ಜುಗಲ್ ಬಂದಿ ಗಜಲ್
ಮೌನ ಚೂರಿ ಇರಿತವನು ಸಹಿಸುವುದು ರೂಢಿಯಾಗಿದೆ
ಹಸಿ ಗಾಯಕೆ ದಿನವು ಉಪ್ಪು ಹಚ್ಚುವುದು ರೂಢಿಯಾಗಿದೆ
ಒಲವ ರವಿ ಅಸ್ತಂಗತನಾಗಿ ಸಂತಸವು ಮರೆಯಾಗಿದೆ
ಹಣತೆ ಮುಂದೆ ಚಿಟ್ಟೆಯಂತೆ ಕುಣಿಯುವುದು ರೂಢಿಯಾಗಿದೆ
ದಿಗಂತದಲಿ ಮೂಡಿದ ಕಾಮನ ಬಿಲ್ಲು ಹಿಡಿಯ ಬಯಸಿದೆ
ಸುಂದರ ಕನಸುಗಳನು ದಿನ ಹೂಳುವುದು ರೂಢಿಯಾಗಿದೆ
ಎದೆಯಲಿ ಉರಿಯುವ ನೋವುಗಳ ಹೊಗೆ ಕಂಬನಿ ಸುರಿಸುತಿದೆ
ಸದಾ ನಗುವ ಮುಖವಾಡ ಧರಿಸುವುದು ರೂಢಿಯಾಗಿದೆ
ತನುವು ಅನುರಾಗದ ರೇಶ್ಮೆ ಸುಪ್ಪತ್ತಿಗೆ ಹಂಬಲಿಸಿತು
ಮುಳ್ಳು ಮಂಚದಲಿ ಮಗ್ಗಲು ಮಲಗುವುದು ರೂಢಿಯಾಗಿದೆ
ತೊಟ್ಟ ತುಂಡು ಬಟ್ಟೆಯ ಅಂದಕೆ ಜಗವು ಮರುಳಾಗುವುದು
ಹೃದಯ ಪ್ರೀತಿಯ ಬಟ್ಟೆ ಬದಲಿಸುವುದು ರೂಢಿಯಾಗಿದೆ
ಉಸಿರೊಂದು ಇರಳು ಆಯಾಸದ ಮಡುವಿನಲಿ ನರಳುತಿದೆ
ಬದುಕಲಿ ನೆಮ್ಮದಿಯ” ಪ್ರಭೆ”ಕಾಯುವುದು ರೂಢಿಯಾಗಿದೆ
************
ಪ್ರಭಾವತಿ ಎಸ್ ದೇಸಾಯಿ
ಹೂವಿನಂತೆ ಮುಳ್ಳನು ಪ್ರೀತಿಸುವುದು ರೂಢಿಯಾಗಿದೆ
ಕುಟುಂಬದ ಏಳಿಗೆಗೆ ಬಲಿಯಾಗುವುದು ರೂಢಿಯಾಗಿದೆ
ಕಲಬೆರಕೆಯ ಕರಾಳತೆಯಲಿ ನೆಮ್ಮದಿ ಮೂಲೆ ಹಿಡಿದಿದೆ
ಯಾರದೊ ಸಂತಸಕ್ಕಾಗಿ ನಲುಗುವುದು ರೂಢಿಯಾಗಿದೆ
ಮೌಲ್ಯಗಳ ಭಾರವ ಹೊರಲು ಹೋದದ್ದು ನನ್ನದೆ ತಪ್ಪು
ಹೃದಯವನು ಗೋರಿಯಂತೆ ಪೂಜಿಸುವುದು ರೂಢಿಯಾಗಿದೆ
ನನ್ನೆದೆಯು ಒಲೆಯಾಗಿದೆ ಹಸಿದವರ ಮೈ ಮನಸುಗಳಿಗೆ
ಬದುಕಲು ನಿತ್ಯವು ಕಂಬನಿ ಸವಿಯುವುದು ರೂಢಿಯಾಗಿದೆ
ಬುದ್ಧಿಯೂ ಚಂಚಲವಾಗುತಿದೆ ಕಾಲದ ಕೊಡುಗೆಯಾಗಿ
ಬೆಳೆಯುವ ಹಂಬಲದಲಿ ಮೌನವಿರುವುದು ರೂಢಿಯಾಗಿದೆ
ತನು-ಮನದ ಮೈಲಿಗೆಯನು ಬಟ್ಟೆಗಳು ತೊಳೆಯುತಿವೆ ಇಲ್ಲಿ
ನಕಲಿಗಳ ಜೊತೆಯಲಿ ಹೆಜ್ಜೆ ಹಾಕುವುದು ರೂಢಿಯಾಗಿದೆ
‘ಮಲ್ಲಿ’ಗೆ ಮೊಗ್ಗುಗಳು ಉದುರಿ ಅವನಿಯನು ಸಿಂಗರಿಸುತಿವೆ
ನನಗೆ ಮಸಣದ ನಡುವೆ ಉಸಿರಾಡುವುದು ರೂಢಿಯಾಗಿದೆ
***********
ರತ್ನರಾಯಮಲ್ಲ
ಎರಡೂ ಗಜಲ್ ಗಳು ಚಂದ
ಎರಡೂ ಗಜಲ್ ಸೊಗಸಾಗಿವೆ.ಇಬ್ಬರಿಗೂ ಅಭಿನಂದನೆಗಳು
ಚಂದದ ಜುಗಲ್ ಬಂಧಿ ಇಬ್ಬರಿಗೂ ಅಭಿನಂದನೆಗಳು
ಮಂತ್ರ ಮುಘ್ದ ಮಾಡಿವೆ ಮಂತ್ರಿಕರಾ ಗಜಲ್
ಏರಿವೆ ಸಹಜವೇ ಮುಗಿಲೆತ್ತರದಾ ಮಜಲ್
ಸಹಜ ವಾದ ಶಬ್ದ ರಚನೆ ಸುಂದರ ಬಲು ಹಂದರಾ
ಜೀವನದ ಸತ್ಯಕ್ಕೆ ಕನ್ನಡಿ ನಿಮ್ಮದೇ ಗಜಲ್