ಕಾವ್ಯಯಾನ

ತಾರೆಗಣ್ಣು

Poverty paintings

ಸ್ವಭಾವ ಕೋಳಗುಂದ

ಪಾದಗಳು ಬಿರುಕು ಬಿಟ್ಟಿವೆ
ನೆರಕೆ ಬಳಿದು ವರ್ಷವಾಗುತ್ತಾ ಬಂತು
ದೀಪದ ಕಮಟು ಆರಿಲ್ಲ
ಓರೆ ಕದ ಮುಚ್ಚಿಲ್ಲ

ಪದೇ ಪದೇ ಗುಯ್ಗುಡುವ ಸೊಳ್ಳೆ
ರೇಗಿಸುತ್ತಲೇ ತಾಳ್ಮೆಗೆ ಸವಾಲು
ಇನ್ನೂ ಕುದಿ ಬಂದಿಲ್ಲ
ಚಿಪ್ಪು ಹಸೀಟ್ಟು ಒಯ್ದು ತಿರುವಿ ಕಟ್ಟಲು

ಅದರ ಗೊಣ್ಣೆ ಆಗಾಗ ಇಣುಕುತ್ತ
ಸ್ವಾರೆಗೂ ಗಂಗ್ಳಕ್ಕೂ
ಕಣ್ಣು ಕೊಂಡಿ ಹಾಕುತ್ತಿದೆ
ಉರಿಯದ ಹೊಲೆ, ಹಾಲಿಲ್ಲದ ಮೊಲೆ

ಹರುಕು ಅಂಗಿ ಹಸಿವಿನ ಜೊತೆ
ಕಾದು ಕಾದು ಸೋತಿತ್ತು
ತೇಪೆಗೆ ಸೂಜಿಗಣ್ಣಾಗಿ ಸೂರಂಚಲಿ ತೂಗಿತ್ತು
ಅವನ ಜೇಬೋ ನಕ್ಷತ್ರದೂರು

ತಾರೆಯೂರ ಚಂದ್ರಣ್ಣ ಬೆಳಗು ಬಳಿಯೋ..
ಹಟ್ಟಿಯ ಹುಡುಗರ ಚ್ವಾಮಂದೇವರ ಮೆರವಣಿಗೆ
ಹರಕೆ ಕುಣಿತ ತಟ್ಟೆಯ ಬಡಿತ
ಹಾಳು ಬಾವಿಗೆ ಗಣೇಶ ಸಂಭ್ರಮ ಜೈ ಜೈ

ಹೊಗೆ ಕಿಂಡಿಯ ಬೆಳಕಲ್ಲಿ
ಜೇಡ ಹೆಣೆದ ಬಲೆಯಲ್ಲಿ ಹಲ್ಲಿಯ ಬೇಟೆ
ಬುಡ್ಡಿ ಉರಿದು ಕತ್ತಲಿಗೆ ಕೇಡು ಮಾಡಿತ್ತು
ದೂರ ಬೆಟ್ಟದ ಕನಸು ರಂಗೋಲಿಯ ಹಾಸಿತ್ತು

ಮೂರು ಪಟ್ಟಿಗೆ ಕೈಲಾಸ
ನಾಮಕ್ಕೆ ವೈಕುಂಟ
ಕಾಯ್ವ ಊರ ಮಾರಿಗೆ
ಕರಿ ಹುಂಜನ ಭೇಟೆಯ ಊಟ

ಮಡಿ ಪೂಜಾರಿಯ ಕಾಲಿಗೆ
ನಾಯಿ ಉಚ್ಚೆಯ ಮಜ್ಜನ ಮಾಡಿತ್ತು
ಬೊಚ್ಚು ಬಾಯ ಅಜ್ಜಿ
ಅಂಗಳದ ಕತೆಗೆ ಹೂಂಗುಡುವ ಹುಡುಗರ ಸಾಲು

************

Leave a Reply

Back To Top