ಪುಸ್ತಕ ಸಂಗಾತಿ

 ಮಲ್ಲಿಗೆಯ ಬನದೊಳಗೆ ತೇಲಿಬಂದ

ಸಾಮಾಜಿಕ ಚಿಂತನೆಯ ಪರಿಮಳ

ಕಲಬುರ್ಗಿಯ ನೂತನ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿರುವ  ಡಾಕ್ಟರ ಮಲ್ಲಿನಾಥ ಎಸ್ ತಳವಾರ ಅವರು ರಚಿಸಿದ ಎರಡನೇ ಗಜಲ್ ಸಂಕಲನ ಮಲ್ಲಿಗೆ ಸಿಂಚನ ಗಾಲಿಬ್ ಸ್ಮೃತಿ ಮೂಲಕ ಗಜಲ್ ಎಂದರೇನು ಅದರ ಮೂಲ ಬೆಳವಣಿಗೆಯ ಹಂತ ಮತ್ತು ಉಚ್ಛ್ರಾಯ ಕಾಲ, ಅನ್ಯ ಭಾಷೆಗಳಲ್ಲಿ ಗಜಲ್ ಸಾಗಿ ಬಂದ ದಾರಿ ಮತ್ತು ಕನ್ನಡದಲ್ಲಿ ಅದು ಕಂಡುಕೊಂಡ ನೆಲೆ ಮುಂತಾದ ಹತ್ತು ಹಲವು ವಿಷಯಗಳ ಕುರಿತು ಪರಿಚಯಾತ್ಮಕ ಕೈಪಿಡಿಯಂತೆ ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ ಈಗ ಮೊದಲು ಕೈಗೊಂಡ ಅಧ್ಯಯನದ ಮುಂದುವರಿದ ಭಾಗವಾಗಿ ಮಲ್ಲಿಗೆ ಸಿಂಚನ ಕೃತಿ ರೂಪಗೊಂಡಿದೆ ಈ ಗಜಲ್ ಸಂಕಲನದಲ್ಲಿ ಸುಂದರವಾದ ಗಜಲ್ ಗಳನ್ನಲ್ಲದೆ ಗಜಲ್ ಸಾಹಿತ್ಯ ಪ್ರಕಾರದ ಕುರಿತು ಇನ್ನಷ್ಟು ಮಾಹಿತಿಗಳನ್ನು ಒದಗಿಸುತ್ತಿರುವುದು ಇವರ ಕೃತಿಗಳ ವಿಶೇಷತೆ. ಪ್ರಸ್ತುತ ಈ ಕೃತಿಯಲ್ಲಿ ಗಜಲ್ ನಲ್ಲಿ ಬಳಸುವ ಉರ್ದು ಪಾರಿಭಾಷಿಕ ಪದಗಳ ಕನ್ನಡ ಅರ್ಥ ಮತ್ತು ವಿವರಣೆಯನ್ನು ನೀಡಿದ್ದಾರೆ ಗಜಲ್ ಬರೆಯಲು ಆಶಿಸುವ ಹೊಸ ಬರಹಗಾರರು ಗಜಲ್ ನ ಮತ್ಲ, ಮಕ್ತಾ, ರದೀಫ, ಶೇರ್, ಈ ಪದಗಳ ಬಳಕೆ ಸಾಮಾನ್ಯ ಎನ್ನುವಂತೆ ಬಳಸುವದ ಕಂಡರೂ ಗಜಲ್ ಮೂಲಕ್ಕೆ ಇಳಿದಂತೆ ಇನ್ನೂ ಅನೇಕ ಪದಬಳಕೆ, ರಚನಾ ವಿಧಾನಗಳು ಅವುಗಳ ಹೆಸರು, ವ್ಯಾಕರಣ ಎಲ್ಲವೂ  ಉರ್ದು ಭಾಷೆಯಲ್ಲಿ ಹೇಳುವ ಪದಗಳು ವಿಭಿನ್ನ ಮತ್ತು ಅಷ್ಟೇ ಆಸಕ್ತಿದಾಯಕವಾಗಿವೆ. ಇದನ್ನೆಲ್ಲವನ್ನು ಗಜಲ್ ಪ್ರಿಯರ ಮನದಣಿಸಲು ಡಾಕ್ಟರ ಎಂ ಎಸ್ ತಳವಾರ ಅವರು ತಮ್ಮ ಅಧ್ಯನ ಶೀಲ ಪ್ರವೃತ್ತಿಯಿಂದ ಇದನ್ನು ಸಾಧ್ಯವಾಗಿಸಿದ್ದಾರೆ.

