ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಜಯದೇವಿತಾಯಿ ಲಿಗಾಡೆಯವರ ಸಾಹಿತ್ಯವನ್ನು ಪರಿಚಯಿಸಿಕೊಳ್ಳತಾಯಿದ್ದೇವು…….

ಅವರ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾದರೆ ಅವರ ಬದುಕಿನ ಅನುಭವಗಳು, ಕನ್ನಡ ಭಾಷೆಯ ಮೇಲಿನ ಅಪಾರ ಪ್ರೀತಿ ಹಾಗೂ ವಚನ ಸಾಹಿತ್ಯದ ಬಗೆಗಿನ ಅಚಲವಾದ ಆಸಕ್ತಿಯನ್ನು ಅರಿತುಕೊಳ್ಳುವುದು ಅತ್ಯಂತ ಮುಖ್ಯ.
ಜಯದೇವಿತಾಯಿಯವರ ತಾಯಿಭಾಷೆ ಮರಾಠಿಯಾಗಿದ್ದರೂ, ಅವರ ಹೃದಯದ ಭಾಷೆ ಕನ್ನಡವಾಗಿತ್ತು. ಅವರ ಶಿಕ್ಷಣ ಮರಾಠಿ ಮಾಧ್ಯಮದಲ್ಲಿ ನಡೆದಿತ್ತು. ಉತ್ತಮವಾದ ಮರಾಠಿ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಅವರು ಬೆಳೆಸಿಕೊಂಡಿದ್ದರು. ಆದರೆ, ತಮ್ಮ ತಾಯಿ ನುಡಿಯಾದ ಕನ್ನಡದ ಓದು-ಬರಹದ ಕೊರತೆ ಅವರ ಮನಸ್ಸಿನಲ್ಲಿ ಸದಾ ಒಂದು ಅಳುಕನ್ನು ಉಂಟುಮಾಡುತ್ತಿತ್ತು. ಕನ್ನಡದ ವಚನ ಸಾಹಿತ್ಯವನ್ನು ಓದಬೇಕು, ಅದರಲ್ಲಿರುವ ಶರಣರ ಅನುಭಾವದ ಸಾರವನ್ನು ಅರಿಯಬೇಕು ಎಂಬ ಹಂಬಲ ಅವರಲ್ಲಿ ಸದಾ ಜೀವಂತವಾಗಿತ್ತು.
ಮೂರು ಮಕ್ಕಳ ತಾಯಿಯಾದ ನಂತರವೂ ಅವರ ಕನ್ನಡ ಕಲಿಯುವ ಆಸೆ ಕಡಿಮೆಯಾಗಲಿಲ್ಲ. ವಾರದ ಪಾಠಶಾಲೆಯಿಂದ ಪ್ರಸಾದಕ್ಕೆ ಬರುವ ಜಂಗಮರ ಮೂಲಕ ಕನ್ನಡದ ವರ್ಣಮಾಲೆಯನ್ನು ಕಲಿತುಕೊಂಡರು. ಹೀಗೆ ಕನ್ನಡದ ಅಕ್ಷರಗಳನ್ನು ಕಲಿಯುವ ಮೂಲಕ ವಚನ ಸಾಹಿತ್ಯದ ಅಧ್ಯಯನಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡರು.
ಸಾಹಿತ್ಯದ ಸಿದ್ಧಾಂತಗಳನ್ನು ಕಲಿತು ಕಾವ್ಯ ರಚಿಸುವುದಕ್ಕಿಂತಲೂ, ಬದುಕಿನ ಅನುಭವಗಳನ್ನು ಹೃದಯದ ಭಾಷೆಯಲ್ಲಿ ಅಭಿವ್ಯಕ್ತಿಪಡಿಸುವುದಕ್ಕೆ ಅವರು ಹೆಚ್ಚು ಮಹತ್ವ ನೀಡಿದರು. ಹೀಗೆ ತಮ್ಮ ಅನುಭವಗಳನ್ನೇ ಕಾವ್ಯದ ರೂಪದಲ್ಲಿ ಬರೆಯುತ ಮತ್ತು ಪ್ರಕಟಿಸುವ ಕಾರ್ಯಕ್ಕೆ ಮುಂದಾದರು.

