ಗುರುವಿನ ಗರಿಮೆ

ಲೇಖನ

ಗುರುವಿನ ಗರಿಮೆ

ನೂತನ ದೋಶೆಟ್ಟಿ

ಬಾಲ್ಯದಲ್ಲಿ ಶಿಕ್ಷಣವೆಂದರೆ ಶಿಕ್ಷೆ  ಯೌವನದಲ್ಲಿ ಶಿಕ್ಷಣವೆಂದರೆ ಪರೀಕ್ಷೆಗಳು ಹಾಗೂ ಮೋಜು, ಆನಂತರದಲ್ಲಿ ಅದೇ ಶಿಕ್ಷಣ ವೃತ್ತಿಗೆ ರಹದಾರಿ.ಈ ರೀತಿಯಾಗಿ ಶಿಕ್ಷಣವನ್ನು ಸರಳೀಕರಿಸಬಹುದಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಸರಳ ಸೂತ್ರಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.

 ಶಿಕ್ಷಣ= ಶಿಕ್ಷಣ ಸಂಸ್ಥೆ+ ವಿದ್ಯಾರ್ಥಿ

ಉದ್ಯೋಗ= ಮಾರ್ಕ್ಸ+ ವಶೀಲಿ

ಈ ಎರಡು ಸೂತ್ರಗಳನ್ನು ಇಟ್ಟುಕೊಂಡು ಇಂದಿನ ಶಿಕ್ಷಣದ ಬಗ್ಗೆ ನೋಡೋಣ.

ಮೊದಲ ಸೂತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಬಹು ಮುಖ್ಯವಾಗುತ್ತವೆ. ಉನ್ನತ ಶಿಕ್ಷಣದಲ್ಲಿ ಈ ಸಂಸ್ಥೆಗಳು ನೀಡುವ ಶಿಕ್ಷಣದ ಗುಣಮಟ್ಟ ಮುಖ್ಯವಾದರೂ ಆ ಸಂಸ್ಥೆಗಳ ಮೂಲಕ ದೊರೆಯಬಹುದಾದ ಉದ್ಯೋಗಾವಕಾಶ ಹಾಗೂ ಸಂಬಳದ ಪ್ಯಾಕೇಜ್ ಬಹಳ ಮುಖ್ಯವಾಗುತ್ತದೆ.ಈ ಕಾರಣದಿಂದಲೇ ತಾಂತ್ರಿಕ ಹಾಗೂ ವೈದ್ಯಕೀಯ ಉನ್ನತ ಶಿಕ್ಷಣ ವಿದ್ಯಾಲಯಗಳು ಪರಸ್ಪರ ಪೈಪೋಟಿಗೆ ಬಿದ್ದಂತೆ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಹೊಸ ಹೊಸ ಆಮಿಷಗಳನ್ನು ಒಡ್ಡುತ್ತಿರುವುದು.ಪ್ರತಿವರ್ಷ ಸಮರೋಪಾದಿಯಲ್ಲಿ ವಿದ್ಯಾಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧವಾಗುತ್ತಿರುವುದು.ಈ ಸೂತ್ರದಲ್ಲಿ ಗುರು ಇಲ್ಲದಿರುವುದುದನ್ನು ಗಮನಿಸಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನ ಸ್ಥಾನ ಮಹತ್ವವನ್ನು ಕಳೆದು ಕೊಳ್ಳುತ್ತಿರುವುದನ್ನು ಈ ಸಂಸ್ಥೆಗಳು ನಡೆಸುವ ಪರೀಕ್ಷೆಗಳು, ಗುರುಗಳ ಬದಲಾಗಿ ಕೋಚಿಂಗ್ ಸೆಂಟರುಗಳ ಗುರುವಲ್ಲದ ತರಬೇತುದಾರರ ಮೇಲೆ ಹೆಚ್ಚು ಅವಲಂಬಿತರಾಗುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಮತ್ತೆ ಮತ್ತೆ ಪುಷ್ಟೀಕರಿಸುತ್ತಿದ್ದಾರೆ.

