ದೇಹದ ಹಂಗು ತೊರೆದು;

ಹೊಸದನ್ನು ಹುಡುಕಿ



        ಯಾರಾದರೂ ವ್ಯಾಟ್ಸ್‌ಆಪ್ ಅಥವಾ ಫೇಸ್‌ಬುಕ್‌ನ ಇನ್ ಬಾಕ್ಸ್‌ಗೆ ಬಂದು ಅಡ್ರೆಸ್ ಕೊಡಲು ಕೇಳಿದರೆ ನಾನು ಮಾತನಾಡದೇ ಕೊಟ್ಟುಬಿಡುವುದು ನನಗೆ ರೂಢಿಯಾಗಿಬಿಟ್ಟಿದೆ. ಯಾಕೆಂದರೆ ಬಹುತೇಕ ಹಾಗೆ ಕೇಳುವವರು ಸಾಹಿತಿ ಮಿತ್ರರೇ. ಅದೂ ಆಗಷ್ಟೇ ಅವರ ಪುಸ್ತಕ ಪ್ರಕಟವಾದವರು. ಹೀಗಾಗಿ ಪ್ರಕಾಶ ನಾಯಕರು ವಿಳಾಸ ತಿಳಿಸು ಎಂದು ವ್ಯಾಟ್ಸ್ ಆಪ್‌ನಲ್ಲಿ ಕೇಳಿದಾಗ ಅವರ ಅಂತೂ ಫೇಸ್‌ಬುಕ್‌ನಲ್ಲಿ ಸದ್ದು ಮಾಡ್ತಿರೋದನ್ನು ಗಮನಿಸಿದ್ದರಿಂದ ಅಷ್ಟೇನು ಗಮನವಹಿಸದೇ ಕೊಟ್ಟುಬಿಟ್ಟೆ. ಅದಾದ ನಂತರ ನನಗೆ ಒಂದೇ ಸಮನೆ ಯೋಚನೆ ಪ್ರಾರಂಭವಾಯಿತು. ಈ ಪ್ರಕಾಶಣ್ಣ ಎಲ್ಲಿಂದ ಪುಸ್ತಕ ಕಳಿಸ್ತಾರೆ? ಕ್ಯಾಲಿಪೋರ್ನಿಯಾದಿಂದ ಕಳಿಸಿದರೆ ನನಗೆ ಎಷ್ಟು ದಿನಕ್ಕೆ ಬಂದು ತಲುಪಬಹುದು? ಒಂದು ಕ್ಷಣ ಯೋಚನೆಯಾಯಿತಾದರೂ ನಂತರ ನಾನು ಯಾವಾಗಲೂ ಹೇಳಿಕೊಳ್ಳುವಂತೆ ‘ಮುಂದಿನ ಜನ್ಮದಲ್ಲಿ ಸಿಗಬಹುದು ಬಿಡು,’ ನನಗೆ ನಾನೇ ಹೇಳಿಕೊಂಡು ಸಮಾಧಾನ ಮಾಡಿಕೊಂಡೆ. ಆದರೆ ಈ ಮಾತುಕತೆ ನಡೆದು ನಾಲ್ಕನೇ ದಿನಕ್ಕೆ ನಾನು ಮನೆ ತಲುಪುವ ಹೊತ್ತಿಗೆ ಮನೆಯ ಮುಂದಿನ ಟಿಪಾಯಿಯ ಮೇಲೆ  ನನ್ನ ಖುಷಿ ಹೆಚ್ಚಿಸುವಂತೆ ಈ ಪುಸ್ತಕ ಕುಳಿತಿತ್ತು. ನನಗೆ ಅಚ್ಚಿರಿಯಾಗುವಂತೆ ನಾನು ಹೇಳಿದಂತೆ ಮುಂದಿನ ಜನ್ಮಕ್ಕೂ ಈ ಕಥೆಗೂ ತೀರಾ ಸಾಮ್ಯವಿದೆ.


