ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಾದಂಬರಿಕಾರರು

ಉತ್ತಮ ಕಾದಂಬರಿಕಾರರು ಚಂದ್ರು ಪಿ.ಹಾಸನ  ಕುಂಬಾರ ಮಾಡಿದ ಕುಡಿಕೆಯಲ್ಲಿ ನಿಷ್ಕಲ್ಮಶ ಮನಸ್ಸಿನ ಎಣ್ಣೆ ತುಂಬಿ ಒಗ್ಗಟ್ಟಿನ ಬತ್ತಿಯನ್ನು ಹಚ್ಚಿದಾಗ ಆ ಕುಂಬಿಕೆಯು ದೀಪವೆಂಬ ಹೆಸರನ್ನು ಪಡೆಯುತ್ತದೆ.ಅದು ಹೊರಹೊಮ್ಮುವ ಪ್ರಶಾಂತ ಕಿರಣಗಳು ಅಡಗಿಸಿ ಕೊಳ್ಳುತ್ತಿರುವ ನಕಾರಾತ್ಮಕತೆಯನ್ನು ಹೊಡೆದೋಡಿಸಿ ಧನಾತ್ಮಕತೆಯನ್ನು ತುಂಬುತ್ತದೆ. ಎಲ್ಲೆಡೆ ಪ್ರಶಾಂತತೆಯನ್ನು ಹೊಮ್ಮುತ್ತದೆ.ಇದರಿಂದ ಜೀವಿಗಳ ಚೈತನ್ಯ ಪ್ರಾಪ್ತಿಯಾಗುವುದಿಲ್ಲದೆ ಬೆಳವಣಿಗೆ ಹೊಸ ಜೀವಿಗಳ ಉದಯ ಹೀಗೆ ಪ್ರತಿಯೊಂದರಲ್ಲೂ ತನ್ನ ಸ್ಥಾನವನ್ನು ಬೆಳೆಸಿ ತನ್ನ ಸುತ್ತಲೂ ಉತ್ತಮ ಪರಿಸರವನ್ನು ಸೃಷ್ಟಿಸುತ್ತದೆ. ಇಂತಹ ದೀಪದಂತೆ ಅಲ್ಲಲ್ಲಿ ಕಾದಂಬರಿಕಾರರು ಜನಿಸಿದ್ದು, ಆಧುನಿಕ ಕನ್ನಡ ಸಾಹಿತ್ಯದ ಸೊಗಡನ್ನು ಶ್ರೀಮಂತಗೊಳಿಸಿದಲ್ಲದೆ ಅವರ ಬರವಣಿಗೆಯಿಂದ ಸಮಾಜಕ್ಕೆ ಕನ್ನಡಿ ಹಿಡಿದು ಅದರ ಪ್ರತಿಬಿಂಬವನ್ನು ಎಲ್ಲಡೆ ತೋರಿಸುವಂತ್ತಾ,  ಉತ್ತಮ ಸಮಾಜದ ಬಗ್ಗೆ ಬೆಳಕು ಚೆಲ್ಲುವಂತಹ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.          ಒಂದು ಉತ್ತಮ ಸಮಾಜ ರೂಪುಗೊಳ್ಳಬೇಕಾದರೆ ಈ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನ ವಾಗಬೇಕು. ಅವನಲ್ಲಿ ಮಾನಸಿಕ ಸ್ಪೂರ್ತಿಯನ್ನು ಚಿಮ್ಮುವಂತೆ ಮಾಡಿದಾಗ ನಾಗರಿಕ ಮಾನವನ ವಾತಾವರಣ ಸೃಷ್ಟಿಯಾಗುತ್ತದೆ. ಸಮಾಜದಲ್ಲಿ ನಡೆಯುವ ಆಗುಹೋಗುಗಳ ಮುಂದೆ ಕನ್ನಡಿ ಹಿಡಿದಾಗ ಎಲ್ಲಾ ನೈಜ ಚಿತ್ರಣವನ್ನು ಸಮಾಜಕ್ಕೆ ಪ್ರತಿಬಿಂಬಿಸುತ್ತದೆ. ಇಂತಹ ನಿಟ್ಟಿನಲ್ಲಿ ನಮ್ಮ ಕಾದಂಬರಿಕಾರರು ತಮ್ಮ ಬರವಣಿಗೆಯ ಮೂಲಕ ಸಮಾಜದ ಚಿತ್ರಣವನ್ನು ಕಾದಂಬರಿಯಲ್ಲಿ ಚಿತ್ರಸಿದ್ದಾರೆ. ಅಲ್ಲದೆ ಪರೋಕ್ಷವಾಗಿ ಉತ್ತಮ ಸಮಾಜದ ನಿರ್ಮಿತಿಗೆ ಇವರು ಕಾರಣಕರ್ತರಾಗಿದ್ದಾರೆ. ಅವುಗಳು ಹಳ್ಳಿಯ ಜನರ ಮೂಡ ಆಚಾರ-ವಿಚಾರಗಳನ್ನು ಹೇಳುವುದರ ಜೊತೆಗೆ ಅದರಿಂದಾಗುವ ಕೆಡುಕುಗಳ ಮೇಲೆ ವೈಚಾರಿಕ ಮನೋಭಾವ ಬರುವಂತೆ ತನ್ನ ಕಾದಂಬರಿಗಳಲ್ಲಿ ಚಿತ್ರಸಿದ್ದಾರೆ.            “ರವಿ ಕಾಣದ್ದನ್ನು ಕವಿ ಕಂಡ” ಎನ್ನುವಂತೆ ಕಾದಂಬರಿಕಾರನ ವೈಶಿಷ್ಟ್ಯವೇ ಅಂಥಹದ್ದು ಏಕೆಂದರೆ ಪದರಚನೆಯ ಸಾರಸ್ವತ ಲೋಕವು ವೈಭವೋಪೇತವಾಗಿದೆಯೆಂದರೆ ಅದರಲ್ಲಿ ಕಾದಂಬರಿಗಳ ಪಾತ್ರ ಬಹಳ ಹಿರಿದಾದದ್ದು. ಸಾಹಿತ್ಯದ ಪ್ರಕಾರಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಆಯಾಮಗಳನ್ನು ಪಡೆದು ಕೊಂಡು ವರ್ತಮಾನದಲ್ಲಿ ಅಪ್ರಾಮಾಣಿಕತೆ ವಿರೋಧಿಸಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತವೆ.               ಕಾದಂಬರಿಯು ಉದ್ದವಾದ ನೀಲ ಕಥೆಯ ವಿಸ್ತೃತ ರೂಪ ವಲ್ಲ. ಸಂದೇಶವನ್ನು ನೀಡುವಂತಹ ಮತ್ತು ಮಾನವನ ಅಧ್ಯಯನಕ್ಕೆ ಒಂದು ಕೈಗನ್ನಡಿ. ಕೆಲವು ಪತ್ತೆದಾರಿ ಕಾದಂಬರಿಗಳಲ್ಲಿ ಸಮಾಜಕ್ಕೆ ಸಂದೇಶ ವನ್ನು ನೀಡುವಂತಹ ವಸ್ತುಗಳಿರುತ್ತವೆ.ಇಂದಿನ ಸಮಾಜದ ಸ್ಥಿತಿಯ ಬಗ್ಗೆ ಕೆಲವು ಮಾತುಗಳನ್ನು ತುಂಬಿ ಪ್ರತಿಯೊಬ್ಬ ನಾಗರಿಕರಿಗೂ ಬರವಣಿಗೆ ಮೂಲಕ ಉತ್ತಮ ಮೌಲ್ಯವನ್ನು ತುಂಬಿಸುವಲ್ಲಿ ಕಾದಂಬರಿಕಾರ ನೆರವಾಗುತ್ತಾನೆ *ಪೂರ್ಣಚಂದ್ರ ತೇಜಸ್ವಿಯವರ* ‘ಮಹಾಪಲಾಯನ’ ಕಾದಂಬರಿಯು ಕೈದಿಯೊಬ್ಬ ಮಾನಸಿಕವಾಗಿ ಬದಲಾಗಿ ಉತ್ತಮ ಸಮಾಜದಲ್ಲಿ ಬರೆದುಕೊಳ್ಳುವ ಬಗ್ಗೆ, ಮತ್ತು ‘ಕಿರಿಗೂರಿನ ಗಯ್ಯಾಳಿಗಳು’ ಕಾದಂಬರಿಯಮೂಲಕ ರಾಜಕೀಯ ಪಿತೂರಿ ಅನಕ್ಷರಸ್ಥರ ಮೇಲೆ ನಡೆಯುವ ದೌರ್ಜನ್ಯ ಜಾತಿವ್ಯವಸ್ಥೆ ಗಳೆಂಬ ಸಮಾಜದ ಅನಿಷ್ಠ ಪದ್ಧತಿಗಳ ಮೇಲೆ ನಡೆಯುವ ಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಮೂಲಕಉತ್ತಮ ಸಮಾಜಕ್ಕೆ ಬದಲಾವಣೆಯ ಚೌಕಟ್ಟನ್ನು ತಮ್ಮ ಕಾದಂಬರಿಗಳಿಂದ ಓದುಗರಿಗೆ ಸಮಾಜಕ್ಕೆ ಅರಿವಿನ ಮಾರ್ಗವನ್ನು ತಿಳಿಸಿದ್ದಾರೆ.       *ಕುವೆಂಪು* ಅವರ ‘ಕಾನೂರು ಹೆಗ್ಗಡತಿ’ ಕಾದಂಬರಿಯ ಸ್ವತಂತ್ರಪೂರ್ವದಲ್ಲಿ ಮಲೆನಾಡು ವೈಚಾರಿಕತೆ ಮತ್ತು ಅರಿವಿನ ಜನಜೀವನ ಮತ್ತು ಆಲೋಚನೆಗಳ ಬಗ್ಗೆ ಇನ್ನು ‘ಮಲೆಗಳಲ್ಲಿ ಮದುಮಗಳು’ ಎಂಬ ಮಿನಿ ಕಾದಂಬರಿ ಅಂತರ್ಜಾತಿ ವಿವಾಹ ಮತ್ತು ಮಲೆನಾಡಿನ ಧಾರ್ಮಿಕ ಪರಂಪರೆಯ ಮೇಲೆ ಸಾಮಾಜಿಕವಾಗಿ ಬೆಳಕು ಚೆಲ್ಲುತ್ತದೆ.      