ಎರಡನೇ ಸೂತ್ರ

ವಿದ್ಯಾಭ್ಯಾಸದ ಗುರಿಯನ್ನು ನಿರ್ಧರಿಸುತ್ತದೆ.ಅದೆಂದರೆ ಉದ್ಯೋಗ.ಕೋರ್ಸಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದರಿಂದ ದೊರೆಯಬಹುದಾದ ಸಂಬಳದ ಪ್ಯಾಕೇಜಿನ ಮೇಲೆ ಅದು ನಿರ್ಧರಿಸಲ್ಪಡುತ್ತದೆ.ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ವಿದ್ಯಾರ್ಥಿ ಪಡೆಯುವ ಅಂಕಗಳು, ಅಗತ್ಯ ಸಂದರ್ಭದಲ್ಲಿ ಮಾಡಬಹುದಾದ ವಶೀಲಿ.ಇಲ್ಲಿಯೂ ಕೂಡ ಗುರುವಿನ ಮಾತೇ ಇಲ್ಲ.

ಇಂತಹ ಅನೇಕ ಸೂತ್ರಗಳನ್ನು ಸಿದ್ಧಪಡಿಸುತ್ತ ಹೋಗಬಹುದು.ಪ್ರಯತ್ನಿಸಿ ನೋಡಿ.ಆದರೆ ಎಲ್ಲಿಯೂ ಗುರುವಿನ ಅಗತ್ಯತೆ ಕಂಡುಬರದಿರುವುದು ಇಂದಿನ ಶಿಕ್ಷಣ ವ್ಯವಸ್ಥೆಯ ವಾಸ್ತವ.ಆಚಾರ್ಯದೇವೋ ಭವ ಎಂದು ಗುರುವನ್ನು ದೈವತ್ವಕ್ಕೇರಿಸಿದ  ನಮ್ಮ ನಾಡಿನಲ್ಲಿ ಹೀಗೆ ಗುರುವಿನ ಸ್ಥಾನ ಗೌಣವಾಗಲು ಆರಂಭವಾದದ್ದು ತೀರ ಇತ್ತೀಚಿನ ವರ್ಷಗಳಲ್ಲಿ.

ನಮ್ಮ ದೇಶದಲ್ಲಿ ಗುರುಕುಲ ಪದ್ಧತಿಯಲ್ಲಿ ಮಾತ್ರಇದ್ದ ಶಿಕ್ಷಣ ನಿಲುಕುತ್ತಿದ್ದುದು ಕೂಡ ಸಮಾಜದ ಉನ್ನತ ವರ್ಗಕ್ಕೆ ಸೇರಿದ ಕೆಲ ಗಣ್ಯಾತಿಗಣ್ಯರಿಗೆ ಮಾತ್ರ. ಕಾಲಾಂತರದಲ್ಲಿ ಆದ ಸಾಮಾಜಿಕ ಬದಲಾವಣೆಗಳಿಂದ, ಶೈಕ್ಷಣಿಕ ಕ್ರಾಂತಿಯಿಂದ.  ಶಿಕ್ಷಣ ಸಾರ್ವತ್ರಿಕವಾದದ್ದು ಆಧುನಿಕ ಭಾರತದ ಅತಿ ದೊಡ್ಡ ಸಾಧನೆ. ಆದರೆ ಸ್ವಾತಂತ್ರ್ಯಾನಂತರ ಆದ ಆರ್ಥಿಕ ಬದಲಾವಣೆಯ ಬಿರುಗಾಳಿಯಲ್ಲಿ ಶಿಕ್ಷಣ ಕ್ಷೇತ್ರವೂ ಸಿಲುಕಿ ಅದರ ವ್ಯಾಪಾರೀಕರಣವಾದದ್ದರಿಂದಲೇ ‘ಗುರು’ಸ್ಥಾನ ಈ ಹಿಂದಿನ ಮಹತ್ವವನ್ನು ಕಳೆದುಕೊಳ್ಳಲಾರಂಭಿಸಿತು.‘ ಹಿಂದೆ ಗುರುವಿದ್ದ; ಮುಂದೆ ಗುರಿ ಇತ್ತು. ಸಾಗುತಿತ್ತು ಧೀರರದಂಡು. ಇಂದು ಹಿಂದೆ  ಗುರುವಿಲ್ಲ; ಮುಂದೆ ಗುರಿ ಇಲ್ಲ. ಸಾಗುತಿಹುದು ರಣಹೇಡಿಗಳ ಹಿಂಡು’ ಎಂಬ ನುಡಿ ಶಿಕ್ಷಣ ಕ್ಷೇತ್ರಕ್ಕೆ ಬಿದ್ದ ಕೊಡಲಿಪೆಟ್ಟಿನಿಂದ ಘಾಸಿಗೊಂಡು ಆಡಿದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ರಣಹೇಡಿತನವನ್ನೂ ಮೀರಿಸಿದ ಶಿಕ್ಷಣ ವ್ಯವಸ್ಥೆಗೆ ನಮ್ಮ ದೇಶ ಸಾಕ್ಷಿಯಾಗುತ್ತಿದೆ.

