ದಾಂಪತ್ಯ ಸಂಗಾತಿ
ಆದಪ್ಪ ಹೆಂಬಾ
“ಮುಂದುವರೆದಿಹ ನಮ್ಮ
ದಾಂಪತ್ಯ ಗೀತೆಯ ನಿನಾದ”


…….. ಆ ಕ್ಷಣ ನನ್ನ ಮುಖ ಸಪ್ಪೆಯಾದರೂ ಅವಳ ಕಣ್ಣೋಟದ ನೆನಪು ನನ್ನ ಮುಖದಲ್ಲಿ ಮಂದಹಾಸವ ತಂದಿತು. ಅವರ ಮನೆಯಿಂದ ಬೀಳ್ಕೊಟ್ಟು ನಮ್ಮೂರಿಗೆ ಹೊರೆಟೆವು. ದಾರಿಯುದ್ದಕ್ಕೂ ಅವಳದೇ ನೆನಪು ಒಂದರ್ಥದಲ್ಲಿ ಗುಂಗು. ನಮ್ಮದು ಅರೇಂಜ್ಡ್ ಮ್ಯಾರೇಜ್ ಆಗಿದ್ದರಿಂದ ಇನ್ನಷ್ಟು ಪದ್ಧತಿ ಗಳನ್ನು ಅನುಸರಿಸಬೇಕಿತ್ತು, ಕನ್ಯೆ ನೋಡಲು ಮತ್ತೊಮ್ಮೆ ನಮ್ಮ ಮನೆಯವರನ್ನೆಲ್ಲಾ ಕರೆದುಕೊಂಡು ಹೋಗಬೇಕು, ಅವರಿಗೂ ಆ ಹುಡುಗಿ ಇಷ್ಟವಾಗಬೇಕು ನಂತರವೇ ಮಾತುಕತೆ. ಇದು ಆ ಕಾಲದ ಬಹತೇಕರ ಮನೆ ಮನೆ ಕತೆ. ಎರಡನೇ ಬಾರಿಗೆ ನನ್ನವಳ ನೋಡಲು ಹೋದೆವು. ಚಿಕ್ಕಪ್ಪ, ಅಪ್ಪ, ಅಮ್ಮ, ತಮ್ಮ ತಂಗಿ ಎಲ್ಲರೂ ಜೊತೆಯಾಗಿದ್ದರು. ಕನ್ಯೆ ನೋಡುವ ಶಾಸ್ತ್ರ ಶುರುವಾಯಿತು. ಈ ಬಾರಿ ಉಪ್ಪಿಟ್ಟು. ಮತ್ತವಳೇ ತಂದಳು, ಹೀಗಾಗಿ ಅದು ತುಂಬ ರುಚಿಯಿತ್ತು. ನಮ್ಮ ಚಿಕ್ಕಪ್ಪನವರಿಂದ ಮತ್ತೊಮ್ಮೆ ಹುಡುಗೀನ ಮಾತಾಡಸೋದು, ಹೇಳೋದು ಕೇಳೋದು ನಡೀತು. ಅವಳು ನಿರರ್ಗಳವಾಗಿಯೇ ಉತ್ತರಿಸುತ್ತಿದ್ದಳು. ನಮ್ಮ ಬರುವಿಕೆ ಗೊತ್ತಿದ್ದರಿಂದ ಮೊದಲೇ ರಿಹರ್ಸಲ್ ಮಾಡಿಸಿದ್ದರೇನೋ ಎನ್ನುವಷ್ಟು ಕರಾರುವಕ್ಕಾಗಿ ಉತ್ತರಿಸುತ್ತಿದ್ದಳು. ಸಾಂಪ್ರದಾಯಿಕ ಮಾತುಕತೆ ಮುಗಿದ ಮೇಲೆ ನಮ್ಮ ಚಿಕ್ಕಪ್ಪ,
“ನೋಡಪಾ ಆದಪ್ಪ ಮತ್ತೇನರ ಕೇಳದೈತನು?”
