ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಿಂದೆ ಮಗುವಿನ ಅಳು ನಿಲ್ಲಿಸಲು ತಾಯಿಯ ಮಮತೆಯ ಸ್ಪರ್ಶ ಸಾಕಾಗುತ್ತಿತ್ತು. ಅಜ್ಜಿಯ ಕಥೆಗಳು ಮಗುವಿನ ನಿದ್ರೆಗೆ ಜೋಗುಳವಾಗುತ್ತಿದ್ದವು. ಮನೆಯ ಅಂಗಳ, ಮರದ ನೆರಳು, ಮಣ್ಣಿನ ಆಟ, ಗೆಳೆಯರ ಒಡನಾಟವೇ ಮಕ್ಕಳಿಗೆ ದೊಡ್ಡ ಮನರಂಜನೆಯಾಗಿತ್ತು. ಆದರೆ ಇಂದು ಮಗುವಿನ ಅಳು ನಿಲ್ಲಿಸಲು ಮೊಬೈಲ್ ಪರದೆಯನ್ನು ತೋರಿಸುವುದು, ಊಟ ಮಾಡಿಸಲು ವಿಡಿಯೋ ಹಾಕುವುದು, ಮಗು ಸುಮ್ಮನಿರಲಿ ಎಂದು ಕೈಯಲ್ಲಿ ಮೊಬೈಲ್ ಕೊಡುವುದು ಅನೇಕ ಕುಟುಂಬಗಳಲ್ಲಿ ಸಹಜ ಅಭ್ಯಾಸವಾಗುತ್ತಿದೆ. ಆರಂಭದಲ್ಲಿ ಇದು ಪೋಷಕರಿಗೆ ಅನುಕೂಲಕರವಾಗಿ ಕಂಡರೂ, ಕ್ರಮೇಣ ಮಗುವಿನ ಮನಸ್ಸು ಮೊಬೈಲ್ ಮೇಲೆಯೇ ಅವಲಂಬಿತವಾಗುವ ಸಾಧ್ಯತೆ ಇದೆ. ಮಗುವಿಗೆ ಆಟಿಕೆಗಳಿಗಿಂತ ಮೊಬೈಲ್ ಆಕರ್ಷಕವಾಗಿ ಕಾಣುತ್ತದೆ; ಕಥೆಗಳಿಗಿಂತ ವಿಡಿಯೋಗಳು ಹೆಚ್ಚು ಆಸಕ್ತಿದಾಯಕವಾಗುತ್ತವೆ; ಕುಟುಂಬದ ಸಂಭಾಷಣೆಗಿಂತ ಪರದೆಯ ಮೇಲಿನ ದೃಶ್ಯಗಳೇ ಹೆಚ್ಚು ಆಪ್ತವಾಗುತ್ತವೆ.

ಇಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಾದ ಸಂಗತಿಯೊಂದಿದೆ. ಮಕ್ಕಳಿಗೆ ಮೊಬೈಲ್ ಪರಿಚಯಿಸುತ್ತಿರುವುದು ನಾವು; ಆದರೆ ಕ್ರಮೇಣ ಮೊಬೈಲ್ ಮಕ್ಕಳ ಸಮಯ, ಆಸಕ್ತಿ ಮತ್ತು ನಡವಳಿಕೆಯನ್ನು ನಿಯಂತ್ರಿಸುವ ಸ್ಥಿತಿ ನಿರ್ಮಾಣವಾಗುತ್ತಿದೆಯೇ? ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮೂಲಕ ಅವರಿಗೆ ಜಗತ್ತಿನ ಪರಿಚಯ ಮಾಡಿಸುತ್ತಿದ್ದೇವೆಯೇ ಅಥವಾ ಅವರ ಸಹಜ ಬಾಲ್ಯವನ್ನು ಡಿಜಿಟಲ್ ಲೋಕದೊಳಗೆ ಸೀಮಿತಗೊಳಿಸುತ್ತಿದ್ದೇವೆಯೇ?

ಬಾಲ್ಯವೆಂದರೆ ಕೇವಲ ಬೆಳೆಯುವ ವಯಸ್ಸಲ್ಲ; ಅದು ವ್ಯಕ್ತಿತ್ವ ನಿರ್ಮಾಣದ ಅಮೂಲ್ಯ ಕಾಲಘಟ್ಟ. ಈ ಹಂತದಲ್ಲಿ ಮಗು ನೋಡುವುದು, ಕೇಳುವುದು, ಅನುಭವಿಸುವುದು ಮತ್ತು ಅನುಕರಿಸುವುದು ಅದರ ಭವಿಷ್ಯದ ಆಲೋಚನೆ ಹಾಗೂ ನಡವಳಿಕೆಯನ್ನು ರೂಪಿಸುತ್ತದೆ. ಆದರೆ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ದೈಹಿಕ ಚಟುವಟಿಕೆ, ಮುಖಾಮುಖಿ ಸಂವಹನ, ಓದುವ ಹವ್ಯಾಸ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ದೊರೆಯಬೇಕಾದ ಸಮಯ ಕಡಿಮೆಯಾಗಬಹುದು. ನಿರಂತರವಾಗಿ ಪರದೆಯ ಮುಂದೆ ಕಾಲ ಕಳೆಯುವುದರಿಂದ ನಿದ್ರೆಯ ಗುಣಮಟ್ಟ, ಗಮನ ಕೇಂದ್ರೀಕರಣ ಮತ್ತು ಆರೋಗ್ಯಕರ ದಿನಚರಿಯ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ವಯಸ್ಸಿಗೆ ಸೂಕ್ತವಲ್ಲದ ದೃಶ್ಯಗಳು ಹಾಗೂ ವಿಷಯಗಳು ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪ್ರಭಾವ ಬೀರಬಹುದು. ಆದ್ದರಿಂದ ಮೊಬೈಲ್ ಬಳಕೆಯ ಪ್ರಮಾಣಕ್ಕಿಂತ ಅದರ ಉದ್ದೇಶ, ವಿಷಯ ಮತ್ತು ಮೇಲ್ವಿಚಾರಣೆ ಹೆಚ್ಚು ಮಹತ್ವದ್ದಾಗಿವೆ.

