ಅಂಕಣ ಬರಹ

.

ರಾಮಕೃಷ್ಣ ಗುಂದಿ ಅವರ ಆತ್ಮಕಥೆ19

ಆತ್ಮಾನುಸಂಧಾನ

ಜೈಹಿಂದ್ ಹೈಸ್ಕೂಲು ಸೇರಿದೆ

Maithili to be optional language in Delhi govt schools | Delhi News - Times  of India

ಮಾಧ್ಯಮಿಕ ಶಿಕ್ಷಣಕ್ಕಾಗಿ ಜೈಹಿಂದ್ ಹೈಸ್ಕೂಲು ಸೇರಿದೆ. ಅಂಕೋಲೆಯ ವಿದ್ಯಾರ್ಥಿ ನಿಲಯ ಸೇರಿದ ಬಳಿಕ ನಮ್ಮ ನಮ್ಮ ಅಗತ್ಯಕ್ಕೆ ತಕ್ಕಂತೆ ಶಾಲೆಗಳನ್ನು ಆಯ್ದುಕೊಂಡೆವು. ನನ್ನ ತಮ್ಮ ಮತ್ತಿತರರು ಅಂಕೋಲೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆದರೆ, ನಾನು ಎಂಟನೆಯ ತರಗತಿಗಾಗಿ ‘ಜೈಹಿಂದ್’ ಹೈಸ್ಕೂಲು ಸೇರಿದೆ.

ಸ್ವಾತಂತ್ರ್ಯದ ಪೂರ್ವಕಾಲದಲ್ಲಿಯೇ ಆರಂಭಗೊಂಡ ‘ಜೈಹಿಂದ್ ಎಜ್ಯುಕೇಶನ್ ಸೊಸೈಟಿ’ ಎಂಬ ಶಿಕ್ಷಣ ಸಂಸ್ಥೆಯು ೧೮೯೬ ರಲ್ಲಿ ಸ್ಥಾಪಿಸಿದ ‘ಎಡ್ವರ್ಡ್ ಹೈಸ್ಕೂಲು’ ಗುಣಮಟ್ಟದ ಶಿಕ್ಷಣಕ್ಕೆ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿತ್ತು.

೧೯೫೬ ರಲ್ಲಿ ಅದು ‘ಜೈಹಿಂದ್ ಹೈಸ್ಕೂಲ್’ ಎಂದು ಮರು ನಾಮಕರಣಗೊಂಡು ಅಗತ್ಯವಾದ ಎಲ್ಲ ಮೂಲಭೂತ ಸೌಕರ್ಯದೊಂದಿಗೆ ತನ್ನ ಶೈಕ್ಷಣಿಕ ಸೇವೆಯನ್ನು ಮುಂದುವರಿಸಿತ್ತು. ನಾನು ೧೯೬೫-೬೬ ನೇ ಸಾಲಿನಲ್ಲಿ ಎಂಟನೆಯ ತರಗತಿಗೆ ಸೇರಿಕೊಂಡಿದ್ದೆ. ಆಗ ಶಂಕರ ಎಸ್.ಪಿಕಳೆ ಎಂಬುವವರು ಶಾಲೆಯ ಮುಖ್ಯಾಧ್ಯಾಪಕರಾಗಿದ್ದರು.

ತುಂಬ ಕಟ್ಟುನಿಟ್ಟಿನ ಶಿಸ್ತಿನ ಸಿಪಾಯಿಯಂತಿದ್ದ ಪಿಕಳೆ ಮಾಸ್ತರರ ಆಡಳಿತ ವೈಖರಿಯಲ್ಲಿ ಶಾಲೆಗೆ ಇನ್ನಷ್ಟು ಹೆಚ್ಚಿನ ವಿಶಿಷ್ಟ ಘನವಂತಿಕೆ ಪ್ರಾಪ್ತವಾಗಿತ್ತು. ತುಂಬಾ ಪ್ರಬುದ್ಧರೆನ್ನಿಸಿಕೊಂಡ ಅಧ್ಯಾಪಕರ ದಂಡು ಪಿಕಳೆಯವರ ನಾಯಕತ್ವದಲ್ಲಿ ಉತ್ತಮ ಪಾಠ ಪ್ರವಚನ ಕ್ರೀಡಾ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿತ್ತು.