‘ಜಯಗೀತ’ ಕವನ ಸಂಕಲನದ  ವಿಶೇಷತೆ
ಜಯದೇವಿತಾಯಿಯವರ ಕಾವ್ಯಸಾಹಿತ್ಯದ ಪ್ರಮುಖ ಕೃತಿಗಳಲ್ಲಿ ಜಯಗೀತ ಕವನ ಸಂಕಲನವು ವಿಶೇಷ ಸ್ಥಾನವನ್ನು ಹೊಂದಿದೆ. ಈ ಕೃತಿಯ ಮೂಲಕ ಅವರ ಕಾವ್ಯಪ್ರತಿಭೆ ಅನಾವರಣಗೊಳ್ಳುತ್ತದೆ.

ಈ ಕೃತಿಯ ವಿಶೇಷತೆಯನ್ನು ಗಮನಿಸಿದಾಗ, ಕೆಲವು ಕವನಗಳು ಕನ್ನಡದ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆದಿರುವುದು ಮಹತ್ವದ ಸಂಗತಿಯಾಗಿದೆ. ಒಬ್ಬ ಕವಯಿತ್ರಿಯ ಕವನಗಳು ಪಠ್ಯಪುಸ್ತಕಗಳಲ್ಲಿ ಅಳವಡಿಕೆಯಾಗುವುದು ಎಂದರೆ, ಆ ಕವನಗಳು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೂ ಪರಿಚಯವಾಗುತ್ತವೆ ಎಂಬುದನ್ನು ಅರಿಯಬೇಕು

ಕೆಲವು ಗೀತೆಗಳನ್ನು ಸಾಹಿತ್ಯ ಅಕಾಡೆಮಿಯು ಆಯ್ಕೆ ಮಾಡಿಕೊಂಡಿರುವುದು ಅವರ ಸಾಹಿತ್ಯದ ಮೌಲ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಈ ರೀತಿಯಾಗಿ ಪಠ್ಯಪುಸ್ತಕಗಳು, ಆಕಾಶವಾಣಿ ಮತ್ತು ಸಾಹಿತ್ಯ ಅಕಾಡೆಮಿಯಂತಹ ವಿವಿಧ ವೇದಿಕೆಗಳ ಮೂಲಕ ಜಯದೇವಿತಾಯಿಯವರ ಕಾವ್ಯವು ವಿಶಾಲವಾದ ಓದುಗ ಶ್ರೋತೃ ವಲಯವನ್ನು ತಲುಪಿದೆ.

 ಕಲಿತು, ಕನ್ನಡದ ವಚನ ಸಾಹಿತ್ಯದ ಅಧ್ಯಯನದಿಂದ ಪ್ರೇರಣೆ ಪಡೆದು, ತಮ್ಮ ಅನುಭವಗಳನ್ನು ಕನ್ನಡ ಕಾವ್ಯವಾಗಿ ರೂಪಿಸಿದ ಸಾಧನೆಯಲ್ಲಿಯೇ ಅವರ ಸಾಹಿತ್ಯದ ನಿಜವಾದ ಶ್ರೇಷ್ಠತೆ ಅಡಗಿದೆ.

ಕನ್ನಡವನ್ನು ಕಲಿಯುವ ಹಂಬಲದಿಂದ ಆರಂಭವಾದ ಅವರ ಸಾಹಿತ್ಯಯಾನ, ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸುವ ಹಂತಕ್ಕೆ ಬೆಳೆದದ್ದು ನಿಜಕ್ಕೂ ಪ್ರೇರಣಾದಾಯಕವಾಗಿದೆ. ಜಯದೇವಿತಾಯಿಯವರ ಜೀವನವೇ ಒಂದು ಸಂದೇಶವನ್ನು ನೀಡುತ್ತದೆ….ಭಾಷೆ ಕಲಿಯಲು ವಯಸ್ಸಿನ ಮಿತಿಯಿಲ್ಲ…ಸಾಹಿತ್ಯ ರಚಿಸಲು ಔಪಚಾರಿಕ ಶಿಕ್ಷಣದ ಅನಿವಾರ್ಯತೆಯಿಲ್ಲ… ಹೃದಯದಲ್ಲಿ ಅನುಭವದ ಶ್ರೀಮಂತಿಕೆ ಮತ್ತು ಅಭಿವ್ಯಕ್ತಿಯ ಹಂಬಲವಿದ್ದರೆ, ಬದುಕೇ ಸಾಹಿತ್ಯವಾಗಬಲ್ಲದು ಎನ್ನುವುದಕ್ಕೆ
ಜಯಗೀತ ಕವನ ಸಂಕಲನವು ಈ ಸತ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ಜಯದೇವಿತಾಯಿಯವರ ಜಯಗೀತ ಕವನ ಸಂಕಲನದ ವೈಶಿಷ್ಟ್ಯವನ್ನು ಅರಿಯಬೇಕಾದರೆ, ಅದರಲ್ಲಿರುವ ಕನ್ನಡ ಭಾಷೆಯ ಸೊಗಸು, ಛಂದಸ್ಸಿನ ಲಯ ಮತ್ತು ಕವಯಿತ್ರಿಯ ಅಂತರಂಗದ ಭಾವನೆಗಳನ್ನು ಗಮನಿಸಬೇಕು.

ತಾಯಿಯವರು ಜಯಗೀತೆ ತಮ್ಮ ಕೃತಿಯ  ಬಗ್ಗೆ ಹೀಗೆ ಹೇಳುತ್ತಾರೆ…..” ಕನ್ನಡ ಭಾಷೆಯಲ್ಲಿ ಆಗಾಗ ನಾನು ರಚಿಸಿ ಹಾಡುತ್ತ ಬಂದ ಕೆಲವು ತ್ರಿಪದಿಗಳನ್ನು ಒಂದೆಡೆ ಸೇರಿಸಿ ನೋಡಿದಾಗ ಅವು ಕನ್ನಡ ನಾಡಿನ ತಾಯಿಯಂದಿರ ಹಾಡಿನ ಜಾಡವನ್ನು ಅನುಸರಿಸಿ ಮುಂದುವರೆದುದು ಮನಸ್ಸಿಗೆ ಅಪ್ಯಾಯಮಾನವಾಗಿ ಕಂಡಿತು. ಕನ್ನಡ ಕೋಟೆಯ ಬಳಗದ ಮಕ್ಕಳು ಇವುಗಳನ್ನು ಕೇಳಿ ಆನಂದಿಸಿದರು ಎಂದು ಈ ಕೃತಿಯ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಜಯಗೀತದ ಕೃತಿಯ ಪ್ರತಿಯು ಓದುಗರಲಿ ಯಾರ ಬಳಿ ಇದ್ದರೆ ನಮಗೆ ಒಪ್ಪಿಸಲು ವಿನಮ್ರವಾಗಿ ಕೇಳಿಕೊಳ್ಳುತ್ತೇವೆ…….
 ಏಕೆಂದರೆ ಅದರ ಪುನರ್ ಪ್ರಕಟಣೆ ಮಾಡಬೇಕಾಗಿದೆ.

ಇನ್ನೊಂದು ಮೇರು ಕೃತಿ, *ತಾಯಿಯ ಪದಗಳು* (೧೯೫೯)

