ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಾವ್ಯ ಸಂಗಾತಿ ಗಜಲ್ ಕನವರಿಸುತಿದೆ ಕಳೆದ ಬಾಲ್ಯವು ಹೃದಯದಲಿ ಮರೆಯಲಾದೀತೆ ಹೇಳಿ ಒಮ್ಮೆರಿಂಗಣಿಸುತಿದೆ ಸವಿ ನೆನಪುಗಳು ಬಾಳ ಪಥದಲಿ ಅಳಿಸಲಾದೀತೆ ಹೇಳಿ ಒಮ್ಮೆ ! ಸವೆದ ಹೆಜ್ಜೆ ಹೆಜ್ಜೆಗಳಲೂ ಹಸನಾಗುತಿದೆ ಮಧುರ ಗುರುತುಗಳು ತುಂಟತನದಿಕೂಡಿ ಕಳೆದ ಆಟಗಳವು ಹೆಚ್ಚು ಗೆಳೆತನದಲಿ ತೊರೆಯಲಾದೀತೆ ಹೇಳಿ ಒಮ್ಮೆ ! ಶೃಂಗರಿಸಲೇ ಮನದ ಹೊತ್ತಗೆಯನು ಬಿತ್ತುತ ಸವಿಭಾವಗಳ ಚಿತ್ತಾರವ ಲಾಸ್ಯದಿಆಪ್ತಭಾವಗಳ ಮೆರೆಸಲೇ ನೆನಹುಗಳ ದಿಬ್ಬಣದಲಿ ಬಿಡಲಾದೀತೆ ಹೇಳಿ ಒಮ್ಮೆ ! ಆಡಿ ಓಡುತ ಬಿದ್ದು ಏಳುತ ಕಲಿತ ಪಾಠಗಳವು ಹಸಿರು ಕಂಗಳಲಿ ಅರಳಿ ಚೆಲ್ವಲಿಸ್ವಪ್ನಗಳ ಕಾಣುತಲಿ ನಲಿದಿದೆ ಬಾಳ ಯಾಣದಲಿ ಕಳಚಲಾದೀತೆ ಹೇಳಿ ಒಮ್ಮೆ ! ನವ್ಯತೆಯ ಬಿನ್ನಾಣ ಬರಲಿ ನೂರೆಂಟು ಬಾಲ್ಯವು ಸದಾ ಚೊಕ್ಕ ‘ನಯನಾ’ ಳಿಗೆಬಾಳ ಕಣ್ಮಣಿಯಾಗಿ ಬಾಲ್ಯ ಹಸಿರು ಮನದಲಿ ಎಸೆಯಲಾದೀತೆ ಹೇಳಿ ಒಮ್ಮೆ !! ನಯನ. ಜಿ. ಎಸ್

Read Post »

ಇತರೆ

ಸಿಲ್ಕ್ ಸ್ಮಿತಾ ಜನ್ಮದಿನಕ್ಕೆ ಸಂಗಾತಿ ಶುಭಾಶಯ ಹಾಗೂ ಚಿರ ನೆನಪು

ಭಾರತೀಯ ಸಿನಿಮಾ ರಂಗದ ಅಪ್ರತಿಮ ಪ್ರತಿಭಾವಂತ ನಟಿಯಲ್ಲೊಬ್ಬರಾದ
ಸಿಲ್ಕ್ ಸ್ಮಿತಾ ಬದುಕಿದ್ದಿದ್ದರೆ ಇವತ್ತಿಗೆ ಅರವತ್ತೊಂದು ವರ್ಷಗಳಾಗುತ್ತಿದ್ದವು.