ಇಂದಿನ ಮಕ್ಕಳಿಗೆ ಜಗತ್ತಿನ ಅನೇಕ ವಿಷಯಗಳ ಪರಿಚಯವಿದೆ. ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಿದೆ. ಆದರೆ ಮಾಹಿತಿ ತಿಳಿದಿರುವುದೇ ಜ್ಞಾನವಲ್ಲ; ಜ್ಞಾನ ಹೊಂದಿರುವುದೇ ವಿವೇಕವಲ್ಲ. ಮೊಬೈಲ್‌ನಲ್ಲಿ ಸಾವಿರಾರು ಕಥೆಗಳನ್ನು ನೋಡಬಹುದು; ಆದರೆ ಒಂದು ಕಥೆಯಲ್ಲಿನ ಮಾನವೀಯ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಅನುಭವ ಮತ್ತು ಸಂಸ್ಕಾರ ಬೇಕು. ಸಾವಿರಾರು ಚಿತ್ರಗಳನ್ನು ವೀಕ್ಷಿಸಬಹುದು; ಆದರೆ ಪ್ರಕೃತಿಯ ಸೌಂದರ್ಯವನ್ನು ಹೃದಯದಿಂದ ಅನುಭವಿಸಲು ಪ್ರಕೃತಿಯೊಂದಿಗೆ ಬೆರೆಯಬೇಕು. ಹೀಗಾಗಿ ಮಕ್ಕಳಿಗೆ ಕೇವಲ ಮಾಹಿತಿ ನೀಡುವುದಕ್ಕಿಂತ ಅನುಭವ, ವಿಚಾರಶಕ್ತಿ ಮತ್ತು ಮಾನವೀಯ ಸಂವೇದನೆಗಳನ್ನು ಬೆಳೆಸುವುದು ಮುಖ್ಯವಾಗಿದೆ.
ಈ ಸಂದರ್ಭದಲ್ಲಿ ಪೋಷಕರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸುವ ಮೊದಲ ಪಾಠಶಾಲೆ ಮನೆ. ಆದರೆ ಮನೆಯ ಹಿರಿಯರೇ ಸದಾ ಮೊಬೈಲ್‌ನಲ್ಲಿ ತಲ್ಲೀನರಾಗಿದ್ದರೆ ಮಕ್ಕಳಿಗೆ ಮೊಬೈಲ್ ಬಳಕೆಯ ಮಿತಿಯನ್ನು ಕಲಿಸುವುದು ಹೇಗೆ ಸಾಧ್ಯ? ಮಕ್ಕಳು ನಾವು ಹೇಳುವುದಕ್ಕಿಂತ ಹೆಚ್ಚಾಗಿ ನಾವು ಮಾಡುವುದನ್ನೇ ಅನುಸರಿಸುತ್ತಾರೆ. ಆದ್ದರಿಂದ ಪೋಷಕರು ಮೊದಲು ತಮ್ಮ ಮೊಬೈಲ್ ಬಳಕೆಗೆ ಮಿತಿ ಹಾಕಿಕೊಳ್ಳಬೇಕು. ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ಮಾತನಾಡುವ ಸಮಯವನ್ನು ರೂಪಿಸಬೇಕು. ಊಟದ ಸಮಯದಲ್ಲಿ ಮೊಬೈಲ್ ದೂರವಿಡಬೇಕು. ಮಕ್ಕಳೊಂದಿಗೆ ಆಟವಾಡಬೇಕು, ಪುಸ್ತಕಗಳನ್ನು ಓದಬೇಕು, ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು. ಮಕ್ಕಳಿಗೆ ದುಬಾರಿ ವಸ್ತುಗಳನ್ನು ಕೊಡುವುದಕ್ಕಿಂತ ಅವರೊಂದಿಗೆ ಕಳೆಯುವ ಅಮೂಲ್ಯ ಸಮಯವೇ ಅವರ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ.