ಅಂತ ನನ್ನನ್ನು ಕೇಳಿದರು. ನನಗದೆಲ್ಲಿಂದ ಬಂತೋ ಧೈರ್ಯ ಗೊತ್ತಿಲ್ಲ,
“ಚಿಕ್ಕಪ್ಪ ನಾನು ಹುಡುಗಿ ಕುಡ ಸಪರೇಟ್ ಆಗಿ, ವಯ್ಯಕ್ತಿವಾಗಿ ಮಾತನಾಡಬೇಕಪ” ಅಂದೆ. ಆಗ ಎಲ್ಲರೂ ಗಲಿಬಿಲಿ! ಕಾರಣ ಆ ಕಾಲಕ್ಕೆ ಈ ರೀತಿ ಹುಡುಗ-ಹುಡುಗಿ ಪ್ರತ್ಯೇಕವಾಗಿ ಮಾತನಾಡುವ ಪದ್ಧತಿ ಇರಲಿಲ್ಲ. ಹೀಗಾಗಿ ಎಲ್ಲರೂ ಒಂದು ಕ್ಷಣ ಸ್ತಬ್ಧವಾದರು. ನಮ್ಮ ಚಿಕ್ಕಪ್ಪನವರೇ ಸಾವರಿಸಿಕೊಂಡು,
“ನೋಡ್ರಿ ನಮ್ ಹುಡುಗ ಹುಡುಗಿ ಕುಡ ಸಪರೇಟ್ ಆಗಿ ಮಾತಾಡಬೇಕಂತಾನ ನೀವೇನಂತೀರಿ?” ಅಂದ್ರು
ಆಗ ನಮ್ಮ ಮಾವನವರು,
“ಹೌದ್ರ್ಯಾ….. ಆತ್ ತಗೋರಿ ಈ ರೂಮಿನ್ಯಾಗ ಮಾತಾಡ್ಲಿ” ಅನ್ನುತ್ತಾ
ಅಲ್ಲೇ ಇದ್ದ ರೂಮನ್ನು ತೋರಿಸಿದರು.
ಆ ರೂಮೋ ಕಗ್ಗತ್ತಲ ಗುಹೆಯಂತಿತ್ತು! ಟ್ಯೂಬ್ ಲೈಟ್ ಹಾಕಿದ ಮೇಲೆ ಬೆಳಕು ಬಂತು. ಮೊದಲು ನಾನು ಆ ರೂಮಿನೊಳಗೆ ಹೋಗಿದ್ದೆ, ನಂತರ ಅವಳು ಬಂದಳು. ಜೊತೆಗೆ ಮಿಂಚು ಬಂದಿತ್ತು. ಕತ್ತಲ ಕೋಣೆ ಆಗ ಝಗಮಗ. ಅವಳೊಂದು ಖುರ್ಚಿಯ ಮೇಲೆ, ನಾನೊಂದು ಖುರ್ಚಿಯ ಮೇಲೆ. ನಡುವೆ ಮೌನ. ಮಾತನಾಡಲು ನನಗೇ ಧೈರ್ಯವಿಲ್ಲ. ಪಾಪ ಅವಳೇನು ಮಾತನಾಡಿಯಾಳು? ಹೀಗಾಗಿ ಮೌನ……. ನಾನೇ ಧೈರ್ಯ ತಂದುಕೊಂಡೆ,
“ನಾನು ಇಷ್ಟ ಆಗೀನಾ ನಿಮಗ” ಅಂತ ಕೇಳಿದೆ.
ಅವಳೂ ಕಮ್ಮಿಯೇನಿದ್ದಿಲ್ಲ ಬಿಡಿ,
“ನಿಮಗ ನಾನಿಷ್ಟ ಆಗೀನಿಲ್ರಿ?” ಅಂತ ಕೇಳಿದಳು.
“ಇಷ್ಟ ಆಗಿದ್ದಕ್ಕ ಎರಡನೇ ಸಲ ಬಂದೀನಲ್ವ”
“ಹೌದ್ರ್ಯಾ…ಥ್ಯಾಂಕ್ಸ್ರಿ” ಅನ್ನುವದರ ಜೊತೆ ಮತ್ತೊಂದು ಮುದ್ದಾದ ಮಗುಳು ನಗು.
