ಕಾವ್ಯ ಸಂಗಾತಿ
ಡಾ.ಸುಮಂಗಲಾ ಅತ್ತಿಗೇರಿ
” ಪಂಜರ ಗಿಳಿ”


ಮಂಗ್ಯಾನಂತಾ ಮನಸ್ಸಿನ್ಯಾಗ ಏನೇನೋ ಗುದುಮುರುಗಿ
ಇತ್ತಾಂದ ಅತ್ತಾಗ,
ಅತ್ತಾಂದ ಇತ್ತಾಗ,
ಜಿಗದಾಡತಾವು ಭಾವಗಳು
ಬೇಡ ಅಂದ್ರು ಬಿಡದೆ
ಬೆಂಬತ್ತಿ ಬಂದು ಕಾಡತಾವು
ಮನದ ತಿಳಿಗೊಳ ಕಲಕತಾವು
ಬದುಕಿನ ಪಠ್ಯವನ್ನು ಚೆನ್ನಾಗಿಯೇ ಓದಿ,ಅರ್ಥೈಸಿ, ಮನನ ಮಾಡಿಕೊಂಡಿದ್ದೆ
ಆದರೂ
ಹೊಂದಿಸಿ ಬರೆಯುವ ಟಾಸ್ಕ್ ಮಾತ್ರ
ಆಗಾಗ
ಕಬ್ಬಿಣದ ಕಡಲೆಯಾಗುತ್ತದೆ ! ನುಂಗಲಾಗದೆ.. ಉಗುಳಲಾಗದೆ..
ತಾನಾಯಿತು ತನ್ನ ಪಾಡಾಯಿತು ಎಂದಿದ್ದ ಗಿಳಿಮರಿಗೂ
ಅವರಿವರು ಹಾಕಿದ
ಶಾಪವೆಲ್ಲ ಒಟ್ಟಾಗಿ ಬಿಟ್ಟಿತೆ?
ಇಲ್ಲಾ ದೃಷ್ಟಿ ತಾಗಿತೆ?
ಶುಭ ಹಾರೈಸಿದ ಗಿಳಿಮರಿಯನ್ನೇ
ಗುಂಪಿಗೆ ಸೇರದ ಪದವಾಗಿಸುವ ಹುನ್ನಾರವೇ?
ಅರ್ಥೈಸಿಕೊಳ್ಳದ ಮನಸ್ಸುಗಳಿಗೆ
ಕೊನೆಗೂ ಗೊತ್ತಾಗಲೇ ಇಲ್ಲ ಗಿಳಿ ಮರಿ ಬಯಸಿದ್ದು ಕೇವಲ ಒಂದು ನಾಲ್ಕು ಹಿತನುಡಿ
ಜೊತೆಗೆ
ಒಂದು ಹಿಡಿ ಪ್ರೀತಿಯನ್ನಷ್ಟೇ
ಸುತ್ತ ಹೆಣೆದ
ಪಂಜರದ ಸರಳುಗಳು
ತನ್ನ ಹಿತ ರಕ್ಷಣೆಗೆಂದು
ಭಾವಿಸಿದ್ದ ಗಿಳಿಮರಿಗೆ
ಗೊತ್ತಾಗಲೇ ಇಲ್ಲ
ತನ್ನನ್ನು ಬಂದಿಸಲಾಗಿದೆ ಎಂದು
ಡಾ.ಸುಮಂಗಲಾ ಅತ್ತಿಗೇರಿ