ಅವರೇ ಹೇಳುವಂತೆ ಯಾವುದೋ ಒಂದು ನಿರ್ದಿಷ್ಟವಾದ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಬಳಕೆಯಾಗುವ ವಿಶಿಷ್ಟ ಪದಗಳೇ ಪಾರಿಭಾಷಿಕ ಪದಗಳು ಎಂದು ಪಾರಿಭಾಷಿಕ ಪದದ ವ್ಯಾಖ್ಯಾನ ನೀಡಿದ್ದಾರೆ ಇಲ್ಲಿ ನೀಡಲಾದ ಪದಗಳು ನಿರ್ಧಿಷ್ಟವಾಗಿ ಗಜಲ್ ಸಾಹಿತ್ಯ ರಚನೆಯಲ್ಲಿ ಉರ್ದು ಭಾಷೆಯಲ್ಲಿ ಬಳಸುವ ಪದಗಳ ಅರ್ಥ ನೀಡಿರುವರು.

ಕನ್ನಡ ಪ್ರಾಧ್ಯಾಪಕ ವೃತ್ತಿಯಲ್ಲಿರುವ ಇವರ ಅನ್ಯ ಭಾಷಾ ಅಧ್ಯಯನ ಪ್ರೀತಿ ಮೆಚ್ಚುವಂತಹದ್ದು ಪ್ರಸ್ತುತ ಈ ಸಂಕಲನದಲ್ಲಿ ರತ್ಮರಾಯಮಲ್ಲ ಕವಿನಾಮ ಮತ್ತು ಮಲ್ಲಿ ಎಂಬ ಕಾವ್ಯನಾಮದಿಂದ ಅರವತ್ತು ಗಜಲ್ ಗಳನ್ನು ರಚಿಸಿರುವರು. ಪ್ರೀತಿಯ ಹೂದೋಟ ಎಂದು ಕರೆಸಿಕೊಳ್ಳುವ ಗಜಲ್ ಬನದಲ್ಲಿ ಬಹು ಸುಂದರವಾದ ಪ್ರೇಮ,ವಿರಹ ,ವಿರಸ ಸಮರಸ ಭಾವದ ಅನೇಕ ಗಜಲ್ ಗಳು ಅಲ್ಲದೆ ಅಷ್ಟೇ ಗಟ್ಟಿ ಬಂಧದಿಂದ ಹೆಣೆಯಲಾದ ಸಾಮಾಜಿಕ ದೃಷ್ಟಿಕೋನದ ಅನೇಕ ಗಜಲ್ ಗಳು ಅನುಪಮ ಶೇರ್ ಗಳು ಮೂಡಿಬಂದಿವೆ ಅವುಗಳ ಕುರಿತು ಒಂದು ಅವಲೋಕನ

ಇಲ್ಲಿನ ಮೊದಲನೇ ಗಜಲ್ ಶೂದ್ರ ಶ್ರೀನಿವಾಸ ಅವರ ರಚನೆಯ ಸಾಲೊಂದು ಪಡೆದು ರಚಿಸಿದ ತರಹಿ ಗಜಲ್ ಆಗಿದ್ದು ಅದು ಸಾಮಾಜಿಕ ವೈರುಧ್ಯ ಮತ್ತು ಇಲ್ಲಿನ ದಬ್ಬಾಳಿಕೆಯನ್ನು ಕವಿ ನಾಜೂಕಿನಿಂದ ವಿಡಂಬಿಸುತ್ತ ಬರೆದ ಮೊದಲ ಗಜಲ್ ಆಗಿದೆ