ತುಂಬ ಹಿರಿಯರಾದ ಶೇಟಿಯಾ ಮಾಸ್ತರರು, ವೈ.ಎಂ. ಕಾಮತರು, ಎಂ.ಎನ್. ಭಟ್ ಮಾಸ್ತರರು ಮುಂತಾದ ಗುರುಗಳ ಪಾಠ ಕ್ರಮಗಳು ಕಿರಿಯ ಅಧ್ಯಾಪಕರಿಗೆ ಮಾದರಿಯಾಗಿದ್ದವು. ವಿಜ್ಞಾನ, ಗಣಿತ ಇತ್ಯಾದಿ ವಿಷಯಗಳನ್ನು ಕಲಿಸುವ ಆರ್.ಕೆ.ನಾಯಕ, ಬಿ.ಎಂ. ನಾಯಕ, ರಾಯ್ಕರ ಮಾಸ್ತರ, ಭಟ್ಕಳ ಮಾಸ್ತರ, ಇತಿಹಾಸ, ಸಮಾಜಶಾಸ್ತ್ರ,  ಕನ್ನಡ ಇತ್ಯಾದಿ ವಿಷಯಗಳನ್ನು ಕಲಿಸುವ ಜಿ.ಜೇ. ನಾಯಕ, ಎಲ್.ಎಚ್. ನಾಯಕ ಮೊದಲಾದ ಎಲ್ಲ ಶಿಕ್ಷಕರೂ ತಮ್ಮ ವ್ಯಕ್ತಿ ವಿಶೇಷತೆಯಿಂದ ವಿದ್ಯಾರ್ಥಿಗಳನ್ನು ಪ್ರಭಾವಿಸಬಲ್ಲ ಸಾಮರ್ಥ್ಯ ಹೊಂದಿದ್ದರು. ಎನ್.ಎಂ.ನಾಯಕರಂಥ ತರುಣ ದೈಹಿಕ ಶಿಕ್ಷಕರು ನಿತ್ಯವೂ ನಮ್ಮನ್ನು ಜೈಹಿಂದ್ ಮೈದಾನದಲ್ಲಿ ಆಟ ಆಡಿಸುತ್ತ ಅಕ್ಕರೆ ತೋರುತ್ತಿದ್ದರು.

ಅಂದಿನ ದಿನಗಳಲ್ಲಿ ಜೈಹಿಂದ್ ಹೈಸ್ಕೂಲಿನಲ್ಲಿ ಮಾತ್ರ ಆಚರಿಸ್ಟಲ್ಪಡುತ್ತಿದ್ದ ‘ಸ್ಟುಡೆಂಟ್ಸ್ ಡೇ’ ಎಂಬ ವಿದ್ಯಾರ್ಥಿಗಳಿಗಾಗಿಯೇ ಮೀಸಲಾದ ದಿನಾಚರಣೆಯೊಂದು ಎಲ್ಲ ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವ ಮಹತ್ವದ ಕಾರ್ಯಕ್ರಮವೆನಿಸಿತ್ತು.

ಅಂದು ಅಧ್ಯಾಪಕರು ಆಯ್ಕೆ ಮಾಡಿದ ಕೆಲವು ಜಾಣ ವಿದ್ಯಾರ್ಥಿಗಳು ಅಧ್ಯಾಪಕರಂತೆ ವೇಷ ತೊಟ್ಟು ಎಲ್ಲ ತರಗತಿಗಳನ್ನು ತಾವೇ ನಡೆಸುತ್ತಿದ್ದರು. ಅಧ್ಯಾಪಕರಂತೆ ಶರ್ಟ್, ಪ್ಯಾಂಟ್, ಶೂ ಇತ್ಯಾದಿಗಳನ್ನು ಧರಿಸಿದ ವಿದ್ಯಾರ್ಥಿಗಳು, ಸೀರೆಯುಟ್ಟು ಬಂದ ವಿದ್ಯಾರ್ಥಿನಿಯರು ಶಿಕ್ಷಕರಂತೆ ತಮಗೆ ಮೀಸಲಾದ ತರಗತಿಗಳಿಗೆ ಹೋಗಿ ಪಾಠ ಮಡುವ ವಿಶೇಷ ಕಾರ್ಯಕ್ರಮ ಅದು. ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕರ್ತðವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಬಹುಮಾನ ಪಡೆಯುತ್ತಿದ್ದರು.

