ಅನುವಾದ ಸಂಗಾತಿ
ಸಂಧ್ಯಾ ಸಮಸ್ಯೆಗಳು
ತೆಲುಗು ಮೂಲ: ಮಹಾಕವಿ ಶ್ರೀ ಶ್ರೀ
ಆಕರ : ಮಹಾ ಪ್ರಸ್ಥಾನಂ (ಕವನ ಸಂಕಲನ)
ಕನ್ನಡಕ್ಕೆ : ಧನಪಾಲ ನಾಗರಾಜಪ್ಪ
ಸಾಯಂಕಾಲ…
ರಾಕ್ಸಿಯಲಿ ನಾರ್ಮಾ ಷೇರರ್
ಬ್ರಾಡ್ವೇಯಲಿ ಕಾಂಚನಮಾಲ!
ಎಲ್ಲಿಗೆ ಹೋಗಬೇಕೆಂಬ ಸಮಸ್ಯೆ
ಕಾಡಿತ್ತೊಬ್ಬ ವಿದ್ಯಾರ್ಥಿಗೆ!
ಉಡುಪಿ ಶ್ರೀಕೃಷ್ಣ ವಿಲಾಸದಲಿ
ಅತ್ತ ನೋಡಿದರೆ ಬಾದಮ್ ಹಲ್ವ
ಇತ್ತ ನೋಡಿದರೆ ಶಾವಿಗೆ ಇಡ್ಲಿ!
ಏನು ಆರಿಸಿಕೊಳ್ಳಬೇಕೆಂಬ ಸಮಸ್ಯೆ
ಸತಾಯಿಸಿತ್ತೊಬ್ಬ ಉದ್ಯೋಗಿಗೆ!
ಆ ಸಾಯಂಕಾಲ…
ಇತ್ತ ನೋಡಿದರೆ ಸಾಲ ಕೊಟ್ಟವರು
ಅತ್ತ ನೋಡಿದರೆ ಮಕ್ಕಳ ಹಸಿವು!
ನೇಣು ಹಾಕಿಕೊಂಡು ಸಾಯುವುದೋ
ಸಮುದ್ರಕ್ಕೆ ಬೀಳುವುದೋ
ಸಮಸ್ಯೆಯಾಗಿ ಕಗ್ಗಂಟಾಯಿತ್ತೊಬ್ಬ ಸಂಸಾರಿಗೆ!
ಟಿಪ್ಪಣಿಗಳು:-
- ರಾಕ್ಸಿ ಮತ್ತು ಬ್ರಾಡ್ವೇ – ಇವು ಚಲನಚಿತ್ರ ಮಂದಿರಗಳು.
- ನಾರ್ಮಾ ಷೇರರ್ – ಹಾಲಿವುಡ್ ಕಥಾ ನಾಯಕಿ.
- ಕಾಂಚನಮಾಲ – ಟಾಲಿವುಡ್ ಕಥಾ ನಾಯಕಿ.
- —————————
ಸಂಗಾತಿ ಬಳಗಕ್ಕೆ ಧನ್ಯವಾದಗಳು