ದಾಪುಗಾಲಿನವರು ಬಂದರು ತುಳಿದರು

ದಬ್ಬಾಳಿಕೆಯ ಹಾದಿ ನಿರ್ಮಿಸಿ ಹೋದರು

ಇಲ್ಲಿನ ಶೇರ್ ಯಾವುದೇ ನಿರ್ದಿಷ್ಟ ಜಾತಿ,ಜನಾಂಗ,ದೇಶಿಯರು ವಿದೇಶಿಯರು ಇದು ಯಾವುದನ್ನು ಉಲ್ಲೇಖಿಸುವದಿಲ್ಲ ಅದು ಅವಶ್ಯವು ಅಲ್ಲ ಆದರೆ ಅದನ್ನೇ ಕವಿ ದಾಪುಗಾಲಿನವರು ಎಂದು ಹೆಸರಿಸುವ ಮೂಲಕ ಕೊಟ್ಟ ಪೆಟ್ಟು ಇದೆಯಲ್ಲ ಅದು ತುಂಬಾ ಪರಿಣಾಮಕಾರಿ ಪದವಾಗಿದೆ, ಬಂದರು ತುಳಿದರು ದಬ್ಬಾಳಿಕೆಯ ಹಾದಿಯನ್ನು  ನಿರ್ಮಿಸಿ ಹೋದರು ಈ ದಬ್ಬಾಳಿಕೆಯ ನೀತಿ ಇಲ್ಲಿ ಹುಟ್ಟಿದ್ದು ಅಲ್ಲ ಅದು ಅನ್ಯರಿಂದ ನಾವು ಉಂಡದ್ದು ಮತ್ತು ಕಲಿತುಕೊಂಡದ್ದು ಎನ್ನುತ್ತಲೇ ಇಡೀ ಗಜಲ್ ದಬ್ಬಾಳಿಕೆಯ ಮನಸ್ಥಿತಿಯಿಂದಾದ ಅವಾಂತರಗಳನ್ನು ಮನಮುಟ್ಟುವಂತೆ

ಪ್ರತಿ ಶೇರ್ ನಲ್ಲಿ ಪ್ರತಿಬಿಂಬಿಸುತ್ತದೆ.

ಕಳ್ಳನೆಂದು ಕೂಗಿದವರ್ಯಾರು ಕದ್ದದ್ದನ್ನು ನೋಡುವುದಿಲ್ಲ

ಕಲ್ಲು ಎಸೆದವರ್ಯಾರು ಅದರ ಕಾರಣವನ್ನು ತಿಳಿಯುವುದಿಲ್ಲ.

ಒಬ್ಬ ಮನುಷ್ಯನ ಒಳ್ಳೆಯತನ ಗುರುತಿಸುವಲ್ಲಿ ಸಮಾಜ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಆದರೆ ಅವಗುಣಗಳನ್ನು ಬಹುಬೇಗನೆ ಗುರುತಿಸುತ್ತದೆ ಮತ್ತು ಪಸರಿಸುತ್ತದೆ.ಹಿನ್ನೆಲೆ ಮುನ್ನೆಲೆಗಳ ವಿಚಾರಮಾಡದೆ ಬಹುಬೇಗನೆ ಸಣ್ಣ ಅಪರಾದಕ್ಕು ಅಮಾನವೀಯ ಶಿಕ್ಷೆಗೆ ಒಳಪಡಿಸುವ ಸಮಾಜದ ನಡೆಯನ್ನು ಕವಿ ಈ ಶೇರ್ ನಲ್ಲಿ ಅಲ್ಲಗಳೆದಿದ್ದಾರೆ.

ಒದ್ದೆ ಮೈಯ ಬಿಸಿ ನೆತ್ತರು ಹೀರಲು ಹೊಂಚು ಹಾಕಿವೆ ಮುಖವಾಡದ ಮೃಗಗಳು

ಹಸಿವಿನ ಬಲೆಯ ನೇಯ್ದು ಒಡಲು ತುಂಬಿಸುವ ಆಮೀಷ ಒಡ್ಡುತ್ತಿದ್ದವು ಸಾಕಿ

ಸುಂದರ ಜೀವನದಿಂದ ವಂಚಿತರಾಗಿ ದೇಹವ್ಯಾಪಾರಗಳ ಬಲೆಯಲ್ಲಿ ಸಿಲುಕಿ ನರಳುತ್ತಿರುವ ಅಸಂಖ್ಯಾತ ಮಹಿಳೆಯರ ಅಂತಹ ದುರ್ಭರ ಜೀವನಕ್ಕೆ ಕಾರಣವನ್ನು ಮೇಲಿನ ಸಾಲುಗಳು ನೀಡುತ್ತವೆ ತಮ್ಮ ತೃಷೆಯನ್ನು ನೀಗಿಸಿಕೊಳ್ಳಲು ಅಮಾಯಕರ ಸುತ್ತ ಹಸಿವಿನ ಬಲೆ ಹೆಣೆದು ಬಿಸಿ ನೆತ್ತರು ಹೀರುವ ಹಿನ ಪ್ರವೃತ್ತಿಯನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ.