ಮೊಬೈಲ್‌ನ ಸದುಪಯೋಗ ಮತ್ತು ದುರುಪಯೋಗದ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ಡಿಜಿಟಲ್ ಜಗತ್ತಿನಲ್ಲಿ ದೊರೆಯುವ ಮಾಹಿತಿಯನ್ನು ವಿವೇಚನೆಯಿಂದ ಸ್ವೀಕರಿಸುವುದು, ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು, ಅಪರಿಚಿತ ವ್ಯಕ್ತಿಗಳೊಂದಿಗೆ ಆನ್‌ಲೈನ್‌ನಲ್ಲಿ ಎಚ್ಚರಿಕೆಯಿಂದ ವರ್ತಿಸುವುದು ಮತ್ತು ವಯಸ್ಸಿಗೆ ಅನುಗುಣವಾದ ವಿಷಯಗಳನ್ನು ಮಾತ್ರ ವೀಕ್ಷಿಸುವುದು ಹೇಗೆ ಎಂಬುದನ್ನು ತಿಳಿಸಬೇಕು. ಅದೇ ಸಮಯದಲ್ಲಿ ಕ್ರೀಡೆ, ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟಕ, ಕಥೆ ಹೇಳುವಿಕೆ ಹಾಗೂ ಸೃಜನಶೀಲ ಚಟುವಟಿಕೆಗಳಿಗೆ ಮಕ್ಕಳನ್ನು ಪ್ರೇರೇಪಿಸಬೇಕು.

ತಂತ್ರಜ್ಞಾನವನ್ನು ಸಂಪೂರ್ಣವಾಗಿ ವಿರೋಧಿಸುವುದು ಪರಿಹಾರವಲ್ಲ. ಏಕೆಂದರೆ ಮೊಬೈಲ್ ಸರಿಯಾದ ರೀತಿಯಲ್ಲಿ ಬಳಕೆಯಾದಾಗ ಅದು ಜ್ಞಾನದ ಬಾಗಿಲು ತೆರೆಯುವ ಸಾಧನವಾಗುತ್ತದೆ. ಶೈಕ್ಷಣಿಕ ವಿಡಿಯೋಗಳು, ವಿಜ್ಞಾನ ಪ್ರಯೋಗಗಳು, ಭಾಷಾ ಕಲಿಕೆ, ಜ್ಞಾನವರ್ಧಕ ಕಾರ್ಯಕ್ರಮಗಳು ಮಕ್ಕಳ ಕಲಿಕೆಗೆ ಸಹಕಾರಿಯಾಗಬಲ್ಲವು. ಆದರೆ ತಂತ್ರಜ್ಞಾನವು ಮಕ್ಕಳ ಬದುಕಿನ ಸಹಾಯಕವಾಗಬೇಕೇ ಹೊರತು ಅವರ ಬದುಕನ್ನೇ ಆಕ್ರಮಿಸಿಕೊಳ್ಳಬಾರದು. ಮೊಬೈಲ್ ಬಳಕೆಯ ಕುರಿತು ವಯಸ್ಸಿಗೆ ತಕ್ಕ ನಿಯಮಗಳನ್ನು ರೂಪಿಸಿ, ಪೋಷಕರ ಮೇಲ್ವಿಚಾರಣೆಯಲ್ಲಿ ಅದನ್ನು ಜ್ಞಾನಾರ್ಜನೆಗೆ ಬಳಸುವ ಸಂಸ್ಕೃತಿಯನ್ನು ಬೆಳೆಸಬೇಕು.

ಮೊಬೈಲ್ ನಮ್ಮ ಮಕ್ಕಳ ಬದುಕಿನಲ್ಲಿ ಯಾವ ಸ್ಥಾನದಲ್ಲಿರಬೇಕು ಎಂಬುದಾಗಿದೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮೊದಲು ಅವರ ಕೈಗೆ ಪುಸ್ತಕ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪರದೆಯ ಮೇಲೆ ಪ್ರಪಂಚವನ್ನು ತೋರಿಸುವುದಕ್ಕಿಂತ ನೈಜ ಪ್ರಪಂಚದ ಸೌಂದರ್ಯವನ್ನು ಪರಿಚಯಿಸಬೇಕು. ಅವರೊಂದಿಗೆ ಮಾತನಾಡಬೇಕು, ಅವರ ಕನಸುಗಳನ್ನು ಆಲಿಸಬೇಕು, ಅವರ ಕುತೂಹಲಗಳಿಗೆ ಉತ್ತರಿಸಬೇಕು. ಏಕೆಂದರೆ ಮಗುವಿನ ವ್ಯಕ್ತಿತ್ವವು ಕೇವಲ ತಂತ್ರಜ್ಞಾನದ ಸಂಪರ್ಕದಿಂದ ರೂಪುಗೊಳ್ಳುವುದಿಲ್ಲ; ಪ್ರೀತಿ, ಅನುಭವ, ಸಂಸ್ಕಾರ, ಶಿಕ್ಷಣ ಮತ್ತು ಸಾಮಾಜಿಕ ಒಡನಾಟದಿಂದ ರೂಪುಗೊಳ್ಳುತ್ತದೆ.


ಮಮತಾ ಜಾನೆ

About The Author

Leave a Reply

You cannot copy content of this page

Scroll to Top