    ಇಡೀ ಕಥೆಯು ಅನಿವಾಸಿ ಭಾರತೀಯರ ಸುತ್ತ ಸುತ್ತುತ್ತ ಹೋಗುತ್ತದೆ. ಇಲ್ಲಿ ಕಥೆ ಹೇಳುವ ಪ್ರಥಮ ಪುರುಷ ಕಥೆಯನ್ನು ಕಥೆಯಾಗಿಸಲು ಒಂದು ವೇದಿಕೆ ಅಷ್ಟೆ. ಆದರೆ ಇಡೀ ಕಥೆ ನಮ್ಮನ್ನು ನಮ್ಮದೇ ಕಾಲಚಕ್ರದ ನಡುವಲ್ಲಿ ಕುಳ್ಳಿರಿಸಿ ಸುತ್ತುವಂತೆ ಮಾಡುತ್ತದೆ. ಯಾಕೆಂದರೆ ಘಟನೆ ನಡೆಯುವುದು ಅಮೇರಿಕಾದಲ್ಲೇ ಆದರೂ  ಕಾದಂಬರಿಕಾರರೇ ಒಂದು ಕಡೆ ಬಳಸಿರುವಂತೆ  ನಮ್ಮನ್ನು ಅರ್ಧ ಭೂಗೋಳ ಸುತ್ತಿಸಿ ಅಮೇರಿಕಾಕ್ಕೆ ಕರೆದೊಯ್ಯುವುದು ನಮ್ಮದೇ ಸುತ್ತಮುತ್ತಲಿನ ಪಾತ್ರಗಳು. ಕೇವಲ ಏಳೆಂಟು ಕಿ.ಮಿ ದೂರವಿರುವ ನಮ್ಮ ಪಾಲಿಗೆ ಪರಿಚಿತವೆಂದರೆ ಪರಿಚಿತವಲ್ಲದ, ಏನೂ ತಿಳಿಯದು ಎಂದು ಕೈ ಚೆಲ್ಲಿದರೂ ಯಾರೂ ನಂಬದ ಗೋಕರ್ಣದ ಪಿರ್ಕಿಬಾಬಾ ಎನ್ನುವವ ಹೇಳಿದ್ದ ಎನ್ನುವ ವಾಕ್ಯದಿಂದಲೇ ಪ್ರಾರಂಭವಾಗುತ್ತದೆ. ‘ಬದುಕಿದವರು ಸಾಯಲಾರರು, ಸಾಯುವವರು ಬದುಕಲಾರರು.’ ಎನ್ನುವ ಕಾದಂಬರಿಯ ಮೊದಲ ವಾಕ್ಯವೇ ಇಡೀ ಕಾದಂಬರಿಯನ್ನು ತನ್ನೊಳಗೆ ನಿಗೂಢವಾಗಿ ಬಚ್ಚಿಟ್ಟುಕೊಂಡಿದೆಯೇನೋ ಎಂಬಂತೆ ತೋರುತ್ತದೆ. ಅಂಕೋಲಾದ ಬಸ್ ಸ್ಟಾಂಡಿನಲ್ಲಿ ಯಾವಾಗಲೂ ಒಬ್ಬ ಹುಚ್ಚ ಇರುತ್ತಿದ್ದ. ನಾಕಾಣಿ ಕೊಡಾ… ಎನ್ನುತ್ತ ಬೇಡಲು ಬರುವ ಅವನಿಗೆ ನೀವು ನೂರು ರೂಪಾಯಿ ನೀಡಿದರೂ ತಿರಸ್ಕರಿಸಿ ಬಿಡುತ್ತಿದ್ದ. ಆತ ಕೇಳುವುದು ಕೇವಲ ನಾಲ್ಕಾಣೆ. ಅದಕ್ಕಿಂತ ಹೆಚ್ಚಿಗೆ ಕೊಟ್ಟರೆ ಅದು ಅವನಿಗೆ ಅಪಥ್ಯ. ಅದನ್ನು ನೋಡಿದಾಗಲೆಲ್ಲ ನಮಗೆ ತಮಾಷೆ. ನಾನು ಮತ್ತು ಗೆಳತಿ ರಾಜಶ್ರೀ ಹತ್ತು ರೂಪಾಯಿಯ ನೋಟು ಹಿಡಿದು, ‘ಹಿಡಿ ತಕ್ಕಾ. ಮಜಾ ಮಾಡ್…’ ಎನ್ನುತ್ತಿದ್ದರೆ ಆತ ಅದೇನೋ ವಿಷಸರ್ಪ ಎಂಬಂತೆ ಹತ್ತು ರೂಪಾಯಿಯ ನೋಟನ್ನು ಕಂಡು ಬೆಚ್ಚಿ ಬೀಳುತ್ತಿದ್ದ. ನಮಗೋ ಹತ್ತು ರೂಪಾಯಿಯನ್ನು ತಿರಸ್ಕರಿಸಿ ‘ನಾಕಾಣಿ ಕುಡಾ..’ ಎನ್ನುವ ಅವನು ಕೇವಲ ಹುಚ್ಚನಾಗಿ ಅಲ್ಲ, ಮಹಾ ಪಿರ್ಕಿಯಾಗಿ ಕಾಣುತ್ತಿದ್ದ. ನಂತರದ ದಿನಗಳಲ್ಲಿ ಅದೆಷ್ಟೋ ಸಲ ಯೋಚಿಸಿದ್ದೇನೆ. ಬದುಕಿಗೆ ಸಾಕಾಗುವ ನಾಲ್ಕಾಣೆಯನ್ನು ಬಿಟ್ಟು ನಾವು ನಮಗೆ ಬೇಕಿಲ್ಲದ ಹತ್ತು ರೂಪಾಯಿಯ ಹಿಂದೆ ಓಡುತ್ತಿದ್ದೇವೇನೋ ಎಂದು. ಇಲ್ಲಿನ ಕಥೆಯೂ ಇದಕ್ಕೆ ಅನುಗುಣವಾಗಿಯೇ ಇದೆ.