ಮೈತುಂಬ ಉಪವಾಸದ ಆಚರಣೆಗಳು ಇವೆ

ಮಕ್ಕಳು ಹಸಿವನ್ನು ಕಾಣಿಕೆಯಾಗಿ ಕೊಟ್ಟರು

ಅನೇಕ ದೇವರುಗಳಿಗೆ ಹರಕೆ ಹೊತ್ತು ಉಪವಾಸ,ವೃತ ಕೈಗೊಂಡು ಹಡೆದು ಎಂತೆಂತಹದ್ದೋ ಕಷ್ಟ ಕಾರ್ಪಣ್ಯ ಸಹಿಸಿ ಜೋಪಾನಮಾಡಿದ ಪಾಲಕರಿಗೆ ಮಕ್ಕಳು ಹಸಿವನ್ನು ಕಾಣಿಕೆಯಾಗಿ ಕೊಟ್ಟರು ಎಂದು ಕವಿ ಇಂದಿನ ಕಾಲದ ವಿಪರ್ಯಾಸ ಮತ್ತು ವೃದ್ದರಾದ ಹಿರಿಯರ ಕುರಿತು ನಮಗಿರುವ ಅನಾದರವನ್ನು ಇಲ್ಲಿ ವಿಡಂಬಿಸಿರುವರು. ಅಲ್ಲದೆ ನಾವು ಮುಂದೆ ಸಾಗಬೇಕಾದ ನಡೆಯನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸುವಂತೆ ಮಾಡಿದ್ದಾರೆ.

ಮನುಷ್ಯನಿಗೆ ಮುದ ನೀಡುವ ಶಕ್ತಿ ಇರುವುದು ಪ್ರಕೃತಿಗೆ

 ನೆಮ್ಮದಿಯ ಬಾಳು ಸಾಗಿಸಲು ಬೇಕು ನಮಗೆ ಹಸಿರು

ಹದಗೆಡುತ್ತಿರುವ ಇಂದಿನ ಪರಿಸರ ಮತ್ತು ವಹಿಸಬೇಕಾದ ಕಾಳಜಿಯ ಕುರಿತು ಮೇಲಿನ ಶೇರ್ ಮಾತನಾಡುತ್ತ ಮನುಷ್ಯ ಬದುಕಿನಲ್ಲಿ ಅನೇಕ ಆಸೆ,ಆಕಾಂಕ್ಷೆ,ಕನಸು,ಹಣ ಇಂತಹ ಯಾವುದನ್ನು ಬೆನ್ನುಹತ್ತಿದರೂ ಅವುಗಳನ್ನು ಪಡೆದುಕೊಂಡರೂ ಮನುಷ್ಯ ಸುಖಿಯಾಗಿರಲಾರ ಆದರೆ ಅವನಿಗೆ ನಿರಮ್ಮಳ ಸುಖ ನೀಡುವುದು ಪ್ರಕೃತಿಯ ಮಡಿಲು ಮಾತ್ರ ಅದನ್ನು ಅನುಭವಿಸಲು, ಮುಂದಿನ ಪೀಳಿಗೆಗೆ ಆ ಸುಖವನ್ನು ಪರಿಚಯಿಸಲು ನಾವು ಪರಿಸರವನ್ನು ಉಳಿಸಬೇಕಾಗಿದೆ ಎನ್ನುವರು

