ಧಾರಾವಾಹಿ ಸಂಗಾತಿ-48
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ

ಅರ್ಜುನ ಉವಾಚ
ಕರ್ಣಸುತ ಕಾಲವಾದ

ಹಂಸಧ್ವಜನೊಡನೆ ಹೋರಾಟಕ್ಕಿಳಿದ ಬಭ್ರುವಾಹನ, ಸಾವಿರ ರಥಗಳನ್ನು ಧೂಳೀಪಟ ಮಾಡಿದ. ಆರು ಸಾವಿರದಷ್ಟು ವೀರ ಸೈನಿಕರು ಪ್ರಾಣ ಕಳೆದುಕೊಂಡರು. ಬಭ್ರುವಾಹನನ ಬಾಣದ ಏಟಿಗೆ ಹಂಸಧ್ವಜ ರಥದಿಂದ ಕೆಳಗೆ ಬಿದ್ದ. ಮರುಕ ಹುಟ್ಟಿತು ನನಗೆ ಪತನಗೊಂಡ ಹಂಸಧ್ವಜನನ್ನು ಕಂಡು.
ಆಗಲೇ ಅಸಮ ಭುಜಬಲನೆನಿಸಿಕೊಂಡ ಸುವೇಗ ಬಭ್ರುವಾಹನನ ರಥವನ್ನು ಮುತ್ತಿದ. ಮತ್ತೆ ಹೊಸದಾಗಿ ಸಂಗ್ರಾಮ ಭೂಮಿಯನ್ನು ಹೊಕ್ಕವನಂತೆ ಬಭ್ರುವಾಹನ ಎರಡು ಸಾವಿರ ವೀರರನ್ನು ಕೊಂದುಹಾಕಿದ. ಸಾಹಸದಲ್ಲಿ ಇಬ್ಬರೂ ಸರಿಸಮ ಎನ್ನುವ ಭಾವನೆ ಉಂಟಾಯಿತು ನನಗೆ, ಸುವೇಗ ಬಭ್ರುವಾಹನರ ಯುದ್ಧವೈಖರಿಯನ್ನು ಕಂಡಾಗ. ಗೆಲುವನ್ನು ತಂದಿತ್ತಾನು ಈ ಸುವೇಗ ನಮ್ಮ ಪಾಳಯಕ್ಕೆ ಎಂದು ತೋರಿತು. ಆಗಲೇ ನಾನು ಭರವಸೆಯಿಟ್ಟಿದ್ದ ಹೋರಾಟಗಾರ ರಥವನ್ನು ಕಳೆದುಕೊಂಡ. ನೆಲಕ್ಕೆ ಬಿದ್ದ.
ಅತ್ಯುತ್ಸಾಹದಲ್ಲಿ ನಮ್ಮ ಸೈನ್ಯದೆಡೆಗೆ ಅಬ್ಬರದಿಂದ ಆರ್ಭಟಿಸುತ್ತಾ ಬಂದ ಮಣಿಪುರದರಸ. ಪ್ರಳಯಭೈರವನ ಕೋಲಾಹಲವನ್ನು ನೆನಪಿಸುವಂತಿತ್ತು ಅವನ ಪರಾಕ್ರಮದ ಪರಿ. ನಮ್ಮ ಸೈನ್ಯವದು ಇಳಿಕೆ ಕಾಣುತ್ತಲೇ ಹೋಯಿತು, ಏರುತ್ತಿರುವ ನನ್ನ ಆತಂಕಕ್ಕೆ ವೈರುಧ್ಯದ ಸವಾಲನ್ನು ಒಡ್ಡುವ ರೀತಿಯಲ್ಲಿ.
ಇನ್ನು ಯಾರಿದ್ದಾರೆ ನಮ್ಮ ಪಕ್ಷದಲ್ಲಿ, ಏನೆಂದರೂ ಮಣಿಯದ ಮಣಿಪುರದೊಡೆಯನನ್ನು ಮಣಿಸುವವರು! ಎಂದು ಯೋಚಿಸತೊಡಗಿದೆ. ಅದಾಗಲೇ ಮೂರ್ಛಿತರಾಗಿದ್ದ ಪ್ರದ್ಯುಮ್ನನನ್ನೂ, ಅವನ ಮಗ ಅನಿರುದ್ಧನನ್ನೂ ಯುದ್ಧರಂಗದಿAದ ನಗರಿಗೆ ಕರೆದೊಯ್ಯಲಾಗಿತ್ತು. ಸರ್ಪರಾಜನ ಮಗಳೆನಿಸಿಕೊಂಡ ಉಲೂಪಿ ಎನ್ನುವವಳು ಪಾತಾಳದಿಂದ ಮಣಿಪುರಕ್ಕೆ ಬಂದು ಅಲ್ಲಿಯೇ ಇದ್ದಳಂತೆ. ಯುದ್ಧರಂಗದಲ್ಲಿ ಪ್ರಜ್ಞೆ ಕಳೆದುಕೊಂಡವರಿಗೆ ಮಂತ್ರೌಷಧಿಗಳ ಬಲದಿಂದ ಮತ್ತೆ ಪ್ರಜ್ಞೆಯನ್ನು ಮರುಕಳಿಸುವಂತೆ ಮಾಡುವ ಶಕ್ತಿಯಿತ್ತಂತೆ ಅವಳಿಗೆ. ಅದಕ್ಕಾಗಿ ಕೃಷ್ಣಸುತನನ್ನೂ, ಮೊಮ್ಮಗನನ್ನೂ ಅವಳಿದ್ದ ಪಟ್ಟಣಕ್ಕೆ ಕರೆದುಕೊಂಡು ಹೋಗಲಾಗಿತ್ತು. ನಾವೀಗ ಇಲ್ಲಿ ಯುದ್ಧರಂಗದಲ್ಲಿ ಹೋರಾಡುವುದಕ್ಕೆ ಶಕ್ತರೆನಿಸಿಕೊಂಡು ಉಳಿದಿದ್ದವರು ಇಬ್ಬರೇ, ನಾನು ಮತ್ತು ವೃಷಕೇತು.