“ನಮ್ದು ಮೊದಲಿನ ಕತಿ ನಿಮಗ ಗೊತೈತಿಲ್ರಿ”
“ಏನ್ರಿ ನಿಮ್ದು ಮೊದ್ಲು ಎಂಗೇಜ್ ಮೆಂಟಾಗಿ ಕ್ಯಾನ್ಸಲ್ ಆಗಿದ್ದನ್ರಿ?”
“ಹೌದ್ರಿ ಅದನ್ನ ನಿಮಗ ಹೇಳ್ಯಾರ ಇಲ್ಲ ಅಂತ ಕೇಳಿದೆರಿ”
“ಅದೆಲ್ಲ ಕ್ಲಿಯರ್ ಆಗೈತಿಲ್ರಿ?”
“ಎಲ್ಲ ಕ್ಲಿಯರ್ ಆಗೈತ್ರಿ ಏನು ತೊಂದ್ರೆ ಇಲ್ರಿ”
“ಹೌದ್ ಅಪ್ಪಾರು ಹೇಳ್ಯಾರ್ರಿ…… ಕ್ಲಿಯರ್ ಆಗಿದ್ರ ಸಾಕ್ರಿ ಮುಂದ ಎಲ್ಲಾದಕ್ಕೂ ನೀವು ನನ್ ಜೊತಿ ಇರತೀನಂದ್ರ ಸಾಕ್ರಿ ನನಗ ಒಪ್ಪಿಗಿ ಐತ್ರಿ”
ಅಂದವಳ ಕಣ್ಣಿಂದ ಮತ್ತೊಮ್ಮೆ ಬೆಳಕು. ನನಗೋ ಎದ್ನಿಂತು ಎರಡೂ ತೋಳುಗಳಲ್ಲಿ ಬಳಸಿ ಅಪ್ಪಿ ಮುದ್ದಿಸೋಣ ಅನಿಸಿತ್ತು. ಬಟ್ ಹಂಗ್ ಮಾಡೋಕೆ ಆಗ್ಲಿಲ್ಲ. ಆ ಕೋಣೆಯಿಂದ ಹೊರಬಂದೆ. ಹಿರಿಯರು ಮಾತು ಕತೆ ಮುಗಿಸಿದರು. ಕೊನೆಗೂ ಅವರ ಮನೆಯ ಲ್ಯಾಂಡ್ ಲೈನ್ ನಂಬರ್ ಸಿಕ್ತು. ಮುಂದಿನದೆಲ್ಲ ಫೋನಾಯಣ!……. ಅವರ ಮನೇಲಿ ಲ್ಯಾಂಡ್ ಫೋನ್ ಇತ್ತು. ನಮ್ಮನೇಲಿ ಇರಲಿಲ್ಲ. ಅವಾಗ ಟೆಲಿಫೋನ್ ಬೂತ್ ಗಳೇ ನಮಗೆ ಗತಿ. ಅವಾಗ ಟೆಲಿಫೋನ್ ಮಾತೆಂದ್ರೆ ಬಲು ತುಟ್ಟಿ, ಈಗಿನಂತಿದ್ದಿಲ್ಲ. ಟೆಲಿಫೋನ್ ಬಿಲ್ಲಿನ ಟ್ಯಾರಿಫ್ ಭಲೇ ಇರ್ತಿತ್ತು. ಬೆಳಿಗ್ಗೆ ಆರರಿಂದ ಸಂಜೆ ಏಳುಗಂಟೆವರೆಗೆ ಫುಲ್ ಚಾರ್ಜು, ಸಂಜೆ ಏಳರಿಂದ ರಾತ್ರಿ ಹನ್ನೊಂದರವರೆಗೆ ಹಾಫ್ ಚಾರ್ಜು, ರಾತ್ರಿ ಹನ್ನೊಂದರಿಂದ ತಿರಗಾ ಮರುದಿನದ ಬೆಳಗಿನ ಆರು ಗಂಟೆಯವರೆಗೆ ಕ್ವಾರ್ಟರ್ ಚಾರ್ಜು! ನನ್ನವಳಾಗ ನನಗೆ ಏಕೈಕ ಟೆಲಿಫೋನ್ ಗೆಳತಿ. ನಮ್ದೇನಿದ್ರು ರಾತ್ತಿ ಹನ್ನೊಂದರ ಮೇಲಿನ ಮಾತು. ನಾನು ಬೂತ್ ನಲ್ಲಿ ಮಾತಾಡುತ್ತಾ ಕುಳಿತಿದ್ದೆನೆಂದರೆ ಪಾಳೆ ಹಚ್ಚಿದವರು ಬೇರೆ ಬೂತಿಗೆ ಹೋಗುತ್ತಿದ್ದರು. ಹೀಗೊಂದು ರಾತ್ರಿ ಹನ್ನೊಂದಕ್ಕೆ ನಮ್ಮ ಮಾತು ಶುರುವಾಯ್ತು. ಮಾತಾಯ್ತು ಆಯ್ತು…..ಆಯ್ತು…. ಸಮಯ ಹೋದದ್ದು ಗೊತ್ತಾಗಲೇ ಇಲ್ಲ. ಮಾತು ಮುಗಿದ ಮೇಲೆ ನೋಡಿದ್ರೆ. ಆ ಟೆಲಿಫೋನ್ ಬೂತಿನವ ಟೆಬಲ್ ಕೆಳಗೆ ಹೊದ್ದುಕೊಂಡು ಮಲಗಿದ್ದ. ಅವನನ್ನು ಎಬ್ಬಿಸಿ, ಬಿಲ್ ಕೊಟ್ಟು ಹೊರಬಂದೆ. ಜನ ಮಲಗೆದ್ದು ಬೆಳಗಿನ ವಾಕಿಂಗ್ ಶುರು ಮಾಡಿದ್ರು. ಅವರಿಗೆ ಗುಡ್ ಮಾರ್ನಿಂಗ್ ಹೇಳ್ತಾ ಮನೆಗೆ ಹೋಗಿದ್ದೆ. ಅಮ್ಮ ಅಂಗಳದ ಕಸ ಹೊಡೀತಿದ್ಲು.
“ಬೆಳತನಕ ಎಲ್ಯೋಗಿದ್ದೆಪ ?”
ಅಂತ ಕೇಳಿದ್ಲು.
“ನಮ್ ಫ್ರೆಂಡ್ ಮನೆಗೆ ಹೋಗಿದ್ನಮಾ” ಅಂದೆ.
ಇದು ನಮ್ಮ ಫೋನಾಯಣವಾದ್ರೆ ನಮ್ಮ ಮುಖ ಭೇಟಿಯ ಅಭಿಯಾನದ್ದೇ ಮತ್ತೊಂದು ಕತೆ.
ಜುಲೈ ಅಥವಾ ಅಗಷ್ಟ್ ನಲ್ಲಿ ನಮ್ಮ ಎಂಗೇಜ್ ಮೆಂಟ್ ಮಾಡಿದರು ಆದರೆ ಹಿರಿಯರದೇಕೋ ಎಪ್ರಿಲ್ ಇಪ್ಪತ್ತೆಂಟಕ್ಕೆ ಮದುವೆ ಮುಹೂರ್ತ ಅಂತ ಫಿಕ್ಸ್ ಮಾಡಿದರು. ನಡುವೆ ಬರೋಬ್ಬರಿ ಎಂಟು ತಿಂಗಳ ಗ್ಯಾಪ್! ಹ್ಯಾಂಗಿರತೀರಿ? ಅಪ್ಪ-ಅಮ್ಮನ ಕಣ್ತಪ್ಪಿಸಿ ತಪ್ಪದೇ ತಿಂಗಳಿಗೊಮ್ಮೆ ನನ್ನವಳ ಮನೆಗೆ ಹೋಗದಿದ್ದರೆ ಸಮಾಧಾನ ಇರುತ್ತಿರಲಿಲ್ಲ ನನಗೆ. ಅದೂ ಅಲ್ದೇ ಅವಳಿಗೆ ಗೊತ್ತಿಲ್ಲದಂತೆ ಒಮ್ಮಿಂದೊಮ್ಮಿಗೇ ಅವಳ ಮನೆ ಮುಂದೆ ಹೋಗುವುದು, ಆಗವಳ ಸರ್ಪ್ರೈಜ್ ಆಗುವ ಆನಂದ ಭರಿತ ಕಣ್ಣುಗಳ ನೋಡುವುದು ನನಗೊಂಥರಾ ಖುಷಿ. ಹಾಗೇ ಮಾಡುತ್ತಿದ್ದೆ, ಖುಷಿ ಪಡುತ್ತಿದ್ದೆ. ಒಂದಿನ ಮಾರ್ಚ್ ಇಪ್ಪತ್ತಾರಕ್ಕೆ ಎಂಟನೇ ಬಾರಿಗೆ, ಬೆಳಗಿನ ಜಾವ ಎಂಟುವರೆಗೆ ಅವಳ ಮನೆ ಕಾಲಿಂಗ್ ಬೆಲ್ ಬಾರಿಸಿದೆ. ಅವಳೇ ಬಾಗಿಲು ತಗೆದಳು. ನನ್ನ ನೋಡಿ ಆಶ್ಚರ್ಯದಿಂದ, ಆದ್ರೆ ಖುಷಿಯಿಂದಲ್ಲ,
“ಅಯ್ಯೋ…… ಇವತ್ತ ಬಂದು ಬಿಟ್ರೆನು?” ಅನ್ಬೇಕೆ?
“ಯಾಕ್ಲೇ ಎದ್ದೂ ಬಿದ್ದೂ ಓಡಕೋತ, ಸತಗೋತ ಬಂದೀನಿ ಖುಷಿಯಿಲ್ಲನು ನಿನಗ?”
ಕೊಂಚ ಹುಸಿಯದೇ ಕೋಪವಿತ್ತೆನಗೆ.
“ಹಂಗಲ್ರೀ ನಾಳಿಲ್ದ ನಾಡಿದ್ದು ಬಂದಿದ್ರ ನನ್ನ ಬರ್ತ್ ಡೇ ಇತ್ತು ನಾನು ಅವತ್ತೆ ಬರತಾರ ಅನ್ಕಂಡಿದ್ದೆ ಆದ್ರ ನೀವು ನೋಡಿದ್ರ ಇವತ್ತ ಬಂದೀರಿ”
“ಓ……. ನಾಡಿದ್ದು ನಿನ್ನ ಬರ್ತ್ ಡೇ ಅನು?”
“ಮತ್ತ ಮಾರ್ಚ್ ಇಪ್ಪತ್ತೆಂಟು, ಗೊತ್ತಿಲ್ಲನು ನಿಮಗ?”
ಅಯ್ಯೋ ನಮ್ಮ ಬರ್ತ್ ಗೂ ಒಂದು ಡೇ ಅಂತ ಇರ್ತದೆ, ಆ ಡೇಟನ್ನ ನಾವು ನೆನಪಿಟ್ಕೋ ಬೇಕು ಅನ್ನೋ ವಿಷ್ಯಾನೇ ಗೊತ್ತಿಲ್ಲದ ಗಮಾರ ನಾನಾಗಿದ್ದೆ.
“ಸಾರಿ ಕಣೆ….. ಗೊತ್ತಾಗ್ಲಿಲ್ಲ” ಅಂದೆ.
ದೇವರಂಥವಳು.