    ಬದುಕಿನಲ್ಲಿ ಖುಷಿಯಾಗಿರುವುದಕ್ಕೆ ನಮಗೇನು ಬೇಕು? ಎಷ್ಟು ಹಣ ಬೇಕು? ಎಂತಹ ಅಧಿಕಾರ ಬೇಕು?  ಅಥವಾ ಎಂತಹ ಉದ್ಯೋಗ ಬೇಕು? ಇದು ಸಹಜವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. ಕೆಲವು ದಿನಗಳ ಹಿಂದೆ ಈ ವರ್ಷದ ಎಸ್.ಎಸ್.ಎಲ್.ಸಿ ಮುಗಿಸಿ ಮುಂದಿನ ಓದಿಗೆ ಹತ್ತನೇ ತರಗತಿಯ ವರ್ಗಾವಣೆ ಪತ್ರ ಪಡೆಯಲು ಬಂದಿದ್ದ ಹುಡುಗನೊಬ್ಬನನ್ನು ‘ಮುಂದೆ ಏನು ಮಾಡ್ತೀಯಪ್ಪಾ’ ಎಂದು ಸಹಜವಾಗಿ ಎಲ್ಲರನ್ನೂ ಕೇಳುವಂತೆಯೇ ಪ್ರಶ್ನಿಸಿದೆವು. ಆತ ಕೂಡ ಅದೊಂದು ಸಹಜ ವಿಷಯ ಎಂಬಂತೆ ‘ಪಿಯುಸಿ ಮುಗಿದ ಕೂಡಲೇ ಗಲ್ಫ್‌ಗೆ ಹೋಗಿ ಬಿಡ್ತೇನೆ ಟೀಚರ್, ಅಲ್ಲಿ ಹೋದರೆ ಜಾಸ್ತಿ ದುಡಿದು, ಹಣ ಸಂಪಾದನೆ ಮಾಡಬಹುದು.’ ಎಂದ. ಯಾಕೆಂದರೆ ಅವನ ಮನೆಯಲ್ಲಿ ಈಗಾಗಲೆ ಬಹಳಷ್ಟು ಜನ ಉದ್ಯೋಗದ ನಿಮಿತ್ತ ಹೊರದೇಶಗಳಿಗೆ ಹೋಗಿದ್ದಾರೆ. ಪಿಯುಸಿ ಮುಗಿಸಿದ ತಕ್ಷಣವೇ ಒಂದು ಪಾಸ್‌ಪೋರ್ಟ್ ಮಾಡಿಸಿ, ವೀಸಾ ಮಾಡಿಕೊಂಡು ಹೊರಟು ಬಿಡುವ ಅದೆಷ್ಟೋ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಹಾಗಾದರೆ ಭಾರತಕ್ಕಿಂತ ಅಲ್ಲಿ ಅವರ ಜೀವನಮಟ್ಟ ಒಳ್ಳೆಯದಾಗಿರುತ್ತದೆಯೇ? ಅಥವಾ ಭಾರತಕ್ಕಿಂತ ಸುಖೀ ಜೀವನ ನಡೆಸಲು ಸಾಧ್ಯವೇ? ಹಾಗೆಂದು ನಿಖರವಾಗಿ ಹೇಳಲು ಬರುವುದೇ ಇಲ್ಲ. ಇಲ್ಲಿ ಯಾವ್ಯಾವುದೋ ಕನಸನ್ನು ಇಟ್ಟುಕೊಂಡು ಹೋದವರು ಅಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿಯೋ, ಕಸ ಬಳಿಯಲೋ ಅಥವಾ ಅದಕ್ಕಿಂತ ಕನಿಷ್ಟ ಕೆಲಸಗಳಿಗೆ ನೇಮಕವಾದ ವಿಷಯ ಊರಿನ ಬಾಯಿಂದ ನುಣುಚಿಕೊಳ್ಳುವುದಿಲ್ಲ. ಆದರೆ ಮೂರು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿದಾಗ ಮಾತ್ರ ಅವರಿಗೆ ರಾಜ ಮರ್ಯಾದೆ ದೊರಕುತ್ತದೆ. ಅಂತೂ ಓದಿದಾಗ ಈ ಎಲ್ಲಾ ವಿಷಯಗಳೂ ಕಣ್ಣಿಗೆ ಕಟ್ಟುತ್ತವೆ. ಅಮೇರಿಕಾದಂತಹ ದೇಶಗಳಲ್ಲಿ ನಮ್ಮ ವಿದ್ಯೆಯನ್ನು ಅಡವಿಟ್ಟುಕೊಳ್ಳುವ ಪ್ರಕ್ರಿಯೆಯ ಚಂದದ ಚಿತ್ರಣವಿದೆ.