ತೆರೆಯ ಮೇಲೆ ಪುರುಷ ಪ್ರಧಾನ ವ್ಯವಸ್ಥೆಯ ಉಗ್ರ ಸಮರ್ಥಕ ಸ್ತ್ರೀ ಪಾತ್ರಗಳ ಕೋಪ, ದ್ವೇಷವನ್ನು ಸಹಿಸಿಕೊಂಡು ಅವಮಾನದಿಂದ ಏಕಾಂಗಿಯಾಗಿ ಮರೆಯಾಗುತ್ತಿದ್ದ ಸ್ಮಿತ ನಿಜ ಜೀವನದಲ್ಲೂ ಅದೇ ರೀತಿಯ ಏಕಾಂಗಿತನಕ್ಕೆ ಬಲಿಯಾದವರು.

ಈ ಅಪ್ರತಿಮ ಪ್ರತಿಭಾವಂತೆ, ಸುಂದರಿ, ಹೃದಯವಂತ ಕಲಾವಿದೆಯನ್ನು ಭಾರತದ ಚಿತ್ರರಂಗ stereotypical characters ಗಳಲ್ಲೆ ಕಳೆದು ಹಾಕಿತು. ಒಂಟಿಯಾಗಿಸಿತು.

ಬೇರೆ ಜನಪ್ರಿಯ ನಟಿಯರಾಗಿದ್ದರೆ ಅರವತ್ತು ತುಂಬಿದ ಕಾರಣಕ್ಕೆ ಶುಭಾಶಯಗಳ ಹೊಳೆಯೆ ಹರಿದಿರುತ್ತಿತ್ತು.
ಸಿಲ್ಕ್ ಸ್ಮಿತಾ ಅವರಿಗೆ ಶುಭಾಶಯಗಳನ್ನು ಹೇಳುವುದಕ್ಕೂ ಹಿಂದು ಮುಂದು ನೋಡುವ ಮಡಿವಂತ ಸಮಾಜದಲ್ಲಿ ಇವತ್ತಿಗೂ ನಾವಿದ್ದೇವೆ.

ಆದರೆ ಆಕೆ ಇವೆಲ್ಲವನ್ನು ಮೀರಿ ಹೋಗಿ ಅಮರರಾಗಿದ್ದಾರೆ.


ಎಲ್.ಎಚ್.ಲಕ್ಷ್ಮಿನಾರಾಯಣ

ಸಿಲ್ಕ್ ಸ್ಮಿತಾ ಜನ್ಮದಿನಕ್ಕೆ ಸಂಗಾತಿ ಶುಭಾಶಯ ಹಾಗೂ ಚಿರ ನೆನಪು Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-45 ಡಾ. ನರಹರಿಯು ಗೋಪಾಲನನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿಂದ ಹೊರಟ ಸುಮಿತ್ರಮ್ಮನ ತಲೆಯಲ್ಲಿ ತಮ್ಮ ಮನೆಯ ದಾರಿಯುದ್ದಕ್ಕೂ ನರಹರಿಯ ಮಾತುಗಳೇ ತಿರುಗುತ್ತಿದ್ದವು. ಯಾವುದನ್ನು ನಂಬಬೇಕು? ಯಾರನ್ನು ನಂಬಬೇಕು? ಈ ನರಹರಿ ಹೇಳುವ ಮಾತಿನಲ್ಲೂ ಸತ್ಯವಿದೆ ಎಂದುಕೊಂಡರೆ ಗುರೂಜಿಯವರ ವೇದಾಂತವು ಬೇರೊಂದು ಕಥೆಯನ್ನು ಹೇಳುತ್ತದೆಯಲ್ಲ! ಇವುಗಳಲ್ಲಿ ಯಾವುದು ಸರಿ, ಯಾವುದು ಸತ್ಯ? ಇಂಥ ಹತ್ತು ಹಲವು ನಂಬಿಕೆಗಳು ಹಾಗು ಪೂಜೆ, ಪುನಸ್ಕಾರಗಳ ವಿಚಾರಗಳಲ್ಲಾಗಲೀ ಅಥವಾ ಕುಟುಂಬದ, ಸಾಮಾಜದ ಯಾವುದೇ ವಿಷಯಗಳಲ್ಲಾಗಲೀ ಗಂಡಸರಿಗಿಂತ ಹೆಂಗಸರೇ ಯಾಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ? ಇಂಥ ಸಂಗತಿಗಳ ಬಗ್ಗೆ ಗಂಡಸರಲ್ಲಿ ಇರುವಷ್ಟು ಧೈರ್ಯ ಮತ್ತು ಉದಾಸೀನದ ಬುದ್ಧಿಯು ನಾವು ಹೆಂಗಸರಲ್ಲಿ ಯಾಕಿಲ್ಲ…? ಅಥವಾ ಇದ್ದರೂ ಆ ಮನಸ್ಥಿತಿಯನ್ನು ತೋರಿಸಿಕೊಳ್ಳಲು ನಾವೇ ಹೆದರುತ್ತಿದ್ದೇವೋ ಹೇಗೇ…? ನನ್ನ ಹಿರಿಯರ ಕಾಲದಿಂದಲೂ ನಾನು ನೋಡುತ್ತ ಬಂದಿದ್ದೇನೆ, ತಮ್ಮ ಕುಟುಂಬದ ಯಾವುದೇ ತೊಂದರೆ, ತಾಪತ್ರಯಗಳಿರಲಿ ಅಥವಾ ಜಾತಿ ಮತ ಧರ್ಮಕ್ಕೆ ಸಂಬಂಧಿಸಿದ ಆಚಾರ ವಿಚಾರಗಳೇ ಇರಲಿ ಎಲ್ಲದಕ್ಕೂ ನನ್ನಂಥ ಹೆಂಗಸರೇ ಹೆಚ್ಚುಹೆಚ್ಚಾಗಿ ಬಲಿಯಾಗುತ್ತ ಒದ್ದಾಡುತ್ತಾರೆ. ಯಾವುದೇ ಒಂದು ನಂಬಿಕೆ ಅಥವಾ ಮೂಢ ವಿಚಾರಗಳನ್ನೇ ಆಗಲಿ ಯಾರಾದರೂ ನಮ್ಮ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಮುಟ್ಟುವಂತೆ ವಿವರಿಸುತ್ತ ಹೋದರೆಂದರೆ ಅವರಾಡುವ ಸಂಗತಿಯ ಸತ್ಯಾಸತ್ಯತೆಯನ್ನು ಚೂರೂ ತರ್ಕಿಸಲು, ಸ್ವಂತ ಬುದ್ಧಿಯಿಂದ ನಿರ್ಧರಿಸಲು ಹೋಗದೆ ಅಂಥವರನ್ನು ನಾವು ಕಣ್ಣುಮುಚ್ಚಿ ನಂಬುತ್ತ ಅವರ ಬಲೆಗೆ ಬೀಳುತ್ತೇವೆ ಯಾಕೆ? ಅಂದರೆ ನನ್ನಂಥವರಿಗೆ ಸ್ವತಂತ್ರವಾಗಿ ಯೋಚಿಸುವ, ನಿರ್ಧರಿಸುವ ಶಕ್ತಿಯೇ ಇಲ್ಲವೆಂದಾ ಈ ಜನರ ಯೋಚನೆ…?