ಅಂಕಣ ಬರಹ

ಅಂಜನಾ ಬರೆಯುತ್ತಾರೆ

ಜಗಲಿಯೆನ್ನುವ ಮೊದಲಪ್ರೇಮ

ಸೂರ್ಯ ಮೂಡುವ ಹೊತ್ತು ಬರಿಗಾಲಲ್ಲಿ ಒಮ್ಮೆ ಅಂಗಳಕ್ಕಿಳಿದು ನೋಡಿ. ಮಣ್ಣಿನೊಂದಿಗಿನ ಮೊದಲಪ್ರೇಮದ ಸ್ಪರ್ಶ ಅಂಗಾಲುಗಳನ್ನು ತಾಕಿ ಹೃದಯವನ್ನು ಸೋಕುತ್ತದೆ; ಬಾಗಿಲುಗಳಾಚೆ ಬಂದು ಸುರಿವ ಮಳೆಗೆ ಒಮ್ಮೆ ಮುಖವನ್ನೊಡ್ಡಿ ನೋಡಿ. ಮಳೆಯೊಂದಿಗಿನ ಮೊದಲಪ್ರೇಮದ ಸುಖ ಮುಂಗುರುಳನ್ನು ತೋಯಿಸಿ ಹನಿಹನಿಯಾಗಿ ನೆಲಕ್ಕಿಳಿಯುತ್ತದೆ; ಒಂದು ಏಕಾಂತದ ಸಂಜೆಯಲ್ಲಿ ಸದ್ದಿಲ್ಲದೆ ಅರಳುತ್ತಿರುವ ಜಾಜಿಯ ಮೊಗ್ಗುಗಳನ್ನು ಅಂಗೈಯಲ್ಲಿ ಹಿಡಿದು ನೋಡಿ. ಪರಿಮಳದೆಡೆಗಿನ ಮೊದಲಪ್ರೇಮದ ಭಾವ ಇಂದ್ರಿಯಗಳ ಹಂಗು ತೊರೆದು ಗಾಳಿಯೊಂದಿಗೆ ತೇಲಿ ಹಗುರಾಗುತ್ತದೆ. ಮೃದುವಾದ ಪುಟ್ಟಪುಟ್ಟ ಕಾಲುಗಳಿಗೆ ಅಮ್ಮ ತೊಡಿಸಿದ ಗೆಜ್ಜೆ, ದೀಪಾವಳಿಗೆಂದು ಅಪ್ಪ ಕೊಡಿಸಿದ ಉದ್ದತೋಳಿನ ಫ್ರಾಕು, ಶನಿವಾರದ ಕೊನೆಯ ಕ್ಲಾಸು ತಪ್ಪಿಸಿ ಹೊಟೆಲಿಗೆ ಹೋಗಿ ತಿಂದ ಮಸಾಲೆದೋಸೆ, ಸಿಟಿಬಸ್ಸಿನಲ್ಲಿ ಎದುರಾಗುತ್ತಿದ್ದ ಹುಡುಗನ ನೀಲಿಬಣ್ಣದ ಅಂಗಿ ಎಲ್ಲವೂ ಮೊದಲಪ್ರೇಮವೆನ್ನುವ ಸುಂದರ ಅನುಭೂತಿಯ ಭಾಗವಾಗಿ ಬದುಕನ್ನು ಆವರಿಸಿಕೊಳ್ಳುತ್ತವೆ. ಅಕ್ಕನ ಮದುವೆಯಲ್ಲಿ ಮುಡಿದ ಮಲ್ಲಿಗೆಮಾಲೆಯಿಂದ ಹಿಡಿದು ಸಂಧ್ಯಾವಂದನೆಯ ಧೂಪದಾರತಿಯವರೆಗೂ ಮೊದಲಪ್ರೇಮದ ನರುಗಂಪು ನೆನಪಿನ ಜಗಲಿಯಲ್ಲಿ ತೇಲುತ್ತಲೇ ಇರುತ್ತದೆ.

          ಈ ಜಗಲಿಯೆಡೆಗಿನ ನನ್ನ ಪ್ರೇಮವೂ ನಿನ್ನೆ-ಮೊನ್ನೆಯದಲ್ಲ. ಪಕ್ಕದಮನೆಯ ಪುಟ್ಟ ಮಗುವೊಂದು ಅಂಬೆಗಾಲಿಡುತ್ತ ಜಗಲಿಯ ಕಂಬಗಳನ್ನು ಸುತ್ತುವಾಗಲೆಲ್ಲ, ನನ್ನ ಬಾಲ್ಯವೂ ಹೀಗೆ ಸ್ವಚ್ಛಂದವಾಗಿ ಜಗಲಿಯ ಮೇಲೆ ಹರಡಿಕೊಂಡಿದ್ದ ಗಳಿಗೆಯನ್ನು ನೆನೆದು ಪುಳಕಗೊಳ್ಳುತ್ತೇನೆ; ನೆನಪುಗಳಿಗೆ ದಕ್ಕಿರದ ಅವೆಷ್ಟೋ ಸಂಗತಿಗಳು ವಾಸ್ತವದಲ್ಲಿ ಕಣ್ಣೆದುರೇ ಕುಣಿದಾಡುತ್ತ, ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟು ಅನುಭವಗಳಾಗಿ ಜಗಲಿಗಿಳಿಯುವ ವಿಸ್ಮಯಕ್ಕೆ ಚಕಿತಗೊಳ್ಳುತ್ತೇನೆ. ಹಾಗೆ ನಡೆದಾಡುವ ಅನುಭವಗಳ ಸ್ವರೂಪ ಕಾಲಕಾಲಕ್ಕೆ ಬದಲಾಗಿರಬಹುದಾದರೂ, ಅವುಗಳ ಸೌಂದರ್ಯ ಕಳೆಗುಂದಿದ್ದನ್ನು ಎಂದಿಗೂ ಕಂಡಿಲ್ಲ. ಜಗಲಿಯ ದಾಸ್ತಾನುಗಳ ಮಾಲೀಕನಂತಿರುವ ಮರದ ಟಿಪಾಯಿಯ ಮೇಲಿನ ದಿನಪತ್ರಿಕೆ-ವಾರಪತ್ರಿಕೆಗಳ ಜಾಗವನ್ನು ಮೊಬೈಲುಗಳು, ಟಿವಿ ರಿಮೋಟುಗಳು ಆಕ್ರಮಿಸಿಕೊಂಡಿರಬಹುದು; ಮಹಾರಾಜರ ಗತ್ತಿನಲ್ಲಿ ಕುಳಿತಿರುತ್ತಿದ್ದ ಆರಾಮಕುರ್ಚಿಗಳ ಜಾಗದಲ್ಲಿ ಅಂದದ ಮೈಕಟ್ಟಿನ ಸೋಫಾಸೆಟ್ಟುಗಳು ವಿರಾಜಿಸುತ್ತಿರಬಹುದು; ಲಾಟೀನುಗಳನ್ನು ಟ್ಯೂಬ್ ಲೈಟುಗಳು, ಮಣ್ಣಿನ ನೆಲವನ್ನು ಮಾರ್ಬಲ್ಲುಗಳು, ರೇಡಿಯೋಗಳನ್ನು ಲ್ಯಾಪ್ಟಾಪುಗಳು ರಿಪ್ಲೇಸ್ ಮಾಡಿರಬಹುದಾದರೂ, ಆ ಮಾರ್ಪಾಡಿನ ಪ್ರಕ್ರಿಯೆಯಲ್ಲಿ ಜಗಲಿಯೆಂದೂ ತನ್ನ ನೈಜತೆಯ ಖುಷಿಯನ್ನು ಕಳೆದುಕೊಳ್ಳುವುದಿಲ್ಲ. ಎಲ್ಲ ಬದಲಾವಣೆಗಳಿಗೂ ಭಯವಿಲ್ಲದೆ ತನ್ನನ್ನು ಒಡ್ಡಿಕೊಳ್ಳುವ ಜಗಲಿ ಮನೆಯೊಳಗಿಂದ ಹೊರಗೆ ಬಂದವರಿಗೊಂದು ಬಿಡುವಿನ ಸಡಗರ ಒದಗಿಸುತ್ತ, ಹೊರಗಿನಿಂದ ಒಳಬಂದವರನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತ ಒಳಗು-ಹೊರಗುಗಳ ಅನುಬಂಧವನ್ನು ಹಿಡಿದಿಡುವ ಬಂಧುವಿನಂತೆ ಭಾಸವಾಗುತ್ತದೆ.