ಉನ್ನತ ಶಿಕ್ಷಣದ ದೇಗುಲಗಳಾಗಿದ್ದ ವಿಶ್ವವಿದ್ಯಾಲಯಗಳೂ ಅನೀತಿಯ ತಾಣಗಳಾಗುತ್ತಿವೆ. ಶಿಕ್ಷಕರಿಂದಲೇ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ಈ ಪಿಡುಗು ಶಾಲೆ ಕಾಲೇಜುಗಳನ್ನೂ ಬಿಟ್ಟಿಲ್ಲ. ಇಂತಹ ವಾತಾವರಣದಲ್ಲಿ ನಲುಗುತ್ತಿರುವುದು ವಿದ್ಯೆಯೇ ಹೊರತು ಶಿಕ್ಷಕರಾಗಲೀ, ವಿದ್ಯಾರ್ಥಿಗಳಾಗಲೀ ಅಲ್ಲ. ಶಿಕ್ಷಕರಿಗೆ ಸಂಬಳ, ಭತ್ಯೆಗಳು, ಪರೀಕ್ಷಾ ಡ್ಯೂಟಿಗಳು, ಜೊತೆಗೆ ಒಂದಷ್ಟು ತರಗತಿಗಳಲ್ಲಿ ಪಾಠ ಇವಿಷ್ಟು ಶಿಕ್ಷಣ ವ್ಯವಸ್ಥೆಯಾಗಿ ಕಂಡರೆ ವಿದ್ಯಾಥಿಗಳಿಗೆ ಹಾಜರಿ ಹಾಗೂ ಪರೀಕ್ಷೆಗಳೇ ಶಿಕ್ಷಣ ವ್ಯವಸ್ಥೆಯಾಗಿವೆ. ಇದರಿಂದ ಸರಿಯಾದ ಶಿಕ್ಷಣ ಯಾವ ಹಂತದಲ್ಲೂ ದೊರೆಯದೇ ಇಡಿಯ ಶಿಕ್ಷಣ ವ್ಯವಸ್ಥೆ ಬಡವಾಗುತ್ತಿದೆ. ಅವ್ಯವಹಾರ, ಅನೈತಿಕತೆ ಈ ಶಿಕ್ಷಣ ವ್ಯವಸ್ಥೆಯಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ ಎಂದರೆ ತಪ್ಪಾಗಲಾರದು. ಪರೀಕ್ಷಾ ಗೊಂದಲಗಳು, ಪ್ರತಿವರ್ಷ ಕಾಡುವ ಪ್ರಶ್ನೆ ಪತ್ರಿಕೆ ಗೊಂದಲಗಳು, ಪರೀಕ್ಷೆಗೆ ಮುನ್ನವೇ ಅವುಗಳು ಬಯಲಾಗುವುದು, ಪರೀಕ್ಷಾ ನಂತರವೂ ಫಲಿತಾಂಶಗಳಲ್ಲಿ ಗೊಂದಲ, ಅವ್ಯವಹಾರಗಳು ಈ ವ್ಯವಸ್ಥೆಯನ್ನುಗುರುವಿನ ಹೊರತಾಗಿ ಬೇರೆ ಶಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಆಳುತ್ತಿರುವುದನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ‘ಗುರು’ ಎಂಬ ಪದ ತನ್ನ ಗರಿಮೆಯನ್ನು ಕಳೆದುಕೊಂಡಿದೆ.