ಕಾದಂಬರಿಕಾರರಲ್ಲಿ ಸಮಾಜದಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನು ತಂದು ಅಪಾರ ಯಶಸ್ಸು ತಂದವರಲ್ಲಿ *ಅ ನ ಕೃ* ಅವರು ಕೂಡ ಒಬ್ಬರು ‘ಕಾದಂಬರಿಗಳ ಸಾರ್ವಭೌಮ’ ಎಂದು ಖ್ಯಾತಿ ಪಡೆದಿದ್ದವರು. ಅವರ ತೊಂಬತ್ತಕ್ಕೂ ಹೆಚ್ಚು ಸಾಮಾಜಿಕ ಕಾದಂಬರಿಗಳಾಗಿದ್ದು, ಇವುಗಳಲ್ಲಿ ಸಮಕಾಲೀನ ಜೀವನದ ಬೇರೆ ಬೇರೆ ಮುಖಗಳನ್ನು ತೋರಿಸಿದ್ದಾರೆ. ಕಲಾವಿದರ ಸಮಸ್ಯೆಗಳು, ಆಧುನಿಕ ವಿದ್ಯಾಭ್ಯಾಸದ ಪರಿಣಾಮ, ಭಾರತೀಯ ಸಂಸ್ಕೃತಿಯ ಮೌಲ್ಯಗಳ ಮಹತ್ವ, ಅವಿಭಕ್ತ ಕುಟುಂಬ ಜೀವನ, ಒಡೆಯುತ್ತಿರುವ ಬದುಕು, ವೇಶ್ಯಾ ಸಮಸ್ಯೆ , ಲಂಚಗುಳಿತನ, ಸ್ತ್ರೀ-ಸ್ವಾತಂತ್ರ್ಯ , ಜೈಲುಗಳ ಸುಧಾರಣೆ, ದಾಂಪತ್ಯ ವಿಚ್ಛೇದನ , ಜಾತೀಯತೆಯ ಭೂತ,  ರಾಜಕೀಯ ದೊಂಬರಾಟ, ಪವಿತ್ರ ಪ್ರೇಮ, ಕೊಳಚೆಯ ಕಾಮ, ಪಾನಿರೋಧದ ಸಮಸ್ಯೆ, ಶ್ರೀಮಂತಿಕೆಯ ಡೌಲು, ಬಡತನದ ದಾರುಣತೆ, ಪೂರ್ವ-ಪಶ್ಚಿಮಗಳ ಸಂಗಮ, ಧಾರ್ಮಿಕತೆಯ ಸೋಗು, ಆಡಳಿತದ ಆರ್ಭಟಗಳು, ಸ್ವಾತಂತ್ರ್ಯದ ಕಿಚ್ಚು , ಬದುಕಿನ ಮೇಲೆ ವಿಜ್ಞಾನದ ಪ್ರಭಾವ , ಹೀಗೆ ನಾನಾ ಸಂಗತಿಗಳ ಕುರಿತು ತಮ್ಮ ಕಥನ ಕೌಶಲ, ನಿರರ್ಗಳವಾದಶೈಲಿ ಮತ್ತು ಸಂಭಾಷಣೆಯ ಚಾತುರ್ಯ ಇವುಗಳಿಂದ ಜನಮನಸೆಳೆದ ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಅವರ ಮೇಲೆ ಅಶ್ಲೀಲತೆಯ ಆರೋಪ ಬಂದಾಗ ದೂರಮಾಡಲು ‘ಸಾಹಿತ್ಯ ಮತ್ತು ಕಾಮಪ್ರಚೋದನೆ’ ಕಾದಂಬರಿಯಲ್ಲಿ ಸೂಳೆಯ ಸುಖದುಃಖಗಳನ್ನು ಮತ್ತು ನಾರಿಯ ಸಂಸ್ಕೃತಿ ಎತ್ತಿಹಿಡಿಯಲು ಇರುವ ನಾರಿ ಪಾತ್ರಗಳನ್ನು ಹಲವಾರು ಕಾದಂಬರಿಗಳಲ್ಲಿ ಅರ್ಥೈಸಿದ್ದಾರೆ.      ತ್ರಿವೇಣಿಯವರ ‘ಶರಪಂಜರ’ ಕಾದಂಬರಿಯಲ್ಲಿ ಇನ್ನೊಬ್ಬಳ ಮಾನಸಿಕ ಗೊಂದಲ ಹಾಗೂ ನೋವುಗಳನ್ನು ಮತ್ತು ಗುಣ ಹೊಂದಿದರು ಸಮಾಜದ ದೃಷ್ಟಿಕೋನವು ಹೇಗಿರುವುದು ತಿಳಿಸಿದ್ದಾರೆ              ಗಿರೀಶ್ ಕಾರ್ನಾಡರ ‘ನಾಗಮಂಡಲ’ ಸಾಮಾಜಿಕ ಜೀವನ ಜನರ ಸ್ಥಿತಿಗತಿ ಮತ್ತು ಕಳಕಳಿಯನ್ನು ಜೀವನವೆಲ್ಲ ಸಮಾಜಕ್ಕೆ ಬೆಳಕು ಚೆಲ್ಲುವಲ್ಲಿ ಮುಖ್ಯ ಪಾತ್ರವಹಿಸುತ್ತವೆ.         ಅನಂತ    ಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಸಾಮಾಜಿಕ ಜಾತಿ ಸಂಪ್ರದಾಯಗಳ ಬಗ್ಗೆ ಬೆಳಕು ಚೆಲ್ಲುವಂತಹ ಕೆಲಸ ನಡೆದಿದೆ.        