ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
“ಬೇಲಿ”


ಸುತ್ತಲೂ ಕಟ್ಟಿದ ಬೇಲಿ
ತಮ್ಮ ಸ್ವತ್ತಿನ ಸುತ್ತ ಮುತ್ತ.
ಹೊರಗಿನವರ ಕಣ್ಣಿಗೆ
ಗೋಡೆ, ಸರಹದ್ದು, ಪಾಗಾರ.
ಒಳಗಿದ್ದವರಿಗೆ
ಬಂಧನ, ಗಡಿ, ಸಂಕೋಲೆ.
ಬೇಲಿಯ ಒಳಗಿದ್ದೇ
ಮೆಂದು ತಿನ್ನುವ ಹಸು ಕರು
ಬೇಲಿ ದಾಟಿ ಹೋಗಬೇಕೆಂದು
ಎಣಿಸಲೇ ಇಲ್ಲ.
ಯಾರ್ಯಾರೋ ಮಾಡಿಟ್ಟ
ಬೇಲಿಯ ಗುಟ್ಟ ಕಿತ್ತು ಬಿದ್ದರೂ
ದಾಟಿ ದೂರ ಹೋಗಲಾಗಲಿಲ್ಲ.
ಕಾಡು ಕಡಿದ ಮಾನವರ
ಹಸಿರು ಗದ್ದೆ ತೋಟದ ಬೇಲಿಯ
ಹಾರಿ, ನುಸುಳಿ ಒಳ ನುಗ್ಗುವ
ವನ್ಯ ಜೀವಿಗಳು ರೈತರಿಗೆ ಕಾಟ
ದೇಶದ ಗಡಿ ದಾಟಿ ಬಂದು
ಬಿಡಾರ ಹೂಡುವ ಹುನ್ನಾರ
ಸ್ವಾಗತಕ್ಕೆ, ಹೊರದಬ್ಬುವದಕ್ಕೆ
ರಾಜಕೀಯ ಆಟ.
ಜಾತಿ, ಧರ್ಮದ ಬೇಲಿ
ಸಂಕೋಲೆಯ ಹರಿದು
ಕಂಕಣ ಕಟ್ಟಿದವರ
ಕುರಿತು ಹೋರಾಟ
ಕಂಪನಿಗಳ ಗೋಡೆಯೊಳಗೆ
ದುಡ್ಡಿಗಾಗಿ ದಿನವಿಡೀ ದುಡಿದು
ಮುದುಡಿ ಹೋಗುವ
ವೃತ್ತಿ ನಿರತರ ಪರದಾಟ
ಬೇಲಿಯ ಬಿಟ್ಟು
ಮನ ಬಂದಂತೆ
ಹಾರುವ ಹಕ್ಕಿ,
ಈಜುವ ಮೀನು
ಕಂಡ ಕನಸು
ನನಸಾಗಲಿಲ್ಲ.
ಹುಟ್ಟಿದಾಗಿನಿಂದ
ಯಾರೋ ಹಾಕಿದ
ಅಥವಾ ತಾವೇ ಕಟ್ಟಿದ
ಬೇಲಿಗಳ ಒಳಗೆ
ಸಾಗಿದ ಜೀವನ
ಕೊನೆಗೂ ಮುಕ್ತಾಯ
ಬೇಲಿಯ ಒಳಗಿನ
ಸ್ಮಶಾನ.
ಎಸ್ ವಿ ಹೆಗಡೆ




