ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸಾಧನೆ ಎಂಬುವುದು ಕೇವಲ ಯಶಸ್ಸಿನ ಶಿಖರವನ್ನೇರುವುದಲ್ಲ, ನಮ್ಮ ಅಸ್ತಿತ್ವಕ್ಕೆ ಅರ್ಥ ನೀಡುವ,ಬದುಕಿಗೆ ಬೆಳಕು ನೀಡುವ, ಜೀವನಕ್ಕೆ ಮೌಲ್ಯ ತುಂಬುವ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಿರಂತರ ಪ್ರಯತ್ನ.
ಸಾಧನೆ ಎಂದರೆ ಜಗತ್ತಿನ ಎದುರು ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದಕ್ಕಿಂತ ನಮ್ಮೊಳಗಿನ ಸುಪ್ತಶಕ್ತಿಯನ್ನು ಅರಿತು ಅದನ್ನು ಸದುದ್ದೇಶಕ್ಕಾಗಿ ಬಳಸಿಕೊಳ್ಳುವುದು. ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಒಂದೊಂದು ಕನಸಿರುತ್ತದೆ.ಕೆಲವರಿಗೆ ಜ್ಞಾನದ ಹಂಬಲ, ಕೆಲವರಿಗೆ ಕಲೆಯ ಆರಾಧನೆ,ಇನ್ನು ಕೆಲವರಿಗೆ ಸಮಾಜ ಸೇವೆಯ ತುಡಿತ ಹೀಗೆ…ಬರೀ ಕನಸು ಕಾಣುವುದರಿಂದ ನಮ್ಮ ಬದುಕು ಸಾರ್ಥಕವಾಗುವುದಿಲ್ಲ. ಆ ಕನಸಿಗೆ ಪರಿಶ್ರಮದ ರೆಕ್ಕೆಗಳನ್ನು ಜೋಡಿಸಿ, ಆತ್ಮವಿಶ್ವಾಸದ ಬಲದಿಂದ ಮುನ್ನಡೆದಾಗ ಮಾತ್ರ ಸಾಧನೆಯ ಆಕಾಶದೆಡೆಗೆ ಹಾರಲು ಸಾಧ್ಯ.
ಸಾಧನೆ ಎಂಬುದು ಅದೃಷ್ಟದಿಂದ ಹಠಾತ್ತಾಗಿ ದೊರೆಯುವ ಕೊಡುಗೆಯಲ್ಲ;ಅದು ಶ್ರದ್ದೆ, ಶಿಸ್ತು ತಾಳ್ಮೆ ಮತ್ತು ನಿರಂತರ ಪರಿಶ್ರಮ ಪ್ರಯತ್ನದ ಫಲ.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇನ್ನೊಬ್ಬರನ್ನು ಮೀರಿಸುವದೇ ಸಾಧನೆ ಎಂಬ ಭ್ರಮೆ ಅನೇಕ ಬಾರಿ ನಮ್ಮನ್ನು ಆವರಿಸಿರುತ್ತದೆ. ಬೇರೆಯವರ ಯಶಸ್ಸನ್ನು ನೋಡಿ ನಮ್ಮ ಬದುಕನ್ನು ಅಳೆಯುತ್ತೆವೆ. ಅವರ ಕೀರ್ತಿಯನ್ನು ನೋಡಿ ನಮ್ಮ ಸಾಮರ್ಥ್ಯವನ್ನು ಅನುಮಾನಿಸುತ್ತೇವೆ. ಬೇರೊಬ್ಬರ ಹೆಜ್ಜೆ ಗುರುತುಗಳನ್ನು ಅನುಸರಿಸುವುದಕ್ಕಿಂತ ನಮ್ಮೊಳಗಿನ ಸ್ವಂತಿಕೆಯ ಹಾದಿಯನ್ನು ಕಂಡುಕೊಳ್ಳುವುದು ಮುಖ್ಯ.