“ಇರ್ಲಿ ಬಿಡ್ರಿ ಅದಕ್ಯಾಕ ಬೇಜಾರ್ ಮಾಡ್ಕತೀರಿ”
ಅಂತ ಸಮಾಧಾನಿಸಿದಳು. ಅಂದು ರಾತ್ರಿಯವರೆಗೂ ಅವಳೊಂದಿಗೆ ಮಾತು, ಹರಟೆ, ಗದುಗಿನ ಬೃಹತ್ ಮಾರ್ಕೇಟಿನಲ್ಲಿ ಸುತ್ತಾಟ, “ಮೈಫುಡ್” (ಹೊಟೆಲ್) ನಲ್ಲೊಂದು ಊಟ ಮತ್ತೆ ರಾತ್ರಿ ಬಸ್ಸಿಗೆ ಮನಸ್ಸಿಲ್ಲದಿದ್ದರೂ ವಾಪಾಸ್ ಊರಿಗೆ ಬರಲೇ ಬೇಕಲ್ಲ ಅನ್ನುವ ಪರದಾಟ. ನನ್ನವಳನ್ನು ಅವಳ ತವರುಮನೆಯಲ್ಲಿ ಬಿಟ್ಟು ನನ್ನೂರಿಗೆ ಬಂದೆ.
ಅಂದು ಮಾರ್ಚ್ ಇಪ್ಪತ್ತೇಳು….. ಛೇ…. ನಾಳೆ ನನ್ನವಳ ಬರ್ತ್ ಡೇ, ನನ್ನ ಜೊತೆ ನಿಶ್ಚಯವಾದ ಮೇಲವಳ ಮೊದಲ ಬರ್ತ್ ಡೇ ನಾನಿರಬೇಕಿತ್ತು….. ಛೇ ಅವಸರಿಸಿ ನಿನ್ನೆಯೇ ಹೋಗಿಬಿಟ್ಟೆ….. ನಾಳೆ ಹೋಗಬೇಕಿತ್ತು….. ಏನ್ಮಾಡೋದು? ಚಡಪಡಿಸುತ್ತಿತ್ತು ನನ್ನ ಮನ. ಕೈ ಕೈ ಹಿಚುಕಿಕೊಳ್ಳುತ್ತಿದ್ದೆ. ನನ್ನ ಬಳಿ ಆಗ ಬೈಕಿನ ಸೌಲತ್ತೂ ಇರಲಿಲ್ಲ. ಆಗ ನೆನಪಾದದ್ದು ನನ್ನ ಕುಚುಕು ಗೆಳೆಯ ಮಲ್ಲಿಕಾರ್ಜುನ. ಅವನ್ಹತ್ರ ಬೈಕಿತ್ತು.
“ದೋಸ್ತ ನಾಳೆ ನಿನ್ನ ಗಾಡಿ ಬೇಕಲೆ, ಎಲ್ಲಿಗೆ ಅಂತ ಕೇಳಬ್ಯಾಡ ಕೊಡ್ತೀಯಾ, ಇಲ್ಲ” ಅಂದೆ.
“ಎಲ್ಲಿಗೋತೀಯಿ?”
“ಕೇಳಬ್ಯಾಡ ಅಂದ್ನೆಲಲೇ ದೂರ ಹೊಂಟೀನಿ ಅಷ್ಟ”
“ಆತು ಒಯ್ಯಿ ಆದ್ರೆ ದೂರ ಹೊಂಟೀನಿ ಅಂತೀಯಿ ಹುಷಾರಾಗಿ ಹೋಗಿ ಬಾ”
ಇಪ್ಪತ್ತೇಳರ ರಾತ್ರಿಯೇ ಟ್ಯಾಂಕ್ ಫುಲ್ ಮಾಡಿಸಿಕೊಂಡು ನಮ್ಮ ಮನೆಯ ಮುಂದೆ ನಿಲ್ಲಿಸಿದ್ದೆ. ನನ್ನ ಮನಸ್ಸು ಬೆಳಗಾಗುವುದನ್ನೂ ಕಾಯಲಿಲ್ಲ. ಮೂರುವರೆಯಾಗಿತ್ತು, ಎದ್ದು ಜಳಕ ಮಾಡಿ ಗಾಡಿ ಹತ್ತಿದೆ. ಅದೂ ವಿಥೌಟ್ ಹೆಲ್ಮೆಟ್! ನನ್ನೂರಿನಿಂದ ನನ್ನವಳೂರಿಗೆ ನೂರೆಂಬತ್ತು ಕಿಲೋಮೀಟರ್ ಗಳ ಪಯಣ! ಯಾವ ಸುಸ್ತೂ ಆಗಿರಲಿಲ್ಲ. ಕುತೂಹಲದ ಕಣ್ಣಿಂದ ಎಂಟುಗಂಟೆಗೆ ನನ್ನವಳ ಮನೆ ಬೆಲ್ ಬಾರಿಸಿದೆ. ಅವಳೇ ಬಾಗಿಲು ತೆರೆದಳು. ಆಶ್ಚರ್ಯದಿಂದ ಅಗಲಿದ ಅವಳ ಬಾಯಿ ಆಕಾಶವನ್ನೇ ನುಂಗುತ್ತಿತ್ತು. ಅವಳ ಕಣ್ಣಂಚಿನಲ್ಲಿ ಆನಂದದ ಹನಿ ಜಿನುಗಿತ್ತು.