ಶ್ರೇಷ್ಠ ರಂಗ ನಟರಾಗಿ ಮಿಂಚುತ್ತಿದ್ದ ಎಂ.ಎನ್. ಭಟ್ ಮಾಸ್ತರರು ತಮ್ಮ ದಿಗ್ದರ್ಶನದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳಿಂದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ನಾಟಕ ಆಡಿಸುವ ಮೂಲಕ ಅನನ್ಯವೆನಿಸುವ ಸಾಂಸ್ಕೃತಿಕ ವಾತಾವರಣವನ್ನು ಶಾಲೆಯಲ್ಲಿ ನಿರ್ಮಿಸಿದ್ದರು. ಆಕರ್ಷಕ ವ್ಯಕ್ತಿತ್ವದ ಅಧ್ಯಾಪಕ ಬಿ.ಎಂ. ನಾಯಕ ಮಾಸ್ತರರು ಬಹುತೇಕ ನಾಟಕಗಳಲ್ಲಿ ಮುಖ್ಯ ಪಾತ್ರ ವಹಿಸಿ ವಿದ್ಯಾರ್ಥಿಗಳ ಮನಸ್ಸನ್ನು ಪ್ರಭಾವಿಸುತ್ತಿದ್ದರು. ಇನ್ನೋರ್ವ ತರುಣ ಶಿಕ್ಷಕರಾದ ಜಿ.ಜೇ. ನಾಯಕ ಅವರು ತುಂಬ ಸೊಗಸಾಗಿ ಹಳಗನ್ನಡ ಕಾವ್ಯ ಬೋಧನೆ ಮಾಡುತ್ತಿದ್ದರಲ್ಲದೇ ಉತ್ತಮ ಯಕ್ಷಕಲಾವಿದರಾಗಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದರು. ಅವರ ಗದಾಯುದ್ಧ ಪ್ರಸಂಗದ ದುರ್ಯೋಧನ ಪಾತ್ರದ ಚಿತ್ರಣ ಅಪಾರ ಜನಮೆಚ್ಚುಗೆ ಗಳಿಸಿತ್ತು. ಸ್ವತಃ ಕವಿ ಹೃದಯದ ಜಿ.ಜೇ.ನಾಯಕರು ಉತ್ತಮ ಕವಿತೆಗಳನ್ನು ಬರೆಯುತ್ತಿದ್ದರು. ಅದೇ ಸಂದರ್ಭದಲ್ಲಿ ಶಾಲೆಗೆ ಹೊಸದಾಗಿ ಶಿಕ್ಷಕಿಯಾಗಿ ಸೇರಿದ ಅರುಂಧತಿ ಮೇಡಂ ಅವರನ್ನು ಮೆಚ್ಚಿಕೊಂಡ ಜಿ.ಜೇ ನಾಯಕರು ಮೇಡಂ ಕುರಿತು

“ಜೋಡು ಜಡೆಯನು ಹಾಕಿ ಬಿಳಿಸೀರೆಯುಟ್ಟಿರುವ

ನನ್ನರಸಿ ನನ್ನ ಬೆಡಗಿ

ಇನ್ನೆರಡೆ ತಿಂಗಳಲ್ಲಿ ಹಸೆಮಣೆಯ ಮೇಲ್ನಿಂತು ನನ್ನ ಕೈ ಹಿಡಿವ ಹುಡುಗಿ…”

ಇತ್ಯಾದಿ ರಮಣೀಯ ಸಾಲುಗಳ ಕವಿತೆಯೊಂದನ್ನು ಶಾಲೆಯ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಿಸಿದ್ದರಲ್ಲದೇ ಮೇಡಂ ಅವರನ್ನು ಕೈಹಿಡಿದು ಸುಂದರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿದ್ದರು.

ಇಂಥ ಬಹುತೇಕ ಘಟನೆಗಳು ವಿದ್ಯಾರ್ಥಿ ಸಮುದಾಯಕ್ಕೆ ಚೇತೋಹಾರಿಯೆನಿಸುವ ಸಂಗತಿಗಳೇ ಆಗಿರುತ್ತಿದ್ದವು. ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಫುಲ ಮಾರ್ಗದರ್ಶನ ಮತ್ತು ಅವಕಾಶಗಳು ತೆರೆದುಕೊಂಡಿದ್ದರೂ ನನ್ನ ಸಭಾಕಂಪ ಮತ್ತು ಕೀಳರಿಮೆಯ ವ್ಯಾಧಿಯಿಂದಾಗಿ ನಾನು ಹೈಸ್ಕೂಲು ಜೀವನದ ಮೂರು ವರ್ಷಗಳಲ್ಲಿಯೂ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದೇ ನಿಷ್ಕ್ರಿಯನಾಗಿದ್ದೆನೆಂಬುದಕ್ಕೆ ಈಗಲೂ ವಿಷಾಧವಿದೆ.