ಸಾಧನೆ ಎಂದರೆ ದಿನನಿತ್ಯದ ಬದುಕಿನಾಚೆಗೆ ಹೋಗುವುದಲ್ಲ,ನಿತ್ಯ ಬದುಕಿನೊಳಗೇ ಇರುವ ಕಲೆ.ಸಾಧನೆ ಎಂದರೆ ಸುಮ್ಮನೆ ಬದುಕುವುದು. ಎಲೆಯೊಂದು ಚಿಗುರಿ ಹೂವಾಗಿ ಅರಳಿ ಕೆಲಹೊತ್ತು ಸುಗಂಧ ಬೀರಿ ಬಾಡಿ ಹೋಗುವುದು.
ಹೂವಿನಂತೆ ಗದ್ದಲ ಮಾಡದೆ ಬದುಕಿ ಹೋಗುವುದು ನಿಜವಾದ ಸಾಧನೆ. ಈಗಿರುವ ಜೀವನವನ್ನು ಆಳವಾಗಿ ಜಾಗೃತಿಯಿಂದ ಮಮತೆಯಿಂದ ನೋಡುವುದು. ಸಂಬಂಧಗಳೊಂದಿಗೆ, ಸಮಾಜದೊಂದಿಗೆ, ಪ್ರಕೃತಿಯೊಂದಿಗೆ- ಗಿಡಮರ ಪ್ರಾಣಿ ಪಕ್ಷಿಗಳೊಂದಿಗೆ ಸೌಹಾರ್ದ ಸಾಧಿಸುವುದು.ಸಾಧನೆ ವ್ಯಕ್ತಿಯ ಏಳಿಗೆಯನ್ನು ಒಳಗೊಂಡಾಗ ಮಾತ್ರ ಅದು ಪರಿಪೂರ್ಣತೆ ಕಡೆಗೆ ಸಾಗುತ್ತದೆ. ಸಾಧನೆ ಎಂದರೆ ಕೇವಲ ವೈಯಕ್ತಿಕ ಪ್ರಗತಿಯಲ್ಲ; ಅದು ಸಾಮೂಹಿಕ ಬದುಕಿಗೆ ನೀಡುವ ಸಕಾರಾತ್ಮಕ ಕೊಡುಗೆಯೂ ಹೌದು. ಮನುಷ್ಯ ಎಷ್ಟೇ ಎತ್ತರಕ್ಕೆರಿದರೂ ಮಾನವೀಯತೆ ಕುಬ್ಜವಾಗಬಾರದು. ಜ್ಞಾನವಿದ್ದು ಕರುಣೆಯಿಲ್ಲದಿದ್ದರೆ, ಸಂಪತ್ತಿದ್ದು ಹಂಚಿಕೊಳ್ಳುವ ಮನಸ್ಸಿಲ್ಲದಿದ್ದರೆ, ಅಧಿಕಾರವಿದ್ದು ನ್ಯಾಯದ ಪ್ರಜ್ಞೆ ಇಲ್ಲದಿದ್ದರೆ ಆ ಸಾಧನೆ ಅಪೂರ್ಣ.
ಸಾಧನೆ ಎಂಬುದು ಅಂತಿಮ ಗುರಿಯನ್ನು ತಲುಪಿದ ಕ್ಷಣಕ್ಕೆ ಮುಗಿಯುವ ಪ್ರಕ್ರಿಯೆಯಲ್ಲ.ಅದು ನಮ್ಮನ್ನು ನಾವು ನಿರಂತರವಾಗಿ ಪರಿಷ್ಕರಿಸಿಕೊಳ್ಳುವ ಜೀವನಯಾನ.ಪ್ರತಿದಿನ ಹೊಸದನ್ನು ಕಲಿಯುವುದು, ತಪ್ಪುಗಳಿಂದ ತಿದ್ದಿಕೊಳ್ಳುವುದು, ಸಾಧ್ಯವಾದಷ್ಟು ಸಮಾಜಕ್ಕೆ ಒಳಿತು ಮಾಡುವುದು,ಜನರ ಬದುಕಿಗೆ ಸ್ಪೂರ್ತಿ ನೀಡುವುದರ ಮೂಲಕ ಎಲ್ಲರ ಹೃದಯದಲ್ಲಿ ಆತ್ಮವಿಶ್ವಾಸ ಮೂಡಿಸುವುದಾಗಬೇಕು.
ಸಾಧನೆ ಎಂದರೆ ಎತ್ತರಕ್ಕೆ ಏರುವುದಷ್ಟೇ ಅಲ್ಲ,ಎತ್ತರಕ್ಕೆ ಏರಿದ ಮೇಲೂ ನೆಲದ ಸಂಬಂಧವನ್ನು ಉಳಿಸಿಕೊಳ್ಳುವುದು
ಸಾಧನೆ ನಮ್ಮನ್ನು ಗುರುತಿಸುವದಷ್ಟೇ ಅಲ್ಲ.ನಮ್ಮಿಂದ ಜಗತ್ತಿಗೆ ಏನಾದರೂ ಒಳಿತಾಗುವಂತೆ ಬದುಕುವುದು.
ಸಾಮಾನ್ಯ ಬದುಕನ್ನು ಅಸಾಮಾನ್ಯ ಪ್ರೀತಿಯಿಂದ ಬದುಕುವ ಕಲೆಯೇ ಸಾಧನೆ.


About The Author

Leave a Reply

You cannot copy content of this page

Scroll to Top