ಕಾರಂತರ ಸಾಮಾಜಿಕ ಕಾದಂಬರಿಗಳಾದ ‘ಯಕ್ಷಗಾನ ಬಯಲಾಟದಲ್ಲಿ’ ಸಾಮಾಜಿಕ ಬೆಳಕು ಚೆಲ್ಲುವಲ್ಲಿ ಮುಖ್ಯ ಪಾತ್ರವಾಗುತ್ತದೆ ‘ಬೆಟ್ಟದಜೀವ’ ಇದರಲ್ಲಿ ಮಲೆನಾಡಿನ ವೃದ್ಧ ದಂಪತಿಗಳ ಜೀವನ ಪರಿಸರದ ಮೇಲೆ ಇರುವ ಕಾಳಜಿ ಬಿಂಬಿಸುತ್ತದೆ. ‘ಚೋಮನದುಡಿ’ ಕಾದಂಬರಿಯಲ್ಲಿ ಬರುವ ಪಾತ್ರಗಳು ಜಾತಿ-ಮತ ಮೇಲು-ಕೀಳು ತೊಲಗಲಿ ಎನ್ನುತ್ತಾ ಸಮಾಜದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.  ಹೀಗೆ ಕಾದಂಬರಿಯಲ್ಲಿ ಸೃಷ್ಟಿಸುವ ಪ್ರತಿಯೊಂದು ಪಾತ್ರಗಳು ಆಗಿರಬಹುದು ಸಂದೇಶಗಳ ಆಗಿರಬಹುದು ಪ್ರತಿಯೊಂದು ಅರ್ಥಪೂರ್ಣ. ಇಲ್ಲಿ ಚಿತ್ರಿಸುವ ಘಟನೆ ಸನ್ನಿವೇಶ ಸಂಬಂಧಗಳ ಮೂಲಕ ವಾಸ್ತವ ಸಂಗತಿಗಳನ್ನು ಮರೆಮಾಚದೆ ಸತ್ಯ ನಿಷ್ಠೆಗೆ ಬೆಲೆ ಕೊಟ್ಟಂತಹ ಕಾದಂಬರಿಕಾರರು ಬರಹದ ಮೂಲಕ ಆದರ್ಶ ಕನಸುಗಳನ್ನು ಎತ್ತಿಹಿಡಿದಿದ್ದಾರೆ. ಅದನ್ನು ಸ್ವೀಕರಿಸುವ ಜನರು ಆಧುನಿಕ ಪ್ರಜ್ಞೆಯೂ ಬದುಕಿನಲ್ಲಿ ಸವಾಲಾಗಿ ಮನಸ್ಸಿನ ಆಳಕ್ಕೆ ಧೈರ್ಯ ತುಂಬಬಹುದು. ಮಾನವನ ಸಮಾಜ ಕುಟುಂಬ ವ್ಯಕ್ತಿ ಪರಿಸರ ಶಾಲೆ ಮೈದಾನ ಸಾಹಿತ್ಯ ಕೃಷಿ ಸಂಸ್ಕೃತಿ ಬದುಕು ಸಮಾಜಸೇವೆ ಪ್ರಕೃತಿಯೊಂದಿಗೆ ಹೇಗೆ ಬದುಕಬೇಕು ಎಂಬುದನ್ನು ಕಾದಂಬರಿಕಾರರು ಮನದಲ್ಲಿ ನೆಲೆಸುವಂತೆ ಬರೆದು ಸಮಾಜದಲ್ಲಿ ನಡೆಯುವ ಅನ್ಯಾಯ, ಅತ್ಯಾಚಾರ, ಮೋಸ ವಂಚನೆ, ದಬ್ಬಾಳಿಕೆ, ಜಾತೀಯತೆ, ಮೂಡನಂಬಿಕೆಗಳು ಹೀಗೆ ಹಲವಾರು ಅಹಿತಕರ ಘಟನೆಗಳನ್ನು ಎದುರಿಸುವ ಬಗೆಯನ್ನು ದಾರದಷ್ಟೇ ಎಳೆಎಳೆಯಾಗಿ ಬರೆದಿರುತ್ತಾರೆ. ಪ್ರೇಮದ ಹಾದಿ, ಮೋಸದ ಹಾದಿ, ಸೋತೋನು ಮುಂದೆ ಗೆದ್ದು ಬಂದ ಹಾದಿ, ಹೆತ್ತು ಹೊತ್ತು ತುತ್ತು ನೀಡಿದವರು ಮತ್ತು ಮುತ್ತುನೀಡಿದವರು ಇವರಿಬ್ಬರಿಗೂ ನ್ಯಾಯ ಒದಗಿಸಿ ಅನುಸರಣೆಯಿಂದ ಕುಟುಂಬದ ಯಶಸ್ಸಿನ ಹಾದಿ ಎಂಬುದನ್ನು ತೋರುವಂತೆ ಇರುತ್ತವೆ. ಇದು ಕೇವಲ ಸಾಹಿತ್ಯ ವಾಗಿರದೆ ಒಂದು ಸಾಮಾಜಿಕ ನೆಲೆಗಟ್ಟಿನಲ್ಲಿ ವಾಸಿಸುವ ಜನರ ಜೀವನ ಭಾಷಾ ಸೊಗಡು ಆಚಾರ-ವಿಚಾರಗಳು ಸಂಸ್ಕೃತಿಗಳ ಇತಿಹಾಸ ಭಾವಗಳು ಹೀಗೆ ಪ್ರತಿಯೊಂದರಲ್ಲೂ ಮನೋಜ್ಞವಾಗಿ ಚಿತ್ರಿಸುವುದರ ಜೊತೆಗೆ, ಆ ಮೌಲ್ಯಗಳನ್ನು ರೂಢಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆದ್ದರಿಂದ ಮೊದಲೇ ತಿಳಿಸಿದಂತೆ ಕಾದಂಬರಿಕಾರರು ಉತ್ತಮ ಸಮಾಜದ ಯುವ ಪೀಳಿಗೆಗೆ ಕನ್ನಡಿ ಎಂದು ಹೇಳಿದರೆ ತಪ್ಪಾಗಲಾರದು.