- ಎಂದೆಲ್ಲ ಅಶಾಂತಿಯಿಂದ ಚಿಂತಿಸುತ್ತ ನಡೆಯುತ್ತಿದ್ದ ಸುಮಿತ್ರಮ್ಮನ ಒಳಮನಸ್ಸಿನಲ್ಲಿ ಕೊನೆಗೆ ನರಹರಿಯ ವಿಚಾರಗಳೇ ಸ್ವಲ್ಪ ಮಟ್ಟಿಗೆ ಗೆಲುವು ಸಾಧಿಸಿದಂತೆ ತೋರುತ್ತಿತ್ತು.    ಹೌದು, ಹೌದು. ನರಹರಿ ನನಗಿಂತ ಕಿರಿಯ ವಯಸ್ಸಿನವನು ಎನ್ನುವುದೇನೋ ಸರಿ. ಆದರೆ ಅವನು ಹೇಳಿದ್ದರಲ್ಲಿ ಬಹಳ ಅರ್ಥವೂ ಇದೆ ಎಂದೆನ್ನಿಸುತ್ತದೆ. ಅದನ್ನೆಲ್ಲ ತಾಳ್ಮೆಯಿಂದ ವಿಚಾರ ಮಾಡುವಾಗ ಗೊಂದಲ ಕಳೆದು ಮನಸ್ಸು ಹಗುರವಾಗುತ್ತದೆ. ಹಾಗಾದರೆ ಆ ನಾಗರಹಾವಿನ ವಿಷಯದಲ್ಲಿ ತಾವು ಈವರೆಗೆ ಅಂದುಕೊಂಡಿದ್ದೆಲ್ಲ ಬರೇ ಭ್ರಮೆಯಾ…? ತಮ್ಮ ಮುತ್ತಜ್ಜನ ಕಾಲದಿಂದಲೂ ಅವರೆಲ್ಲ ನಂಬಿಕೊಂಡು ಬಂದಿದ್ದು, ‘ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ನಾಗರಹಾವು ಮಾತ್ರವೇ!’ ಎಂದಲ್ಲವಾ! ಹಾಗಾದರೆ ನನ್ನ ಮನೆಯೊಳಗೆ ಬಂದ ಆ ಹಾವು ನರಹರಿಯ ಪ್ರಕಾರ ಕೇವಲ ಒಂದು ಸರೀಸೃಪವೆಂದಾದರೆ ನಮ್ಮ ಹಿರಿಯರು ನಂಬಿ, ಪೂಜಿಸಿಕೊಂಡು ಬಂದಂಥ ಆ ನಾಗನೆಂಬ ಶಕ್ತಿ ಯಾವುದು…? ಎಂದು ಆಳವಾಗಿ ಮತ್ತು ಧೈರ್ಯವಾಗಿ ಯೋಚಿಸಿದರು. ಆದರೆ ತಟ್ಟನೆ ಅವರಿಗೆ ಉತ್ತರ ಸಿಗದಿದ್ದಾಗ ಮತ್ತೆ ಪೂರ್ವಾಗ್ರಹಿತ ಗೊಂದಲಕ್ಕೇ ಬಿದ್ದರು. ಅದೇ ತಳಮಳದಿಂದ ಮನೆಗೆ ಬಂದು ಬಾಗಿಲು ತೆಗೆದು ಇನ್ನೇನು ಒಳಗಯಿಡಬೇಕು ಎಂಬಷ್ಟರಲ್ಲಿ ಮತ್ತೊಂದು ಆಘಾತ ಅವರನ್ನಪ್ಪಳಿಸಿತು!   ಈ ಹಿಂದೆ ಎರಡು ಬಾರಿ ಮನೆಯೊಳಗೆ ಬಂದು ಸುಮಿತ್ರಮ್ಮನನ್ನು ನಖಶಿಕಾಂತ ಬೆದರಿಸಿ ಹೋಗಿದ್ದ ಅದೇ ಸರ್ಪವು ಇವತ್ತು ಅವರ ಮನೆಯೊಳಗೆ, ಮುಖ್ಯ ದ್ವಾರದ ಗೋಡೆಯ ಮೂಲೆಯಲ್ಲಿ ಮೈಯೊಡ್ಡಿ ಮಲಗಿತ್ತು. ಆದರೆ ಸುಮಿತ್ರಮ್ಮನ ಆಕಸ್ಮಿಕ ಪ್ರವೇಶದಿಂದ ಬೆಚ್ಚಿಬಿದ್ದು ಎದ್ದ ಹಾವು ಇಂದು ಕೂಡಾ ತನ್ನ ಅತೀ ಸಮೀಪದಲ್ಲಿ ಅವರನ್ನು ಕಂಡದ್ದು ದಿಕ್ಕು ತೋಚದೆ ಭೀಕರವಾಗಿ ಬುಸುಗುಟ್ಟುತ್ತ ಹೆಡೆಯೆತ್ತಿ ನಿಂತುಬಿಟ್ಟಿತು. ಹಾವನ್ನು ಕಂಡ ಸುಮಿತ್ರಮ್ಮನಿಗೆ ಕಣ್ಣು ಕತ್ತಲಿಟ್ಟಿತು. ಜೋರಾಗಿ ಚೀರಿ ಅಂಗಳಕ್ಕೆ ಜಿಗಿದರು. ಅದನ್ನು ಕಂಡ ಹಾವು ಇನ್ನಷ್ಟು ಕಂಗಾಲಾಗಿ ಸರ್ರನೇ ಹೆಡೆಯನ್ನು ಮಡಚಿ ಉಸಿರುಗಟ್ಟುವಂತಿದ್ದ ತನ್ನ ಉಬ್ಬಿದ ಹೊಟ್ಟೆಯನ್ನು ಕಷ್ಟಪಟ್ಟು ಎಳೆದುಕೊಂಡು ಸರಸರನೇ ಹೊರಗೆ ಹರಿದು ಕಣ್ಮರೆಯಾಯಿತು. ಹಾವು ಹೊರಟು ಹೋದುದನ್ನು ಕಂಡ ಸುಮಿತ್ರಮ್ಮ ತೆಂಗಿನ ಕಟ್ಟೆಯ ಮೇಲೆ ಕುಸಿದು ಕುಳಿತು ಅಳತೊಡಗಿದರು. ಸ್ವಲ್ಪಹೊತ್ತಲ್ಲಿ ಸಮಾಧಾನಗೊಂಡವರಿಗೆ ಆ ಹಾವಿನ ಹೊಟ್ಟೆಯು ಉಬ್ಬಿದ್ದುದು ಕಣ್ಣ ಮುಂದೆ ಸುಳಿಯಿತು. ತಟ್ಟನೆ ಏನೋ ಅನುಮಾನ ಬಂದು ಗಡಿಬಿಡಿಯಿಂದೆದ್ದು ಒಳಗೆ ಧಾವಿಸಿದರು. ಆದರೆ ಅಲ್ಲಿನ ದೃಶ್ಯವನ್ನು ಕಂಡು ಕಂಗಾಲಾದರು!    ‘ವಯಸ್ಸಾದ ಅಪ್ಪ ಅಮ್ಮನಿಂದ ತಾನೂ, ತಮ್ಮನೂ ಸಂಸಾರ, ದುಡಿಮೆ ಅಂತ ಯಾವಾಗಲೂ ದೂರವೇ ಇರುತ್ತೇವೆ. ಆದ್ದರಿಂದ ಅವರಿಗೆ ನಮ್ಮ ನೆನಪು ಬಂದಾಗಲೆಲ್ಲ ಈ ಬೆಕ್ಕಿನ ಮೂಲಕವಾದರೂ ಸ್ವಲ್ಪ ನೆಮ್ಮದಿ ಕಾಣಲಿ!’ ಎಂದುಕೊಂಡು, ಮುಂಬೈಯಲ್ಲಿದ್ದ ಸುಮಿತ್ರಮ್ಮನ ಮಗಳು ಹೊರ ದೇಶದ ತಳಿಯೊಂದರ ಮರಿಯನ್ನು ಹದಿನೈದು ಸಾವಿರ ರೂಪಾಯಿ ಕೊಟ್ಟು ತಂದು ಹೆತ್ತವರಿಗೆ ಪ್ರೀತಿಯಿಂದ ಉಡುಗೊರೆ ನೀಡಿದ್ದಳು. ಸುಮಿತ್ರಮ್ಮನೂ ಅದನ್ನು ಬಹಳ ಅಕ್ಕರೆಯಿಂದ ಸಾಕಿ ಬೆಳೆಸಿದ್ದರು. ಅಂಥ ಬೆಕ್ಕು ಇವತ್ತು ಅವರ ಕಣ್ಣಮುಂದೆಯೇ ಮಲಮೂತ್ರ ವಿಸರ್ಜನೆ ಮಾಡಿಕೊಂಡು ಸತ್ತುಬಿದ್ದಿತ್ತು! ಅದಕ್ಕೆ ಹಾವು ಕಚ್ಚಿರುವುದು ಖಚಿತವಾಗಿ ದುಃಖದಿಂದ ಅವರ ಕರುಳು ಹಿಂಡಿದಂತಾಗಿ ಅದನ್ನು ಪ್ರೀತಿಯಿಂದ ಎತ್ತಿಕೊಳ್ಳಲು ಮನಸ್ಸು ತುಡಿಯಿತು. ಆದರೆ ಹಾವು ಕಚ್ಚಿದ್ದನ್ನು ನೆನೆದವರಿಗೆ ಅದನ್ನು ಮುಟ್ಟಲೇ ಭಯವಾಯಿತು. ರಪ್ಪನೆ ಬೆಕ್ಕಿನ ಕಳೇಬರದ ಪಕ್ಕ ಕುಸಿದು ಕುಳಿತು, ‘ಅಯ್ಯಯ್ಯೋ ದೇವರೇ…!’ ಎಂದು ಗೋಳಿಟ್ಟರು. ಅಷ್ಟರಲ್ಲಿ ಬೆಕ್ಕಿನ ಮರಿಗಳ ನೆನಪಾಯಿತು. ಅಳುತ್ತಲೇ ಅವುಗಳ ಕೋಣೆಗೆ ಓಡಿದರು. ಅಲ್ಲಿ ಎರಡು ದಿನಗಳ ಹಿಂದಷ್ಟೇ ಕಣ್ಣು ಬಿಟ್ಟಿದ್ದ ಮೂರು ಮರಿಗಳಲ್ಲಿ ಎರಡು ಮರಿಗಳು ಕಾಣೆಯಾಗಿದ್ದವು! ಒಂದು ಮರಿ ಮಾತ್ರ ಯಾವುದರ ಪರಿವೆಯೂ ಇಲ್ಲದೆ ಗಾಢ ನಿದ್ದೆಯಲ್ಲಿತ್ತು. ಅದನ್ನು ಕಂಡು ಮತ್ತೊಮ್ಮೆ ರೋಧಿಸಿದರು. ಮರುಕ್ಷಣ ಅವರಿಗೆ ಆ ಹಾವನ್ನು ಬೆನ್ನಟ್ಟಿ ಹೋಗಿ ಹಿಡಿದು ಚಚ್ಚಿ ಕೊಲ್ಲುವಷ್ಟು ಕೋಪ ಉಕ್ಕಿತು. ಆದರೆ ಅದು ಸಾಧ್ಯವಿರಲಿಲ್ಲವಾದ್ದರಿಂದ, ‘ಆ ಹಾವಿನ ಸಂತಾನವೂ ನಿಸ್ಸಂತಾನವಾಗಿ ಹೋಗಲಿ…!’ ಎಂದು ಶಪಿಸಿದರು. ಅಷ್ಟರಲ್ಲಿ ಅವರಿಗೊಂದು ಸಂಗತಿ ಹೊಳೆಯಿತು. ಅಂದರೆ, ಇಷ್ಟು ದಿನಗಳಿಂದ ಆ ಹಾವು ನನ್ನ ಬೆಕ್ಕಿನ ಮರಿಗಳನ್ನು ತಿನ್ನುವುದಕ್ಕಾಗಿಯೇ ಹಠ ಹಿಡಿದು ಒಳಗೆ ಬರುತ್ತಿದ್ದುದಾ…? ಎಂದು ಯೋಚಿಸಿದವರಿಗೆ ಒಮ್ಮೆಲೇ ಆಘಾತವಾಯಿತು! ಅಯ್ಯೋ, ಪರಮಾತ್ಮಾ…! ಇಂಥದ್ದೊಂದು ಹಾಳು ಸರೀಸೃಪವನ್ನೂ ತಾನು ದೇವರು ದಿಂಡರು ಅಂತ ಅಂದುಕೊಂಡಿದ್ದಲ್ಲದೇ ಅದನ್ನೇ ಊರಿಡೀ ಜಾಗಟೆ ಬಾರಿಸಿಕೊಂಡು ತಿರುಗಾಡಿದೆನಲ್ಲಾ…? ಎಂದೆನ್ನಿಸಿ ನಾಚಿಕೆ, ಅವಮಾನದಿಂದ ಹಿಡಿಯಾದರು. ಆದರೆ ಮರುಕ್ಷಣ, ‘ಛೇ, ಛೇ! ತಪ್ಪು ತಪ್ಪು! ಅಷ್ಟು ಬೇಗ ಯಾವ ನಿರ್ಧಾರಕ್ಕೂ ಬರಬೇಡ ಸುಮಿತ್ರಾ!’ ಎಂದು ಅವರೊಳಗೆ ಯಾರೋ ಜೋರಾಗಿ ಗದರಿಸಿದಂತಾಯಿತು. ಹಾಗಾಗಿ ಮರಳಿ ಭಯವೋ, ಪಶ್ಚಾತ್ತಾಪವೋ ತಿಳಿಯದೆ ನೊಂದುಕೊಂಡರು. ಬಳಿಕ ಮತ್ತೆ, ಯಾಕೆ, ಯಾಕೆ ಅಂದುಕೊಳ್ಳಬಾರದು? ಆ ಹಾವು ನಿಜಕ್ಕೂ ದೇವರ ಹಾವೇ ಆಗಿದ್ದಿದ್ದರೆ ತಾನು ತನ್ನ ಮಗುವಿಂತೆ ಸಾಕಿ ಬೆಳೆಸಿದ ಬೆಕ್ಕನ್ನು ಕಚ್ಚಿ ಸಾಯಿಸಿ ಅದರ ಮರಿಗಳನ್ನೂ ಕೊಂದು ತಿಂದು ಹೋಗುತ್ತಿತ್ತಾ…? ಎಂದು ಕೋಪದಿಂದ ಅವುಡುಗಚ್ಚಿದರು.    ಮತ್ತೆ ಯೋಚನೆ ಬಂತು. ಅಯ್ಯೋ ಭಗವಂತಾ…! ನಮ್ಮ ಹಿರಿಯರು ಅನಾದಿಕಾಲದಿಂದಲೂ ನಾಗದೇವರು ಎಂದು ಪೂಜಿಸುತ್ತ ಬಂದಿರುವ ಹಾವೊಂದು ಬೆಕ್ಕಿನ ಮರಿಗಳನ್ನೂ ತಿನ್ನುತ್ತದಾ…!? ಥೂ, ಥೂ, ಏನಿದು ಅಸಹ್ಯ! ಇಂಥ ಹಾವಿನ ಬಗ್ಗೆಯೂ ತಾನು ಬೇಡದಿದ್ದನ್ನೆಲ್ಲ ಊಹಿಸಿಕೊಂಡು ಅದೇ ಸಂಶಯವನ್ನು ನಿವಾರಿಸಿಕೊಳ್ಳಲು ಆ ಕಳ್ಳ ಗುರೂಜಿಯಲ್ಲಿಗೂ ಹೋಗಿ ಬಂದೆನಲ್ಲ…! ಆ ಮನುಷ್ಯನಾದರೂ ಏನು ಮಾಡಿದ? ಬಣ್ಣಬಣ್ಣದ ಮಾತಾಡಿ ನಮ್ಮಿಂದ ಲಕ್ಷಗಟ್ಟಲೆ ಸುಲಿದವನು ಈಗ ಮತ್ತೆ ನಾಗಬನ ಜೀರ್ಣೋದ್ಧಾರದ ಹೆಸರಿನಲ್ಲೂ ಊರಿನವರನ್ನೆಲ್ಲ ನುಣ್ಣಗೆ ಬೋಳಿಸಲು ಹೊರಟಿದ್ದಾನೆ ಅವಿವೇಕಿ! ಎಂದು