಕೊಟ್ಟಿರೋ ದಕ್ಷಿಣೆ. ನನ್ನ ದುಡಿಮೆಯ ಹಣಾನಮ್ಮ. ಜಾಸ್ತಿಯಿಲ್ಲ, ಇದ್ರಲ್ಲಿ ನೀನೊಂದು ಮನೆಯಲ್ಲಿ ಉಡೋಂತ ಸೀರೆ ತೊಗೊಳಮ್ಮ” ಎಂದು ಕೊಟ್ಟಾಗ ಅವನನ್ನು ತಬ್ಬಿ “ಪ್ರಸಾದಿ, ಇದು ನನಗೆ ಪಟ್ಟೆ ಸೀರೆಗಿಂತ ಹೆಚ್ಚಿನದು ಕಣೋ” ಎಂದು ಅತ್ತುಬಿಟ್ಟಳು. ಶಿವಮೊಗ್ಗೆಯ ತನಕ ಜೊತೆಗೆ ಹೋಗಿ ಬಸ್ಸನ್ನು ಹತ್ತಿಸಿದ. ಕಣ್ಣಿಗೆ ಕಾಣಿಸುತ್ತಿರುವವರೆಗೂ ಮೂವರೂ ಕೈ ಬೀಸುತ್ತಿದ್ದರು… ನೆಮ್ಮದಿಯಿಂದ… ಸಾರ್ಥಕ ಭಾವದಿಂದ…

*******************

One thought on “ಯಾರ ಜೀವನವೆಲ್ಲೋ…

  1. ಯಾವುದೋ ಒಂದು ಚಲನಚಿತ್ರವನ್ನು ನೋಡುತ್ತಿದ್ದೇವೇನೋ ಎಂಬಂತೆ ಕಥೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಶ್ರವಣಕುಮಾರಿಯವರು ಇನ್ನೂ ಹೆಚ್ಚು ಇಂತಹ ಹಥೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಲಿ ಎಂದು ಆಶಿಸುತ್ತೇನೆ.

Leave a Reply

Back To Top