ಕಾದಂಬರಿಕಾರರು Read Post »

ಕಾವ್ಯಯಾನ

ಕಾವ್ಯಯಾನ

ಜಿಂಕೆಗೆ ಜೀವ ಬರಲು ಧಾಮಿನಿ ಪ್ರಿಯಾ ಜಿಂಕೆಯಂತೆ ಚಿಮ್ಮುತ್ತಿದ್ದೆನು ನಾನು ಕಾರಣ ನೀನು ನನ್ನ ಸಹಕಾರದಿಂದಲೇ ಮುಗಿದಿತ್ತೆಲ್ಲ ಜೀವನ ಪೂರ್ತಿ ನಡೆಯುವಂತದ್ದಲ್ಲ ಮೈಮೇಲೆ ಹರಿದಾಡಿದಂತೆ ಹಾವು ಮುದಗೊಳಿಸುವಂತ ಕಾವು ಹಾವಿನೊಂದಿಗೆ ಸರಸವೇ ನಾಗಮಂಡಲ ನೋಡಿಲ್ಲವೇ ಬೆಣ್ಣೆಯಂತಹ ಮೈ ಕರಗಿತ್ತಲ್ಲಾ ಸೈ ಕೈ ಕಾಲುಗಳಿಗೆ ಎಂತದೋ ಹುರುಪು ಇಲ್ಲಿ ಬಲಾತ್ಕಾರವಿಲ್ಲ ಸಮರ್ಪಣೆಯೇ ಒನಪು ಜಿಂಕೆಯಂತೆಯೇ ಗಾಬರಿಯಾಗಿದ್ದೆನಾ ಕಾರಣ ನೀನೇನಾ ? ಎಂತಾ ಅದ್ರಷ್ಟವಂತೆಯೇ ನೀ ಇವನನ್ನು ಇವನೇ ಎಂದುಕೋ ಬೇಡ ಬಿಡಿ ಇಲ್ಲಿ ಅವನೇತಕೋ ಏನೂ ಕಡಿಮೆಯಿಲ್ಲ ಸಂಭ್ರಮಕೋ ಈಗ ಅವನ ನೆನೆವುದೂ ಬೇಡ ಇವಳ ಹೋಲಿಕೆಯೂ ಬೇಡ ಇಬ್ಬರೂ ಒಬ್ಬರ ಮುಂದೊಬ್ಬರು ಪ್ರತ್ಯಕ್ಷವಾಗಿದ್ದೇವಲ್ಲ ಈಗ ಜೀವಂತ ಜಿಂಕೆ ನಾನು ಜಿಂಕೆಗೆ ಜೀವ ಕೊಟ್ಟ ಉಸಿರು ನೀನು. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಾರೆಗಣ್ಣು ಸ್ವಭಾವ ಕೋಳಗುಂದ ಪಾದಗಳು ಬಿರುಕು ಬಿಟ್ಟಿವೆ ನೆರಕೆ ಬಳಿದು ವರ್ಷವಾಗುತ್ತಾ ಬಂತು ದೀಪದ ಕಮಟು ಆರಿಲ್ಲ ಓರೆ ಕದ ಮುಚ್ಚಿಲ್ಲ ಪದೇ ಪದೇ ಗುಯ್ಗುಡುವ ಸೊಳ್ಳೆ ರೇಗಿಸುತ್ತಲೇ ತಾಳ್ಮೆಗೆ ಸವಾಲು ಇನ್ನೂ ಕುದಿ ಬಂದಿಲ್ಲ ಚಿಪ್ಪು ಹಸೀಟ್ಟು ಒಯ್ದು ತಿರುವಿ ಕಟ್ಟಲು ಅದರ ಗೊಣ್ಣೆ ಆಗಾಗ ಇಣುಕುತ್ತ ಸ್ವಾರೆಗೂ ಗಂಗ್ಳಕ್ಕೂ ಕಣ್ಣು ಕೊಂಡಿ ಹಾಕುತ್ತಿದೆ ಉರಿಯದ ಹೊಲೆ, ಹಾಲಿಲ್ಲದ ಮೊಲೆ ಹರುಕು ಅಂಗಿ ಹಸಿವಿನ ಜೊತೆ ಕಾದು ಕಾದು ಸೋತಿತ್ತು ತೇಪೆಗೆ ಸೂಜಿಗಣ್ಣಾಗಿ ಸೂರಂಚಲಿ ತೂಗಿತ್ತು ಅವನ ಜೇಬೋ ನಕ್ಷತ್ರದೂರು ತಾರೆಯೂರ ಚಂದ್ರಣ್ಣ ಬೆಳಗು ಬಳಿಯೋ.. ಹಟ್ಟಿಯ ಹುಡುಗರ ಚ್ವಾಮಂದೇವರ ಮೆರವಣಿಗೆ ಹರಕೆ ಕುಣಿತ ತಟ್ಟೆಯ ಬಡಿತ ಹಾಳು ಬಾವಿಗೆ ಗಣೇಶ ಸಂಭ್ರಮ ಜೈ ಜೈ ಹೊಗೆ ಕಿಂಡಿಯ ಬೆಳಕಲ್ಲಿ ಜೇಡ ಹೆಣೆದ ಬಲೆಯಲ್ಲಿ ಹಲ್ಲಿಯ ಬೇಟೆ ಬುಡ್ಡಿ ಉರಿದು ಕತ್ತಲಿಗೆ ಕೇಡು ಮಾಡಿತ್ತು