ಹೆರಿಗೆಯ ದಿನಗಳು ಸ್ಥಾನ ಪಲ್ಲಟವಾಗುತಿವೆ

ವಾರ ತಿಥಿಗಳು ಇಲ್ಲ ಸಾಯುವುದಕ್ಕೆ ಗೆಳತಿ

ಇತ್ತೀಚಿಗೆ ಸಹಜ ಹೆರಿಗೆ ಕಡಿಮೆಯಾಗಿ ಶಸ್ತ್ರ ಚಿಕಿತ್ಸೆಯ ಹೆರಿಗೆಗಳು ಹೆಚ್ಚುತ್ತಿವೆ, ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಜೀವ ರಕ್ಷಣೆಯ ತುರ್ತು ಅಗತ್ಯವಾಗಿದೆ ಬಳಕೆಯಾಗುತ್ತಿದ್ದ ಶಸ್ತ್ರ ಚಿಕಿತ್ಸೆ ಇಂದು ಒಳ್ಳೆಯ ಮಹೂರ್ತ,ನಕ್ಷತ್ರ,ವಾರ,ಇಂತಹ ವಿಚಾರಗಳಿಗೆ ಒಳಪಟ್ಟು ತಾವು ಇಚ್ಛಿಸಿದ ದಿನದಂದೇ ತಮ್ಮ ಮಕ್ಕಳ ಜನುಮದಿನ ನಿರ್ಧಾರವಾಗುತ್ತಿದೆ ಆದರೆ ತಮ್ಮದೇ ಮರಣ ದಿನ ಅರಿಯದಂತೆ ಕಾಲನು ಅದನ್ನು ಗುಟ್ಟಾಗಿಯೇ ಇಟ್ಟಿರುವನು. ಅದನ್ನು ಅರಿಯದ ಮೂಢನೇನಲ್ಲ ಮನುಷ್ಯ ಆದರೂ ಮನುಷ್ಯನ ನಡೆಯಬಗ್ಗೆ ಕವಿಗೆ ಮರುಕವಿದೆ.

ನೀರಿಗಿಂತ ರಕುತ ಗಟ್ಟಿ ಎನ್ನುವರು ಬಲ್ಲವರು

ರಕ್ತ ಹೊಳೆಯಾಗಿ ಹರಿಯುತಿದೆ ದುಡ್ಡಿಗಾಗಿ

ಇಂದು ಸಂಬಂದಗಳಿಗಿಂತ ಹಣಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದನ್ನು ಕಾಣಬಹುದು ಅದಕ್ಕಾಗಿ ರಕ್ತದ ಹೊಳೆ ಹರಿಯುತ್ತಿದೆ, ದೂರದ ಸಂಬಂಧಿಗಳು ಅಲ್ಲದೆ ಅತೀ ಹತ್ತಿರದ ಸಂಬಂಧಗಳು ಕೂಡ ಈ ಹಣದ ಅಹಮಿಕೆಯಿಂದ ನರಳುತ್ತಿವೆ ಇದು ಆಧುನಿಕ ಮನಸ್ಥಿತಿಯ ವಿಪರ್ಯಾಸ.

ಕಂಬನಿಯನ್ನು ಒರೆಸುವ ಬೆರಳುಗಳು ದೂರವಾಗಿವೆ ಇಂದು

ಹೃದಯ ಬಡಿತ ಆಲಿಸುವ ಬೆರಳುಗಳು ದೂರವಾಗಿವೆ ಇಂದು. ಎನ್ನುವ ಈ ಶೇರ್ ಕೂಡ ಇಂದಿನ ದಿನಗಳಲ್ಲಿ ಮನುಷ್ಯರಲ್ಲಿ ಬದಲಾಗುತ್ತಿರುವ ಸಂಬಂಧಗಳ ಜಾಲಗಳ ಸಡಿಲತೆಯನ್ನು ತೆರೆದಿಡುತ್ತದೆ.

ಆಗಸದಲ್ಲಿ ನೇಸರ ಹುಟ್ಟುತ್ತಿದ್ದಾನೆ ನೋಡಿ

ಕನಸುಗಳ ಮೂಟೆ ತರುತ್ತಿದ್ದಾನೆ ನೋಡಿ

ಇಂದಿನ ಸಾಮಾಜಿಕ ವೈಪರೀತ್ಯಗಳನ್ನು ತೆರೆದಿಡುತ್ತಲೇ ಹೊಸ ಭರವಸೆಗಳ ಸೆಳಕನ್ನು ಕಾಣಿಸುವ ಕಾಣುವ ಹಂಬಲವನ್ನು ಕವಿ ತೋರಿದ್ದಾರೆ ಬದಲಾವಣೆ ಜಗದ ನಿಯಮವಾಗಿರುವಾಗ ಇದು ಕೂಡ ಬದಲಾಗಲೇ ಬೇಕಲ್ಲ ಅದನ್ನು ಆಗಸದ ಸೂರ್ಯನೆಂದು ಹೊಸ ಬೆಳಕು ತರುವನೆಂಬ ಆಶಾಭಾವವಿಲ್ಲಿ ಕಾಣಬಹುದು. ಅದನ್ನು ಮನಗಾಣಿಸಲು ಈ ಶೇರ್ ರೂಪಗೊಂಡಿದೆ