ಅವರ ಮನೆಯವರೆಲ್ಲರಿಗೆ ಖುಷಿಯೋ ಖುಷಿ. ನನ್ನವಳಿಗಂತೂ ಆಕಾಶ ಮೂರೇ ಗೇಣು. ಫಾರ್ ದಿ ಫಸ್ಟ್ ಟೈಮ್ ಅವಳಿಗೊಂದು ಸೀರೆ ಒಯ್ದಿದ್ದೆ. ತೊಟ್ಟುಕೊಂಡು ಬಂದ ದೇವತೆಯನ್ನು ‘ಆ’ ರೂಮಿನಲ್ಲಿ ತಬ್ಬಿಕೊಂಡು ಮೊದಲ ಮುತ್ತು ನೀಡಿದ್ದೆ.
ಅದು ನನ್ನ ಜೀವನದ ಮೊದಲ ಮುತ್ತು!!!
ಆ ಮೊದಲ ಮುತ್ತಿನ ಮತ್ತಿನಿಂದ ನಾನಿನ್ನೂ ಹೊರಬಂದಿಲ್ಲ. ಗುಣದಲ್ಲೂ ದೇವತೆಯಾದ ನನ್ನವಳ ಜೊತೆ ಸಂಸಾರಕ್ಕೆ ಇಪ್ಪತ್ತೇಳು ವರುಷಗಳುರುಳಿದ್ದು ಕನಸೋ ನನಸೋ ತಿಳಿಯುತ್ತಿಲ್ಲ.
ಅವಳ ಹೂ ನಗು ತುಂಬಿದ ಹೊಳಪು ಕಣ್ಣುಗಳನ್ನೊಮ್ಮೆ ನೋಡಬೇಕು, ಅವಳ ಇಂಪಾದ ದನಿಯನ್ನು ಕೇಳಬೇಕು, ಅವಳ ನಿರ್ಮಲ ಮನಸ್ಸಿಗೊಮ್ಮೆ ಶರಣೆನ್ನಬೇಕು. ನನ್ನ ಮನಸ್ಸಿನಲ್ಲಿ ಇಂತಹದೇ ತಹ ತಹ. Marriages are made in heaven ಅಂತಾರಲ್ವ ಅದರ ಪ್ರಕಾರ ನಾನು ಸ್ವರ್ಗಾಧಿಪತಿಯೇ…..
ಬಹುಶಃ ಅವಳೆಡೆಗಿನ ನನ್ನೊಳಗಿನ ಈ ತಹ-ತಹ ಕಡಿಮೆಯಾಗುವುದೇ ಇಲ್ಲ. ಬದಲಿಗೆ ದಿನ ಕಳೆದಂತೆ ದ್ವಿಗುಣವಾಗುತ್ತಲೇ ಇರ್ತದೆ. ಅವಳ ಆ ಪರಿಪೂರ್ಣತೆಗೆ ದೂರದಿಂದಲೇ ಸಿಹಿ ಮುತ್ತನಿಡುತ್ತಾ ತಮಗೂ ಶರಣೆನ್ನುತಾ
ಅವಳ ನೆನಪಲ್ಲೇ ಕಣ್ಮುಚ್ಚಿ ವಿರಮಿಸುವೆ.
ನಮಸ್ಕಾರ
————–
ಆದಪ್ಪ ಹೆಂಬಾ