‘ತಾಯಿಯ ಪದಗಳು’ – ಜನಪದ ಸೊಗಡು

ಜಯದೇವಿತಾಯಿಯವರ ಸಾಹಿತ್ಯದ ಮತ್ತೊಂದು ವಿಶೇಷ ಆಯಾಮವೆಂದರೆ ‘ತಾಯಿಯ ಪದಗಳು’ ಕವನ ಸಂಕಲನ. ಈ ಕೃತಿಯಲ್ಲಿ ತಾಯಂದಿರು ತಮ್ಮ ದೈನಂದಿನ ಬದುಕಿನಲ್ಲಿ ಹಾಡುವ ಜಾನಪದ ಹಾಡುಗಳ ಶೈಲಿಯಲ್ಲಿ ರಚಿಸಿದ ಗೀತೆಗಳು ವಿಶೇಷ ಸ್ಥಾನವನ್ನು ಪಡೆದಿವೆ.
ತಾಯಂದಿರ ಬಾಯಲ್ಲಿ ಸಹಜವಾಗಿ ಮೂಡಿಬರುವ ಹಾಡುಗಳು ಒಂದೆಡೆ ಮನೋರಂಜನೆಯ ಸಾಧನೆಯಾದರೆ ಇನ್ನೊಂದೆಡೆ ಅವು ಬದುಕಿನ ಅನುಭವಗಳ ಅಭಿವ್ಯಕ್ತಿಯೂ ಹೌದು. ತಾಯಿಯ ಮಮತೆ,ಕುಟುಂಬದ ಬಗೆಗಿನ ಕಾಳಜಿ, ಸುಖ-ದುಃಖಗಳ ಅನುಭವ ಹಾಗೂ ಬದುಕಿನ ನಾನಾ ಭಾವನೆಗಳು ಇಂತಹ ಹಾಡುಗಳಲ್ಲಿ ಸಹಜವಾಗಿ ವ್ಯಕ್ತವಾಗುತ್ತವೆ. ಜಯದೇವಿತಾಯಿಯವರು ಈ ಜನಪದ ಪರಂಪರೆಯ ಸೊಗಡನ್ನು ತಮ್ಮ ಕಾವ್ಯದಲ್ಲಿ ಸಮರ್ಥವಾಗಿ ಅಳವಡಿಸಿಕೊಂಡಿದ್ದಾರೆ.

ಅವರ ಗೀತೆಗಳಲ್ಲಿ ಜನಪದ ಶೈಲಿಯ ಸರಳತೆ, ಲಯಬದ್ಧತೆ ಮತ್ತು ಭಾವನಾತ್ಮಕತೆ ಎದ್ದು ಕಾಣುತ್ತವೆ. ಸಾಮಾನ್ಯ ಜನರು ಮಾತನಾಡುವ ಭಾಷೆಯಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ, ಅವರ ಕವನಗಳು ಓದುಗರಿಗೆ ಸುಲಭವಾಗಿ ಅರ್ಥವಾಗುತ್ತವೆ. ಹಾಡಿನ ರೂಪದಲ್ಲಿ ಕೇಳಿದಾಗ ಮನಸ್ಸಿಗೆ ಆಪ್ತವಾಗುತ್ತವೆ.

ತಾಯಿಯ ಪದಗಳು’ ಸಂಕಲನದ ಮೂಲಕ ತಾಯಂದಿರ ಹಾಡುಗಳಲ್ಲಿರುವ ಸಾಹಿತ್ಯಿಕ ಮೌಲ್ಯವನ್ನು ಗುರುತಿಸುವ ಅವಕಾಶ ನಮಗೆ ದೊರೆಯುತ್ತದೆ. ಜನಪದ ಸಾಹಿತ್ಯವು ಜನರ ಬದುಕಿನಿಂದ ಹುಟ್ಟಿದ್ದು….ಅದೇ ಜನರ ಬದುಕಿನ ಭಾವನೆಗಳನ್ನು ಮತ್ತೆ ಜನರಿಗೇ ತಲುಪಿಸುತ್ತದೆ ಎಂಬ ಸತ್ಯವನ್ನು ಈ ಕೃತಿ ಮನದಟ್ಟು ಮಾಡುತ್ತದೆ.

ಹೀಗೆ ಜಯದೇವಿತಾಯಿಯವರ ಕಾವ್ಯದಲ್ಲಿ ಜನಪದ ಶೈಲಿಯು  ಒಂದು ಬರವಣಿಗೆಯ ವಿಧಾನವಾಗದರೆ …ಅವರ ಭಾವನೆಗಳನ್ನು ಅಭಿವ್ಯಕ್ತಿಪಡಿಸುವ ಸಹಜ ಮಾಧ್ಯಮವಾಗಿದೆ. ಕನ್ನಡದ ಜನಪದ ಪರಂಪರೆಯನ್ನು ಆಧುನಿಕ ಕಾವ್ಯದೊಂದಿಗೆ ಬೆಸೆಯುವ ಅವರ ಪ್ರಯತ್ನವು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯಾಗಿದೆ.

*ವಸೂಧೆಯಲ್ಲಿ ಹುಟ್ಟಿ ಹಸನಾಯಿತ ಎನ
ಬಾಳ ಬಸವೇಶ ನಿನ್ನ ದಯೆಯಿಂದ ಜನುಮದ ಹುಷಿಯಲ್ಲ ಕೊಚ್ಚಿ ಹರಿದು ಹೋಯಿತ್ತ!!