          ಎಲ್ಲ ಅನುಬಂಧಗಳ ಹುಟ್ಟು, ಬೆಳವಣಿಗೆಗಳು ಸಂಭವಿಸುವುದು ಜಗಲಿಯಲ್ಲಿಯೇ ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಆರಾಮಕುರ್ಚಿಯಲ್ಲಿ ಪೇಪರ್ ಓದುತ್ತ ಕುಳಿತಿದ್ದ ಅಪ್ಪನ ಕಾಲನ್ನು ಹಿಡಿದುಕೊಂಡು ನಾನು ಮೊದಲಸಲ ನನ್ನ ಕಾಲುಗಳ ಮೇಲೆ ನಿಂತಿದ್ದಿರಬಹುದು; ದೊಡ್ಡಪ್ಪನ ಕಿರುಬೆರಳನ್ನು ಹಿಡಿದು ಜಗಲಿಯ ತುಂಬ ಓಡಾಡಿದ ಮೇಲೆಯೇ ಎತ್ತಿಡುವ ಹೆಜ್ಜೆಗಳಿಗೊಂದು ಧೈರ್ಯ ಬಂದಿರಬಹುದು; ಅದೇ ಜಗಲಿಯ ಕಂಬಗಳ ಸುತ್ತ ಕಟ್ಟಿಕೊಂಡ ಬಂಧನಗಳೇ ಜಗತ್ತನ್ನೆದುರಿಸುವ ಚೈತನ್ಯವನ್ನು ಒದಗಿಸಿರಬಹುದು. ಹೀಗೆ ಹೊರಗೆ ಎತ್ತಿಟ್ಟ ಪ್ರತಿ ಹೆಜ್ಜೆಯನ್ನೂ ಹಗುರಾಗಿಸಿಕೊಳ್ಳುವ ಪಾಠವೊಂದನ್ನು ಜಗಲಿ ಗುರುವಿನ ಜಾಗದಲ್ಲಿ ನಿಂತು ಕಲಿಸಿಕೊಡುತ್ತದೆ. ಆ ಕಲಿಕೆಯ ಭಾಗವಾಗಿ ನೆನಪುಗಳು, ಅನುಭವಗಳು, ಅನುಬಂಧಗಳೆಲ್ಲವೂ ಅವುಗಳ ಕರ್ತವ್ಯವನ್ನು ನಿಭಾಯಿಸುತ್ತಿರುತ್ತವೆ. ಜಗಲಿಯ ಬಾಗಿಲಿನಲ್ಲೊಂದು ರಂಗೋಲಿ ಒಮ್ಮೆ ಅಳಿದರೂ ಮತ್ತೆ ಕೈಗಂಟಿಕೊಳ್ಳುವ ಬದುಕಿನ ಚಿತ್ತಾರವಾಗಿ, ಅದರ ಮೇಲೊಂದು ಹೂವು ಬಾಡುವ ಸಂಗತಿಯನ್ನು ಸಹಜಕ್ರಿಯೆಯಾಗಿಸಿ ಮತ್ತೊಮ್ಮೆ ಅರಳುವ ಕನಸಾಗಿ, ಪಕ್ಕದಲ್ಲೊಂದು ನೀರಿನ ಗಿಂಡಿ ಆಗಾಗ ಬರಿದಾಗುತ್ತ ಮತ್ತೆ ತುಂಬಿಕೊಳ್ಳುವ ಪ್ರಕೃತಿಯಾಗಿ ಜಗಲಿಯ ಮೇಲೊಂದು ಸಹಜ-ಸುಂದರ ಬದುಕಿನ ಚಿತ್ರಣ ರೂಪುಗೊಳ್ಳುತ್ತದೆ. ಬಾಗಿಲ ಮೇಲೊಂದು ಅಜ್ಜನ ಭಾವಚಿತ್ರ ಕೊಲಾಜಿನಂತಹ ಜಗಲಿಯ ಬದುಕುಗಳನ್ನು ಸಹನೆಯಿಂದ ಕಾಯುತ್ತಿರುತ್ತದೆ. ಹೀಗೆ ಜಗಲಿಯ ಮೇಲೆ ದಿನ ಬೆಳಗಾದರೆ ತೆರೆದುಕೊಳ್ಳುವ ಚಿತ್ರಣವೇ ಬಯಲಿಗಿಳಿವ ಬದುಕುಗಳ ಬೆನ್ನಹಿಂದೆ ನಿಂತು, ಅಗತ್ಯ ಬಂದಾಗ ಆಚೀಚೆ ಚಲಿಸಿ ಬೆರಗಿನ ದರ್ಶನವನ್ನು ಮಾಡಿಸುತ್ತಿರುತ್ತದೆ.