ದೂರ ಬೆಟ್ಟದ ಕನಸು ರಂಗೋಲಿಯ ಹಾಸಿತ್ತು ಮೂರು ಪಟ್ಟಿಗೆ ಕೈಲಾಸ ನಾಮಕ್ಕೆ ವೈಕುಂಟ ಕಾಯ್ವ ಊರ ಮಾರಿಗೆ ಕರಿ ಹುಂಜನ ಭೇಟೆಯ ಊಟ ಮಡಿ ಪೂಜಾರಿಯ ಕಾಲಿಗೆ ನಾಯಿ ಉಚ್ಚೆಯ ಮಜ್ಜನ ಮಾಡಿತ್ತು ಬೊಚ್ಚು ಬಾಯ ಅಜ್ಜಿ ಅಂಗಳದ ಕತೆಗೆ ಹೂಂಗುಡುವ ಹುಡುಗರ ಸಾಲು ************

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಮತ್ತೆ ಸಿಕ್ಕಿದ್ದಳು ವಸಂತ ಪ್ರಮೀಳಾ .ಎಸ್.ಪಿ. ನಿತ್ಯವೂ ಶಾಲೆಗೆ ಹೋಗುವ ದಾರಿಯುದ್ದಕ್ಕೂ ನನ್ನ ಗಂಡನನ್ನು ಬೈದುಕೊಂಡೇ ಹೋಗುತ್ತೇನೆ.ಇವರಿಂದ ನನಗೆ ಸಮಯ ಮೀರಿತು,ಮನೆಗೆ ಬಂದ ಅತಿಥಿಗಳು ಹೊರಡಲು ಸಿದ್ಧರಾದರೂ ಅವರಿಗೆ ತಿಂಡಿ ಕಾಫಿ ಕೊಡಲು ಅದೇಶಿಸುತ್ತಾರೆ.ಇಲ್ಲವೋ ಹೊರಟ ಹೊತ್ತಿಗೆ ಚಹಾ ಕೇಳುತ್ತಾರೆ ಎಂದೆಲ್ಲಾ ಅಂದುಕೊಂಡು ಆತುರದಲ್ಲಿ ಹೋಗುವ ದಾರಿಯಲ್ಲಿ ಸಿಗುವ ಮನೆ ‘ವಸಂತಳದ್ದು’. ಸಂಜೆ ಬರುವ ವೇಳೆಗೆ ಬಾಗಿಲಲ್ಲಿ ನಿಂತು ಮುಗುಳ್ನಗೆ ಬೀರಿ ಮಾತು ಪ್ರಾರಂಭಿಸುತ್ತಾಳೆ.ಒಂದೊಂದು ದಿನಕ್ಕೆ ಒಂದೊಂದು ಘಟನೆ ಹೇಳಿಬಿಡುತ್ತಾಳೆ.ಹಾಗೆಂದು ಎಂದೂ ಸಂಪೂರ್ಣವಾಗಿ ಹೇಳಿದಳು ಎಂದಿಲ್ಲ.ಇಡೀ ಬೀದಿಯಲ್ಲಿ ಯಾರೊಂದಿಗೂ ಅವಳ ಮಾತಿಲ್ಲ.’ಬಜಾರಿ’ ಎಂಬ ಪಟ್ಟ ಅದ್ಯಾವಾಗ ಲೋ ಧಕ್ಕಿ ಬಿಟ್ಟಿದೆ ಅವಳಿಗೆ.ನನ್ನೊಂದಿಗೆ ಮಾತಿಗೆ ನಿಂತಾಗಲು ನಾನು ಕೇವಲ ಶ್ರೋತೃದಾರಳು.ಅವಳು ಹೇಳಿದ್ದನ್ನೆಲ್ಲಾ ಅವಲೋಕಿಸಿದಾಗ … ವಸಂತ ಬಡ ಕುಟುಂಬದ ಹೆಣ್ಣು ಮಗಳು.ಬದುಕು ಕಟ್ಟಿಕೊಳ್ಳಲು ಬೆಂಗಳೂರಿನ ಗಾರ್ಮೆಂಟ್ಸ್ ಸೇರಿದ್ದಳು.ಅಲ್ಲಿಯೇ ಅನ್ಯಜಾತಿಯ ಯುವಕನೊಂದಿಗೆ ವಿವಾಹ ವಾದ ಕಾರಣ ಎರೆಡೂ ಮನೆಯವರಿಗೂ ಬೇಡವಾಗಿದ್ದರು.ಈ ನಡುವೆ ಹುಟ್ಟಿದ ಮೊದಲನೇ ಮಗ ವಿಕಲಚೇತನ ನಾಗಿದ್ದ.ಇದರಿಂದಾಗಿ ಅವಳು ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಕುಟುಂಬ ನಿರ್ವಹಣೆ ಕಷ್ಟವಾಗಿ ಜಿಲ್ಲಾ ಕೇಂದ್ರವೊಂದಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ಜೀವನ ಪ್ರಾರಂಭಿಸಿದ್ದರು.ಮತ್ತೊಬ್ಬ ಮಗಳು ಹುಟ್ಟಿದಳು.ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ ಈಗ ನಾಲ್ಕು ಜನರ ಕುಟುಂಬವಾಯ್ತು.ಗಂಡನೊಬ್ಬನೇ ದುಡಿಯಬೇಕಾಯ್ತು.ಹಾಗೂ ಹೀಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ‘ಗೋಬಿ ಮಂಚೂರಿ’ ಮಾರುವ ವ್ಯಾಪಾರ ಆರಂಭಿಸಿದರು. ನಾನು ಅವಳಿಗೆ ಸಿಕ್ಕ ದಿನವೆಲ್ಲಾ ಅದರದ್ದೇ ವಿಷಯ ಅವಳ ಬಾಯಲ್ಲಿ… ನನ್ನ ಗಂಡ ರಾಜನಂಗೆ ಬೆಳೆದವರು, ಅವರಿಗೆ ಕಷ್ಟ ಸುಖ ಏನು ಗೊತ್ತಿಲ್ಲ.ಬೆಳಿಗ್ಗೆ ನಾನೇ ಮನೆಯಲ್ಲಿ ಗೋಬಿ ತಯಾರಿಸಿ,ಬೇಕಾದ ಎಲ್ಲಾ ಸಿದ್ಧತೆ ಮಾಡಿ ಅವರನ್ನು ನೀಟಾಗಿ ಬಟ್ಟೆ ಹಾಕೊಂಡು ಹೋಗಿ ಮಾರಲು ಕಳಿಸ್ತಾ ಇದ್ದೇನೆ.ಅದಕ್ಕೆ ಹೆಚ್ಚು ಜನ ನಮ್ಮ ಅಂಗಡಿಯಲ್ಲಿ ಬಂದು ತಿನ್ನುತ್ತಾರೆ.ಒಂದೊಂದು ದಿನ ಒಂದು ಸಾವಿರ ರೂಪಾಯಿಗಳ ವ್ಯಾಪಾರ ಆಗುತ್ತೆ.ಹೆಂಡತಿ ಮಕ್ಕಳು ಎಂದರೆ ನನ್ನ ಗಂಡನಿಗೆ ಪ್ರಾಣ.ಎರೆಡು ಲೀಟರ್ ಹಾಲು ತಗೊ ಅಂತಾರೆ,ಹಣ್ಣು,ಬ್ರೆಡ್ಡು,ಬಿಸ್ಕತ್ ಇಲ್ಲದೆ ಮನೆಗೆ ಬರಲ್ಲ.ಬೇಕಾದಷ್ಟು ತಂದು ಹಾಕ್ತಾರೆ. ನನ್ನ ಅಪ್ಪ ಅಮ್ಮ ಕೈ ಬಿಟ್ಟರೂ ನನ್ ಗಂಡ ಕೈ ಬಿಡಲಿಲ್ಲ, ನನ್ನ ಎರೆಡೂ ಮಕ್ಕಳು ಹುಟ್ಟಿದಾಗ ಇವರೇ ಬಾಣಂತನ ಮಾಡಿದ್ರು.ಇಷ್ಟೊಂದು ಬಾಡಿಗೆ ಕಟ್ಟಿಕೊಂಡು ಇಂತಹ ಮನೆಯಲ್ಲಿ ಸಾಕಿಕೊಂಡು ಹೋಗ್ತಾ ಅವ್ರೇ….. ಹೀಗೆ ಸಾಲು ಸಾಲುಗಳಲ್ಲಿ ತನ್ನ ಸಂಸಾರದ ಬಗ್ಗೆ ಹೇಳ್ತಾ ಗಂಡನನ್ನು ಹೊಗಳು ತಿದ್ದಳು ವಸಂತ. ಬೆಳಿಗ್ಗೆ ನನ್ನ ಪತಿಯನ್ನು ಬೈಕೊಂಡು ಹೋಗೋ ನಾನು ಸಂಜೆ ಬರುವಾಗ ಅವಳ ಮಾತು ಕೇಳಿ ಸಂತೋಷ ಪಡುತ್ತಾ ಮನೆಗೆ ಬರುತ್ತಿದ್ದೆ. ಅವಳ ಮಕ್ಕಳ ಮುಖ ನೋಡಿ ನಕ್ಕು ಮಾತಾಡಿಸಿ ಮನೆಗೆ ಬಂದರೆ ನನಗೂ ಒಂದು ರೀತಿ ಸಮಾಧಾನ ಆಗುತಿತ್ತು. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ತಂದು ಕೊಡುತ್ತೇನೆ ಎಂದು ಹೇಳಿ ಬಂದಿದ್ದೆ.ಆದರೆ ಅವಧಿಗೆ ಮುಂಚೆಯೇ ಶಾಲೆಯ ಬಾಗಿಲು ಹಾಕಿತ್ತು.ಕರೊನಾ ಕಾರಣದ ಲಾಕ್ ಡೌನ್ ನಿಂದಾಗಿ ನಲವತ್ತು ದಿನಗಳಿಂದ ವಸಂತಳ ಮನೆ ಕಡೆ ಹೋಗಲೇ ಇಲ್ಲ. ನಿನ್ನೆ ಒಮ್ಮೆ ಹೋಗಿ ಮಕ್ಕಳ ನೋಡಿ ಬರೋಣ ಎಂದು ಹೋಗಿದ್ದೆ. ನನ್ನ ಕಂಡ ತಕ್ಷಣವೇ ಮಕ್ಕಳು ನಕ್ಕರು.ವಸಂತ ಮಾತು ಆರಂಭಿಸಿದಳು… . ಎರೆಡು ತಿಂಗಳಾಯ್ತು,ಬೀದಿ ಬದಿ ಅಂಗಡಿ,ಹೋಟೆಲ್ ಬಾಗಿಲು ಹಾಕಿ, ಕೈಲಿ ಒಂದು ರೂಪಾಯಿ ಇಲ್ಲ,ಬಾಡಿಗೆ ಕಟ್ಟಿಲ್ಲ,ಮಕ್ಕಳಿಗೆ ಹಾಲು,ಬ್ರೆಡ್,ಬಿಸ್ಕಿಟ್ ತರಲು ಆಗಿಲ್ಲ.ವಿಕಲಚೇತನ ಮಗನಿಗೆ ಮಾತ್ರೆ ತಂದಿಲ್ಲ.ಅತ್ತ ಅತ್ತೆ ಮನೆಯೂ ಇಲ್ಲ,ಇತ್ತ ತಾಯಿ ಮನೆಯೂ ಇಲ್ಲ. ಗಂಡನಿಗೆ ಕೆಲಸ ಇಲ್ಲ.ಅಕ್ಕಿ ಬೇಳೆ ಬಿಟ್ಟರೆ ಬೇರೇನೂ ಇಲ್ಲ. ನನ್ನ ಗಂಡ ಎಲ್ಲಾ ಕಡೆ ಹೋಗಿ ಕೆಲಸ ಹೋಗಿ ಕೇಳಿದ್ರೂ… ಎಲ್ಲೂ ಕೆಲಸ ಸಿಗಲಿಲ್ಲ. ಮೊನ್ನೆಯಷ್ಟೇ ಹಾಲಿನ ಡೈರಿ ಯ ಲಾರಿಯಲ್ಲಿ ಹಳ್ಳಿ ಹಳ್ಳಿಗೆ ದನಗಳ ಮೇವು ಇಳಿಸಲು ಹೋಗುತ್ತಿದ್ದಾರೆ.ದಿನಕ್ಕೆ ಇನ್ನೂರು ಐವತ್ತು ರೂಪಾಯಿ ಕೊಡ್ತಾ ಇದ್ದಾರೆ. ಬೆನ್ನ ಮೇಲೆ ಮೂಟೆ ಹೊತ್ತು ಬೆನ್ನೆಲ್ಲಾ ಬರೆ ಬಂದಿದೆ ನೋಡಿ ಎಂದು ಕಣ್ಣಲ್ಲಿ ನೀರು ಸುರಿಸುತ್ತಾ ತನ್ನ ಗಂಡನ ಶರ್ಟ್ ಎತ್ತಿ ಬೆನ್ನು ತೋರಿಸಿದಳು.ಮಕ್ಕಳು ಬಡ ವಾಗಿ ಹೋಗಿವೆ ಎಂದು ದುಃಖಿಸಿದಳು. ಇಷ್ಟು ದಿನ ಉಳಿಸಿದ ಹಣ ಎಲ್ಲಿ? ಎಂದೆ. ಚೀಟಿ ಹಾಕಿದ್ದೆವು.ಅವನು ಈಗ ದುಡ್ಡಿಲ್ಲ ಎಂದುಬಿಟ್ಟ ಎಂದಳು.ಬಾಡಿದ ಅವಳ ಮುಖ,ಕತ್ತು ಬಗ್ಗಿಸಿ ಕುಳಿತ ಅವಳ ಗಂಡನ ನೋಡಿ ಮನಸ್ಸು ಭಾರವಾಯಿತು. ಆರಕ್ಕೇರದ,ಮೂರಕ್ಕಿಳಿಯದ ನನ್ನ ಸಂಬಳದಲ್ಲಿ ನಾನಾದರೂ ಏನು ಸಹಾಯ ಮಾಡಲಿ?? ಅವರಿಬ್ಬರ ಮೊಬೈಲ್ ಗೆ ಕರೆನ್ಸಿ ಹಾಕಿಸಿದೆ.ಮಕ್ಕಳಿಗೆ ಬಿಸ್ಕಿಟ್ ತಂದು ಕೊಟ್ಟು ಮನೆ ಕಡೆ ಹೆಜ್ಜೆ ಹಾಕಿದೆ. ರಾತ್ರಿ ನಿದ್ದೆ ಸುಳಿಯಲಿಲ್ಲ. ಕಾಣದ ಜೀವಿಯೊಂದು ಅದೆಷ್ಟು ಜನರ ಜೀವನವನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ ಬದುಕಿದವರನ್ನು ಬರಿದಾಗಿಸಿದೆ… ಅಲ್ಲವೇ… ******

ಪ್ರಸ್ತುತ Read Post »

You cannot copy content of this page

Scroll to Top