ಗುರೂಜಿಯ ಮೇಲೂ ಕಿಡಿಕಾರಿದರು. ಆದರೆ ಬಳಿಕ, ಥೂ! ತಾನಾದರೂ ಮಾಡಿದ್ದೇನು? ಹಾವು ಮನೆಯೊಳಗೆ ಹೊಕ್ಕಿದ್ದನ್ನು ವಠಾರವಿಡೀ ಟಾಂ! ಟಾಂ! ಮಾಡಿಕೊಂಡು ಬಂದೆನಲ್ಲದೇ ಅದೇ ವಿಚಾರವಾಗಿ ಆ ಬಡಪಾಯಿ ರಾಧಾಳ ಕುಟುಂಬವನ್ನೂ ಅನಾವಶ್ಯಕವಾಗಿ ನೋಯಿಸಿಬಿಟ್ಟೆ. ಪಾಪ ಅವರು ಯಾರಿಗೇನು ಅನ್ಯಾಯ ಮಾಡಿದ್ದರು!’ ಎಂದು  ತೊಳಲಾಡುತ್ತ ಕಣ್ಣೀರಿಟ್ಟರು.     ಆದರೂ ವಯಸ್ಸಾದ ಅವರ ಮನಸ್ಸು ಅಷ್ಟುಬೇಗನೇ ತಮ್ಮ ಪೂರ್ವಿಕರ ನಂಬಿಕೆ ಮತ್ತು ಸಂಪ್ರದಾಯಗಳನ್ನು ನಿರಾಕರಿಸಲು ಒಪ್ಪಲಿಲ್ಲ. ಆದ್ದರಿಂದ ಈ ಸರೀಸೃಪಜೀವಿಯು ನಾಗನಲ್ಲದಿದ್ದರೇನಾಯ್ತು? ನಮ್ಮವರು ತಲೆತಲಾಂತರದಿಂದ ಪೂಜಿಸಿಕೊಂಡು ಬಂದಂಥ ಆ ನಾಗಶಕ್ತಿಯೊಂದನ್ನು ಮನುಷ್ಯ ಮಾತ್ರನಿಂದ, ‘ಇಲ್ಲ!’ ಎನ್ನಲು ಸಾಧ್ಯವಿದೆಯಾ? ಆ ದೈವಶಕ್ತಿಯು ಖಂಡಿತಾ ಇದೆ. ಅಷ್ಟು ತಿಳಿಯದೆ ನಮ್ಮ ಹಿರಿಯರು ಅವನನ್ನು ನಂಬಿ ಪೂಜಿಸಿಕೊಂಡು ಬಂದಿದ್ದಾರಾ…? ಏನೇ ಇರಲಿ. ನಮ್ಮ ಸನಾತನ ಸಂಪ್ರದಾಯವನ್ನು ನಾವು ಎಂದಿಗೂ ಮರೆಯಬಾರದು ಮತ್ತು ಬಿಟ್ಟುಕೊಡಲೂಬಾರದು. ಇನ್ನು ಮುಂದೆ ತಾನು ಆಚರಿಸುವ ಪೂಜೆ ಪುನಸ್ಕಾರಗಳೇನಿದ್ದರೂ ಆ ಅವ್ಯಕ್ತಶಕ್ತಿ ನಾಗದೇವನಿಗೆಂದೇ ಭಾವಿಸಿದರಾಯ್ತು ಎಂದು ಯೋಚಿಸಿ ಸ್ವಲ್ಪ ಸಮಾಧಾನಚಿತ್ತರಾದ ಸುಮಿತ್ರಮ್ಮ ಕೂಡಲೇ ಗಂಡನಿಗೆ ಕರೆ ಮಾಡಿ ಅಳುತ್ತ ವಿಷಯ ತಿಳಿಸಿದರು. (ಮುಂದುವರೆಯುವುದು) ಗುರುರಾಜ್ ಸನಿಲ್

Read Post »

You cannot copy content of this page

Scroll to Top