          ಈ ಜಗಲಿಯ ಬದುಕಿನೊಂದಿಗೆ ನಮ್ಮ ಬದುಕನ್ನು ಜೋಡಿಸಿಕೊಂಡಾಗಲೇ ಅದೊಂದು ಬೆರಗು ಎನ್ನುವ ಅರಿವು ಸಾಧ್ಯವಾದೀತು. ಶಾಲೆಗೆ ಹೋಗುವುದೊಂದು ಬೇಸರದ ಸಂಗತಿಯೆನ್ನಿಸಿದಾಗ ಜಗಲಿಯ ಮೂಲೆಯಲ್ಲಿ ಗೋಡೆಗೆ ಆತು ನಿಂತಿರುತ್ತಿದ್ದ ಕೇರಂ ಬೋರ್ಡು ಎಲ್ಲ ಬೇಸರಗಳನ್ನೂ ಹೋಗಲಾಡಿಸುತ್ತಿತ್ತು. ಸಂಜೆ ಶಾಲೆಯಿಂದ ಮನೆಗೆ ಹಾಜರಾಗುತ್ತಿದ್ದಂತೆಯೇ ಜಗಲಿಯ ಮೇಲೊಂದು ಕಂಬಳಿ ಹಾಸಿ, ಬೋರ್ಡಿನ ಮೇಲೆ ರಾಣಿಯನ್ನು ಪ್ರತಿಷ್ಠಾಪಿಸಿ ಆಟಕ್ಕೆ ಕುಳಿತರೆ ಪ್ರಪಂಚದ ಸಕಲ ಸಂತೋಷಗಳೂ ಜಗಲಿಗೆ ಹಾಜರಾಗುತ್ತಿದ್ದವು. ಗಣಿತದ ಮಾಸ್ತರು ಕಷ್ಟಪಟ್ಟು ಕಲಿಸಿದ ಲೆಕ್ಕಾಚಾರಗಳೆಲ್ಲ ಕಪ್ಪು-ಬಿಳಿ ಬಿಲ್ಲೆಗಳ ಮಧ್ಯದಲ್ಲಿ ಸಿಕ್ಕು ತಲೆಕೆಳಗಾಗಿ, ಮರುದಿನ ಮತ್ತೆ ಶಾಲೆಯ ಮೆಟ್ಟಿಲೇರಿದಾಗಲೇ ಲೆಕ್ಕಕ್ಕೆ ಸಿಗುತ್ತಿದ್ದವು. ಜಗಲಿಯ ಮೇಲಿನ ಮಕ್ಕಳ ಸಂಖ್ಯೆ ನಾಲ್ಕಕ್ಕಿಂತ ಜಾಸ್ತಿಯಾದಾಗ ರಾಣಿಯನ್ನು ಮರೆತು ಕತ್ತೆಯ ಸವಾರಿ ಶುರುವಾಗುತ್ತಿತ್ತು. ಹಿರಿಯರ ಕಣ್ಣು ತಪ್ಪಿಸಿ ಎತ್ತಿಟ್ಟುಕೊಂಡಿರುತ್ತಿದ್ದ ಹಳೆಯ ಇಸ್ಪೀಟು ಕಟ್ಟುಗಳನ್ನು ಹೊಸದಾಗಿ ಜೋಡಿಸಿಕೊಂಡು ಕತ್ತೆಯಾಗುವ, ಕತ್ತೆಯಾಗಿಸಿ ಖುಷಿಪಡುವ ಆಟವನ್ನು ಕಲಿಸಿಕೊಟ್ಟವರ ನೆನಪಿಲ್ಲ. ಅದೊಂದು ಪರಂಪರಾನುಗತ ಸಂಪ್ರದಾಯವೆನ್ನುವಂತೆ ಕಲಿತು, ಕಿರಿಯರಿಗೂ ಕಲಿಸಿ, ಜಗಲಿಯನ್ನೇ ಶಾಲೆಯನ್ನಾಗಿಸಿಕೊಳ್ಳುತ್ತಿದ್ದ ಬಾಲ್ಯದ ನೆನಪುಗಳನ್ನೆಲ್ಲ ಜಗಲಿ ಜಾಗರೂಕತೆಯಿಂದ ಜೋಪಾನ ಮಾಡುತ್ತದೆ.