“ನಮ್ಮ ಸೈನ್ಯ ಇನ್ನಿಲ್ಲವಾಗಿದೆ. ನಮ್ಮ ಪಕ್ಷದ ಪ್ರಮುಖ ವೀರರು ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ. ಇನ್ನು ಹೋರಾಟ ಮಾಡುವ ಶಕ್ತಿ ಅವರಲ್ಲಿಲ್ಲ. ಪರಿಸ್ಥಿತಿ ಹೀಗಿರುವಾಗ ನಾನು ಇಲ್ಲಿಯೇ ಇದ್ದು ಕದನದ ಕಡೆಗೆ ಗಮನ ಕೊಡುತ್ತೇನೆ. ನೀನು ಹಸ್ತಿನಾವತಿಗೆ ಹೋಗಿ ಇಲ್ಲಿನ ವಿಚಾರವನ್ನು ನನ್ನ ಅಣ್ಣನಿಗೂ, ಆ ದೇವ ಕೃಷ್ಣನಿಗೂ ತಿಳಿಸಿ ಬಾ” ಎಂದೆ ಕರ್ಣತನಯನಲ್ಲಿ.
ಸೋಲುತ್ತೇನೆ ನಾನು ಎಂಬ ಭಯ ಗಾಢವಾಗಿಯೇ ಆವರಿಸಿತ್ತು ನನ್ನನ್ನು. ನನ್ನ ಮಾತು ಮುಗಿಯುವಷ್ಟರಲ್ಲಿ ನನ್ನ ಭೀತಿಯನ್ನು ಹೆಚ್ಚುಮಾಡುವಂತೆ ಅಪಶಕುನಗಳು ತೋರಿಬಂದವು. ಹದ್ದು ಬಂದು ಕುಳಿತಿತು ನನ್ನ ಕಿರೀಟದ ಮೇಲೆ. ರಥವನ್ನೇರಿತು ಒಂದು ಪಾರಿವಾಳ. ನನ್ನ ಸಂಪೂರ್ಣ ದೇಹದ ನೆರಳು ತಲೆಯಿಲ್ಲದಂತೆ ಗೋಚರಿಸತೊಡಗಿತು. ನನಗಿನ್ನು ಸೋಲಲ್ಲದೆ ಬೇರೇನಿಲ್ಲ ಎನ್ನುವುದು ನನಗೆ ದೃಢವಾಯಿತು. ಮಣಿಪುರದಲ್ಲಿ ಸೋಲು ಎದುರಾದರೆ ಅಶ್ವಮೇಧ ಯಾಗ ನಡೆಯುವುದಾದರೂ ಹೇಗೆ ಎಂಬ ಆತಂಕ ಮೂಡಿತು ನನ್ನಲ್ಲಿ. ವೃಷಕೇತುವಿನಲ್ಲಿ ತೋಡಿಕೊಂಡೆ ನನ್ನ ಅಳುಕನ್ನು.
ನನ್ನ ಮಾತನ್ನು ಕೇಳಿದ ವೃಷಕೇತು ಬಭ್ರುವಾಹನನೆದುರು ಯುದ್ಧಗೈಯ್ಯುವ ಹೊಣೆಯನ್ನು ತಾನೇ ವಹಿಸಿಕೊಳ್ಳುವುದಾಗಿ ಹೇಳಿದ. “ನಿನ್ನನ್ನು ಯುದ್ಧ ಮಾಡಲು ಬಿಟ್ಟು ಹಸ್ತಿನಾವತಿಗೆ ಹೋಗುವವನು ನಾನಲ್ಲ. ಯುದ್ಧಕ್ಕೆ ನಾನೀಗ ಹೆದರಿ, ಜೀವ ಉಳಿಸಿಕೊಳ್ಳುವುದರ ಕಡೆಗೆ ಗಮನ ಕೊಟ್ಟೆನಾದರೆ ಗಗನ ಸೇರಿರುವ ನನ್ನ ತಂದೆ ಭೂಮಿಗೆ ಬೀಳದೇ ಇರುತ್ತಾನೆಯೇ! ಬಭ್ರುವಾಹನನ ಅಹಂಕಾರವನ್ನು ಕೊನೆಗಾಣಿಸುವ ಶಕ್ತಿ ನನಗಿದೆ. ನನ್ನನ್ನು ಯುದ್ಧಕ್ಕೆ ಕಳುಹಿಸಿಕೊಡು” ಎಂದ.