ಕಲಿಕೆಯ ಕಾಲಾವಧಿಯೆಂದರೆ ವಿದ್ಯಾರ್ಥಿಗಳ ಬದುಕಿನ ಸುವರ್ಣ ಕಾಲವೇ! ಗುರುಗಳಲ್ಲಿನ ಬಹುಮುಖಿ ವ್ಯಕ್ತಿತ್ವ ಸಾಮರ್ಥ್ಯಗಳನ್ನು ಗುರುತಿಸಿ ಅದನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ಸಫಲನಾಗಬಲ್ಲ ವಿದ್ಯಾರ್ಥಿ ಮಾತ್ರ ತನ್ನ ವ್ಯಕ್ತಿತ್ವವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳುವುದು ಸಾಧ್ಯ. ಕಣ್ಣೆದುರೇ ಇರುವ ಹೊನ್ನ ರಾಶಿಯನ್ನು ಹೊನ್ನೆಂದು ಅರ್ಥವಿಸಿಕೊಳ್ಳದವನ ಹೆಡ್ಡತನಕ್ಕೆ ಔಷಧಿಯೆಂಬುದೇ ಇಲ್ಲ. ನನ್ನ ಹೈಸ್ಕೂಲು ಶಿಕ್ಷಣದ ಬಹು ಅಮೂಲ್ಯವೆನ್ನಿಸುವ ಕಾಲಾವಧಿಯಲ್ಲಿ ನನಗೆ ದೊರೆತ ಸಂಸ್ಕೃತಿ ಸಂಪನ್ನರಾದ ಇಂಥ ಬಹಳಷ್ಟು ಗುರುಗಳಿಂದ ಸಕಾಲಿಕ ಮಾರ್ಗದರ್ಶನ ಪಡೆಯುವ ಅವಾಶ ವಂಚಿತನಾದುದಕ್ಕೆ ಈಗ ಇರುವುದು ಪಶ್ಚಾತ್ತಾಪವೊಂದೇ.

‘ಜೈಹಿಂದ್ ಹೈಸ್ಕೂಲ್’ನ ಮಾಧ್ಯಮಿಕ ಶಿಕ್ಷಣದ ಕಾಲಾವಧಿ ಕಲಿಸಿದ ಪಾಠ, ಕಟ್ಟಿಕೊಟ್ಟ ಜೀವನಾನುಭವ ಅತ್ಯಂತ ಅಮೂಲ್ಯವಾದುದು ಎಂಬುದರಲ್ಲಿ ಸಂದೇಹವಿಲ್ಲ. ಈಗಲೂ ಈ ಸಂಸ್ಥೆಯ ಕುರಿತು, ಅಲ್ಲಿನ ಪಾಠ ಪ್ರವಚನಗಳ ಕುರಿತು ಹೃದಯಪೂರ್ವಕ ಅಭಿಮಾನ ಉಕ್ಕುತ್ತದೆ. ಆದರೂ ಇದೇ ಶಾಲೆಯಲ್ಲಿ ಅನುಭವಿಸಿದ ಒಂದು ಮಾನಸಿಕ ಹಿಂಸೆ ಉಳಿದೆಲ್ಲ ಆನಂದ ಅಭಿಮಾನಗಳ ನಡುವೆಯೂ ಒಂದು ಕಪ್ಪುಚುಕ್ಕೆಯಾಗಿ ನನ್ನನ್ನು ಕಾಡಿದೆ. ಅದರ ಕುರಿತು ಮುಂದೆ ಪ್ರಸ್ತಾಪಿಸುವೆ…

***************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

4 thoughts on “

  1. ಕಪ್ಪು ಚುಕ್ಕೆಯಾದ ಮಾನಸಿಕ ಹಿಂಸೆ? ಕುತೂಹಲ ಕೆರಳಿಸುವ ಬಿಂದುವಾಗಿದೆ…..

  2. ಮಾನಸಿಕ ಹಿಂಸೆಯ ಕುರಿತು ಕುತೂಹಲ ಮೂಡಿಸಿದೆ ಸರ

Leave a Reply

Back To Top