                   ಇಲ್ಲಿ ಪ್ರಥಮ ಪುರುಷದಲ್ಲಿ ಬರುವ ನಿರೂಪಣೆಗಾರ ಕಾದಂಬರಿಗೆ ಒಂದು ಕುತೂಹಲದ ಪ್ರವೇಶಿಕೆಯನ್ನು ಹಾಕಿಕೊಡುತ್ತಾನೆ. ಅಲ್ಲೇ ಸನಿಹದಲ್ಲಿರುವ ಭಾರತೀಯ ಮೂಲದ ಕೌಶಿಕ್ ಕೃಷ್ಣ ಎನ್ನುವ ಜೀವ-ಭೌತ ವಿಜ್ಞಾನಿಯ ಹೆಂಡತಿ ಆಡ್ರಿಯಾನಾಳ ಆತ್ಮಹತ್ಯೆಯ ಕುರಿತಾಗಿ ಪೇಪರ್‌ನಲ್ಲಿ ಬಂದ ವಿಷಯವನ್ನು ಆಧರಿಸಿ ಲೇಖನ ಬರೆದು, ಅದಕ್ಕೆ ಒಬ್ಬ ಭಾರತೀಯ ಮೂಲದವನೇ ಆದ ಇನ್ನೊಬ್ಬನ ತೀಕ್ಷ್ಣ ಪ್ರತಿಕ್ರಿಯೆ ಬಂದಾಗಲೇ ಅರಿವಾಗುವುದು ಇದು ಸುಲಭದಲ್ಲಿ ಅರಿವಾಗದ ಚಕ್ರವ್ಯೂಹ ಎಂಬುದು. ಇಲ್ಲಿ ಪ್ರಕಾಶ ನಾಯಕರು ಬಳಸಿರುವ ಮಾತು ಮತ್ತು ಭಾಷೆಯನ್ನು ಗಮನಿಸಬೇಕು. ಒಬ್ಬ ನುರಿತ ತತ್ವಶಾಸ್ತ್ರ ಪ್ರಾಧ್ಯಾಪಕನು ತರಗತಿ ತೆಗೆದುಕೊಂಡಂತಿದೆ. ತನ್ನ ಸಹೋದ್ಯೋಗಿ ವಿವಿಯನ್‌ನ ಬಾಯಿಂದ ಆಡಿಸುವ ಈ ಮಾತುಗಳನ್ನೇ ಕೇಳಿ. ಹಾಗೆ ನೋಡಿದರೆ ಎಲ್ಲಾ ಕೊಲೆಗಳೂ ಆತ್ಮಹತ್ಯೆಗಳೇ. ತನ್ನ ಅಸ್ತಿತ್ವದಿಂದ ಬೇರೆಯವರಿಗೆ ಸಹಿಸಲಾಗದ ನಷ್ಟವೋ ಅಥವಾ ತನ್ನ ಸಾವಿನಿಂದ ಕಡೆಗಣಿಸಲಾಗದ ಲಾಭವೋ ಆಗುವಂತೆ ಮಾಡುವಲ್ಲಿ ಕೊಲೆಗೀಡಾಗುವವನ ಜವಾಬ್ಧಾರಿಯೇನು ಕಡಿಮೆಯೇ? ತನ್ನ ಸಾವಿನ ನಂತರ ಜೀವಂತ ಮನುಷ್ಯನನ್ನು ಅಪಮಾನದ ಬೇಗೆ ಅಥವಾ ಪಶ್ಚಾತ್ತಾಪದ ಉರಿಯಲ್ಲಿ ಬೇಯುವಂತೆ ಮಾಡುವುದು ಕೊಲೆಗಿಂತ ಹೇಯ. ಒಂದು ಕೊಲೆಯನ್ನು ಅಥವಾ ಆತ್ಮಹತ್ಯೆಯನ್ನು ಹೀಗೂ ನೋಡಬಹುದು ಎನ್ನುತ್ತದೆ. ಕಾದಂಬರಿಯ ತುಂಬ ಇಂತಹ ತರ್ಕ ವಿತರ್ಕಗಳು ತನ್ನ ಇರುವನ್ನು ಸಾಧಿಸುತ್ತಲೇ ಹೋಗುತ್ತದೆ.


   ಕೌಶಿಕ್ ಕೃಷ್ಣ ತಾನಾಗಿಯೇ ಸಾವನ್ನು ತಂದುಕೊಳ್ಳುವ ಆ ಮೂಲಕ ಆತ್ಮವನ್ನು ಹಿಡಿದಿಟ್ಟುಕೊಂಡು  ಅದನ್ನು ಇನ್ನೊಂದು ಶರೀರಕ್ಕೆ ರವಾನಿಸುವ ಹೊಸ ಪ್ರಯೋಗವನ್ನು ಮಾಡುವ ನಿಟ್ಟಿನಲ್ಲಿ ಪೆಗಾಸಿಸ್ ಎನ್ನುವ ಯಂತ್ರವನ್ನು ಕಂಡು ಹಿಡಿಯುವುದು, ಅದಕ್ಕೆ ಎಲ್ಲವನ್ನೂ ವ್ಯವಹಾರದ ದೃಷ್ಟಿಯಿಂದಲೇ ನೋಡುತ್ತ, ಈ ತರಹದ ಆಧ್ಯಾತ್ಮಿಕ ವಿಷಯಗಳನ್ನು ಒಪ್ಪದ ಅಭಿಜಿತ್ ಕಿಮಾನಿ ಹಣ ಹೂಡುವುದು ಎಲ್ಲವೂ ವಿಚಿತ್ರವೇ. ಅವನ ಆಫೀಸಿನಲ್ಲಿ ಎಲ್ಲಿಯೂ ಸರಿಯಾಗಿ ಕೆಲಸ ಮಾಡದ, ಅಲೆಮಾರಿಯಾಗಿಯೇ ಬದುಕಬೇಕೆನ್ನುತ್ತ ಕೇವಲ ವಾರ, ತಿಂಗಳುಗಳ ಲೆಕ್ಕದಲ್ಲಿ ಕೆಲಸ ಮಾಡುವ ದಿಗಂಬರ ಸೇರಿಕೊಳ್ಳುವುದೂ ಕೂಡ. ಇಲ್ಲಿಯೇ ಅಮೇರಿಕಾದಲ್ಲಿರುವ ಭಾರತೀಯರ ಜೀವನದ ಅನಾವರಣವಾಗುತ್ತದೆ. ‘ಅಮೇರಿಕಾದಲ್ಲಿದ್ದಾನೆ. ಇಂಜಿನಿಯರ್.’ ಎಂದುಕೊಳ್ಳುತ್ತ ಇಲ್ಲಿಯವರು ಮೆರೆಸುವಾಗ ಅಲ್ಲಿ ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವುದೂ ಇದೆ. ಮಕ್ಕಳನ್ನು ಓದಿಸಿ ಪರದೇಶಿಗಳನ್ನಾಗಿ ಮಾಡುವ ತಂದೆ ತಾಯಿಯರು ಇದನ್ನು ಒಮ್ಮೆಯಾದರೂ ಓದಬೇಕು ಎಂದೆನ್ನಿಸುತ್ತದೆ.