          ನೆನಪುಗಳೆಲ್ಲ ಚದುರಿಹೋಗಿ ಬದುಕು ತಲ್ಲಣಿಸುವ ಸಮಯದಲ್ಲೂ ಜಗಲಿಯಲ್ಲಿ ದೊರೆಯುವ ನೆಮ್ಮದಿ ಶಬ್ದಗಳಾಚೆ ನಿಲ್ಲುವಂಥದ್ದು. ಹೊರಬಾಗಿಲಿನಲ್ಲಿ ಚಪ್ಪಲಿ ಕಳಚಿ ಜಗಲಿಯ ತಣ್ಣನೆಯ ಸ್ಪರ್ಶವನ್ನು ನಮ್ಮದಾಗಿಸಿಕೊಂಡ ಮರುಕ್ಷಣವೇ, ಎಲ್ಲ ತಲ್ಲಣಗಳನ್ನು ತಣಿಸುವ ಜೀವಶಕ್ತಿಯಾಗಿ ಜಗಲಿ ನಮ್ಮನ್ನಾವರಿಸಿಕೊಳ್ಳುತ್ತದೆ. ಅಕ್ಕನ ಮದುವೆಯಲ್ಲಿ ಜಗಲಿಯ ಮೇಲೆ ಹಾಸಿದ್ದ ಜಮಖಾನದ ಮೇಲೆ ಕಾಲುಚಾಚಿ ಕುಳಿತಿದ್ದ ಕನಸಿನಂತಹ ಹುಡುಗ ಎದೆಯಲ್ಲೊಂದು ನವಿರಾದ ಭಾವವನ್ನು ಮೂಡಿಸಿ, ಮುಡಿದಿದ್ದ ಮಲ್ಲಿಗೆಮಾಲೆಯ ಪರಿಮಳದೊಂದಿಗೆ ಬೆರೆತುಹೋಗಿದ್ದ ನೆನಪು ಮತ್ತದೇ ಮೊದಲಪ್ರೇಮದ ಹಗುರಾದ ಅನುಭವವನ್ನು ಒದಗಿಸುತ್ತದೆ; ಮದುವೆಯಾಗಿ ದೂರದ ಊರಿಗೆ ಹೋದ ಅಕ್ಕ ವರುಷಕ್ಕೊಮ್ಮೆ ಭಾವನೊಂದಿಗೆ ಬಂದಾಗ, ನೀರು ತುಂಬಿದ ತಂಬಿಗೆಯನ್ನು ಅವರೆದುರಿಗಿಟ್ಟು ಬಗ್ಗಿ ನಮಸ್ಕಾರ ಮಾಡಿ ಸ್ವಾಗತಿಸುತ್ತಿದ್ದ ಸೊಗಸಾದ ಸಂಪ್ರದಾಯವೊಂದು ಜಗಲಿಯ ತುಂಬ ಸರಿದಾಡಿದಂತಾಗಿ ಹೊಸ ಹುರುಪೊಂದು ಹೃದಯವನ್ನಾವರಿಸುತ್ತದೆ; ಅಕ್ಕನ ಮಕ್ಕಳನ್ನು ಕೈಹಿಡಿದು ನಡೆಯಲು ಕಲಿಸಿದ, ಮಡಿಲಲ್ಲಿ ಕೂರಿಸಿಕೊಂಡು ದೇವರ ಭಜನೆಯನ್ನು ಹಾಡಿದ, ಪುಟ್ಟಪುಟ್ಟ ಕೈಗಳಿಗೆ ಮದರಂಗಿಯನ್ನು ಹಚ್ಚಿ ಸಂಭ್ರಮಿಸಿದ ನೆನಪುಗಳೆಲ್ಲವೂ ಅದೆಲ್ಲಿಂದಲೋ ಹಾಜರಾಗಿ, ಜಮಖಾನವೊಂದು ರತ್ನಗಂಬಳಿಯಾಗಿ ಬದಲಾಗಿ ಅರಮನೆಯಂತಹ ವೈಭವ ಜಗಲಿಗೆ ಪ್ರಾಪ್ತಿಯಾಗುತ್ತದೆ. ದೊಡ್ಡಮ್ಮ ಮಾಡುತ್ತಿದ್ದ ಬಿಸಿಬಿಸಿಯಾದ ಗೋಧಿಪಾಯಸ, ದೊಡ್ಡಪ್ಪನೊಂದಿಗೆ ಕುಳಿತು ಬೆರಗಾಗಿ ನೋಡುತ್ತಿದ್ದ ರಾಮಾಯಣ-ಮಹಾಭಾರತ, ಪಲ್ಲಕ್ಕಿಯೊಳಗೆ ಕುಳಿತಿರುತ್ತಿದ್ದ ಹನುಮಂತನಿಗೆಂದು ದೂರದ ಗದ್ದೆಯಿಂದ ಕೊಯ್ದು ತರುತ್ತಿದ್ದ ಗೆಂಟಿಗೆ ಹೂವು, ದೀಪಾವಳಿಯ ರಾತ್ರಿ ಜಗಲಿಯುದ್ದಕ್ಕೂ ಉರಿಯುತ್ತಿದ್ದ ಹಣತೆಯ ಸಾಲು ಎಲ್ಲವೂ ಆ ವೈಭವದ ಮೆರವಣಿಗೆಯಲ್ಲಿ ಭಾಗವಹಿಸಿದಂತೆ ಭಾಸವಾಗಿ ಹಸನಾದ ಹೊಸ ಬದುಕೊಂದು ನಮ್ಮದಾದ ಭಾವ ಬೆಚ್ಚಗಾಗಿಸುತ್ತದೆ.