ಹೆಮ್ಮೆಯ ಲೇಖಕಿ ಗೀತಾನಾಗಭೂಷಣ ಅವರ ಬದುಕು ಬರಹಗಳ ಕುರಿತು ಬರೆದ ಗಜಲ್ 8 ನಾವುಬದುಕುತ್ತಿರುವ ಸಮಾಜದ ಕುರಿತು ಲೇಖಕಿಯು ಅದನ್ನು ಸಮರ್ಥವಾಗಿ ತಮ್ಮ ಬರೆಹದಲ್ಲಿ ಪ್ರಕಟಿಸಿದ ಮನೋಸ್ಥೈರ್ಯದ ಕುರಿತು. ಪರಿಚಯಿಸುವ ಗಜಲ್ ಆಗಿದೆ.

ಗಜಲ್ 35  ಹೆಣ್ಣುಮಕ್ಕಳನ್ನು ತನ್ನವರೆ, ತನ್ನ ಹಿತ ಚಿಂತಕರು ಸಂಪ್ರದಾಯ, ಪರಂಪರೆಯ ಹೆಸರಿನಲ್ಲಿ ಹೇಗೆ ಅವಳ ಮನೋವಿಕಾಸವನ್ನು ,ಪ್ರಗತಿಯನ್ನು ನಯವಾಗಿಯೇ ನಿರ್ಬಂಧಿಸುತ್ತಾರೆ ಎನ್ನುವ ಸತ್ಯವನ್ನು ತೆರೆದಿಟ್ಟ ಎಲ್ಲ ಶೇರ್ ಗಳನ್ನು ಓದಿಯೇ ಅರಿಯಬೇಕೇ ಹೊರತು ಓದುಗ ಕೊಡುವ ವಿವರಣೆ ಅದರ ಮಹತ್ವವನ್ನು ಹೆಚ್ಚಿಸಲಾರದು.

ಬಿರುದು ಬಾವಲಿಗಳು ಸುತ್ತಮುತ್ತಲಿನ ಪರಿಸದಲ್ಲಿ ಹರಡಿಕೊಂಡಿದ್ದವು “ಮಲ್ಲಿ “

ಶವಪೆಟ್ಟಿಗೆಯು ಹೊರುವ ಹೆಗಲುಗಳಿಲ್ಲದೆ ನೀರವದಲ್ಲಿ ಬಿಕ್ಕಳಿಸುತ್ತಿತ್ತು.