   ಕೌಶಿಕ್ ಕೃಷ್ಣನ ಪ್ರಯೋಗಕ್ಕಾಗಿ ಹಣ ಹಾಗೂ ಪ್ರಾಜೆಕ್ಟ್ ಮಾಡಲು ಸಮಯ ಹಾಗೂ ಸ್ಥಳವನ್ನು ಮೀಸಲಿಟ್ಟ ಅಭಿಜಿತ್ ಕಿಮಾನಿ ನಂತರ ಇಡೀ ಪ್ರಾಜೆಕ್ಟ್‌ನ್ನೇ ಮಾರಿ ಬಿಡುತ್ತಾನೆ. ಆದರೆ ಕೌಶಿಕ್ ಕೃಷ್ಣನಿಗೆ ಅದೇನೂ ಒಪ್ಪಿಗೆಯಾದ ಕೆಲಸವಲ್ಲ. ಹೀಗಾಗಿ ಆತ ಪ್ರಯೋಗವನ್ನು ತನ್ನ ಮನೆಗೆ  ಸ್ಥಳಾಂತರಿಸಿಕೊಳ್ಳುತ್ತಾನೆ. ಅಲ್ಲಿ ಆತನೊಡನೆ ಕೆಲಸ ಮಾಡುವ ಉತ್ಸಾಹಿ ಯುವಕ ಅನ್ಸೆಲ್ಮೋ ಈ ಕೆಲಸಕ್ಕೆ ಸಹಕಾರ ನೀಡುತ್ತಾನೆ. ಆತನಿಗೆ ಕೌಶಿಕ್ ಕೃಷ್ಣನ ಕೆಲಸದ ಬಗ್ಗೆ ಯಾವ ಮಾಹಿತಿಯೂ ಇಲ್ಲದಿದ್ದರೂ ಆತ ಮತ್ತು ಆತನ ಜೊತೆಗೇ ವಾಸಿಸುತ್ತಿದ್ದ ಪ್ರೇಯಸಿ ಎಂಜಲಿತೋ ಇಡೀ ಪ್ರಯೋಗದ ಯಶಸ್ಸಿಗೆ ಕಂಕಣ ಬದ್ಧರಾಗುತ್ತಾರೆ. ಕೌಶಿಕ್ ಕೃಷ್ಣನ ಹೆಂಡತಿ ಎಡ್ರಿಯಾನ ಒಬ್ಬ ಅತ್ಯುತ್ತಮ ಚಿತ್ರಕಾರಳು. ಹಾಗೆ ನೋಡಿದರೆ ಕೌಶಿಕ್ ಕೃಷ್ಣ ಅಭಿಜಿತ್ ಕಿಮಾನಿಗೆ ಪರಿಚಯವಾದ್ದೇ ಇಂತಹ ಚಿತ್ರಕಲಾ ಪ್ರದರ್ಶನದಲ್ಲಿ. ಕೌಶಿಕ್ ಕೃಷ್ಣ ಹಾಗೂ ಆತನ ಹೆಂಡತಿ ಎಡ್ರಿಯಾನಾ ಇಬ್ಬರೂ ಸೇರಿ ಚಿತ್ರಿಸಿದ್ದ ಪೇಂಟಿಂಗ್‌ಗಳು ಹೊಸದೊಂದು ಸಂಚಲನವನ್ನೇ ಅಭಿಜಿತ ಕಿಮಾನಿಯಲ್ಲಿ ಮೂಡಿಸಿದ್ದವು. ಪ್ರತ್ಯೇಕ ಆಲೋಚನೆ, ಪ್ರತ್ಯೇಕ ನಂಬಿಕೆಗಳನ್ನು ಹೊಂದಿರುಹಿಬ್ಬರು ಜೊತೆಯಾಗಿ ಒಂದು ಕೆಲಸ ಮಾಡುವುದೆಂದರೆ ಅದು ಅದ್ಭುತವೇ ಸರಿ. ಅದರಲ್ಲೂ ಚಿತ್ರಕಲೆಯಂತಹ ಸೂಕ್ಷ್ಮ ಸಂವೇದನೆ ಬೇಡುವ ವಿಭಾಗದಲ್ಲಿ. ಆದರೆ ಕೌಶಿಕ್ ಕೃಷ್ಣ ಹಾಗೂ ಎಡ್ರಿಯಾನಾ ಚಿತ್ರಗಳು ಅದ್ವಿತೀಯವಾಗಿದ್ದವು ಮತ್ತು ಅಲ್ಲಿಯೂ ಕೌಶಿಕ್ ಕೃಷ್ಣ ಆತ್ಮ ಹಾಗೂ ದೇಹದ ಸಂಗಾತವನ್ನು, ಆತ್ಮವನ್ನು ಸಂರಕ್ಷಿಸಿ ಬೇರೆಡೆಗೆ ಅದನ್ನು ಜೀವಂತ ಗೊಳಸುವ ಕುರಿತಾಗಿಯೇ ತನ್ನ ಬಣ್ಣವನ್ನು ಬಳಸುತ್ತಿದ್ದುದು ವಿಚಿತ್ರ.
   ಕೊನೆಗೆ ಅಭಿಜಿತ್ ಕಿಮಾನಿಯ ಇಂಡಸ್ ಕಂಪನಿಯಿಂದ ಫಿನಿಕ್ಸ್ ಎನ್ನುವ ಆತ್ಮವನ್ನು ಕಾಪಿಟ್ಟು ಬೇರೆ ದೇಹಕ್ಕೆ ಸ್ಥಳಾಂತರಿಸುವ ಯೋಜನೆಯಿಂದಾಗಿ ಅಭಿಜಿತ್ ವಿಚಾರಣೆಗೆ ಒಳಗಾಗಬೇಕಾಗುತ್ತದೆ, ಆತನ ತಂದೆ ಇನ್ನೆಂದೂ ಅಮೇರಿಕಾಕ್ಕೆ ಬರದಿರುವ ತೀರ್ಮಾನ ಕೈಗೊಂಡು ಭಾರತಕ್ಕೆ ಹಿಂದಿರುಗುತ್ತಾರೆ. ಆದರೆ ಕೊನೆಯಲ್ಲಿ ಅನ್ಸೆಲ್ಲೋ ಹೇಳುವ ಸತ್ಯ ಬೆಚ್ಚಿ ಬೀಳಿಸುತ್ತದೆ. ಅದನ್ನು ಬೆಂಬಲಿಸುವಂತೆ ಸ್ವತಃ ಕೌಶಿಕ್ ಕೃಷ್ಣನೇ ತನ್ನ ಪತ್ನಿ ಎಡ್ರಿಯಾನಾಳ ಆತ್ಮಹತ್ಯೆ ಯೋಜಿತವಾದ್ದು ಹಾಗೂ ಪೆಗಾಸಿಸ್ ಯಂತ್ರ ಅವಳ ಆತ್ಮವನ್ನು ಅನೆಲ್ಲೋನ ಪ್ರೇಯಸಿ ಎಂಜಲಿತೋಳ ದೇಹಕ್ಕೆ ಯಶಸ್ವಿಯಾಗಿ ಸೇರಿಸಿದೆಯೆಂದು ಹೇಳುತ್ತಾನೆ. ಇದಕ್ಕೂ ಮೊದಲೇ ಬರುವ ಇಂಡಸ್ ಕಂಪನಿಯ ಸ್ವಾಗತಕಾರಿಣಿಯಾಗಿರುವ ಸೋಫಿಯಾಳ ನಾಯಿ ಅಲೆಕ್ ಒಂದು ದಿನ ಹಠಾತ್ ಆಗಿ ಯಾವುದೇ ಸೂಚನೆ ನೀಡದೆ ಸಾವಿಗೀಡಾಗಿದ್ದು ಮತ್ತು ಪೆಗಾಸಿಸ್ ಯಂತ್ರದ ಕಾರ್‍ಯ ವೈಖರಿ ತಿಳಿಯಲು ಹೋಗಿದ್ದ ಗಿಲ್ಟನ್ ಸಡನ್ನಾಗಿ ಹಾರ್ಟ್ ಅಟ್ಯಾಕ್‌ಗೆ ಒಳಗಾಗಿದ್ದು ಈ ಯಂತ್ರದ ನಿಜಾಯತಿಯನ್ನು ಸಾಬೀತುಪಡಿಸುತ್ತವೆಯೋ ಎನ್ನುವಂತಿದ್ದರೂ ಅದೇ ಫಿನಿಕ್ಸ್ ಪ್ರಾಜೆಕ್ಟಿಗೆ ಡಾಟಾ ಸಂಗ್ರಹಿಸಿ ತರ್ಕಕ್ಕೆ ಹಚ್ಚುವ ದಿಗಂಬರ ಕೊನೆಯವರೆಗೂ ನಂಬುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ.