          ಹೀಗೆ ಅಗತ್ಯಬಿದ್ದಾಗ ತಲ್ಲಣಗಳನ್ನು ತಣಿಸುತ್ತ, ಇನ್ನೊಮ್ಮೆ ಬದುಕು ಬೆಚ್ಚಗಿರುವ ಭರವಸೆಯನ್ನು ತುಂಬುತ್ತ ಜಗಲಿಯೆನ್ನುವ ಮೊದಲಪ್ರೇಮ ಬದುಕಿನುದ್ದಕ್ಕೂ ಕೈಹಿಡಿದು ನಡೆಯುತ್ತದೆ. ಮಣ್ಣಿನ ಜಗಲಿಯಲ್ಲಿ ಮಡಿಲಮೇಲೆ ಕುಳಿತಿರುತ್ತಿದ್ದ ಅಕ್ಕನ ಮಗ ಗ್ರಾನೈಟ್ ನೆಲದ ಫ್ಲೋರ್ ಕುಷನ್ನಿನ ಮೇಲೆ ಕುಳಿತು ಹೊಸ ಸಿನೆಮಾದ ಬಗ್ಗೆ ಚರ್ಚಿಸುತ್ತಾನೆ; ದೊಡ್ಡಮ್ಮನ ಗೋಧಿಪಾಯಸದ ರೆಸಿಪಿ ಹಳೆಯ ಡೈರಿಯ ಪುಟಗಳಲ್ಲಿ ಆತ್ಮಬಂಧುವಿನಂತೆ ಕುಳಿತು ತನ್ನ ಪಾಡಿಗೆ ತಾನು ಕಾಲ ಕಳೆಯುತ್ತಿರುತ್ತದೆ; ಮಹಾಭಾರತದ ಶ್ರೀಕೃಷ್ಣ  ರಾಧೆಯೊಂದಿಗೆ ಆಗಾಗ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ; ದೀಪಾವಳಿಯ ಹಣತೆಗಳೆಲ್ಲ ಕ್ಯಾಂಡಲ್ ಲೈಟ್ ಡಿನ್ನರುಗಳಾಗಿ, ನಾಗರಪಂಚಮಿಯ ಮದರಂಗಿ ಪಾರ್ಲರುಗಳ ನೇಲ್ ಪಾಲಿಶ್ ಆಗಿ, ದೇವರ ಕಲ್ಪನೆಯೊಂದು ಸ್ನೇಹದಂಥ ಸುಮಧುರ ಸಾಂಗತ್ಯವಾಗಿ ಬದುಕುಗಳನ್ನು ಹೊಸತನದೆಡೆಗೆ ಹದಗೊಳಿಸುತ್ತವೆ. ಜಗಲಿಯಲ್ಲಿ ಕಾಲುಚಾಚಿ ಕುಳಿತಿದ್ದ ಹುಡುಗನ ನೆನಪು ಮಲ್ಲಿಗೆಮಾಲೆಯಾಗಿ ಬಾಗಿಲುಗಳ ಮೇಲೆ ತೂಗುತ್ತಿರುತ್ತದೆ.

***********************************

ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

6 thoughts on “

  1. ಮುದಗೊಳಿಸುವ ಬರಹ. ಜೀವನದುದ್ದಕ್ಕೂ ಬಿಡದ ಜಗುಲಿಯ ನಂಟು.

  2. ಜಗಲಿಯೊಂದಿಗಿನ ನಂಟು ಬಿಡಿಸಲಾಗದ ,ಬಿಡಿಸಿಕೊಳ ಲಾಗದ ನಂಟು.. ಬರೆಹ ಸುಂದರ
    ಅಭಿನಂದನೆಗಳು ..

Leave a Reply

Back To Top