ಆಟವಾಡಿದ ನಂತರ ತೊರೆದು ಹೋಗುವರು

ಆಟಿಕೆಯಂತೆ ಬೀಸಾಡಿ ಹೋಗುವರು

*”ಮಲ್ಲಿ”ಯು ದಾನವ ಆಗಲಿಲ್ಲ

ಹಗ್ಗಕೂ ಬೇಡಿಕೆ ಸಂತೆಯಲ್ಲಿ*

ಇಂತಹ ಅನೇಕ ಮನಕಲಕುವ ಚಿಂತನೆಗೆ ಹಚ್ಚುವ, ಶೇರ್ ಓದಿದ ನಂತರ ಹೌದಲ್ಲವಾ ವಾಸ್ತವ ಹೀಗೆಯೇ ಇದೆಯಲ್ಲ ಎಂದು ತರ್ಕಿಸುವಷ್ಟು ಸಹಜವಾಗಿ, ಅಷ್ಟೇ ತುಂಬಾ ಆಳವಾದ ಅವಲೋಕನದಿಂದ, ಸೂಕ್ಷ್ಮ ಗಮನಿಸುವಿಕೆಯ ಫಲದಿಂದ ಇಲ್ಲಿನ ಶೇರ್ ಗಳು ಮೂಡಿಬಂದಿವೆ. ಆತ್ಮ ವಿಮರ್ಶೆಯಿಲ್ಲದ ಅವೈಚಾರಿಕ ಜೀವನ ಬಾಳಲು ಯೋಗ್ಯವಾದುದಲ್ಲ ಎನ್ನುತ್ತಾನೆ ಸಮಾಜವಾದಿ ಖ್ಯಾತ ಗ್ರೀಕ ತತ್ವಜ್ಞಾನಿ ಸಾಕ್ರೆಟಿಸ್. ಆದರೆ ಕಾಲ ಚಕ್ರದ ತಿರುಗಣೆಯಲ್ಲಿ ಸತ್ಯ,ನ್ಯಾಯ,ಸಮಾನತೆ,ಆದರ್ಶ,ಸಿದ್ಧಾಂತ, ಆತ್ಮವಿಮರ್ಶೆ ಎಲ್ಲವೂ ಹೊಳಪು ಕಳೆದುಕೊಂಡ ಹಳೆ ಕನ್ನಡಿಯಾಗಿ ಎಲ್ಲರ ಎದೆಯ ಗೋಡೆಯಲ್ಲಿ ಸ್ಥಾಪಿತವಾಗಿವೆ ಆದರೆ ಅದರಲ್ಲಿ ತನ್ನನು ತಾನು ವಿಮರ್ಶೆಗೆ ಒಳಪಡಿಸಿಕೊಳ್ಳಲು ಬೇಕಿರುವ ಪಾದರಸ ದ (ಚಿಂತನೆಯ) ಅರಿವೇ ಇದ್ದಂತಿಲ್ಲ .ಇದನ್ನೇ ಮತ್ತೆ ಮತ್ತೆ ಮುನ್ನೆಲೆಗೆ ತರಲು ತತ್ವಜ್ಞಾನಿ,ಕವಿ ಚಿಂತಕರ ಪ್ರಯತ್ನ .ವ್ಯಕ್ತಿಯ ಸಾಮಾಜಿಕ, ಆರ್ಥಿಕ,ನೈತಿಕ, ಬೌದ್ಧಿಕ ದಂತಹ ಸರ್ವ ದೃಷ್ಟಿಕೋನದ ಪ್ರಗತಿಯೇ ಒಂದು ಆದರ್ಶ ಸಮಾಜದ ಲಕ್ಷಣ ಇದನ್ನು ಸಾಧಿಸಲೆಂದೇ ಕಾಲಾಂತರದಿಂದ ಹೋರಾಟ ನಡೆದಿದೆ. ಆಯಾ ಕಾಲಮಾನದ ಎಲ್ಲ ಘಟನೆಗಳನ್ನು, ಮಹತ್ವದ ಬದಲಾವಣೆಗಳನ್ನು, ಜನಮಾನದ ಮನೋಗತ, ಸಾಗಬೇಕಾದ ದಿಕ್ಕು ಎಲ್ಲದರ ದಾಖಲಾತಿಯನ್ನು ಸಾಹಿತ್ಯ, ಕಲೆ, ಸಂಗೀತ, ಮುಂತಾದವುಗಳಲ್ಲಿ ಪ್ರತಿಬಿಂಬವೆನ್ನುವಂತೆ ಕವಿ,ಚಿಂತಕ,ಬರಹಗಾರ,ಕಲೆಗಾರರು ಮೂಡಿಸುತ್ತಾರೆ.  ಈ ಕೃತಿಯಲ್ಲಿ ಕೂಡ ನಮ್ಮ ಸುತ್ತಲಿನ ಸಾಮಾಜಿಕ ಸ್ಥಿತಿಗತಿಯನ್ನು ಬಹು ಎಚ್ಚರದಿಂದ ದಾಖಲಿಸಿದ ವಿಚಾರಗಳಿವೆ, ವೇದನೆಗಳಿವೆ, ಅಸಾಯಕನ ನಿಟ್ಟುಸಿರುಗಳಿವೆ, ಹೊಸ ಬೆಳಕಿನ ನಿರೀಕ್ಷೆಗಳಿವೆ. ಚಿಂತನ ಮಂಥನದ ಕರೆಗಳಿವೆ ನೀವು ಒಮ್ಮೆ ಮಲ್ಲಿಗೆಯ ಬನದೊಳಗೆ ನುಸುಳಿ ಅಲ್ಲಿನ ಗಜಲ್ ಘಮಲನ್ನು ಅಘ್ರಾಣಿಸಿ.


ಜ್ಯೋತಿ ಬಿ ದೇವಣಗಾವ.

Leave a Reply

Back To Top