     ಕಾದಂಬರಿಯ ಒಟ್ಟೂ ಓಟ ಓದುಗನನ್ನು ಖುರ್ಚಿಯ ತುದಿಯಲ್ಲಿ ಕುಳಿತು ಓದುವಂತೆ ಮಾಡುತ್ತದೆ. ಒಮ್ಮೆ ಓದಲು ಪ್ರಾರಂಭಿಸಿದ ನಂತರ ಮುಂದೇನಾಗುತ್ತದೆ ಎನ್ನುವ ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗಿ ಕೊನೆಯವರೆಗೂ ಪುಸ್ತಕವನ್ನು ಕೆಳಗಿಡಲಾಗದಂಥಹ ಒತ್ತಡವನ್ನು ಸೃಷ್ಟಿಸಲು ಯಶಸ್ವಿಯಾಗುತ್ತದೆ. ಇಲ್ಲಿನ ಪ್ರತಿ ಮಾತು, ಪ್ರತಿ ನಡತೆಯೂ ನಮ್ಮೊಳಗೇ ಹಾಸು ಹೊಕ್ಕಾಗಿರುವ ಮಾತುಗಳೇನೋ ಎಂದುಕೊಳ್ಳುವಂತೆ ಅಥವಾ ನಮ್ಮೊಡನೆ ವ್ಯವಹರಿಸಿದ್ದ ಯಾರದ್ದಾದರೂ ಮಾತನ್ನು ನೆನಪಿಗೆ ತರುತ್ತದೆ. ಇಲ್ಲಿ ಪೊಕ್ಕೆ ಪಾಂಡು ಹೇಳುವಂತೆ ‘ಅರ್ಧ ಭೂಗೋಲ ದಾಟಿದರೂ ಕಾಸೀಮನ ದೋಸ್ತಿ ತಪ್ಪಲಿಲ್ಲ’ ಎನ್ನುವ ಮಾತು, ‘ಅಣ್ಣ ಹೇಳ್ತೆ ಕೇಳ್’ ಎಂದು ಪದೇ ಪದೇ ಹೇಳುವ ಇದೇ ಪೊಕ್ಕೆಪಾಂಡು ಇಲ್ಲೆಲ್ಲೋ ನಮ್ಮ ಪಕ್ಕದಲ್ಲೇ ಇದ್ದವರು ಎನ್ನುವ ಭಾವ ಹುಟ್ಟಿಸುತ್ತದೆ. ಯಾಕೆಂದರೆ ತನ್ನನ್ನೇ ತಾನು ಅಣ್ಣ ಎಂದು ಕರೆದುಕೊಳ್ಳುವವರನ್ನು ನಮ್ಮೂರ ಕಡೆ ಪೊಕ್ಕೆ ಎನ್ನುವುದು ಸಹಜವಾದ ಮಾತು. ಕಿಮಾನಿ ಎನ್ನುವ ಸನಿಹದ ಊರಿನ ಹೆಸರೂ ಕೂಡ ಒಂದು ರೀತಿಯ ತಾದ್ಯಾತ್ಮವನ್ನು ಕಾದಂಬರಿಗೆ ನೀಡಿಬಿಡುತ್ತದೆ.


    ಇಷ್ಟೆಲ್ಲ ಆದನಂತರ ಮತ್ತೊಂದು ಹೇಳಲೇಬೇಕಾದ ಮಾತಿದೆ. ಇಲ್ಲಿ ಬರುವ ವಿವರಣೆಗಳು ನಮಗೆ ಇಂಚಿಂಚಾಗಿ ಆ ವಿಷಯದ ಪರಿಚಯ ಮಾಡಿಕೊಡುತ್ತದೆ. ಕೆಲವೊಮ್ಮೆ ಕೆಲವು ಸ್ಥಳಗಳ ನಿಖರವಾದ ಮಾಹಿತಿ ನಾವೇ ಅಲ್ಲಿ ನಿಂತು ನೋಡುತ್ತಿದ್ದೇವೆ ಎನ್ನುವ ಭಾವ ನೀಡುತ್ತದೆ. ಉದಾಹರಣೆಗೆ ‘ಪೆಡ್ರೋಸ್ ಟಕೀಲಾ- ಬಾರ್ ಆಂಡ್ ರೆಸ್ಟೋರೆಂಟ್’ ಎನ್ನುವ ಸ್ಥಳ, ಅದು ಇರಬಹುದಾದ ಜಾಗ, ಅದು ಹೇಗಿದೆ ಎನ್ನುವ ವಿವರಣೆಗಳು ಸಾಕ್ಷಾತ್ ನಾವೆ ಅಲ್ಲಿ ನಿಂತು ನೋಡುತ್ತಿದ್ದೇವೆ ಎಂದೆನಿಸುವ ಮಾಯಕತೆಯನ್ನು ಕಟ್ಟಿ ಕೊಡುತ್ತದೆ. ಅವರ ಹಿಂದಿನ ಅಮೂರ್ತ ಚಿತ್ತಗಳು ಸಂಕಲನದಲ್ಲಿಯೂ ಕೂಡ ನಾನು ಇಂತಹುದ್ದೇ ಶಬ್ಧದ ಇಂದ್ರಜಾಲಿಕ ಚಮತ್ಕಾರವನ್ನು ನೋಡಿದ್ದೇನೆ. ಇಲ್ಲಿಯೂ ಕೂಡ ಅವರು ಕಥೆ ಹೇಳುವ ರೀತಿ, ಅದನ್ನು ಕಟ್ಟಿಕೊಡುವಲ್ಲಿ ತೋರುವ ನಿಖರತೆ, ಹಾಗೂ ಕಥೆಯೊಳಗಿನ ಕಂಪನ ನಮ್ಮನ್ನು ಆ ಗುಂಗಿನಲ್ಲಿ ತೊಡಗಿಸಿಕೊಂಡು ನಶೆಯೇರುವಂತೆ ಮಾಡಿಬಿಡುತ್ತದೆ. ಇಷ್ಟಾಗಿಯೂ ಗಮನಿಸಬೇಕಾದ ವಿಷಯವೆಂದರೆ ಅಷ್ಟು ವರ್ಷಗಳ ಕಾಲ ವಿದೇಶದಲ್ಲಿದ್ದೂ ಅವರು ಭಾಷೆಯನ್ನು ಬಳಸಲು ತೋರುವ ಶಿಸ್ತು ಅಚ್ಚರಿಗೊಳಿಸುತ್ತದೆ. ಎರಡು ವರ್ಷದ ವಿಜ್ಞಾನ ವಿಷಯವನ್ನು ಪಿಯುಸಿಯಲ್ಲಿ ಓದಿದವರೇ ಕನ್ನಡ ಮರೆತು ಹೋಯಿತು ಎನ್ನುವಾಗ ಕನ್ನಡದ ಗಂಧಗಾಳಿಯೂ ಇಲ್ಲದ ಆ ದೂರದ ನಾಡಿನಲ್ಲಿ ಕನ್ನಡದ ಕುರಿತಾಗಿ ಅಭಿಮಾನವನ್ನು ಇಟ್ಟುಕೊಂಡಿರುವ ಪರಿಯೇ ವಿಶಿಷ್ಟ. ಕನ್ನಡ ಸಾಹಿತ್ಯವನ್ನು ಹೊರತುಪಡಿಸಿ, ಸದಾ ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕುವ ಕೆಲಸ ಮಾಡುತ್ತಿರುವ ಪ್ರಕಾಶ ನಾಯಕರ ಸಾಹಿತ್ಯಾಸಕ್ತಿಯೂ ಸ್ತುತ್ಯಾರ್ಹ.