ಕೇವಲ ಮೂರು ದಶಕಗಳ ಹಿಂದೆ ಗುರು-ಶಿಷ್ಯ ಸಂಬಂಧ ಭಯ-ಭಕ್ತಿಯ ಸಂಬಂಧವಾಗಿತ್ತು. ತಮ್ಮನ್ನು ಗೌರವಿಸುವ ಅಪಾರ ಶಿಷ್ಯವೃಂದ ಗುರುಗಳಿಗೆ ಇತ್ತು.ಇದು ಒಳ್ಳೆಯ ಶಿಕ್ಷಣ ವ್ಯವಸ್ಥೆಯ ಸೊಬಗು ಕೂಡ.ಗೌರವಕ್ಕೆ ಪಾತ್ರನಾಗುವ ಗುರು ಎಂದರೆ ಅವನು ತನ್ನ ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ತನ್ನ ಶಿಷ್ಯವೃಂದಕ್ಕೆ ಸಲ್ಲಬೇಕಾದ ಸೇವೆಯನ್ನು ಸಲ್ಲಿಸಿದ್ದಾನೆ ಹಾಗೂ ಹೊಣೆಯನ್ನು ನಿಭಾಯಿಸಿದ್ದಾನೆ ಎಂದೇ ಅರ್ಥ. ಅದರಂತೆ ವಿದ್ಯಾರ್ಥಿಗಳೂ ಕೂಡ ಅಂತಹ ಗುರುವಿಗೆ ವಿಧೇಯರಾಗಿರುತ್ತಾರೆಂದರೆ ಅದು ಆ ಗುರುವೇ ಅವರಿಗೆ ನೀಡಿದ ಮಾರ್ಗದರ್ಶನದ ಮೂಲಕ ಎಂಬುದೂ ಕೂಡ ಸತ್ಯ. ಕಾಲ ಕಳೆದಂತೆ ಗುರು-ಶಿಷ್ಯ ಸಂಬಂಧದಲ್ಲಿ ಬದಲಾವಣೆ ಕಂಡು ಬರುತ್ತಪರಸ್ಪರ ಮಿತ್ರತ್ವದ ನೆಲೆಗೆ ಈ ಸಂಬಂಧವನ್ನು ತಂದು ನಿಲ್ಲಿಸಿತು.ಇದು ಕೂಡ ಬಹು ಸುಂದರವಾದ ಘಟ್ಟವೇ. ಏಕೆಂದರೆ ಆಜ್ಞಾಪಾಲಕ ವಿದ್ಯಾರ್ಥಿ ಸಂಸ್ಕೃತಿಯಿಂದ ಗೆಳೆತನಕ್ಕೆ ಒಗ್ಗಿಕೊಳ್ಳುವ ಸಖ್ಯ ಪರಂಪರೆ ಈ ಕಾಲದಲ್ಲೆ ಬೆಳೆಯಿತು.ಇತ್ತೀಚಿನ ದಿನಗಳಲ್ಲಿ ಇದೂ ಕೂಡ ಮಾಯವಾಗುತ್ತ ಎಲ್ಲವೂ ಕೇವಲ ವ್ಯಾವಹಾರಿಕ ನೆಲೆಗೆ ಬಂದು ನಿಂತಿರುವುದು ಶಿಕ್ಷಣ ವ್ಯವಸ್ಥೆಯ ಅರಾಜಕತೆಯನ್ನು ತೋರಿಸುತ್ತದೆ.ಇದಕ್ಕೆಲ್ಲ ಮುಖ್ಯ ಕಾರಣ ಈ ವ್ಯವಸ್ಥೆಯಲ್ಲಿ ಬದಲಾದ ಗುರುವಿನ ಸ್ಥಾನ ಮಾನ ಎಂದು ನನ್ನ ಅನಿಸಿಕೆ. ವಿದ್ಯಾರ್ಥಿಗಳಲ್ಲಿ ಆಶಿಸ್ತು ಹೆಚ್ಚುತ್ತಿದೆ. ವಿದ್ಯಾಲಯಗಳು ಅನೀತಿಯ ತಾಣಗಳಾಗುತ್ತಿವೆ ಎಂಬ ಹಳಹಳಿಕೆ ಕೇವಲ ಕ್ಲೀಷೆಯಾಗುತ್ತದೆ. ಈ ಸ್ಥಿತಿಗೆ ಶಿಕ್ಷಣ ಕ್ಷೇತ್ರವನ್ನು ವಿಧಿವತ್ತಾಗಿ ನೂಕಲು ಆರಂಭಿಸಿದ್ದು ಕೆಲ ದಶಕಗಳ ಹಿಂದಿನಿಂದಲೇ ಎಂಬುದು ನಮಗೆ ಅರಿವಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬದಲಾಯಿಸುವ ಗೊಡವೆ ಆಡಳಿತವೂ ಸೇರಿದಂತೆಯಾರಿಗೂ ಬೇಡವಾದದ್ದು ಈ ದುರಂತಕ್ಕೆ ಕಾರಣ.ಈಗ ಹಿಂದಿರುಗಿ ಹೋಗಲಾರದಷ್ಟು ದೂರದ ದಾರಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಕ್ರಮಿಸಿಯಾಗಿದೆ.ಆದ್ದರಿಂದ ಆರಂಭದಲ್ಲಿ ಹೇಳಿದ ಸೂತ್ರಗಳಿಗೆ ಪರ್ಯಾಯವಾಗಿ ಸೂತ್ರಗಳನ್ನು ನಾವು ಸಿದ್ಧಪಡಿಸಬೇಕು.ಅವು ಜ್ಞಾನ ಹಾಗೂ ಗುರುವನ್ನು ಒಳಗೊಂಡಂತೆ ಇರಬೇಕು.ಶಿಕ್ಷಣದ ಮೂಲ ಉದ್ದೇಶ ಜ್ಞಾನವೇ ಹೊರತು ಉದ್ಯೋಗವಲ್ಲ. ಆ ಜ್ಞಾನ ಗುರುಮುಖೇನ ಬರುವಂತಾಗಬೇಕು. ಮಾತ್ರವಲ್ಲದೇ ಗುರುವೂ ಕೂಡ ತನ್ನ ಸ್ಥಾನ ಹಾಗೂ ಹೊಣೆಗೆ ಬದ್ಧತೆಯನ್ನು ಹೊಂದುವಂತಿರಬೇಕು.ಈ ಮಾತನ್ನು ಕ್ಲಾಸ್‌ರೂಂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೇಳಬಹುದು.ಆದರೆಇಂದು ಶಿಕ್ಷಣ ಈ ಕ್ಲಾಸರೂಂ ಗೊಡವೆಯನ್ನು ದಾಟಿ ಅಂತರ್ಜಾಲದ  ಮೂಲಕ ಯಥೇಚ್ಛವಾಗಿ ದೊರೆಯುತ್ತಿದೆ. ಇಲ್ಲಿ ಗುರು-ಶಿಷ್ಯ ಪರಂಪರೆಗಿಂತ ನೀಡಲ್ಪಡುವ ಸಮಯ ಹಾಗೂ ಜ್ಞಾನಾಧಾರಿತ ವ್ಯಾವಹಾರಿಕ ಹಾಗೂ ಕೇವಲ ಲಾಭಾಧಾರಿತ ಶಿಕ್ಷಣಕ್ಕೆ ಮಾತ್ರ ಒತ್ತು ನೀಡಲಾಗಿದೆ.ಒಟ್ಟಿನಲ್ಲಿ ಶಿಕ್ಷಣ ಎಂದರೆ ಒಳ್ಳೆಯ ಸಂಬಳ ತರುವ ಉದ್ಯೋಗಕ್ಕೆ ರಹದಾರಿ ಎಂಬ ಸಿದ್ಧಸೂತ್ರ ಇಂದು ಪ್ರಚಲಿತದಲ್ಲಿರುವುದು ದಿಟ.