ಬದುಕಿನ ವೃತ್ತಾಕಾರದ ಚಲನೆ ನನ್ನನ್ನು ದಂಗುಬಡಿಸಿತು. ಒಂದು ಕಾಲಕ್ಕೆ ವೃಷಕೇತುವಿನ ತಂದೆ ಕರ್ಣನನ್ನು ಕೊಂದವನು ನಾನು. ಈಗ ಇವನಿಗೆ ನನ್ನನ್ನು ಯುದ್ಧಕ್ಕೀಡುಮಾಡಿ ಹೋಗುವ ಮನಸ್ಸಿಲ್ಲ. ಮನುಷ್ಯ ಸಂಬAಧವೇ ಬಲು ವಿಚಿತ್ರ ಎಂದು ತೋರಿತು ನನಗೆ ಆ ಕ್ಷಣದಲ್ಲಿ. ಕದನರಂಗದಲ್ಲಿ ಮುಖಾಮುಖಿಯಾಗಿ ನಿಂತು ಕರ್ಣ ಪರಾಕ್ರಮವನ್ನು ಬಲು ಸನಿಹದಿಂದ ಕಂಡವನು ನಾನು. ಮೆಚ್ಚಿಕೊಂಡವನು ನಾನು. ತಂದೆಯAತೆಯೇ ಮಹಾಸಾಹಸಿ ಮಗನಿವನು ಎನಿಸಿತು ನನಗೆ. ಒಪ್ಪಿಗೆಯಿತ್ತೆ. ನನ್ನ ಪಾದಗಳಿಗೆರಗಿ ರಥವನ್ನೇರಿದ. ಬಭ್ರುವಾಹನನ ಎದುರು ಹೋಗಿನಿಂತ.
ತನಗೆ ಸೋಲನ್ನಿಕ್ಕುವ ಛಲದಲ್ಲಿ ಎದುರು ನಿಂತವನು ಕರ್ಣಸುತ ಎಂದು ತಿಳಿದ ಕೂಡಲೇ ಹೀಗಳಿಕೆಯ ಮಾತೊಂದು ಹೊರಬಿತ್ತು ಬಭ್ರುವಾಹನನಿಂದ. “ಅಂದು ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ ನಿನ್ನ ಅಪ್ಪನನ್ನು ಕೊಂದ. ಈಗ ನೀನು ನನ್ನೆದುರು ಕದನಕ್ಕೆ ಬಂದದ್ದು ಸರಿಯಾಗಿಯೇ ಇದೆ. ಇಂದು ನಾನು, ಅರ್ಜುನನ ಮಗ, ನಿನ್ನನ್ನು, ಕರ್ಣನ ಮಗನಾದ ನಿನ್ನನ್ನು ಕೊಲ್ಲುತ್ತೇನೆ” ಎಂದ.
ಭೀಕರ ಕಾಳಗ ನಡೆಯಿತು ಅವರಿಬ್ಬರ ನಡುವೆ. ಪರಸ್ಪರ ಪೈಪೋಟಿಯಲ್ಲಿ ಅವರಿಬ್ಬರೂ ಪ್ರಯೋಗಿಸಿದ ಬಾಣಗಳು ಇಬ್ಬರನ್ನೂ ಗಗನಮಾರ್ಗದೆಡೆಗೆ ಚಿಮ್ಮಿಸಿದವು. ಅದೊಂದು ಕ್ಷಣದಲ್ಲಿ ಅಬ್ಬರದ ನುಡಿ ಹೊರಬಂತು ಬಭ್ರುವಾಹನನಿಂದ. “ಭಲೇ ವೃಷಕೇತು. ನೀನೇ ಪರಮವೀರ, ಈ ಜಗತ್ತಿನಲ್ಲಿ. ನಿನ್ನ ಹೋರಾಟವಿನ್ನು ಸಾಕುಮಾಡು. ಆ ಶ್ರೀಕೃಷ್ಣ ಧ್ಯಾನವನ್ನು ಹೃದಯಪೂರ್ವಕವಾಗಿ ಮಾಡು” ಹೀಗೆ ಹೇಳುತ್ತಲೇ ಬಾಣವನ್ನು ಪ್ರಯೋಗಿಸಿದ, ಬಲವಾಗಿ.
ಏನಾಯಿತಲ್ಲಿ ಎಂದು ನಾನು ವಿಸ್ಮಯದಿಂದ ನೋಡುತ್ತಿದ್ದಾಗಲೇ ವೃಷಕೇತುವಿನ ಶಿರವನ್ನು ಕತ್ತರಿಸಿತು, ಬಭ್ರುವಾಹನನ ಬಾಣ!
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ




