ಪ್ರಸ್ತುತ

ಮತ್ತೆ ಸಿಕ್ಕಿದ್ದಳು ವಸಂ

Poverty Paintings by Famous Artists | 1st Art Gallery

ಪ್ರಮೀಳಾ .ಎಸ್.ಪಿ.

ನಿತ್ಯವೂ ಶಾಲೆಗೆ ಹೋಗುವ ದಾರಿಯುದ್ದಕ್ಕೂ ನನ್ನ ಗಂಡನನ್ನು ಬೈದುಕೊಂಡೇ ಹೋಗುತ್ತೇನೆ.ಇವರಿಂದ ನನಗೆ ಸಮಯ ಮೀರಿತು,ಮನೆಗೆ ಬಂದ ಅತಿಥಿಗಳು ಹೊರಡಲು ಸಿದ್ಧರಾದರೂ ಅವರಿಗೆ ತಿಂಡಿ ಕಾಫಿ ಕೊಡಲು ಅದೇಶಿಸುತ್ತಾರೆ.ಇಲ್ಲವೋ ಹೊರಟ ಹೊತ್ತಿಗೆ ಚಹಾ ಕೇಳುತ್ತಾರೆ ಎಂದೆಲ್ಲಾ ಅಂದುಕೊಂಡು ಆತುರದಲ್ಲಿ ಹೋಗುವ ದಾರಿಯಲ್ಲಿ ಸಿಗುವ ಮನೆ ‘ವಸಂತಳದ್ದು’.

ಸಂಜೆ ಬರುವ ವೇಳೆಗೆ ಬಾಗಿಲಲ್ಲಿ ನಿಂತು ಮುಗುಳ್ನಗೆ ಬೀರಿ ಮಾತು ಪ್ರಾರಂಭಿಸುತ್ತಾಳೆ.ಒಂದೊಂದು ದಿನಕ್ಕೆ ಒಂದೊಂದು ಘಟನೆ ಹೇಳಿಬಿಡುತ್ತಾಳೆ.ಹಾಗೆಂದು ಎಂದೂ ಸಂಪೂರ್ಣವಾಗಿ ಹೇಳಿದಳು ಎಂದಿಲ್ಲ.ಇಡೀ ಬೀದಿಯಲ್ಲಿ ಯಾರೊಂದಿಗೂ ಅವಳ ಮಾತಿಲ್ಲ.’ಬಜಾರಿ’ ಎಂಬ ಪಟ್ಟ ಅದ್ಯಾವಾಗ ಲೋ ಧಕ್ಕಿ ಬಿಟ್ಟಿದೆ ಅವಳಿಗೆ.ನನ್ನೊಂದಿಗೆ ಮಾತಿಗೆ ನಿಂತಾಗಲು ನಾನು ಕೇವಲ ಶ್ರೋತೃದಾರಳು.ಅವಳು ಹೇಳಿದ್ದನ್ನೆಲ್ಲಾ ಅವಲೋಕಿಸಿದಾಗ …


ವಸಂತ ಬಡ ಕುಟುಂಬದ ಹೆಣ್ಣು ಮಗಳು.ಬದುಕು ಕಟ್ಟಿಕೊಳ್ಳಲು ಬೆಂಗಳೂರಿನ ಗಾರ್ಮೆಂಟ್ಸ್ ಸೇರಿದ್ದಳು.ಅಲ್ಲಿಯೇ ಅನ್ಯಜಾತಿಯ ಯುವಕನೊಂದಿಗೆ ವಿವಾಹ ವಾದ ಕಾರಣ ಎರೆಡೂ ಮನೆಯವರಿಗೂ ಬೇಡವಾಗಿದ್ದರು.ಈ ನಡುವೆ ಹುಟ್ಟಿದ ಮೊದಲನೇ ಮಗ ವಿಕಲಚೇತನ ನಾಗಿದ್ದ.ಇದರಿಂದಾಗಿ ಅವಳು ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಕುಟುಂಬ ನಿರ್ವಹಣೆ ಕಷ್ಟವಾಗಿ ಜಿಲ್ಲಾ ಕೇಂದ್ರವೊಂದಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ಜೀವನ ಪ್ರಾರಂಭಿಸಿದ್ದರು.ಮತ್ತೊಬ್ಬ ಮಗಳು ಹುಟ್ಟಿದಳು.ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ ಈಗ ನಾಲ್ಕು ಜನರ ಕುಟುಂಬವಾಯ್ತು.ಗಂಡನೊಬ್ಬನೇ ದುಡಿಯಬೇಕಾಯ್ತು.ಹಾಗೂ ಹೀಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ‘ಗೋಬಿ ಮಂಚೂರಿ’ ಮಾರುವ ವ್ಯಾಪಾರ ಆರಂಭಿಸಿದರು.
ನಾನು ಅವಳಿಗೆ ಸಿಕ್ಕ ದಿನವೆಲ್ಲಾ ಅದರದ್ದೇ ವಿಷಯ ಅವಳ ಬಾಯಲ್ಲಿ…

ನನ್ನ ಗಂಡ ರಾಜನಂಗೆ ಬೆಳೆದವರು, ಅವರಿಗೆ ಕಷ್ಟ ಸುಖ ಏನು ಗೊತ್ತಿಲ್ಲ.ಬೆಳಿಗ್ಗೆ ನಾನೇ ಮನೆಯಲ್ಲಿ ಗೋಬಿ ತಯಾರಿಸಿ,ಬೇಕಾದ ಎಲ್ಲಾ ಸಿದ್ಧತೆ ಮಾಡಿ ಅವರನ್ನು ನೀಟಾಗಿ ಬಟ್ಟೆ ಹಾಕೊಂಡು ಹೋಗಿ ಮಾರಲು ಕಳಿಸ್ತಾ ಇದ್ದೇನೆ.ಅದಕ್ಕೆ ಹೆಚ್ಚು ಜನ ನಮ್ಮ ಅಂಗಡಿಯಲ್ಲಿ ಬಂದು ತಿನ್ನುತ್ತಾರೆ.ಒಂದೊಂದು ದಿನ ಒಂದು ಸಾವಿರ ರೂಪಾಯಿಗಳ ವ್ಯಾಪಾರ ಆಗುತ್ತೆ.ಹೆಂಡತಿ ಮಕ್ಕಳು ಎಂದರೆ ನನ್ನ ಗಂಡನಿಗೆ ಪ್ರಾಣ.ಎರೆಡು ಲೀಟರ್ ಹಾಲು ತಗೊ ಅಂತಾರೆ,ಹಣ್ಣು,ಬ್ರೆಡ್ಡು,ಬಿಸ್ಕತ್ ಇಲ್ಲದೆ ಮನೆಗೆ ಬರಲ್ಲ.ಬೇಕಾದಷ್ಟು ತಂದು ಹಾಕ್ತಾರೆ.
ನನ್ನ ಅಪ್ಪ ಅಮ್ಮ ಕೈ ಬಿಟ್ಟರೂ ನನ್ ಗಂಡ ಕೈ ಬಿಡಲಿಲ್ಲ, ನನ್ನ ಎರೆಡೂ ಮಕ್ಕಳು ಹುಟ್ಟಿದಾಗ ಇವರೇ ಬಾಣಂತನ ಮಾಡಿದ್ರು.ಇಷ್ಟೊಂದು ಬಾಡಿಗೆ ಕಟ್ಟಿಕೊಂಡು ಇಂತಹ ಮನೆಯಲ್ಲಿ ಸಾಕಿಕೊಂಡು ಹೋಗ್ತಾ ಅವ್ರೇ…..
ಹೀಗೆ ಸಾಲು ಸಾಲುಗಳಲ್ಲಿ ತನ್ನ ಸಂಸಾರದ ಬಗ್ಗೆ ಹೇಳ್ತಾ ಗಂಡನನ್ನು ಹೊಗಳು ತಿದ್ದಳು ವಸಂತ.
ಬೆಳಿಗ್ಗೆ ನನ್ನ ಪತಿಯನ್ನು ಬೈಕೊಂಡು ಹೋಗೋ ನಾನು ಸಂಜೆ ಬರುವಾಗ ಅವಳ ಮಾತು ಕೇಳಿ ಸಂತೋಷ ಪಡುತ್ತಾ ಮನೆಗೆ ಬರುತ್ತಿದ್ದೆ.
ಅವಳ ಮಕ್ಕಳ ಮುಖ ನೋಡಿ ನಕ್ಕು ಮಾತಾಡಿಸಿ ಮನೆಗೆ ಬಂದರೆ ನನಗೂ ಒಂದು ರೀತಿ ಸಮಾಧಾನ ಆಗುತಿತ್ತು.
ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ತಂದು ಕೊಡುತ್ತೇನೆ ಎಂದು ಹೇಳಿ ಬಂದಿದ್ದೆ.ಆದರೆ
ಅವಧಿಗೆ ಮುಂಚೆಯೇ ಶಾಲೆಯ ಬಾಗಿಲು ಹಾಕಿತ್ತು.ಕರೊನಾ ಕಾರಣದ ಲಾಕ್ ಡೌನ್ ನಿಂದಾಗಿ ನಲವತ್ತು ದಿನಗಳಿಂದ ವಸಂತಳ ಮನೆ ಕಡೆ ಹೋಗಲೇ ಇಲ್ಲ.
ನಿನ್ನೆ ಒಮ್ಮೆ ಹೋಗಿ ಮಕ್ಕಳ ನೋಡಿ ಬರೋಣ ಎಂದು ಹೋಗಿದ್ದೆ.
ನನ್ನ ಕಂಡ ತಕ್ಷಣವೇ ಮಕ್ಕಳು ನಕ್ಕರು.ವಸಂತ ಮಾತು ಆರಂಭಿಸಿದಳು…

.