ಮೊಗೆದಷ್ಟೂದೊರೆಯುವ ಮಾಹಿತಿಯ ಮಹಾಪೂರದ ಇಂದಿನ ದಿನಗಳಲ್ಲಿ ಒನ್‌ಟುಒನ್‌ ಟೀಚಿಂಗ್ ಬಹುತೇಕವಾಗಿ ನಶಿಸುತ್ತಿದೆ.ಆದರೆ ಶಿಕ್ಷಣ ಕ್ಷೇತ್ರದಲ್ಲಿ ತೆರೆದುಕೊಳ್ಳುತ್ತಿರುವ ಹೊಸ ಹೊಸ ದಾರಿಗಳು, ಅವಕಾಶಗಳು, ಇಂದಿನ ವಿದ್ಯಾರ್ಥಿಗಳ ಅಪ್ರತಿಮ ಸಾಮರ್ಥ್ಯ ಮೊದಲಾದವುಗಳನ್ನು ಖಂಡಿತ ಕಡೆಗಣಿಸುವಂತಿಲ್ಲ. ಶಿಕ್ಷಣಕ್ಕೆ ಇಂದು ಅಂತಾರಾಷ್ಟೀಯ ಆಯಾಮ ದೊರೆತಿದೆ.ಎಲ್ಲ ಸಂದರ್ಭಗಳಲ್ಲೂ ಬಂಡವಾಳಶಾಹಿ, ವಸಾಹತುಶಾಹಿ ದಾಳಿಯನ್ನು ತೀವ್ರವಾಗಿ   ಖಂಡಿಸುವ ನಾವು ಈ ಹೊಸ ಶಿಕ್ಷಣ ಆಯಾಮಕ್ಕೆ ಮಾತ್ರ ಬಂಡವಾಳಶಾಹಿಯೇ ಕಾರಣ ಎಂಬುದನ್ನೂ ಮರೆಯಬಾರದು. ಉತ್ತಮ ದರ್ಜೆಯ ಹಾಗೂ ವಿದೇಶದಲ್ಲಿ ಶಿಕ್ಷಣ ಉಳ್ಳವರಿಗೆ ಮಾತ್ರ ನಿಲುಕುತ್ತಿದ್ದ ಕಾಲ ಈಗ ಇಲ್ಲವಾಗಿದೆ.ಪ್ರತಿಭೆಗೆ ಸಲ್ಲಬೇಕಾದ ಪುರಸ್ಕಾರ ಸಲ್ಲುವ ಅವಕಾಶಗಳನ್ನೂ ಈ ಬಂಡವಾಳಶಾಹಿಯೇ ತೆರೆದಿದೆ.ಇದು ಸಧ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾಣ ಸಿಗುವ ಧನಾತ್ಮಕಗುಣ.ಅಂದ ಮಾತ್ರಕ್ಕೆ ವಿದೇಶೀ ಶಿಕ್ಷಣವೇ ಉನ್ನತ ಗುಣಮಟ್ಟದ್ದು ಎಂದಂತೂ ಅಲ್ಲ. ಭಾರತದಲ್ಲೂ ಇಂದು ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡುವ ಅನೇಕ ಸಂಸ್ಥೆಗಳಿವೆ.

ಮಾತು ಬಂದು ನಿಲ್ಲುತ್ತಿರುವುದು ಶಿಕ್ಷಣ ಸಂಸ್ಥೆಗಳಿಗೇ.ಗುರು ಮುಖ್ಯವಲ್ಲದ ಬದಲಾದ ಶಿಕ್ಷಣ ಸ್ವರೂಪದ ವಾಸ್ತವತೆಯನ್ನು ಒಪ್ಪಿಕೊಳ್ಳುವುದು ಇಂದಿನ ಶಿಕ್ಷಣ ವ್ಯವಸ್ಥೆಯ ಅಗತ್ಯ ಹಾಗೂ ಅನಿವಾರ್ಯ ಕೂಡ.

***********************************

Leave a Reply

Back To Top