—————————————————————-

*********************************************************

ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

9 thoughts on “

  1. ಪುಸ್ತಕದ ವಿಮರ್ಷೆಯೇ ಇಷ್ಟು ಕುತೂಹಲ ಇರುವಾಗ…ಎಲ್ಲಿಯಾದರು “ಅಂತು” ಸಿಕ್ಕರೆ ಓದಬೆಕೆಂಬ ಕೌತುಕ

  2. ವಿಮರ್ಶೆಯ ಮೂಲಕ ಪುಸ್ತಕ ಪ್ರೀತಿಯನ್ನು ಬಿತ್ತುತ್ತಿದ್ದೀರಿ. ಇನ್ನೊಂದು ಒಳ್ಳೆಯ ಪುಸ್ತಕದ ಕುರಿತು ಕುತೂಹಲ ಮೂಡಿಸಿದ್ದೀರಿ. ವಂದನೆಗಳು.

  3. ಹಿಂದನ ನಿಮ್ಮ ಒಂದೆರಡು ವಿಮರ್ಶೆ ಓದಿರುವೆ ಚೆನ್ನಾಗಿ ತರ್ಕಿಸಿ ಕುತೂಹಲಕಾರಿಯಾಗಿ ಒಳ್ಳೆಯ ಪದಗುಚ್ಛ ಬಳಸಿ ಬರೆಯುತ್ತೀರಿ, ಓದುವ ತವಕ ಹೆಚ್ಚಿಸುತ್ತೀರಿ.ಈ ವಿಮರ್ಶೆಯಲ್ಲಂತೂ ಅದರ‌ ಪ್ರರಂಭದಿಂದಲೂ ಕುತೂಹಲ ಮೂಡಿಸಿದ್ದೀರಿ.ವಾಸ್ತವಿಕವಲ್ಲದ ಅವೈಜ್ಙನಿಕವಾದ ಈ ಪುಸ್ತಕಕ್ಕೂ ಕೂಡ ನಿಮ್ಮ ವಿಮರ್ಶೆ ಓದುವ ಕುತೂಹಲ ಮೂಡಿಸುತ್ತದೆ. ಅಮೆರಿಕಕ್ಕೆ ಹೋದವರ ಬದುಕು ತುಂಬಾ ದುಸ್ತರ ಎನ್ನುವ ಲೇಖಕರ ಮಾತು ಒಪ್ಪುವಂತದಲ್ಲ, ನನ್ನ ಮಗ ಸೊಸೆ ಅಲ್ಲಿ‌ ಡಾಕ್ಟರ್ ಉದ್ದೆಯಲ್ಲಿದ್ದಾರೆ ಮತ್ತು ಬಹಳಷ್ಟು ಸಂಬಂಧಿಕರೂ ಸ್ನೇಹಿತ ಬಳಗದವರೂ ಇದ್ದು ನಾನು ಐದಾರು ಬಾರಿ ಅಮೆರಿಕಕ್ಕೆ ಹೋಗಿ ಬಂದಿರುವುದರಿಂದ ಈಮಾತು ಹೇಳುತ್ತಿದ್ದೇನೆ

    1. ಅಮೇರಿಕಾಕ್ಎಕೆ ಹೋದ ಲ್ಲರ ಬದುಕೂ ದುಸ್ತರ ಅಂತ ಲೇಖಕರಾಗಲಿ ನಾನಾಗಲಿ ಎಲ್ಲೂ ಹೇಳಿಲ್ಲ. ಆದರೆ ಎಲ್ಲರ ಬದುಕೂ ನಿಮ್ಮ ಮಗ ಸೊಸೆಂತೆ ಸಂಪನ್ನವೂ ಆಗಿರುವುದಿಲ್ಲ. ಇದು ಎಲ್ಲ ದೇಶಗಳ ಕಥೆ. ಅಂದಹಾಗೆ ಇದು ವಿಜ್ಞಾನದ ಫಿಕ್ಷನ್ ಅಲ್ಲ ಇದು ಕಾದಂಬರಿ.

  4. ನಂಗಂತೂ..ಇನ್ನು ಇದೇ ಪುಸ್ತಕದ ಕನಸು ಗ್ಯಾರಂಟಿ. ಬಹಳ ಚೆಂದ ತಮ್ಮ ವಿಶ್ಲೇಷಣೆ.. ಅಭಿನಂದನೆಗಳು..

  5. ವಿಮರ್ಶೆಯೇ ಪುಸ್ತಕ ಓದಲು ಕುತೂಹಲ ಮೂಡಿಸುತ್ತಿದೆ

Leave a Reply

Back To Top