ಎರೆಡು ತಿಂಗಳಾಯ್ತು,ಬೀದಿ ಬದಿ ಅಂಗಡಿ,ಹೋಟೆಲ್ ಬಾಗಿಲು ಹಾಕಿ, ಕೈಲಿ ಒಂದು ರೂಪಾಯಿ ಇಲ್ಲ,ಬಾಡಿಗೆ ಕಟ್ಟಿಲ್ಲ,ಮಕ್ಕಳಿಗೆ ಹಾಲು,ಬ್ರೆಡ್,ಬಿಸ್ಕಿಟ್ ತರಲು ಆಗಿಲ್ಲ.ವಿಕಲಚೇತನ ಮಗನಿಗೆ ಮಾತ್ರೆ ತಂದಿಲ್ಲ.ಅತ್ತ ಅತ್ತೆ ಮನೆಯೂ ಇಲ್ಲ,ಇತ್ತ ತಾಯಿ ಮನೆಯೂ ಇಲ್ಲ.


ಗಂಡನಿಗೆ ಕೆಲಸ ಇಲ್ಲ.ಅಕ್ಕಿ ಬೇಳೆ ಬಿಟ್ಟರೆ ಬೇರೇನೂ ಇಲ್ಲ.
ನನ್ನ ಗಂಡ ಎಲ್ಲಾ ಕಡೆ ಹೋಗಿ ಕೆಲಸ ಹೋಗಿ ಕೇಳಿದ್ರೂ… ಎಲ್ಲೂ ಕೆಲಸ ಸಿಗಲಿಲ್ಲ.
ಮೊನ್ನೆಯಷ್ಟೇ ಹಾಲಿನ ಡೈರಿ ಯ ಲಾರಿಯಲ್ಲಿ ಹಳ್ಳಿ ಹಳ್ಳಿಗೆ ದನಗಳ ಮೇವು ಇಳಿಸಲು ಹೋಗುತ್ತಿದ್ದಾರೆ.ದಿನಕ್ಕೆ ಇನ್ನೂರು ಐವತ್ತು ರೂಪಾಯಿ ಕೊಡ್ತಾ ಇದ್ದಾರೆ. ಬೆನ್ನ ಮೇಲೆ ಮೂಟೆ ಹೊತ್ತು ಬೆನ್ನೆಲ್ಲಾ ಬರೆ ಬಂದಿದೆ ನೋಡಿ ಎಂದು ಕಣ್ಣಲ್ಲಿ ನೀರು ಸುರಿಸುತ್ತಾ ತನ್ನ ಗಂಡನ ಶರ್ಟ್ ಎತ್ತಿ ಬೆನ್ನು ತೋರಿಸಿದಳು.ಮಕ್ಕಳು ಬಡ ವಾಗಿ ಹೋಗಿವೆ ಎಂದು ದುಃಖಿಸಿದಳು.

ಇಷ್ಟು ದಿನ ಉಳಿಸಿದ ಹಣ ಎಲ್ಲಿ? ಎಂದೆ. ಚೀಟಿ ಹಾಕಿದ್ದೆವು.ಅವನು ಈಗ ದುಡ್ಡಿಲ್ಲ ಎಂದುಬಿಟ್ಟ ಎಂದಳು.ಬಾಡಿದ ಅವಳ ಮುಖ,ಕತ್ತು ಬಗ್ಗಿಸಿ ಕುಳಿತ ಅವಳ ಗಂಡನ ನೋಡಿ ಮನಸ್ಸು ಭಾರವಾಯಿತು.
ಆರಕ್ಕೇರದ,ಮೂರಕ್ಕಿಳಿಯದ ನನ್ನ ಸಂಬಳದಲ್ಲಿ ನಾನಾದರೂ ಏನು ಸಹಾಯ ಮಾಡಲಿ??
ಅವರಿಬ್ಬರ ಮೊಬೈಲ್ ಗೆ ಕರೆನ್ಸಿ ಹಾಕಿಸಿದೆ.ಮಕ್ಕಳಿಗೆ ಬಿಸ್ಕಿಟ್ ತಂದು ಕೊಟ್ಟು ಮನೆ ಕಡೆ ಹೆಜ್ಜೆ ಹಾಕಿದೆ.
ರಾತ್ರಿ ನಿದ್ದೆ ಸುಳಿಯಲಿಲ್ಲ.

ಕಾಣದ ಜೀವಿಯೊಂದು ಅದೆಷ್ಟು ಜನರ ಜೀವನವನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ ಬದುಕಿದವರನ್ನು ಬರಿದಾಗಿಸಿದೆ… ಅಲ್ಲವೇ…

******

One thought on “ಪ್ರಸ್ತುತ

  1. ಬೀದಿ ಬೀದಿಗಳಲ್ಲಿ ಕೇರಿ ಕೇರಿಗಳಲ್ಲೂ ಇದ್ದಾರೆ ವಸಂತನಂತವರು. ಇದಕ್ಕೆ ಮನುಷ್ಯನಾ ಸರ್ಕಾರವಾ ಯಾರು ಹೊಣೆ? ಪ್ರಸಂಗ ತುಂಬಾ ವಾಸ್ತವವಾಗಿದೆ.
    ಲೇಖಕಿಯ ನಿರೂಪಣೆ ಸೊಗಸಾಗಿದೆ.

Leave a Reply

Back To Top