*ಇನ್ನೊಂದು ಕಡೆ ಹೇಳುತ್ತಾರೆ

ತನುವೆಂಬ ಗುಡಿಗೆ ಮನವೆಂಬ ಕೋಣೆ ಕೋಣೆಲ್ಲಾ ಹಸನ ಮಾಡ್ಯಾನೋ ಚಿಲ್ಲಿಂಗ ಏನಾಯಿತು
ಯಾಕೋ ಇನ್ನೂ ಬರವಲ್ಲ!!

ರೈತನ ಹೀನಾಯ ಸ್ಥಿತಿಯ ಬಗ್ಗೆ  ಬರೆಯುತ್ತಾರೆ ….

ಬಿತ್ತಿ ಬೆಳಸಿದ ಅನ್ನ ಮರ್ತ್ಯಕ್ಕೆ ನೀಡ್ಯಾನ
ತುತ್ತು ಮಾಡಿ ತಾ ಊಣಿಸ್ಯಾನ ಹೊಲದಣ್ಣ
ಬುತ್ತಿ ತನಗಿಲ್ದದ ಕುಂತಾನ

 ಕೆಸರಾಯ್ತ ಕೈಯ ಬಾಯಿಯೂ ಕೆಸರಾಯ್ತ ಮೊಸರು ಕಡಿತನ ಸಿಗಲಿಲ್ಲ ರೈತಣ್ಣ
ಉಸೆಂದಾನ ತನ್ನ ಬಾಳೇಕ

ರೈತನ ಬಾಳಿನ ಭವಣೆ…. ಜಯಗೀತದ ಕಾವ್ಯದಲ್ಲಿ
ಜಯದೇವಿತಾಯಿಯವರ ಕಾವ್ಯದಲ್ಲಿ ರೈತನ ಬದುಕಿನ ನೋವು, ಶ್ರಮ ಮತ್ತು ಸಂಕಟಗಳು  ಅಭಿವ್ಯಕ್ತವಾಗಿವೆ. ರೈತನು ತನ್ನ ಬೆವರನ್ನು ಸುರಿಸಿ, ಮಣ್ಣಿನಲ್ಲಿ ಮಿಂದೆದ್ದು, ಬೆಳೆ ಬೆಳೆಸುತ್ತಾನೆ. ತಾನು ಬೆಳೆದ ಬೆಳೆಯನ್ನು ಇಡೀ ಜಗತ್ತಿಗೆ ಅನ್ನವಾಗಿ ನೀಡುತ್ತಾನೆ. ಆದರೆ ಆ ಅನ್ನವನ್ನು ಬೆಳೆದ ರೈತನ ಪಾಲಿಗೆ ಮಾತ್ರ ಹೊಟ್ಟೆ ತುಂಬ ಊಟವೂ ಸಿಗದಿರುವುದು ಇದು ಸಮಾಜದ ದುರಂತವಾಗಿದೆ.

ರೈತನ ಬದುಕಿನ ಕಹಿ ಸತ್ಯವನ್ನು  ಮನಮುಟ್ಟುವಂತೆ ಚಿತ್ರಿಸಿದ್ದಾರೆ. ತನ್ನ ಹೊಲದಲ್ಲಿ ಬೆಳೆದ ಅನ್ನವನ್ನು ಇತರರಿಗೆ ನೀಡುವ ರೈತ, ಹಸಿದವರ ಹೊಟ್ಟೆ ತುಂಬಿಸುವ ಅನ್ನದಾತ.  ತಾನು ಮಾತ್ರ ಬುತ್ತಿಯಿಲ್ಲದೆ ಕುಳಿತುಕೊಳ್ಳುವ ಸ್ಥಿತಿ ಎಷ್ಟು ದಾರುಣ! ಜಗತ್ತಿಗೆ ಅನ್ನ ನೀಡುವ ಕೈಗಳೇ ಹಸಿವಿನಿಂದ ಬಳಲುವ ವಿಪರ್ಯಾಸವನ್ನು ಈ ಸಾಲುಗಳು ಮನದಾಳಕ್ಕೆ ತಟ್ಟುವಂತೆ ಹೇಳುತ್ತವೆ.


About The Author

Leave a Reply

You cannot copy content of this page

Scroll to Top